ಪ್ರಶಸ್ತಿ ವಾಪ್ಸಿ ಮನಸ್ಥಿತಿಯವರಿಂದಲೇ ಪಠ್ಯ ವಿವಾದ
ಪಠ್ಯದಲ್ಲಿ ಸತ್ಯ ಇರಬೇಕು, ಐಡಿಯಾಲಜಿಗಳಲ್ಲ
ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಮಾಡುವ ಪರಂಪರೆ ಇಂದು ನಿನ್ನೆಯದ್ದಲ್ಲ: ಸಾಹಿತಿ ಎಸ್.ಎಲ್.ಭೈರಪ್ಪ
ಅಭಿಪ್ರಾಯ
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಪಠ್ಯದಲ್ಲಿ ಸತ್ಯ ಇರಬೇಕೇ ಹೊರತು, ಐಡಿಯಾಲಜಿಗಳು ಇರಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಾನು ಲೇಖಕ, ಯಾವುದೇ ಕಾರ್ಯಕರ್ತ ಅಲ್ಲ. ಪಠ್ಯ ಪುಸ್ತಕದಲ್ಲಿ ಪ್ರಾಮಾಣಿಕವಾದದ್ದು ಯಾವುದು ಎಂಬು ದರ ಬಗ್ಗೆ ಲೇಖಕನಿಗೆ ಅರಿವಿರಬೇಕು ಎಂದ ಅವರು, ಈಗಿನ ಸನ್ನಿವೇಶವನ್ನು ಹಿಂದೆ ನಡೆದ ಪ್ರಶಸ್ತಿ ವಾಪಸಿ ಚಳವಳಿಗೆ ಹೋಲಿಸಿದರಲ್ಲದೇ ಇಂಥವು ಹೊಸದೇನಲ್ಲ. ಹಿಂದೆಯೂ ಬೇರೆ ಬೇರೆ ಸ್ವರೂಪದಗಲಾಟೆ ಗಳನ್ನು ಮಾಡಿಸಿದ್ದರು. ಮುಂದೆಯೂ ಮಾಡಿಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಕಾಲ ದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದರು. ಇದಕ್ಕೂ ಮೊದಲು ಇಂದಿರಾಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಕಾಲಕಾಲಕ್ಕೆ ಪಠ್ಯ ಪರಿಷ್ಕರಣೆ ಆಗಬೇಕಾದುದು ಸಹಜ ಪ್ರಕ್ರಿಯೆ. ಆದರೆ ಯಾರೇ ಪರಿಷ್ಕರಣೆಗೆ ಮುಂದಾದರೂ ಸತ್ಯವನ್ನು ಬೋಽಸಲು ಮುಂದಾಗಬೇಕು. ಬದಲಾಗಿ ಅದು ಯಾವುದೇ ಸಿದ್ಧಾಂತದ ಆಧಾರವಾಗಿರಬಾರದು ಎಂದು ಅಭಿಪ್ರಾಯಪಟ್ಟರು.
ಕಿಕ್ಕಿರಿದು ತುಂಬಿದ್ದ ಪತ್ರಕರ್ತರ ಸಮೂಹದ ಎದುರು ಗುರುವಾರ ಮಾತನಾಡಿದ ಅವರು, ತಾವು ಪತ್ರಿಕಾಗೋಷ್ಠಿಯನ್ನು ನಡೆಸುತ್ತಿಲ್ಲ. ಪತ್ರಿಕಾ ಹೇಳಿಕೆನೀಡುತ್ತಿರುವುದಾಗಿ ಸ್ಪಷ್ಟಪಡಿಸಿಯೇ ಮಾತು ಆರಂಭಿಸಿದರು. ಇಂದಿರಾ ಕಾಲದಲ್ಲೇ ದೇಶದಲ್ಲಿ ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಎನ್‌ಸಿಇಆರ್‌ಟಿ ಮೂಲಕ ತಿರುಚಿದ ಇತಿಹಾಸವನ್ನು ಅಳವಡಿಸಲು ಮುಂದಾಗಲಾಗಿತ್ತು. ನೆಹರು ಕುಟುಂಬಕ್ಕೆ ಆಪ್ತರಾಗಿದ್ದ ಪಾರ್ಥಸಾರಥಿ ನೇತೃತ್ವದ ಸಮಿತಿಯನ್ನು ರಚಿಸಿದ್ದು ನಾನೂ ಸಮಿತಿಯ ಸದಸ್ಯರಾಗಿದ್ದೆ ಎಂದು ಭೈರಪ್ಪ ನೆನಪಿಸಿಕೊಂಡರು.
ಇಂದು -ನಿನ್ನೆಯದಲ್ಲ:ಕಾಶಿಯಲ್ಲಿ ಔರಂಗಜೇಬ್‌ನ ದೌರ್ಜನ್ಯ, ಹಿಂದೂ ದೇವಾಲಯಗಳ ಮೇಲಿನ ದಾಳಿಯಂಥ ವಿಷಯಗಳು ಪಠ್ಯದಲ್ಲಿರುವ ಔಚಿತ್ಯವನ್ನು ಪ್ರಶ್ನಿಸುತ್ತಲೇ ಆರಂಭವಾದ ಸಮಿತಿಯ ಸಭೆ ಯಲ್ಲಿ ಇಂಥವನ್ನೆಲ್ಲ ತೆಗೆದು ‘ಪಠ್ಯವನ್ನು ಸ್ವಚ್ಛಗೊಳಿಸುವ ಇಂಗಿತವನ್ನು ಅಧ್ಯಕ್ಷರು ವ್ಯಕ್ತಪಡಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸತ್ಯವನ್ನಷ್ಟೇ ಹೇಳಬೇಕು ಎಂದಿದ್ದಕ್ಕೆ ನನ್ನನ್ನು ಪರಿಷ್ಕರಣೆ ಸಮಿತಿಯಿಂದಲೇ ಹೊರಗಿಟ್ಟರು. ಕೊನೆಗೆ ಆವತ್ತಿನ ಕಾಂಗ್ರೆಸ್ ಸರಕಾರ ತನಗೆ ಬೇಕಾದ, ಪಕ್ಕಾ ಕಮ್ಯೂನಿಸ್ಟ್ ಸಿದ್ಧಾಂತದ ವ್ಯಕ್ತಿಗಳನ್ನು ಮಾತ್ರ ಸಮಿತಿಗೆ ನೇಮಿಸಿಕೊಂಡು ಪಠ್ಯ ಪರಿಷ್ಕರಣೆ ಮಾಡಿತ್ತು. ಬಹುತೇಕ ಕಾಂಗ್ರೆಸ್ ಆಡಳಿತದಲ್ಲಿದ್ದರಾಜ್ಯಗಳು ಅದೇ ಪಠ್ಯವನ್ನು ಒಪ್ಪಿಕೊಂಡು ಅಳವಡಿಸಿಕೊಂಡವಲ್ಲದೇ, ಈವರೆಗೂ ಅದೇ ಪಠ್ಯ ಸಂಪ್ರದಾಯ ಮುಂದುವರಿದಿದೆ ಎಂದು ವಾಗ್ದಾಳಿ ನಡೆಸಿದರು.ಆ ಬಳಿಕ ವಾಜಪೇಯಿ ಸರಕಾರ ಬಂದಾಗ ಇಂಥ ಕಾಂಗ್ರೆಸ್ ಪ್ರೇರಿತ ಪಠ್ಯವನ್ನು ಬದಲಿಸಿ, ದೇಶದ ವಾಸ್ತವ ಇತಿಹಾಸವನ್ನು ಪಠ್ಯದಲ್ಲಿ ಪುನರ್ ಸ್ಥಾಪಿಸಲುಮುಂದಾಗಿತ್ತು. ಆದರೆ, ಇದನ್ನು ವಿರೋಧಿಸಿ ಏಕಾಏಕಿ ದೇಶಾದ್ಯಂತ ಗಲಾಟೆ ಎಬ್ಬಿಸಲಾರಂಭಿಸಿದರು.
***
ದುರದೃಷ್ಟಕ್ಕೆ ಕೇಂದ್ರದ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಪೂರ್ಣ ಬಹುಮತ ಇರಲಿಲ್ಲ. ಪರಿಣಾಮ, ಅನಿವಾರ್ಯವಾಗಿ ಪಠ್ಯ ಪರಿಷ್ಕರಣೆಯನ್ನು ನಿಲ್ಲಿಸಬೇಕಾಯಿತು ಎಂದು ಬೈರಪ್ಪ ವಿಷಾದಿಸಿದರು. ದೇಶದಲ್ಲಿ ಒಂದು ವರ್ಗದಿಂದ ಸದಾ ಎಡಪಂಥೀಯ ಮನೋಭಾವದ ‘ಸಾಹಿತಿಗಳು, ಚಿಂತಕರು’ ಎನಿಸಿಕೊಂಡವರಿಂದ ಈ ರೀತಿ ಹುಯಿಲೆಬ್ಬಿಸುವ ಕೆಲಸ ಆಗುತ್ತಲೇ ಇದೆ. ಇಂಥದ್ದೇ ಗುಂಪೊಂದು ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಅದರಿಂದ ಅವರು ಗಳಿಸಿದ ಜನಪ್ರಿಯತೆಯನ್ನು ಸಹಿಸದೇ ‘ಪ್ರಶಸ್ತಿ ವಾಪಸಿ ಹೆಸರಿನಲ್ಲಿ ಗದ್ದಲ  ಆರಂಭಿಸಿ ಗೊಂದಲ ಹುಟ್ಟುಹಾಕಲು ಮುಂದಾದರು.
ನಿಜವಾಗಿ ಇದೊಂದು ಕೀಳು ಅಭಿರುಚಿಯ ಪ್ರಚಾರ ತಂತ್ರ. ಆ ಸಂದರ್ಭದಲ್ಲಿ ಹೀಗೆ ಪ್ರಶಸ್ತಿ ವಾಪಸು ಕೊಟ್ಟಿದ್ದನ್ನು ತೆಗೆದುಕೊಳ್ಳಿ. ಮಾತ್ರವಲ್ಲ, ಪ್ರಶಸ್ತಿ ಜತೆಗೆ ತೆಗೆದುಕೊಂಡ ಹಣವನ್ನೂ ವಾಪಸು ಪಡೆಯಲು ಸರಕಾರಕ್ಕೆ ಸೂಚಿಸಿದ್ದೆ. ಇದೀಗ ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರ ದಲ್ಲಿ ತಮ್ಮ ಪಾಠವನ್ನು ತೆಗೆಯುವಂತೆ ಗದ್ದಲ ಎಬ್ಬಿಸುತ್ತಿರುವವರು ಸಹ ಇದೇ ಮನಃಸ್ಥಿತಿಯವರು. ಅಂದಿನಿಂದಲೂ ತಮ್ಮ ಹಿತಾಸಕ್ತಿ ರಕ್ಷಣೆಗೋಸ್ಕರ ಬೇರೆ ಬೇರೆ ರೂಪದಲ್ಲಿ ಗಲಾಟೆ ಮಾಡಿಸುತ್ತ, ಮಾಡುತ್ತಲೇ ಇದ್ದಾರೆ. ಮುಂದೆಯೂ ಇಂಥ ಗದ್ದಲ ಮಾಡಿಸುತ್ತಲೇ ಇರುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ಪ್ರಜಾಪ್ರಭುತ್ವಕ್ಕಾಗಿ ಚುನಾವಣೆಗಳು ನಡೆಯಬೇಕು. ಆದರೆ. ಚುನಾವಣೆಗಳು ಪ್ರಜಾಪ್ರಭುತ್ವವನ್ನೇ ನುಂಗಿ ಹಾಕುತ್ತಿವೆ. ಚುನಾವಣೆ ಸಮೀಪಿಸುತ್ತಿದೆ ಎಂದರೆ ಏನು ಬೇಕಾದರೂ ಮಾಡುತ್ತೇವೆ. ಹೆತ್ತ ತಾಯಿಯ ಜುಟ್ಟು ಹಿಡಿದುಕೊಟ್ಟು ಬಿಡುತ್ತೇವೆ ಎನ್ನುವ ಮನಃಸ್ಥಿತಿಗೆ ತಲುಪಿದ್ದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಂಗಾಯಣ ವಿವಾದದಲ್ಲೂ ಇವರೇ:ಎಡಪಂಥೀಯರ ವಾರೀಸುದಾರಿಕೆ ಎಂಬಂತಾಗಿದ್ದ ರಂಗಾಯಣದ ಸಂಸ್ಥೆಯಲ್ಲಿನ ಬದಲಾವಣೆ ಸಹಿಸದ ಒಂದು ವರ್ಗ ನಡೆಸಿದ ಪ್ರತಿಭಟನೆಯ ಪ್ರಸ್ತಾಪಿಸಿದ ಭೈರಪ್ಪವನರು, ಟಿಪ್ಪು ಕೊಡಗಿ ನಲ್ಲಿ ಏನು ಮಾಡಿದ ಅನ್ನೋದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಗೊತ್ತಿದೆ, ಅವರು ಸಹ ಕೊಡಗಿನವರೇ. ಟಿಪ್ಪು ಎಷ್ಟು ಜನ ಕೊಡವರನ್ನು ಹತ್ಯಗೈದಿದ್ದಾನೆ; ಎಷ್ಟು ಮಂದಿಯನ್ನು ಬಲವಂತದಿಂದ ಮತಾಂತರ ಮಾಡಿದ ಎಂಬುದೆಲ್ಲ ಈಗ ಗೊತ್ತಾಗಿದೆ. ಈ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದರು ಎಂಬ ಕಾರಣಕ್ಕೆ ಕಾರ್ಯಪ್ಪ ಅವರನ್ನು ಹಿಂದಿನ ನಿರ್ದೇಶಕರು ಸಹಿಸಲಿಲ್ಲ. ಅವರ ವಿರುದ್ದವೇ ಒಂದಷ್ಟು ಮಂದಿಯನ್ನು ಎತ್ತಿಕಟ್ಟಿ, ತಿರುಗಿ ಬಿದ್ದರು. ಮುಖ್ಯಮಂತ್ರಿಗೆ ಪತ್ರವನ್ನೂ ಬರೆದರು.
‘ಚಳವಳಿ ಹೆಸರಿನಲ್ಲಿ ಭಾರೀ ಕೂಗಾಟ ಆರಂಭಿಸಿದ್ದರು. ಆದರೆ ಯಾವಾಗ ಇವರ ಉದ್ದೇಶ ಹಾಗೂ ಬಂಡವಾಳ ಬಯಲಾಗತೊಡಗಿತ್ತೋ, ಸ್ವಲ್ಪ ದಿನಗಳ ನಂತರ ಎಲ್ಲರೂ ಸುಮ್ಮನಾದರು. ಕಾವ್ಯ, ಕಾದಂಬರಿ ಹೇಗೆ ರಸಾನುಭವವೋ ಹಾಗೆಯೇ ನಾಟಕ ಕೂಡ ರಸಾನುಭವ. ಅಡ್ಡಂಡ ಕಾರ್ಯಪ್ಪ ಅವರನ್ನು ತೆಗೆದು ಹಾಕಲು “ಚಳವಳಿ ಮಾಡಿದವರಿಗೆ ಸಾಧ್ಯ ಆಗಲಿಲ್ಲ. ಸರಕಾರ ಗಟ್ಟಿ ಇತ್ತು. ಹಿಡಿದ ಪಟ್ಟನ್ನು ಸಡಿಲಿಸಲಿಲ್ಲ. ಕಾರಣ ಏನೂ ಮಾಡಲಾಗಲೇ ಇಲ್ಲ. ಟಿಪ್ಪು ವಿಚಾರ ಬಂದಾಗಲೆಲ್ಲ ಮುಸ್ಲೀಮರಿಗಿಂತ ಎಡಪಂಥೀಯರೇ ಹೆಚ್ಚು ಮಾತನಾಡುತ್ತಾರೆ. ಇದರ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬಹುದು. ಈಗಲೂಟಿಪ್ಪುವಿನ ವೈಭವೀಕರಣ ತಡೆದದ್ದೇ ಪಠ್ಯ ವಿವಾದ ಎಬ್ಬಿಸಲು ಕಾರಣ ಎಂದು ಟೀಕಿಸಿದರು.
ಭಾರತವನ್ನು ಇಸ್ಲಾಂ ದೇಶವಾಗಿಸಲು ಹೊರಟಿದ್ದವದೇಶ ಭಕ್ತ ಹೇಗಾದಾನು?:ಟಿಪ್ಪು ಅಫ್ಘಾನಿಸ್ಥಾನದ ಸುಲ್ತಾನನಿಗೆ ಪತ್ರ ಬರೆದು ಭಾರತವನ್ನು ಇಸ್ಲಾಂ ದೇಶವಾಗಿ ಪರಿವರ್ತಿಸಲು ನೆರವು ಕೋರಿದ್ದ. ಈ ಬಗೆಗಿನ ಉಲ್ಲೇಖ ಸ್ಪಷ್ಟವಾಗಿ ಪತ್ರದಲ್ಲಿದೆ. ಆದರೆ, ಯಾರೂ ಏಕೆ ಇದನ್ನು ಹೇಳುವುದಿಲ್ಲ. ಇಂಥವನನ್ನು ಮಹಾನ್ ರಾಷ್ಟ್ರಭಕ್ತ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವ ಎಂದು ಚಿತ್ರಿಸಲಾಗುತ್ತಿದೆ. ನಮ್ಮ ರಾಷ್ಟ್ರ ಏಕೆ ಈ ರೀತಿ ಆಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ನೊಂದು ನುಡಿದರು. ಈ ದೇಶದ ಪ್ರಧಾನಿಯಾಗಿದ್ದ ನೆಹರು, ಔರಂಗಜೇಬ್ ಬಗ್ಗೆ ಬರೆಯುತ್ತ ಆತ ಐಡಿಯಲ್ ಮನುಷ್ಯ. ಆದರೆಆತನಿಗೆ ಅತಿರೇಕವಿತ್ತು ಎಂದು ಬರೆಯುತ್ತಾರೆ. ಆದರೆ, ಆ ಅತಿರೇಕ ಏನಾಗಿತ್ತು ಎಂದು ಎಲ್ಲೂ ಹೇಳುವುದಿಲ್ಲ. ಆತ ಹಿಂದೂಸ್ಥಾನದಲ್ಲಿ ಧ್ವಂಸ ಮಾಡಿದ ದೇವಸ್ಥಾನಗಳ ಬಗ್ಗೆ ಮಾತನಾಡಿದರೆ ಕೋಮುವಾದಿ ಅನ್ನುತ್ತಾರೆ. ಪಠ್ಯದಲ್ಲಿ ಸತ್ಯವನ್ನು ಸಾರಲು ಹೋದರೆ ಗಲಾಟೆ ಮಾಡುತ್ತಾರೆ. ಈ ಎಲ್ಲ ವಿಚಾರಗಳಿಗಾಗಿಯೇ ಸರಕಾರದ ಮೇಲೆ ಒತ್ತಡ ಇದ್ದೇ ಇರುತ್ತದೆ. ಅಂಥ ಒತ್ತಡಕ್ಕೆ ಬಗ್ಗಬಾರದು ಎಂದರು.
ರಾಜಕೀಯ ಲಾಭಕ್ಕಾಗಿ ಎಲ್ಲವೂಪ್ರತಾಪ್‌ಗಢ ಹಾಗೂ ಶಿವಾಜಿ ಕಾಲದ ಘಟನೆಗಳನ್ನು ವಿವರಿಸಿದ ಭೈರಪ್ಪನವರು, ಸಂಧಾನದ ನೆಪದಲ್ಲಿ ಶಿವಾಜಿ ಹತ್ಯೆಗೆ ಸಂಚು ನಡೆದಿತ್ತು. ಈ ವೇಳೆ ಬುದ್ಧಿವಂತಿಕೆ ಪ್ರದರ್ಶಿಸಿದ ಶಿವಾಜಿ. ವ್ಯಾಘ್ರನಖದಿಂದ ಬಿಜಾಪುರ ಸುಲ್ತಾನ ಅಫ್ಜಜಲ್ ಖಾನ್‌ನನ್ನು ಹತ್ಯೆ ಮಾಡಿದ್ದ. ನಾವೆಲ್ಲ ಹೈಸ್ಕೂಲು ಓದುವಾಗ ಇದ್ದ ಇತಿಹಾಸದ ಬಗೆಗಿನ ಇಂಥ ಸತ್ಯ ಘಟನೆಗಳ ಪಠ್ಯ ಇದೀಗ ಕಣ್ಮರೆಯಾಗಿವೆ. ಇಂಥ ಐತಿಹಾಸಿಕ ಸತ್ಯ ಎಲ್ಲರಿಗೂ ಗೊತ್ತಿದ್ದದ್ದೇ. ಅದನ್ನು ಮರೆಮಾಚುವ ಕಾರ್ಯ ಈ ದೇಶದಲ್ಲಿ ಆಗಿದೆ. ರಾಜಕೀಯಕ್ಕಾಗಿ ಏನು ಬೇಕಾದರೂ ಮಾಡುವ ಪರಂಪರೆ ಇಂದು ನಿನ್ನೆಯದಲ್ಲ ಎಂದು ಸೂಕ್ಷ್ಮವಾಗಿ ತಿವಿದ ಅವರು, ಅಫ್ಜಜಲ್ ಖಾನ್ ಹತ್ಯೆ ಮಾಡಿದ್ದ ಬಗ್ಗೆ ಅಲ್ಲಿನ ಗೈಡ್ ನನಗೆ ಈ ಮಾಹಿತಿಯನ್ನೇ ಕೊಡಲಿಲ್ಲ. ನಾನು ಐದು ರುಪಾಯಿ ಕೊಟ್ಟ ಮೇಲೆ ಅದನ್ನು ತೋರಿಸಿದ. ಆ ಜಾಗದಲ್ಲಿ ಇಂಥವೆಲ್ಲ ಮಾಹಿತಿಯನ್ನು ಸಾರುವ ದೊಡ್ಡ ಬೋರ್ಡ್ ಇತ್ತು. ಆದರೆ, ಮುಸಲ್ಮಾನರ ಒತ್ತಡದ ಹಿನ್ನೆಲೆಯಲ್ಲಿ ಚುನಾವಣೆಯೊಂದರ ಸಂದರ್ಭದಲ್ಲಿ ಅದನ್ನು ತೆಗೆಸಲಾಯಿತು. ಮಾತ್ರವಲ್ಲ, ಅವರ ಓಲೈಕೆ ಗಾಗಿ ಅಲ್ಲೀಗ ದರ್ಗಾ ಕಟ್ಟಲಾಗಿದೆ. ಇವೆಲ್ಲವೂ ರಾಜಕೀಯ ಲಾಭದ ಭಾಗವೇ. ನಮ್ಮಲ್ಲಿ ಚುನಾವಣೆಗಾಗಿ ಏನು ಬೇಕಾದರೂ ಮಾಡುವ ಸ್ಥಿತಿ ತಲುಪಿದ್ದೇವೆ ಎಂಧು ಅಸಮಾಧಾನ ಹೊರ ಹಾಕಿದರು.
ಸತ್ಯವನ್ನು ಹುಡುಕುಶಿಕ್ಷಣವೆಂದರೆ ಸತ್ಯವನ್ನು ಬೋಽಸುವುದು. ಮಕ್ಕಳಿಗೆ ಕಲಿಸಬೇಕಾದುದು ಸತ್ಯವನ್ನೇ ಹೊರತು ಐಡಿಯಾಲಜಿಗಳನ್ನಲ್ಲ. ಪಠ್ಯವೆಂದರೆ ಸತ್ಯದ ಕಲಿಕೆಯಆಕರವಾಗಬೇಕು. ಯಾವುದು ಪ್ರಾಮಾಣಿಕವಾದು, ಯಾವುದು ಐಡಿಯಲ್ ಟೆಕ್ಸ್ಟ್‌ಬುಕ್ ಅನ್ನೋ ಪ್ರಶ್ನೆ ಬಂದರೆ, ಅದರ ಹಿಂದೆಯೇ ಪ್ರಾಮಾಣಿಕತೆಯಪ್ರಶ್ನೆಯೂ ಉದ್ಭವಿಸುತ್ತದೆ. ಅದಕ್ಕಾಗಿ ಅಧ್ಯಯನ ಅಗತ್ಯ. ಅದರ ಬದಲು ನಮ್ಮಲ್ಲಿ ಪಠ್ಯದ ಹೆಸರಿನಲ್ಲಿ ಐಡಿಯಾಲಜಿಯ ಪೈಪೋಟಿ ನಡೆಯುತ್ತಿದೆ. ಹೀಗೆರಾಜಕೀಯದ ಸಿದ್ಧಾಂತದ ಆಧಾರದಲ್ಲಿ ಪಠ್ಯಗಳನ್ನು ವಿರೋಧಿಸುವ ನಮ್ಮ ಮನೋಭಾವವೇ ಅಪಾಯಕಾರಿ. ಇದರಿಂದ ಮುಂದಿನ ಜನಾಂಗಕ್ಕೆ ನಾವು ಏನುಕೊಟ್ಟಂತಾಗುತ್ತದೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಭೈರಪ್ಪ ಪ್ರತಿಪಾದಿಸಿದರು.
ರೈಲಿಗೂ ಟಿಪ್ಪು ಹೆಸರೇಕೆ?ಟಿಪ್ಪು ಎಕ್ಸ್‌ಪ್ರೆಸ್ ಎಂದು ರೈಲಿಗೂ ಹೆಸರಿಡಲಾಗಿದೆ. ಅದರ ಔಚಿತ್ಯವಾದರೂ ಏನು? ಮುಸ್ಲಿಂ ಸಮುದಾದ ಹೆಸರನ್ನೇ ಇಡಬೇಕೆಂದಾದರೆ ಅಬ್ದುಲ್ ಕಲಾಂ ಹೆಸರನ್ನೇಕೆ ಯಾವುದಕ್ಕೂ ಶಿ-ರಸು ಮಾಡುವುದಿಲ್ಲ? ಟಿಪ್ಪು ಹೆಸರಿನ ರೈಲಿಗೆ ಸಂಸದ ಪ್ರತಾಪಸಿಂಹ ಅವರು ಮೈಸೂರು ಮಹಾರಾಜರ ಹೆಸರು ಇಡಬೇಕು ಅಂದರು. ಆದರೆ, ಅದಕ್ಕೂ ವಿರೋಧ ವ್ಯಕ್ತವಾಯಿತು. ರಾಜಕೀಯ ಕಾರಣಕ್ಕೆ ಆರಂಭದಿಂದಲೂ ಟಿಪ್ಪುವನ್ನು ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ೧೬ ಆವೃತ್ತಿ ಕಂಡಿರುವ ‘ಟಿಪ್ಪುವಿನ ನಿಜ ಸ್ವರೂಪ’ ಎಂಬ ಪುಸ್ತಕದಲ್ಲಿ ವಾಸ್ತವ ಇತಿಹಾಸವನ್ನು ಸವಿವರವಾಗಿ ನೀಡಲಾಗಿದೆ. ಆದರೆ, ಅದನ್ನು ಯಾರೂ ಉಲ್ಲೇಖ ಮಾಡುವುದೇ ಇಲ್ಲ. ಶೃಂಗೇರಿಗೆ ಟಿಪ್ಪು ಅನುದಾನ ಕೊಟ್ಟಿದ್ದೇಕೆ, ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ಘಟನೆ, ಬ್ರಿಟಿಷರು ನಷ್ಟವನ್ನು ಕಟ್ಟಿ ಕೊಡುವಂತೆ ಹೇಳಿದ್ದರಿಂದ ಮಕ್ಕಳನ್ನು ಒತ್ತೆಯಿಟ್ಟದ್ದು, ಮೇಲುಕೋಟೆ ಹತ್ಯಾಕಾಂಡ, ಕೊಡಗಿನ ಹತ್ಯಾಕಾಂಡ ಇತ್ಯಾದಿಗಳೆಲ್ಲವೂ ಆ ಪುಸ್ತಕದಲ್ಲಿ ಸವಿವರವಾಗಿ ಇದೆ. ಇಂಥವೆಲ್ಲ ಇತಿಹಾಸದ ವಾಸ್ತವವನ್ನು ಪಠ್ಯದಿಂದ ಈವರೆಗೆ ಮುಚ್ಚಿಟ್ಟು ದೇಶದ ಮಹಾನ್ ಯೋಧನಂತೆ ವೈಭವೀಕರಣ ಮಾಡಿಕೊಂಡೇ ಬರಲಾಗುತ್ತಿದೆ ಎಂದು ವಿವರಿಸಿದರು.
ನಾಗೇಶ್ ಮನೆಗೆ ಬೆಂಕಿ:ವ್ಯವಸ್ಥಿತ ಕುಕೃತ್ಯಶಿಕ್ಷಣ ಸಚಿವ ನಾಗೇಶ್ ಮನೆ ಮೇಲೆ ದಾಳಿ ವಿಚಾರ ಪ್ರಸ್ತಾಪಿಸಿದ ಭೈರಪ್ಪನವರು, ಅತ್ಯಂತ ವ್ಯವಸ್ಥಿತವಾಗಿ ಇಂಥ ಕೃತ್ಯಕ್ಕೆ ಕೆಲವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದೊಮ್ಮೆ ಸಕಾಲಕ್ಕೆ ಪೊಲೀಸ್ ಇಲ್ಲದಿದ್ದರೆ ರಾಜ್ಯದ ಸಚಿವರೊಬ್ಬರ ಮನೆಯೇ ಸುಟ್ಟು ಹೋಗುತಿತ್ತು. ಸಚಿವ ನಾಗೇಶ್ ಮನೆ ಸುಟ್ಟು ಹಾಕಲೆಂದೇ ಕೆಲವರು ಹೋಗಿದ್ದರು. ಸುಮ್ಮ ಸುಮ್ಮನೆ ಯಾರೋ ಹುಡುಗರು ಇದನ್ನು ಮಾಡುವು ದಿಲ್ಲ. ಇದನ್ನು ಯಾರೋ ಮಾಡಿಸು ತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರಲ್ಲದೆ, ನಮ್ಮ ದೇಶದಲ್ಲಿ ಐಕ್ಯತೆ ಮೂಡುವುದು ಯಾವಾಗ ಎಂದು ಪ್ರಶ್ನಿಸಿದರು.