ಬಿಜೆಪಿ ತಂತ್ರಗಾರಿಕೆಗೆ ಕೈ, ದಳ ಬಲಿ
ವರ್ತಮಾನ
ಪ್ರದೀಪ್ ಕುಮಾರ್‌ ಎಂ.
@.
ಗೆದ್ದರೆ ಏನು ಲಾಭ, ಸೋತರೆ ನಷ್ಟವೇನು ಎಂಬುದಕ್ಕಿಂತ ಗೆಲ್ಲಲೇ ಬೇಕು ಎಂಬುದಷ್ಟೇ ಬಿಜೆಪಿಯ ಗುರಿ. ಏಕೆಂದರೆ, ಈಗಿನ ಒಂದುಗೆಲುವು ಮುಂದೆ ಹೆಚ್ಚಾಗುತ್ತಾ ಹೋಗುತ್ತದೆ. ಇದು ಪಕ್ಷ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿರುವ ತಂತ್ರಗಾರಿಕೆ.
ರಾಜಕಾರಣದಲ್ಲಿ ತಂತ್ರಗಾರಿಕೆಯಿಂದ ಹೇಗೆ ಸುಲಭವಾಗಿ ಗೆಲ್ಲಬಹುದು ಎಂಬುದನ್ನು ಬಿಜೆಪಿ ಮತ್ತೊಮ್ಮೆ ಸಾಧಿಸಿ ತೋರಿಸಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಮೂರನೇ ಸ್ಥಾನದ ಮೇಲೆ ಕಣ್ಣಿಟ್ಟು, ಬಹುಮತ ಇಲ್ಲದೇ ಇದ್ದರೂ ಹೇಗೆ ಗೆದ್ದಕೊಳ್ಳಬೇಕುಎಂಬುದನ್ನು ತಿಳಿಸಿಕೊಟ್ಟಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಗಿಟ್ಟಿಸಿಕೊಳ್ಳಲು ಸಾಧ್ಯವಾಗದೆ ಪರದಾಡುವಂತೆ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸರಿಯಾದ ತಿರುಗೇಟನ್ನೇ ನೀಡಿದೆ. ಇಲ್ಲಿ ಬಿಜೆಪಿ ಗೆದ್ದಿರುವುದು ಕೇವಲ ರಾಜ್ಯಸಭೆಯ ಒಂದು ಸ್ಥಾನದಲ್ಲಿ ಮಾತ್ರವಲ್ಲ, ಪ್ರತಿಪಕ್ಷಗಳು ತಮ್ಮಲ್ಲಿ ತಾವೇ ಹೊಡೆದಾಡಿಕೊಳ್ಳುವಂತೆ ಮಾಡುವ ರಾಜಕೀಯ ತಂತ್ರಗಾರಿಕೆಯಲ್ಲಿ ಬಿಜೆಪಿ ಗೆದ್ದು ತೋರಿಸಿದೆ. ಆ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಸೋಲಿಸಿದೆ. ಕೋಮುವಾದಿ ಪಕ್ಷವನ್ನು ಗೆಲ್ಲಲು ಬಿಡಬಾರದು ಎಂದು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತಕ್ಕ ಪಾಠವನ್ನೇ ಕಲಿಸಿದೆ. ಎರಡೂ ಪಕ್ಷಗಳನ್ನು ಪರಸ್ಪರ ಎತ್ತಿಕಟ್ಟಿ, ‘ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ’ ಹೇಗಾಗು ತ್ತದೆ ಎಂಬುದನ್ನು ತಿಳಿಸಿಕೊಟ್ಟಿದೆ.
ಕರ್ನಾಟದ ನಾಲ್ಕು ಸ್ಥಾನಗಳು ಸೇರಿದಂತೆ ದೇಶಾದ್ಯಂತ ರಾಜ್ಯಸಭೆಯ 57 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಒಂದು ಸ್ಥಾನ ಸೋಲುವುದು ಅಥವಾ ಗೆಲ್ಲುವುದು ಬಿಜೆಪಿ ಪಾಲಿಗೆ ಯಾವುದೇ ಲಾಭ-ನಷ್ಟ ತಂದುಕೊಡುವುದಿಲ್ಲ. ಆದರೂ ಸಾಧ್ಯವಾದಷ್ಟು ಸ್ಥಾನಗಳನ್ನು ಗೆಲ್ಲಲೇ ಬೇಕು ಎಂಬ ತುಡಿತ ದಲ್ಲಿರುವ ಪಕ್ಷದ ವರಿಷ್ಠರು, ಅದಕ್ಕೆ ತಕ್ಕಂತೆ ತಂತ್ರಗಾರಿಕೆಯನ್ನೂ ರೂಪಿಸುತ್ತಾರೆ. ಹೀಗಾಗಿಯೇ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಗೆ ಹೊಸ ಪ್ಲಾನ್ ಸಿದ್ಧಪಡಿಸಿದರು. ಇದರಿಂದ ಪಕ್ಷದ ಅಭ್ಯರ್ಥಿಯೂ ಗೆಲ್ಲಬೇಕು. ಪ್ರತಿಪಕ್ಷಗಳೂ ಖೆಡ್ಡಾಕ್ಕೆ ಬೀಳಬೇಕು ಎಂಬುದು ಅವರ ಯೋಚನೆಯಾಗಿತ್ತು. ಅದರ ಪರಿಣಾಮವೇ ಇದೀಗ ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಎದುರಾಗಿ ಬಿಜೆಪಿ ಗೆಲ್ಲಲು ಅವಕಾಶ ಮಾಡಿಕೊಟ್ಟಿದೆ.
ಸಾಮಾನ್ಯವಾಗಿ ಇಂತಹ ಪರಿಸ್ಥಿತಿ ಬಂದಾಗ ಸ್ವತಂತ್ರ ಅಭ್ಯರ್ಥಿ ಕಣಕ್ಕಿಳಿಸಿ, ಗೆಲ್ಲಿಸಿ ಬಳಿಕ ಅವರನ್ನು ಪಕ್ಷಕ್ಕೆ ಸೆಳೆಯುವ ಕೆಲಸಕ್ಕೆ ಬಿಜೆಪಿ ಮುಂದಾಗುತ್ತಿತ್ತು. ಈ ಹಿಂದೆ ವಿಜಯ್ ಮಲ್ಯ, ಡಾ.ರಾಜೀವ್ ಚಂದ್ರಶೇಖರ್ ವಿಚಾರದಲ್ಲಿ ಆಗಿದ್ದೂ ಅದೇ. ಇಲ್ಲವೇ ‘ಪೇಮೆಂಟ್ ಸೀಟ್’ ಮೂಲಕ ಗೆಲ್ಲಲು ಅವಕಾಶವಿತ್ತು. ಬಿಜೆಪಿ ಆಕೆಲಸ ಮಾಡಬಹುದಿತ್ತು. ಆದರೆ, ಅದಕ್ಕಿಂತ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪಾಠ ಕಲಿಸುವುದು ಅದಕ್ಕೆ ಮುಖ್ಯವಾಗಿತ್ತು. ಅದಕ್ಕಾಗಿಯೇ ಪಕ್ಷದಿಂದ ಮೂರನೇಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮೊದಲೇ ಹೇಳಿತ್ತು. ಅದಕ್ಕಾಗಿ ರಾಜ್ಯಸಭೆ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ, ಗೋಲ್ಡ್‌ಫಿಂಚ್ ಹೋಟಲ್ ಮಾಲೀಕ ಪ್ರಕಾಶ್ ಶೆಟ್ಟಿ ಅವರ ಹೆಸರನ್ನು ಮೊದಲು ತೇಲಿಬಿಟ್ಟಿತು.
ಬಳಿಕ ನಿಧಾನವಾಗಿ ಲೆಹರ್ ಸಿಂಗ್ ಸಿರೊಯಾ ಹೆಸರನ್ನು ಬುಟ್ಟಿಯಿಂದ ಬಿಟ್ಟಿತು. ಅದರಂತೆ ಈ ಮೂವರೂ ತಮ್ಮನ್ನು ಬೆಂಬಲಿಸುವಂತೆ ಜೆಡಿಎಸ್ ಶಾಸಕರಿಗೆಬಲೆ ಬೀಸಲಾರಂಭಿಸಿದರು. ಅದರಲ್ಲೂ ಲೆಹರ್ ಸಿಂಗ್ ನೇರವಾಗಿ ಎಚ್.ಡಿ.ದೇವೇಗೌಡರನ್ನು ನೇರವಾಗಿ ಭೇಟಿಯಾಗಿ ಬೆಂಬಲ ಕೋರಿದರು. ಮತ್ತೊಂದೆಡೆ ಕಾಂಗ್ರೆಸ್ ಬೆಂಬಲ ಪಡೆದು ಗೆಲ್ಲಲು ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ಆ ಪಕ್ಷದ ಮುಖಂಡರನ್ನು ಭೇಟಿಯಾಗಿದ್ದರು. ಆದರೆ, ಯಾವಾಗ ಲೆಹರ್ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಗಂಭೀರ ಪ್ರಯತ್ನ ಮಾಡಿ, ಜೆಡಿಎಸ್ ನಾಯಕರನ್ನು ಇನ್ನೇನು ಒಪ್ಪಿಗೆ ನೀಡುವುದಷ್ಟೇ ಬಾಕಿ ಎಂಬ ಸ್ಥಿತಿಗೆ ತಂದರೋ ಆಗ ಕಾಂಗ್ರೆಸ್ ಎಚ್ಚೆತ್ತುಕೊಂಡಿತು.
ಜೆಡಿಎಸ್‌ನ ಜಾತ್ಯತೀತ ನಿಲುವನ್ನು ಬೆತ್ತಲು ಮಾಡಲು ನಿರ್ಧರಿಸಿತು. ಪಕ್ಷ ದೊಳಗೆ ಕಿತ್ತಾಡಿಕೊಳ್ಳುತ್ತಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಟ್ಟಾಗಿ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದರು. ಬಿಜೆಪಿ ಯನ್ನು ಜೆಡಿಎಸ್ ಬೆಂಬಲಿಸಿದರೆ ಆಗ ಅದರ ನಕಲಿ ಜಾತ್ಯತೀತ ಬಣ್ಣ ಬಯಲು ಮಾಡಬಹುದು. ಹಾಗಾಗಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸೋಣ ಎಂದು ಹೇಳಿದರು. ಅದರಲ್ಲೂ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸಿದರೆ ಇನ್ನೂಅನುಕೂಲವಾಗುತ್ತದೆ. ಜೆಡಿಎಸ್ ಅನಿವಾರ್ಯವಾಗಿ ಬೆಂಬಲಿಸಲೇ ಬೇಕಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಈ ಮಾಹಿತಿ ತಿಳಿಯುತ್ತಿದ್ದಂತೆಆಗ ನಿಜವಾಗಲೂ ಇಕ್ಕಟ್ಟಿಗೆ ಸಿಲುಕಿದ್ದು ಜೆಡಿಎಸ್. ಈಗಾಗಲೇ ಪಕ್ಷ ಒಡೆಯುವ ಹಂತ ತಲುಪಿದೆ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಲು ನಿರ್ಧರಿಸಿದರೆ, ಕಾಂಗ್ರೆಸ್ ಜತೆ ಹೋಗಲು ಯೋಚಿಸುತ್ತಿರುವವರು ಅದನ್ನೇ ನೆಪ ಇಟ್ಟುಕೊಂಡು ಪಕ್ಷದಿಂದ ದೂರ ಸರಿಯಬಹುದು ಎಂಬ ಆತಂಕ ಶುರು ವಾಯಿತು. ಹಾಗೆಂದು ಕಾಂಗ್ರೆಸ್‌ಗೆ ಬೆಂಬಲ ಸೂಚಿಸೋಣ ಎಂದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುತಾರಾಂ ಒಪ್ಪುತ್ತಿಲ್ಲ.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿದ ಬಳಿಕ ಪ್ರತಿನಿತ್ಯ ಸಿದ್ದರಾಮಯ್ಯ ಮತ್ತು ಮೇಕೆದಾಟು ಹೋರಾಟದ ಬಳಿಕ ಡಿ.ಕೆ.ಶಿವಕುಮಾರ್ ವಿರುದ್ಧ ಮುಗಿಬಿದ್ದಿದ್ದ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಬೇಡ ಎಂದು ಘೋಷಿಸಿ ಸಿಂಗಾಪುರಕ್ಕೆ ತೆರಳಿ ಬಿಟ್ಟರು. ಹೀಗಾಗಿ ಅತ್ತ ಕಾಂಗ್ರೆಸ್ ಜತೆಗೂ ಕೈಜೋಡಿಸಲಾಗದೆ, ಇತ್ತ ಬಿಜೆಪಿಯನ್ನೂ ಬೆಂಬಲಿಸಲು ಸಾಧ್ಯವಾದಗೆ ಗೊಂದಲಕ್ಕೆ ಬಿದ್ದ ಜೆಡಿಎಸ್ ಮುಂದೆ ಇದ್ದುದು ಒಂದೇಗುರಿ, ಅದು ಪಕ್ಷ ಒಡೆದು ಹೋಳಾಗದಂತೆ ನೋಡಿಕೊಳ್ಳುವುದು. ಅದಕ್ಕಿದ್ದ ಏಕೈಕ ದಾರಿ, ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು. ಟುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿ, ವಿಪ್ ಜಾರಿ ಮಾಡಿದರೆ ಆಗ ಶಾಸಕರು ವಿಪ್ ಉಲ್ಲಂಘಿಸದೆ ಪಕ್ಷದ ಅಭ್ಯರ್ಥಿ ಬೆಂಬಲಿಸುವುದು ಅನಿ ವಾರ್ಯವಾಗುತ್ತದೆ. ಒಂದೊಮ್ಮೆ ಅದನ್ನೂ ಮೀರಿ ಹೋದರೆ ಆಗ ಅಧಿಕಾರ ಮತ್ತು ಹಣದಾಸೆಗೆ ಮತ್ತೊಂದು ಪಕ್ಷದ ಅಭ್ಯರ್ಥಿಗೆ ಬಂಬಲಿಸಿದರು ಎಂದು ಹೇಳಿ ಮುಂಬರುವ ದಿನಗಳಲ್ಲಿ ಅವರ ಪಕ್ಷದ್ರೋಹವನ್ನೇ ಜನರ ಮುಂದಿಡಬಹುದು. ಇದು ಅವರ ರಾಜಕೀಯ ಭವಿಷ್ಯಕ್ಕೂ ಮಾರಕವಾಗುತ್ತದೆ.
ಅಂತಹ ಅಪಾಯ ಮೈಮೇಲೆ ಎಳೆದುಕೊಳ್ಳದೆ ಶಾಸಕರು ಅಭ್ಯರ್ಥಿಗೆ ಮತ ಹಾಕುತ್ತಾರೆ. ಈ ಲೆಕ್ಕಾಚಾರ ಹಾಕಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿತು. ಸೋಲುವುದಂತೂ ಖಚಿತ. ಆದರೆ, ಹೋರಾಡಿ ಸೋಲುತ್ತೇವೆ. ಜತೆಗೆ ಪಕ್ಷ ಒಡೆಯದಂತೆಯೂ ನೋಡಿಕೊಂಡಂತಾಗುತ್ತದೆ. ಕಾಂಗ್ರೆಸ್ ಅಭ್ಯರ್ಥಿಯನ್ನೂಸೋಲಿಸಿದಂತಾಗುತ್ತದೆ. ಏಕೆಂದರೆ, ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಮೇಲೆ ಎಷ್ಟು ಆಕ್ರೋಶವಿದೆ ಎಂದರೆ, ಬಿಜೆಪಿ ಗೆದ್ದರೂ ಪರವಾಗಿಲ್ಲ, ತನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಕಾಂಗ್ರೆಸ್ ಸೋಲಬೇಕು ಎಂಬುದು ಅವರ ಸದ್ಯದ ಗುರಿಯಾಗಿದೆ.
ಬಿಜೆಪಿಗೆ ಬೇಕಾಗಿದ್ದೂ ಇದೇ ಆಗಿತ್ತು. ಏಕೆಂದರೆ, ನಾಲ್ಕನೇ ಸ್ಥಾನ ಗೆಲ್ಲಲು ಮೂರೂ ಪಕ್ಷಗಳಿಗೆ ಅವಕಾಶ ಇರಲಿಲ್ಲ. ಈ ಸ್ಥಾನಕ್ಕೆ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ನಿಲ್ಲಿಸಿದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾದರೆ ಸೋಲು ಕಟ್ಟಿಟ್ಟ ಬುತ್ತಿ. ಮತ್ತೆ ಆ ಎರಡೂ ಪಕ್ಷಗಳ ಮುಂದೆ ಸೋಲೊಪ್ಪಿ ಕೊಂಡಂತಾ ಗುತ್ತದೆ. ಅದರ ಬದಲು ಅವರಿಬ್ಬರ ಮಧ್ಯೆಯೇ ಜಗಳ ತಂದಿಟ್ಟರೆ ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳುವುದು ಸುಲಭ. ಹೀಗಾಗಿಯೇ ಮೂರನೇ ಸ್ಥಾನಕ್ಕೆ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿ, ಅಭ್ಯರ್ಥಿ ಆಕಾಂಕ್ಷಿಗಳನ್ನು ಜೆಡಿಎಸ್ ಬಳಿಗೆ ಕಳುಹಿಸಿತ್ತು.
ನಂತರದ ಎಲ್ಲಾ ಬೆಳವಣಿಗೆಗಳು ನಿರೀಕ್ಷಿಸಿದಂತೆಯೇ ನಡೆಯಿತು. ಇದೀಗ ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಎರಡನೇ ಪ್ರಾಶಸ್ತ್ಯದ ಮತಗಳೊಂದಿಗೆ ಬಿಜೆಪಿ ಸುಲಭವಾಗಿ ಗೆಲುವು ಸಾಽಸಬಹುದಾಗಿದೆ. ಅತ್ತ ಪ್ರತಿಪಕ್ಷಗಳಿಗೆ ಸೂಕ್ತ ರಾಜಕೀಯ ಪಾಠ ಕಲಿಸಿದಂತೆಯೂ ಆಯಿತು, ಇತ್ತ ಗೆದ್ದಂತೆಯೂ ಆಯಿತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿತು. ಲಡ್ಡು ಬಂದು ಬಿಜೆಪಿ ಬಾಯಿಗೆಬಿತ್ತು.
ಲಾಸ್ಟ್ ಸಿಪ್:ಖರ್ಚಿಲ್ಲದೆ ಕಜ್ಜಾಯ ತಿನ್ನುವುದು ಹೇಗೆ ಎಂಬುದನ್ನು ಬಿಜೆಪಿಯಿಂದ ಕಲಿಯಬೇಕು.