ಬಲಪಂಥೀಯ ಸಾಹಿತಿಗಳಿಗೆ ಧ್ವನಿಯಿಲ್ಲವೇನು ?
ಸಂತೋಷಕುಮಾರ ಮೆಹೆಂದಳೆ
ಪರಿಷ್ಕೃತ ಪಠ್ಯಪುಸ್ತಕವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡುವುದು ಅಸಾಧ್ಯವೆಂದು ಅನ್ನಿಸಿದಾಕ್ಷಣ ಹಳೆಯ ಪೋಸ್ಟೊಂದನ್ನು ಕೆದಕುವ ಮೂಲಕ ತಲೆದಂಡಕ್ಕೆ ಸೂಕ್ತವೆನಿಸುವ ಟೂಲ್‌ಕಿಟ್ ನಿರ್ಮಿಸಿರುವ ಟ್ವಿಸ್ಟ್‌ನಲ್ಲಿರುವ ಮಜಾ ನೋಡಿ. ಈ ಸಾಹಿತಿಗಳ ರಾಜೀನಾಮೆ ಪ್ರಕರಣದಿಂದ ಏನಾದರೂ ವ್ಯತ್ಯಾಸವಾಗುತ್ತದಾ? ಇವರನ್ನು ಯಾವು ದಾವುದೋ ಸಮಿತಿಯಲ್ಲಿ ಇಟ್ಟು ಸರಕಾರ ಸಾಕುತ್ತಿದೆಯಲ್ಲ, ಇಲ್ಲ ಇವರು ಮಾಡಿರುವ ಸಾಧನೆಯ ಲಿಸ್ಟ್ ಏನಾದರೂ ಇದೆಯಾ? ಉತ್ತರ ಅತ್ಲಾಗಿರಲಿ.
ಈ ರೇಂಜಿಗೆ ಈ ಎಡಬಿಡಂಗಿಯರೆಲ್ಲ ಬ್ರಾಹ್ಮಣನೆಂಬ ಕಾರಣಕ್ಕೆ ರೋಹಿತ್ ಚಕ್ರತೀರ್ಥ ಮೇಲೆ ಎಗರೆಗರಿ ಬೀಳುವಾಗ, ಉಳಿದ, ಬ್ರಾಹ್ಮಣ್ಯವನ್ನೇ ಹಾಸು ಹೊದ್ದ ಬಲಪಂಥೀಯ ಪ್ರಕಾಶಕರು, ಲೇಖಕರು, ಉದ್ಧಾಮ ಸಾಹಿತಿಗಳು, ಓದುಗರು, ನಾಲ್ಕಾರು ಪುಟ ಓದಿ ಅದೇ ಮಹತ್ಸಾಧನೆ ಎಂದು ದಿನಕ್ಕೊಂದು ಪೋಸ್ಟು ಹಾಕುವವರು, ಹಾಗಿದ್ದವರಿಗೂ ಬಕೇಟು ಇಡುವ ಮಾರಾಟಗಾರರ, ಪದ್ಮಶ್ರೀ ಇತ್ಯಾದಿ ಪ್ರಶಸ್ತಿವರೆಗೂ ಈ ಸರಣಿ ಬರುತ್ತದೆ. ಇವರೆಲ್ಲ ಏನು ಮಾಡುತ್ತಿದ್ದಾರೆ.
ಹೋಗಲಿ, ಇದೆಲ್ಲ ನೋಡಿಯೂ, ತಾವೂ ಸಾಕಷ್ಟು ಈ ಎಬುಜೀಗಳ ಕಿರಿಕಿರಿ ಅನುಭವಿಸಿಯೂ ಈ ಬಲ ಪಂಥೀಯ ಸಾಹಿತಿಗಳು ರೋಹಿತ್ ಬಗ್ಗೆ ಇವತ್ತು ಯಾವುದು ಸರಿ, ಯಾವುದು ಸತ್ಯ ಎಂಬ ಒಂದು ಪತ್ರಿಕಾ ವರದಿ ಬಿಡುಗಡೆ ಅಥವಾ ಹೇಳಿಕೆ ಕೊಡದಷ್ಟು ತೆಪ್ಪಗೆ ಕುಳಿತಿದ್ದೇಕೆ? ಸಂಸದ ಪ್ರತಾಪ ಸಿಂಹ ಹೊರತು ಪಡಿಸಿದರೆ ಉಳಿದೆಲ್ಲರ ಮಂಡೆಗಳು ಯಾವ ಟೋಪಿಯಡಿಗೆ ಸಿಲುಕಿವೆ? ಈ ಒಂದೇ ವಿಷಯದಲ್ಲಿ ಮಾತ್ರವಲ್ಲ.
ಬಲಪಂಥೀಯ ಸಾಹಿತಿಗಳು ಯಾವತ್ತೂ ಇಂಥ ಹೊತ್ತಲ್ಲಿ ಹೇಳಿಕೆ ಕೊಡುವ ಮೂಲಕ ರಾಷ್ಟ್ರೀಯ ಹಿತಾಸಕ್ತಿ ಕಾಯುವ ಬರಹಗಾರರ ಬೆನ್ನಿಗೆ ನಿಂತಿಲ್ಲ. ಕೇವಲ ಓದುಗರೇ ಇವರನ್ನೆಲ್ಲ ಮಹಾನ್ ಮಾಡಿದರು. ಯಾವುದೋ ಸಂದರ್ಭದಲ್ಲಿ ಹೇಳಿ ಕಳುಹಿಸಿದಂತೆ ಕೆಲವು ಪತ್ರಿಕಾ ಗೋಷ್ಠಿಗಳನ್ನು ಇವರು ಮಾಡಿದ್ದರ ಹೊರ ತಾಗಿ ಅಗತ್ಯದ ಸಂದರ್ಭದಲ್ಲಿ ಈ ಬಲಪಂಥೀಯ ಸಾಹಿತಿಗಳು ವಹಿಸಿದ ಮುಂದಾಳತ್ವದ ಪಾತ್ರ ಅಷ್ಟಕ್ಕಷ್ಟೆ ಎಂದರೆ ತಪ್ಪಾಗಲಾರದು.
ಹೀಗಾಗೇ ಎಬುಜಿಗಳ ಪಾಲಿಗೆ ಬರಗೂರು ರಾಮಚಂದ್ರಪ್ಪ ನವರು ಆಚಾರ್ಯನ ಸ್ಥಾನದಲ್ಲಿದ್ದಾರೆ ಮತ್ತು ಯಾರೇ ಹೋದರೂ ನಡೆಸಿಕೊಳ್ಳುವ ಬರಗೂರರ ಗೌರವಯುತ ನಡವಳಿಕೆಯ ಬಗ್ಗೆ ನನಗೆ ಇವತ್ತಿಗೂ ಗೌರವವಿದೆ. ಕಾರಣ ತಮ್ಮ ಸಿದ್ಧಾಂತ ಮತ್ತು ನಂಬಿಕೆಗಳ ಬೆಳವಣಿಗೆ ಹಾಗೂ ಉಳಿಕೆಗಾಗಿ ಬರಗೂರರುಅತ್ಯಂತ ಕಾಳಜಿಯಿಂದ ಫೀಲ್ಡಿಗೆ ಇಳಿಯುತ್ತಾರೆ. ಬಂದಿರುವ ಅತಿಥಿ ಯಾರೇ ಆಗಿರಲಿ ಅವರನ್ನು ತಮ್ಮ ಪಂಥ ಅಥವಾ ಸಿದ್ಧಾಂತವನ್ನು ಒಪ್ಪಿಕೊಳ್ಳುವಂತೆ ಮಾಡುವ ಕಲೆ ಮತ್ತು ಬುದ್ಧಿವಂತಿಕೆ ಜತೆಗೆ ಸಾಹಿತ್ಯದ ವಿಚಾರದಲ್ಲಿ ತಮ್ಮತನವನ್ನು ಬಿಡದೆ ಬಂದವರ ಅಂತಸ್ತನ್ನು ನೋಡದೆ ಗೌರವಿಸಿಯೇ ವ್ಯವಹರಿಸುವ ಮಾತುಕತೆ ಮತ್ತು ನೀಡುವ ಬೆಂಬಲ ಮೆಚ್ಚತಕ್ಕದ್ದೇ.
ಆ ಮಟ್ಟಿಗೆ ನಾನು ಹಲವು ಸಂದರ್ಭದಲ್ಲಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದೇನೆ. ಅದೇ ಹತ್ತು ಪುಸ್ತಕ ಬರೆದು ಕೂತಿರುವ ಇವತ್ತಿಗೂ ದಶಕದಿಂದ ಬರೆಯದೇ ಇರುವ ಕೆಲವು ಸಾಹಿತಿಗಳಿಗೆ ವಾಟ್ಸ್‌ಆಪ್ ಮಾಡಿದರೆ ಉತ್ತರವೇ ಕೊಡದ ಮುಖೇಡಿತನದೆದುರಿಗೆ ಸಹಜವಾಗೇ ಬರಗೂರರು ಹೊಸ ಬರಹಗಾರರ ಪಾಲಿಗೆ ಡಾರ್ಲಿಂಗ್ ಆಗುತ್ತಾರೆ. ಅದರಲ್ಲಿ ತಪ್ಪೇನಿದೆ ಹೇಳಿ. ಬೆಳೆದ ಮರವೊಂದು ಆಶ್ರಯ ಕೊಡದಿದ್ದರೆ ಸಸಿ ಸತ್ತೇ ಹೋಗುತ್ತದೆ. ಇಂಥಾ ಮುಂದಾಳತ್ವ ಇಲ್ಲದ, ಕೇವಲ ಹೇಳಿ ಕಳುಹಿಸಿದಾಗ ಮಾತ್ರ ಮಾಡುವ ಪತ್ರಿಕಾಗೋಷ್ಠಿ ಯಾವ ಬಲಪಂಥೀಯರನ್ನು ಬದುಕಿಸೀತು? ಇನ್ನಾದರೂ ಕನ್ನಡದ ಇಂಥ ಸುಖ ನಿದ್ರೆಯ ಸಾಹಿತಿಗಳು ಎದ್ದೇಳದಿದ್ದರೆ ರೋಹಿತ್ ಮಾತ್ರವಲ್ಲ ನಾಳೆ ಅಆಇಈ ಬರೆಯುವುದಕ್ಕೂ ಇವರೆಲ್ಲರ ಪರ್ಮಿಶನ್ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದೀತು.
ಅಷ್ಟಕ್ಕೂ ಕನ್ನಡಿಗರ ಲೆಕ್ಕ ತಪ್ಪಿದ ಪ್ರೀತಿ ಅನೇಕ ಬಲಪಂಥೀಯ ಸಾಹಿತಿಗಳಿಗೆ ದಕ್ಕಿದೆ ಎನ್ನುವುದು ಸುಳ್ಳಲ್ಲ. ಅಗತ್ಯ ಬಿದ್ದಾಗ ಮತ್ತು ಅಪರೂಪಕ್ಕೊಮ್ಮೆ ಇಂಥಾ ಬದಲಾವಣೆ ವ್ಯವಸ್ಥೆಯಲ್ಲಿ ಬಂದಿರುವಾಗ, ಬಲಚಿಂತನೆಯುಳ್ಳ ಬರಹಗಾರರಿಗೆ ಬೇಕಾದ ಬೆಂಬಲವನ್ನು ಇವರು ನೀಡದಿದ್ದರೆ, ಎಷ್ಟು ಬರೆದೇನು ಪ್ರಯೋಜನ?ನಿಜವಾಗಿಯೂ ಅಗತ್ಯವಿದ್ದಾಗ ಇತರರು ಎಚ್ಚರಗೊಳಿಸುವ ಮೊದಲೇ ಈ ಸಾಹಿತಿಗಳ ವಂಧಿ ಮಾಗಧರಾದರೂ ಅವರನ್ನು ಎಬ್ಬಿಸಿ ಒಂದು ಪತ್ರಿಕಾ ಪ್ರಕಟಣೆ/ನೈಜ ವಿಷಯ ವಿದ್ಯಮಾನಕ್ಕೆ ಬೆಂಬಲ/ಆಗಿರುವುದರ ಬಗ್ಗೆ ಕೂಲಂಕಶ ವಿವರ ಕೊಡಿಸಬಹುದ್ದಿತ್ತಲ್ಲ.
ಹೀಗೆ ಮಾಡಿದ್ದಿದ್ದರೆ ರಾಷ್ಟ್ರೀಯ ಹಿತಾಸಕ್ತಿಗೆ ಬೆಂಬಲಿಸುವ ಮತ್ತು ಹಿತಾಸಕ್ತಿಯ ಆಯ್ಕೆಯ ಬರಹಗಾರರಿಗೆ ಬಲ ಬರುತ್ತಿತ್ತು. ಇಂಥ ಪೋಷಣೆಯ ಕೆಲಸವನ್ನು ಎಲ್ಲ ಎಡ ಚಿಂತನೆಯುಳ್ಳ ಸಾಹಿತಿಗಳು ಮಾಡುವ ಕಾರಣಕ್ಕೆ ಅವರ ಕಡೆಗೆ ಲೆಕ್ಕ ತಪ್ಪಿದ ಸಂಖ್ಯೆಯಲ್ಲಿ ಬರಹಗಾರರು ಜಮೆಯಾಗುತ್ತಿದ್ದಾರೆ. ಈ ಬಲಪಂಥೀಯ ರಿಗೆ ಭರ್ತಿ ನಿದ್ದೆ.
ವೇದಿಕೆ ಮತ್ತು ಸನ್ಮಾನ ಅಥವಾ ಹೆಸರು ಇರುತ್ತದಾದರೆ ಮಾಡುತ್ತಿದ್ದರೇನೋ? ಆದರೆ ದೆಲ್ಲ ಮಾಡಿದರೆ ವೇದಿಕೆ ಮೇಲೆ ಬರೀ ಈ ದೊಡ್ಡ ದೊಡ್ಡ ಸಾಹಿತಿಗಳ ಹೆಸರೇ ಇರುತ್ತದೆ ಮತ್ತು ತಮಗೇನೂ ಗಿಟ್ಟುವುದಿಲ್ಲ ಎಂಬ ಅನಿಸಿಕೆ ಕೂಡ ಒಳಗೊಳಗೆ ಎದೆಗುದಿಯಾಗಿರಬೇಕು. ಯಾವ ಸಕಾರಣವೂ ಇಲ್ಲದೆ ರೋಹಿತ್‌ರನ್ನು ಈ ಟೂಲ್ ಕಿಟ್‌ಗಳು ಬಲಿ ಪಡೆದಿದ್ದೇ ಆದರೆ ಮುಂದೊಮ್ಮೆ ಕನ್ನಡ ಸಾಹಿತ್ಯ ಮತ್ತು ಪುಸ್ತಕ ಇತ್ಯಾದಿ ಶುದ್ಧೀಕರಣದ ಕಾರ್ಯ ಅಥವಾ ಇನ್ನಾವುದೇ ಕಾರ್ಯ ದಲ್ಲೂ ಪ್ರಾಮಾಣಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಾಯ್ದುಕೊಳ್ಳುವ ಕಾರ್ಯವನ್ನು ಮಾಡಲು ದೇವ್ರಾಣೆ ಇನ್ಯಾವನೂ ಧೈರ್ಯ ಮಾಡಲಿಕ್ಕಿಲ್ಲ.
ಅದಾಗುವ ಮೊದಲು ಘಟಾನುಘಟಿ ಬಲಪಂಥೀಯ ಸಾಹಿತಿಗಳು ಅಖಾಡಕ್ಕಿಳಿದಾರೆಯೇ? ಬಲಪಂಥೀಯ ಕುಂಭಕರ್ಣರು, ಓದಿನ ಶೂರರು, ಮಾರುಕಟ್ಟೆಗಾಗಿ ಬಲಪಂಥ ಸಾಹಿತ್ಯ ನಂಬಿ ಚಲಾಯಿಸುವವರು, ಒಂದೊಪ್ಪತ್ತಿಗೆ ಈ ಸಾಹಿತಿಗಳ ವಂಧಿಮಾಗಧರಾಗಿ ಅವರ ಬೆಂಬಲದಿಂದಲೇ ಲೇಖಕರಾದವರು ಮತ್ತು ಅಂಕಣಕಾರರಾಗಿ ಚಲಾವಣೆಗೆ ಬಂದವರೆಲ್ಲ ಬಾಯಲ್ಲಿ ಅದ್ಯಾವ ಕಡಬು ಇಟ್ಟುಕೊಂಡಿದ್ದೀರಿ? ಘಟಾನುಘಟಿ ಬಲಪಂಥೀಯ ಸಾಹಿತಿಗಳೆಲ್ಲ ಅಖಾಡಕ್ಕಿಳಿಯುವ ಮನಸ್ಸು ಮಾಡಿದರೆ ಪರಿಸ್ಥಿತಿ ಮತ್ತು ಚಿತ್ರಣ ಎರಡೂ ಬದಲಾಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಎಬ್ಬಿಸಬೇಕಾದ ಸಾಹಿತ್ಯ ಲೋಕದ ಪ್ರಭುತಿ ಗಳಿಗೆ ಭರ್ತಿ ನಿದ್ದೆ.