ಬಂಡೆ ಪುಡಿ ಮಾಡಬಲ್ಲರೇ ಅಶ್ವತ್ಥನಾರಾಯಣ ?
ಅಭಿಪ್ರಾಯ
ಸಂದೀಪ ಬಿ.ಪಟಗಾರ
ಸರಳ, ಶಾಂತ ಸ್ವಭಾವದವರೆಂದು ಗುರುತಿಸಿಕೊಂಡಿದ್ದ ಅಶ್ವತ್ಥನಾರಾಯಣ ಅವರ ಅಭಿವೃದ್ಧಿ ಮಂತ್ರದ ಕಾರ್ಡ್ ಸ್ವಲ್ಪ ಮಟ್ಟಿಗೆ ಕ್ಲಿಕ್ ಆಗಬಹುದಾದರೂ ವ್ಯತಿರಿಕ್ತ ಸ್ವಭಾವದ ಡಿಕೆ ಸಹೋದರರನ್ನು ನೇರವಾಗಿ ಟಾರ್ಗೆಟ್ ಮಾಡುವುದು ಕಷ್ಟವಾಗಬಹುದು.
ಯಾರಪ್ಪಾ ಗಂಡು? ಕೆಲಸದಲ್ಲಿ ತೋರಿಸ್ರೋ ಸದಾ ಸೈಲೆಂಟ್ ಆಗಿರುವ ಅಶ್ವತ್ಥನಾರಾಯಣ ಅವರು ಇದ್ದಕ್ಕಿದ್ದಂಗೆ ವೈಲೆಂಟ್ ಆಗಿದ್ದು ಅವರ ರಾಜಕೀಯ ಜೀವನಕ್ಕೆ ಹಿಂದೆಂದೂ ಕಾಣದ ತಿರುವು ನೀಡಿತೇ ಎಂಬ ಕುತೂಹಲದ ಪ್ರಶ್ನೆಗೆ ಕಳೆದೈದು ತಿಂಗಳಿಂದ ಹಲವು ರಾಜಕೀಯ ವಿಶ್ಲೇಷಕರು ತಮ್ಮದೇ ಶೈಲಿಯಲ್ಲಿವಿವರಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಚಾರವನ್ನು ಡಿಕೆ ಶಿವಕುಮಾರ್ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿದಂತೆಯೂ ಮೇಲ್ನೋಟ ಕ್ಕೆ ಗೋಚರವಾಗುತ್ತಿದೆ.
ಇದು ರಾಮನಗರದ ಗದ್ದುಗೆಗಾಗಿ ನಡೆಯುತ್ತಿರುವ ಸಮರವೆಂದು ಕೆಲವರು ಬಿಂಬಿಸಿದ್ದಾರೆ. ಮತ್ತೆ ಕೆಲವರು ಒಕ್ಕಲಿಗ ನಾಯಕತ್ವಕ್ಕಾಗಿ ನಡೆಯುತ್ತಿರುವ ಹೋರಾಟವೆಂದು ವಿಶ್ಲೇಷಿಸಿದ್ದಾರೆ. ಅಂದು ರಾಮನಗರಕ್ಕೂ ಅಶ್ವತ್ಥನಾರಾಯಣ ಅವರಿಗೂ ಏನು ಸಂಬಂಧ ಎಂಬ ಡಿಕೆ ಶಿವಕುಮಾರ್ ಅವರ ಪ್ರಶ್ನೆಗೆ ಚಿಕ್ಕಕಲ್ಯ ನಾರಾಯಣಪ್ಪ ಅಶ್ವತ್ಥನಾರಾಯಣ ಎಂಬ ನನ್ನ ಪೂರ್ಣ ಹೆಸರನ್ನು ನೆನಪಿಸಬೇಕಿದೆ ಎಂದು ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ತನಗೂ ರಾಮ ನಗರದ ಮೇಲೆ ಹಕ್ಕಿದೆ ಎಂಬ ಸಂದೇಶವನ್ನು ಅಶ್ವತ್ಥನಾರಾಯಣ ಅವರು ರವಾನಿಸಿದ್ದರು.
ರಾಮನಗರದ ಉಸ್ತುವಾರಿ ಸಚಿವರಾಗಿರುವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರುಜಿಲ್ಲೆಯಲ್ಲಿಪಕ್ಷ ಕಟ್ಟಿ ಬೆಳೆಸುವ ಅತ್ಯುತ್ಸಾಹದಲ್ಲಿದ್ದರೂ ಜೆಡಿಎಸ್ ಹಾಗೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ಇಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬ ಅರಿವು ಅವರಿಗೆ ಇರದಿರಲು ಸಾಧ್ಯವೇ ಇಲ್ಲ! ಹೀಗಾಗಿಯೇ ಬಂಡೆ ಬ್ರದರ್ಸ್ ಗಳನ್ನು ಅಶ್ವತ್ಥನಾರಾಯಣ ಬಳಸಿದ ಆ ಎರಡು ಕಾಡ್ ಗಳೆಂದರೆ ತಮ್ಮ ಸರಕಾರದ ಅಭಿವೃದ್ಧಿ ಮತ್ತು ಡಿಕೆ ಶಿವಕುಮಾರ್ ಕುಟುಂಬದ ಭ್ರಷ್ಟಾಚಾರ.
ಸರಳ, ಶಾಂತ ಸ್ವಭಾವದವರೆಂದು ಗುರುತಿಸಿಕೊಂಡಿದ್ದ ಅಶ್ವತ್ಥನಾರಾಯಣ ಅವರ ಅಭಿವೃದ್ಧಿ ಮಂತ್ರದ ಕಾರ್ಡ್ ಸ್ವಲ್ಪ ಮಟ್ಟಿಗೆ ಕ್ಲಿಕ್ ಆಗಬಹುದಾದರೂ ವ್ಯತಿರಿಕ್ತ ಸ್ವಭಾವದ ಡಿಕೆ ಸಹೋದರರನ್ನು ನೇರವಾಗಿ ಟಾರ್ಗೆಟ್ ಮಾಡುವುದು ಕಷ್ಟವಾಗಬಹುದು. ರಾಮನಗರಕ್ಕೆ ಅಶ್ವತ್ಥನಾರಾಯಣ ಅವರ ಕೊಡುಗೆ ಏನು? ಕೋವಿಡ್ ಸಂದರ್ಭವನ್ನು ಸಮರ್ಥವಾಗಿ ಎದುರಿಸಿದ ಕೀರ್ತಿ ಹಾಗೂ ರಾಜ್ಯದ ಮೊದಲ ಬಾರಿಗೆ ಟೆಲಿ ಐಸಿಯು ಯಶಸ್ವಿ ಪ್ರಯೋಗ ಇವರಿಗೆ ಒಂದು ಮಟ್ಟಿಗೆ ವರವಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಹೆಬ್ಬಯಕೆಯಲ್ಲಿರುವ ಅಶ್ವತ್ಥನಾರಾಯಣ ಅವರು ರಾಮನಗರದ ಅಭಿವೃದ್ಧಿಗಾಗಿ ತಂದ ಅನುದಾನ ಹಾಗೂ ಯೋಜನೆಗಳನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಅವರು ಡಿಸಿಎಂ ಆಗಿದ್ದಅವಧಿಯರಾಮನಗರದಲ್ಲಿ ಅತ್ಯಾಧುನಿಕ ಮಾವು ಸಂಸ್ಕರಣಾ ಘಟಕ ನಿರ್ಮಾಣಕ್ಕೆ 15 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ಜಿಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲದ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಪೂರೈಸುವ ಯೋಜನೆಯನ್ನು 1800 ರು. ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.
ರಾಮನಗರ ತಾಲೂಕಿನ 344 ಮತ್ತು ಮಾಗಡಿ ತಾಲೂಕಿನ 697 ಜನವಸತಿ ಪ್ರದೇಶಗಳ ಒಟ್ಟು 87099 ಮನೆಗಳಿಗೆ ನಲ್ಲಿ ಸಂಪರ್ಕ ನೀಡಿ ನದಿ ಮೂಲದ ಶುದ್ಧ ಕುಡಿಯುವ ನೀರು ಒದಗಿಸುವ ಒಟ್ಟು ರು. 825 ಕೋಟಿ ವೆಚ್ಚದ ಎರಡು ಪ್ರಮುಖ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಹಲವು ವರ್ಷಗಳ ಬೇಡಿಕೆ ಯಾಗಿದ್ದ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ರು. 75 ಕೋಟಿ ಬಿಡುಗಡೆಯಾಗಿದೆ. ಏತ ನೀರಾವರಿ ಯೋಜನೆ ಸಹಿತ ಹಲವು ಕುಡಿಯುವ ನೀರಿನಯೋಜನೆಗಳೂ ಇವರ ನೇತೃತ್ವದಲ್ಲಿ ಅನುಷ್ಠಾನಗೊಳ್ಳುತ್ತಿವೆ.
ಮೂಲ ಸೌಕರ್ಯವನ್ನು ಹೊರತುಪಡಿಸಿ ಶೈಕ್ಷಣಿಕ ವಲಯಕ್ಕೆ ನೀಡಿರುವ ಕೊಡುಗೆಯನ್ನು ಗಮನಿಸಿದರೆಜಿಲ್ಲೆಯಲ್ಲಿ100 ಎಕರೆ ವಿಸ್ತೀರ್ಣದಲ್ಲಿ ರು. 320 ಕೋಟಿ ವೆಚ್ಚದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣವಾಗಲಿದೆ. ಇದು ಅಶ್ವತ್ಥನಾರಾಯಣ ಅವರ ಗೌರವವನ್ನು ಇನ್ನಷ್ಟು ಹೆಚ್ಚಿಸಲಿದೆ. ಅದಲ್ಲದೇ ರಾಜೀವ್ಗಾಂಧಿಆರೋಗ್ಯ ವಿವಿ, ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆಯ ಕಾರ್ಯ ಅಶ್ವತ್ಥನಾರಾಯಣ ಅವರ ಮುಂದಿದೆ. ನಾಡಪ್ರಭು ಕಂಪೇಗೌಡ ಅವರ ಸಮಾಽ ಸ್ಥಳ ಕೆಂಪಾಪುರವನ್ನು ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಡಿಸುವ ಇರಾದೆಯಲ್ಲಿರುವ ಅಶ್ವತ್ಥನಾರಾಯಣ ಅವರು ರು. 32 ಕೋಟಿ ಅಂದಾಜು ವೆಚ್ಚದ ಯೋಜನೆಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಭಿವೃದ್ಧಿ ಕೆಲಸಕ್ಕೆ ಮಣೆ ಹಾಕುವರೇ ರಾಮನಗರ ಜನತೆ ಎನ್ನುವ ಪ್ರಶ್ನೆ ಇದ್ದೇ ಇದೆ.
ಜಿಲ್ಲೆಯಲ್ಲಿಪಕ್ಷ ಬೇರೂರದಿದ್ದರೂ ಡಿಸಿಎಂ, ಉಸ್ತುವಾರಿ ಸಚಿವರಾಗಿದ್ದುಕೊಂಡೇ ಹಲವು ಅಭಿವೃದ್ಧಿ ಯೋಜನೆಗಳ ಮೂಲಕ ಜನಮನ ಸೆಳೆಯುವ ಪ್ರಯತ್ನದಲ್ಲಿ ಅಶ್ವತ್ಥ ನಾರಾಯಣ ಅವರಿದ್ದರೂ ಅದು ಅವರಿಗೆ ಸುಲಭದ ತುತ್ತಲ್ಲ. ರಾಮನಗರ ಜಿಲ್ಲೆಯಲ್ಲಿ ಒಟ್ಟು 4 ವಿಧಾನಸಭಾ ಕ್ಷೇತ್ರಗಳಿವೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಎ. ಮಂಜುನಾಥ, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಹಾಗೂ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಾಬಲ್ಯವಿದೆ.
ಕಾಂಗ್ರೆಸ್ ಕನಕಪುರಕ್ಕೆ ಮಾತ್ರ ಸೀಮಿತವಾಗಿದ್ದರೂ ತಮ್ಮ ಸೀಮಾ ರೇಖೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸುವ ಗುರಿ ಡಿಕೆ ಶಿವಕುಮಾರ್ ಅವರಲ್ಲಿದ್ದರೆ ಅದನ್ನು ಅಲ್ಲಗಳೆಯುವಂತಿಲ್ಲ. ಇತ್ತ ಮಿಕ್ಕುಳಿದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಸ್ತಿತ್ವ ಅಲುಗಾಡಿಸುವುದು ಅಶ್ವತ್ಥನಾರಾಯಣ ಅವರಿಗೆ ಸುಲಭವಲ್ಲ. ರಾಮನಗರದ ಎಲ್ಲ ಶಾಸಕರೂ ಒಕ್ಕಲಿಗರೇ ಆಗಿರುವುದರಿಂದ ಒಕ್ಕಲಿಗ ಕಾರ್ಡ್ ಪ್ಲೇ ಮಾಡಲು ಸಹ ಅವಕಾಶವಿಲ್ಲ. ಈ ಭಾಗದ ಜನರು ಸ್ವಾಭಿಮಾನದ ವಿಷಯ ಬಂದಾಗ ತಮ್ಮವರನ್ನು ಬಿಟ್ಟುಕೊಡುವುದಿಲ್ಲ ಎಂಬುದು ಕಳೆದ ಬಾರಿ ಪಕ್ಕದ ಜಿ ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ.
ಯಾರಪ್ಪಾ ಗಂಡು ಎಂದು ಅಶ್ವತ್ಥನಾರಾಯಣ ಅವರು ಡಿಕೆ ಸುರೇಶ್ ಅವರ ಕೆಲ ಹಿಂಬಾಲಕರನ್ನುದ್ದೇಶಿಸಿ ಹೇಳಿದ್ದರೂ ಅದು ಇಡೀ ರಾಮನಗರದ ಜನತೆಗೇ ಹೇಳಿದ್ದು ಎಂಬಂತೆ ಬಿಂಬಿಸುವ ಪ್ರಯತ್ನದಲ್ಲಿರುವ ಡಿಕೆ ಶಿವಕುಮಾರ್ ಈ ಮಾತನ್ನು ಅವಕಾಶ ಸಿಕ್ಕಾಗಲೆಲ್ಲ ಪುನರುಚ್ಚರಿಸುತ್ತಲೇ ಇದ್ದಾರೆ. ಇತ್ತ ಚಿಕ್ಕಕಲ್ಯ ನಾರಾಯಣಪ್ಪ ಅಶ್ವತ್ಥ ನಾರಾಯಣ ಎಂಬ ಮಾತನ್ನು ಪದೇ-ಪದೇ ನೆನಪಿ ಸುತ್ತಿರುವ ಅಶ್ವತ್ಥ ನಾರಾಯಣ ಅವರು ತಾನು ರಾಮನಗರದ ಪುತ್ರ ಎಂಬುದನ್ನು ಈಗಾಗಲೇ ಬಹಿರಂಗಪಡಿಸಿದ್ದಾರೆ.
ರೇಷ್ಮೆ ನಗರಿಯಲ್ಲಿ ಅರಳುವುದೇ ಕಮಲ? ರೇಷ್ಮೆ ನಗರಿಯಲ್ಲಿ ಕೇಸರಿ ಪಡೆಯನ್ನು ಅಧಿಕಾರಕ್ಕೆ ತರುವ ಪ್ರಯತ್ನ ದಲ್ಲಿರುವ ಅಶ್ವತ್ಥನಾರಾಯಣ ಅವರ ಭಗೀರಥ ಪ್ರಯತ್ನವನ್ನು ಗಮನಿಸಿದಾಗ ಸಿಂಹಕ್ಕೆ ಕಾಡಿನಲ್ಲಿ ಶಕ್ತಿ ಹೆಚ್ಚು, ಮೊಸಳಗೆ ನದಿಯ ನೀರಿನಲ್ಲಿ ಶಕ್ತಿ ಹೆಚ್ಚು. ಯುದ್ಧ ಎಲ್ಲಿ ನಡೆಯುತ್ತದೆ ಎನ್ನುವುದು ಗೆಲುವುನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಮಾತು ನೆನಪಿಗೆ ಬರುತ್ತದೆ. ಮೊಸಳೆ ಕಣ್ಣೀರು ಸುರಿಸುವ ಕುಮಾರಸ್ವಾಮಿ, ತಂತ್ರ ಕುತಂತ್ರದರಾಜಕಾರಣದಲ್ಲಿ ಪ್ರಸಿದ್ಧರಾಗಿರುವ ಡಿಕೆ ಶಿವಕುಮಾರ್ ಅವರ ವಿರುದ್ಧ ಇವರ ಸೂತ್ರ ಏನಿರಬಹುದೆಂಬ ಕುತೂಹಲ ರಾಜಕೀಯ ರಂಗದಲ್ಲಿ ಮನೆ ಮಾಡಿದ್ದಂತೂ ಸತ್ಯ.
ತಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಮೌನವಾಗಿದ್ದವರು ಏಕಾಏಕಿ ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಮಾಡುವ ಉದ್ದೇಶವೇನು ಎಂದು ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿಗರು ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಸರಕಾರದಅವಧಿಯಮೇಕೆದಾಟು ಯೋಜನೆ ಜಾರಿ ಶತ ಸಿದ್ಧ, ಡಿಕೆ ಶಿವಕುಮಾರ್ ಅವರ ಸುಳ್ಳಿನ ಜಾತ್ರೆ ಫಲ ಕೊಡದು ಎಂದು ಸ್ವತಃ ಅಶ್ವತ್ಥನಾರಾಯಣ ಹೇಳಿಕೆ ನೀಡಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಜಾಣ ಮೌನ ವಹಿಸುತ್ತಿರುವ ಎಚ್.ಡಿ. ಕುಮಾರಸ್ವಾಮಿ ಅವರು ಆಗಾಗ ಟೈಂ ಬಾಂಬ್ ಎಸೆದು ತಮ್ಮ ಅಸ್ತಿತ್ವ ಪ್ರದರ್ಶನ ಮಾಡುತ್ತಿದ್ದಾರೆ! ಈ ಎಲ್ಲ ವಿಚಾರಗಳಿಗಿಂತ ಪ್ರಮುಖವಾಗಿ ರಾಮನಗರದಲ್ಲಿ ಬಿಜೆಪಿ ಬೇರೂರಲು ಅಗತ್ಯವಾಗಿರುವ ತಳಮಟ್ಟದ ಕಾರ್ಯಕರ್ತರ ಅಭಾವ,ಜಿಲ್ಲೆಯಇದ್ದು ಸಂಘಟನೆ ನಡೆಸಬಲ್ಲ ಪ್ರಬಲ ನಾಯಕತ್ವದ ಕೊರತೆ ಹಾಗೂ ಈ ಭಾಗದ ಜನ ಮಾನಸದಲ್ಲಿ ಬೇರೂರಿರುವ ಒಕ್ಕಲಿಗ ಅಸ್ಮಿತೆಗೆ ಅಶ್ವತ್ಥನಾರಾಯಣ ಅವರು ಉತ್ತರವಾಗಿ ಪರಿಣಮಿಸಬಲ್ಲರೇ ಎಂಬ ಪ್ರಶ್ನೆಗೆ ಅಶ್ವತ್ಥನಾರಾಯಣ ಅವರೇ ಉತ್ತರಿಸಬೇಕು.