ವಿಶ್ವಶಾಂತಿ ಕಾಯುವಲ್ಲಿ ವಿಫಲವಾಗುತ್ತಿದೆ ವಿಶ್ವಸಂಸ್ಥೆ
ವಿಶ್ಲೇಷಣೆ
ಸಚ್ಚಿದಾನಂದ ಶೆಟ್ಟಿ
ವಿಶ್ವಸಂಸ್ಥೆ ದೇಶಗಳ ಸಂಸ್ಥೆ. ವಿಶ್ವ ಶಾಂತಿ ಪಾಲನೆ; ದೇಶಗಳ ನಡುವೆ ಉತ್ತಮ ಸಂಬಂಧಗಳನ್ನು ವೃದ್ಧಿಸುವುದು; ವಿಶ್ವದ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಲ್ಲಿ ಸಹಕಾರ ಮತ್ತು ಮಾನವ ಹಕ್ಕುಗಳಿಗೆ ಗೌರವ ನೀಡುವುದು, ಬಡ ದೇಶಗಳು, ದೊಡ್ಡ ದೇಶಗಳು, ಸಣ್ಣ ದೇಶಗಳನ್ನು ಹತ್ತಿರಕ್ಕೆ ತರುವುದು ವಿಶ್ವ ಸಂಸ್ಥೆಯ ಉದ್ದೇಶ.
ಅಮೆರಿಕದ ಅಧ್ಯಕ್ಷರಾಗಿದ್ದ ಪ್ರಾಂಕ್ಲಿನ್ ಡಿ. ರೂಸ್ ವೆಲ್ಟ್ ಮತ್ತು ಬ್ರಿಟನ್ ಪ್ರಧಾನಿಯಾಗಿದ್ದ ವಿನ್ಸೆಂಟ್ ಚರ್ಚಿಲ್‌ರ ಕನಸಿನ ಕೂಸು ವಿಶ್ವಸಂಸ್ಥೆ. ವಿಶ್ವಸಂಸ್ಥೆ ಹುಟ್ಟಿದ್ದೇ ಎರಡನೆಯ ಮಹಾ ಯುದ್ಧ ಕೊನೆಗೊಳ್ಳುತ್ತಿರುವ ಸಮಯದಲ್ಲಿ. ಎರಡನೆಯ ಮಹಾಯುದ್ಧದಲ್ಲಿ ಜರ್ಮನಿ ಮತ್ತದರ ಸ್ನೇಹಿತ ದೇಶಗಳ ಭೀಕರ ದಾಳಿಯ ವಿರುದ್ಧ ಕಕ್ಕಾಬಿಕ್ಕಿಯಾಗುತ್ತಿದ್ದ ಮಿತ್ರ ರಾಷ್ಟ್ರಗಳನ್ನು ಒಗ್ಗೂಡಿಸಿ ಹೋರಾಡಲಿಕ್ಕಾಗಿಯೇ ಆಗಿತ್ತು ಎಂದರೆ ತಪ್ಪಿಲ್ಲ.
1945ರಲ್ಲಿ ಅಧಿಕೃತವಾಗಿ ಜನ್ಮತಾಳಿದ, 77 ವರ್ಷಗಳಷ್ಟು ಸುದೀರ್ಘ ಇತಿಹಾಸವಿರುವ ಈ ಸಂಸ್ಥೆ ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಪೂರ್ತಿ ಸ್ಪಂದಿಸಿಲ್ಲ ಮತ್ತು ಸ್ಪಂದಿಸುತ್ತಲೂ ಇಲ್ಲ. ವಿಶ್ವಸಂಸ್ಥೆ ದೇಶಗಳ ಸಂಸ್ಥೆ. ವಿಶ್ವ ಶಾಂತಿ ಪಾಲನೆ; ದೇಶದೇಶಗಳ ನಡುವೆ ಉತ್ತಮ ಸಂಬಂಧಗಳನ್ನು ವೃದ್ಧಿಸುವುದು; ವಿಶ್ವದ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರ ಮತ್ತು ಮಾನವ ಹಕ್ಕುಗಳಿಗೆ ಗೌರವ ನೀಡುವುದು, ಬಡ ದೇಶಗಳು, ದೊಡ್ಡ ದೇಶಗಳು, ಸಣ್ಣ ದೇಶಗಳನ್ನು ವಿಶ್ವಂಸ್ಥೆಗೆ ಹತ್ತಿರ ತರುವುದು; ಒಂದು ದೇಶ ಇನ್ನೊಂದು ದೇಶದ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಲಪ್ರಯೋಗ ಮಾಡದಿರುವುದಕ್ಕೆ ಹಾಗೂ ಭಯ ಹುಟ್ಟಿಸುವುದನ್ನು ತಡೆಯುವುದೇ ಇದರ ಪ್ರಾಮುಖ ಗುರಿ ಮತ್ತು ಧೋರಣೆ.
ಇಲ್ಲಿಯವರೆಗೆ ಯಾವ ಯುದ್ಧವನ್ನೂ ವಿಶ್ವಂಸ್ಥೆ ತಡೆದಿಲ್ಲ. ಯಾವ ಸರ್ವಾಧಿಕಾರಿಯನ್ನೂ ಮಣಿಸಿಲ್ಲ. ಮಾನವ ಹಕ್ಕುಗಳನ್ನು ಕಾಪಾಡಿಲ್ಲ. ಹೀಗೆಯೇ ಮುಂದು ವರಿದರೆ ಒಂದನೆಯ ಮಹಾಯುದ್ಧದ ನಂತರ ಶಾಂತಿ ಕಾಪಾಡಲು ಹುಟ್ಟಿ, ಕೊನೆಗೂ ಸೋತು, ಎರಡನೆಯ ಮಹಾಯುದ್ಧದ ಆರಂಭದಲ್ಲಿ ಅಂತ್ಯ ಕಂಡ ಲೀಗ್ ಆಫ್ ನೇಷನ್ಸ್‌ನ ಸ್ಥಿತಿ ವಿಶ್ವಸಂಸ್ಥೆಗೂ ಬರಬಹುದು.
ಇದೀಗ ರಷ್ಯಾ ಉಕ್ರೇನ್ ವಶಪಡಿಸಿಕೊಳ್ಳುವ ತನ್ನ ಯತ್ನಕ್ಕೆ ನ್ಯಾಟೋ, ಅಮೆರಿಕ ದೇಶಗಳು ಅಡ್ಡ ಬಂದರೆ ರಷ್ಯಾ ಅಣುಬಾಂಬ್ ಪ್ರಯೋಗಿಸದೇ ಇರಲಾರದು.ರಷ್ಯಾ ಮತ್ತು ಪುಟಿನ್ ಮನಸ್ಥಿತಿ ನೋಡಿದರೆ ಅದು ನ್ಯೂಕ್ಲಿಯರ್ ಬಾಂಬ್ ಬಳಸಲೂ ಹೇಸದು. ಇಂದು ಅಮೆರಿಕದ ಬಳಿಯೂ ರಷ್ಯಾಕ್ಕಿಂತ ಅಧಿಕ ಸಂಖ್ಯೆಯಲ್ಲಿಅಣುಬಾಂಬುಗಳಿವೆ. ಹೆಚ್ಚಿನ ದೊಡ್ಡ ದೇಶಗಳ ಬಳಿಯೂ ಇದೆ. ಒಂದು ದೇಶದಿಂದ ಬಾಂಬ್ ಪ್ರಯೋಗವಾದರೆ ಇತರೆಲ್ಲ ದೇಶಗಳಿಗೆ ಬಾಂಬ್ ಪ್ರಯೋಗಕ್ಕೆ ಸಮ್ಮತಿ ಸಿಕ್ಕಿ ದಂತೆಯೇ ಸರಿ. ಮೂರನೆಯ ವಿಶ್ವಯುದ್ಧ ಶುರುವಾದರೆ ಪರಮಾಣು ಬಾಂಬ್ ಬಳಸುವುದಾಗಿ ರಷ್ಯಾ ಬೆದರಿಕೆ ಹಾಕಿದೆ. ಜಾಗತಿಕ ತಜ್ಞರ ಪ್ರಕಾರ ೧,೫೦೦ರಷ್ಟು ಅಣುಬಾಂಬುಗಳನ್ನು ಈಗಾಗಲೇ ರಷ್ಯಾ ಪ್ರಯೋಗಕ್ಕೆ ಸಿದ್ಧವಾಗಿ ಇಟ್ಟಿದೆ. ರಷ್ಯಾ ಅಧ್ಯಕ್ಷರು ತನ್ನ ನ್ಯೂಕ್ಲಿಯರ್ ಪ್ರಯೋಗ ಪಡೆಗಳಿಗೆ ಹೈ ಅಲರ್ಟ್‌ನಲ್ಲಿರುವಂತೆ ಸೂಚನೆ ನೀಡಿದ್ದಾರೆ. ಮೂರನೆಯ ವಿಶ್ವ ಯುದ್ಧವಾದರೆ ಅದರಲ್ಲಿ ಖಂಡಿತವಾಗಿಯೂ ಪರಮಾಣು ಬಾಂಬ್ ಪ್ರಯೋಗ ಆಗದೇ ಇರಲಾ ರದು.
ಪ್ರಸಕ್ತ ಸನ್ನಿವೇಶದಲ್ಲಿ ವಿಶ್ವಸಂಸ್ಥೆ ತುರ್ತಾಗಿ ಸರಿಯಾದ ನಿರ್ಣಯವನ್ನು ಕೈಗೊಂಡು ಸಂಧಾನದ ಅನುಷ್ಠಾನವನ್ನು ನೆರವೇರಿಸದಿದ್ದರೆ ವಿಶ್ವ ವಿನಾಶಕ್ಕೆ ಎಡೆ ಮಾಡಿ ಕೊಟ್ಟಂತಾಗುತ್ತದೆ. ಇದಕ್ಕೆ ವಿಶ್ವಸಂಸ್ಥೆ ಏನು ಹೇಳುತ್ತಿದೆ? ಒಣ ಶಾಂತಿ ಮಂತ್ರ ಮತ್ತು ಪುಕ್ಕಟೆ ಉಪದೇಶ ಕಾರ್ಯಕ್ಕೆ ಬರಲಾರದು. ಅಣುಬಾಂಬ್ ವಿಚಾರದಲ್ಲಿ ವಿಶ್ವಸಂಸ್ಥೆಯ ನಿಲುವು ಸ್ಪಷ್ಟವಾಗಬೇಕು ಮತ್ತು ಸದಸ್ಯ ರಾಷ್ಟ್ರಗಳು ಪಾಲಿಸಲೇ ಬೇಕು. ಒಂದು ದೇಶ ಇನ್ನೊಂದು ದೇಶದ ಮೇಲೆ ಅಣು ಬಾಂಬ್ ಪ್ರಯೋಗಿಸಿದರೆ ಆಘಾತಕ್ಕೊಳಗಾದ ದೇಶ ತನ್ನ ವೈರಿಯ ಮೇಲೆ ಅಣುಬಾಂಬ್ ಪ್ರಯೋಗಿಸದೇ ನಿರ್ವಾಹವಿಲ್ಲ. ಹೀಗಾಗಿ ಎರಡೂ ದೇಶಗಳೂ ಏಕಕಾಲಕ್ಕೆಮಹಾ ವಿಧ್ವಂಸ ಅನುಭವಿಸುತ್ತವೆ.
೨ನೇ ವಿಶ್ವ ಸಮರದ ಮತ್ತು ವಿಶ್ವ ನಾಯಕರೆನಿಸಿಕೊಂಡವರ ಬಗ್ಗೆ ಕೆಲವು ಸಿಂಹಾವಲೋಕನ ಪ್ರಸ್ತುತವಾದುದು. 1943ರ ಪೂರ್ವಾರ್ಧ. ಮಿತ್ರ ದೇಶಗಳುಬಲಿಷ್ಠ ಜರ್ಮನಿ ಮತ್ತದರ ಸಹ ದೇಶಗಳನ್ನು ಮಣಿಸಲು ಒದ್ದಾಡುತ್ತಿದ್ದ 2ನೇ ವಿಶ್ವಯುದ್ಧದ ಸಮಯ. ಒಂದು ಕಡೆ ಬಂಗಾಲದಲ್ಲಿ ಭೀಕರ ಬರಗಾಲ. ಒಂದು ಕಡೆಭಾರತೀಯರನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ಬ್ರಿಟಿಷ್ಪ್ರಧಾನಿ ವಿನ್ಸೆಂಟ್ ಚರ್ಚಿಲ್ ಬಂಗಾಲದಿಂದ 70000 ಟನ್ ಅಕ್ಕಿಯನ್ನು ಬ್ರಿಟನ್ ಸೈನಿಕರಿಗೆ ಮತ್ತು ಯಾರು ತಾವು ಬೆಳೆದ ಅಕ್ಕಿಯನ್ನೂ ದಾಸ್ತಾನು ಮಾಡುವಂತಿಲ್ಲ ಎಂದು ಆಜ್ಞೆ ಮಾಡಿದ.
ಇದ್ದ ದಾಸ್ತಾನನ್ನು ಮುಟ್ಟುಗೋಲು ಹಾಕಿಕೊಂಡ. ಸೈಕ್ಲೋನ್ ಕೊಚ್ಚಿಕೊಂಡು ಹೋದ ಭತ್ತದ ಫಸಲು ಅಳಿದುಳಿದ ಅಕ್ಕಿಯೂ ಬ್ರಿಟಿಷರ  ಪಾಲಿಗೆ. ಹಸಿವಿನಿಂದ ಕಂಗೆಟ್ಟ ಸಾವಿರಾರು ಜನ ಕೋಲ್ಕತಾಗೆ ಅನ್ನ ಹುಡುಕಿಕೊಂಡು ಬಂದು ಬೀದಿಗಳಲ್ಲಿ ಮಲಗಿ ಸಾಯುತ್ತಿದ್ದರು. ಅಪ್ಪ, ಅಮ್ಮಂದಿರು ಹಸಿದು ಅಳುತ್ತಿರುವ ತಮ್ಮ ಮಕ್ಕಳನ್ನು ಬಾವಿಗೆ ಎಸೆಯುತ್ತಿದ್ದರು. ಆತ್ಮಹತ್ಯೆಗೆ ಶರಣಾಗುತ್ತಾರೆ. ತಿಳಿಗಂಜಿ ನೀರಿಗೆ ಬೇಡುತ್ತಿದ್ದರು. ಅಂತ್ಯಸಂಸ್ಕಾರಕ್ಕೆ ಸಂಬಂಧಿಕರಿಲ್ಲ. ಅಳಲು ಕಣ್ಣಲ್ಲಿ ನೀರಿಲ್ಲ, ಬತ್ತಿ ಹೋಗಿತ್ತು. ಅದೇ ಸಂದರ್ಭದಲ್ಲಿ ಭಾರತದಿಂದ ಹೋದ ಸುಮಾರು ೧೮.೫ ಮಿಲಿಯನ್ ಟನ್‌ನಷ್ಟು ಆಹಾರ ಪದಾರ್ಥಗಳು ಬ್ರಿಟನ್‌ನಲ್ಲಿಕೊಳೆಯುತ್ತಿದ್ದವು.
ಸಾವಿರ ಮೈಲಿ ದೂರದಲ್ಲಿ ಕೂತ ಒಬ್ಬ ರಾಜಕಾರಣಿ ಬರೋಬ್ಬರಿ 30 ಲಕ್ಷ ಜನರ ಸಾವಿಗೆ ಕಾರಣನಾದ. ಅವನೇ ಒಪ್ಪತ್ತು ಉಣ್ಣುವವರು ಸಾಯಲಿ ಎಂದ. ಲಕ್ಷಾಂತರ ಜನರ ಪ್ರಾಣಕ್ಕಿಂತ ಚರ್ಚಿಲ್‌ರಿಗೆ ಭಾರತೀಯರ ಮೇಲಿನ ದ್ವೇಷ ಮುಖ್ಯವಾದರೆ ರೂಸ್‌ವೆಲ್ಟ್‌ಗೆ ಚರ್ಚಿಲ್‌ರನ್ನು ಮೆಚ್ಚಿಸುವುದು ಮುಖ್ಯ ಉದ್ದೇಶ ವಾಗಿತ್ತು. ಇದೊಂದು ಅಮಾನವೀಯ ವರ್ತನೆ. ಯುದ್ಧ ಮತ್ತು ಸ್ವಯಂ ಪ್ರತಿಷ್ಠೆ. ಇಂತಹ ಮನಸ್ಥಿತಿಯ ನಾಯಕರಿಂದ ವಿಶ್ವದಲ್ಲಿ ಶಾಂತಿ ನೆಲೆಸಿರಲು ಸಾಧ್ಯವೇ? ಬಲಿಷ್ಠ ರಾಷ್ಟ್ರಗಳ ಮೂಗಿನಡಿಯಲ್ಲಿಯೇ ಹಿಟ್ಲರ್ ಸುಮಾರು ಒಂದು ಕೋಟಿ ಹತ್ತು ಲಕ್ಷ ಯಹೂದಿಗಳ, ಸ್ಲೇವ್‌ಗಳ, ಸಲಿಂಗಕಾಮಿಗಳ, ರೋಮಾಜೆಸ್ಸಿಗಳ ನರಮೇಧ ನಡೆಸಿಯೇ ಬಿಟ್ಟ. ಯುದ್ಧಾಪರಾಧ ನಡೆಸಿಯೇ ಬಿಟ್ಟಿದ್ದ.
ಕೊನೆಗೆ ತಾನೇ ಆತ್ಮಹತ್ಯೆಗೆ ಶರಣಾದ, ಅದು ಬೇರೆ ವಿಚಾರ. ಆದರೆ ವಿಶ್ವಸಂಸ್ಥೆಯಿಂದ ಹೊರಬಿದ್ದಿದ್ದು ಬಾಯಿ ಮಾತಿನ ಖಂಡನೆ ಮಾತ್ರ. 2001ರಲ್ಲಿ ಹಿಂದ್ಕುಶ್ ಬೆಟ್ಟದಲ್ಲಿ ತಾಲಿಬಾನ್ ವಿಶ್ವದ ಅತಿ ಎತ್ತರದ ಬುದ್ಧ ವಿಗ್ರಹ ನಾಶ, ರುಮಾಂಡದಲ್ಲಿ ನಡೆದ 8 ಲಕ್ಷ ಬುಟ್ಟಿ ಜನಾಂಗದ ಮಾರಣ ಹೋಮ, ಶ್ರೀಲಂಕಾದಲ್ಲಿ ಒಂದು ಲಕ್ಷ ಜನರ ಸಾವಿಗೆ ಕಾರಣವಾದ ಆಂತರಿಕ ರಕ್ತಸಿಕ್ತ ದಂಗೆ, ಆಫ್ರಿಕಾ, ಬಾಂಗ್ಲಾದೇಶದ ನಾಗರಿಕರು, ಮಧ್ಯಪ್ರಾಚ್ಯದ ಮಹಿಳೆಯರು, ಚೀನಾದಲ್ಲಿ ಮರುಶಿಕ್ಷಣಕ್ಕೆ ತಳ್ಳಲ್ಪಟ್ಟ ಮುಸ್ಲಿಮರು, ಕ್ರಿಶ್ಚಿಯನ್ನರು, ಸೂಸೈಡ್ ಬಾಂಬರ್ ಗಳಾಗುವ ಮಕ್ಕಳು ಈ ಸಮಸ್ಯೆಗಳಿಗೆ, ಜೀವ ಉಳಿಸಲು, ಜೀವನ ಮರಳಿಕೊಡಲು ವಿಶ್ವಂಸ್ಥೆಗೆ ಸಾಧ್ಯವಾಗಿದೆಯೇ? ವಿಶ್ವಾದ್ಯಂತ ಪ್ರತ್ಯಕ್ಷ ಯಾ ಪರೋಕ್ಷ ಆರ್ಥಿಕ, ಸಾಮಾಜಿಕ ಮತ್ತು ಶಾಂತಿಯನ್ನು ಕದಡುವ ಛಾಯ ಸಮರಗಳು ನಿರಂತರ ವಾಗಿ ನಡೆದಿವೆ.
ಸೆಕ್ಯುರಿಟಿ ಕೌನ್ಸಿಲ್ ತನ್ನ ಅವೈಜ್ಞಾನಿಕ ವಿಟೋ ಪವರ್‌ನಿಂದ ಅಸಮರ್ಥ ಸಂಸ್ಥೆಯಾಗಿದೆ. ವಿಶ್ವಸಂಸ್ಥೆ ಕೇವಲ ಬಲಶಾಲಿ ರಾಷ್ಟ್ರಗಳ ತಾಳಕ್ಕೆ ನರ್ತಿಸಿದರೆ ಅದರ ಅಸ್ತಿತ್ವವೇ ಪರಾಭವಗೊಂಡಂತಾಗುತ್ತದೆ. ಇದೀಗ ಎಲ್ಲ ಸದಸ್ಯ ರಾಷ್ಟ್ರಗಳು ಒತ್ತಡ ಹೇರುವುದರ ಮುಖಾಂತರ ಬಗೆಹರಿಸಿಕೊಳ್ಳಬೇಕಾಗಿದೆ.ವಿಶ್ವ ಸಂಸ್ಥೆಯು ಭಯೋತ್ಪಾದನೆಗೆ ಸ್ಪಷ್ಟವಾದ ವ್ಯಾಖ್ಯಾನವನ್ನು ಕೊಡದಿರುವುದು ದುರಂತವೇ ಸರಿ.
ಯುದ್ಧ ಮತ್ತು ಶಾಂತಿ ಅಂತಾರಾಷ್ಟ್ರೀಯ ಸಂಬಂಧದ ಪ್ರಮುಖ ವಿಚಾರ. ಇತ್ಯರ್ಥಕ್ಕೆ ಯುದ್ಧ ಬಳಸದಂತೆ ಮಾಡುವುದರಲ್ಲಿ ವಿಶ್ವಸಂಸ್ಥೆಯು ಪರಿಣಾಮಕಾರಿ ಯಾದ ಪಾತ್ರವನ್ನು ವಹಿಸಬೇಕು. ವಿಶ್ವರಕ್ಷಣೆ ವಿಶ್ವಸಂಸ್ಥೆಯ ಉದ್ದೇಶವಾಗಬೇಕು. ವಿಶ್ವಸಂಸ್ಥೆಗೆ ಲೋಕ ಕಲ್ಯಾಣಕ್ಕೆ ಮುತ್ಸದ್ದಿಯಾದ ನಾಯಕರ ಅಗತ್ಯವಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತವು ವಿಶ್ವಕ್ಕೆ ಅನಾದಿ ಕಾಲದಿಂದಲೂ ಅಪಾರ ಕೊಡುಗೆ ನೀಡಿದೆ. ಶಾಂತಿ ಪ್ರಿಯವಾದ ಭಾರತವು ಯಾರನ್ನೂ ವಂಚಿಸಿಲ್ಲ. ವಿಶ್ವಕ್ಕೆ ಮಾದರಿ ಯಾಗಿರುವ ಮಾರ್ಗದರ್ಶನ ಮತ್ತು ಮುಂದಾಳತ್ವದಿಂದ ವಿಶ್ವಸಂಸ್ಥೆ ಬಲಿಷ್ಠವಾಗಬೇಕಾಗಿದೆ. ವಿಶ್ವ ಶಾಂತಿಗೆ ಭಂಗ ತರುವ ಸಮಸ್ಯೆ ಗಳನ್ನು ವಿಶ್ವಸಂಸ್ಥೆ ಬಗೆಹರಿಸಬೇಕು.
ಜಾಗತಿಕ ಸಂಸ್ಥೆಗಳಾದ ವಿಶ್ವ ವ್ಯಾಪಾರ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಶ್ರೀಮಂತ ರಾಷ್ಟ್ರಗಳ ಅಣತಿಯಂತೆ ನಡೆಯುವುದು ನಿಲ್ಲಬೇಕು. ವಿಶ್ವಸಂಸ್ಥೆ ಖಾಯಂ ಭದ್ರತಾ ಮಂಡಳಿಯ ಸದಸ್ಯತ್ವವನ್ನು ವಿವರಿಸಬೇಕು. ವಿಟೋ ಪವರ್ ತೆಗೆಯ ಬೇಕು. ಎಲ್ಲ 193 ಸದಸ್ಯ ರಾಷ್ಟ್ರಗಳ ಅಭಿಪ್ರಾ ಯವನ್ನು ಗೌರವಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀನಾದ ಹಸ್ತಕ್ಷೇಪ ನಿಲ್ಲಬೇಕು. ಎಲ್ಲದಕ್ಕೂ ತುರ್ತಾಗಿ ರಷ್ಯಾ- ಉಕ್ರೇನ್ ಯುದ್ಧಕ್ಕೆ ನಾಂದಿ ಹಾಡಲು ಶತಾಯಗತಾಯ ಪ್ರಯತ್ನಿಸಲೇ ಬೇಕು. ಮೂಲಕ ಇಡೀ ವಿಶ್ವಕ್ಕೇ ಎಲ್ಲ ರೀತಿಯಲ್ಲೂ ಹಾನಿಯಾಗುವುದನ್ನು ತಪ್ಪಿಸಲೇಬೇಕು.