ಮೌನಕ್ಕೆ ಶರಣಾದ ಬಿಜೆಪಿಯವರಿಗೆ ಬೆನ್ನುಮೂಳೆ ಇಲ್ಲವಾ ?
ಸಿದ್ಧಾಂತ ಸಿದ್ಧಾಂತ ಎಂದು ಮಾತುಮಾತಿಗೆ ವಿಚಾರವಾದಿಗಳ ಅಪ್ಪಂದಿರಂತೆ ಮಾತಾಡುವ ಬಿಜೆಪಿ ನಾಯಕರು ಈಗ ಯಾಕೆ ಮೌನಕ್ಕೆ ಶರಣಾಗಿದ್ದಾರೆ? ಇವರಿಗೆ ಈ ಪಠ್ಯಪುಸ್ತಕಗಳು ಈಗಿನ ಜನರೇಶನ್ನಿಗೆ ಬೇಕಾಗಿತ್ತು ಅಂತ ಅನ್ನಿಸುತ್ತಿಲ್ಲವಾ? ಇನ್ನೂ ಎಷ್ಟು ವರ್ಷ ನಾವು ನಮ್ಮನ್ನು ಬಗ್ಗುಬಡಿದುಹೋದವರ ಇತಿಹಾಸ ಓದುತ್ತ ಕೂರಬೇಕು? ಇವರದ್ದು ಯುದ್ಧಕಾಲೇ ಶಸ್ತ್ರಾಭ್ಯಾಸವೂ ಅಲ್ಲ; ಯುದ್ಧಕಾಲೇ ಶಸ್ತ್ರತ್ಯಾಗ! ಗಡ್ಡಕ್ಕೆ ಬೆಂಕಿ ಹತ್ತಿದಾಗ ಇವರು ಬಾವಿ ತೋಡುವು ದಿಲ್ಲ, ತಮ್ಮ ಗಡ್ಡಕ್ಕೆ ಪೆಟ್ರೋಲ್ ಸುರಿದುಕೊಂಡು ಆರಿಸಲು ಯತ್ನಿಸುತ್ತಾರೆ! ಉರಿದು ಬೂದಿಯಾಗುತ್ತಿರುವ ಮನೆಗೆ ನಾಗೇಶ್ ಮತ್ತು ಚಕ್ರತೀರ್ಥ ಇಬ್ಬರೇ ಎಷ್ಟು ನೀರು ಸುರಿಯಲು ಸಾಧ್ಯ?
ಜಯವೀರ ವಿಕ್ರಂ ಸಂಪತ್ ಗೌಡ
‘ನಮ್ಮದು ಪಾರ್ಟಿ ವಿತ್ ಡಿಫರೆನ್ಸ್’ ಅನ್ನೋದು ಬಿಜೆಪಿಯವರು ನಿತ್ಯ ಹೇಳಿಕೊಂಡು ಬಂದಿರುವ ಮಾತು. ಯಾಕೆ, ಯಾವ ಕಾರಣಕ್ಕೆ ಅಂತ ಕೇಳಿದಾಗ ಅವರು ಹೇಳುತ್ತಾರೆ: ನಮಗೊಂದು ಸೈದ್ಧಾಂತಿಕ ಸ್ಪಷ್ಟತೆ ಇದೆ. ಬೇರೆಯವರು ಜಾತಿ-ಧರ್ಮ ಅಂತ ಜಾತಿ ರಾಜಕೀಯ ಮಾಡಿಕೊಂಡು ಚುನಾವಣೆ ಎದುರಿಸಿದರೆ ನಾವು ಉನ್ನತ ಚಿಂತನೆಯನ್ನು ಇಟ್ಟುಕೊಂಡು ಎದುರಿಸುತ್ತೇವೆ.
ಭಾರತ, ಭಾರತೀಯತೆ, ರಾಷ್ಟ್ರೀಯತೆ, ಹಿಂದುತ್ವ ಮುಂತಾದ ವಿಚಾರಗಳನ್ನು ನಾವು ಹಲವು ವೇದಿಕೆಗಳಲ್ಲಿ ಚರ್ಚೆ ಮಾಡುತ್ತೇವೆ. ನಮ್ಮಲ್ಲಿ ಬಹುತ್ವ ಚಿಂತನೆಗೆ ಅವಕಾಶ ಇದೆ. ಎಲ್ಲ ಬಗೆಯ ವ್ಯಕ್ತಿಗಳನ್ನು, ಚಿಂತನೆ ಗಳನ್ನು, ಹಿನ್ನೆಲೆಗಳನ್ನು ನಾವು ಗೌರವಿಸುತ್ತೇವೆ. ನಿಜಾರ್ಥದ ಪ್ರಜಾಪ್ರಭುತ್ವ ಇರೋದು ಇಲ್ಲಿಯೇ… ರಾಜ್ಯ ನಾಯಕರಿಗೆ ಈ ಸ್ಪಷ್ಟತೆ ಎಷ್ಟರ ಮಟ್ಟಿಗೆ ಇದೆಯೋ ಗೊತ್ತಿಲ್ಲ, ಆದರೆ ಕೇಂದ್ರ ಬಿಜೆಪಿ ನಾಯಕರಿಗೆ ಈ ವಿಷಯ ದಲ್ಲಿ ಅಪಾರವಾದ ಸ್ಪಷ್ಟತೆ ಇದೆ ಎಂಬುದು ಅವರ ಪಾಲಿಸಿಗಳಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಸಿಎಎ ಕಾಯ್ದೆ ತಂದಾಗ ಅವರಿಗದರ ಸ್ಪಷ್ಟ ಕಲ್ಪನೆ ಇತ್ತು. ಅನ್ಯದೇಶಗಳಲ್ಲಿ ಅಲ್ಪಸಂಖ್ಯಾತರಾಗಿ ಒದ್ದಾಡು ತ್ತಿರುವ, ಭಾರತಕ್ಕೆ ಬರಲು ತವಕಪಡುತ್ತಿರುವ ಸಹಸ್ರಾರು ಮಂದಿಗೆ ಸಹಾಯ ಮಾಡುವಂತಿದ್ದ ಆ ಕಾಯ್ದೆ ಯಿಂದ ದೇಶಾದ್ಯಂತ ಒಂದು ಸಂಚಲನ ಸೃಷ್ಟಿಯಾಯಿತು. ಜಗತ್ತಿನಲ್ಲಿ ಕಟ್ಟಕಡೆಯ ಹಿಂದೂವನ್ನು ಕೂಡ ನಮ್ಮ ದೇಶ ಗೌರವಯುತವಾಗಿ ನೋಡಿಕೊಳುತ್ತದೆ ಎಂಬ ಸ್ಪಷ್ಟ ಸಂದೇಶ ಅದರಿಂದ ಹೋಯಿತು. ನಂತರದ ದಿನಗಳಲ್ಲಿ ಕಾಶ್ಮೀರವನ್ನು ಉಳಿಸಿಕೊಳ್ಳುವ, ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕೆಲಸ ಮಾಡುವಾಗಲೂ ಬಿಜೆಪಿಗೆ ತಾನೇನು ಮಾಡುತ್ತಿದ್ದೇನೆಂಬ ವಿಷಯದಲ್ಲಿ ಗೊಂದಲ ವಿರಲಿಲ್ಲ.
ಕಾಶಿ, ಅಯೋಧ್ಯೆ, ಮಥುರಾಗಳ ವಿಚಾರದಲ್ಲೂ ಕೇಂದ್ರ ಬಿಜೆಪಿಯ ನಿಲುವು ಖಚಿತವಿದೆ. ಅವರಿಡುವ ಹೆಜ್ಜೆಯಲ್ಲಿ ಯಾವುದೇ ಗೊಂದಲ, ಕಳವಳ ಕಾಣಿಸುತ್ತಿಲ್ಲ. ವನರಾಜ ಸಿಂಹ ಗತ್ತು, ಗಾಂಭೀರ್ಯಗಳಿಂದ ಮುಂದಡಿಯಿಡುತ್ತ ಹೋದಂತೆ ಕೇಂದ್ರದ ಬಿಜೆಪಿ ಸರಕಾರ ಒಂದೊಂದಾಗಿ ದೃಢವಾದ ಹೆಜ್ಜೆಗಳನ್ನಿಡುತ್ತಮುಂದಕ್ಕೆ ಸಾಗುತ್ತಿದೆ. ಅದರ ನಡೆ-ನುಡಿಗಳಲ್ಲಿ ಈ ಬಗೆಯ ಸ್ಪಷ್ಟತೆ ಇರುವುದಕ್ಕೇ ಇಂದು ದೇಶದ ಕೋಟ್ಯಂತರ ಜನಸಾಮಾನ್ಯರು ಈ ಪಕ್ಷದ ನಾಯಕರ ಜತೆನಿಂತಿರುವುದು.
ಆದರೆ, ಈ ರೀತಿಯ ವಿಚಾರ ಸ್ಪಷ್ಟತೆ ಕರ್ನಾಟಕದ ಬಿಜೆಪಿ ಸರಕಾರಕ್ಕೆ ಇದೆಯಾ ಎಂಬುದು ಅನುಮಾನ. ಯಾಕೆಂದರೆ ಪಠ್ಯಪುಸ್ತಕಗಳ ವಿಚಾರದಲ್ಲಿ ನಡೆಯು ತ್ತಿರುವ ವಿವಾದ ಒಂದರ್ಥದಲ್ಲಿ ಸೈದ್ಧಾಂತಿಕ ರಣಾಂಗಣದ ವಿಷಯ. ಅದು ಬಿಜೆಪಿ ಪಕ್ಷಕ್ಕೆ ಅಥವಾ ಆರೆಸ್ಸಸ್ ಗೆ ನೇರವಾಗಿ ಸಂಬಂಧಪಟ್ಟಿದ್ದಲ್ಲ. ಆದರೆ, ಪಠ್ಯ ಪುಸ್ತಕಗಳಲ್ಲಿ ಪರಿಷ್ಕರಣ ಮಾಡಿದ್ದೇವೆ ಎಂದು ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳುತ್ತಿರುವ ವಿಚಾರಗಳೆಲ್ಲವೂ ನೇರವಾಗಿ ಬಿಜೆಪಿಗೆ ಅನುಕೂಲ ಮಾಡುವಂಥವೇ ಆಗಿವೆ.
ಪಠ್ಯಪುಸ್ತಕಗಳಲ್ಲಿ ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅವರ ಚಿಂತನೆಯನ್ನು ಹಾಕಿದ್ದಾರೆ. ಭಗತ್‌ಸಿಂಗ್, ನಾರಾಯಣಗುರುಗಳು, ನಾಡಪ್ರಭು ಕೆಂಪೇಗೌಡ, ಜಗಜ್ಯೋತಿ ಬಸವೇಶ್ವರ, ರಾಷ್ಟ್ರಕವಿ ಕುವೆಂಪು ಮುಂತಾದ ಬಹಳಷ್ಟು ಮಹನೀಯರ ವಿಚಾರಗಳನ್ನು ತಂದಿದ್ದೇವೆ ಎಂದು ಚಕ್ರತೀರ್ಥ ಹಲವು ವೇದಿಕೆಗಳಲ್ಲಿ ಹೇಳಿದ್ದಾರೆ. ಸನಾತನ ಧರ್ಮದ ಬಗ್ಗೆ ಪಾಠ ಹಾಕಿದ್ದೇವೆ; ಇಷ್ಟು ವರ್ಷ ಮಕ್ಕಳು ಕ್ರಿಶ್ಚಿಯಾನಿಟಿ, ಇಸ್ಲಾಂ ಬಗ್ಗೆ ಮಾತ್ರ ಓದುತ್ತಿದ್ದರು; ಈಗ ಹಿಂದೂ ಧರ್ಮದ ಬಗ್ಗೆಯೂ ವಿಸ್ತೃತವಾಗಿ ಓದಲಿಬಿಡಿ ಎಂದು ಈ ಅಧ್ಯಕ್ಷರು ಹೇಳುತ್ತಿzರೆ. ದೇಶದ ಸಮಗ್ರತೆಯನ್ನು ಮಕ್ಕಳಿಗೆ ಅರ್ಥಮಾಡಿಸುವ ದೃಷ್ಟಿಯಿಂದ ಅಸ್ಸಾಮ, ಕಾಶ್ಮೀರ, ಕೇರಳ, ತಮಿಳು ನಾಡು, ಕರ್ನಾಟಕಗಳನ್ನೆಲ್ಲ ಆಳಿದ, ಇದುವರೆಗೆ ಮಕ್ಕಳಿಗೆ ಅಜ್ಞಾತವಾಗಿದ್ದ ರಾಜರ, ರಾಜವಂಶಗಳ ಕಥೆಗಳನ್ನು ಹಾಕಿದ್ದೇವೆ ಎಂದೂ ಹೇಳಿದ್ದಾರೆ.
ಬಿಜೆಪಿ ಮತ್ತು ಅದರ ಮಾತೃಸಂಸ್ಥೆ ಆರೆಸ್ಸೆಸ್ ಇಷ್ಟು ವರ್ಷಗಳಿಂದ ಪ್ರತಿಪಾದಿಸುತ್ತ ಬಂದ ರಾಷ್ಟ್ರೀಯತೆಯನ್ನೇ ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕಗಳ ಫೇವರ್‌ನಲ್ಲಿ ಕೊಟ್ಟಿದ್ದಾರೆ. ಮತ್ತು ತನ್ನ ಪಠ್ಯಗಳ ಕಂಟೆಂಟ್ ಬಗ್ಗೆ ಅವರು ಯಾವುದೇ ಮುಚ್ಚುಮರೆ ಇಲ್ಲದೆ, ಎಲ್ಲ ವೇದಿಕೆಗಳಲ್ಲಿ ಸ್ಪಷ್ಟವಾಗಿ ಮಾತಾಡುತ್ತಿದ್ದಾರೆಕೂಡ. ಹೀಗಿರುವಾಗ… ಹೀಗಿರುವಾಗ, ಬಿಜೆಪಿ ಈ ಪಠ್ಯಗಳನ್ನು ಸಮರ್ಥಿಸಿಕೊಂಡಿದ್ದರೆ ಅದರನೂ ವಿಶೇಷವಿರಲಿಲ್ಲ. ವಿಶೇಷ ಕಾಣುವುದು ಬಿಜೆಪಿ ಈ ಪಠ್ಯ ಪುಸ್ತಕಗಳಿಗೂ ತನಗೂ ಮಧ್ಯೆ ಒಂದು ಗಾಜಿನ ಗೋಡೆ ಕಟ್ಟಿಕೊಂಡು ಕೂತಿದೆ ಎಂಬ ವಿಚಾರದಲ್ಲಿ. ಇಂದು ರಾಷ್ಟ್ರೀಯತೆಯನ್ನು ಬಿಂಬಿಸುವ ಈ ಪಠ್ಯ ಪುಸ್ತಕ ಗಳ ಬಗ್ಗೆ ಬಿಜೆಪಿಯ ಒಂದೆರಡು ನಾಯಕರು ಮಾತಾಡಿದ್ದಾರೆ ಅನ್ನುವುದು ಬಿಟ್ಟರೆ ಮಿಕ್ಕವರ‍್ಯಾರೂ ಉಸಿರೆತ್ತುತ್ತಿಲ್ಲ.
ಪಠ್ಯಪುಸ್ತಕಗಳ ಬಗ್ಗೆ ನಾಲ್ಕು ಒಳ್ಳೆಯ ಮಾತನ್ನು ಬಿಜೆಪಿಯ ಯಾವೊಬ್ಬ ಹಿರಿಯ ನಾಯಕರೂ ಹೇಳಿಲ್ಲ. ಇವರ ಕಡೆಯಿಂದ ಯಾವುದೇ ಪತ್ರಿಕಾಗೋಷ್ಠಿ ಇಲ್ಲ, ಸಂದರ್ಶನ ಇಲ್ಲ, ಲೇಖನಗಳಾಗಲೀ ಜಾಲತಾಣದ ಪೋಸ್ಟುಗಳಾಗಲೀ ಇಲ್ಲ. ಬಿಜೆಪಿಯ ನಾಯಕರಿಗೆ ನಿಜಕ್ಕೂ ಪಬ್ಲಿಕ್ ರಿಲೇಶನ್ಸ್ ಟೀಮ್‌ಗಳು ಇವೆಯಾ ಅನ್ನೋದೇ ಅನುಮಾನ! ಪಠ್ಯದಲ್ಲಿ ಹೆಡಗೇವಾರ್ ಕುರಿತು ವಿವಾದವೆಬ್ಬಿಸಿದಾಗ, ಅನಂತರ ಸಿದ್ದರಾಮಯ್ಯನವರು ಆರೆಸ್ಸೆಸ್ ಬಗ್ಗೆ ಟೀಕಿಸಿದಾಗ, ಆರೆಸ್ಸೆಸ್ ನಾಯಕರೂ ದಿವ್ಯ ಮೌನಕ್ಕೆ ಶರಣಾಗಿರುವುದನ್ನು ಏನೆಂದು ಅರ್ಥೈಸಿಕೊಳ್ಳ ಬೇಕೋ ಗೊತ್ತಾಗುತ್ತಿಲ್ಲ.
‘ಇಂಥ ಟೀಕೆಗಳೆಲ್ಲ ಇದ್ದಿದ್ದೇ.. ನಾವು ಅದನ್ನು ಗಂಭೀರವಾಗಿ ಪರಿಗಣಿ ಸದೇ, ಉದಾಸೀನ ಮಾಡುತ್ತಿದ್ದೇವೆ’ ಎಂಬ ಸಂದೇಶ ವನ್ನು ಕಳಿಸುವುದು ಆರೆಸ್ಸೆಸ್ ನಾಯಕರ ಉದ್ದೇಶವಾ? ಆದರೆ ಎಲ್ಲ ಪ್ರಶ್ನೆಗಳಿಗೂ ಮೌನವೇ ಉತ್ತರವಾಗಬಾ ರದು. ಆರೆಸ್ಸೆಸ್ ಏನು ಎಂಬುದು ಗೊತ್ತಿರುವವರಿಗೆ, ಸಮಜಾಯಿಷಿಬೇಕಿಲ್ಲ. ಆದರೆ ಆರೆಸ್ಸೆಸ್ ಬಗ್ಗೆ ಸಂದೇಹ ಇರುವವರಿಗೆ, ಗೊತ್ತಿಲ್ಲದಿರುವವರಿಗೆ, ಮೌನದಲ್ಲಿ ಉತ್ತರ ಹುಡುಕಿಕೊಳ್ಳಿ ಅಂದರೆ ಹೇಗೆ? ಏನೇ ಬೈದರೂ ಬೈಯಿಸಿ ಕೊಳ್ಳುವ ದಪ್ಪ ಚರ್ಮದ ಸಂಘಟನೆ ಆಗುವುದೂ ಒಳ್ಳೆಯದಲ್ಲ.
ತಮ್ಮ ಸಂಘಟನೆಯ ಸಂಸ್ಥಾಪಕರ ವಿಷಯದಲ್ಲಿ ಅವುಡುಗಚ್ಚಿ ಸುಮ್ಮನಿರುವ ಅನಿವಾರ್ಯ ಮತ್ತು ದರ್ದು ಸಂಘದವರಿಗೆ ಯಾಕೋ? ಗೊತ್ತಾಗುತ್ತಿಲ್ಲ. ಬಹಳಷ್ಟು ಬಿಜೆಪಿ ಧುರೀಣರು ಇನ್ನೂ ಶ್ರಾದ್ಧ, ತಿಥಿ, ಮದುವೆ, ಮುಂಜಿ, ನಾಮಕರಣಗಳಿಗೆ ಹೋಗಿ ಬರುತ್ತ, ರಿಬ್ಬನ್ ಕತ್ತರಿಸುತ್ತ, ಶಂಕುಸ್ಥಾಪನೆ ಮಾಡುತ್ತ ತಿರುಗಾಡು ತ್ತಿದ್ದಾರೆ. ಪತ್ರಕರ್ತರಿಗೂ ಇವರ ಹಣೆಬರಹ ಗೊತ್ತಿರುವುದರಿಂದ ಅವರೂ ಇವರ ಹತ್ತಿರ ಸುಳಿದಾಡುತ್ತಿಲ್ಲ. ಬಂದರೂ ಅಪ್ಪಿತಪ್ಪಿಯೂ ಪಠ್ಯ ಪುಸ್ತಕಗಳ ವಿಚಾರ ದಲ್ಲಿ ಪ್ರಶ್ನೆಗಳನ್ನು ಕೇಳುತ್ತಿಲ್ಲ.
ಪಠ್ಯಪುಸ್ತಕಗಳು ಪ್ರಕಟವಾಗಲು ಶುರುವಾಗಿ ಎರಡು ತಿಂಗಳು ಕಳೆದರೂ ಇನ್ನೂ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವವರು ಶಿಕ್ಷಣ ಸಚಿವ ಬಿ. ಸಿ.ನಾಗೇಶ್ಹಾಗೂ ಪಠ್ಯಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮಾತ್ರ. ಇವನ್ನೆಲ್ಲ ಸಮರ್ಥಿಸಿಕೊಳ್ಳಲೇಬೇಕಿದ್ದ ಬಿಜೆಪಿಯ ಅತಿರಥ ಮಹಾರಥರು ಯಾವ ಬಿಲಗಳಲ್ಲಿ ಅಡಗಿದ್ದಾರೋ ಅಮಿತ್ ಶಾ ಅವರೇ ಹೇಳಬೇಕು! ನಿಜಕ್ಕೂ ಇದು ಪಾರ್ಟಿ ವಿತ್ ಡಿಫರೆನ್ಸ್ ಹೌದಾ? ಹೌದು ಅನ್ನಿಸುತ್ತೆ ಬಹಳಷ್ಟು ಸಲ. ಯಾಕೆ ಗೊತ್ತಾ? ಇದೇ ಪಠ್ಯಪರಿಷ್ಕರಣೆಯ ಕೆಲಸವನ್ನು ಕಾಂಗ್ರೆಸ್ ಕಾಲದಲ್ಲಿ ನಡೆಸಿದ್ದರೆ, ಇದೇ ರೋಹಿತ್ ಆ ಪರಿಷ್ಕರಣೆಯ ಅಧ್ಯಕ್ಷತೆ ವಹಿಸಿದ್ದರೆ, ಆಗ ಇಡೀ ಕಾಂಗ್ರೆಸ್ ಅವರಿಗೆ ಬೆಂಗಾವಲಾಗಿ, ಸುರಕ್ಷತಾ ಕೋಟೆಯಾಗಿ ನಿಲ್ಲುತ್ತಿತ್ತು. ಕಾಂಗ್ರೆಸ್‌ನ ರಾಜಕಾರಣಿಗಳು ಹಗಲಿರುಳು ಪುರುಸೊತ್ತಿಲ್ಲದಂತೆ ಟ್ವೀಟ್, ಪೋಸ್ಟ್ ಮಾಡುತ್ತಿದ್ದರು.
ತಮ್ಮ ಕೆಲಸವನ್ನು ಶತಾಯಗತಾಯ ಸಮರ್ಥಿಸಿಕೊಳ್ಳುತ್ತಿದ್ದರು. ಪಠ್ಯಪರಿಷ್ಕರಣೆ ಮಾಡಿದ್ದನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡುಹೋಗುತ್ತಿದ್ದರು. ತಮ್ಮವಿರೋಽಗಳು ಎಷ್ಟು ಸಂಕುಚಿತರು, ಏನೇನು ತಪ್ಪು ಮಾಡಿzರೆ ಎಂಬುದನ್ನು ಜಗಜ್ಜಾಹೀರು ಮಾಡುತ್ತಿದ್ದರು. ಆದರೆ ಅಂಥ ಯಾವಯುದ್ಧ ಸ್ವರೂಪೀ ಹೋರಾಟವನ್ನೂ ಬಿಜೆಪಿಯಲ್ಲಿ ನಾವು ನೋಡುತ್ತಿಲ್ಲ. ಪಠ್ಯಪುಸ್ತಕ ಪರಿಷ್ಕರಣ ಮಾಡಿದರಲ್ಲ, ಅದರ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದರೆ, ಹ್ಞಾ? ಹೌದಾ? ಮಾಡಿದ್ದು ಯಾರು ನಾವಾ ಅವರಾ? ಎನ್ನುವ ಮಟ್ಟದ ಅಜ್ಞಾನದ ಕೂಪದಲ್ಲಿ ಇಂದು ಬಿಜೆಪಿ ನರಳುತ್ತಿದೆ.
ಈ ಪಕ್ಷದಲ್ಲಿ ಶಿಕ್ಷಣ ಸಚಿವರನ್ನು ಕರೆಸಿ ಉಳಿದೆಲ್ಲ ಶಾಸಕ, ಸಂಸದರಿಗೆ ಪಠ್ಯಪರಿಷ್ಕರಣೆಯ ಬಗ್ಗೆ ತಿಳಿವಳಿಕೆ ಕೊಡುವ ಕೆಲಸ ಆಗಿದೆಯಾ ಎಂದರೆ ಖಂಡಿತವಾಗಿ ಆಗಿರಲ್ಲ ಎನ್ನಬಹುದು. ಯಾಕೆಂದರೆ ಹಾಗೊಂದು ಬಗೆಯಲ್ಲಿ ಯುದ್ಧಕ್ಕೆ ಸಿದ್ಧವಾಗುವ ಮನಃಸ್ಥಿತಿಯೇ ರಾಜ್ಯ ಬಿಜೆಪಿಯಲ್ಲಿ ಇಲ್ಲ. ಇವರದ್ದು ಯುದ್ಧಕಾಲೇ ಶಸ್ತ್ರಾ ಭ್ಯಾಸವೂ ಅಲ್ಲ; ಯುದ್ಧಕಾಲೇಶಸ್ತ್ರತ್ಯಾಗ! ಗಡ್ಡಕ್ಕೆ ಬೆಂಕಿ ಹತ್ತಿದಾಗ ಇವರು ಬಾವಿ ತೋಡುವುದಿಲ್ಲ, ತಮ್ಮ ಗಡ್ಡಕ್ಕೆ ಪೆಟ್ರೋಲ್ ಸುರಿದುಕೊಂಡು ಆರಿಸಲು ಯತ್ನಿಸುತ್ತಾರೆ! ಉರಿದು ಬೂದಿ ಯಾಗುತ್ತಿರುವ ಮನೆಗೆ ನಾಗೇಶ್ ಮತ್ತು ಚಕ್ರತೀರ್ಥ ಇಬ್ಬರೇ ಎಷ್ಟು ನೀರು ಸುರಿಯಲು ಸಾಧ್ಯ?
ತಮಾಷೆ ನೋಡಿ:ಪಠ್ಯಪುಸ್ತಕಗಳು ಪರಿಷ್ಕರಣೆ ಯಾಗಿ ಬಂದಾಗ ಇಡೀ ಸಂಗತಿ ಬಿಜೆಪಿ ಪರವಾಗಿತ್ತು. ಬರಗೂರು ರಾಮಚಂದ್ರಪ್ಪ ಪರಿಷ್ಕರಣೆಯ ವಿಷಯದಲ್ಲಿ ತಪ್ಪುಮಾಡಿದ್ದಾರೆ ಎಂಬ ಭಾವನೆ ವ್ಯಾಪಕವಾಗಿತ್ತು. ಪರಿಷ್ಕರಣೆಯ ಹೆಸರಲ್ಲಿ ತಮ್ಮ ಸಿದ್ಧಾಂತ ತುರುಕಿದ್ದಾರೆ, ರಾಷ್ಟ್ರೀಯತೆಯ ಭಾವನೆಯನ್ನು ತಗ್ಗಿಸಲು ನೋಡಿದ್ದಾರೆ, ತಮ್ಮ ಪಾಳೆಯದ ಒಂದಷ್ಟು ಮಂದಿಯ ಅನರ್ಹ ಬರಹಗಳನ್ನು ಸೇರಿಸಿದ್ದಾರೆ ಎಂದೆಲ್ಲ ವ್ಯಾಪಕವಾದ ಭಾವನೆಯಿತ್ತು. ಇತಿಹಾಸ ದಲ್ಲಿ ಅನಗತ್ಯ ವಾದ ಹಲವಾರು ಅಂಶಗಳನ್ನು ರೋಹಿತ್ ಅವರ ನೇತೃತ್ವದ ಸಮಿತಿ ಸರಿಪಡಿಸುತ್ತದೆ ಎಂಬ ಭರವಸೆ ಜನರಿಗೆ ಬಂದಿತ್ತು. ಮತ್ತು ಜನರ ಎಲ್ಲ ಭರವಸೆ ಗಳನ್ನೂ ಈಡೇರಿಸುವ ರೀತಿಯ ರೋಹಿತ್ ಅವರ ಪರಿಷ್ಕರಣೆಯೂ ನಡೆದಿದೆಯೆ ನ್ನೋಣ. ಪಠ್ಯಪುಸ್ತಕಗಳು ಪರಿಷ್ಕರಣೆ ಆಗುತ್ತಿರುವುದು ಬರಗೂರು, ಸಿದ್ದರಾಮಯ್ಯ ನವರಿಗೆ ಗೊತ್ತಿರಲಿಲ್ಲವಾ? ಗೊತ್ತಿತ್ತು.
ಆದರೆ, ಏನೇ ಲಾಗ ಹಾಕಿದರೂ ಈ ವರ್ಷ ಆ ಹೊಸ ಪುಸ್ತಕಗಳು ಬರೋದಿಲ್ಲ ಎಂದೇ ಅವರೆಲ್ಲ ಭಾವಿಸಿದ್ದರು (ಬರಗೂರು ತನ್ನ ಪರಿಷ್ಕರಣೆಯ ಕೆಲಸಮಾಡೋದಕ್ಕೆ ತನ್ನ172ಮಂದಿಯ ತಂಡ ಇಟ್ಟುಕೊಂಡೂ ಮೂರು ವರ್ಷ ತಗೊಂಡಿದ್ದರಲ್ಲ!). ಆದರೆ ಯಾವಾಗ ಈ ಟೆಕ್ಸ್ಟ್ ಪುಸ್ತಕಗಳು ಈ ವರ್ಷವೇ ಬರುತ್ತವೆ ಎಂಬುದು ಗೊತ್ತಾಯಿತೋ ಇಡೀ ವಿರೋಧಿ ಬಣ ತಡಬಡಾಯಿಸಿ ಎದ್ದುನಿಂತಿತು. ಅವರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳುವುದಕ್ಕೂ ಅವಕಾಶ ಕೊಡದಂತೆ ರೋಹಿತ್ ಪಠ್ಯಪುಸ್ತಕಗಳನ್ನು ತಂದೇ ಬಿಟ್ಟರು. ಆ ಪುಸ್ತಕಗಳನ್ನು ಗಡಿಬಿಡಿಯಲ್ಲಿ ನೋಡಿದವರಿಗೆ ಕಂಡದ್ದು ಹೆಡಗೇವಾರ್ ಹೆಸರು! ಶುರುವಾಯ್ತು ನೋಡಿ ವಿವಾದ!
ಅಲ್ಲಿಂದ ನಂತರದ ದಿನಗಳಲ್ಲಿ ವಿರೋಧಿಗಳು ಎತ್ತಿರುವ ಆಕ್ಷೇಪ ಎಲ್ಲವೂ ಕ್ಷುಲ್ಲಕವಾದವು. ಭಗತ್ ಸಿಂಗ್ ಕೈಬಿಟ್ಟಿದ್ದಾರೆ ಅಂದರು ವಿರೋಧಿಗಳು; ಸಮಿತಿಯವರು ತಾವು ಉಳಿಸಿಕೊಂಡಿರುವ ಪಾಠ ತೋರಿಸಿದರು. ನಾರಾಯಣ ಗುರುಗಳ ವಿಚಾರ ಕೈಬಿಟ್ಟಿದ್ದೀರಿ ಎಂದು ಮತ್ತೆ ವಿರೋಧಿಗಳು ದೂರಿದರು; ಅದನ್ನೂಉಳಿಸಿಕೊಂಡಿದ್ದೇವೆ ಎಂದು ಸಮಿತಿಯವರು ಮತ್ತೆ ಹೇಳಿದರು. ಕುವೆಂಪು ಅವರಿಗೆ ಅವಮಾನ ಮಾಡಿದ್ದೀರಿ ಎಂದು ವಿರೋಽಗಳು ಯಾವುದೋ ಪುಟದನಾಲ್ಕು ಸಾಲು ತೋರಿಸಿದರು. ಆ ಪುಸ್ತಕವನ್ನು ನಾವು ಪರಿಷ್ಕರಣೆ ಮಾಡಿಯೇ ಇಲ್ಲ; ಅದು ಬರಗೂರು ಕಾಲದ ಪರಿಷ್ಕರಣೆ ಆದ ಪುಸ್ತಕ ಎಂದು ಸಮಿತಿಯವರು ಮತ್ತೆ ಟಾಂಗ್ ಕೊಟ್ಟರು.
ಹೀಗೆ ತಾವು ಪ್ರಯೋಗಿಸಿದ ಪ್ರತಿಯೊಂದು ಬಾಣವೂ ಚಕ್ರತೀರ್ಥ ಸಮಿತಿಯ ಮೇಲೆ ಬೀಳದೆ ಬೂಮರಾಂಗ್ ನಂತೆ ವಾಪಸ್ ಬಂದು ತಮ್ಮ ಪೃಷ್ಠಗಳಿಗೇ ಚುಚ್ಚಿಕೊಳ್ಳತೊಡಗಿದಾಗ ವಿರೋಧಿಗಳು ನಿಜಕ್ಕೂ ಕಂಗಾಲಾದರು. ಇನ್ನು ಅವರಿಗೆ ವಿರೋಧಿಸಲು ಯಾವ ವಿಷಯವೂ ಉಳಿದಿರಲಿಲ್ಲ!
ಅಷ್ಟರಲ್ಲಿ ಯಾರೋ ಒಬ್ಬರು, ಲೇಖಕರ ಜಾತಿ ಸಮೀಕ್ಷೆ ಮಾಡಿ ವರದಿ ಕೊಟ್ಟರು. ಈ ಸಾಹಿತಿಗಳಲ್ಲಿ ಇಂತಿಷ್ಟು ಬ್ರಾಹ್ಮಣರಿದ್ದಾರೆ, ಇಂತಿಷ್ಟು ಲಿಂಗಾಯತರು, ಮತ್ತಷ್ಟು ಒಕ್ಕಲಿಗರು… ಅಂತೆಲ್ಲ ಜಾತಿ ಸಮೀಕರಣ ಶುರುವಾಯಿತು. ಮಿಕ್ಕ ಸಮಯದಲ್ಲಿ ‘ಮನುಷ್ಯಜಾತಿ ತಾನೊಂದೆ ವಲಂ’ ಎಂದು ಪುಂಗುವ ಪ್ರಗತಿ ಪರರೆಲ್ಲ ಈಗ ಜಾತಿ ಲೆಕ್ಕಾಚಾರದ ಗಣಿತ ಮಾತಾಡತೊಡಗಿದರು! ಆದರೆ ಅದಕ್ಕೂ ಒಂದು ಪ್ರತ್ಯಸ ರೋಹಿತ್ ಬತ್ತಳಿಕೆಯಲ್ಲಿತ್ತು. ಅವರು ಬರಗೂರು ಸಮಯ ದಲ್ಲಿ ಪರಿಷ್ಕರಣೆಯಾಗಿದ್ದ ಪಠ್ಯಗಳಲ್ಲಿ ಯಾವ್ಯಾವ ಜಾತಿಯವರು ಎಷ್ಟೆಷ್ಟು ಇದ್ದರು ಎಂಬುದನ್ನು ತೋರಿಸಿ, ಅಲ್ಲೂ ಬ್ರಾಹ್ಮಣೀಕರಣ ಆಗಿದ್ದುದನ್ನು ಸಾಕ್ಷಿಸಮೇತ ಜನರ ಮುಂದಿಟ್ಟರು.
ಈಗ ವಿರೋಧಿಗಳಾದರೂ ಏನು ಮಾಡಬೇಕು? ಶುರುಮಾಡಿಕೊಂಡರು ನೋಡಿ ರೋಹಿತರ ಪೂರ್ವಾಪರ ಜಾತಕ ಜಾಲಾಡುವ ಕಾರ್ಯಾಚರಣೆಯನ್ನು!ದಿಗ್ಭ್ರಮೆಯಾಗುತ್ತದೆ. ಇವತ್ತು ಚರ್ಚೆಯಾಗುತ್ತಿರುವುದು ಪಠ್ಯದ ಪರಿವಿಡಿಯಲ್ಲಿ ಯಾವ್ಯಾವ ಜಾತಿಯವರ ಸಂಖ್ಯೆ ಎಷ್ಟೆಷ್ಟಿದೆ ಎಂಬುದು ಮಾತ್ರ. ಜತೆಗೆಪರಿಷ್ಕರಣ ಸಮಿತಿಯ ಅಧ್ಯಕ್ಷರ ವೈಯಕ್ತಿಕ ತೇಜೋವಧೆಗೆ ಇವರು ಇಳಿದಿದ್ದಾರೆ. ರೋಹಿತ್ ಯಾರ್ರೀ? ಎಂದು ಕೇಳುವುದರಿಂದ ಹಿಡಿದು ಅವರದ್ದು ಬ್ರಾಹ್ಮಣರಲ್ಲಿ ಯಾವ ಉಪಜಾತಿ, ಯಾವ ಮಠ, ಯಾವ ಒಕ್ಕಲು ಎಂಬಲ್ಲಿಯವರೆಗೆ ಇವತ್ತು ಚರ್ಚೆ ಮತ್ತು ಚರ್ಚೆಯ ಗುಣಮಟ್ಟ ಇಳಿದುಬಂದಿದೆ.
ಒಂದಷ್ಟು ಒಕ್ಕಲಿಗರು ಹಿಂದೆ ಮುಂದೆ ನೋಡದೆ, ರೋಹಿತರ ವ್ಯಕ್ತಿತ್ವದ ಪೂರ್ತಿ ಪರಿಚಯ ಇಲ್ಲದೆ, ಅವರು ಕುವೆಂಪುಗೆ ಅವಮಾನ ಮಾಡಿದರು ಎಂದು ಹೇಳಿ ಕೊಂಡು ಘೋಷಣೆ ಕೂಗುತ್ತ ಕೂತಿದ್ದಾರೆ. ಇವರೆಲ್ಲರ ಈ ಸೊಂಟದ ಕೆಳಗಿನ ವಾಕ್‌ಸಮರಗಳು ಯಾವ ಮಟ್ಟಕ್ಕೆ ಹೋಗಿವೆಯೆಂದರೆ ಸ್ವತಃ ಶಿಕ್ಷಣ ಸಚಿವರಿಗೂ ಒಂದು ಕ್ಷಣ, ಹಳೆ ಟೆಕ್ಸ್ಟ್ ಬುಕ್ಕುಗಳನ್ನೇ ಪ್ರಿಂಟ್ ಮಾಡಿಸಿ ಬಿಡಲಾ ಅಂತ ಅನ್ನಿಸಿರಬಹುದು! ಹಾಗೆ ಅನ್ನಿಸುವುದಕ್ಕೆ ಒಂದು ಕಾರಣ ವಿರೋಽಗಳ ಬೊಬ್ಬೆ ಆದರೆ ಇನ್ನೊಂದು ಕಾರಣ ತಮ್ಮದೇ ಪಾಳೆಯದವರ ದಿವ್ಯಶಾಂತಿಯ ಮೌನ!
ಬಿಜೆಪಿಯವರಿಗೆ ಬೆನ್ನುಮೂಳೆ ಇಲ್ಲವಾ? ಅಥವಾ ಇದ್ದರೂ ಅದನ್ನು ಈಗಿನ ಸಂದರ್ಭದಲ್ಲಿ ಪಕ್ಕಕ್ಕಿಟ್ಟು ಮಲಗಿದ್ದಾರಾ? ಸಿದ್ಧಾಂತ ಸಿದ್ಧಾಂತ ಎಂದು ಮಾತು ಮಾತಿಗೆ ವಿಚಾರವಾದಿಗಳ ಅಪ್ಪಂದಿರಂತೆ ಮಾತಾಡುವ ಬಿಜೆಪಿ ನಾಯಕರು ಈಗ ಯಾಕೆ ಮೌನಕ್ಕೆ ಶರಣಾಗಿದ್ದಾರೆ? ಇವರಿಗೆ ಈ ಪಠ್ಯಪುಸ್ತಕಗಳು ಈಗಿನಜನರೇಶನ್ನಿಗೆ ಬೇಕಾಗಿತ್ತು ಅಂತ ಅನ್ನಿಸುತ್ತಿಲ್ಲವಾ? ಇನ್ನೂ ಎಷ್ಟು ವರ್ಷ ನಾವು ನಮ್ಮನ್ನು ಬಗ್ಗುಬಡಿದುಹೋದವರ ಇತಿಹಾಸ ಓದುತ್ತ ಕೂರಬೇಕು? ಇನ್ನೂ ಎಷ್ಟು ವರ್ಷ ನಾವು ಆರ್ಯರು ಬಂದರು, ಆಕ್ರಮಣ ಮಾಡಿದರು ಅನ್ನೋ ಸುಳ್ಳುಗಳನ್ನು ಕಲಿಯುತ್ತಿರಬೇಕು? ನಮ್ಮವರು ಈ ನೆಲದಲ್ಲಿ ಗಟ್ಟಿಯಾಗಿ ನಿಂತು ಹೋರಾಡಿ ಗೆದ್ದ ಇತಿಹಾಸ ಬೇಡವಾ? ಭಾರತೀಯ ಸಂಸ್ಕೃತಿಯ ವಿಶೇಷ ಏನು ಅನ್ನೋದನ್ನು ನಮ್ಮ ಮಕ್ಕಳು ಇನ್ನಾದರೂ ಓದೋದು ಬೇಡವಾ? ಶ್ರೇಷ್ಠ ಭಾರತೀಯ ಚಿಂತನೆಗಳನ್ನು ನಮ್ಮವರು ಓದದೆ ಇನ್ನ್ಯಾರು ಐಸ್‌ಲೆಂಡಿನ ಬುಡಕಟ್ಟಿನವರು ಓದ್ತಾರಾ? ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದು ತಮ್ಮ ಇದುವರೆಗಿನ ಸೈದ್ಧಾಂತಿಕ ಹೋರಾಟದ ಅಂತಿಮ ಮೂರ್ತ ಫಲಿತಾಂಶ ಅನ್ನುವುದನ್ನು ಹೆಮ್ಮೆಯಿಂದ ಹೇಳುವ ಮಂದಿಗೆ ತಾವು ಇದುವರೆಗೆ ಎಡಪಂಥೀಯರ ಜತೆ ಮಾಡುತ್ತ ಬಂದ ಹೋರಾಟದ ಅಂತಿಮ ಮೂರ್ತ ಫಲಿತಾಂಶವೇ ಪಠ್ಯಪುಸ್ತಕಗಳು ಅಂತ ಅನ್ನಿಸುತ್ತಿಲ್ಲವಾ? ಈ ಬೌದ್ಧಿಕ ದಿವಾಳಿತನಕ್ಕೆ ಏನು ಕಾರಣ?ಅರ್ಥವಾಗುತ್ತಿಲ್ಲ.
ಪಠ್ಯಪುಸ್ತಕಗಳ ವಿಷಯದಲ್ಲಿ ಮುಖ್ಯಮಂತ್ರಿಗಳು ಮೌನವಾಗಿದ್ದಾರೆ. ಕ್ಯಾಬಿನೆಟ್‌ನ ಅಷ್ಟೂ ಸಚಿವರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ. ರಾಜ್ಯದ ಯಾವುದೇ ಬಿಜೆಪಿ ಎಮ್ಮೆಯೂ ಪಠ್ಯಪುಸ್ತಕಗಳ ವಿಷಯದಲ್ಲಿ – ಪರವಾಗಿಯಾಗಲೀ ವಿರುದ್ಧವಾಗಿ ಆಗಲೀ ಮಾತಾಡಿದ್ದು ಗಮನಕ್ಕೆ ಬಂದಿಲ್ಲ. ಆನ್‌ಲೈನ್‌ನಲ್ಲಿ ಯಾರಿಗೆ ಬೇಕಾದರೂ ಸಿಗುವಂಥ ಪಠ್ಯಗಳು ಇನ್ನೂ ನಮ್ಮ ಶಾಸಕರುಗಳ ಕೈಗೆ ಸಿಕ್ಕಿಲ್ಲ! ಅಲ್ಲಿರುವ ಕಂಟೆಂಟ್ ಓದಿಕೊಂಡು ಮಾತಾಡುವಷ್ಟೂ ಇವರಿಗೆ ಬೌದ್ಧಿಕತೆ ಇಲ್ಲವೆಂದಾದರೆ ಇವರೆಲ್ಲ ಮತ್ತೆ ಶಾಲೆಗೆ ಸೇರುವುದು ಒಳ್ಳೆಯದು. ನಾನಿದನ್ನು ಬಿಜೆಪಿಯ ಪರವಾಗಿ ಬರೆಯುತ್ತಿಲ್ಲ. ಅಥವಾ ಬಿಜೆಪಿಯ ಹತಾಶ ಅಂಧಭಕ್ತ ನಾಗಿಯೂ ಬರೆಯುತ್ತಿಲ್ಲ.
ಒಂದಾನೊಂದು ಕಾಲದಲ್ಲಿ ವೈಚಾರಿಕತೆ ಅಂದರೆ ಬಿಜೆಪಿ, ಬಿಜೆಪಿ ಅಂದರೆ ವೈಚಾರಿಕತೆ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುತ್ತಿದ್ದ ಪಾರ್ಟಿ ಇಂದು ಯಾವ ಸ್ಥಿತಿಗೆ ಬಂದು ಮುಟ್ಟಿದೆ ಎಂಬುದನ್ನು ಜನಸಾಮಾನ್ಯರ ಮುಂದಿಡುವುದಕ್ಕಷ್ಟೇ ಈ ಎಲ್ಲವನ್ನೂ ಹೇಳುತ್ತಿದ್ದೇನೆ. ಬಿಜೆಪಿಯಲ್ಲಿ ಇಂದು ಯಾವುದೇ ವೈಚಾರಿಕ ಸ್ಪಷ್ಟತೆ ಉಳಿದಿಲ್ಲ. ಹಿಜಾಬ್ ಇರಲಿ, ಹಲಾಲ್ ಇರಲಿ, ಇವರಿಗೆ ಒಂದು ಹಂತದಿಂದ ಚರ್ಚೆಯನ್ನು ಮೇಲಕ್ಕೆ ತೆಗೆದುಕೊಂಡುಹೋಗಲು ಸಾಧ್ಯವಾಗುತ್ತಿಲ್ಲ. ಅವರು ಹಿಜಾಬ್ ಹಾಕಿದರೆ ನಾವು ಕೇಸರಿಶಾಲು ಹಾಕುತ್ತೇವೆ ಎಂಬಷ್ಟಕ್ಕೇ ಇವರ ಎಲ್ಲ ವೈಚಾರಿಕ ಚರ್ಚೆಗಳು ನಿಲ್ಲುತ್ತಿವೆ.
ಅವರು ಹಲಾಲ್ ಬೆಂಬಲಿಸಿದರೆ ನಾವು ಜಟ್ಕಾ ಮಾಂಸ ಬೆಂಬಲಿಸುತ್ತೇವೆ ಎಂಬಷ್ಟಕ್ಕೇ ಇವರ ವಾದ-ಪ್ರತಿವಾದಗಳು ಸ್ಥಗಿತವಾಗುತ್ತಿವೆ. ಅದರಾಚೆಗೆ ಚರ್ಚೆ ಯನ್ನು ಒಂದು ಸೈದ್ಧಾಂತಿಕ ಗಮ್ಯಕ್ಕೆ ಮುಟ್ಟಿಸುವ ಛಾತಿಯಾಗಲೀ ಬುದ್ಧಿವಂತಿಕೆಯಾಗಲೀ ವೈಚಾರಿಕ ಸ್ಪಷ್ಟತೆಯಾಗಲೀ ಇವರ‍್ಯಾರಲ್ಲೂ ಕಾಣಿಸುತ್ತಿಲ್ಲ.ಸಿ. ಟಿ. ರವಿ ಮತ್ತು ಪ್ರತಾಪ್ ಸಿಂಹ ಅವರು ರೋಹಿತ್ ಜತೆ ನಿಂತಿರುವುದರ ಹೊರತಾಗಿ ಬೇರಾವ ಶಾಸಕ, ಸಂಸದರಿಗೂ ಈ ವಿಷಯ ಬೇಕಾಗಿಲ್ಲ. ಇಂಥ ದೊಂದು ಪರಿಷ್ಕರಣೆ ನಡೆದುಹೋಗಿದೆ ಎಂಬುದೇ ಗೊತ್ತಿಲ್ಲದ ಬಿಜೆಪಿ ರಾಜ್ಯನಾಯಕರೂ ಇರಬಹುದು. ಇದ್ದರೆ ಅದು ಆಘಾತಕಾರಿ ಸಂಗತಿಯೇನಲ್ಲ! ಬಿಜೆಪಿ ಯಾಕೆ ರಾಜ್ಯದಲ್ಲಿ ಬಹುಮತದ ಗೆರೆ ಮುಟ್ಟುತ್ತಿಲ್ಲ ಎಂಬುದಕ್ಕೆ ಮುಖ್ಯ ಕಾರಣವೇ ಇದು.
ಅಸೆಂಬ್ಲಿ ಚುನಾವಣೆಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಸ್ಥಳೀಯ ವಿಚಾರಗಳು ಒಟ್ಟು ಶೇ.40 ಪರಿಣಾಮ ಬೀರುತ್ತವೆ. ಮಿಕ್ಕ ಸಂಗತಿಗಳಲ್ಲಿ ಶೇ.20 – ರಾಜ್ಯದಲ್ಲಿ ಪಕ್ಷ ತೆಗೆದುಕೊಂಡ ತೀರ್ಮಾನಗಳು, ಸರಕಾರೀ ಯೋಜನೆಗಳು, ರಾಜ್ಯ ಮಟ್ಟದ ರಾಜಕೀಯ ನಾಯಕರು ಕೊಟ್ಟ ಭಾಷಣಗಳು, ಹೇಳಿಕೆಗಳು, ರಾಜ್ಯ ಬಜೆಟ್ –ಇತ್ಯಾದಿಯೆಲ್ಲ ಪರಿಗಣಿಸಲ್ಪಡುತ್ತವೆ. ಇನ್ನು ಶೇ.20 ರಾಷ್ಟ್ರಮಟ್ಟದಲ್ಲಿ ಪಕ್ಷ ಹಾಗೂ ನಾಯಕರು ಮಾಡಿದ ಸಾಧನೆ-ವೈಫಲ್ಯಗಳು ಮ್ಯಾಟರ್ ಆಗುತ್ತವೆ.ಕೊನೆಯ ಶೇ.೨೦, ಒಟ್ಟಾರೆಯಾಗಿ ಪಕ್ಷ ತನ್ನ ಸಿದ್ಧಾಂತದ ನೆಲೆಯಲ್ಲಿ ಮಾಡಿದ ಹೋರಾಟಗಳು, ತೆಗೆದುಕೊಂಡ ನಿರ್ಣಯಗಳು, ಪಕ್ಷದ ಸೈದ್ಧಾಂತಿಕ ಬದ್ಧತೆಮತ್ತು ಅದನ್ನು ಉಳಿಸಿಕೊಳ್ಳಲು ಮಾಡಿಕೊಂಡ ಸಿದ್ಧತೆ – ಇದೆಲ್ಲ ಬರುತ್ತವೆ.
ರಾಜ್ಯ ಬಿಜೆಪಿ ಈ ಕೊನೆಯ ಶೇ.20 ಭಾಗದ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ. ಯಾಕೆಂದರೆ ಬಿಜೆಪಿಯ ಸೈದ್ಧಾಂತಿಕ ಬದ್ಧತೆ ಏನು ಎನ್ನುವುದೇ ಇವರಿಗೆ ಗೊತ್ತಿಲ್ಲ. ನಾವಿಷ್ಟು ವರ್ಷ ಹೇಳಿಕೊಂಡು ಬಂದ ವಿಷಯಗಳನ್ನು ಈಗ ಕಾರ್ಯಗತಗೊಳಿಸಿದ್ದೇವೆ; ಮಕ್ಕಳಿಗೆ ಅತ್ಯುತ್ತಮ ರೀಡಿಂಗ್ ಮೆಟೀರಿಯಲ್ ಕೊಟ್ಟಿದ್ದೇವೆ; ನಮ್ಮತನವನ್ನು ಪರಿಚಯಿಸಿದ್ದೇವೆ; ಭಾರತೀಯ ಸಂಸ್ಕೃತಿಗೆ ಸೂಕ್ತವಾದ ಪಠ್ಯಗಳನ್ನು ಹಾಕಿದ್ದೇವೆ ಎಂದು ಹೇಳಿಕೊಂಡು ತಮ್ಮನ್ನು ಸಮರ್ಥಿಸಿಕೊಳ್ಳುವತಾಕತ್ತೇ ಈ ನಾಯಕರಿಗಿಲ್ಲ. ಇವರ ಕೈಗೆ ಬಂದಿದ್ದ ಮೃಷ್ಟಾನ್ನ ಭೋಜನವನ್ನು ಗಡದ್ದಾಗಿ ತಿಂದು ವಿರೋಧಿಗಳು ಉಳಿದ ಮೆಣಸು, ಬೇವಿನೆಲೆಗಳನ್ನು ಇವರತ್ತಎಸೆಯುತ್ತಿರುವ ವಾತಾವರಣ ಸದ್ಯಕ್ಕೆ ಸೃಷ್ಟಿಯಾಗಿದೆ.
ತಮ್ಮ ಪಾಲಿಗೆ ಆಟಂ ಬಾಂಬ್ ಆಗಲಿದ್ದ ವಿಷಯವನ್ನು ವಿರೋಧಿಗಳು ಹಿಡಿದು ಈಗ ವಾಪಸ್ ಬಿಜೆಪಿಯ ಮೇಲೆಯೇ ಒಗೆದಿದ್ದಾರೆ! ಈ ಪಕ್ಷಕ್ಕೆ ಸೈದ್ಧಾಂತಿಕ ಬದ್ಧತೆಯೂ ಇಲ್ಲ; ತಕ್ಕ ಸಿದ್ಧತೆಯೂ ಇಲ್ಲ ಎನ್ನುವುದು ರಾಜ್ಯದ ಜನರ ಮುಂದೆ ಜಗಜ್ಜಾಹೀರಾಗಿದೆ. ಇನ್ನೂ ಎಷ್ಟು ವರ್ಷ, ಎಷ್ಟು ಚುನಾವಣೆಗಳಲ್ಲಿ ಮೋದಿ ಯವರೇ ಬಂದು ಈ ರಾಜ್ಯ ಬಿಜೆಪಿಯನ್ನು ಗೆಲ್ಲಿಸಿ ಅಂತ ಮತಭಿಕ್ಷೆ ಕೇಳುತ್ತಿರಬೇಕು?