ಸ್ವಾರ್ಥದ ಬದುಕಿಗಿಂತ ಭಾಷೆ ದೊಡ್ಡದಾಗಲಿ
ಶಿವಾನಂದ ಕಲಬುರಗಿ
ನವಭಾರತ ಮತ್ತು ನವ ಕರ್ನಾಟಕದ ವಿಕಾಸಕ್ಕೆ ಶೈಕ್ಷಣಿಕ ಪ್ರಗತಿಯೇ ಮೂಲ ಮಂತ್ರ. ಶಿಕ್ಷಣವೆಂಬುದು ಸಾಮರಸ್ಯದ ಸಂಕೇತವೇ ಹೊರತು ಸಂಘರ್ಷದ ಪ್ರತೀಕವಲ್ಲ. ಕರ್ನಾಟಕದ ಸಾಮರಸ್ಯ ಜಗತ್ತಿಗೆ ಮಾದರಿ. ಸರ್ವಧರ್ಮ ಮತ್ತು ಸರ್ವಜನಾಂಗದ ಶಾಂತಿಯ ತೋಟ ಇಂತಹ ಪವಿತ್ರವಾದ ಪುಣ್ಯ ನೆಲದಲ್ಲಿ ಧರ್ಮವೆಂಬ ವಿಷ ಬೀಜ ಈಗ ಮೊಳಕೆಯೊಡೆಯುತ್ತಿರುವುದು ಆ ಧರ್ಮದ ವಿಷ ಬೀಜದಲ್ಲಿ ಅನೇಕ ಅಪರೂಪದ ಹೊಸ ಬೆಳವಣಿಗೆಯ ಶಿಕ್ಷಣದಲ್ಲಿ ಬೇರೂರಲುಪ್ರಯತ್ನಿಸುತ್ತಿರುವುದು, ವೈವಿಧ್ಯಮಯವಾದ ಭೂಮಿಯಲ್ಲಿ ವೈರುಧ್ಯದ ಮಧ್ಯೆ ವೈರತ್ವದ ಪ್ರಯತ್ನಕ್ಕೆ ಮಣೆ ಹಾಕುವುದು ಆ ಮೂಲಕ ಹೊಸ ಬೆಳೆಗಳ ಬೆಳವಣಿಗೆಗೆ ಪುಷ್ಠಿ ಮಾತ್ರೆಯಂತೆ ಹೊಸ ಪಠ್ಯಗಳ ಸೇರ್ಪಡೆಯಲ್ಲಿ ಸಾಮಾಜಿಕ ಸ್ವಾಸ್ಥ್ಯದ ಬೇರು ಅಲುಗಾಡಿಸುತ್ತಿದೆ.
ಏಕ ಧರ್ಮದ ಹೆಸರಿನಲ್ಲಿ ಹಲವು ಐಕ್ಯತೆಗಳ ಸುಳಿಯ ಒಳಗೆ ಇಬ್ಬನಿಯಂಥ ತಿಳಿ ನೀರಿನ ಮೂಲಕ ಒಣಗಿ ಹೋಗುತ್ತಿರುವ ಧರ್ಮದ ಬೇರಿನ ಬುಡದ ಭದ್ರತೆಗೆ ಕೋಮು ಸಂಘರ್ಷದ ಪ್ರಯತ್ನಕ್ಕೆ ಕೈ ಹಾಕಿರುವ ಧರ್ಮ ಭಕ್ತರು ರಾಷ್ಟ್ರದ ಹಿತಕ್ಕಿಂತ, ಜನರ ಹಿತಕ್ಕಿಂತ ಪಕ್ಷದ ಮತ್ತು ವ್ಯಕ್ತಿಯ ಹಿತದಲ್ಲಿ ಆಸಕ್ತರಾಗಿದ್ದಾರೆ. ಅದಕ್ಕಾಗಿಯೇ ತೆರೆಮರೆಯಲ್ಲಿ ಶಕ್ತಿಮೀರಿದ ಪ್ರಯತ್ನಗಳು, ಷಡ್ಯಂತರಗಳು ನಡೆಸಿ ವಿಫಲತೆ ಕಂಡರೂ ಮತ್ತೆ ಅದರ ಬೆನ್ನಲ್ಲೇ ಅಂದರೆ, 2022-23 ನೇ ಸಾಲಿನ ಶಿಕ್ಷಣದಲ್ಲಿ ಅನೇಕ ಪಾಠಗಳು ಬದಲಾವಣೆ ಮಾಡಿಕೊಳ್ಳ ಲಾಗಿದೆ.
ರಾಷ್ಟ್ರಕ್ಕಾಗಿ ತನು-ಮನವನ್ನು ತ್ಯಾಗ ಮಾಡಿ ತಮ್ಮ ವೈಯಕ್ತಿಕ ಜೀವನವನ್ನು ದೇಶಕ್ಕಾಗಿ ಅರ್ಪಿಸಿದ ಮಹನೀಯರ ಜೀವನ ಸಾಧನೆಗಳು ಮತ್ತು ಬಲಿದಾನ ವನ್ನು ಮರೆಮಾಚುವಂತೆ ಮಾಡಿ ಸ್ವಾತಂತ್ರ್ಯ ಭಾರತದ ಪ್ರಜಾತಂತ್ರದ ಭದ್ರ ಬುನಾದಿಯಾದ ಸಂವಿಧಾನಕ್ಕೆ ವಿರುದ್ಧವಾಗಿ ಕೆಲವು ಬದಲಾವಣೆ ಗಳಾಗಿವೆ. ಸರಿಯಾದ ಗುರಿ-ಉದ್ದೇಶವಿಲ್ಲದ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿ ಬೆಳೆಯುವ ಮಕ್ಕಳ ಮನಸ್ಸಿನಲ್ಲಿ ಮೂಢ ನಂಬಿಕೆ, ಧರ್ಮ, ಜಾತಿ, ಕನಿಷ್ಠ, ಶ್ರೇಷ್ಠ, ದೈವಶಕ್ತಿ, ಭಕ್ತಿಯ ಆರಾಧನೆ, ಇತ್ಯಾದಿಗಳನ್ನು ತುಂಬಲಾಗುತ್ತಿದೆ.
ಯಾರಿಗೂ ಅರ್ಥವಾಗದಂತೆ ಪೂರ್ವಯೋಚಿತ ನಿಲುವುಗಳನ್ನು ಸಕರಾತ್ಮಕಗೊಳಿಸಲು ಶ್ರಮಿಸುವ ಕುತಂತ್ರಕ್ಕೆ ಪ್ರಗತಿಪರ ಚಿಂತನೆಗಳೇ ಹೋರಾಟದ ಮೂಲಕ ಕೊಡಲಿ ಪೆಟ್ಟು ಕೊಡಬೇಕಿದೆ. ಧರ್ಮ ಸಂಘಟನೆಯ ಶಕ್ತಿಯನ್ನು ಸಾರ್ವತ್ರಿಕ ಶಿಕ್ಷಣದ ಮೇಲೆ ಪ್ರಯೋಗ ಮಾಡಲು ಹೊರಟಿರುವುದು ಅತ್ಯಂತ ಖೇದದ ಸಂಗತಿ, ಸಮಾಸದ ಚಾರಿತ್ರಿಕ ಸ್ವಾಸ್ಥ್ಯವನ್ನು ದಮನ ಮಾಡುವ ಪ್ರಯತ್ನದ ವಿರುದ್ಧ ಭುಗಿಲೆದ್ದಿರುವ ಹೋರಾಟದ ತೀವ್ರತೆಯ ಮೂಲಕ ಮತ್ತೊಮ್ಮೆ 1970-80ರ ಕಾಲಘಟ್ಟದ ಹೋರಾಟದ ಘರ್ಜನೆಯ ಸುಳಿವು ಜೋರಾಗಿದೆ.
ಸಹನಾಭೂತಿಗಳಾದ ಸಂವಿಧಾನದ ರಕ್ಷಕರು ಬಾಬಾ ಸಾಹೇಬರು ತೋರಿದ ಮಾನವೀಯತೆಯ ನೆಲೆಯಲ್ಲಿ ಯೋಚಿಸುವುದು ಬಿಟ್ಟು ಕ್ರಾಂತಿಗೆ ಕರೆಕೊಟ್ಟರೆ ಮತ್ತೊಮೆ ಹೊಸ ಚರಿತ್ರೆಗೆ ಸಾಕ್ಷಿಯಾಗಬಹುದು. ಪ್ರತಿ ಮಗುವಿನ ನಿಷ್ಕಲ್ಮಷ ಮನಸ್ಸು ದೇಶದ ಗೌರವಕ್ಕೆ ಒಳಗಾಗುವಂತೆ ರೂಪಿಸಬೇಕು. ಏಕೆಂದರೆ,ಮಕ್ಕಳ ಮನಸ್ಸು ಶುಭ್ರವಾದ ಬಿಳಿ ಹಾಳೆಯಂತೆ. ಅದರ ಮೇಲೆ ಏನು ಬೇಕಾದರೂ ಬರೆಯಬಹುದು. ಅಂಥ ಮಕ್ಕಳ ನಿಷ್ಕಲ್ಮಶ ಮನಸ್ಸಿನಲ್ಲಿ ತಿರುಚಿ ಬರೆದಸುಳ್ಳು ಇತಿಹಾಸವನ್ನು ಬಲವಂತವಾಗಿ ತುರುಕಿದರೆ ಈ ದೇಶದ ಪ್ರಗತಿಗೆ ಮಾರಕ. ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಎಂದು ಹೇಳುವ ಸಮಾಜಮಾರಕ ವಾಗುವ ಅಂಶವನ್ನು ಬಿತ್ತುವ ಮೂಲಕ ಚರಿತ್ರೆಗೆ ಅಪಮಾನ ಮಾಡುತ್ತಿದೆ.
ಸದ್ಯದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಧೋರಣೆ ಹೇಗಿದೆ ಎಂದರೆ, ಕಾಗೆಯ ಮನೆಯೊಳು ಕೋಗಿಲೆಯು ತತ್ತಿಯಿಟ್ಟು ಮರಿಗೆ ಜನ್ಮ ನೀಡಿದ ಕಾಗೆಯನ್ನೇ ಅಣಕಿಸುವ ಸ್ಥಿತಿ ನಿರ್ಮಾಣವಾಗಿದೆ. ದೇಶಕ್ಕಾಗಿ, ನಾಡಿಗಾಗಿ ಶ್ರಮಿಸಿದ ಮಹಾನೀಯರನ್ನೇ ಹೊರಗಿಟ್ಟು ಮನುವಾದದ ಹಿತಕಾಯುವ ಕುತಂತ್ರ ದೇಶಕ್ಕೆ ಮಾರಕ. ಈ ನೆಲದ ಸಂಸ್ಕೃತಿಯ ತಾಯಿ ಬೇರು ಸಹೋದರತ್ವ. ಅದರ ಕರುಳು ಕತ್ತರಿಸುವ ಹುನ್ನಾರು ರೂಪಿಸಿದ ಬೆಳವಣಿಗೆ ಇಡೀ ನಾಡಿಗೆ ಮಾಡಿದ ಅಪಮಾನ. ಬಾಯಲ್ಲಿ ಬೆಲ್ಲ ಎದೆಯಲ್ಲಿ ಕತ್ತರಿ ಸಂಸ್ಕೃತಿ ಎದ್ದು ಕಾಣುತ್ತಿದೆ.
1600-1947ವರೆಗಿನ ಭಾರತದ ಇತಿಹಾಸವನ್ನು ಸೂಕ್ಷ್ಮವಾಗಿ ಆತ್ಮಾವಲೋಕನ ಮಾಡಿಕೊಂಡರೆ ಯಾರು ಈ ದೇಶದ ನಿಜವಾದ ರಕ್ಷಕರು ಎಂಬುದುಅರ್ಥವಾಗುತ್ತದೆ. ಕಾಂಗ್ರೆಸ್ ಮತ್ತು ಇತರೆ ರಾಜಕೀಯ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಸದಾ ಹಪಾಹಪಿಸಿ ವೀರ-ಧೀರರ ಬಲಿದಾನದ ಸಮಾಧಿಯ ಮೇಲೆ ಬಾವುಟ ಹಾರಿಸಿದ್ದು ದುರದೃಷ್ಟಕರ. ಅನುಕೂಲ ಮತ್ತು ಅವಕಾಶಕ್ಕೆ ಜೋತು ಬಿದ್ದು ಒಳ ಒಪ್ಪಂದ ಮಾಡಿಕೊಂಡ ಎರಡೂ ಪಕ್ಷಗಳು ತಮ್ಮ-ತಮ್ಮ ಅನುಕೂಲಕ್ಕೆಮತ್ತು ಸ್ವಾರ್ಥಕ್ಕೆ ತಕ್ಕಂತೆ ಇತಿಹಾಸವನ್ನು ಬಳಸಿಕೊಳ್ಳುತ್ತಿದ್ದರೆ. ನಮ್ಮ ಕನ್ನಡವನ್ನು ದೇಶದ ದಕ್ಷಿಣ ಭಾಗದಲ್ಲಿ ‘ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೋಡಲಾರಿರಿ’ ಎಂಬ ಹಾ.ಮಾ. ನಾಯಕರ ಮಾತು ಹಾಗೂ ಕನ್ನಡ ಕೇವಲ ಕೊರಳಿನ ಕೂಗಾಗದೆ ಕರುಳಿನ ಕೂಗಾಗಲಿ ಎಂದು ಹೇಳಿದ ಬರಗೂರರ ಮಾತುಅಂಗೈ ಸಾಕ್ಷಿಯಾಗಲಿ, ಸತ್ಯವಾಗಲಿ, ನಿತ್ಯವಾಗಲಿ, ನಾಡ ಭಾಷೆ ಬದುಕಿಗಿಂತ ದೊಡ್ಡದಾಗಲಿ.