ರಾಷ್ಟ್ರೀಯತೆಯೇ ಕೇಸರಿಕರಣ ಎನ್ನುವುದಾದರೆ, ಅದೇ ಆಗಲಿ !
ಅಭಿಪ್ರಾಯ
ಜಗದೀಶ ಮಾನೆ
ಸ್ವದೇಶಿಯ ಚಿಂತನೆಗಳ ಆಧಾರದ ಮೇಲೆ ಶಿಕ್ಷಣ, ಸಮಾಜ, ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಮತ್ತು ಆಯಾ ರಾಷ್ಟ್ರಗಳ ಸಂಸ್ಕೃತಿ, ಪರಂಪರೆ, ಬಲಿದಾನಿಗಳ ವಿಚಾರದ ಆಧಾರದ ಮೇಲೆ ರಾಷ್ಟ್ರವನ್ನು ಕಟ್ಟಲು ಸಾಧ್ಯವೇ ಹೊರತು ದೇಶಿಯ ಚಿಂತನೆ ಆದರ್ಶಗಳ ಮೇಲಲ್ಲ. ಅದನ್ನು ಕೇಸರಿಕರಣ ಎನ್ನುವುದೇ ಅದರೆ, ಆಗಲಿ ಬಿಡಿ.
ಇತ್ತೀಚೆಗೆ ಕೆಲವರು ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೇಸರಿಕರಣವನ್ನು ಮಾಡಲಾಗುತ್ತಿದೆ ಅಂತ ಬೊಬ್ಬೆ ಹೊಡೆಯು ತ್ತಿದ್ದಾರೆ! ಆರೆಸ್ಸೆಸ್ ಸಂಸ್ಥಾಪಕ ಡಾ.ಹೆಡಗೇವಾರರ ಭಾಷಣದ ತುಣುಕೊಂದನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವ ವಿಷಯ ರಾಜ್ಯದತುಂಬಾ ಜೋರಾಗಿಯೇ ಸದ್ದು ಮಾಡಿತು. ಈ ಸಮಬಂಧ ಅನೇಕರು ತಮ್ಮ ತಮ್ಮ ಮೂಗಿನ ನೇರಕ್ಕೆ ವಿಷಯವನ್ನು ಮಂಡನೆ ಮಾಡುತ್ತಿದ್ದಾರೆಯೇ ಹೊರತು, ನೈಜ ಇತಿಹಾಸದ ಅವಲೋಕನದ ಅಗತ್ಯ ಹಾಗೂ ಅದರ ಹಿಂದಿನ ಸತ್ಯಾಸತ್ಯತೆಯ ಬಗೆಗಿನ ಚರ್ಚೆಗಳಾಗುತ್ತಿಲ್ಲ.
ಸಾಧನೆ ಮಾಡಿದ ಮಹಾಪುರುಷರ ಸಾಧನೆಯನ್ನು ಪಕ್ಕಕ್ಕೆ ಸರಿಸಿ ಎಲ್ಲರೂ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಾಜವನ್ನು ಒಡೆಯುವಮತಹ ಕೆಲಸವನ್ನು ಈ ಚಿಕ್ಕಂದಿನಿಂದಲೂ ಮಾಡುತ್ತಲೇ ಬಂದಿದ್ದಾರೆ. ಅಷ್ಟಕ್ಕೂ ಅದರಲ್ಲಿ ಆರೆಸ್ಸೆಸ್ಸನ್ನು ವೈಭಕರಣ ಮಾಡಲಾಗಿದೆಯೇ? ಇಲ್ಲ. ಆದರೆ ಈ ಎಡಪಂಥಿಯರು, ಕಾಂಗ್ರೆಸಿಗರು ಸೆರಿಕೊಂಡು ಕೇಸರಿಕರಣ ಮಾಡಲಾಗುತ್ತಿದೆ ಅಂತ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತ, ಸುಳ್ಳುವಾದಗಳನ್ನು ಹುಟ್ಟು ಹಾಕಿ, ಆ ವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುತ್ತ, ಕೂಗೆಬ್ಬಿಸುತ್ತಿದ್ದಾರೆ.
ಈ ಕೇಸರಿಕರಣದ ಕೂಗುಗಳು ಎದ್ದಿರುವುದು ಇಂದಷ್ಟೇ ಅಲ್ಲ, ಅಂದೊಮ್ಮೆ ಅಟಲ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಯಾಗಿದ್ದ ಸಂದರ್ಭದಲ್ಲೊಮ್ಮೆ ಕೇಳಿಬಂದಿದ್ದವು. ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ದಿನದಿಂದಲೂ ಕೇಸರಿಕರಣ, ಕೋಮುವಾದದ ಕೂಗೂಗಳೇ ಹೆಚ್ಚಾಗಿ ಕೇಳುತ್ತಿವೆ. ನಿಜವಾಗಲೂ ಏನು ಈ ಕೇಸರಿಕರಣ? ಯಾವುದು ಕೊಮುವಾದ? ಯಾಕೆ ಈ ವಿರೋಧ? ಎಂಬ ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳು ವಂತಹ ಪ್ರಯತ್ನಗಳನ್ನ ಮಾತ್ರ ಅವರು ಮಾಡುತ್ತಿಲ್ಲ. ಅದರ ಬದಲಾಗಿ ಸುಖಾಸುಮ್ಮನೆ ಕೇವಲ ಆರೋಪಗಳನ್ನು ಮಾತ್ರ ಮಾಡುತ್ತಿದ್ದಾರೆ.
ಸೈದ್ಧಾಂತಿಕವಾಗಿ ಬಲಪಂಥೀಯ ವಿಚಾರ ಅನ್ನೊದಕ್ಕಿಂತ ರಾಷ್ಟ್ರೀಯ ವಿಚಾರಗಳಿಗೆ ವಿರುದ್ಧವಾಗಿರುವರು, ಇಂದು ಪಠ್ಯ ಸಮಿತಿಯ ವಿರುದ್ಧದ ಹೋರಾಟಕ್ಕೆ ಧ್ವನಿಕೊಟ್ಟು ಕೈ ಜೋಡಿಸಿದ್ದಾರೆ. ಯಾರು ಕೇಸರಿಕರಣದ ಅಂತ ವಿರೋಧಿಸುತ್ತಿದ್ದಾರೋ ಅವರು ಕೇಸರಿಕರಣದ ಕುರಿತು ಸ್ಪಷ್ಟವಾಗಿ ವಿವರಿಸುವ ಪ್ರಯತ್ನವನ್ನಂತೂ ಮಾಡುತ್ತಿಲ್ಲ. ಹೀಗೆ ಆರೋಪ ಮಾಡುವ ಬದಲಿಗೆಸರಕಾರಗಳು ತರಲೆತ್ನಿಸಿರುವ ಯಾವ ಬದಲಾವಣೆಗೆ ತಮ್ಮ ವಿರೋಧವಿದೆ, ಅದಕ್ಕೆ ಕಾರಣವೇನು? ಎನ್ನುವದನ್ನು ವಿವರಿಸಿ ದ್ದರೆ, ವೈಚಾರಿಕ ಚರ್ಚೆಗಳಿಗೆ ಆಸ್ಪದವಾದರೂ ಆಗುತ್ತದಲ್ಲವೆ? ಆದರೆ ಆ ರೀತಿ ಮಾಡದೆ ಗೊಂದಲ ಸೃಷ್ಟಿ  ಮಾಡುತ್ತಿರುವುದು ಕೇವಲ ವೈಚಾರಿಕ ಚರ್ಚೆಯನ್ನು ತಡೆಗಟ್ಟುವ ತಂತ್ರವಷ್ಟೆ.
ಸಾಮಾನ್ಯವಾಗಿ ಮೊದಲಿನಿಂದಲೂ ಈ ರೀತಿಯ ತಂತ್ರಗಳನ್ನು ಕಮ್ಯುನಿಷ್ಟರು ಹಿಂದುತ್ವ ಮತ್ತು ಹಿಂದೂ ಸಂಘಟನೆಗಳನ್ನು ಕುಗ್ಗಿಸಲು ಬಳಸುತ್ತಲೇ ಬಂದಿದ್ದಾರೆ. ಕೋಮುವಾದ, ಜಾತೀಯವಾದ, ಮೂಲಭೂತವಾದ… ಎಂಬ ಪದಗಳನ್ನು ಬಳಸುತ್ತ, ಕಳೆದ ಎರಡೂವರೆ ದಶಕಗಳಿಂದ ಕೇಸರಿಕರಣ ಎಂಬ ಶಬ್ದವನ್ನು ಹುಟ್ಟುಹಾಕಿ, ಅದರ ಕೂಗುಗಳನ್ನು ಎಬ್ಬಿಸುತ್ತಿದ್ದಾರೆ. ಆದರೆ ಕೇರಳದ ಮಾಜಿ ಮುಖ್ಯಮಂತ್ರಿ ಎ.ಕೆ. ಆಂಟನಿಯವರು ಕಮ್ಯುನಿಷ್ಟರ ಈ ತಂತ್ರವನ್ನು ಬಹಳ ಚೆನ್ನಾಗಿ ಅರಿತಿದ್ದರು.
ಆದ್ದರಿಂದಲೆ ಅವರು ‘ಕೇಸರಿ ಒಂದು ಪತ್ರ ಬಣ್ಣ, ಕೋಟ್ಯಂತರ ಜನ ಅದರ ಬಗ್ಗೆ ಅಪಾರ ಶ್ರದ್ಧಯನ್ನು ಹೊಂದಿದ್ದಾರೆ’. ಕಮ್ಯುನಿಷ್ಟರು ಹೇಳಿದ್ದಕ್ಕೆಲ್ಲ ನಾವು ಬೆಂಬಲ ನೀಡಲು ಸಾಧ್ಯವಿಲ್ಲ ಅಂತ ಕಡ್ಡಿ ತುಂಡು ಮಾಡಿದಂತೆ ಖಡಾಮುಡಿಯಾಗಿ ಹೇಳಿಕೆ ನೀಡಿದ್ದರು. ಕಳೆದ ಹದಿನೈದು ವರ್ಷಗಳ ಹಿಂದೆ ಕಾಂಗ್ರೆಸಿಗರ ಮತ್ತು ಕಮ್ಯುನಿಷ್ಟರ ಈ ಗೊಂದಲ, ದೆಹಲಿಯ  ವಿಧಾನಸಭೆ ಯಲ್ಲಿ ಅವರೇ ಮಾಡಿರುವ ಭಾಷಣದಲ್ಲಿ ಸ್ಪಷ್ಟವಾಗಿ ಪ್ರಕಟವಾಗಿತ್ತು. ಪಠ್ಯಪುಸ್ತಕಗಳಲ್ಲಿನ ಕೆಲವು ಉಲ್ಲೇಖಗಳನ್ನು ವಿವರಿ ಸುತ್ತ, ಮಹಾಪುರುಷರ ಕುರಿತು ಅವಹೇಳನಕಾರಿಯಾಗಿ ವಿವರಿಸಿದ್ದರು.
ಭಾರತದ ಇತಿಹಾಸದ ಸಾಂಸ್ಕೃತಿಕ ಪರಂಪರೆಯಲ್ಲಿ ಕೇಸರಿ ಬಣ್ಣಕ್ಕೆ ಮಹತ್ವದ ಸ್ಥಾನವಿದೆ. ತ್ಯಾಗ, ಪರಾಕ್ರಮ, ಪರಿಶುದ್ಧತೆ, ನಿಸ್ವಾರ್ಥಗಳನ್ನು ಸಂಕೇತಿಸುವ ಈ ಕೇಸರಿ ಬಣ್ಣ ರಾಷ್ಟ್ರೀಯತೆಯ ಪ್ರತೀಕವೂ ಆಗಿದೆ. ಆ ಕಾರಣದಿಂದಲೇ ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭ ದಲ್ಲಿ ರಾಷ್ಟ್ರ ಧ್ವಜವನ್ನು ರೂಪಿಸಲು ತೊಡಗಿದ್ದ ನೂರಾರು ಕ್ರಾಂತಿಕಾರಿಗಳು ಕೇಸರಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿದ್ದರು. ರಾಷ್ಟ್ರ ಧ್ವಜದಲ್ಲಿಯೂ ಕೂಡ ಕೇಸರಿ ಬಣ್ಣವಿದೆ.
ಶಿಕ್ಷಣದಲ್ಲಿ ರಾಷ್ಟ್ರೀಯತೆಯನ್ನು ತುಂಬುವುದು ಅಥವಾ ರಾಷ್ಟ್ರೀಯತೆಯ ನೆಲೆಗಟ್ಟಿನ ಮೇಲೆ ಶಿಕ್ಷಣವನ್ನು ರೂಪಿಸುವುದು, ರಾಷ್ಟ್ರೀಯ ಮನೋಭಾವನೆಗಳನ್ನು ಅರಳಿಸುವ ತ್ಯಾಗ ಸಮರ್ಪಣೆ, ನಿಸ್ವಾರ್ಥ, ದೇಶಕ್ಕಾಗಿ ಪ್ರಾಣ ಕೊಟ್ಟಂತಹ ಮಹಾ ಪುರುಷರ ಪರಾಕ್ರಮ, ಅವರ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮೂಲಕ ಬೆಳೆಸುವ ಈ ಕ್ರಮವನ್ನು ರಾಷ್ಟ್ರ ವಿರೋಧಿ ಗಳು ವಿರೋಧಿಸಬೇಕೇ ಹೊರತು, ಬೇರಾರೂ ಅಲ್ಲ.
ಕೇಸರಿಕರಣದ ಕೂಗಿನ ಮೂಲ:ರಾಷ್ಟ್ರೀಯ ಮನೋಭಾವನೆಯನ್ನು ಜಾಗೃತಗೊಳಿಸುವ ತ್ಯಾಗಮಯ ಜೀವನದ ಭಾರತೀಯ ಆದರ್ಶವನ್ನು ಬಿಂಬಿಸುವ ಶಿಕ್ಷಣವನ್ನು ನೀಡುವ ಪ್ರಯತ್ನವು ಭಾರತ ಸ್ವತಂತ್ರ್ಯ ಪಡೆದ ದಿನದಿಂದಲೇ ಆಗಬೇ ಕಿತ್ತು, ಆದರೆ ಅದು ಆಗಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿ ಕುಳಿತ ಎಡಪಂಥೀಯರು ಮತ್ತು ಅವರವರ ಸಹಚರರು ರಾಷ್ಟ್ರೀಯ ಭಾವನೆಯನ್ನು ಹೊಸಕಿ ಹಾಕುವ ಪ್ರಯತ್ನದಲ್ಲಿ ತೊಡಗಿದರು.
ಇತಿಹಾಸಕ್ಕೆ ಕೆಂಪು ಬಣ್ಣವನ್ನು ಬಡಿಯುವ, ಸಾಂಸ್ಕೃತಿಕ ಬೇರುಗಳನ್ನ ಕತ್ತರಿಸಿ ಹಾಕುವ ಸಂಚು ಹೂಡಿದ್ದರು. ಆದರೆ ಈ ಎಲ್ಲ ಸಂಚುಗಳು ಹಂತ ಹಂತವಗಿ ಫಲವಾಯಿತೆನ್ನುವುದೇ ಅವರ ಈ ಆಕ್ರೋಶ, ವಿರೋಧಕ್ಕೆ ಕಾರಣವಾಗುತ್ತಿದೆ. ನಿಜಕ್ಕೂ ವಿರೋಧ ಯಾವುದಕ್ಕೆ ಗೊತ್ತೇ? ಕಮ್ಯುನಿಷ್ಟರು ಮುಖ್ಯವಾಗಿ ಯಾವುದನ್ನು ಕೇಸರಿಕರಣ ಎಂದು ಕರೆಯುತ್ತಾರೆ ಎನ್ನುವದನ್ನು ಅವರು ಸ್ಪಷ್ಟ ಶಬ್ದಗಳಲ್ಲಿ ಉಲ್ಲೇಖ ಮಾಡದಿದ್ದರೂ ಈ ಕೆಳಗಿನ ಅಂಶಗಳಿಗೆ ಅವರ ವಿರೋಧವಿದೆ ಎಂದು ಸ್ಪಷ್ಟವಾಗಿ ಅರ್ಥ ಆಗುತ್ತದೆ.‘ಭಾರತೀಯ ಸಾಂಸ್ಕೃತಿಕ ಪರಂಪರೆಯ ವರ್ಣನೆಗೆ ಹಾಗೂ ಪಠ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಾಧನೆಯ ಉಲ್ಲೇಖಕ್ಕೆ, ಪಠ್ಯಕ್ರಮದಲ್ಲಿ ವೇದಗಣಿತ ಹಾಗೂ ಸಂಸ್ಕೃತಕ್ಕೆ ಉತ್ತೇಜನ ನೀಡಿರುವುದಕ್ಕೆ ಮತ್ತು ವಿಶ್ವದ್ಯಾಲಯಗಳಲ್ಲಿ ಜ್ಯೋತಿಷ್ಯಶಾಸ, ವೈದಿಕ ಸಂಸ್ಕೃತಿಯ ವಿಷಯಗಳ ಬೋಧನೆಗೆ ಹಾಗೂ ಬಹುಮುಖ್ಯವಾಗಿ ಹಿಂದೆ ಎನ್‌ಸಿಇಆರ್‌ಟಿ ಪ್ರಕಟಪಡಿಸಿರುವ ಪಠ್ಯಪುಸ್ತಕಗಳ ಪುನರ್ ವಿಮರ್ಶೆಯ ಕ್ರಮ ಕೈಗೊಂಡಿರುವುದು’.
ಎನ್‌ಸಿಇಆರ್‌ಟಿ ವತಿಯಿಂದ ಪ್ರಕಟಪಡಿಸಲಾಗುವ ಪಠ್ಯ ಪುಸ್ತಕಗಳನ್ನು ಕೇಂದ್ರಿಯ ಮಾಧ್ಯಮಿಕ ಶಾಲಾ ಪರೀಕ್ಷೆಗಳಲ್ಲಿ ಸಿಬಿಎಸ್‌ಇ ಬಳಸಲಾಗುತ್ತದೆ. ರಾಜ್ಯಸರಕಾರಗಳು ಅವುಗಳನ್ನು ಪೂರ್ತಿಯಾಗಿ ಇಲ್ಲವೇ ತಕ್ಕಷ್ಟು ಬಳಸಿಕೊಳ್ಳಬಹುದು ಹಾಗೂ ಬಳಸಿಕೊಳ್ಳದೆಯೂ ಇರಬಹುದು, ಕಡ್ಡಾಯಲ್ಲ, ಯಾವುದೇ ಒಂದು ಪುಸ್ತಕವನ್ನು ಶಾಶ್ವತವಾಗಿ ಪಠ್ಯ ಪುಸ್ತಕವಾಗಿ ನಿಗದಿ ಪಡಿಸಲು ಸಾಧ್ಯಲ್ಲ. ಆದರೆ ಕಳೆದ ೨೫ ವರ್ಷಗಳಿಂದ ಸಿಬಿ ಎಸ್‌ಇ ಪರೀಕ್ಷೆಗಳಿಗೆ ಬೋಧಿಸಲಾಗುತ್ತಿರುವ ಪಠ್ಯಪುಸ್ತಕಗಳನ್ನು ಬದಲಿಸಬಾರದೆನ್ನುವುದು ಈ ಕಮ್ಯುನಿಷ್ಟ ವಿಚಾರವಾದಿ ಲೇಖಕ, ಚಿಂತಕರ ಆಗ್ರಹವಾಗಿದೆ.
ಪಠ್ಯಕ್ರಮದ ಪುನರ್ ವಿಮರ್ಶೆ ಮಾಡುವುದೇ ಕೇಸರಿಕರಣ ಎಂದು ಅವರ ವಾದ. ಈ ಹಿಂದೆ ದೆಹಲಿಯ ವಿಶ್ವವಿದ್ಯಾಲಯದ ಇತಿಹಾಸ ಭಾಗದಲ್ಲಿನ ಪ್ರಾಧ್ಯಾಪಕಿ, ಶ್ರೀಮತಿ ಮೀನಾಕ್ಷಿ ಜೈನ್ ಹೇಳುವಂತೆ ಪುನರ್‌ವಿಮರ್ಶೆಯ ಕೆಲಸ ಆರಂಭವಾಗುವ ಮುಂಚೆಯೇ ಕೇಸರಿಕರಣದ ಕೂಗೆಬ್ಬಿಸಿ ಗೊಂದಲ ಸೃಷ್ಟಿಸುತ್ತಿರುವುದನ್ನು ನೋಡಿದರೆ ಇತಿಹಾಸವನ್ನು ತಿರುಚಿರುವ ತಮ್ಮ ಕೃತ್ಯಗಳು ಮತ್ತು ತಮ್ಮ ರಾಜಕೀಯ ಹುನ್ನಾರಗಳು ಬರಂಗಗೊಂಡಾವೆಂಬ ಭಯ ಅವರನ್ನು ಆವರಿಸಿದಂತೆ ತೋರುತ್ತದೆ ಎಂದಿದ್ದರು.
ಕಮ್ಯುನಿಷ್ಟರು ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳ ಮತ್ತು ಕೇರಳಗಳ ಶಾಲೆಯಲ್ಲಿ ಅವರು ಮಕ್ಕಳಿಗೆ ಬೋಧಿಸುವುದನ್ನು ಇತಿಹಾಸ ಮತ್ತು ಭೂಗೋಳ ಪ್ರಥಮ ಭಾಗದಿಂದ ಆಯ್ದ ಕೆಲವು ಭಾಗಗಳ ಪ್ರಕಾರ ವ್ಯಕ್ತಿಗತ ಸಂಪತ್ತು ಮತ್ತು ದಾಸಪದ್ಧತಿ ಎಂಬ ವಿಷಯದಲ್ಲಿ ಗಮನಿಸಿದರೆ ಬಡವ, ಶ್ರೀಮಂತ ಎಂಬ ಎರಡು ವರ್ಗಗಳು ಉಂಟಾಗಲು ಕಾರಣ ಖಾಸಗಿ ಆಸ್ತಿ ಮತ್ತು ಲಾಭಕೋರತನ, ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಒಂದು ವರ್ಗವು ಇನ್ನೊಂದರ ವಿರುದ್ಧ ಸೆಣಸುತ್ತದೆ. ಕೆಲವರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುತ್ತಾರೆ. ಇನ್ನೂ ಕೆಲವರು ಎಲ್ಲವನ್ನು ಕಬಳಿಸುತ್ತಾರೆ. ರೋಧಿಸಿದವರನ್ನು ಸೆರೆಮನೆಗೆ ತಳ್ಳುತ್ತಾರೆ.
ಕೂಲಿಗಳಾಗಿ ದುಡಿಸಿಕೊಳ್ಳುತ್ತಾರೆ. ಕೊನೆಗೊಮ್ಮೆ ಎಲ್ಲವನ್ನು ಕಳೆದುಕೊಂಡವರು ಗುಲಾಮರಾಗುತ್ತಾರೆ. ಶ್ರೀಮಂತರೆಲ್ಲರೂ ಬಡವರನ್ನು ಶೋಷಿಸುತ್ತಾರೆ. ಬಡವರನ್ನು ಹತ್ತಿಕ್ಕಲು ಶ್ರೀಮಂತರು ಕಾನೂನು, ಪೋಲಿಸ್ ಮುಂತಾದ ವ್ಯವಸ್ಥೆಗಳನ್ನು ರೂಪಿಸುತ್ತಾರೆ. ಈ ರೀತಿಯಾಗಿ ಪ್ರಾಥಮಿಕ  ಹಂತಗಳಲ್ಲಿಯೇ ಅವರು ಮಕ್ಕಳಿಗೆ ಬೋಧಿಸುತ್ತಾರೆ. ಕಮ್ಯುನಿಷ್ಟರು ಪ್ರಾಚೀನ ಸಂಸ್ಕೃತಿಕ ಪರಂಪರೆಯ ವಿಷಯದಲ್ಲಿ ಮಕ್ಕಳಲ್ಲಿ ಹೀನ ಭಾವನೆ ಬರುವಂತೆ ಬೋಧಿಸುತ್ತಲೇ ಬಂದಿದ್ದಾರೆ.
ಹಿಂದೂ ಧಾರ್ಮಿಕ ಶ್ರದ್ಧೆಗಳ ಮೆಲೆ ಪ್ರಹಾರ, ರಾಷ್ಟ್ರೀಯ ಮಹಾಪುರುಷರ ಬಗೆಗೆ ಅಶ್ರದ್ಧೆ ಉಂಟಾಗುವಂತೆ ಮಾಡುವುದು, ಪ್ರಾಚೀನ ಕಾಲದ ಸಾಧನೆಗಳನ್ನು ಮತ್ತು ಕೆಲವು ಹಿರಿಮೆಯ ಸಂಗತಿಗಳನ್ನು ಮರೆಮಾಚಿ ಸಣ್ಣಪುಟ್ಟ ದೋಷಗಳನ್ನು ಎತ್ತಿತೋರಿಸುವದು, ಮುಸ್ಲಿಂ ಆಳ್ವಿಕೆಯ ಕಾಲದ ಅತ್ಯಾಚಾರ, ಮಂದಿರಗಳ ನಾಶ, ಮತಾಂಧತೆ ಮುಂತಾದ ದೌರ್ಜ್ಯನ್ಯಗಳ ಮೇಲೆ ಪರದೆ ಎಳೆಯುವದು, ಭಾರತದ ಪರಂಪರೆ ಎಂದರೆ ಅದೊಂದು ಸಾಮಾಜಿಕ ವಿಷಮತೆ ಮತ್ತು ಶೋಷಣೆಯ ಇತಿಹಾಸ ಎನ್ನುವಂತೆ ಚಿತ್ರಿಸಿದ್ದಾರೆ.
ಬಹುಮುಖ್ಯವಾಗಿ ಭಾರತ ಒಂದು ರಾಷ್ಟ್ರವಲ್ಲ ಬಹುರಾಷ್ಟ್ರಗಳ ಒಕ್ಕೂಟ ಎನ್ನುವ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದರೆ ವಿದ್ಯಾರ್ಥಿಗಳ ಮನಸ್ಸು ಏನಾಗಬಾರದು? ರಾಷ್ಟ್ರೀಯ ಭಾವನೆ ದುರ್ಬಲಗೊಂಡಿತೆಂದರೆ ವರ್ಗ ಸಂಘರ್ಷದ ಸಾಮ್ಯವಾದಿಸಿದ್ಧಾಂತಗಳನ್ನು ಮುಗ್ಧ ಮಕ್ಕಳ ಮನಸ್ಸುಗಳಲ್ಲಿ ತುಂಬಲು ದಾರಿ ಸುಗಮವಾಗುತ್ತದೆಂಬ ವಿಚಾರ ಈ ಕಮ್ಯುನಿಷ್ಟರದ್ದು. ರಾಜ್ಯ ಹಾಗೂ ಕೆಂದ್ರ ಸರಕಾರದ ಇಂದಿನ ನೂತನ ಕ್ರಮಗಳು ಅದಕ್ಕೆ ಅಡ್ಡಿಯಾಗುತ್ತವೆ ಎಂಬುದು ಅವರ ಆಕ್ರೋಶ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ.
ಸ್ವದೇಶಿಯ ಚಿಂತನೆಗಳ ಆಧಾರದ ಮೇಲೆ ಶಿಕ್ಷಣ, ಸಮಾಜ, ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವದು ಮತ್ತು ಆಯಾ ರಾಷ್ಟ್ರಗಳ ಸಂಸ್ಕೃತಿ, ಪರಂಪರೆ, ಬಲಿದಾನಿಗಳ ವಿಚಾರದ ಆಧಾರದ ಮೇಲೆ ರಾಷ್ಟ್ರವನ್ನು ಕಟ್ಟಲು ಸಾಧ್ಯವೇ ಹೊರತು ದೇಶಿಯ ಚಿಂತನೆ ಆದರ್ಶಗಳ ಮೇಲಲ್ಲ. ನಮ್ಮ ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ಸ್ವಾತಂತ್ರ್ಯ ಹೋರಾಟಗಾರರ ಪರಾಕ್ರಮ, ತ್ಯಾಗ, ಬಲಿದಾನ ಸೇವೆಗಳನ್ನು ತುಂಬುವ ವಿಷಯಕ್ಕೆ ಇವರೆಲ್ಲ ಅದನ್ನು ಕೇಸರಿಕರಣ ಎನ್ನುವುದೇ ಅದರೆ,ಕೇಸರಿಕರಣವೇ ಆಗಲಿ ಬಿಡಿ.