ಶಿಂಧೆ ಬಾಣ ತಡೆವ ಶಕ್ತಿ ಶಿವಸೇನೆಗಿದೆಯೇ ?
ಸಂಪ್ರತ
ವಿಜಯ ದರಡಾ
ಪ್ರಸುತ ರೈತರು ರಾಜ್ಯಾದ್ಯಂತ ಆತಂಕಿತರಾಗಿದ್ದಾರೆ. ಮಳೆಯ ಅಭಾವದ ಕಾರಣ ಹಲವರ ಚಿಂತೆ ಮೇರೆ ಮೀರಿದೆ. ಹಾಕಿದ ಗೊಬ್ಬರವ್ಯರ್ಥವಾಗಿದೆ. ರೈತರ ಇಂತಹ ಸಂಕಷ್ಟಗಳ ಕುರಿತಾಗಿ ಆದ್ಯ ಗಮನ ಹರಿಸಬೇಕಾಗಿರುವುದು ಸರಕಾರದ ಮೊದಲ ಕರ್ತವ್ಯ.
ಕಳೆದ ವಾರ ಮಹಾರಾಷ್ಟದ ರಾಜಕೀಯ ವಿದ್ಯಮಾನಗಳ ಬಗ್ಗೆ ನನ್ನ ಆತಂಕ ಮತ್ತು ವೇದನೆಯನ್ನು ವ್ಯಕ್ತಪಡಿಸಿದ್ದೆ. ನನ್ನ ಅನಿಸಿಕೆ ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಜನಸಾಮಾನ್ಯರಿಗೆ ಅಭಿವೃದ್ಧಿ ಕಾರ್ಯಗಳ ಪ್ರಯೋಜನ ತಲುಪುವಂತಾಗಬೇಕೆಅಬುದು ನನ್ನ ಅಭಿಮತ. ಕಳೆದ ಎರಡೂವರೆ ವರುಷಗಳೋಲ್ಲಿ ಕೋವಿಡ್ ನಿರ್ವಹಣೆಯ ಹೊರತಾಗಿ ಉಳಿದೆಲ್ಲ ಅಭಿವೃದ್ಧಿ ಕಾಮಗಾರಿಗಳು ಹೆಚ್ಚು ಕಡಿಮೆ ಸ್ಥಗಿತವಾಗಿದ್ದವು ಎಂಬುದು ಜನಸಾಮಾನ್ಯರ ಅಭಿಪ್ರಾಯ.
ಜನಸಾಮಾನ್ಯರಿಗೆ ರಾಜಕೀಯದಿಂದ ಆಗಬೇಕಾದದ್ದು ಏನೇನೂ ಇಲ್ಲ. ಅವರಿಗೆ ಬೇಕಿರುವುದು ಪ್ರಗತಿ. ಇದೀಗ ರಾಜಕೀಯ ಭೂಕಂಪನ ಒಂದು ಹಂತಕ್ಕೆ ಶಾಂತವಾಗಿದೆ. ಈಗ ಅಧಿಕಾರ ವಹಿಸಿಕೊಂಡಿರುವವರಲ್ಲಿ ಮತ್ತು ವಿರೋಧ ಪಕ್ಷದವರಲ್ಲಿ ನನ್ನದು ಒಂದೇ ವಿನಂತಿ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯಕ್ರಮಗಳು ನಿಲ್ಲದಿರಲಿ. ಮಹಾರಾಷ್ಟದಲ್ಲಿ ನಡೆದ ಅಚಾನಕ್ ರಾಜಕೀಯ ಭೂಕಂಪದ ಬಗ್ಗೆ ಹಲವು ಊಹಾ ಪೋಹಗಳಿದ್ದವು. ಆದರೆ ದಾಳ ಈ ರೀತಿ ಉರುಳಬಹುದೆಂದು ಯಾರೂ ಊಹಿಸಿರಲಿಲ್ಲ.
ಏಕನಾಥ ಶಿಂಧೆಯವರಿಗೆ ಮುಖ್ಯಮಂತ್ರಿಯ ಪಟ್ಟವನ್ನು ಬಿಜೆಪಿ ಕಟ್ಟಲಿದೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವೀಸರು ಉಪಮುಖ್ಯಮಂತ್ರಿಯಾಗುತ್ತಾರೆ ಅದು ಯಾರೂ ಊಹಿಸಿರಲಿಲ್ಲ. ಒಂದು ಬಗೆಯಲ್ಲಿ ಇದು ಬಿಜೆಪಿಯ ದೂರದೃಷ್ಟಿಯ ತಂತ್ರ ಗಾರಿಕೆ. ದೇಶಾದ್ಯಂತ ಕುಟುಂಬ ರಾಜಕಾರಣವನ್ನು ಬಿಜೆಪಿ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಶಿವಸೇನೆಯ ವಿರುದ್ಧದ ಹೋರಾಟ ಕೂಡ ಇದರ ಒಂದು ಭಾಗ ಎಂದು ಭಾವಿಸಬಹುದು.
ಪ್ರಧಾನಿ ನರೇಂದ್ರಮೋದಿ, ಬಿಜೆಪಿಯ ಚಾಣಕ್ಯ, ಕೇಂದ್ರ ಗೃಹಮಂತ್ರಿ ಅಮಿತ್ ಶಾ ಮತ್ತು ದೇವೇಂದ್ರ ಫಡ್ನವೀಸರ ವಿರುದ್ಧ ಶಿವಸೇನೆಯ ಉದ್ಧವ ಠಾಕ್ರೆ ಬಹಳ ಹಿಂದೆಯೇ ಕತ್ತಿ ಝಳಪಿಸಿದ್ದರು. ಅಚಾನಕ್ ಆಗಿ ಶಿವಸೇನೆಯ ಕಾಲಕೆಳಗಿನ ಕಂಬಳಿಯನ್ನು ಎಳೆದಾಗಿದೆ. ಶಿವಸೇನೆಯ ವಿರುದ್ಧದ ತಂತ್ರಗಾರಿಕೆ ರೂಪು ಪಡೆಯುವ ಹಂತದಲ್ಲಿ ಯಾರೊಬ್ಬರೂ ಮುನ್ನೆಲೆಯಲ್ಲಿ ಕಾಣಿಸಿ ಕೊಳ್ಳಲೇ ಇಲ್ಲ.
ಅತೃಪ್ತ ಬಣದ ಶಾಸಕರು ಏಕನಾಥ ಶಿಂಧೆ ನಾಯಕತ್ವದಲ್ಲಿ ಮೊದಲು ಸೂರತ್ ತಲುಪಿದರು ಮತ್ತು ಅಲ್ಲಿಂದ ಗೌಹಾಟಿಗೆ ತೆರಳಿದರು. ತನ್ನನ್ನು ಬಿಜೆಪಿ ಮುಖ್ಯಮಂತ್ರಿ ಮಾಡಬಹುದು ಎಂಬ ಕಲ್ಪನೆ ಕೂಡ ಏಕನಾಥ ಶಿಂಧೆಗೆ ಇರಲಿಲ್ಲ. ಶಿಂಧೆ ನೇತೃತ್ವದ ಸರಕಾರದಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಮೊದಲಿಗೆ ದೇವೇಂದ್ರ ಫಡ್ನವೀಸರು ಹೇಳಿದ್ದರೂ ನಂತರ ಸರಕಾರದಲ್ಲಿ ಭಾಗಿಯಾಗುವ ಬಗ್ಗೆ ಬಿಜೆಪಿ ಪ್ರಕಟಣೆ ಹೊರಡಿಸಿತು.
ಫಡ್ನವೀಸರು ಮುಖ್ಯಮಂತ್ರಿಯಾಗುತ್ತಾರೆ, ಶಿಂಧೆ ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ಭಾವಿಸಿದ್ದ ಎಲ್ಲರೂ ಅಚ್ಚರಿಗೆ ಒಳಗಾಗಿದ್ದು ಸುಳ್ಳಲ್ಲ. ತದನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಜತೆ ಸಮಾಲೋಚನೆ ನಡೆದು ಫಡ್ನವೀಸರು ಸರಕಾರದ ಭಾಗವಾಗುವುದು ಸೂಕ್ತ ಮತ್ತು ಅದರಿಂದ ಶಿಂಧೆಗೆ ಹೆಚ್ಚು ಬಲ ಬರಲಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು.
ಸರಕಾರದ ಆಡಳಿತ ಯಂತ್ರದ ಭಾಗವಾಗುವುದರಿಂದ ಹೆಚ್ಚು ಲಾಭವಾಗಲಿದೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಂಡಿತು. ಹಾಗಾಗಿಯೇ ಬಿಜೆಪಿ ಬಾಣವನ್ನು ಹೂಡಿತು ಮತ್ತು ಶಿವಸೇನೆಯತ್ತ ಗುರಿಯಿಟ್ಟು ಹೊಡೆಯಿತು. ತಾನು ಅಧಿಕಾರಕ್ಕಾಗಿ ತಹ ತಹಿಸುವ ಪಕ್ಷ ಎಂದು ಬಿಜೆಪಿ ತೋರಿಸಿಕೊಳ್ಳಲಿಲ್ಲ ಮತ್ತು ಆ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗರೂಕತೆಯಿಂದ ಹೆಜ್ಜೆ ಯಿಟ್ಟಿತು. ಹೀಗಾಗಿ ಉದ್ಧವ ಠಾಕ್ರೆ ಅನುಕಂಪ ಗಿಟ್ಟಿಸುವ ಅವಕಾಶವನ್ನೂ ಕಳೆದುಕೊಂಡಂತಾಯಿತು.
ಒಬ್ಬ ಮರಾಠಾ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿಸುವ ಮೂಲಕ ರಾಜಕೀಯದಲ್ಲಿ ಶರದ ಪವಾರರ ನೆಲೆಯನ್ನೂ ಅಭಧ್ರ ಗೊಳಿಸುವುದಕ್ಕೆ ಬಿಜೆಪಿ ಕೈಹಾಕಿತು. ಎನ್ ಸಿಪಿಯ ಭದ್ರಕೋಟೆ ಎನ್ನಲಾದ ಪಶ್ಚಿಮ ಮಹಾರಾಷ್ಟದ ಪ್ರಾಂತಕ್ಕೆ ಶಿಂಧೆ ಸೇರಿದವ ರಾದ್ದರಿಂದ, ಎನ್‌ಸಿಪಿಯನ್ನು ದುರ್ಬಲಗೊಳಿಸುವಲ್ಲಿ ಈ ಅಸ ಸಾಕಷ್ಟು ಕೆಲಸ ಮಾಡಲಿದೆ ಎಂದು ಹೇಳಲಾಗಿದೆ. ಇಂದು ಶಿವಸೇನೆ ಹರಿದು ಹಂಚಿಹೋಗಿದೆ ಎಂದು ಹೇಳುವಲ್ಲಿ ಯಾವ ಹಿಂಜರಿಕೆಯೂ ಬೇಕಿಲ್ಲ. ಬೃಹನುಂಬೈ, ನವಿಮುಂಬೈ ಮತ್ತು ಥಾಣೆಯ ನಗರಸಭಾ ಚುನಾವಣೆಗಳು ಹತ್ತಿರದ ಇವೆ.
ತದನಂತರದಲ್ಲಿ 2024ರ ಲೋಕಸಭಾ ಚುನಾವಣೆ ಎದುರಾಗಲಿದೆ, ಅದಾದ ನಂತರ ವಿಧಾನಸಭೆ ಚುನಾವಣೆ ಬರಲಿದೆ. ಶಾಸಕರು ಅದರಲ್ಲೂ ಮುಂಬೈ ಭಾಗದಲ್ಲಿ ಒಡೆದುಹೋದ ಪಕ್ಷದ ಭಾಗವಾಗಿರುವವರೇ ಹೆಚ್ಚು. ಹೀಗಾಗಿ ಠಾಕ್ರೆಯವರ ಶಿವಸೇನೆಗೆ ಹೆಚ್ಚಿನ ಲಾಭವಾಗುವ ಸಂಭವ ತುಂಬಾ ಕಡಿಮೆ ಇದೆ. ಈಗ ಮೂಲ ಶಿವಸೇನೆಯನ್ನು ಯಾರು  ಉಳಿಸಿ ಕೊಳ್ಳುತ್ತಾರೆ ಎಂಬುದು ಈಗ ಇರುವ ಪ್ರಶ್ನೆ. ಪಕ್ಷದ ಚಿನ್ನೆ ಬಿಲ್ಲು- ಬಾಣ ಯಾರ ಪಾಲಾಗಲಿದೆ? ಬಾಳಾಸಾಹೇಬ ಠಾಕ್ರೆಯವರ ಉತ್ತರಾಧಿ ಕಾರಿ ಯಾರಾಗುತ್ತಾರೆ? ಕೊನೆಯದಾಗಿ ದೊಡ್ಡ ಪ್ರಶ್ನೆಯೆಂದರೆ ಯಾರು ಕಣದಲ್ಲಿ ಉಳಿಯುತ್ತಾರೆ? ಠಾಕ್ರೆ ಈಗಲೇ ಮುಂದುವರಿ ದಿದ್ದಾರೆ ಮತ್ತು ಏಕನಾಥ ಶಿಂಧೆ ಯವರನ್ನು ತಮ್ಮ ಪಾರ್ಟಿಯಿಂದ ಉಚ್ಚಾಟಿಸಿದ್ದಾರೆ.
ಆದರೆ ಅವರು ಒಂದು ಮಾತನ್ನು ಗಮನದಲ್ಲಿಡಬೇಕು. ಶಿಂಧೆ ರಾಜ್ಯದ ಮುಖ್ಯಮಂತ್ರಿ ಮತ್ತು ಅವರಿಗೆ ಪಕ್ಷದ ಬಹುಸಂಖ್ಯಾತ ಶಾಸಕರ ಬೆಂಬಲವಿದೆ. ಅವರನ್ನು ಕೀಳಂದಾಜು ಮಾಡುವುದು ಠಾಕ್ರೆಗೂ ಸಾಧ್ಯವಿಲ್ಲ. ತಾವು ಅಧಿಕಾರದಿಂದ ಕೆಳಗಿಳಿಯುವ ಮುನ್ನ ಮುಖ್ಯಮಂತ್ರಿ ಉದ್ಧವ ಠಾಕ್ರೆ ತರಾತುರಿಯಲ್ಲಿ ಹಲವಾರು ಸರಕಾರಿ ಆದೇಶಗಳನ್ನು ಹೊರಡಿಸಿದ್ದಾರೆ. ರಾಜ್ಯಪಾಲ ಭಗತಸಿಂಗ್ ಕೋಶ್ಯಾರಿ ಅದಕ್ಕೆ ವಿವರಣೆಗಳನ್ನೂ ಕೇಳಿದ್ದಾರೆ.
ಇನ್ನೇನು ಅಧಿಕಾರದಿಂದ ಕೆಳಗಿಳಿಯುವ ಕೆಲಗಂಟೆಗಳ ಮುನ್ನ ಔರಂಗಾಬಾದಿನ ಹೆಸರನ್ನು ಸಾಂಭಾಜಿ ನಗರ್ ಎಂತಲೂಉಸ್ಮಾನಾಬಾದಿನ ಹೆಸರನ್ನು ಧಾರಾಶಿವಗಢ ಎಂತಲೂ ನವೀಮುಂಬೈ ವಿಮಾನನಿಲ್ದಾಣದ ಹೆಸರನ್ನು ಡಿ.ಬಿ. ಪಾಟೀಲ್ ಏರ್‌ಪೋರ್ಟ್ ಎಂತಲೂ ಬದಲಿಸಿದ್ದಾರೆ. ಇದಕ್ಕೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ನವರು ಕನಿಷ್ಠ ಪ್ರತಿರೋಧವನ್ನೂ ವ್ಯಕ್ತಪಡಿಸಿಲ್ಲ. ರಾಜ್ಯಪಾಲರು ಬಹುಮತ ಸಾಬೀತುಪಡಿಸಿ ಎಂದು ಕೇಳಿಯಾದ ಮೇಲೆ ತೆಗೆದುಕೊಳ್ಳುವ ಇಂತಹ ನಿರ್ಧಾರಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ. ಹಾಗಾಗಿ ಕಾನೂನು ಪ್ರಕಾರ ಈ ನಿರ್ಧಾರಗಳೆಲ್ಲವೂ ಅಸಿಂಧು.
ಬಿಜೆಪಿ ಈ ನಿಟ್ಟಿನಲ್ಲಿ ಮಾತನಾಡಿಲ್ಲ, ಏಕೆಂದರೆ ಆ ಪಕ್ಷವೂ ಕೂಡ ಔರಂಗಾಬಾದ್ ಮತ್ತು ಉಸ್ಮಾನಾಬಾದಿನ ಹೆಸರುಬದಲಾವಣೆ ಕುರಿತಾಗಿ ಚಿಂತನೆ ನಡೆಸಿತ್ತು. ಗಮನಿಸಬೇಕಾದ ಸಂಗತಿಯೆಂದರೆ ಬಿಜೆಪಿ ತನ್ನ ಅಧಿಕಾರ ಕಾಲದ ಐದು ವರುಷಗಳಅವಧಿಯಲ್ಲಿ ಈ ಕುರಿತಾಗಿ ನಿರ್ಧಾರ ತೆಗೆದುಕೊಂಡಿರಲಿಲ್ಲ. ಠಾಕ್ರೆ ಸರಕಾರ ಕೂಡ ತನ್ನ ಎರಡೂವರೆ ವರುಷದ ಅವಧಿಯಲ್ಲಿನಿರ್ಧಾರ ತೆಗೆದುಕೊಂಡಿರಲಿಲ್ಲ. ಕೊನೆ ಗಳಿಗೆಯಲ್ಲಿ ಇಂತಹದೊಅದು ಆತುರದ ನಿಧಾರ ಯಾಕೆ ಬೇಕಿತ್ತೋ ಗೊತ್ತಿಲ್ಲ. ಆದರೆ, ಈ ಬಗೆಯ ರಾಜಕೀಯ ಮುಂದುವರಿಯಲಿದೆ. ಬಹಳ ಮುಖ್ಯ ಸಂಗತಿಯೆಂದರೆ ಜನಸಾಮಾನ್ಯರಿಗೆ ಉಪಯುಕ್ತವಾಗುವ ಅಭಿವೃದ್ಧಿ ಕಾಮಗಾರಿಗಳು ನಿಲ್ಲಕೂಡದು.
ರಾಜಕೀಯ ಏನೇ ಇರಲಿ ಈ ನಿಟ್ಟಿನಲ್ಲಿ ಆದ್ಯಗಮನ ವಹಿಸಬೇಕು. ಪ್ರಸುತ ರೈತರು ರಾಜ್ಯಾದ್ಯಂತ ಆತಂಕಿತರಾಗಿದ್ದಾರೆ. ಮಳೆಯ ಅಭಾವದ ಕಾರಣ ಹಲವರ ಚಿಂತೆ ಮೇರೆ ಮೀರಿದೆ. ಹಾಕಿದ ಗೊಬ್ಬರ ವ್ಯರ್ಥವಾಗಿದೆ. ಬಾಳೆ, ದ್ರಾಕ್ಷಿ, ದಾಳಿಂಬೆ, ಕಿತ್ತಳೆ ತೋಟ ಗಳು ಅತೀ ಹೆಚ್ಚು ಹಾನಿಗೊಳಗಾಗಿವೆ. ರೈತರ ಇಂತಹ ಸಂಕಷ್ಟಗಳ ಕುರಿತಾಗಿ ಆದ್ಯ ಗಮನ ಹರಿಸಬೇಕಾಗಿರುವುದು ಸರಕಾರದ ಮೊದಲ ಕರ್ತವ್ಯ. ರೈತರು ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಸ್ಥಗಿತಗೊಂಡಿದ್ದ ಪ್ರಗತಿ ಕಾಮಗಾರಿಗಳನ್ನು ಮತ್ತೆ ಉತ್ಕರ್ಷಕ್ಕೆ ತರಬೇಕಿದೆ. ಕೋವಿಡ್ ನಂತರದ ಮಖಾದ ಆರ್ಥಿಕ ಸನ್ನಿವೇಶ ವನ್ನು ಸುಧಾರಿಸಲು ತಕ್ಕ ಪ್ರಯತ್ನಗಳನ್ನು ಹಾಕಬೇಕಿದೆ. ರಾಜಕೀಯದ ಪಟ್ಟುಗಳನ್ನು ಬದಿಗಿರಿಸಿ ಸರಕಾರ ಇಂತಹ ವಿಚಾರಗಳ ಬಗ್ಗೆ ಮೊದಲು ಗಮನ ಹರಿಸಬೇಕಿದೆ.