ಅಂಕದ ಹಿಂದೆ ಓಡಿಸುವ ಶಿಕ್ಷಣ ವ್ಯವಸ್ಥೆ
ಅಭಿವ್ಯಕ್ತಿ
ರುದ್ರಯ್ಯ ಎಸ್‌.ಎಸ್‌.
ಅಷ್ಟಕ್ಕೂ ಪೋಷಕರ ಉದ್ದೇಶವಾದರೂ ಏನಿರುತ್ತೆ? ನನ್ನ ಮಗ ಅಥವಾ ಮಗಳು ಓದಿ ವಿದ್ಯಾವಂತರಾಗಲಿ ಎನ್ನುವು ದಕ್ಕಿಂತ ಅವರು ಇಂತಹದೇ ನೌಕರಿ ಹಿಡಿಯಬೇಕು ಎಂಬ ಬಯಕೆ ಇರುತ್ತೆ. ವಿದ್ಯಾರ್ಥಿಗಳೂ ಪರೀಕ್ಷೆಗಷ್ಟೇ ಓದಿ ಪಾಸ್ ಆಗುತ್ತಾರೆ.
ಈಗಿನ ಕಾಲದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದರೆ ಸಾಕು ಮುಂದಿನ ಶಿಕ್ಷಣ ಕ್ಕಾಗಿ ಯಾವ ಕಾಲೇಜಿಗೆ ಹಚ್ಚಬೇಕು, ಯಾವ ಕೋರ್ಸ್ ಮಾಡಬೇಕು ಎನ್ನುವುದರ ಕುರಿತು ವಿದ್ಯಾರ್ಥಿಗಳಿಗಿಂತ ಅವರ ಪೋಷಕರಿಗೆ ಹೆಚ್ಚಿನ ಗೊಂದಲವಿರುತ್ತದೆ. ಇಂಥ ಸಂದರ್ಭದಲ್ಲಿ ಸಂಬಂಧಿಕರು ಹಾಗೂ ಸುತ್ತಮುತ್ತಲಿನವರು ಫೋನ್ ಮಾಡಿ- ಎಷ್ಟು ಪರ್ಸೆಂಟೇಜ್ ಆಯ್ತು, ಇಷ್ಟ ಯಾಕ್ ಕಡಿಮೆ ಆಯ್ತು? ನೀನು ಆರ್ಟ್ಸ್ ಮಾಡೋದೇ ಬೆಟರ್, ಓಹೋ ಭಾರಿ ಅಂಕ ತಗೆದಿದ್ದಿಯಾ ಸೈನ್ಸ್ ಮಾಡು.
ಬರಿ85%ಅಷ್ಟೇನಾ ನೀನು ಕಾಮರ್ಸ್ ಮಾಡಿಬಿಡು ಅಂತ ಉಪದೇಶ/ಸಲಹೆ ನೀಡುವ ಜತೆಗೆ ನಮ್ ಮಗ/ಮಗಳು ಅಥವಾ ಸಂಬಂಧಿ ಮಕ್ಕಳು ನಿನಗಿಂತ ಜಾಸ್ತಿ ಪರ್ಸೆಂಟೇಜ್ ಮಾಡಿದ್ದಾರೆ ಎಂದು ಹೆಮ್ಮೆಯಿಂದ ಮಾತನಾಡುತ್ತಾರೆ. ಇಂತಹ ಸಲಹೆ ಗಳಿಂದ ವಿದ್ಯಾರ್ಥಿಗಳ ಮೇಲೆ ಉಂಟಾಗುವ ಪರಿಣಾಮದ ಕುರಿತು ಯಾರೂ ಯೋಚಿಸುವುದಿಲ್ಲ. ಮುಂದೆ ಓದಬೇಕಿರುವ ವಿದ್ಯಾರ್ಥಿಗಳ ಇಷ್ಟ-ಕಷ್ಟವನ್ನು ಕೇಳದೆ, ಯಾವುದೋ ಒಂದು ಕೋರ್ಸ್‌ಗೆ ಹಚ್ಚಲು ಯೋಜನೆ ಸಿದ್ಧಪಡಿಸಿ, ಸುಂದರವಾಗಿ ಕಟ್ಟಿರುವ ದೊಡ್ಡ ಕಟ್ಟಡ ದಲ್ಲಿರುವ ಕಾಲೇಜ್‌ಗೆ ಪ್ರವೇಶ ಮಾಡಿಸಿ ಬರುತ್ತಾರೆ.
ಆದರೆ ನಂತರದ ದಿನಗಳಲ್ಲಿ ಪಠ್ಯಗಳ ಕುರಿತು ಎದುರಾಗುವ ಸಮಸ್ಯೆಗಳಿಗೆ ಆ ವಿದ್ಯಾರ್ಥಿಯೇ ಬೆಲೆ ತೆರಬೇಕು. ಆದ್ದರಿಂದ ಏನನ್ನು ಓದಬೇಕು, ಯಾವುದನ್ನು ಓದಬಾರದು ಎನ್ನುವುದರ ಕುರಿತು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಡುವುದು ಉತ್ತಮ. ಆರ್ಟ್ಸ್ ಹಚ್ಚಲು ಇಷ್ಟವಿರುವ ವಿದ್ಯಾರ್ಥಿಯನ್ನು ಕಾಮರ್ಸ್‌ಗೆ, ವಾಣಿಜ್ಯದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಯನ್ನು ಸೈನ್ಸ್‌ಗೆ ಅಥವಾ ತಾಂತ್ರಿಕ ಅಧ್ಯಯನ ಕೋಸ್ ಗಳಿಗೆ ಸೇರಿಸಲು ಮುಂದಾಗುತ್ತಾರೆ.
ಅಷ್ಟಕ್ಕೂ ಬಹುತೇಕ ಪೋಷಕರ ಉದ್ದೇಶವಾದರೂ ಏನಿರುತ್ತೆ? ನನ್ನ ಮಗ ಅಥವಾ ಮಗಳು ಓದಿ ವಿದ್ಯಾವಂತರಾಗಲಿ ಎನ್ನುವು ದಕ್ಕಿಂತ ಅವರು ಇಂತಹದೇ ನೌಕರಿ ಹಿಡಿಯಬೇಕು ಎಂಬ ಬಯಕೆ ಇರುತ್ತೆ. ಇದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಸಹ ಕೇವಲ ಪರೀಕ್ಷೆಗಷ್ಟೇ ಅಧ್ಯಯನ ಮಾಡಿ ಪಾಸ್ ಆಗುತ್ತಾರೆ. ಆದರೆ, ಪ್ರಸ್ತುತ ಕಾರ್ಪೊರೇಟ್ ಜಗತ್ತಿನಲ್ಲಿ ಅಂಕಗಳಿಗೆ ಯಾವುದೇ ಬೆಲೆ ಇಲ್ಲ. ಇದು ಗೊತ್ತಿರುವ ವಿಷಯವಾಗಿದ್ದರೂ ಶಾಲಾ ಹಂತದಲ್ಲಿ ಇದನ್ನು ಹೇಳದಿರುವ ಕಾರಣಕ್ಕೇ ‘ಅಂಕಗಳಿ ಗಾಗಿ ಅಧ್ಯಯನ’ ಎಂಬ ರೂಢಿ ಚಾಲ್ತಿಯಲ್ಲಿದೆ.
ಕೆಲಸ ಮಾಡಿಸಿಕೊಳ್ಳುವ ಸಂಸ್ಥೆಗಳಿಗೆ ಬೇಕಿರುವುದು ವ್ಯಕ್ತಿತ್ವ ವಿಕಸನ ಹೊಂದಿರುವ, ಕೌಶಲದಿಂದ ಕೂಡಿರುವ ಬುದ್ಧಿಮತ್ತೆ. ಅಂಕಗಳೇನಿದ್ದರೂ ಕಾಲೇಜ್‌ಗಳಿಗೆ ಪ್ರವೇಶ ಪಡೆಯಲು, ಬಿಟ್ಟರೆ ಸರಕಾರದ ವಿದ್ಯಾರ್ಥಿ ವೇತನ ಪಡೆಯಲಷ್ಟೇ ಉಪಯೋಗ. ಇತ್ತೀಚೆಗೆ ಹೆಚ್ಚು ಹಣ ಕೊಟ್ಟರೆ ಸಾಕು ಪ್ರಯಾಸವಿಲ್ಲದೆ ಪ್ರವೇಶ ಕೊಡುವ ಕಾಲೇಜ್‌ಗಳು ಗಲ್ಲಿಗಲ್ಲಿಗಳಲ್ಲಿ ಹುಟ್ಟಿಕೊಂಡಿರುವಾಗ ಅಲ್ಲಿಯೂ ಗಳಿಸಿದ ಅಂಕಗಳಿಗೆ ಬೆಲೆ ಇಲ್ಲದಂತಾಗಿದೆ.
ಕೆಲ ದಿನಗಳ ಕೆಳಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಗಮನಿಸಿದರೆ ಶಿಕ್ಷಣದಲ್ಲಿ ಅಂಕಗಳಿಗೆ ಬೆಲೆ ಇಲ್ಲ ಎನ್ನುವುದು ತಿಳಿಯುತ್ತದೆ. 145 ವಿದ್ಯಾರ್ಥಿಗಳಿಗೆ ‘ಔಟ್ ಆಫ್ ಔಟ್’ ಎಂದರೆ ತಮಾಷೆ ಏನು! ಪರೀಕ್ಷೆ ಬರೆದ 8,53,436 ವಿದ್ಯಾರ್ಥಿಗಳ ಪೈಕಿ 7,30,881 ಮಂದಿ ಉತ್ತೀರ್ಣರಾಗಿ ರಾಜ್ಯಕ್ಕೆ 85.63% ಫಲಿತಾಂಶದ ಸಾಧನೆ ನೀಡಿದ್ದಾರೆ. ಇದು ಸರಕಾರದ ಹಾಗೂ ವಿದ್ಯಾರ್ಥಿಗಳ ಮಟ್ಟಿಗೆ ಸಾಧನೆ ಆಗಿರಬಹುದು. ಆದರೆ, ಆರೋಗ್ಯಕರ ಶೈಕ್ಷಣಿಕ ಸಮಾಜಕ್ಕೆ ಧಕ್ಕೆ ಉಂಟು ಮಾಡಬಲ್ಲ ಸಂಗತಿಯಾಗಿದೆ. 40000 ವಿದ್ಯಾರ್ಥಿಗಳಿಗೆ ಶೇ. 10 ಕೃಪಾಂಕ ನೀಡಿ ಪಾಸ್ ಮಾಡಲಾಗಿದೆ.
ಅದರಲ್ಲಿ ಕನ್ನಡ ವಿಷಯದಲ್ಲಿಯೇ 18100 ಮಂದಿಗೆ ಕೃಪಾಂಕ ನೀಡಲಾಗಿದೆ ಎಂಬುದು ಆತಂಕಕಾರಿ ವಿಷಯ. ಮಾತೃ ಭಾಷೆ ಯನ್ನೇ ಸರಿಯಾಗಿ ಬರೆದು 35 ಅಂಕ ಪಡೆಯದ ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿ ಸರಿಯಾದ ಅಧ್ಯಯನ ಮಾಡುವರೇ? ಇದು ಯಕ್ಷ ಪ್ರಶ್ನೆ! ಈ ರೀತಿಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರದ್ದು ತಪ್ಪಿದೆ. ಹೇಗಾದರೂ ಸರಿ ಪಾಸ್ ಆದರೆ ಸಾಕು ಎನ್ನುವ ವಿದ್ಯಾರ್ಥಿಯಿಂದ ಹಿಡಿದು ನಮ್ಮ ಶಾಲೆ 100ರಷ್ಟು ಫಲಿತಾಂಶ ಪಡೆಯಬೇಕೆಂಬ ಸಂಸ್ಥೆಗಳನ್ನು ಒಳಗೊಂಡು, ನಮ್ಮ ಜಿಲ್ಲೆ ಟಾಪ್‌ನಲ್ಲಿ ಬರಬೇಕು ಎಂದು ಬಯಸುವ ಅಧಿಕಾರಿ ವರ್ಗ ಹಾಗೂ ಕ್ಷೇತ್ರದಲ್ಲಿ ಶಾಲೆಗಳ ವ್ಯವಸ್ಥೆ ಉತ್ತಮವಾಗಿ ಇಲ್ಲದಿದ್ದರೂ ಸರಿ ನನ್ನ ಮತಕ್ಷೇತ್ರದ ಹೆಸರು ನ್ಯೂಸ್ ಚಾನಲ್ ಮೇಲೆ ರಾರಾಜಿಸಿದರೆ ಸಾಕು ಅದರಿಂದಲೂ ಮತ ಗಳಿಕೆ ಮಾಡಬಹುದು ಎಂಬ ರಾಜಕಾರಣಿಗಳು, ಇದೆಲ್ಲಕ್ಕಿಂತ ಮುಖ್ಯವಾಗಿ ಜ್ಞಾನಕ್ಕಿಂತ ಹುದ್ದೆಯೇ ಮುಖ್ಯ ಎಂದು ತಿಳಿದು ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರ ಆದಿಯಾಗಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ.
ಇದನ್ನೆಲ್ಲ ನೋಡಿದಾಗ ನಮ್ಮ ಗುರುಗಳು ಹೇಳಿದ ಒಂದು ಕತೆ ನೆನಪಿಗೆ ಬರುತ್ತಿದೆ. ಹಲವು ಶತಮಾನಗಳ ಹಿಂದೆ ಜ್ಞಾನ, ಯಶಸ್ಸು ಮತ್ತು ಸಂಪತ್ತು ಎಂಬ ಮೂವರು ಮುದಕರು ಕಾಶಿ ಯಾತ್ರೆ ತೀರ್ಮಾನಿಸಿ ಹೊರಟರು. ಒಂದು ದಿನ ಮಧ್ಯಾಹ್ನದ ಬಿಸಿಲಿನಲ್ಲಿ ಬೇಸತ್ತು ಹೊಟ್ಟೆ ಹಸಿವಿನಿಂದ ಕೂಡಿದ ಮುದುಕರು ಊರ ಹೊರಗಿನ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಮುಂದಾದರು. ಅಲ್ಲಿಯೇ ಇದ್ದ ಒಂದು ಮನೆಯಲ್ಲಿ ಊಟಕ್ಕೆಂದು ವಿಚಾರಿಸಿದಾಗ ಮನೆಯ ಒಡತಿ ‘ಒಳಗೆ ಬನ್ನಿ ಊಟಸಿದ್ಧಪಡಿಸುವೆ’ ಎಂದಾಗ ಮುದುಕರು, ನಮ್ಮದೊಂದು ನಿಯಮವಿದೆ. ನಾವು ಮೂವರೂ ಒಟ್ಟಿಗೆ ನಿಮ್ಮ ಮನೆಯ ಒಳಗೆ ಬರುವುದಿಲ್ಲ.
ಒಬ್ಬೊಬ್ಬರಾಗಿ ಬರುತ್ತೇವೆ ಎಂದು ತಿಳಿಸಿ ‘ನನ್ನ ಹೆಸರು ಜ್ಞಾನ, ಅವನ ಹೆಸರು ಯಶಸ್ಸು ಮತ್ತೊಬ್ಬನ ಹೆಸರು ಸಂಪತ್ತು’ ನೀವೇ ತೀರ್ಮಾನಿಸಿ ಯಾರು ಮೊದಲು ಬರಬೇಕು ಎಂದು. ಅದಕ್ಕೆ ಮನೆ ಒಡತಿ ‘ಸದ್ಯ ಮನೆಯಲ್ಲಿ ಯಾರೂ ಇಲ್ಲ, ನಮ್ಮ ಯಜ ಮಾನರು ಕೆಲಸಕ್ಕೆ ಹೋಗಿದ್ದಾರೆ. ಅವರು ಬಂದ ನಂತರ ವಿಚಾರಿಸಿ ಹೇಳುವೆ’ ಎಂದು ಅಡುಗೆ ತಯಾರಿಸಲು ಮನೆಯ ಒಳಗೆ ಹೋದಳು. ತನ್ನ ಗಂಡನ ಮುಂದೆ ನಡೆದ ವಿಷಯದ ಕುರಿತು ಹೇಳಿದಳು. ಆಗ, ಯಾರನ್ನು ಮೊದಲು ಕರೆಯಬೇಕು ಎಂಬ ಗೊಂದಲ ಶುರುವಾಯಿತು.
ಗಂಡ ‘ಮೊದಲಿಗೆ ಯಶಸ್ಸು ಎಂಬ ಮುದುಕನನ್ನು ಬರಮಾಡಿಕೊಳ್ಳೋಣ, ಯಶಸ್ಸು ಇದ್ದರೆ ಎಲ್ಲರೂ ನಮ್ಮನ್ನು ಗುರುತಿಸು ತ್ತಾರೆ’ ಎಂದ. ಇದಕ್ಕೆ ಒಪ್ಪದ ಹೆಂಡತಿ ‘ಜೀವನದಲ್ಲಿ ಹಣ ಮುಖ್ಯ, ಆಸ್ತಿ ಅಂತಸ್ತು ಇದ್ದರೆ ಎಲ್ಲರೂ ನಮ್ಮನ್ನು ಮೆಚ್ಚಿ ಕೊಳ್ಳುತ್ತಾರೆ. ಹಾಗಾಗಿ ಸಂಪತ್ತು ಎನ್ನುವ ಮುದುಕನನ್ನು ಕರೆಯೋಣ’ ಎಂದಳು. ಇದರ ಕುರಿತು ಇಬ್ಬರ ಮಧ್ಯೆ ಸಣ್ಣ ಜಗಳ ಶುರುವಾದಾಗ ಇವರ ಗದ್ದಲಕ್ಕೆ ಕೋಣೆಯ ಒಳಗೆ ಮಲಗಿದ್ದ ಮಗಳು ಎದ್ದು ಬಂದು ‘ಯಶಸ್ಸು, ಸಂಪತ್ತು ಇಬ್ಬರೂ ಬೇಡ ಜ್ಞಾನ ಎಂಬ ಮುದುಕನನ್ನು ಮೊದಲು ಕರೆದುಕೊಂಡು ಬನ್ನಿ’ ಎಂದು ಸಲಹೆ ನೀಡಿದಳು. ಹಾಗಾಗಿ ಜ್ಞಾನ ಎಂಬ ಮುದುಕ ನನ್ನು ಊಟಕ್ಕೆ ಆಹ್ವಾನಿಸಿದರು.
ಇದಕ್ಕೆ ಒಪ್ಪಿದ ಮೂರೂ ಮುದುಕರು ಒಟ್ಟಿಗೆ ಮನೆಯ ಒಳಗೆ ಪ್ರವೇಶ ಮಾಡಲು ಮುಂದಾದರು. ತಕ್ಷಣ ಅವರನ್ನು ಮನೆ ಬಾಗಿಲಿನಲ್ಲಿಯೇ ತಡೆದ ಗಂಡ-ಹೆಂಡತಿ ಏಕೆ ಎಂದು ಪ್ರಶ್ನಿಸಿದರು. ನಾವು ಕೇವಲ ಜ್ಞಾನ ಎಂಬ ಮುದುಕನನ್ನು ಮಾತ್ರ ಕರೆದಿದ್ದು, ನೀವಿಬ್ಬರೂ ಅನಂತರ ಬನ್ನಿ ಎಂದರು. ಇದಕ್ಕೆ ಉತ್ತರಿಸಿದ eನ ಎಂಬ ಮುದುಕ ‘ನೋಡಿ ತಾಯಿ, ನೀವು ಯಶಸ್ಸು ಎಂಬ ಮುದುಕನನ್ನು ಕರೆದಿದ್ದರೆ ಅವನು ಮಾತ್ರ ಬರುತ್ತಿದ್ದ. ಸಂಪತ್ತು ಎನ್ನುವ ಮುದುಕನನ್ನು ಕರೆದಿದ್ದರೂ ಸಹ ಅವನು ಒಬ್ಬನೇ ಒಳಗೆ ಬರುತ್ತಿದ್ದ.
ಆದರೆ, ನೀವು ಕರೆದಿರುವುದು ಜ್ಞಾನ ಹೆಸರಿನ ನನ್ನನ್ನು. ಆದ್ದರಿಂದ ಜ್ಞಾನ ಎಲ್ಲಿ ಇರುತ್ತದೆಯೋ ಅಲ್ಲಿ ಯಶಸ್ಸು ಮತ್ತು ಸಂಪತ್ತು ಒಟ್ಟೊಟ್ಟಿಗೆ ಇರುವುದು ಜಗದ ನಿಯಮವಾಗಿದೆ’ಎಂದು ತಿಳಿಸಿದ. ಇದೇ ರೀತಿಯಾಗಿ ಇಂದು ಎಲ್ಲರೂ ಜ್ಞಾನದ ಬೆನ್ನುಹತ್ತದೆ ಅಧಿಕಾರ, ಕೀರ್ತಿ ಹಾಗೂ ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಪ್ರಚಾರ ಬಯಸುತ್ತಿದ್ದಾರೆ. ಹೀಗಾಗದೆ ಪ್ರತಿಯೊಬ್ಬರೂ ಸಹ ನಿಜವಾದ ಅಧ್ಯಯನಕ್ಕೆ ಒತ್ತುಕೊಟ್ಟು ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇ ಆದಲ್ಲಿ ಸುಂದರ ಸಮಾಜವನ್ನು ನಿರ್ಮಾಣ ಮಾಡಬಹುದಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರವೂ ಮುಖ್ಯ.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಆದರೆ ಸಾಕು ಸರಕಾರಿ ನೌಕರಿ ಅಥವಾ ಇನ್ನಾವುದೋ ಉನ್ನತ ಹಂತದ ಹುದ್ದೆ ಸಿಗುತ್ತೆ ಎನ್ನುವುದೆಲ್ಲ ಕನಸಿನ ಮಾತು. ನೌಕರಿಗಂತಲೇ ಪ್ರತ್ಯೇಕ ಪರೀಕ್ಷೆಗಳು ಇವೆ ಎಂಬುದನ್ನು ಶಾಲಾ ಹಂತದಲ್ಲಿಯೇ ವಿದ್ಯಾರ್ಥಿ ಗಳಿಗೆ ಮನವರಿಕೆ ಮಾಡಿ ಕೊಡಬೇಕು. ಡಿಗ್ರಿ ಮಾರ್ಕ್ಸ್ ಕಾರ್ಡ್ ಏನಿದ್ದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇರುವ ಅರ್ಹತೆ ಪತ್ರ ಮಾತ್ರ.
ಇದರ ಆಧಾರದ ಮೇಲೆಯೇ ಕೆಲಸ ಗಿಟ್ಟಿಸಿಕೊಳ್ಳಲು ಅಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಸಮಾಜದಲ್ಲಿ ವಿದ್ಯಾವಂತರಾಗಿ ದೇಶಕ್ಕೆ ಸಂಸ್ಕಾರದಿಂದ ಕೂಡಿದ ಉತ್ತಮ ನಾಗರಿಕರಾಗ ಬಲ್ಲರು.