ತಿಳಿಯದೆ ವ್ಯಕ್ತಿತ್ವ ವಿಮರ್ಶಿಸದಿರಿ
ಪ್ರಸ್ತುತ
ದಯಾನಂದ ಲಿಂಗೇಗೌಡ
ಕುವೆಂಪು ಅವರು ಬದುಕಿದ್ದಾಗಲೇ ಜಾತಿ ಪಂಗಡಗಳನ್ನು ಊರಾಚೆ ನೂಕಿ ಬೇಂದ್ರೆ, ಡಿವಿಜಿ ಅವರಂತೆ ಜಾತ್ಯತೀತವಾಗಿ ಗೌರವಿಸಲ್ಪಟ್ಟ ಸಾಹಿತಿಗಳು. ಅವರುಎಂದಿಗೂ ನಾನು ‘ಈ ಜಾತಿಯ ಸಾಹಿತಿ’ ಎಂದು ಬಿಂಬಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ ಜಾತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರಿಗೆ ಇಷ್ಟವಿರಲಿಲ್ಲ
ಪುರಂದರದಾಸರು ಭಕ್ತಿ ಮತ್ತು ಪ್ರೇಮರಸದ ಕೀರ್ತನೆಗಳಿಗೆ ಎಷ್ಟು ಪ್ರಖ್ಯಾತರೊ, ಅಷ್ಟೇ ನಿಂದಾ ಸಾಹಿತ್ಯ ದಲ್ಲಿಯೂ ಸಿದ್ಧ ಹಸ್ತರು . ‘ಭಕ್ತವತ್ಸಲ ನಮ್ಮ ಪುರಂದರವಿಠಲ’ ಎಂದು ಒಂದು ಕಡೆ ದಾಸರು ಹಾಡಿದರೆ, ಮತ್ತೊಂದು ಕಡೆ ‘ಆರು ಬದುಕಿದರಯ್ಯ ನಿನ್ನ ನಂಬಿ. ನಿನ್ನ ನಂಬಿದರೆ ತಿರುಪೆಯೂ ಪುಟ್ಟಲೊಲ್ಲದು ಹರಿಯೆ’ ಎಂಬ ಗೀತೆಗಳನ್ನು ರಚಿಸಿದ್ದಾರೆ.
‘ಇಂದು ಎನಗೆ ಗೋವಿಂದ, ನಿನ್ನಯ ಪಾದ ಅರವಿಂದ ತೋರೋ ಮುಕುಂದನೇ’ ಎಂದು ಒಂದು ಕಡೆ ಹಾಡಿ ದರೆ, ‘ಕರುಣಾಕರ ಎನ್ನುವುದೇತಕೊ, ಭರವಸೆ ಯಿನಗೆ’ ಎಂದು ಭಗವಂತನ ಲೀಲೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಗೀತೆಗಳನ್ನು ಕೂಡ ರಚಿಸಿದ್ದಾರೆ. ಇಂತಹ ಗೀತೆಗಳನ್ನು ಬಿಡಿಯಾಗಿ ನೋಡಿದರೆ ದಾಸರು ಪುರಂದರವಿಠಲನ ಬದ್ಧವೈರಿ ಏನೋ ಎಂದು ಅನಿಸಿದರೂ ಕೂಡ, ಇಡೀ ದಾಸಸಾಹಿತ್ಯ ಅರಿತವರಿಗೆ, ಇದು ಕೂಡ ಒಂದು ಭಕ್ತಿಯ ಭಾವವೆಂದು ಅರಿವಾಗುತ್ತದೆ.
ತಾಯಿಯು ಮಕ್ಕಳನ್ನು ಬೈಯ್ಯುವಾಗ, ತಂದೆಯು ಮಕ್ಕಳನ್ನು ಬಯ್ಯುವ ಹಾಗೆ, ಅವರ ಬೈಗುಳದಲ್ಲೂ ಒಂದು ಒಳ್ಳೆಯ ಉದ್ದೇಶ ಕಾಣುವಂತೆ, ಇಂತಹ ನಿಂದಾಸ್ತುತಿಗಳನ್ನು ಕೂಡ ನಾವು ಒಂದು ಸಂದೇಶಗಳನ್ನು ಕಾಣಬಹುದು. ಎಲ್ಲಿಯವರೆಗೆ ಟೀಕಿಸುವವರ ಕೃತಿಗಳ ಮನಸ್ಥಿತಿ ದುರುದ್ದೇಶಪೂರ್ವಕವಾಗಿ ಇರುವುದಿಲ್ಲವೋ, ಅಲ್ಲಿಯವರೆಗೂ ನಾವು ಟೀಕೆಯ ಪದಗಳನ್ನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹಾಗಾಗಿಯೇ ‘ಕಳ್ಳರ ಕಳ್ಳ ಕೃಷ್ಣನು’ ಎಂದು ರಾಜಕುಮಾರ್ ಹಾಡಿದ ಹಾಡುಗಳು ಕೂಡ, ಭಕ್ತಿರಸವ ಕೇಳುತ್ತದೆಯೇ ಹೊರತು, ಇದು ಕೃಷ್ಣನಿಗೆ ಅವಮಾನ ಎಂದು ನಮಗೆ ಅನಿಸುವುದಿಲ್ಲ.
ಇನ್ನು ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಎಂಬ ಅಣಕವಾಡಿ ಬಹಳ ಪ್ರಸಿದ್ಧವಾದದ್ದು. ಈ ಸಾಹಿತ್ಯವನ್ನು ಸಾಬರು ಹಾಡಿದರೆ ಹೇಗೆ ಇರುತ್ತದೆ, ಕುಡುಕರು ಹಾಡಿದರೆ ಹೇಗಿರುತ್ತದೆ, ಮಂಗಳಮುಖಿಯರು ಹಾಡಿದರೆ ಹೇಗಿರುತ್ತದೆ ಎಂಬುದನ್ನು ಹಲವಾರು ಹಾಸ್ಯ ಕಾರ್ಯಕ್ರಮಗಳಲ್ಲಿ ತೋರಿಸಿದ್ದಾರೆ.
‘ನಮ್ದುಕೆ ಅಮ್ಮ, ಭಾಗ್ಯದ ಲಕ್ಷ್ಮೀ ಬಾರಮ್ಮ, ಶುಕ್ರವಾರದ ನಮಾಜು ವೇಳೆಗೆ, ಭಾಗ್ಯದ ಲಕ್ಷ್ಮೀ ಬಾರಮ್ಮ’ ಎಂದು ಹಾಡುವಾಗ ನಮಗೆ ಇದರಲ್ಲಿ ಪುರಂದರ ದಾಸರಿಗೆ ಅವಮಾನವಾಗಲಿ ಅಥವಾ ನಾವೆಲ್ಲರೂ ಆರಾಽಸುವ ಲಕ್ಷ್ಮೀಗೆ ಅವಮಾನವಾಗಲಿ ಎಂದು ಯಾವತ್ತೂ ಭಾವಿಸಲಿಲ್ಲ. ಸಾಹಿತ್ಯವನ್ನು ಹಾಸ್ಯ ಕ್ಕೊಸ್ಕರ ರಚಿಸಿರುವುದರಿಂದ, ಇದನ್ನು ಹಾಸ್ಯವಾಗಿ ತೆಗೆದುಕೊಂಡು ಬಂದಿದ್ದೆವು. ಅದೇ ರೀತಿ ಪ್ರೊಫೆಸರ್ ಕೃಷ್ಣೇಗೌಡರ ‘ಕುಡುಕರ ಸುಪ್ರಭಾತ’ ಬಹಳ ಪ್ರಸಿದ್ಧ ವಾದ ಪ್ರಸ್ತುತಿ. ಇದರಲ್ಲಿ ವೆಂಕಟೇಶ ಸುಪ್ರಭಾತವನ್ನು ‘ಕುಡುಕರ ಸುಪ್ರಭಾತವಾಗಿ ‘ಪ್ರೊಫೆಸರ್ ಕೃಷ್ಣೇಗೌಡ ಅವರು ಬದಲಾಯಿಸಿ ಹಲವಾರು ಕಾರ್ಯಕ್ರಮ ಗಳಲ್ಲಿ ಪ್ರಸ್ತುತಪಡಿಸಿದ್ದಾರೆ.
‘ಇದು ಲಿಕ್ಕರು, ಕಿಕ್ಕರು, ವಿಜಯ್ ಮಲ್ಯ ಪತೇ’ ಎಂದೆಲ್ಲ ಆಡಿದಾಗ ಯಾರು ಇದು ಮೂಲ ಹಿಂದೂ ಸಮುದಾಯದ ಪವಿತ್ರ ಗೀತೆಯಾದ ಸುಪ್ರಭಾತಕ್ಕೆ ಅವಮಾನವಾಗಲಿ ಅಥವಾ ಶ್ರೀನಿವಾಸನಿಗೆ ಮಾಡಿದ ಅವಮಾನವಾಗಲಿ ಎಂದು ಹೇಳಲಿಲ್ಲ. ಅದನ್ನು ಎಲ್ಲರೂ ಹಾಸ್ಯವಾಗಿ ಪರಿಗಣಿಸಿದರು. ಏಕೆಂದರೆ ಪ್ರೊಫೆಸರ್ ಕೃಷ್ಣೇಗೌಡರ ವ್ಯಕ್ತಿತ್ವವನ್ನು ಗಮನಿಸಿದಾಗ, ಅವರು ನಮ್ಮ ಸಂಸ್ಕೃತಿಗೆ ಅವಮಾನವಾಗುವಂತಹ ಯಾವುದೇ ಒಂದು ನಡವಳಿಕೆಯನ್ನು ತೋರಿಲ್ಲ ವಾದ್ದರಿಂದ, ಮೊಸರಲ್ಲಿ ಯಾವುದೇ ಕಲ್ಲು ಹುಡುಕುವುದಕ್ಕೆ ಹೋಗಲಿಲ್ಲ.
ಆದರೆ ಈಗ ರೋಹಿತ್ ಚಕ್ರತೀರ್ಥರು ನಾಡಗೀತೆಯ ಅಣಕವಾಡಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವುದು ವಿವಾದವಾಗಿ ಮಾರ್ಪಾಡಾಗಿದೆ. ಇದರಲ್ಲಿ ಮೊದಲು ಗಮನಿಸಬೇಕಾದ ವಿಷಯವೇನೆಂದರೆ ಈ ಗೀತೆಯನ್ನು ಅವರು ರಚಿಸಿಲ್ಲ. ಯಾರೋ ರಚಿಸಿದ ಗೀತೆಯನ್ನು ಅವರು ‘ಮೊದಲು ಹೇಗಿದ್ದ ಕನ್ನಡ ನಾಡು, ಹೇಗಾಗಿದೆ ನೋಡಿ’ ಎನ್ನುವ ಅರ್ಥದಲ್ಲಿ ಜನರೊಂದಿಗೆ ಹಂಚಿಕೊಂಡಿದ್ದರು. ಆದರೆ ಇದೇ ದೊಡ್ಡ ವಿವಾದವಾಗಿ ಪರಿಣಮಿಸಿದೆ.
ಈ ಗೀತೆಯ ಮೊದಲ ಸಾಲನ್ನು ಕೂಡ ಹೇಳಲು ಬಾರದ ಒಬ್ಬ ಮಾಜಿ ಮುಖ್ಯಮಂತ್ರಿ, ರೋಹಿತ್ ಚಕ್ರತೀರ್ಥ ಅವರ ಅಣಕವಾಡಿ ಗೀತೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡಿನಲ್ಲಿ ಜನಿಸಿ, ಈ ವಯಸ್ಸಿನವರಿಗೂ ಕನ್ನಡ ನಾಡ ಜನರ ಋಣದಲ್ಲಿ ಬದುಕಿರುವ, ಮಾಜಿ ಮುಖ್ಯಮಂತ್ರಿಗಳಿಗೆ ಕನ್ನಡ  ನಾಡ ಗೀತೆಯ ಒಂದು ಸಾಲನ್ನು ಉಚ್ಚರಿಸಲು ಬರುವುದಿಲ್ಲ ಎಂಬುದು ಹೆಚ್ಚು ಅವಮಾನಕರವೋ ಅಥವಾ ಚಕ್ರತೀರ್ಥರು ಅಣಕವಾಡಿ ಹಂಚಿಕೊಂಡಿರುವುದು ಹೆಚ್ಚು ಅವಮಾನಕರೋ ಎಂದು ಗೊಂದಲವಾಗುತ್ತದೆ. ರಾಜಕಾರಣಿಗಳನ್ನು ಬಿಡಿ.
ಅವರು ಯಾವುದೋ ಜನಾಂಗದ ಓಟು ಗಳಿಸುವ ಕುತಂತ್ರದಿಂದ ಇಂತಹ ವಿರೋಧಗಳನ್ನು ವ್ಯಕ್ತಪಡಿಸಿರುತ್ತಾರೆ. ಆದರೆ ನಮ್ಮ ಆದಿಚುಂಚನಗಿರಿ  ಮಠದ ಶ್ರೀ ನಿರ್ಮಲಾನಂದ ಸ್ವಾಮಿಗಳು ಕೂಡ ಇದರ ಬಗ್ಗೆ ಮಾತನಾಡಿರುವುದು ಆಶ್ಚರ್ಯ ಗೊಳಿಸಿದೆ. ಇದು ಒಕ್ಕಲಿಗರಿಗೆ ಮಾಡಿದ ಅವಮಾನ ಎಂಬಂತೆ ಶ್ರೀಗಳು ಮಾತನಾಡಿರುವುದು ಖೇದಕರ ಸಂಗತಿ. ಕುವೆಂಪು ಅವರು ಬದುಕಿದ್ದಾಗಲೇ ಜಾತಿ ಪಂಗಡಗಳನ್ನು ಊರಾಚೆ ನೂಕಿ, ಬೇಂದ್ರೆ, ಡಿವಿಜಿ ಅವರಂತೆ ಜಾತ್ಯತೀತ ವಾಗಿ ಗೌರವಿಸಲ್ಪಟ್ಟ ಸಾಹಿತಿಗಳು. ಅವರು ಎಂದಿಗೂ ನಾನು ‘ಈ ಜಾತಿಯ ಸಾಹಿತಿ’ ಎಂದು ಬಿಂಬಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ ಜಾತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರಿಗೆ ಇಷ್ಟವಿರಲಿಲ್ಲ.
ಏಕೆಂದರೆ ಇಂತಹ ಜಾತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ, ಅವರು ಒಂದು ಜಾತಿಗೆ ಸೀಮಿತಬಹುದಾದ ಅಪಾಯವನ್ನು ಮತ್ತು ಅದು ತಮ್ಮ ವಿಶ್ವಮಾನವ ತತ್ವಕ್ಕೆ ವಿರುದ್ಧವಾಗಿರುವುದು ಮನಗಂಡಿದ್ದರು. ಅಂತಹ ವಿಶ್ವಮಾನವ ಸಾಹಿತಿಯನ್ನು, ಬರಿ ಒಕ್ಕಲಿಗರ ಸಾಹಿತಿಯಾಗಿ ಬಿಂಬಿಸುತ್ತಿರುವುದು ನಮ್ಮ ಸ್ವಾಮೀಜಿಗಳು ಕುವೆಂಪುರವರಿಗೆ ಮಾಡಿರುವ ಅಪಮಾನ. ವೇದಾಧ್ಯಯನ ಮಾಡಿರುವ, ಮಠಾಧೀಶರು ಜಾತಿ ಧರ್ಮಗಳನ್ನು ಮೀರಿ, ಜನರಿಗೆ ಅಧ್ಯಾತ್ಮದ ದಾರಿಯನ್ನು ತೋರಬೇಕು. ಇಂದಿನ ಬಹುತೇಕ ಸ್ವಾಮೀಜಿಗಳು, ಹಿಂದೂ ಧರ್ಮಕ್ಕೆ ಕಳಂಕ, ಸಂಕಟ ಬಂದಾಗ ಒಂದು ಮಾತನಾಡದೆ ಇದ್ದವರು,ಜಾತಿ ವಿಷಯಗಳಲ್ಲಿ ಮುನ್ನುಗ್ಗಿ ಮಾತನಾಡುತ್ತಿರುವುದು ಸ್ವಾಮೀಜಿಗಳ ವ್ಯಕ್ತಿತ್ವದ ವಿಸ್ತಾರತೆಯನ್ನು ಕುಗ್ಗುತ್ತಿರುವುದರ ಸಂಕೇತವಾಗಿ ತೋರುತ್ತದೆ.
ರೋಹಿತ್ ಚಕ್ರತೀರ್ಥ ಅವರ ಇತಿಹಾಸವನ್ನು ಗಮನಿಸಿ. ಅವರು ನಾಡು-ನುಡಿ ಬಗೆಗಿನ ಕಳಕಳಿಯನ್ನು ಅವರ ಸಾಹಿತ್ಯದಲ್ಲಿ ಕಾಣುತ್ತದೆ. ಹಿಂದೂ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಅಪಾರವಾದ ಜ್ಞಾನ ಮತ್ತು ಆದರಗಳನ್ನೂ ಇಟ್ಟುಕೊಂಡಿರುವ ವ್ಯಕ್ತಿ. ಹಿಂದೂ ಧರ್ಮಕ್ಕೆ ಗಂಡಾಂತರ ಬಂದಾಗ, ತಮ್ಮ ಲೇಖನಿಯ ಮೂಲಕ ಮುಲಾಜಿಲ್ಲದೆ ಪ್ರತಿಭಟಿಸಿ, ತಾವು ಯಾವ ಸ್ವಾಮೀಜಿಗಳಿಗೂ ಅಥವಾ ಬೀದಿ ಕನ್ನಡ ಹೋರಾಟಗಾರರಿಗೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಅವರೇ ಹೇಳಿಕೊಳ್ಳುವ ಹಾಗೆ, ಅವರು ತಿನ್ನುವ ಪ್ರತಿಯೊಂದು ಅನ್ನದ ಅಗಳು, ಕನ್ನಡನಾಡಿನ ಸಾಹಿತ್ಯದ ಕೃಷಿಯಿಂದ ಬಂದಿದೆ. ಕುವೆಂಪು ಸಾಹಿತ್ಯವನ್ನು ಯಾವುದೇ ಒಕ್ಕಲಿಗರಿಗಿಂತ ಹೆಚ್ಚಾಗಿ ಓದಿ ಕೊಂಡಿರುವುದುದನ್ನು ಅವರ ಬರಹಗಳಲ್ಲಿ ಗಮನಿಸಬಹುದು. ಅಂಥವರು ಕನ್ನಡ ನಾಡಗೀತೆಗೆ ಅವಮಾನ ವ್ಯಕ್ತಪಡಿಸುತ್ತಾರೆ ಎಂದು ಹೇಳುವುದು ಯಾವುದೇ ಪ್ರಬುದ್ಧ ವ್ಯಕ್ತಿಗೆ ಸಮಂಜಸವಾಗಿ ಕಾಣುವುದಿಲ್ಲ.
ಯಾವುದೇ ವ್ಯಕ್ತಿಗಳನ್ನು ಬಿಡಿಬಿಡಿಯಾಗಿ ನೋಡಿದರೆ, ನಮಗೆ ಯಾವಾಗಲೂ ಒಂದು ರೀತಿಯ ಗೊಂದಲವೇ ಕಾಣುತ್ತದೆ. ಆನೆಯ ಭಾಗವನ್ನು ಕುರುಡ ಮುಟ್ಟಿ ನೋಡಿದಾಗ ಕಂಡಂತೆ ಗೊಂದಲವಾಗಿ ಕಾಣುತ್ತದೆ. ವ್ಯಕ್ತಿಯ ಒಂದು ವ್ಯಕ್ತಿತ್ವ ನಮಗೆ ಬೇಕಾದರೆ, ಆ ವ್ಯಕ್ತಿಯನ್ನು ಇಡಿಯಾಗಿ ನಾವು ನೋಡಬೇಕು. ಇಡಿಯಾದವ್ಯಕ್ತಿತ್ವದಲ್ಲಿ ಮೂಡುವ ಪ್ರಮುಖ ಅಂಶಗಳು ಅವನ ವ್ಯಕ್ತಿತ್ವವಾಗಿರುತ್ತದೆಯೇ, ಹೊರತು ಯಾವುದೋ ಒಂದು ಸಣ್ಣ ನ್ಯೂನತೆ ಅವನ ವ್ಯಕ್ತಿತ್ವವಾಗಿರುವುದಿಲ್ಲ. ಉದಾಹರಣೆಗೆ, ನಮ್ಮ ಹಿತಶತ್ರುಗಳು ನಮ್ಮ ಗೆಲುವನ್ನು ನೋಡಿ ಹಾರೈಸಿದಾಗಲೂ ಕೂಡ ನಮಗೆ, ಅದರಲ್ಲಿ ಹೊಟ್ಟೆಕಿಚ್ಚು ಕಾಣುತ್ತದಯೇ ಹೊರತು ಹಾರೈಕೆಯಲ್ಲ. ಹಾಗೆಯೇ ಪ್ರಾಣ ಸ್ನೇಹಿತರು ಕರೆ ಮಾಡಿ ಬಾಯಿಗೆ ಬಂದಂತೆ ಬೈದರೂ ಕೂಡ, ನಮಗೆ ಅಲ್ಲಿ ಒಂದು ಸದುದ್ದೇಶದ ಭಾವ ಕಾಣುತ್ತದೆಯೇ ಹೊರತು ಅಣಕವಲ್ಲ. ಹಾಗಾಗಿ ರೋಹಿತ್ ಚಕ್ರತೀರ್ಥ ಹಿನ್ನೆಲೆಯಲ್ಲಿ ನೋಡಿದಾಗ ಅವರಲ್ಲಿ ಯಾವುದೇ ದುರುದ್ದೇಶಗಳು ಕಾಣುವುದಿಲ್ಲ.
ಇವೆಲ್ಲರ ವಿದ್ಯಮಾನಗಳಿಗೆ ಕಾರಣ ರೋಹಿತ್ ಚಕ್ರತೀರ್ಥರು ಪಠ್ಯಪುಸ್ತಕದ ಪರಿಷ್ಕರಣ ಸಮಿತಿಯಲ್ಲಿರುವುದು. ಇದುವರೆಗೂ ಎಡಪಂಥೀಯ ವಿಚಾರಧಾರೆ ಗಳಿಂದ ತುಂಬಿದ ಪಠ್ಯಪುಸ್ತಕಗಳನ್ನು, ಬಲಪಂಥೀಯರು ಪರಿಷ್ಕರಿಸುವುದು ಎಡಪಂಥೀಯರಿಗೆ ಪಥ್ಯವಾಗುತ್ತಿಲ್ಲ. ಅವರು ಇದುವರೆಗೂ ಹೇಳಿಕೊಂಡು ಬಂದಿದ್ದ ಕಟ್ಟು ಕತೆಗಳು ಬಯಲಾಗುವ ಅಪಾಯ ಕಾಣುತ್ತಿದೆ. ಹಾಗಾಗಿ ಅವರು ಜಾತಿಗಳ ಮೂಲಕ ಹಿಂದೂಗಳಲ್ಲಿ ಒಡಕು ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ಕನ್ನಡದ ಹೆಮ್ಮೆಯ ಕವಿ ಕುವೆಂಪುರವರ ಹೆಸರನ್ನು ತೆಗೆದು ಪ್ರಯೋಗಿಸಿದರೆ, ಒಂದು ದೊಡ್ಡ ಸಮುದಾಯ ಅವರ ಕಡೆ ತಿರುಗಿ ಬೀಳಬಹುದು ಎಂಬಲೆಕ್ಕಾಚಾರದೊಂದಿಗೆ ಎಡಪಂಥೀಯರ ನಡೆ ಇದೆ.
ಎಡಪಂಥೀಯರು ಎಂದಿಗೂ ಹಿಂದೂ ಆಚರಣೆಗಳಲ್ಲಿ, ಸನಾತನ ಸಂಸ್ಕಾರದಲ್ಲಿ ಗೌರವ ಇಟ್ಟುಕೊಂಡು ಬಂದವರಲ್ಲ. ಹಿಂದೂ ಆಚಾರಗಳನ್ನು ವಿರೋಧಿ ಸುವುದೇ ಇವರ ಮೂಲ ಬಂಡವಾಳ. ಹಿಂದೂ ಆಚರಣೆಯನ್ನು ರಾಷ್ಟ್ರೀಯವಾಗಿ ಅಂತಾರಾಷ್ಟ್ರೀಯವಾಗಿ ಅಪಮಾನಗೊಳಿಸುವ ಇವರ ಇತಿಹಾಸವನ್ನು ಗಮನಿಸಿದಾಗ, ಕುವೆಂಪುರವರ ಮೇಲಿನ ಗೌರವ ಒಂದು ನೆಪವಾಗಿ ಕಾಣಿಸುತ್ತದೆ ಅಷ್ಟೇ.
ಪುಸ್ತಕ ಪರಿಷ್ಕರಣೆ ಸಮಿತಿಯ ಸದಸ್ಯರಾಗಿ, ರೋಹಿತ್ ಚಕ್ರತೀರ್ಥರ ಒಂದು ಪ್ರಮುಖ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮಹತ್ಕಾರ್ಯಕ್ಕೆ ಬೆಂಬಲವಾಗಿ ನಿಲ್ಲುವುದರ ಮೂಲಕ ಎಡ ಪಂಥೀಯ ದುರುದ್ದೇಶ ತತ್ವ ಬೇರುಗಳಿಗೆ ಕೊಡಲಿ ಏಟು ನೀಡುವ ಪ್ರಕ್ರಿಯೆಯನ್ನು ಮುಂದುವರಿಸಬೇಕು. ಕೊಳ್ಳೆ ಹೊಡೆಯುವ ಮುಂಚೆಯೇ ಕೋಟೆ ಬಾಗಿಲು ಭದ್ರಪಡಿಸಬೇಕು. ಕೊಳ್ಳೆ ಹೊಡೆದ ಮೇಲೆ ಎಷ್ಟು ಭದ್ರ ಮಾಡಿದರೂ ಪ್ರಯೋಜನವಿಲ್ಲ.
ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಬಹುಶಃ ಎಡಪಂಥೀಯರು ಬಲವಾಗಿ ನಂಬಿರುವ ಮೂಲ ಮಂತ್ರ. ತಮ್ಮ ವಿರುದ್ಧವಾದ ವಿಚಾರಗಳಿಗೆ ವಿರೋಧಿಸಬೇಕಾಗಿ ಬಂದಾಗ, ಎಲ್ಲರೂ ಒಟ್ಟಾಗಿ ಮುಗಿ ಬೀಳುತ್ತಾರೆ. ತ್ಯಾಗಪತ್ರ ನೀಡುತ್ತಾರೆ. ಪ್ರಶಸ್ತಿ ಹಿಂದಿರುಗಿಸುತ್ತಾರೆ. ಬಹುಶಃ ಇದೊಂದೇ ಬಲ ಪಂಥೀಯರು, ಎಡಪಂಥೀಯರಿಂದ ಕಲಿಯಬೇಕಾದ ಮಂತ್ರ!