ಧೂಮಪಾನ ತ್ಯಜಿಸಿ, ಮಾನವಕುಲ ರಕ್ಷಿಸಿ
ಸ್ವಾಸ್ಥ್ಯ ಸಂಪದ
ಡಾ.ಎಸ್.ಪಿ.ಯೋಗಣ್ಣ
yoganna55@.
ಧೂಮದಲ್ಲಿರುವ ನಿಕೋಟಿನ್ ಹೃದಯ, ರಕ್ತನಾಳಗಳ ಮೇಲೆ ದುಷ್ಪರಿಣಾಮ ಬೀರಿ, ಹೃದಯ ಬಡಿತವನ್ನು ಹೆಚ್ಚಿಸು ತ್ತದೆ. ಹೃದಯದ ಶುದ್ಧ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಂತಾಗಿಸಿ ಹೃದಯಾಘಾತ ಉಂಟಾಗುತ್ತದೆ. ಕೈ ಕಾಲಿನ ರಕ್ತನಾಳಗಳಲ್ಲಿ ಗ್ಯಾಂಗ್ರೀನ್ ಉಂಟಾಗುತ್ತದೆ.
ಹೊಗೆಸೊಪ್ಪು ಮನುಷ್ಯ ಮತ್ತು ಪರಿಸರಗಳ ಮೇಲೆ ಗಂಭೀರ ಪರಿಣಾಮ ಬೀರಿ ಅವೆ ರಡನ್ನೂ ನಾಶಮಾಡುವ ಹಾದಿಯಲ್ಲಿ ದ್ದರೂ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಅದರಲ್ಲೂ ರೈತನ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಶತಮಾನ ಗಳಿಂದಲೂ ಪೂರಕವಾಗಿ ಬೇರೂರಿರುತ್ತದೆ. ಈ ಕಾರಣಕ್ಕಾಗಿ ಹೊಗೆಸೊಪ್ಪು ಇಡೀ ಸೃಷ್ಟಿಗೆ ಮಾರಕವೆಂದು ವೈಜ್ಞಾನಿಕವಾಗಿ ಗೊತ್ತಿದ್ದರೂ ಅದನ್ನು ಸಂಪೂರ್ಣವಾಗಿ ನಿಷೇಧ ಮಾಡಲು ಸರಕಾರ ಮತ್ತು ಸಮಾಜ ಸದೃಢ ಮನಸ್ಸು ಮಾಡುತ್ತಿಲ್ಲ.
ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜನಸಾಮಾನ್ಯರಿಗೆ ಇದರ ಅನಾಹುತಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಿ ಅವರವರೇ ವೈಯಕ್ತಿಕವಾಗಿ ಹೊಗೆಸೊಪ್ಪನ್ನು ಉಪಯೋ ಗಿಸುವುದನ್ನು ಸ್ವಯಂ ನಿಷೇಧಿಸಿಕೊಳ್ಳುವ ದೃಷ್ಟಿಯಿಂದ ಪ್ರತಿವರ್ಷ ಮೇ 31 ರಂದು ಹೊಗೆಸೊಪ್ಪು ವಿರೋಧಿ ದಿನವೆಂದು ಪ್ರಪಂಚಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಹೊಗೆಸೊಪ್ಪಿನ ಬೆಳವಣಿಗೆಯನ್ನೇ ಸಂಪೂರ್ಣವಾಗಿ ನಿಷೇಧಿಸಬೇಕೇ, ನಿಯಂತ್ರಿ ಸಬೇಕೇ? ಇದರಿಂದಾಗುತ್ತಿರುವ ಅನಾಹುತಗಳೇನು? ರೈತರಿಗೆ ಪರ್ಯಾಯ ಮಾರ್ಗ ಗಳೇನು? ಅನಾಹುತಗಳ ನಡುವೆಯೂ ಇದನ್ನು ಬೆಳೆಯುವುದನ್ನು ಮುಂದು ವರಿಸಬೇಕೇ? ಎಂಬುದರ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.
ಹೊಗೆಸೊಪ್ಪು ಮನುಷ್ಯನ ಬದುಕಿನಲ್ಲಿ ಆದಿಕಾಲದಿಂದಲೂ ಹಾಸುಹೊಕ್ಕಾಗಿದ್ದು, ಸುಮಾರು ಕ್ರಿ.ಪೂ. 6000 ವರ್ಷಗಳ ಹಿಂದಿನಿಂದಲೂ ಇದನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿ ಸುಮಾರು ೧೭ನೇ ಶತಮಾನದಲ್ಲಿ ಇದರ ಬೆಳೆ ಪ್ರಾರಂಭವಾಗಿ ಬೀಡಿಯ ಮೂಲಕ ಇದನ್ನು ಉಪಯೋಗಿಸುವ ಪರಿಪಾಠ ಪ್ರಾರಂಭವಾಯಿತು. ಅನಂತರ ಕಡ್ಡಿಪುಡಿ, ಹೊಗೆಸೊಪ್ಪು ಜಗಿಯು ವಿಕೆ, ಸಿಗರೇಟು, ಚುಟ್ಟಾ, ಹುಕ್ಕಾ, ಹನ್ಸ್ ಇತ್ಯಾದಿಗಳ ಮೂಲಕ ಹೊಗೆಸೊಪ್ಪನ್ನು ವಿವಿಧ ರೂಪಗಳಲ್ಲಿ ಇಂದು ಸೇವಿಸಲಾಗು ತ್ತಿದೆ.
ಜಾಗತಿಕವಾಗಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊಗೆಸೊಪ್ಪನ್ನು ಉತ್ಪತ್ತಿಮಾಡುವ ಎರಡನೇ ರಾಷ್ಟ್ರವಾಗಿದ್ದು, ಚೀನಾ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಇಂಡೋನೇಷ್ಯಾ, ಬ್ರೆಜಿಲ್ ಇತ್ಯಾದಿ ರಾಷ್ಟ್ರಗಳಿವೆ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಇದು ರೈತರ ವಾಣಿಜ್ಯ ಬೆಳೆಯಾಗಿದ್ದು, ಇದರ ಪ್ರೋತ್ಸಾಹಕ್ಕಾಗಿ ರಾಷ್ಟ್ರಮಟ್ಟದಲ್ಲಿ ತಂಬಾಕು ಮಂಡಳಿ ಯನ್ನು ಸ್ಥಾಪಿಸಿ, ಹಲವಾರು ವರ್ಷಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಅದರಲ್ಲೂ ರೈತರಿಗೆ ಗಣನೀಯವಾಗಿ ಕೊಡುಗೆ ನೀಡುವ ಬೆಳೆ ಇದಾಗಿದೆ. ಇದರಿಂದಾಗಿ ಸರಕಾರ ಹೊಗೆಸೊಪ್ಪು
ಇಡೀ ಸೃಷ್ಟಿಗೆ ಮಾರಕ ಎಂಬ ಅರಿವಿದ್ದರೂ ಇದನ್ನು ನಿಷೇಧಿಸುವ ದೃಢನಿರ್ಧಾರ ಕೈಗೊಳ್ಳುತ್ತಿಲ್ಲದಿರುವುದು ದುರಾದೃಷ್ಟಕರ. ಸರಕಾರ ಜನರಿಗೆ ವಿಷ ನೀಡಿ, ಅನಾರೋಗ್ಯರನ್ನಾಗಿಸಿ, ಔಷಧಗಳನ್ನು ನೀಡಿ ಇವುಗಳಿಂದ ಬರುವ ತೆರಿಗೆ ಹಣದಿಂದ ಖಜಾನೆತುಂಬಿಕೊಂಡು ಸರ್ವರಿಗೂ ಆರೋಗ್ಯ ನೀಡುತ್ತೇವೆ ಎಂಬ ಘೋಷಣೆ ವಿಪರ್ಯಾಸ.
ಧೂಮಪಾನ:ಹೊಗೆಸೊಪ್ಪನ್ನು ಬೀಡಿ ಮತ್ತು ಸಿಗರೇಟುಗಳಲ್ಲಿ ಸೇವಿಸಿ ಬೀಡಿಗೆ ಎಲೆ ಮತ್ತು ಸಿಗರೇಟಿಗೆ ವಿಶಿಷ್ಟ ಕಾಗದವನ್ನು ಸುತ್ತಿ ಬೆಂಕಿ ಹಚ್ಚಿ ಸೇದುವುದರಿಂದ ಸುಮಾರು 7000ಕ್ಕೂ ಹೆಚ್ಚು ಹೆಸರಿಸಲಾಗಿರುವ ರಾಸಾಯನಿಕ ವಸ್ತುಗಳು ಬಿಡುಗಡೆಯಾಗಿ, ದೇಹವನ್ನು ಸೇರುತ್ತವೆ ಎಂಬ ಆತಂಕಕಾರಿ ವೈಜ್ಞಾನಿಕ ಅಂಶವನ್ನು ಧೂಮಪಾನಿಗಳು ಮನಗಾಣಬೇಕು.
ನಿಕೋಟಿನ್ ಇದರಲ್ಲಿರುವ ಪ್ರಮುಖ ಅಂಶವಾದರೂ ಇದರೊಡನಿರುವ ಹೈಡ್ರೋಜನ್ ಸೈನೈಡ್, ಬೆಂಜೀನ್, ಫಾರ್ಮಾ ಲ್ಟಿಹೈಡ್, ಕಾರ್ಬನ್ ಮಾನಾಕ್ಸೈಡ್, ಆರ್ಸಿನಿಕ್, ಲೆಡ್, ಅಮೋನಿಯ, ವಿಕಿರಣಗಳನ್ನು ಸೂಸುವ ಮೂಲವಸ್ತುಗಳು, ಟಾರ್ ಇತ್ಯಾದಿಗಳು ಬಹುಮುಖ್ಯವಾದವುಗಳು. ಧೂಮದಲ್ಲಿ ಸುಮಾರು ೭೦ ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಇವೆ ಎಂದುಅಂದಾಜಿಸಲಾಗಿದೆ. ಹೊಗೆಸೊಪ್ಪಲ್ಲದೆ ಅದರೊಡನಿರುವ ಕಾಗದಗಳ ಉರಿಯುವಿಕೆಯೂ ಸಹ ಅಧಿಕ ಹಾನಿಕಾರಕ ರಾಸಾ ಯನಿಕ ವಸ್ತುಗಳ ಉತ್ಪತ್ತಿಗೆ ಕಾರಣ.
ಧೂಮಪಾನಿಗಳು ಹೊರಬಿಡುವ ಧೂಮವನ್ನು ಬೇರೆಯವರೂ ಸೇವಿಸುವುದರಿಂದ ಅವರೂ ಸಹ ಪರೋಕ್ಷವಾಗಿ ಧೂಮಪಾನಿ ಗಳಾಗುತ್ತಾರೆ. ಧೂಮಪಾನ ಮಾಡಿದವರಿಗೆ ಉಂಟಾಗುವಷ್ಟೇ ದುಷ್ಪರಿಣಾಮಗಳು ಇವರಲ್ಲೂ ಕಾಣಿಸಿಕೊಳ್ಳುತ್ತದೆ. ಎಲೆಕ್ಟ್ರಾ ನಿಕ್ ಸಿಗರೇಟ್ ಸಹ ಹಾನಿಕಾರಕ. ಇದರಲ್ಲಿ ದ್ರವರೂಪದ ನಿಕೋಟಿನ್ ಇದ್ದು, ಬ್ಯಾಟರಿಯಿಂದ ಉಂಟಾಗುವ ಶಾಖದಿಂದ ಹೊಗೆಗೆ ಬದಲಾಗಿ ತುಂತುರುಗಳು ಹೊರಬಂದು ನಿಕೋಟಿನ್ ಪರಿಣಾಮ ಬೀರುತ್ತವೆ. ಸಾಮಾನ್ಯ ಸಿಗರೇಟಿಗಿಂತ ಎಲೆಕ್ಟ್ರಾನಿಕ್ ಸಿಗರೇಟ್ ಸ್ವಲ್ಪ ಮಟ್ಟಿಗೆ ಸುರಕ್ಷಿತವಾದರೂ ದುಷ್ಪರಿಣಾಮಗಳಿಂದ ವಿಮುಕ್ತವಾಗಿಲ್ಲ. ಭಾರತದಲ್ಲಿ ಇದರ ಮಾರಾಟ ನಿಷಿದ್ಧ.
ದುಷ್ಪರಿಣಾಮಗಳು:ಧೂಮಪಾನದಿಂದ ಶ್ವಾಸಕೋಶಗಳ ಕಾಯಿಲೆಗಳು, ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್, ಯೋಸೋ ಪೇಗಸ್ ಕ್ಯಾನ್ಸರ್, ಮೂತ್ರಕೋಶದ ಕ್ಯಾನ್ಸರ್, ಏರುರಕ್ತ ಒತ್ತಡ, ಹೃದಯಾಘಾತ, ಸಕ್ಕರೆ ಕಾಯಿಲೆ, ರಕ್ತನಾಳಗಳ ಅಡಚಣೆ, ಲಕ್ವ, ಮಾನಸಿಕ ತಳಮಳ, ಸ್ವನಿರೋಧಕತ್ವದ ಕಾಯಿಲೆಗಳು, ಸಂತಾನೋತ್ಪತ್ತಿ ಸಮಸ್ಯೆಗಳು, ಲೈಂಗಿಕ ಸಮಸ್ಯೆಗಳು ಮತ್ತು ಧೂಮಪಾನ ಮಾಡುವ ಸ್ತ್ರೀಯರಲ್ಲಿ ಗರ್ಭಕೂಸಿನಲ್ಲಿ ನ್ಯೂನತೆಗಳು ಉಂಟಾಗುತ್ತವೆ.
ಧೂಮಪಾನದಿಂದ ಉಸಿರುನಾಳದ ಅಂಗಾಂಶಗಳು ಕೆರಳಿಕೆಗೊಳಗಾಗಿ ಬ್ರಾಂಕೈಟಿಸ್ (ಶ್ವಾಸನಾಳೋತುರಿ) ಪ್ರಾರಂಭವಾಗಿ5-10 ವರ್ಷಗಳಲ್ಲಿ ಶ್ವಾಸನಾಳಗಳ ಅಡಚಣೆಯಾಗಿ, ಗಾಳಿ ರವಾನೆಗೆ ಧಕ್ಕೆಯಾಗಿ ಶ್ವಾಸಕೋಶಗಳಲ್ಲಿ ಅತಿಯಾಗಿ ಗಾಳಿ ಶೇಖರಣೆ ಯಾಗಿಎಂಫೈಜೀಮಾಉಂಟಾಗುತ್ತವೆ. ಇದು ವಾಸಿ ಮಾಡಲಾಗದ ನ್ಯೂನತೆ. ದೀರ್ಘಕಾಲಿಕ ಕೆಮ್ಮು ಮತ್ತು ದಮ್ಮುಗಳುಇದರ ಪ್ರಮುಖ ರೋಗತೊಂದರೆಗಳು. ಕ್ಷಯರೋಗ, ಇವರುಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಶ್ವಾಸಕೋಶದ ಕ್ಯಾನ್ಸರ್ ಧೂಮಪಾನದಿಂದ ಉಂಟಾಗುವ ಪ್ರಮುಖ ಕ್ಯಾನ್ಸರ್. 5-10 ವರ್ಷಗಳ ಕಾಲ ಧೂಮಪಾನ ಮಾಡಿ ದವರಲ್ಲಿ ಕಾಣಿಸಿಕೊಳ್ಳುತ್ತದೆ. ಧೂಮದಲ್ಲಿರುವ ರಾಸಾಯನಿಕ ವಸ್ತುಗಳಿಂದ ಶ್ವಾಸನಾಳಗಳ ಜೀವಕೋಶಗಳು ಕ್ಯಾನ್ಸರ್ಜೀವಕೋಶಗಳಾಗಿ ಪರಿವರ್ತನೆ ಹೊಂದುತ್ತವೆ. ಧೂಮದ ರಾಸಾಯನಿಕ ವಸ್ತುಗಳು ವಂಶವಾಹಿಗಳ ಮೇಲೆ ಪರಿಣಾಮ ಬೀರಿ, ಕ್ಯಾನ್ಸರ್‌ಕಾರಕ ವಂಶವಾಹಿಗಳನ್ನಾಗಿ ಪರಿವರ್ತಿಸಿ ಜೀವಕೋಶ ಹಳಿತಪ್ಪಿ ಕ್ಯಾನ್ಸರ್ ಜೀವಕೋಶವಾಗಿ ಪರಿವರ್ತನೆಯಾಗುತ್ತದೆ. ವಾಸಿಯಾಗದ ಕೆಮ್ಮು, ರಕ್ತ ಕೆಮ್ಮು, ದಮ್ಮು, ತೂಕನಷ್ಟ ಅಂತಿಮ ಹಂತದಲ್ಲಿ ಲಕ್ವ, ತಲೆನೋವು, ನರದೌರ್ಬಲ್ಯಗಳು ಇತ್ಯಾದಿ ತೊಂದರೆಗಳುಂಟಾಗುತ್ತವೆ. ಧೂಮಪಾನ ನಿಲ್ಲಿಸಿದ ನಂತರವೂ 5-8 ವರ್ಷಗಳಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.
ಹೃದ್ರೋಗಗಳು:ಧೂಮದಲ್ಲಿರುವ ನಿಕೋಟಿನ್ ಹೃದಯ, ರಕ್ತನಾಳಗಳ ಮೇಲೆ ದುಷ್ಪರಿಣಾಮ ಬೀರಿ, ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಹೃದಯದ ಶುದ್ಧ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಂತಾಗಿಸಿ ಹೃದಯಾಘಾತ ಉಂಟಾಗುತ್ತದೆ. ಕೈ ಕಾಲಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಗ್ಯಾಂಗ್ರೀನ್ ಉಂಟಾಗುತ್ತದೆ. ಕೈ ಕಾಲುಗಳನ್ನು ತೆಗೆದು ಹಾಕುವ ಹಂತಕ್ಕೆ ಕಾಯಿಲೆ ಉಲ್ಬಣ ಗೊಳ್ಳಬಹುದು. ರಕ್ತ ಒತ್ತಡ ಹೆಚ್ಚಾಗಿ ಮೆದುಳಿನಲ್ಲಿ ರಕ್ತಸ್ರಾವವಾಗಿ ಮಾರಣಾಂತಿಕವಾಗಬಹುದು. ಕೈ ಕಾಲಿನ ರಕ್ತನಾಳಗಳು ಅಡಚಣೆಗೊಂಡು ನಡೆದಾಗ ಕಾಲುನೋವು ಕಾಣಿಸಿಕೊಂಡು ಅಂತಿಮಹಂತದಲ್ಲಿ ಗ್ಯಾಂಗ್ರಿನ್ ಕಾಣಿಸಿಕೊಳ್ಳಬಹುದು.
ಮೆದುಳಿನ ಕಾಯಿಲೆಗಳು:ನಿಕೋಟಿನ್ ಮೆದುಳನ್ನು ಚುರುಕುಗೊಳಿಸಿ ಆಹ್ಲಾದವನ್ನುಂಟು ಮಾಡುತ್ತದೆ. ಇದೊಂದೇ ಧೂಮ ಪಾನದ ಒಳ್ಳೆಯ ಪರಿಣಾಮ. ಈ ಪರಿಣಾಮದಿಂದಾಗಿ ದುಗುಡಗಳನ್ನು ಮರೆಯಲು ಧೂಮಪಾನಕ್ಕೆ ದಾಸರಾಗುತ್ತಾರೆ. ಕೈ ಬೆರಳು ಗಳ ನಡುಕ ಉಂಟಾಗುತ್ತದೆ. ನಿಕೋಟಿನ್‌ಗೆ ಅವಲಂಬನಾ ಗುಣವಿರುವುದರಿಂದ ಇದಿಲ್ಲದೆ ಮೆದುಳು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂಬ ಮಾನಸಿಕ ದಾಸ್ಯಸ್ಥಿತಿ ಉಂಟಾಗಿ ಧೂಮಪಾನವಿಲ್ಲದೆ ಬದುಕಿಲ್ಲ ಎಂಬಂತಾಗುತ್ತದೆ. ಬಿಟ್ಟಲ್ಲಿ ಮಾನಸಿಕ ತಳಮಳ, ನಿದ್ರಾಹೀನತೆ ಇತ್ಯಾದಿ ತೊಂದರೆಗಳುಂಟಾಗುತ್ತವೆ.
ಸಕ್ಕರೆ ಕಾಯಿಲೆ:ಧೂಮಪಾನದಿಂದ ಸಕ್ಕರೆ ಕಾಯಿಲೆ ಉತ್ಪತ್ತಿಯಾಗುತ್ತದೆ. ಧೂಮಪಾನಿಗಳಲ್ಲಿ ಸಕ್ಕರೆ ಕಾಯಿಲೆ ನಿರೋಧಕ ಔಷಧಗಳು ಸಮರ್ಥವಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ ಸಕ್ಕರೆ ಕಾಯಿಲೆ ನಿಯಂತ್ರಣ ಬಹುಕಷ್ಟ. ಧೂಮಪಾನಮಾಡುವ ಸಕ್ಕರೆ ಕಾಯಿಲೆಯವರಲ್ಲಿ ರಕ್ತದ ಜಿಡ್ಡೇರಿಕೆ ಅತಿಯಾಗಿ ರಕ್ತನಾಳಗಳ ಜಿಡ್ಡುಗಡಸುರೋಗ ಅಧಿಕವಾಗುತ್ತದೆ.
ಸಂತಾನೋತ್ಪತ್ತಿ:ಪುರುಷರಲ್ಲಿ ಧೂಮಪಾನ ಶಿಶ್ನದ ನಿಮಿರುವಿಕೆಯ ಸಮಸ್ಯೆಯನ್ನುಉಂಟು ಮಾಡುತ್ತದೆ. ವೀರ್ಯಾಣುಗಳ ಉತ್ಪತ್ತಿಯನ್ನು ಕುಂದಿಸಿ ಸಂತಾನಹೀನತೆಗೆ ಕಾರಣವಾಗಬಹುದು. ಸ್ತ್ರೀಯರಲ್ಲಿ ಮುಟ್ಟಿನ ಏರುಪೇರುಗಳನ್ನುಂಟು ಮಾಡುತ್ತದೆ. ಸ್ತನ ಕ್ಯಾನ್ಸರ್, ಸರ್ವಿಕ್ಸ್ ಕ್ಯಾನ್ಸರ್ ಮತ್ತು ಯೋನಿ ಕ್ಯಾನ್ಸರ್ ಸಾಧ್ಯತೆ ಹೆಚ್ಚಾಗುತ್ತದೆ.
ಧೂಮಪಾನಿಗಳಲ್ಲಿ ವಯಸ್ಸಾಗುವಿಕೆಯ ಲಕ್ಷಣಗಳು ಬಹುಬೇಗ ಕಾಣಿಸಿಕೊಳ್ಳುತ್ತವೆ. ಸುಮಾರು 10-15 ವರ್ಷಗಳ ಜೀವಾವಧಿ ಕುಂಠಿತವಾಗುತ್ತದೆ. ಹೊಗೆಸೊಪ್ಪಿನ ಬೆಳವಣಿಗೆಯಿಂದ ಕೀಟನಾಶಕಗಳಿಂದಾಗಿ ಭೂಮಾಲಿನ್ಯ ಮತ್ತು ಸುಡುವಿಕೆಯಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತವೆ. ಹೊಗೆಸೊಪ್ಪು ಸುಡಲು ಮರಗಳನ್ನು ಕಡಿಯುವುದರಿಂದ ಪ್ರತಿವರ್ಷ ಶೇ. 5ರಷ್ಟು ಅರಣ್ಯ ನಾಶವಾಗುತ್ತಿದೆ. ಹೊಗೆಸೊಪ್ಪಿನಿಂದ ಮನುಷ್ಯನಿಗೆ ಮತ್ತು ಸೃಷ್ಟಿ ಎರಡಕ್ಕೂ ಗಂಭೀರ ಸ್ವರೂಪದ ಹಾನಿಗಳಾಗುತ್ತಿದ್ದರೂ ಅದನ್ನು ನಿಷೇಧಿಸುವ ಬಗ್ಗೆ ಸಮಾಜ ಮತ್ತು ಸರಕಾರಗಳು ಇದುವರೆಗೂ ತೀರ್ಮಾನ ತೆಗೆದುಕೊಳ್ಳದಿರುವುದು ದುರಾದೃಷ್ಟಕರ.
ಧೂಮಪಾನವನ್ನು ತ್ಯಜಿಸುವುದು ಹೇಗೆ?:ಒಮ್ಮೆ ಧೂಮಪಾನ ಅವಲಂಬಿತ ಹಂತ ತಲುಪಿದರೆ ತ್ಯಜಿಸುವುದು ಸುಲಭದ ಮಾತಲ್ಲ. ಖ್ಯಾತ ವಿಜ್ಞಾನಿ ಮತ್ತು ತತ್ವಶಾಸಜ್ಞಲಾರ್ಡ್ ಬರ್ನಾಡ್ ಷಾ ಅವರ ಸ್ವಅನುಭವದಂತೆ, ನೂರು ಬಾರಿ ಬಿಟ್ಟು ನೂರು ಬಾರಿ ಆರಂಭ ಮಾಡುತ್ತಾರೆ. ಆದರೂ ಮನಸ್ಸು ಮಾಡಿದರೆ ಧೂಮಪಾನದಿಂದುಂಟಾಗುವ ಮಾರಣಾಂತಿಕ ಪರಿಣಾಮ ಗಳ ಅರಿವನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವುದರಿಂದ ಅದರ ಬಗ್ಗೆ ತಿರಸ್ಕಾರ ಮನೋಭಾವ ಕ್ರಮೇಣ ಬರುತ್ತದೆ.
ನಿಲ್ಲಿಸಿದಾಕ್ಷಣ ಕಂಡು ಬರುವ ತಳಮಳ, ಕೈ ನಡುಕ, ನಿದ್ರಾಹೀನತೆ ಇವುಗಳನ್ನು ವೈದ್ಯರ ಸಲಹೆಯ ಮೇರೆಗೆ ಸೂಕ್ತ ಔಷಧೋ ಪಚಾರಗಳಿಂದ ಸರಿದೂಗಿಸಿಕೊಳ್ಳಬೇಕು. ಸಾಮಾನ್ಯವಾಗಿ ಧೂಮಪಾನ ಮುಂದುವರಿಸುವುದಕ್ಕೆ ಮಾನಸಿಕ ಒತ್ತಡವೂ ಸಹ ಕಾರಣವಾಗಿರುತ್ತದೆ. ಕಾರಣಕಾರಕ ಅಂಶಗಳನ್ನು ಪತ್ತೆಹಚ್ಚಿ ಅದರಿಂದ ವಿಮುಕ್ತಿ ಪಡೆಯಬೇಕು. ಧೂಮಪಾನವನ್ನು ನಿಯಂತ್ರಿ ಸಲು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುವ ಇತ್ಯಾದಿ ಕಾನೂನು ಕ್ರಮಗಳನ್ನು ಕೈಗೊಂಡಿ ದ್ದರೂ ಮತ್ತು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸುತ್ತಿದ್ದರೂ ಇವುಗಳಿಂದ ನಿರೀಕ್ಷಿತ ಪರಿಣಾಮ ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೊಗೆಸೊಪ್ಪಿನ ಬೆಳವಣಿಗೆಯನ್ನೇ ಸಂಪೂರ್ಣವಾಗಿ ನಿಷೇಧಿಸುವುದು ಸರ್ವಸೂಕ್ತ.
ರೈತರುಗಳಿಗೆ ಪರ್ಯಾಯ ಬೆಳೆಗಳ ಪೋಷಣೆಯ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯಕ. ಇಲ್ಲದಿದ್ದಲ್ಲಿ ಹೊಗೆಸೊಪ್ಪಿನಿಂದ ಜೈವಿಕ ಇಂಧನ ತೆಗೆಯುವ ದಿಕ್ಕಿನಲ್ಲಿ ಸಂಶೋಧನೆಗಳು ಜರುಗಬೇಕಿದೆ. ಹತ್ತು ಸಾವುಗಳಲ್ಲಿ ಒಂದು ಧೂಮಪಾನದಿಂದಾಗುತ್ತಿದೆ.
ಐದು ಕ್ಯಾನ್ಸರ್ ಕಾರಕ ಸಾವುಗಳಲ್ಲಿ ಒಂದಕ್ಕೆ ಧೂಮಪಾನ ಕಾರಣವಾಗಿದೆ. ಶೇ. 20ರಷ್ಟು ಹೃದ್ರೋಗಗಳಿಗೆ ಧೂಮಪಾನ ಕಾರಣವಾಗಿದೆ. ಮೆದುಳಿನ ರಕ್ತನಾಳಗಳ ಆಘಾತದಿಂದುಂಟಾಗುವ ಲಕ್ವಗಳಿಗೆ ಶೇ. 19ರಷ್ಟು ಲಕ್ವಗಳಿಗೆ ಸಿಗರೇಟ್ ಸೇದುವುದು ಕಾರಣವಾಗಿದೆ. ಶೇ. 30ರಷ್ಟು ಧೂಮಪಾನಿಗಳಲ್ಲಿ ಲೈಂಗಿಕ ಸಮಸ್ಯೆಗಳು ತಲೆದೋರುತ್ತವೆ.
ಧೂಮಪಾನದಿಂದ ಪ್ರಪಂಚಾದ್ಯಂತ ಪುರುಷರಲ್ಲಿ ವೀರ್ಯಾಣುಗಳ ಉತ್ಪತ್ತಿ ಮತ್ತು ಸ್ತ್ರೀಯರಲ್ಲಿ ಅಂಡಾಣುಗಳ ಉತ್ಪತ್ತಿ ಕುಗ್ಗುತ್ತಿದ್ದು, ಧೂಮಪಾನ ಮನುಕುಲದ ಮುಂದುವರಿಕೆಗೆ ಕಂಟಕಪ್ರಾಯವಾಗುತ್ತಿದೆ. ಈಗಾಗಲೇ ನಿಷೇಧಿಸಲ್ಪಟ್ಟಿರುವ ಗಾಂಜಾ,ಅಫೀಮು, ಓಪಿಯಂ ಇವುಗಳಂತೆಯೇ ಹೊಗೆಸೊಪ್ಪೂ ಸಹ ಮಾದಕವಸ್ತುವಾಗಿದ್ದು, ಗಂಭೀರ ಎಂದು ಪರಿಗಣಿಸುವ ಅವಶ್ಯಕತೆ ಇದೆ. ಇಷ್ಟೊಂದು ವ್ಯಾಪಕವಾಗಿ ಬಹು ಅಂಗಾಂಗಗಳನ್ನು ಕಾಯಿಲೆಗೀಡುಮಾಡುವ ಸಸ್ಯಜನ್ಯ ಮಾದಕವಸ್ತು ಮತ್ತೊಂದಿಲ್ಲ.
ಈ ದಿಕ್ಕಿನಲ್ಲಿ ಕೇಂದ್ರ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಹೊಗೆಸೊಪ್ಪಿನ ಬೆಳವಣಿಗೆಯನ್ನು ನಿಷೇಧಿಸುವತ್ತ ಮನಸ್ಸು ಮಾಡಲಿ ಎಂದು ಆಶಿಸೋಣ.