ಪಥ್ಯವಾಗದ ಪಠ್ಯ ಮತ್ತು ಅರ್ಥವಾಗದ ಸತ್ಯ !
ಅಭಿಮತ
ಜಿ.ಪ್ರತಾಪ್‌ ಕೊಡಂಚ
.@.
ಕರ್ನಾಟಕದಲ್ಲಿ ಪಠ್ಯ ವಿವಾದ ತಣಿಯುವ ಲಕ್ಷಣವಿಲ್ಲ. ಸತ್ಯದ ಪರಿಚಯ ಮಾಡ ಹೊರಟಿದ್ದ ಸರಕಾರ, ನಿಲುವನ್ನು ಸಮರ್ಥಿಸಿ ಕೊಳ್ಳಲಾಗದೇ ನುಣುಚಿಕೊಂಡಿದೆ. ಆರಂಭದಲ್ಲಿ ನಿದ್ರಿಸುತ್ತಿದ್ದ ಸರಕಾರ, ವೈ(Uಏ)ಜ್ಞಾನಿಕರ, ಚಿಂತಕರ ಒತ್ತಡಕ್ಕೆ ಮಣಿದುತಲ್ಲಣಿಸಿ ದಂತಿದೆ.
ಪಠ್ಯದಲ್ಲಿ ತಿರುಚಲಾಗಿದೆಯೆಂಬ ಹಲವು ಅಂಶಗಳು ಈಗಿನದ್ದಲ್ಲ. ಕುವೆಂಪುರವರ ಪರಿಚಯ ಸಣ್ಣದಾಗಿದ್ದದ್ದಾಗಲಿ, ಬಸವಣ್ಣ ನವರ ವಿಚಾರಗಳಲ್ಲಿನ ದೋಷವಾಗಲಿ ಹಿಂದೆಯೂ ಇತ್ತಲ್ಲ! ಇಲ್ಲಿಯ ತನಕವಿಲ್ಲದ ವಿರೋಧ ಈಗೇಕೆ? ದೋಷಗಳು ಗಮನಕ್ಕೆ ಈಗ ಬಂದವೆಂದಾದರೂ, ಕಾರಣರಾದ ಸಮಿತಿಯನ್ನೂ ಹೊಣೆಗಾರರಾಗಿಸಿ ಉತ್ತರ ಬಯಸುವ ಆಸಕ್ತಿ ಏಕಿಲ್ಲ? ಈ ರೀತಿಯಾಗಿ ಸರಿಪಡಿಸಿ ಎಂಬ ಆಗ್ರಹ ಎಲ್ಲಿಯೂ ಯಾಕೆ ಕಾಣಿಸುತ್ತಿಲ್ಲ? ಈ ಪ್ರಶ್ನೆಗ ಚಕ್ರವ್ಯೂಹದ ಒಳಹೊಕ್ಕು ಇಣುಕಿದರೆ, ತಪ್ಪು ಒಪ್ಪು ಗಳಿಗೂ ಮಿಗಿಲಾದ ಉದ್ದೇಶ, ಸರಕಾರವನ್ನು ಬಗ್ಗಿಸುವುದು ಮತ್ತು ಪರಿಷ್ಕರಣದ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥರನ್ನು ಸೆಣೆಯುವುದು ಎನ್ನುವುದು ಸ್ಪಷ್ಟವೆನಿಸು ತ್ತದೆ.
ಹದಿನಾಲ್ಕು ಲೇಖಕರು ತಮ್ಮ ಸಾಹಿತ್ಯ ಪಠ್ಯದಿಂದ ಹೊರ ತೆಗೆಯಿರಿ ಎಂದು ಬಿನ್ನವಿಸಿ ಕೊಂಡಿದ್ದಾರೆ. ವಿಶೇಷವೆಂದರೆ ಅನುಮತಿ ಹಿಂಪಡದ ಏಳು ಲೇಖಕರ ಸಾಹಿತ್ಯ ಪಠ್ಯದ ಇಲ್ಲ! ವಿಚಾರವಂತ, ಸಾಮಾಜಿಕ ಸಾಕ್ಷಿಯ ಪ್ರತಿನಿಧಿಗಳಾದ ಇವರಾರೂ, ಏನು ತಪ್ಪಾಗಿದೆ? ಹೇಗೆ ಸರಿಪಡಿಸಬೇಕು ಎಂಬ ಮಾತಾಡುತ್ತಿಲ್ಲ. ಗೋಚರಿಸಿದ ತಪ್ಪುಗಳು ಹಿಂದೆಯೂ ಇದ್ದವೆಂದ ಮೇಲೆ, ಆಗಲೂ ತಮ್ಮ ಪಠ್ಯ ಇದ್ದಿದ್ದು ಇವರಾರಿಗೂ ತಪ್ಪೆನಿಸುತ್ತಿಲ್ಲವೇ? ಒಬ್ಬರಂತೂ, ನಮ್ಮ ಬೇಡಿಕೆ ಆಧರಿಸಿ, ಪರಿಷ್ಕ್ರತ ಪಠ್ಯ ಹಿಂಪಡೆದು, ಹಳೆ ಪಠ್ಯವನ್ನೇ ಮುಂದುವರಿಸದ ಸರಕಾರದ ನಡೆ ದಬ್ಬಾಳಿಕೆಯಿಂದಿದ್ದಾರೆ! ತಪ್ಪೇನೆಂದು ನಿರೂಪಿಸಲಾಗದೇ, ಪರಿಷ್ಕ್ರತ ಪಠ್ಯಹಿಂಪಡೆಯಲೇ ಬೇಕೆಂಬ ಹಠಮಾರಿ ನಿಲುವೂ ಸರ್ಕಾರದ ಮೇಲಿನ ದಬ್ಬಾಳಿಕೆಯಲ್ಲವೇ? ವಸ್ತುನಿಷ್ಠವಾಗಿ ಸಮರ್ಥಿಸಿ ಕೊಳ್ಳಲಾಗದ ನಿಲುವನ್ನು ಹೇರಿ, ಪ್ರತಿಭಟನೆ, ಅನುಮತಿ ಹಿಂಪಡೆಯುವ, ರಾಜೀನಾಮೆಯ ನಾಟಕವಾಡುತ್ತಿರುವವರೇ ಸಮಾನತೆಯನ್ನು ಹತ್ತಿಕ್ಕಲಾಗಿದೆ, ಶೋಷಣೆಗೊಳಗಾಗಿದ್ದೇವೆ ಎನ್ನುತ್ತಿರುವುದು ವಿಪರ್ಯಾಸ!
ಈ ಎಲ್ಲ ನಡಾವಳಿಗಳು ನಿರ್ಭೀತವಾಗಿ ನಡೆಯುತ್ತಿರುವುದೇ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿದಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ. ಒಂದೇ ಸಿದ್ಧಾಂತದವರ ಸಾಹಿತ್ಯ ತೆಗೆದುಕೊಳ್ಳಲಾಗಿದ್ದರೆ, ಇವರಿಗೆಲ್ಲ ಹಿಂಪಡೆಯುವ ಅವಕಾಶವೆಲ್ಲಿ ಬರುತಿತ್ತು? ಶಿಕ್ಷಣ ಸಚಿವನಾಗೇಶರ ತುಮಕೂರಿನ ಖಾಸಗಿ ನಿವಾಸಕ್ಕೆ ನುಗ್ಗಿ, ಪ್ರತಿಭಟಿಸಿದ ವಿದ್ಯಾರ್ಥಿ(?)ಗಳು, ಅವರು ಓದುವ ಕಾಲಕ್ಕಾಗಲೀ, ಅಥವಾ ಇಂದಾಗಲಿ ಪಠ್ಯ ಪುಸ್ತಕ ಓದಿರಲಿಕ್ಕಿಲ್ಲ. ಓದಿದ್ದರೆ ಹೊರ ಜಿಲ್ಲೆಗಳಿಂದತುಮಕೂರಿಗೆ ಬಂದು, ಸಚಿವ ರಿಲ್ಲದ ಸಮಯ ನೋಡಿ, ಪ್ರತಿಭಟನೆ ಹೆಸರಲ್ಲಿ ಮನೆಯಂಗಳಕ್ಕೆ ನುಗ್ಗಿ, ಚೆಡ್ಡಿ ಸುಡುವ ಕಾಯಕಕ್ಕೆ ಮುಂದಡಿಯಿಡುತ್ತಿರಲಿಲ್ಲ.
ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯವೆಂಬ ವಿಚಾರಧಾರೆ ಪಠ್ಯದಲ್ಲಿದೆ, ಅದು ಆರೆಸ್ಸೆಸ್ ಸಂಸ್ಥಾಪಕರ ಚಿಂತನೆಯೆಂಬುದು ಕೆಲವರ ಆಕ್ಷೇಪ. ಪಕ್ಷಕ್ಕೆ ಯಾರೂ ಮುಖ್ಯವಲ್ಲ. ನನಗೆ ಜೈಕಾರ ಕೂಗಬಾರದೆಂದು ಕಟ್ಟಪ್ಪಣೆ ಹೊರಡಿಸಿದ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮಾತಿಗೂ ನಿಮ್ಮ ವಿರೋಧವಿದೆಯೇ? ಅವರೇನೋ ಮರುಕ್ಷಣವೇ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು ಮತ್ತವರಮ್ಮನಿಗೆ ಜೈ ಜೈಕಾರ ಹಾಕಿಸಿಯೂ ಬಿಟ್ಟಿದ್ದರೆನ್ನಿ!
ಅದು ವ್ಯಕ್ತಿ ಪೂಜೆಯಲ್ಲ, ಶಕ್ತಿ ಪೂಜೆ! ಸಮಸ್ಯೆ ಬಿಗಡಾಯಿಸಲು ಸರ್ಕಾರ ತನ್ನ ಅಪೂರ್ವ ಕೊಡುಗೆ ನೀಡಿದೆ. ಆಕ್ಷೇಪ ವ್ಯಕ್ತ ಪಡಿಸಿದ ಲೇಖಕರು, ಪ್ರಮುಖರನ್ನು ಕರೆಸಿ, ಪರಿಷ್ಕರಣ ಸಮಿತಿಯವರೆದುರು ಕೂರಿಸಿ, ತಪ್ಪು ಒಪ್ಪುಗಳನ್ನು ಚರ್ಚಿಸಿ ಮುನ್ನಡೆಯುವ ನಾಯಕತ್ವ ವಹಿಸಿಕೊಳ್ಳಬೇಕಿತ್ತು. ಶಿಕ್ಷಣ ಮಂತ್ರಿಗಳೊಬ್ಬರು, ಸಂಸದ ಪ್ರತಾಪ್ ಸಿಂಹ, ಶಾಸಕ ಸಿ.ಟಿ ರವಿಬಿಟ್ಟರೆ ಬೇರಾರೂ ಪರಿಷ್ಕರಣ ಸಮಿತಿಯ ಬೆನ್ನಿಗೆ ನಿಲ್ಲದಿದ್ದುದು, ಪರಿಹಾರಕ್ಕೆ ಮುಂದಡಿಯಿಡದಿದ್ದುದು ದುರಂತ.
ಗಲಭೆಗೆ ತಿರುಗಿದನಂತರವಷ್ಟೇ ವರದಿ ತರಿಸಿ, ಪರಿಶೀಲಿಸಿದ ಮುಖ್ಯಮಂತ್ರಿಗಳು, ಹೊಣೆಗಾರಿಕೆಯ ಹೊರಗೇ ನಿಂತು ಸಮಿತಿ ವಿಸರ್ಜಿಸಿ ತೆರೆ ಎಳೆದಿದ್ದಾರೆ. ಕಠಿಣ ಕ್ರಮಕ್ಕೆ ಹೆಸುರುವಾಸಿಯಾದ ಪ್ರಸ್ತುತ ಸರ್ಕಾರ,ಗಲಭೆ ಗೊಂದಲಗಳನ್ನೇ ತನ್ನ ಜೀವಾಳ ಮಾಡಿಕೊಂಡಿದೆ. ಹಾವೂ ಸಾಯಬಾರದು, ಕೋಲೂ ಮುರಿಯಬಾರದು, ಅಧಿಕಾರದಲ್ಲಿ ಮುಂದುವರಿದರೆ ಸಾಕೆಂಬುದೇ ಪ್ರಸ್ತತ ಸರ್ಕಾರದ ಧ್ಯೇಯ.
ಪಠ್ಯದ ಬದಲಾವಣೆಗೆ ವಿರೋಧ ಹೊರತು ಸಮಿತಿ ಮೇಲಲ್ಲ ಎಂದ ಎಲ್ಲರ ಗುರಿ ಇದ್ದದ್ದು ರೋಹಿತ್ ಚಕ್ರತೀರ್ಥ ಮೇಲೆ. ನಿಲುವು, ಒಲವುಗಳ ಹೊರತಾಗಿ, ರೋಹಿತ್ ಮೇಲಿನ ಎರಡು ಪ್ರಮುಖ ಆಕ್ಷೇಪ, ಅವರಿಗಿರುವ ಅರ್ಹತೆ ಮತ್ತವರು ಸಾಮಾಜಿಕ ಮಾಧ್ಯಮದಲ್ಲಿ ಬಹು ಹಿಂದೆ ಹಂಚಿಕೊಂಡಿದ್ದ ತುಣುಕುಗಳು ಮತ್ತು ನಾಡಗೀತೆಯ ಅಣಕವಾಡುವಿನ ಕುರಿತ ಆಕ್ಷೇಪ.
ಕಾಲೇಜು ಮೆಟ್ಟಿಲೇ ಹತ್ತದ ಉನ್ನತ ಶಿಕ್ಷಣ ಮಂತ್ರಿಗಳು, ಮುಖ್ಯಮಂತ್ರಿಗಳು, ವಿಜ್ಞಾನದ ಗಂಧಗಾಳಿಯಿಲ್ಲದ ಗಣಿ, ಭೂವಿಜ್ಞಾನ, ತಂತ್ರಜ್ಞಾನ ಸಚಿವರು, ಅರ್ಥಶಾಸ್ತ್ರದ ಅರಿವಿಲ್ಲದ ಅರ್ಥಮಂತ್ರಿಗಳನ್ನೇ ಒಪ್ಪಿ, ಅವರ ಕಾರ್ಯಕ್ಷಮತೆ ಪ್ರಶಂಸಿಸುವ ನಮಗೆ, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಕೊಂಡ, ಬರಹಗಾರನಾಗಿಯೂ ಗುರುತಿಸಿಕೊಂಡು ಚಿಕ್ಕವಯಸ್ಸಿನ ಗಮನಾರ್ಹ ಸಾಧನೆ ಮಾಡಿದ ಚಕ್ರತೀರ್ಥರು ಅನರ್ಹರೆನಿಸುವುದು ಹೇಗೆ? ಅರ್ಹತೆಗೆ ಪದವಿ, ವಯಸ್ಸು, ಹೊಂದಿದ್ದ ಹುದ್ದೆಗಳೇ ನಿರ್ಣಾಯಕವೆನಿಸಿದರೆ ವಿವಿಧ ವಲಯಗಳಲ್ಲಿ ಇಂತಹ ಯೋಗಮಾನಗಳಿಲ್ಲದ ಹಲಮಹನೀಯರೂ ಅನರ್ಹರಾಗಬೇಕಲ್ಲವೇ? ರೋಹಿತ್ ಸಾಮಾಜಿಕ ತಾಣದಲ್ಲಿ ಹಿಂದೆಂದೋ ಹಂಚಿಕೊಂಡಿದ್ದು ಅಶ್ಲೀಲಕರ, ಕೀಳು ಅಭಿರುಚಿಯದ್ದು, ಅದಕ್ಕೆ ಅವರು ಯೋಗ್ಯರಲ್ಲವೆಂಬ ವಾದಮುಂದಿಡಲಾಗಿದೆ.
ಅವುಗಳ ಲೆಷ್ಟು ರೋಹಿತರೇ ಹಂಚಿಕೊಂಡಿದ್ದು, ಎಷ್ಟು ಗಲಭೆ ಕೋರರ ಸೃಷ್ಟಿ ಎಂಬ ಗೊಂದಲವೂ ಇದೆ. ಒಂದೊಮ್ಮೆ, ಅವರೇ ಹಂಚಿಕೊಂಡಿದ್ದು ಹೌದೆಂದುಕೊಂಡರೂ, ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿಯೋ, ಇನ್ನಾವುದೋ ಜವಾಬ್ದಾರಿಹುzಯಿಂದ ಹಂಚಿಕೊಂಡ ತುಣುಕು ಗಳಲ್ಲವಲ್ಲ. ವಯಸ್ಕರ ಜೋಕುಗಳಾಗಿದ್ದವಾದರೂ, ಯಾರೊಬ್ಬರನ್ನು ಉದ್ದೇಶಿಸಿ ತೇಜೋವಧೆಗಾಗಿ ಮಾಡಿದ ಹೇಳಿಕೆ ಗಳಲ್ಲವಲ್ಲ!
ನಾವೆಲ್ಲರೂ ಒಪ್ಪಿಕೊಂಡ ಲಂಕೇಶರೂ ತುಂಟಾಟದ ಅಂಕಣ ಬರೆಯುತ್ತಿರಲಿಲ್ಲವೇ? ವೈಯಕ್ತಿಕ ನೆಲೆಯಲ್ಲಿ ವಯಸ್ಕರ ಜೋಕುಗಳನ್ನು ಹೇಳಿಕೊಂಡ ಮಾತ್ರಕ್ಕೆ ಆ ವ್ಯಕ್ತಿ ಅನರ್ಹ, ಅಸಭ್ಯ ಎನ್ನುವುದೆಷ್ಟು ಸಮಂಜಸ? ಈ ಮಾನದಂಡದಲ್ಲಿ ನೋಡಿದರೆ ಮಾಡ ಲೇಬಾರದ್ದು, ಮಾಡಬಾರದ ಜಾಗಗಳಲ್ಲಿಯೂ ಮಾಡಿ, ಸಿಕ್ಕಿ ಬಿದ್ದಿದ್ದರೂ ಜವಾಬ್ದಾರಿಯ ಹುದ್ದೆಯಲ್ಲಿ ಸಭ್ಯರ ಸೋಗಿನಲ್ಲಿರುವವರಿಗೆ ಏನು ಮಾಡಬೇಕು? ಇಂತಹ ಅನಾಚಾರಿಗಳು ಎಡೆ ಇದ್ದಾರಲ್ಲ ಅವರೆಲ್ಲರ ನಡುವೆ, ಅಂತಹ ಯಾವುದೇ ತಪ್ಪು ಮಾಡದ ರೋಹಿತ್ ಮಾತ್ರ ಕಳಂಕಿತರೆನಿಸುವುದು ಹೇಗೆ? ಈಗೇನೋ ಬರೀ ಪರಿಷ್ಕರಣ ಸಮಿತಿ ವಿಸರ್ಜಿಸಿ ದ್ದೇವೆ, ತಪ್ಪುಗಳನ್ನು ಸರಿಪಡಿಸಿ ಮುಂದುವರಿಸುತ್ತೇವೆ ಎಂದಿದೆ ಸರಕಾರ.
ನಾಳೆ ಹೊಸ ಪಠ್ಯವನ್ನೂ ಕೈಬಿಟ್ಟು ಕೈತೊಳೆದುಕೊಂಡರೂ ಆಶ್ಚರ್ಯವೇನಿಲ್ಲ! ಅವರಿಗೇನಿದ್ದರೂ ದಿನ ದೂಡುವುದು ಮುಖ್ಯ. ಏನು ಮಾಡಿದ್ದೀರಿ ಕೇಳಿದರೆ, ಮುಂಚೆಯೂ ಹೀಗೆಯೇ ಇತ್ತು ಎನ್ನುವುದಷ್ಟೇ ಅವರ ಉತ್ತರದಾಯಿತ್ವ! ತನ್ನ ಬರಹ, ಮಾತಿನ ಮೇಲೆ ಸೀಮಿತ ಅನುಯಾಯಿಗಳಿದ್ದ ಚಕ್ರತೀರ್ಥರನ್ನು ಕರ್ನಾಟಕದ ಮನೆಮನೆಗೂ ಪರಿಚಯಿಸಿದ ಕೀರ್ತಿಗಲಭೆಕೋರರದ್ದೇ.ತೀರಾ ಕೆಳಹಂತದ ವೈಯಕ್ತಿಕ ಟೀಕೆ ಟಿಪ್ಪಣಿಗಳು ಬಂದರೂ, ಬೆಂಬಲಕ್ಕೆ ನಿಲ್ಲಬೇಕಾಗಿದ್ದವರು ನುಣುಚಿಕೊಂಡರೂ, ಧೃತಿಗೆಡದೆ ವಿಷಯಾಧಾರಿತ ಅಂಶಗಳನ್ನು ಪ್ರತಿಪಾದಿಸಿದ ರೋಹಿತರ ತಾಳ್ಮೆ, ಅರಿವು, ಪರಿಶ್ರಮ ಪ್ರಶಂಸನೀಯ.
ಇದನ್ನು ಗಮನಿಸಿಯೇ ಪಂಥಗಳ ನೆಲೆ ಮೀರಿದ ಮೀರಿದ ಜನಾಭಿಪ್ರಾಯ, ಬೆಂಬಲ ಚಕ್ರತೀರ್ಥರಿಗೆ ದೊರಕಿದೆ. ಪಠ್ಯವೊಂದರ ರಚನೆಯಲ್ಲಿ ಸ್ಥಾಪಿತ ಹಿತಾಸಕ್ತಿಗಳು ಹೇಗೆ ಕೆಲಸ ಮಾಡಿವೆ? ಮಾಡುತ್ತವೆ? ಇವರೆಲ್ಲರ ಗುರಿಯೇನು? ಎಂಬುದನ್ನು ರೋಹಿತ್ ಸಮರ್ಥವಾಗಿ ತೆರೆದಿಟ್ಟಿದ್ದಾರೆ. ಬರೀ ಮಕ್ಕಳಷ್ಟೇ ಓದುತ್ತಿದ್ದ ಪಠ್ಯ ಪುಸ್ತಕ ಮನೆ ಮನೆಯವರೂ ಓದುವಂತೆ ರೋಹಿತ್ ಮಾಡಿ ದ್ದಾರೆ. ಈ ಎಲ್ಲ ಕಾರಣಗಳಿಗೆ ರೋಹಿತ್ ಅಭಿನಂದಾನಾರ್ಹರು.