ಗಾನ ಗಂಧರ್ವ ಎಸ್‌ಪಿಬಿ ಗಾನ ಸ್ಮರಣೆ
ಸ್ಮರಣೆ
ರಾಘವೇಂದ್ರ ಜೋಯ್ಸ್
ಅವರು ಹುಟ್ಟಿದ್ದು ಆಂಧ್ರ ಪ್ರದೇಶದಲ್ಲಾದರೂ, ಹಾಡಿದ್ದು ಭಾರತದ 16 ಭಾಷೆಗಳಲ್ಲಿ. ಆದರೂ ಕನ್ನಡ ನಾಡಿನ ಬಗ್ಗೆ, ಕನ್ನಡಿಗರ ಬಗ್ಗೆ ಅವರಿಗೆ ಅಪಾರ ಅಭಿಮಾನ. ಕನ್ನಡದಲ್ಲಿ ಸುಮಾರು 15000ಕ್ಕೂ ಅಧಿಕ ಹಾಡುಗಳನ್ನು ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಬಹುತೇಕ ಹಾಡುಗಳು ಜನಪ್ರಿಯವಾಗಿವೆ.
ಇಂದು(ಜೂನ್ 4) ಗಾನ ಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಜನ್ಮ ದಿನ. ಅವರು ಬದುಕಿದ್ದಿದ್ದರೆ ಅವರಿಗೆ 76 ವರ್ಷ ಆಗುತಿತ್ತು. ಭೌತಿಕವಾಗಿ ಅವರು ನಮ್ಮ ಜತೆ ಇಲ್ಲದಿದ್ದರೂ, ಮಾಡಿದ ಶಿಖರದೆತ್ತರಷ್ಟು ಸಾಧನೆಗಳಿಂದ, ವ್ಯಕ್ತಿತ್ವದಿಂದ ಅವರು ಸದಾ ನಮ್ಮೊಂದಿಗೆ ಇರುತ್ತಾರೆ. ಅವರೊಬ್ಬ ದೈತ್ಯ ಪ್ರತಿಭೆ.
ಅವರ ಅಸಾಧಾರಣವಾದ ಸಾಧನೆ ಎಲ್ಲ ಸಂಗೀತ ಪ್ರೇಮಿಗಳಿಗೆ ಗೊತ್ತಿರುವಂಥದ್ದೇ. ಸುಮಾರು ಐದು ದಶಕಗಳ ಕಾಲ 40000ಕ್ಕೂ ಅಧಿಕ ಹಾಡುಗಳನ್ನು 16 ಭಾಷೆಗಳಲ್ಲಿ ಹಾಡಿ, ೬ ಹಾಡುಗಳಿಗೆ ನ್ಯಾಷನಲ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದರೂ, ವಿನಯವಂತಿಕೆಯ ಸಾಕಾರಮೂರ್ತಿ ಆಗಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ.
ಅವರು ಹುಟ್ಟಿದ್ದು ಆಂಧ್ರ ಪ್ರದೇಶದಲ್ಲಾದರೂ, ಹಾಡಿದ್ದು ಭಾರತದ 16 ಭಾಷೆಗಳಲ್ಲಿ. ಆದರೂ ಕನ್ನಡ ನಾಡಿನ ಬಗ್ಗೆ, ಕನ್ನಡಿ ಗರ ಬಗ್ಗೆ ಅವರಿಗೆ ಅಪಾರ ಅಭಿಮಾನ. ಕನ್ನಡದಲ್ಲಿ ಸುಮಾರು 15000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಬಹುತೇಕ ಹಾಡುಗಳು ಜನಪ್ರಿಯವಾಗಿವೆ. ಅವರು ಹುಟ್ಟಿದ ದಿನವಾದ ಈ ಸಂದರ್ಭದಲ್ಲಿ ಅವರು ಕನ್ನಡದಲ್ಲಿ ವಿಭಿನ್ನವಾಗಿ ಹಾಡಿದ, ಅವರ ದೈತ್ಯ ಪ್ರತಿಭೆ ಅನಾವರಣಗೊಂಡ, ತುಂಬಾ ಜನ ಪ್ರಿಯವಾದ, ಆಯ್ದ 20 ಹಾಡುಗಳನ್ನು ನೆನಪು ಮಾಡಿಕೊಂಡು ಗುನುಗುನಿಸೋಣ.
ಶೀನಿವಾಸ ಕಲ್ಯಾಣ ಚಿತ್ರದ ‘ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ- ಈ ಹಾಡಿನಲ್ಲಿ ಭಕ್ತನು ವ್ಯಕ್ತಪಡಿಸುವ ಭಕ್ತಿಯ ಪರಾಕಾಷ್ಠೆಯನ್ನು ತುಂಬ ಚೆನ್ನಾಗಿ ಅನುಭವಿಸಿ ಹಾಡಿದ್ದಾರೆ. ಹಾಡು ಕೇಳಿದರೆ ಕಣ್ಣಂಚು ಒದ್ದೆಯಾಗುತ್ತದೆ.( ಸಾಹಿತ್ಯ ಚಿ. ಉದಯಶಂಕರ್, ಸಂಗೀತ- ರಾಜನ್ ನಾಗೇಂದ್ರ) ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ನಾಗರಹಾವು ‘ಚಿತ್ರದಲ್ಲಿ ರುವ ಹಾವಿನ ದ್ವೇಷ ಹನ್ನೆರಡು ವರುಷ’ ಹಾಡಿನಲ್ಲಿ ಎಸ್‌ಪಿಬಿ ದ್ವೇಷ, ಆವೇಷ ವ್ಯಕ್ತಪಡಿಸಿರುವ ಪರಿ ಅದ್ಭುತ. ( ಸಾಹಿತ್ಯ- ವಿಜಯನಾರಸಿಂಹ, ಸಂಗೀತ- ವಿಜಯಭಾಸ್ಕರ್) ಹೊಂಬಿಸಿಲು ಚಿತ್ರದ ಜೀವ ವೀಣೆ ನೀಡು ಮಿಡಿತದ ಸಂಗೀತ ಹಾಡಿನಲ್ಲಿ ವಿಷ್ಣುವರ್ಧನ್ ಮತ್ತು ಆರತಿ ಕಣ್ಣ ಅಭಿನಯಿಸಿದ್ದರೆ, ಎಸ್‌ಪಿಬಿ ಮತ್ತು ಜಾನಕಮ್ಮ ಧ್ವನಿಯ ಅಭಿನಯಿಸಿದ್ದರು.
(ಸಹಗಾಯಕಿ- ಎಸ್ ಜಾನಕಿ, ಸಾಹಿತ್ಯ- ಗೀತಪ್ರಿಯ, ಸಂಗೀತ- ರಾಜನ್ ನಾಗೇಂದ್ರ) ಮಾಂಗಲ್ಯ ಭಾಗ ಚಿತ್ರದ ‘ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ’ ಹಾಡಿಗೆ ಭಾವ, ಜೀವ ಎರಡೂ ತುಂಬಿ ಹಾಡಿದ್ದಾರೆ. (ಸಾಹಿತ್ಯ- ವಿಜಯನಾರಸಿಂಹ, ಸಂಗೀತ- ರಾಜನ್ ನಾಗೇಂದ್ರ) ದೇವರ ಗುಡಿ ಚಿತ್ರದ ‘ಮಾಮರವೆ, ಕೋಗಿಲೆಯ ಏನೀ ಸ್ನೇಹ ಸಂಬಂಧ’ ಇದು ಎಸ್‌ಪಿಬಿ ಅವರಿಗೆ ತುಂಬಾ ಇಷ್ಟವಾದ ಹಾಡು. ಇದನ್ನವರು ಅನುಭವಿಸಿ ಹಾಡಿದ ಪರಿ ಕೇಳುಗರನ್ನು ಮಂತ್ರ ಮುಗ್ಧವಾಗಿಸುತ್ತದೆ.(ಸಾಹಿತ್ಯ- ಚಿ. ಉದಯ ಶಂಕರ್, ಸಂಗೀತ- ರಾಜನ್ ನಾಗೇಂದ್ರ) ಗೀತಾ ಚಿತ್ರದ ‘ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು’ ಇದು ಸಾರ್ವ ಕಾಲಿಕ ಮಧುರವಾದ ಹಾಡು. ಇದರಲ್ಲಿ ಎಸ್‌ಪಿಬಿ ಮತ್ತು ಜಾನಕಮ್ಮ ಮಾಡುವ ಮೋಡಿ ಎಂಥಾ ಜೋಡಿಗಳಿಗೂ ಇಷ್ಟವಾಗದೇ ಇರದು. (ಸಹಗಾಯಕಿ-ಎಸ್.ಜಾನಕಿ, ಸಾಹಿತ್ಯ- ಚಿ.ಉದಯಶಂಕರ್, ಸಂಗೀತ- ಇಳಯರಾಜ) ಅದೇ ರೀತಿ ಗೀತಾ ಚಿತ್ರದ ‘ಸಂತೋಷಕ್ಕೆ ಹಾಡು ಸಂತೋಷಕ್ಕೆ’ ಹಾಡಿನಲ್ಲಿ ಇವರು ಹಾಡಿರುವ ಜೋಶ್ ಇವತ್ತಿಗೂ ಕಡಿಮೆ ಆಗಿಲ್ಲ.
ಮುಂದೂ ಆಗಲ್ಲ.(ಸಾಹಿತ್ಯ- ಚಿ. ಉದಯಶಂಕರ್, ಸಂಗೀತ- ಇಳಯರಾಜ) ಪಲ್ಲವಿ ಅನುಪಲ್ಲವಿ ಚಿತ್ರದ ‘ನಗುವ ನಯನಮಧುರ ಮೌನ’ ಇದು ಅತಿ ಮಧುರವಾದ ಹಾಡು. ಇದಕ್ಕೆ ಒಂದು ಪ್ರಮುಖವಾದ ಕಾರಣ ಹಾಡಿನಲ್ಲಿ ಎಸ್‌ಪಿಬಿ ಮತ್ತು ಜಾನಕಮ್ಮನವರು ಮಾಡುವ ಡೈನಾಮಿಕ್ಸ್(ಸಹಗಾಯಕಿ- ಎಸ್. ಜಾನಕಿ, ಸಾಹಿತ್ಯ- ಆರ್.ಎನ್.ಜಯಗೋಪಾಲ್, ಸಂಗೀತ- ಇಳಯರಾಜ) ರಥಸಪ್ತಮಿ ಚಿತ್ರದ ‘ಶಿಲೆಗಳು ಸಂಗೀತವಾ ಹಾಡಿದೆ’ ಹಾಡಿನಲ್ಲಿ ಅವರು ಹಾಡಿದ ಸಂಗೀತ ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ.
(ಸಹಗಾಯಕಿ- ಎಸ್ ಜಾನಕಿ, ಸಾಹಿತ್ಯ- ಚಿ. ಉದಯಶಂಕರ್, ಸಂಗೀತ- ಉಪೇಂದ್ರಕುಮಾರ್) ಬಂಧನ ಚಿತ್ರದ ‘ನೂರೊಂದು ನೆನಪು ಎದೆಯಾಳದಿಂದ’ ಹಾಡನ್ನು ಎಸ್‌ಪಿಬಿ ಅವರು ಎದೆ ಯಾಳದಿಂದಲೇ ಹಾಡಿದ್ದಾರೆ. (ಸಾಹಿತ್ಯ- ಆರ್. ಎನ್. ಜಯಗೋಪಾಲ್, ಸಂಗೀತ- ಎಂ. ರಂಗರಾವ್) ಬಂಧನ ಚಿತ್ರದ ಇನ್ನೊಂದು ಗೀತೆ ‘ಪ್ರೇಮದಾ ಕಾದಂಬರಿ ಬರೆದೆನು ಕಣ್ಣೀರಲಿ’ ಹಾಡಿನಲ್ಲಿ ಅವರು ಅನುಭವಿಸಿ ಹಾಡಿದ ರೀತಿ ಬಹುಶಃ ಬೇರೆ ಯಾರಿಂದಲೂ ಹಾಡಲು ಆಗದು(ಸಾಹಿತ್ಯ- ಆರ್.ಎನ್. ಜಯಗೋಪಾಲ್, ಸಂಗೀತ- ಎಂ.ರಂಗರಾವ್) ಒಲವಿನ ಉಡುಗರೆ ಚಿತ್ರದ ‘ಕಣ್ಣಿಗೆ ಕಾಣದ ನಾಟಕಕಾರ ನಿನಗೇ ನನ್ನ ನಮಸ್ಕಾರ’ ಅವರ ಧ್ವನಿಯಲ್ಲಿ ಮೂಡಿ ಬಂದ ಇನ್ನೊಂದು ಅತ್ಯದ್ಭುತವಾದ ಗೀತೆ.
(ಸಾಹಿತ್ಯ- ಆರ್.ಎನ್. ಜಯಗೋಪಾಲ್, ಸಂಗೀತ- ಎಂ.ರಂಗರಾವ್) ಬೆಂಕಿಯಲ್ಲಿ ಅರಳಿದ ಹೂವು ‘ಚಿತ್ರದ ತಾಳಿ ಕಟ್ಟುವಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ’ ಈ ಅರ್ಥಪೂರ್ಣ ಹಾಡನ್ನು ಪ್ರಾಣಿ, ಪಕ್ಷಿಗಳ ಮಿಮಿಕ್ರಿ ಮಾಡುವುದರೊಂದಿಗೆ ತುಂಬಾ ಚೆನ್ನಾಗಿ ಹಾಡಿದ್ದಾರೆ. (ಸಾಹಿತ್ಯ- ಚಿ.ಉದಯಶಂಕರ್, ಸಂಗೀತ- ಎಂ.ಎಸ್. ವಿಶ್ವನಾಥನ್) ಅಮ್ರುತವರ್ಷಿನಿ ಚಿತ್ರದ ‘ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲೀ’ ಹಾಡಂತೂ ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳ ಬೇಕೆನಿಸುವ ಮಧುರ ವಾದ ಹಾಡು (ಸಾಹಿತ್ಯ ಕೆ. ಕಲ್ಯಾಣ್, ಸಂಗೀತ- ದೇವಾ) ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ‘ಉಮಂಡು ಉಮಂಡು ಘನ್ ಗರಜೇ ಬದರಾ’ ಹಿಂದುಸ್ತಾನಿಶಾಸ್ತ್ರೀಯ ಸಂಗೀತದ ಈ ಹಾಡನ್ನುಶಾಸ್ತ್ರೀಯಸಂಗೀತ ಕಲಿಯದಿದ್ದರೂ ಎಸ್‌ಪಿಬಿ ಅವರು ಇದನ್ನು ಅದ್ಭುತವಾಗಿ ಹಾಡಿದ್ದಲ್ಲದೇ, ಈ ಹಾಡಿಗೆ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದರು. (ಸಾಹಿತ್ಯ- ತಾನ್ ಸೇನ್, ಸಂಗೀತ- ಹಂಸಲೇಖ) ಶ್ರೀ ಮಂಜುನಾಥ ಎಂಬ ಭಕ್ತಿ ಪ್ರಧಾನ ಚಿತ್ರದ ‘ಆನಂದಾ ಪರಮಾನಂದಾ’ ಎಂಬ ದುಃಖದ ಸಂದರ್ಭ ತೋರಿಸಿ ಕೊಳ್ಳದೇ ಸಂತೋಷದಿಂದ ಅತಿಥಿ ಸತ್ಕಾರ ಮಾಡುವ ಹಾಡನ್ನು ಅತ್ಯದ್ಭುತವಾಗಿ ಅನುಭವಿಸಿ ಹಾಡಿದ್ದಾರೆ ಎಸ್‌ಪಿಬಿ.
(ಸಹಗಾಯಕಿ- ಚಿತ್ರ, ಸಾಹಿತ್ಯ ಮತ್ತು ಸಂಗೀತ- ಹಂಸಲೇಖ) ದಿಗ್ಗಜರು ಚಿತ್ರದಲ್ಲಿ ‘ಕುಚಿಕು ಕುಚಿಕು ಕುಚಿಕು’ ಹಾಡು ವಿಷ್ಣು ವರ್ಧನ್ ಮತ್ತು ಅಂಬರೀಷ್ ಅವರ ಗೆಳೆತನದ ಬಗ್ಗೆ ಇರುವ ಒಳ್ಳೆಯ ಹಾಡು. ಅವರಿಬ್ಬರ ಸ್ನೇಹಿತರೂ ಅಗಿದ್ದ ಎಸ್‌ಪಿಬಿ ಇಬ್ಬರ ಪಾತ್ರದ ಹಾಡನ್ನೂ ಒಬ್ಬರೇ ಅದ್ಭುತವಾಗಿ ಹಾಡಿದ್ದಾರೆ( ಸಾಹಿತ್ಯ ಮತ್ತು ಸಂಗೀತ- ಹಂಸಲೇಖ) ಗಡಿಬಿಡಿ ಗಂಡ ಚಿತ್ರದ ‘ನೀನು ನೀನೇ ಇಲ್ಲಿ ನಾನು ನಾನೇ’ ಎಂಬ ಇಬ್ಬರ ಪಾತ್ರಕ್ಕಾಗಿ (ರವಿಚಂದ್ರನ್, ತಾಯ್ ನಾಗೇಶ್) ಮಾಡಿದ ಅದ್ಭುತ ಹಾಡನ್ನು ಲೀಲಾ ಜಾಲವಾಗಿ ಸುಶ್ರಾವ್ಯವಾಗಿ, ಬೇರೆ ಬೇರೆ ಧ್ವನಿಯಲ್ಲಿ ತುಂಬಾ ಸೊಗಸಾಗಿ ಹಾಡಿದ್ದಾರೆ. ( ಸಾಹಿತ್ಯ ಮತ್ತು ಸಂಗೀತ- ಹಂಸಲೇಖ) ಶ್ರೀರಾಮಚಂದ್ರ ಚಿತ್ರಕ್ಕಾಗಿ ಉಬ್ಬು ಹಲ್ಲಿನ ರವಿಚಂದ್ರನ್ ಪಾತ್ರಕ್ಕಾಗಿ ಮಾಡಿರುವ ‘ಸುಂದರಿ ಸುಂದರಿ’ ಹಾಡನ್ನು ಬಹಳ ವಿಭಿನ್ನವಾಗಿ ಆ ಪಾತ್ರಕ್ಕೆ ತಕ್ಕನಾಗಿ ಹಾಡಿದ್ದಾರೆ. (ಸಾಹಿತ್ಯ ಮತ್ತು ಸಂಗೀತ- ಹಂಸಲೇಖ)
ತುತ್ತಾ ಮುತ್ತಾ ಚಿತ್ರದ ‘ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲೀ ಸುವ್ವಾಲಿ ಈ ತಾಯಿ ಕೇಳಲಿ’ ಮಗ ತಾಯಿಗೆ ಲಾಲಿ ಹಾಡುವ ಈ ಹಾಡು ಕೇಳಿದರೆ ಯಾವ ತಾಯಿಯಾದರೂ ಮಲಗಲೇಬೇಕು. ಅಷ್ಟು ಚೆನ್ನಾಗಿ ಹಾಡಿದ್ದಾರೆ. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಎಲ್ಲ ಹಾಡುಗಳ ಯಶಸ್ಸಿನ ಹಿಂದೆ ಸಹಗಾಯಕರು, ಗೀತೆ ರಚನೆಕಾರರು, ಸಂಗೀತ ನಿರ್ದೇಶಕರು, ಅಭಿನ ಯಿಸಿದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಹೀಗೆ ಎಲ್ಲರ ಶ್ರಮ ಇದ್ದೇ ಇರುತ್ತದೆ ನಿಜ.
ಆದರೆ ಅವರು ಪ್ರತಿ ಹಾಡು ಹಾಡುವಾಗಲೂ ತುಂಬಾ ಶ್ರದ್ಧೆಯಿಂದ ಪಾತ್ರದ ಬಗ್ಗೆ ತಿಳಿದುಕೊಂಡು, ಸಾಹಿತ್ಯ ಅರ್ಥ ಮಾಡಿ ಕೊಂಡು ಭಾವ ತುಂಬಿ ಹಾಡುವುದರ ಮೂಲಕ ಎಲ್ಲ ಹಾಡಿನ ಯಶಸ್ಸಿಗೆ ಹೆಚ್ಚು ಕೊಡುಗೆ ಮತ್ತು ತೂಕ ನೀಡಿದ್ದಾರೆ ಎಂದರೆ ತಪ್ಪಾಗಲಾರದು. ಇವರು ಕನ್ನಡಕ್ಕಾಗಿ ಅಷ್ಟು ಹಾಡು ಹಾಡಿ ಕನ್ನಡ ಜನರ ಮನಸ್ಸಿಗೆ ಮುದ, ನೆಮ್ಮದಿ ನೀಡಿರುವಾಗ ಅವರ ಜನ್ಮ ದಿನವಾದ ಇಂದು ಕನ್ನಡಿಗರಾದ ನಾವು ಅವರ ಹಾಡನ್ನು ನೆನಪಿಸಿಕೊಳ್ಳತ್ತಾ, ಗುನುಗುತ್ತಾ ಎಸ್‌ಪಿಬಿ ಅವರಿಗೆ ಗೌರವ ಸಲ್ಲಿಸೋಣ .