ಭಾರತವೆಂದಿಗೂ ಇನ್ನೊಂದು ಶ್ರೀಲಂಕವಾಗದು
ಪ್ರಸ್ತುತ
ಗಣೇಶ್ ಭಟ್, ವಾರಣಾಸಿ
2013-14ರಲ್ಲಿ ಜಾಗತಿಕವಾಗಿ ಬೃಹತ್ ಆರ್ಥಿಕ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತವಿಂದು 3.5 ಟ್ರಿಲಿಯನ್ ಡಾಲರ್‌ಗಳ ಆರ್ಥಿಕ ಶಕ್ತಿಯಾಗಿ ಬೆಳೆದು ಇದೀಗ ಜಾಗತಿಕವಾಗಿ 5ನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಮೂಡಿ ಬಂದಿದೆ.
ಇತ್ತೀಚೆಗೆ ತೀವ್ರ ಆರ್ಥಿಕ ಕುಸಿತವನ್ನು ಕಂಡಿರುವ ಶ್ರೀಲಂಕಾ ಭಾರಿ ಸುದ್ದಿಯಲ್ಲಿದೆ. ಆರ್ಥಿಕ ಮುಗ್ಗಟ್ಟಿನಲ್ಲಿರುವ ಲಂಕಾದಲ್ಲಿದಿನಬಳಕೆಯ ವಸ್ತುಗಳು ಗಗನಕ್ಕೇರಿವೆ. ಪೆಟ್ರೋಲ, ಡಿಸೆಲ್‌ಗಳು ತುಟ್ಟಿಯಾಗಿವೆ. ಆಸ್ಪತ್ರೆ ಗಳಲ್ಲಿ ಅಗತ್ಯ ಔಷಧಗಳು ಹಾಗೂ ಚಿಕಿತ್ಸಾ ಪರಿಕರಗಳ ಕೊರತೆಯುಂಟಾಗಿದೆ. ಶ್ರೀಲಂಕಾವು ವಿದೇಶಿ ಸಾಲ ತೀರಿಸಲು ಸಾಧ್ಯವಾಗದ ಪರಿಸ್ಥಿತಿ ತಲುಪಿದೆ.
ದೇಶದಲ್ಲಿ ಲಭ್ಯವಿರುವ ವಿದೇಶಿ ವಿನಿಮಯವೂ ತೀರಾ ಕೆಳಮಟ್ಟದಲ್ಲಿದೆ. ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಹಾಗೂ ಹಿಂದೆಂದೂ ಕಂಡಿರದಂಥ ಬಡತನವನ್ನೆದು ರಿಸುತ್ತಿದ್ದಾರೆ. ಇದರಿಂದಾಗಿ ಅಲ್ಲಿ ರಾಜಕೀಯ ಅಸ್ಥಿರತೆಯೂ ತಲೆದೋರಿದೆ. ಜನರು ಶ್ರೀಲಂಕಾವನ್ನು ಆಳುತ್ತಿರುವ ಗೋಟಬಯ ರಾಜಪಕ್ಸ ಅವರ ಆಡಳಿತದ ವಿರುದ್ಧ ದಂಗೆಯೆದ್ದಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾದ ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಹೀಗಾಗಿ ವಿರೊಧ ಪಕ್ಷವಾದ ಯುನೈಟೆಡ್ ನ್ಯಾಷನಲ್ ಪಾರ್ಟಿ ಮುಖ್ಯಸ್ಥ ರನಿಲ್ ವಿಕ್ರಮ ಸಿಂಘೆ ಶ್ರೀಲಂಕಾದ ಪ್ರಧಾನಿಯಾಗಿ ನಿಯೋಜಿಸಲ್ಪಟ್ಟರು. ಪ್ರಧಾನಿ ಬದಲಾ ದರೂ ಕುಸಿದಿರುವ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿಯನ್ನು ಮರಳಿ ಹಳಿಗೆ ತರುವುದು ಸುಲಭದ ಮಾತಲ್ಲ. ಈ ನಡುವೆ ಭಾರತದ ಕೆಲವು ಛಿದ್ರಾನ್ವೇಷಿಗಳು ಭಾರತದ ಆರ್ಥಿಕ ಪರಿಸ್ಥಿತಿಯೂ ಲಂಕಾದ ಮಟ್ಟಕ್ಕೆ ಕುಸಿಯಲಿದೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾ, ಇಲ್ಲಿಯೂ ಜನರು ಸರಕಾರದ ವಿರುದ್ಧವಾಗಿ ದಂಗೆಯೆದ್ದು ರಾಜಕೀಯ ಬದಲಾವಣೆಯಾಗಲಿ ಎಂದು ಹಾರೈಸುತ್ತಿದ್ದಾರೆ. ಅವರ ಆಸೆ ನೆರವೇರುವ ಸಾಧ್ಯತೆ ಇಲ್ಲ ಎನ್ನುವುದು ಸಮಾಧಾನದ ವಿಷಯ.
ಶ್ರೀಲಂಕಾದ ಇಂದಿನ ಪರಿಸ್ಥಿತಿಗೆ ರಾಜಪಕ್ಸೆ ಕುಟುಂಬದ ನಿರಂತರ ಭ್ರಷ್ಟಾಚಾರದಿಂದ ಕೂಡಿದ ಆಡಳಿತವೇ ಕಾರಣ. ಅಲ್ಲಿನ ಬಲಿಷ್ಠ ರಾಜಕೀಯ ಕುಟುಂಬದ 3ನೇ ತಲೆಮಾರಿನ ರಾಜಕಾರಣಿಯಾದ ಮಹಿಂದಾ ರಾಜಪಕ್ಸೆ 2004 ರಿಂದ 2015ರವರೆಗೆ ಲಂಕಾ ಸರಕಾರದಲ್ಲಿ ಅಧ್ಯಕ್ಷ ಹಾಗೂ ಪ್ರಧಾನ ಮಂತ್ರಿ ಪದವಿಗಳೆರಡನ್ನೂ ನಿಭಾಯಿಸಿದ್ದರು. ಈ ಸಂದರ್ಭದಲ್ಲಿ ಇವರ  ಕುಟುಂಬದ ಇತರ ಸದಸ್ಯೆರೇ ಸರಕಾರದ ಪ್ರಮುಖ ಮಂತ್ರಿಪದವಿಗಳನ್ನು ಪಡೆದುಕೊಂಡು ಸರಕಾರದ 70% ಸಂಪತ್ತನ್ನು ತಮ್ಮನಿಯಂತ್ರಣದಲ್ಲಿಟ್ಟುಕೊಂಡಿದ್ದರು.
ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಸಿದ್ದ ಸರಕಾರದ ಮಂತ್ರಿಗಳು ದೇಶದ ಸಂಪತ್ತನ್ನು ಕೊಳ್ಳೆಹೊಡೆದು ವಿದೇಶಗಳಿಗೆ ಸಾಗಿಸಿ ಬಚ್ಚಿಟ್ಟಿದ್ದರು. ಇದಲ್ಲದೆ 2004 ರಿಂದ 2015ರವರೆಗೆ ಅಧಿಕಾರದಲ್ಲಿದ್ದ ರಾಜಪಕ್ಸೆ ಸರಕಾರ ವಿವಿಧ ದೇಶಗಳು ಹಾಗೂ ಜಾಗತಿಕ ವಿತ್ತೀಯ ಸಂಸ್ಥೆಗಳಿಂದ ತುಂಬಾ ಸಾಲವನ್ನು ಪಡೆದುಕೊಂಡಿತ್ತು. ಚೀನಾ ಒಂದರಿಂದಲೇ 8 ಬಿಲಿಯನ್ (ಶತ ಕೋಟಿ)ಡಾಲರ್ ಸಾಲ ಪಡೆದು ಮರುಪಾವತಿಸಲು ಅಸಮರ್ಥವಾದ ಲಂಕಾ ಸರಕಾರ ತಾನು ಸಹಿ ಮಾಡಿದ್ದ ಒಪ್ಪಂದಕ್ಕೆ ಅನುಗುಣವಾಗಿ 2017ರ ತನ್ನ ಹಂಬಂತೋಟ ಬಂದರನ್ನು 99 ವರ್ಷಗಳ ಅವಧಿಯವರೆಗೆ ಚೀನಾಗೆ ಹಸ್ತಾಂತರಿಸಿತ್ತು.
ಆದರೆ 2019ರಲ್ಲಿ ರಾಜಪಕ್ಸೆ ಕುಟುಂಬ ಪುನಃ ಅಧಿಕಾರಕ್ಕೆ ಬಂತು. ಗೋಟಬಯ ಅಧ್ಯಕ್ಷ, ಮಹಿಂದಾ ರಾಜಪಕ್ಸೆ ಪ್ರಧಾನಿ ಯಾದರು. ಅಧಿಕಾರಕ್ಕೆ ಬಂದಲ್ಲಿ ತೆರಿಗೆಯ ಪ್ರಮಾಣವನ್ನು ಇಳಿಸುವುದಾಗಿ ರಾಜಪಕ್ಸೆ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿತ್ತು. ಅಧಿಕಾರಕ್ಕೆ ಬಂದ ನಂತರ ರಾಜಪಕ್ಸೆ ಸರಕಾರ ವ್ಯಾಟ್ ಹಾಗೂ ಆದಾಯ ತೆರಿಗೆಯಲ್ಲಿ ಭಾರಿ ವಿನಾಯಿತಿಕೊಟ್ಟಿತು. ವ್ಯಾಟ್ ತೆರಿಗೆಯನ್ನು ಶೇ.15ರಿಂದ ಶೇ.8ಕ್ಕೆ ಇಳಿಸಿತು ಹಾಗೂ ಇತರ 7 ತೆರಿಗೆಗಳನ್ನು ತೆಗೆದು ಹಾಕಿತು.
ಇದರ ಪರಿಣಾಮವಾಗಿ ಲಂಕಾ ಸುಮಾರು 10 ಲಕ್ಷದಷ್ಟು ತೆರಿಗೆದಾರರನ್ನು ಕಳೆದುಕೊಂಡಿತು. 2 ಕೋಟಿ ಜನಸಂಖ್ಯೆಯ ಲಂಕಾದ ಆರ್ಥಿಕತೆಗೆ ಈ ತೆರಿಗೆ ವಿನಾಯಿತಿಯಿಂದಾದ ವಿತ್ತೀಯ ಕೊರತೆಯನ್ನು ಭರಿಸಲು ಸಾಧ್ಯವಾಗಲಿಲ್ಲ. ಇದರ ಜತೆಗೆ ಸರಕಾರವು ದೇಶದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಪೂರ್ಣವಾಗಿ ನಿಷೇಧಿಸಿ ದೇಶದಲ್ಲಿ ಸಾವಯವ ಕೃಷಿಯನ್ನು ಕಡ್ಡಾಯ ಗೊಳಿಸಿತು.
ರಾಸಾಯನಿಕ ಕ್ರಿಮಿನಾಶಕಗಳನ್ನೂ ನಿಷೇಧಿಸಲಾಯಿತು. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಸಾವಯವ ಕೃಷಿಯನ್ನು ಕಡ್ಡಾಯ ಗೊಳಿಸಿದುದರಿಂದ ದೇಶದಲ್ಲಿ ತೀವ್ರವಾಗಿ ಗೊಬ್ಬರದ ಕೊರತೆಯುಂಟಾಯಿತು. ಕ್ರಿಮಿನಾಶಕವನ್ನು ಬಳಸಲು ಅನುಮತಿ ಯಿಲ್ಲದ ಕಾರಣ ಬೆಳೆದ ಕೃಷಿಯೂ ಕೀಟಗಳ ಪಾಲಾಯಿತು. ಕೃಷಿ ಉತ್ಪಾದನೆಯು ಅರ್ಧಕ್ಕಿಂತಲೂ ಕೆಳಗೆ ಇಳಿಯಿತು. ಈ ಎಲ್ಲ ಕಾರಣಗಳಿಂದ ದೇಶದಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆಯುಂಟಾಯಿತು.
ಸುಮಾರು 8 ಶತಕೋಟಿ ಡಾಲರ್‌ಗಳಷ್ಟು ವಿದೇಶಿ ವಿನಿಮಯ ಸಂಗ್ರಹ ಹೊಂದಿದ್ದ ಲಂಕಾದಲ್ಲಿಂದು 10 ಲಕ್ಷ ಡಾಲರ್‌ನಷ್ಟೂ ವಿದೇಶಿ ವಿನಿಮಯ ಸಂಗ್ರಹ ಇಲ್ಲ. ಸುಮಾರು 46 ಶತಕೋಟಿ ಡಾಲರ್‌ಗಳಷ್ಟು ವಿದೇಶಿ ಸಾಲವನ್ನು ಹೊಂದಿರುವ ಲಂಕಾಗೆ ಈಗ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಗೆ ತಲುಪಿ ದಿವಾಳಿಯಾಗಿದೆ. ದೇಶದ ಅಭಿವೃದ್ಧಿ ದರ 2.4%ಗೆ ಕುಸಿದಿದೆ, ಹಣದುಬ್ಬರದ ಪ್ರಮಾಣ 21.5%ಗೆ ಏರಿದೆ.
ಜಗತ್ತಿನ ಯಾವ ದೇಶಗಳ ಆರ್ಥಿಕತೆಯನ್ನು ಹೋಲಿಸಿದಾಗಲೂ ಭಾರತದ ಆರ್ಥಿಕತೆ ಸದೃಢವಾಗಿರುವುದನ್ನು ಕಾಣಬಹುದು. ಭಾರತದ ಆರ್ಥಿಕ ಅಭಿವೃದ್ಧಿಯ ದರ ಉಳಿದೆಲ್ಲ ದೇಶಗಳಿಗಿಂತಲೂ ಉತ್ತಮವಾಗಿದೆ. ಜಾಗತಿಕ ಹೂಡಿಕೆದಾರ ಮಾರ್ಗಸೂಚಿ ಸಂಸ್ಥೆಯಾದ ಎಸ್‌ಆಂಡ್‌ಪಿಯು 2022-23ರಲ್ಲಿ ಭಾರತ 7.3% ಅಭಿವೃದ್ಧಿ ದರವನ್ನು ಸಾಧಿಸಲಿದೆ ಎಂದು ಹೇಳಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತ ಈ ವರ್ಷ 7.2% ಜಿಡಿಪಿಯನ್ನುಸಾಧಿಸಲಿದೆ ಎಂದು ಹೇಳಿದೆ. ಈ ವರ್ಷ ಅಮೆರಿಕ ಹಾಗೂ ಇಂಗ್ಲೆಂಡ್‌ಗಳ ಅಭಿವೃದ್ಧಿ ದರ 3.7% ಆಸುಪಾಸಿನಲ್ಲಿರಲಿವೆ. 2021-22ರಲ್ಲಿ ಭಾರತ 8.9% ಅಭಿವೃದ್ಧಿ ದರವನ್ನು ಸಾಧಿಸಿ ರುವುದನ್ನು ಗಮನಿಸಿದರೆ ಭಾರತದ ಆರ್ಥಿಕ ಅಭಿವೃದ್ಧಿಯ ವೇಗದ ಬಗ್ಗೆ ಅನುಮಾನವನ್ನು ಪಡಬೇಕಾದ ಅವಶ್ಯ ಕತೆಯಿಲ್ಲ ಎಂಬುದು ಅರ್ಥವಾಗುತ್ತದೆ.
ಜಾಗತಿಕ ಆಹಾರ ಬಿಕ್ಕಟ್ಟಿನ ನಡುವೆಯೂ ಭಾರತದಲ್ಲಿ ಆಹಾರ ಧಾನ್ಯ ಕೊರತೆಯಿಲ್ಲ. 2021-22ರಲ್ಲಿ ಭಾರತದಲ್ಲಿ 3.14 ಕೋಟಿ ಟನ್‌ಗಳಷ್ಟು ಆಹಾರ ಧಾನ್ಯಗಳ ಉತ್ಪಾದನೆ ಆಗಿದೆ ಎಂದು ಅಂದಾಜಿಸಲಾಗಿದೆ. 2020-21ಕ್ಕೆ ಹೋಲಿಸಿದಾಗ 2021-22ರಲ್ಲಿ 37.7 ಲಕ್ಷ ಟನ್ ಗಳಷ್ಟು ಹೆಚ್ಚು ಆಹಾರ ಧಾನ್ಯಗಳು ಭಾರತದಲ್ಲಿ ಉತ್ಪಾದನೆಯಾಗಿದೆ. ಈ ವರ್ಷ ಭಾರತದಲ್ಲಿ ಆಹಾರ ಧಾನ್ಯದ ಕೊರತೆಯಾಗುವ ಸಾಧ್ಯತೆ ಇಲ್ಲ. ಅಂತಾರಾಷ್ಟ್ರೀಯವಾಗಿ ರಸಗೊಬ್ಬರದ ಬೆಲೆ ಹೆಚ್ಚಾಗಿದ್ದರೂ ಅದರ ಭಾರ ರೈತರ ಮೇಲೆ ಬೀಳ ದಂತೆ ತಡೆಗಟ್ಟುವ ಉದ್ದೇಶದಿಂದ ಭಾರತ ಸರಕಾರ 2.1 ಲಕ್ಷ ಕೋಟಿ ರುಪಾಯಿಗಳ ರಸಗೊಬ್ಬರ ಸಬ್ಸಿಡಿ ಯನ್ನು ರೈತರಿಗೆ ನೀಡುತ್ತಿದೆ.
ಹೀಗಾಗಿ ರಸಗೊಬ್ಬರದ ಕೊರತೆಯೂ ರೈತರನ್ನು ಕಾಡದು. ಭಾರತ ಸರಕಾರವು ಆದಾಯ ತೆರಿಗೆಯ ಮಿತಿಯ ಏರಿಕೆ, ವ್ಯಾಟ್ ಜಿಎಸ್‌ಟಿ ಜಾರಿ, ನೋಟ್ ಬ್ಯಾನ್ ಮೊದಲಾದ ಸುಧಾರಣೆಗಳನ್ನು ಕೈಗೊಂಡಿದ್ದರೂ ದೇಶದಲ್ಲಿ ತೆರಿಗೆ ಸಂಗ್ರಹದಲ್ಲಿ ಕೊರತೆ ಯಾಗಿಲ್ಲ. 2021-22ರಲ್ಲಿ ಒಟ್ಟಾಗಿ 27 ಲಕ್ಷ ಕೋಟಿ ರುಪಾಯಿಗಳಿಗಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ. 2021-22ರ ಬಜೆಟ್‌ ನಲ್ಲಿ 22 ಲಕ್ಷ ಕೋಟಿ ರುಪಾಯಿಗಳ ತೆರಿಗೆ ಸಂಗ್ರಹವನ್ನು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗಿಂತಲೂ 5 ಲಕ್ಷ ಕೋಟಿ ರುಪಾಯಿ ಗಳಷ್ಟು ಹೆಚ್ಚು ತೆರಿಗೆ ಸಂಗ್ರಹವಾದದ್ದು ಭಾರತದ ಪ್ರಜೆಗಳ ಆದಾಯ ಹಾಗೂ ಖರೀದಿ ಸಾಮರ್ಥ್ಯ ಹೆಚ್ಚಾದುದನ್ನು ಸೂಚಿಸು ತ್ತದೆ.
2021-22ರಲ್ಲಿ 16,34,454.95 ಕೋಟಿ ರುಪಾಯಿಗಳಷ್ಟು ನೇರ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ 12.5 ಲಕ್ಷ ಕೋಟಿ ರುಪಾಯಿಗಳು ಆದಾಯ ತೆರಿಗೆಯ ಮೂಲಕವೇ ಸಂಗ್ರಹವಾಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಪ್ರತಿ ತಿಂಗಳು ಹೊಸ ಹೊಸ ದಾಖಲೆಗಳು ನಿರ್ಮಾಣ ಗೊಳ್ಳುತ್ತಿದೆ. 2022ರ ಮಾರ್ಚ್ ತಿಂಗಳಲ್ಲಿ 1.42 ಲಕ್ಷ ಕೋಟಿ ರುಪಾಯಿಗಳ ಜಿಎಸ್‌ಟಿ ಸಂಗ್ರಹ ವಾಗಿದ್ದರೆ ಏಪ್ರಿಲ್‌ನಲ್ಲಿ ಆ ಮೊತ್ತ ದಾಖಲೆಯ 1.68 ಲಕ್ಷ ಕೋಟಿ ರುಪಾಯಿಗಳಿಗೆ ಏರಿದೆ. 2021-22ರಲ್ಲಿ ಭಾರತದಲ್ಲಿ 83.5 ಶತಕೋಟಿ ಡಾಲರ್‌ಗಳಷ್ಟು ನೇರ ವಿದೇಶಿ ಹೂಡಿಕೆಯಾದುದು ಸಾರ್ವಕಾಲಿಕ ದಾಖಲೆಯಾಗಿದೆ.
ಇದೇ ಅವಧಿಯಲ್ಲಿ ಭಾರತದ ಸರಕು ಹಾಗೂ ಸೇವೆಗಳ ನಿರ್ಯಾತವೂ 669.65 ಶತಕೋಟಿ ಡಾಲರ್‌ಗಳನ್ನು ತಲುಪಿದ್ದು ಇದೂ ಒಂದು ಹೊಸ ದಾಖಲೆಯೇ ಆಗಿದೆ. ಅಮೆರಿಕದ ಕರೆನ್ಸಿಯಾದ ಡಾಲರ್ ವಿಶ್ವದ ಎಲ್ಲ ದೇಶಗಳ ಕರೆನ್ಸಿಗಳ ಎದುರು ತನ್ನ ಮೌಲ್ಯ ವನ್ನು ಹೆಚ್ಚಿಸಿಕೊಳ್ಳುತ್ತಿದ್ದರೂ ಭಾರತದ ರುಪಾಯಿ ಮಾತ್ರ ತಕ್ಕ ಮಟ್ಟಿಗೆ ಸ್ಥಿರವಾಗಿಯೇ ಇದೆ. ಭಾರತದಲ್ಲಿ ಸಾಕಷ್ಟು ವಿದೇಶಿ ವಿನಿಮಯವು ಸಂಗ್ರಹವಿದ್ದು ಅದು 600 ಬಿಲಿಯನ್ ಡಾಲರ್‌ಗಳ ಆಸುಪಾಸಿನಲ್ಲಿದೆ.
2013-14ರಲ್ಲಿ ಜಾಗತಿಕವಾಗಿ ಬೃಹತ್ ಆರ್ಥಿಕ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತವಿಂದು 3.5 ಟ್ರಿಲಿಯನ್ (3.5ಲಕ್ಷ ಕೋಟಿ) ಡಾಲರ್‌ಗಳ ಆರ್ಥಿಕ ಶಕ್ತಿಯಾಗಿ ಬೆಳೆದು ಇದೀಗ ಜಾಗತಿಕವಾಗಿ 5ನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಮೂಡಿ ಬಂದಿದೆ. ಭಾರತದ ನಿರುದ್ಯೋಗ ಪ್ರಮಾಣ ಇಳಿಯುತ್ತಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿ ಯನ್ ಇಕಾನಮಿ ಸಂಸ್ಥೆ ಹೇಳಿದೆ. ಶೇ.8ರ ಆಸುಪಾಸಿನಲ್ಲಿದ್ದ ಭಾರತದ ನಿರುದ್ಯೋಗ ಈಗ 7.5%ಗೆ ಇಳಿದಿದೆ.
ಭಾರತದಲ್ಲಿ 1.22 ಕೋಟಿ ಜನರು 2021-22ರಲ್ಲಿ ಕಾರ್ಮಿಕರ ಭವಿಷ್ಯ ನಿಧಿಗೆ ಹೊಸದಾಗಿ ನೋಂದಾವಣೆಗೊಂಡಿದ್ದಾರೆ. 70000 ನವೋದ್ಯಮಗಳು ಕಳೆದ 7 ವರ್ಷಗಳಲ್ಲಿ ರೂಪುಗೊಂಡಿವೆ. ಭಾರತ ಸರಕಾರದ ವಿದೇಶಿ ಸಾಲ ಕೂಡ ಕನಿಷ್ಠ ಮಟ್ಟ ದಲ್ಲಿದೆ. ಪ್ರಸ್ತುತ ಭಾರತದ ವಿದೇಶಿ ಸಾಲದ ಪ್ರಮಾಣ 131.4 ಶತಕೋಟಿ ಡಾಲರ್. ಭಾರತದ ಬೃಹತ್ ಆರ್ಥಿಕತೆಯ ಮುಂದೆ ಈ ಸಾಲದ ಪ್ರಮಾಣ ನಗಣ್ಯ. 2021-22ರಲ್ಲಿ ಭಾರತವು 6.9% ವಿತ್ತೀಯ ಕೊರತೆಯನ್ನು ಎದುರಿಸಿತ್ತಾದರೂ 2022-23ರಲ್ಲಿ ವಿತ್ತೀಯ ಕೊರತೆಯ ಪ್ರಮಾಣ 6.4%ಗೆ ಇಳಿಯಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಭಾರತದಲ್ಲಿಂದು ಸ್ಥಿರ ಸರಕಾರವಿದೆ. ಇಲ್ಲಿ ವಂಶಾಡಳಿತ, ಸ್ವಜನ ಪಕ್ಷಪಾತವಿಲ್ಲ. ಇಲ್ಲಿ ಭ್ರಷ್ಟಾಚಾರ ಹಾಗೂ ಅಧಿಕಾರಶಾಹಿ ಪ್ರವೃತ್ತಿ ಇಳಿಮುಖವಾಗುತ್ತಿದೆ. ಸರಕಾರವು ದೇಶದ ಹಿತವನ್ನೇ ಪರಮ ಗುರಿಯಾಗಿಸಿ ಇಂಡಿಯಾ ಫಸ್ಟ್ ಎನ್ನುವ ನೀತಿಯನ್ನು ಪಾಲಿಸುತ್ತಿದೆ. ಅಮೆರಿಕ, ಯುರೋಪ್, ಚೀನಾಗಳ ಸ್ಥಾಪಿತ ಹಿತಾಸಕ್ತಿಗಳನ್ನು ಧಿಕ್ಕರಿಸಿ ನಡೆಯುವ ಛಾತಿ ನಮ್ಮ ದೇಶ ವನ್ನಾಳುವ ನಾಯಕರಲ್ಲಿದೆ. ಈಗ ಹೇಳಿ ಭಾರತ ಇನ್ನೊಂದು ಶ್ರೀಲಂಕವಾದೀತೇ?