ದೇಶದಲ್ಲಿ ಇವೆಂಥಾ ಅಚ್ಛೆ ದಿನಗಳು ?
ಪ್ರಸ್ತುತ
ರಣದೀಪ್ ಸಿಂಗ್ ಸುರ್ಜೇವಾಲಾ
ಎಂಟು ವರ್ಷಗಳಲ್ಲಿ ಭಾರತದ ಏಕತೆ ಮತ್ತು ಸಮಗ್ರತೆಗೆ ಆಗಿಂದಾಗ್ಯೆ ಆಘಾತಗಳಾಗಿವೆ. ಇದಕ್ಕೆ ಮೋದಿ ಸರಕಾರ ನೇರ ಹೊಣೆಯಾಗಿದ್ದರೂ ಮೌನವಾಗಿದೆ. ಉರಿ, ಪಠಾಣಕೋಟ್, ಪುಲ್ವಾಮಾಗಳಲ್ಲಿ ನಡೆದ ಉಗ್ರಗಾಮಿ ಚಟುವಟಿಕೆ ಭಾರತೀಯರ ಮನದಲ್ಲಿನ್ನೂ ಹಸಿರಾಗಿದೆ.
ಒಂದು ಸರಕಾರದ ಸಾಧನೆಯನ್ನು ಅಳೆಯಲು ಎಂಟು ವರ್ಷವೆಂಬುದು ಸುದೀರ್ಘ ಕಾಲ. ನೀತಿನಿರೂಪಣೆಗಳ ಪರಿಣಾಮ ಮತ್ತು ಸರಕಾರದ ಪ್ರಗತಿಪರ ಸಾಧನೆಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ವ್ಯಕ್ತವಾಗಿ ಗಮನಿಸಬಹುದಾಗಿದೆ. ಅಮೆರಿಕ, ಬ್ರೆಜಿಲ್ ಮತ್ತು ಕೆನಡಾಗಳಿಗೆ ಹೋಲಿಸುವುದಾದರೆ ಎಂಟು ವರ್ಷಗಳಲ್ಲಿ ಎರಡು ಅಧ್ಯಕ್ಷೀಯ ಅವಧಿ ಮುಗಿದು ಹೋಗುತ್ತದೆ. ನರೇಂದ್ರ ಮೋದಿಯ ಮಟ್ಟಿಗೆ ಹೇಳುವುದಾದರೆ ಇದೊಂದು ಗಮನಾರ್ಹ ಮೈಲಿಗಲ್ಲು.
ಮೊದಲನೆಯದಾಗಿ ಹೇಳಬೇಕೆಂದರೆ ಇಂದು ಯಾರೂ ಮೋದಿ ಸರಕಾರದ ಬಗ್ಗೆ ಭ್ರಮೆಯಲ್ಲಿಲ್ಲ. ೨೦೧೪ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುವ ಮುನ್ನ ಮೋದಿ, ಸುಧಾರಣೆ, ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಹಣದುಬ್ಬರ ತಡೆ, ಸಮಾನತೆಯ ಮಾತಿನೊಂದಿಗೆ ಅಚ್ಛೆ ದಿನ್ ಎಂಬ ಘೋಷಣೆಗೆ ಒತ್ತು ನೀಡಿದ್ದರು. ಆದರೆ ಕಳೆದ ಎಂಟು ವರ್ಷಗಳಲ್ಲಿ ಅದಕ್ಕೆ ತದ್ವಿರುದ್ಧವಾದುದನ್ನು ಜನ ಅನುಭವಿಸಿದ್ದಾರೆ. ಹಣದುಬ್ಬರ ಜನಸಾಮಾನ್ಯರ ಬದುಕನ್ನು ದುರ್ಭರಗೊಳಿಸಿದೆ.
ಸಗಟು ಹಣದುಬ್ಬರ 30 ವರ್ಷಗಳಲ್ಲಿ ತಲುಪಲಾರದಷ್ಟು ಎತ್ತರವನ್ನು ಏರಿದೆ ಮತ್ತು ಬಡ ಮಧ್ಯಮವರ್ಗದ ಜನರ ಬದುಕನ್ನು ಹೈರಾಣಾಗಿಸಿದೆ. ನಿರುದ್ಯೋಗದ ಪ್ರಮಾಣ ಅಧಿಕೃತವಾಗಿ 8% ತಲುಪಿದೆ. ವಾಸ್ತವವಾಗಿ ಅದು ಇನ್ನಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ. ಎರಡು ಕೋಟಿ ಹೊಸ ಉದ್ಯೋಗಗಳನ್ನು ಒದಗಿಸುವ ಭರವಸೆ ಒಂದೆಡೆಯಾದರೆ ಇನ್ನೊಂದೆಡೆ ಹನ್ನೆರಡು ಕೋಟಿ ಉದ್ಯೋಗ ನಷ್ಟವಾಗಿದೆ. ಜನಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿ ಈ ಸರಕಾರದ ಸಾಧನೆ ಶೂನ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಕೇವಲ ಘೋಷಣೆ ಮತ್ತು ಜಾಹೀರಾತಿನ ಜತೆಗೆ ವಾಕ್ಚಾತುರ್ಯವೇ ಇಲ್ಲಿ ಪ್ರಮುಖವಾಗಿದೆ.
ಆರ್ಥಿಕ ನೀತಿನಿರೂಪಣೆಯ ವೈಫಲ್ಯವನ್ನು ದಾಖಲಿಸುವಲ್ಲಿ ಪ್ರಮುಖವಾಗಿ ಪತನವಾಗುತ್ತಿರುವ ರುಪಾಯಿ, ಕುಸಿಯುತ್ತಿರುವ ಜಿಡಿಪಿ ಮತ್ತು ಉತ್ಪಾದನಾ ಕ್ಷೇತ್ರದ ಕುಸಿತ ಪ್ರಮುಖವಾಗಿ ಗಮನ ಸೆಳೆಯುತ್ತದೆ. ನೋಟು ಅಮಾನ್ಯೀಕರಣದ ವಿಚಾರಕ್ಕೆ ಬರುವುದಾದರೆ ಅದೊಂದು ದೊಡ್ಡ ವೈಫಲ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಕಪ್ಪುಹಣದ ತಡೆ, ಉಗ್ರವಾದದ ಹಿನ್ನಡೆ ಮತ್ತು ಇನ್ನಿತರ ಏನೇ ಸಂಗತಿಗಳಿದ್ದರೂ ಅವೆಲ್ಲವನ್ನು ಮೀರಿಸಿದ ವೈಫಲ್ಯ ಎದ್ದು ಕಾಣುತ್ತದೆ.ಸಣ್ಣ ಮತ್ತು ಮಧ್ಯಮವರ್ಗದ ಉದ್ಯಮ ವಲಯಗಳಿಗೆ ಜಿಎಸ್‌ಟಿ ಮತ್ತು ೨೦೧೭ರಿಂದ ತೆಗೆದುಕೊಳ್ಳಲಾದ ಕಾಯಿದೆ ತಿದ್ದುಪಡಿಗಳು ತೆರಿಗೆ ಸಂಗ್ರಹಣೆ ಉಪ ಕ್ರಮವನ್ನು ಇನ್ನಷ್ಟು ಜಟಿಲವಾಗಿಸಿದೆ.
ಕಳೆದ ಎಂಟು ವರ್ಷಗಳಲ್ಲಿ 5,35,000 ಕೋಟಿ ಬ್ಯಾಂಕ್ ಅವ್ಯವಹಾರ ಪ್ರಕರಣಗಳು ನಡೆದಿದ್ದು, ಒಟ್ಟಾರೆ ಎನ್.ಪಿ.ಎ. ಪ್ರಮಾಣ 21 ಲಕ್ಷ ಕೋಟಿ ಯಷ್ಟಾಗಿದೆ. ಇದು ಬ್ಯಾಂಕಿಗ್ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಇದರೊಂದಿಗೆ ಕೇಂದ್ರ ಸರಕಾರ ದಾಖಲಿಸಿರುವ ಸಾಲದ ಪ್ರಮಾಣ 2014ರಲ್ಲಿ 55  ಲಕ್ಷಕೋಟಿ ಇದ್ದುದು ಇದೀಗ 135 ಕೋಟಿಯಷ್ಟಾಗಿ ಬೆಳೆದಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ. ಈ ರೀತಿ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಸರಕಾರ ತಳೆದಿರುವ ನೀತಿ ಒಟ್ಟಾರೆ ದೇಶದ ಆರ್ಥಿಕ ಸ್ವರೂಪವನ್ನು ವಿರೂಪಗೊಳಿಸಿದೆ. ಕಳೆದ ಎಂಟು ವರ್ಷಗಳಲ್ಲಿ ಹೆಚ್ಚುವರಿಯಾಗಿ 14 ಕೋಟಿ ಜನರು ಬಡತನದ ರೇಖೆಗಿಂತ ಕೆಳಕ್ಕೆ ತಳ್ಳಲ್ಪಟ್ಟಿದ್ದಾರೆ.
ಅಪೌಷ್ಟಿಕತೆಯಿಂದಾಗಿ 62 ಕೋಟಿ ರೈತರು ಮತ್ತು ರೈತ ಕಾರ್ಮಿಕರು ಹತಾಶೆಯ ಹಂತವನ್ನು ತಲುಪಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿರುವ ಸರಕಾರದ ಕ್ರಮ ಇನ್ನಷ್ಟು ವೈಫಲ್ಯಕ್ಕೆ ತುತ್ತಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಭಾರತದ ಏಕತೆ ಮತ್ತು ಸಮಗ್ರತೆಗೆ ಆಗಿಂದಾಗ್ಯೆ ಆಘಾತ ಗಳಾಗಿವೆ. ಇದಕ್ಕೆ ಮೋದಿ ಸರಕಾರ ನೇರ ಹೊಣೆಯಾಗಿದ್ದರೂ ಮೌನಕ್ಕೆ ಶರಣಾಗಿದೆ. ಉರಿ, ಪಠಾಣಕೋಟ್, ಪುಲ್ವಾಮಾಗಳಲ್ಲಿ ನಡೆದ ಉಗ್ರಗಾಮಿ ಚಟುವಟಿಕೆ ಭಾರತೀಯರ ಮನದಲ್ಲಿನ್ನೂ ಹಸಿರಾಗಿದೆ. ಡೆಸ್ಪಾಂಗ್ ಪ್ರಾಂತದಲ್ಲಿ ಗೋಗ್ರಾಹಟ್‌ನಲ್ಲಿ ಮತ್ತು ಪಾಂಗೋಂಗ್ ಕಾಲುವೆಯ ಆಸುಪಾಸಿನಲ್ಲಿ ಕಳೆದ ಎರಡು ವರ್ಷಗಳಿಂದ ಚೀನಾ ಅವ್ಯಾಹತವಾಗಿ ದಾಳಿ ನಡೆಸುತ್ತಲೇ ಇದೆ.
ಚೀನಾದೆಡೆ ಕೆಂಗಣ್ಣು ಬೀರುವುದಾಗಿ ಹೇಳುತ್ತಲೇ ಅಧಿಕಾರಕ್ಕೆ ಬಂದ ಪ್ರಧಾನಿ ಏನೂ ಮಾಡಲಾಗಿಲ್ಲ. ಪ್ರಜಾಪ್ರಭುತ್ವವಾದಿ ಸಂಸ್ಥೆಗಳು ಜಾಗೃತವಾಗಿದ್ದಲ್ಲಿತಾನು ಅಧಿಕಾರದಲ್ಲುಳಿಯುವುದು ಸಾಧ್ಯವಿಲ್ಲವೆಂಬುದನ್ನು ಮೋದಿ ಸರಕಾರ ಮನಗಂಡಂತಿದೆ. ಹಾಗಾಗಿ ಅದು ಸರಕಾರಿ ಸಂಸ್ಥಾಪನೆಗಳನ್ನು ತನ್ನ ಮನ ಬಂದಂತೆ ಬದಲಾಯಿಸಿ ಕ್ರಮಕ್ಕೆ ಮುಂದಾಗಿದೆ. ಸಿ.ಬಿ.ಐ. ಈಡಿ ಮತ್ತು ವರಮಾನ ತೆರಿಗೆ ಇಲಾಖೆಗಳು ನಡೆದುಕೊಳ್ಳುತ್ತಿರುವ ರೀತಿ ಇದಕ್ಕೊಂದು ಉದಾ ಹರಣೆ ಎಂಬಂತಿದೆ. ಅದೇ ವೇಳೆ ಯಾರಾದರೂ ಬಿಜೆಪಿಯನ್ನು ದೋಷಿ ಎಂದು ಆರೋಪಿಸಿದಲ್ಲಿ ಎಲ್ಲ ಆರೋಪಗಳೂ ಮಾಯವಾಗಿಬಿಡುತ್ತವೆ.
ಸರಕಾರದ ನಡೆಗೆ ವಿರುದ್ಧವಾಗಿ ವರ್ತಿಸಿದ ನ್ಯಾಯಾಧೀಶರನ್ನು ದೇಶದ ಯಾವುದೋ ಮೂಲೆಗೆ ವರ್ಗಾವಣೆ ಮಾಡಲಾದ ಉದಾಹರಣೆಗಳಿವೆ. ಸುಪ್ರೀಂ ಕೋರ್ಟ್ ಸರಕಾರದಿಂದ ಅಂತರ ಕಾಯ್ದುಕೊಂಡಿದೆ ಎಂಬ ಭಾವ ಒಂದೆಡೆ ಇದ್ದರೆ ನ್ಯಾಯಾಧೀಶರು ಪ್ರಧಾನಮಂತ್ರಿಯನ್ನು ಹಾಡಿಹೊಗಳುವ ಪ್ರಕ್ರಿಯೆ ಕೂಡಇನ್ನೊಂದೆಡೆ ನಡೆದಿದೆ. ಯುವಕರಿಗೆ ಅವರೊಬ್ಬ ಮಾದರಿ ಎಂದು ಹೊಗಳಿದವರು ರಾಜ್ಯಸಭೆಗೆ ನಾಮನಿರ್ದೇಶಿತರಾದ ಉದಾಹರಣೆಗಳೂ ಇವೆ. ಮೂರನೆಯ ದಾಗಿ ಮೋದಿ ಸರಕಾರಕ್ಕೆ ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲವೆಂಬುದು ಸ್ಪಷ್ಟವಾಗಿದೆ.
ಮೋದಿ ಮಧ್ಯದಲ್ಲಿಯೇ ಕೋವಿಡ್-19 ಸ್ಥಗಿತಗೊಳಿಸಿದರಲ್ಲದೇ, ವಾಕ್ಸೀನುಗಳ ರಫ್ತನ್ನು ದೊಡ್ಡದಾಗಿ ಪ್ರಚಾರ ಮಾಡಿದರು. ಎರಡನೇ ಅಲೆ ಜೋರಾದಾಗ ಆಸ್ಪತ್ರೆಗಳು ಮತ್ತು ವೈದ್ಯರು ಹತಾಶರಾಗಿದ್ದರು. ಆಸ್ಪತ್ರೆಗಳಲ್ಲಿ ಬೆಡ್ಡುಗಳಿಗಾಗಿ ಕಾಯುತ್ತಿದ್ದವರು ದೊಡ್ಡ ಸಂಖ್ಯೆಯಲ್ಲಿದ್ದರು. ಹಾಗಿದ್ದಾಗ, ಮೋದಿ ಸರಕಾರ ಯಾರ ಹಿತವನ್ನು ಕಾಪಾಡಿದಂತಾಯಿತು? ಬಿಜೆಪಿ ವೈಯಕ್ತಿಕವಾಗಿ ಶ್ರೀಮಂತವಾಗಿದೆ. 2019- 20ರಲ್ಲಿ ಅದು ತನ್ನ ಆಸ್ತಿಯನ್ನು 4147 ಕೋಟಿ ಎಂದುಘೋಷಿಸಿದೆ. ಮಾಹಿತಿ ಹಕ್ಕು ಕಾಯಿದೆಯಡಿ ಪಡೆದುಕೊಳ್ಳಲಾದ ಮಾಹಿತಿಯ ಅನುಸಾರ 2014-2018ರ ನಡುವಣ ಅವಧಿಯಲ್ಲಿ ಮೋದಿ ಸರಕಾರ ಸುಮಾರು 5000 ಕೋಟಿಯಷ್ಟು ಸಾರ್ವಜನಿಕ ಹಣವನ್ನು ಪ್ರಚಾರಕ್ಕಾಗಿ ವೆಚ್ಚ ಮಾಡಿದೆ.
ಯುಪಿಎ ಸರಕಾರ ಹತ್ತು ವರ್ಷಗಳಲ್ಲಿ ಮಾಡಿದ್ದ ವೆಚ್ಚದ ದುಪ್ಪಟ್ಟು ಮೋದಿ ಸರಕಾರದಿಂದ ವೆಚ್ಚವಾಗಿದೆ. ಇದರ ಜತೆಗೆ ಸಾರ್ವಜನಿಕರ ಹಕ್ಕುಗಳನ್ನು ಕಸಿದು ಕೊಳ್ಳುವ ಅನೇಕ ಯತ್ನಗಳು ಕೂಡ ನಡೆದಿವೆ. ಕೋವಿಡ್ ಮಹಾಮಾರಿಯ ನಡುವೆಯೂ 142 ಮಂದಿ ಅತ್ಯಂತ ಸಿರಿವಂತರ ಆದಾಯ 30 ಲಕ್ಷ ಕೋಟಿಗೂ ಮೀರಿ ಏರಿಕೆಯಾಗಿದ್ದನ್ನು ನಾವೆಲ್ಲ ಗಮನಿಸಿದ್ದೇವೆ. ಈ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರಿಗೆ 100 ರುಪಾಯಿ ಮೀರಿದ್ದನ್ನು ಕೂಡ ಜನತೆ ನೋಡಿ ಹೈರಾಣಾಗಿದೆ. ಅಡುಗೆ ಅನಿಲ, ಖಾದ್ಯತೈಲ ಸೇರಿದಂತೆ ಧಾನ್ಯಗಳ ಬೆಲೆ ಇನ್ನಿಲ್ಲದಂತೆ ಏರಿಕೆ ಕಂಡಿದೆ. ಮಧ್ಯಮವರ್ಗ ಕಂಗೆಡುವಂತೆ ಮಾಡಿದೆ.
ಕಳೆದ ಎಂಟು ವರ್ಷಗಳಲ್ಲಿ ಉತ್ತಮ ಆಡಳಿತವನ್ನು ನಡೆಸಿದೆ ಎಂದು ಒಂದೆಡೆ ಹೇಳಿಕೊಳ್ಳುತ್ತಿರುವ ಸರಕಾರ ಇನ್ನೊಂದೆಡೆ ಜನತೆಗೆ ಮೋಸವನ್ನೆಸಗಿದೆ. ತನಿಖಾ ಸಂಸ್ಥೆಗಳನ್ನು ತನ್ನ ಆದೇಶಕ್ಕೆ ತಕ್ಕಂತೆ ಕುಣಿಸುವುದನ್ನು ಕೇಂದ್ರ ಸರಕಾರ ಅವ್ಯಾಹತವಾಗಿ ನಡೆಸಿಕೊಂಡು ಬಂದಿದೆ. ಇತಿಹಾಸ ಅವರ ತಪ್ಪುಗಳನ್ನು ನೆನಪಿನಲ್ಲಿಡಲಿದೆ ಎಂಬ ಸತ್ಯ ಅವರನ್ನು ಕಾಡುತ್ತಿದೆ. ಅದೆಷ್ಟು ಮಂದಿ ತಪ್ಪು ಮಾಹಿತಿಗಳನ್ನು ಸತ್ಯವೆಂಬಂತೆ ಬಿಂಬಿಸಲು ಮುಂದಾದರೋ, ಅವರೆಲ್ಲರೂ ತಮ್ಮ ನಡೆಗೆ ಕನ್ನಡಿ ಹಿಡಿದು ನೋಡಬೇಕಿದೆ.
ಥಾಮಸ್ ಜೆಫರ್ಸನ್ ಹೇಳಿಕೆಯ ಪ್ರಕಾರ ಪ್ರಜಾಪ್ರಭುತ್ವಕ್ಕೆ ನಾವು ಕೊಡುವ ಬೆಲೆ ಎಂದರೆ ಶಾಶ್ವತವಾದ ಜಾಗರೂಕತೆ. ನಿಜವಾದ ದೇಶಭಕ್ತರು ಮಾತ್ರ ಇದನ್ನು ಮಾಡಬಲ್ಲರು.