ಸಿದ್ದಾಂತ ಮರೆತರೆ ಬಿಜೆಪಿಗೂ ಅದೇ ಗತಿ
ವಿಶ್ಲೇಷಣೆ
ಹೃತಿಕ್ ಕುಲಕರ್ಣಿ
ಬಿಜೆಪಿ ಎಂಬ ಪಕ್ಷಕ್ಕೆ ನಲವತ್ತು ವರ್ಷಗಳ ಹಿಂದೆ ಊರೂರಲ್ಲಿ ನೂರು ಕಾರ್ಯಕರ್ತರಿರಲಿಲ್ಲ. ಇಂದು ಮನೆಮನೆ ಯಲ್ಲೂ ಬಿಜೆಪಿ ಬೆಂಬಲಿಸುವವರಿದ್ದಾರೆ. ಈ ಬೆಳವಣಿಗೆಗೆ ಏಕಮಾತ್ರ ಕಾರಣ- ಸಿದ್ಧಾಂತ. ಬಿಜೆಪಿಯನ್ನು ಕಟ್ಟುವಲ್ಲಿ ದೂರಾಲೋಚನೆ ಯುಳ್ಳ ಅಂದಿನ ಎಲ್ಲ ನಾಯಕರಿಗೂ ಗೊತ್ತಿತ್ತು- ಸಿದ್ಧಾಂತ ನಿಷ್ಠೆ ಮಾತ್ರವೇ ತಮ್ಮನ್ನು ಅಧಿಕಾರಪಟ್ಟಕ್ಕೇರಿಸಬಲ್ಲುದೆಂದು
ರಾಜ್ಯ ವ್ಯವಸ್ಥೆಯಿಂದ ಆದರ್ಶದ ಮಾತು ದೂರ ಸರಿದು ದಶಕಗಳೇ ಸಂದಿವೆ. ಸಿದ್ಧಾಂತ ಗಳು ರಾಜಕಾರಣಿಗಳ ಹೃದಯದ ಸುಟ್ಟು ಭಸ್ಮವಾಗಿವೆ. ಸಿದ್ಧಾಂತ ನಿಷ್ಠೆ, ಆದರ್ಶ ಪರಿಪಾಲನೆ ಎಂದರೇನು ಗೊತ್ತೆ? ಸಮತಾವಾದದ ಅಮಲೇರಿಸಿಕೊಂಡಿರುವ ಅರೆ ಹುಚ್ಚನೆಂದು ಹಲವರಿಂದ ಟೀಕೆಗೊಳಗಾಗಿದ್ದ ಡಾ. ರಾಮ ಮನೋಹರ ಲೋಹಿಯಾ, ಸಣ್ಣಶಸ್ತ್ರಚಿಕಿತ್ಸೆಗೊಳ ಗಾಗಬೇಕಾದ ಸಂದರ್ಭ ಬಂದಾಗ- ಸಾಮಾನ್ಯ ಪ್ರಜೆಯೊಬ್ಬ ನಿಗೆ ಸಿಗಬಹುದಾದ ಚಿಕಿತ್ಸಾ ಸೌಲಭ್ಯಕ್ಕಿಂತ ಕಿಂಚಿತ್ತೂ ಹೆಚ್ಚಿನ ಸೌಲಭ್ಯ ನಾನೊಎಂದು ಸರಕಾರಿ ಆಸ್ಪತ್ರೆ ಸೇರಿ ಅಸುನೀಗಿದರು.
ಆದರ್ಶವನ್ನು, ನಂಬಿದ ಸಿದ್ಧಾಂತವನ್ನು ಪ್ರಾಣಿಕ್ಕಿಂತಲೂ ಮಿಗಿಲೆಂದು ಪ್ರತಿಪಾದಿಸಿದ ಲೋಹಿಯಾರಂಥವರು ಇಂದು ಎಲ್ಲೂ ಇಲ್ಲ. ಸಿದ್ಧಾಂತವನ್ನೇ ಬಾಳಿದ, ಆದರ್ಶಕ್ಕಾಗಿ ಹೋರಾಡಿದ ಜಯಪ್ರಕಾಶ ನಾರಾಯಣ ರಂಥವರು, ಜಾರ್ಜ್ ಫೆರ್ನಾಂಡೀಸ್ ಥರದವರು ಎಷ್ಟೇ ಹವಣಿಸಿ ಹುಡುಕಿದರೂ ಕಣ್ಣಿಗೆ ಸಿಗರು. ಸಿದ್ಧಾಂತ ಏನೇ ಇರಲಿ, ಭೂಮಿಯೇ ಅದಕ್ಕೆ ವಿರುದ್ಧ ತಿರುಗಲಿ, ಅಲುಗದೆ ನಿಲ್ಲಬಲ್ಲ ಮಾರ್ಕ್ಸ್‌ನಂಥವರು ಎಲ್ಲಿ ಹೋದರು? ಇಡೀ ರಾಜಕೀಯ ವ್ಯವಸ್ಥೆಯನ್ನು, ಉಗ್ರ ಪಿಶಾಚಿಗಳ ಬೆದರಿಕೆ ಗಳನ್ನು ಎಡೆಯಿಲ್ಲದೆ ಎದುರಿಸಿ ಕಾಶ್ಮೀರಕ್ಕೆ ಕಾಲಿಟ್ಟು ಅ ಬಂಧಿತರಾಗಿ ಜೈಲಿನಲ್ಲಿ ಜೀವಬಿಟ್ಟ ಶ್ಯಾಮಾ ಪ್ರಸಾದ ಮುಖರ್ಜಿ ಮತ್ತೇಕೆ ಹುಟ್ಟಿ ಬರರು? ಇಂಥ ಹತ್ತು ಹಲವು ಪ್ರಶ್ನೆಗಳು ಪ್ರಕೃತ ರಾಜಕಾರಣವನ್ನು ವಿಚಕ್ಷಣ ದೃಷ್ಟಿಯಿಂದ ನೋಡುತ್ತಿರುವ ಯಾರ ಮನದದರೂ ಎದ್ದು ಬಂದಾವು.
ಇವು ನಿರಾಶೆಯ ಮಾತಲ್ಲ. ಜಿಗುಪ್ಸೆಯ ಧ್ವನಿಯೂ ಇದಲ್ಲ. ರಾಜಕಾರಣ ದಿನೇದಿನೇ ಅಧೋಮುಖ ಚಲಿಸುತ್ತಿರುವುದನ್ನು ಕಣ್ಣು ಕಂಡಾಗ ಸಂವೇದನಶೀಲ ಮನಸ್ಸು ವೇದನೆಯಿಂದ ಪರಿತಪಿಸುತ್ತ ಹೊರಹಾಕುವ ಭಾವನೆಗಳಿವು. ಪ್ರಜಾಪ್ರಭುತ್ವ ವನ್ನು ಪ್ರೀತಿಸುವ, ಅದು ಉಳಿದು ಬೆಳೆಯಬೇಕು ಎಂಬ ಸಣ್ಣ ಆಶಯವನ್ನಿಟ್ಟುಕೊಂಡಿರುವ ಎಲ್ಲ ಪ್ರಜೆಗಳಲ್ಲೂ ಉಮ್ಮಳಿಸಿ ಬರುವ ಭಾವನೆಗಳಿವು. ದೀರ್ಘಕಾಲ ದೇಶದಲ್ಲಿ ಆಡಳಿತ ಮಾಡಿದ ಕಾಂಗ್ರೆಸ್ಸಿಗೆ ಎಂದೂ ಸಿದ್ಧಾಂತವೆನ್ನುವುದೊಂದು ಇರಲಿಲ್ಲ.
ಸ್ವಾತಂತ್ರ ಪೂರ್ವದ ಕಾಂಗ್ರೆಸ್ಸಿಗೆ ನಿರ್ದಿಷ್ಟ ದಾರಿಯೂ, ನಿಶ್ಚಿತ ಧ್ಯೇಯವೂ ಇತ್ತು. ಆ ಕಾಂಗ್ರೆಸ್ಸಿನಲ್ಲಿ ಕಮ್ಯುನಿಸ್ಟರಿದ್ದರು,ಸಮತಾವಾದಿಗಳಿದ್ದರು, ಕ್ರಾಂತಿಕಾರಿಗಳೂ, ಗಾಂಧಿ ತತ್ವಪರಿಪಾಲಕರು ಎಲ್ಲರೂ ಇದ್ದರು. ಸಾವಿರ ಭಿನ್ನ ಅಭಿಪ್ರಾಯಗಳ ಮಧ್ಯೆಯೂ ಎಲ್ಲವನ್ನೂ ಸಹಿಸಿಕೊಂಡು, ಸಂಯಮ ಶಿಸ್ತುಗಳಿಗೆ ಜೋತುಬಿದ್ದು ಅವರು ಮುನ್ನಡೆದರು. ಅವರಿಗಿದ್ದ ಚಿಂತೆ- ತಾಯಿ ಭಾರತೀಯ ಸಂಕೋಲೆ ಬಿಡಿಸುವುದು. ಆ ಚಿಂತೆಯೊಂದೇ ಅವರ ಆದರ್ಶವಾಯಿತು, ಸೈದ್ಧಾಂತಿಕ ಅಭಿಪ್ರಾಯ ಭೇದಗಳೆಲ್ಲ ರಾಷ್ಟ್ರ ವಿಷಯ ಬಂದಾಗ ಬಾಯಿ ಮುಚ್ಚಿಕೊಂಡು ಬಿದ್ದಿದ್ದವು.
ಒಂದು ರಾಷ್ಟ್ರದ ರಾಜಕಾರಣ ನಡೆಯಬೇಕಾದ್ದೇ ಹೀಗೆ. ಆದರೆ ಭಾರತೀಯರೆಲ್ಲರೂ ಬೇಸರದಿಂದ ಮುಖ ಪೆಚ್ಚಾಗಿಸಿಕೊಳ್ಳ ಬೇಕಾದ ವಿಚಾರವೊಂದಿದೆ. ಅದು- ಇದೇ ಕಾಂಗ್ರೆಸ್ಸು ಸ್ವಾತಂತ್ರ್ಯಾ ನಂತರ ಒಡೆದು ಚೂರಾಯಿತು. ಕಮ್ಯುನಿಸ್ಟರು ಹೊರ ಬಂದರು, ಸಮತಾವಾದಿಗಳು ಬಂಡಾಯವೆದ್ದು ಪಕ್ಷ ತೊರೆದರು. ವರ್ಷ ಉರುಳಿದಂತೆ ಕಾಂಗ್ರೆಸ್ ಕ್ಷೀಣವಾಗುತ್ತ ಬಂತು. ಇಂದು ಕಾಂಗ್ರೆಸ್ ಇರುವ ಸ್ಥಿತಿಗೆ ಅದಕ್ಕೆಂದೂ ರಾಷ್ಟ್ರಪೂರಕವಾದ ಒಂದು ಸಿದ್ಧಾಂತವಿರಲಿಲ್ಲ ಎನ್ನುವುದೇ ಕಾರಣ.
ಅದೊಂದು ಸಿದ್ಧಾಂತ ಶೂನ್ಯ ಪಕ್ಷ. ಸ್ವಾತಂತ್ರ್ಯದ ದಿನವೇ ಆದರ್ಶವನ್ನು ಬಿಟ್ಟು ಕೈ ತೊಳೆದುಕೊಂಡ ಪಕ್ಷ. ಈ ಪಕ್ಷ ನಿರ್ಬಲ ವಾಗಿ ಬಿದ್ದು ಹೋಗಲಿ ಚಿಂತೆಯಿಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತಕ್ಕೊಂದು ವಿರೋಧಪಕ್ಷ ಹುಟ್ಟಲೇಬೇಕು. ಅದು ನಿಯಮ. ಆದರೆ ಕಾಂಗ್ರೆಸ್ಸ್ ಬೀಳುವುದಿಲ್ಲ. ಓಲೈಕೆ ರಾಜಕಾರಣ ಮಾಡುತ್ತ ತೆವಳುತ್ತಾ ನರಳುತ್ತಾ ಜೀವಂತವಾಗಿರುತ್ತದೆ. ಇದರ ಓಲೈಕೆ ರಾಜಕಾರಣ ಬಿಜೆಪಿಯನ್ನು ಪ್ರಚೋದಿಸದೆ ಇರದು. ಆಗ ಅದೂ ಇದರದೇ ಹಾದಿಯನ್ನು ತುಳಿಯಬಹುದು. ಒಟ್ಟಿನಲ್ಲಿಓಲೈಕೆಗೆ ಬಿದ್ದ ಮತ್ತು ಅಧಿಕಾರದ ಹಪಾಹಪಿಯಲ್ಲಿ ಸೊರಗುತ್ತಿರುವ ಯಾವ ರಾಜಕೀಯ ಪಕ್ಷಗಳೂ ಸಿದ್ಧಾಂತಗಳ ಕಡೆ ತೃಣ ಮಾತ್ರವೂ ಗಮನ ಕೊಡಲಾರವು ಎನ್ನುವುದು ಸಿದ್ಧ ಸತ್ಯ. ಈ ದಾರಿಯಲ್ಲಿ ಮುಂದೆ ಬಿಜೆಪಿಯೂ ಕ್ರಮಿಸಬಹುದಾದ ಲಕ್ಷಣ ಕಾಣದೆ ಉಳಿದಿಲ್ಲ.
ಬಿಜೆಪಿ ಎಂಬ ಪಕ್ಷಕ್ಕೆ ನಲವತ್ತು ವರ್ಷಗಳ ಹಿಂದೆ ಊರೂರಲ್ಲಿ ನೂರು ಕಾರ್ಯಕರ್ತರಿರಲಿಲ್ಲ. ಇಂದು ಮನೆಮನೆಯಲ್ಲೂ ಬಿಜೆಪಿ ಬೆಂಬಲಿಸುವವರಿದ್ದಾರೆ ಎನ್ನುವಷ್ಟರ ಮಟ್ಟಿಗೆ ಆ ಪಕ್ಷ ಬೆಳೆದು ನಿಂತಿದೆ. ಈ ಬೆಳವಣಿಗೆಗೆ ಏಕಮಾತ್ರ ಕಾರಣ- ಸಿದ್ಧಾಂತ. ಬಿಜೆಪಿಯನ್ನು ಕಟ್ಟುವಲ್ಲಿ ದೂರಾಲೋಚನೆಯುಳ್ಳ ಅಂದಿನ ಎಲ್ಲ ನಾಯಕರಿಗೂ ಗೊತ್ತಿತ್ತು- ಸಿದ್ಧಾಂತ ನಿಷ್ಠೆ ಮಾತ್ರವೇ ತಮ್ಮನ್ನು ಅಧಿಕಾರ ಪಟ್ಟಕ್ಕೇರಿಸಬಲ್ಲುದೆಂದು. ಆ ಸಿದ್ಧಾಂತಕ್ಕೆ ಬದ್ಧರಾಗಿದ್ದ ಅಡ್ವಾಣಿ ರಾಮರಥಯಾತ್ರೆ ಮಾಡಿದರು. ಸಿದ್ಧಾಂತ ನಿಷ್ಠೆಗೆ ಬಾಗಿದ ವಾಜಪೇಯಿ ಒಂದು ಮತದ ಕೊರತೆಯಿಂದ ಪ್ರಧಾನಿ ಸ್ಥಾನ ತೊರೆದರು. ಆ ಒಂದು ಮತವನ್ನು ಅವರು ಹೇಗೆಗೋ ಪಡೆದುಕೊಳ್ಳಬಹುದಿತ್ತು. ಆದರೆ ಅದಕ್ಕೆ ಸಿದ್ಧಾಂತ ಅಡ್ಡಿ ಬಂತು. ಅವರು ಮಣಿದರು. ಇದೆಲ್ಲವನ್ನೂನಿಮಗ್ನರಾಗಿ ನೋಡುತ್ತಿದ್ದ ಮಹಾಜನರು ಇವರ ಪ್ರಾಮಾಣಿಕತೆಯನ್ನು ಸಿದ್ಧಾಂತ ನಿಷ್ಠೆಯ ಮೇಲೆ ಅಳಿದರು, ನಂಬಿದರು- ಅಧಿಕಾರ ಕೊಟ್ಟರು.
ಇಂದಿನ ಬಿಜೆಪಿ ಅನೂಚಾನವಾಗಿ ಹರಿದು ಬಂದ ತನ್ನ ಸಿದ್ಧಾಂತವನ್ನು ಕಡೆಗಣಿಸುತ್ತಿದೆಯೇ? ಅಧಿಕಾರ ವ್ಯಾಮೋಹದಲ್ಲಿ ಅನೈತಿಕ ಮಾರ್ಗ ತುಳಿಯುತ್ತಿದೆಯೇ? ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ರಾಜಮಾರ್ಗದಲ್ಲಿ ಬಂದು ಆಡಳಿತ ಕಟ್ಟೆ ಏರಿದೆಯೇ? ಈ ಕುರಿತು ಬಿಜೆಪಿಯ ಅಂತರಾವಲೋಕನವಾಗಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಮತ್ತು ಇನ್ನಿತರಪಕ್ಷಗಳಂತೆ ಓಲೈಕೆಗೆ ಹತ್ತಿದರೆ ಇವತ್ತಲ್ಲದಿದ್ದರೂ ಮುಂದಿನ ಮೂವತ್ತು ನಲವತ್ತು ವರ್ಷಗಳಲ್ಲಿ ಕಾಂಗ್ರೆಸ್ಸಿನ ಪರಿಸ್ಥಿತಿಯೇ ಬಿಜೆಪಿಗೂ ಬರುವುದರಲ್ಲಿ ಸಂದೇಹ ಬೇಡ.
ಈ ಎಲ್ಲದರ ಮಧ್ಯೆ ಬಿಜೆಪಿಯೂ ಸಿದ್ಧಾಂತಹೀನವಾಗಬಹುದು ಎನ್ನುವುದಕ್ಕೆ ಕಾರಣಗಳಿವೆ. ಬಿಜೆಪಿಯನ್ನು ನೀರೆರೆದು, ಪೋಷಿಸಿ ಬೆಳೆಸಿದ ಹಿಂದಿನ ಎಲ್ಲ ಕಾರ್ಯಕರ್ತರೂ, ನಾಯಕರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿಗಳಾಗಿದ್ದವರು. ಆರ್. ಎಸ್.ಎಸ್ ಅವರಿಗೆ ಸಿದ್ಧಾಂತ ನಿಷ್ಠೆಯನ್ನು ಕಲಿಸಿತ್ತು, ತ್ಯಾಗ ಮತ್ತು ಸೇವೆಯ ಮಹತ್ವವನ್ನು ಅವರಿಗೆ ಮನಗಾಣಿಸಿ ಕೊಟ್ಟಿತ್ತು. ಆ ಸಿದ್ಧಾಂತ ಪರಿಪಾಲನೆಯನ್ನೂ ರಾಜಕೀಯದಲ್ಲೂ ಅವರು ವ್ರತವೆಂಬಂತೆ ಮಾಡಿದರು. ಪರಿಣಾಮ ಬಿಜೆಪಿಗೆಅಽಕಾರ ದಕ್ಕಿಬಂತು.
ಆದರೆ ಇಂದು ಬಿಜೆಪಿಯಲ್ಲಿರುವ ಅನೇಕರು ಪಕ್ಷಾಂತರಿಗಳು. ಅವರಿಗೆ ಈ ಪಕ್ಷದ ಮೂಲಸಿದ್ಧಾಂತ ಅರಿವಾದರೂ ಎಷ್ಟಿದೆ? ನೆಲದ ಸಂಸ್ಕ್ರತಿಯೊಂದಿಗೆ ಕಲೆತು ಬೆರೆಯುವ ಆರ್.ಎಸ್.ಎಸ್ ಸಿದ್ಧಾಂತವನ್ನು ಅವರು ಅರಗಿಸಿಕೊಂಡಾರೆ? ಮಂತ್ರಿಗಿರಿ ಗಾಗಿಯೋ, ಹಿಂದಿನ ಪಕ್ಷದಲ್ಲಿ ಅವಗಣನೆಗೆ, ಅವಮಾನಕ್ಕೆ ಒಳಗಾದೆಯೆಂತಲೋ, ಜನರ ವಿಶ್ವಾಸದ ಉಸಿರು ಬಿಜೆಪಿಯತ್ತ ಬೀಸುತ್ತಿದೆಯೆಂತಲೋ ಅಥವಾ ಟಿಕೆಟ್ ಸಿಗಲಿಲ್ಲವೆಂದು ಬಿಜೆಪಿಗೆ ಬಂದವರು ಅದರ ಸಿದ್ಧಾಂತೆಡೆ ಹೆಚ್ಚಿನ ಲಕ್ಷ್ಯವನ್ನು ಎಂದೂಕೊಟ್ಟಿಲ್ಲ.
ಇವರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಅಥವಾ ಆರ್.ಎಸ್.ಎಸ್ ಸಿದ್ಧಾಂತ ಶ್ರೇಷ್ಠವೆನಿಸಿ ಪಕ್ಷ ಬಿಟ್ಟು ಬಿಜೆಪಿಗೆ ಬಂದವರು ಅದೆಷ್ಟು ಮಂದಿ? ಬೆರಳೆಣಿಕೆಯಷ್ಟಾದರೂ? ಪರಿಸ್ಥಿತಿ ಹೀಗಿರುವಾಗ ಮುಂದೊಮ್ಮೆ ಬಿಜೆಪಿ ಜನರ ವಿಶ್ವಾಸ ಗೆಲ್ಲುವಲ್ಲಿ ಸೋತರೆ ಈ ಪಕ್ಷಾಂತರಿಗಳು ಪಕ್ಷಪಲ್ಲಟ ಮಾಡಲಾರರೆಂಬುದಕ್ಕೇನು ಖಾತ್ರಿ? ಉದಾಹರಣೆಗೆ, ಇಂದಿನ ಕರ್ನಾಟಕ ಸರಕಾರದಲ್ಲಿಸಚಿವರಾಗಿರುವ ಎಷ್ಟು ಮಂದಿಗೆ ಪಕ್ಷದ ಸಿದ್ಧಾಂತದ ತಳಬುಡವಾದರೂ ತಿಳಿದಿದೆ? ಅವರು ಸಿದ್ಧಾಂತವನ್ನು ಭಾಷಣ ಮಾಡ ಬಹುದು, ಅಡ್ವಾಣಿ, ಮೋದಿಯಂತೆ ಅದಕ್ಕಾಗಿ ಬದುಕಲಾರರು.
ಯಡಿಯೂರಪ್ಪನವರಂತೆ ಮನೆ ಮಾರನ್ನು ನಿರ್ಲಕ್ಷಿಸಿ ಪಕ್ಷಕ್ಕಾಗಿ ಬೆವರು ಸುರಿಸಲಾರರು. ಏಕೆಂದರೆ ಅವರಿಗೆ ಆರ್.ಎಸ್.ಎಸ್. ನ ಸಿದ್ಧಾಂತ ಹೃದಯಗತವಾಗಿಲ್ಲ. ಮುಂದೊಮ್ಮೆ ಪಕ್ಷದಲ್ಲಿ ಇಂಥವರೇ ಬಹುಸಂಖ್ಯಾತರಾದರೆ ಬಿಜೆಪಿ ಮುಳುಗುತ್ತದೆ. ಇನ್ನಾದರೂ ದೂರಾಲೋಚನೆ ಮಾಡಿ ಸಿದ್ಧಾಂತ ನಿಷ್ಠ ಕಾರ್ಯಕರ್ತರನ್ನು ಬಿಜೆಪಿ ಬೆಳೆಸಬೇಕಿದೆ. ಅಷ್ಟಕ್ಕೂ ಸಿದ್ಧಾಂತ ವೆಂದರೇನು ಎಂಬ ಪ್ರಶ್ನೆ ಎದ್ದೀತು? ಆದರೆ ಅದಕ್ಕಿಂತ ಮುಖ್ಯವಾಗಿ ಸಿದ್ಧಾಂತ ಹೇಗಿರಬೇಕು ಎನ್ನುವುದನ್ನು ನೋಡಬೇಕಿದೆ.
ಆಯಾಯಾ ಪಕ್ಷಗಳ, ಸಂಘ ಸಂಸ್ಥೆಗಳ, ಮತ ಪಂಥಗಳ ಸಿದ್ಧಾಂತ ಅವುಗಳ ಆಲೋಚನಾ ಸಾಮರ್ಥ್ಯದ ಮೇಲೆ ಮತ್ತು ವಿವೇಚನಾ ಕ್ರಮದ ಮೇಲೆ ಅವಲಂಬಿತವಾಗಿರುತ್ತದೆ. ಹೀಗೆಯೇ ಕಮ್ಯೂನಿಸಂ, ಸೋಷಿಯಲಿಸಂ, ಸೆಕ್ಯೂಲರಿಸಂ, ಲಿಬರಲಿಸಂ ಇತ್ಯಾದಿ ಸೈದ್ಧಾಂತಿಕ ವಿಚಾರಗಳ ಉದಯವದದ್ದು. ಆದರೆ ಒಂದು ರಾಷ್ಟ್ರದಲ್ಲಿ ಇವೆಲ್ಲ ಹೇಗೆ ರೂಪತೆಳೆದಿರಬೇಕು ಎನ್ನುವುದು ಪ್ರಶ್ನೆ. ಯಾವುದೇ ಸಿದ್ಧಾಂತವಾಗಿರಲಿ ಅದು ರಾಷ್ಟ್ರಹಿತಕ್ಕೆ ಮಾರಕವಾಗಿರದೆ, ರಾಷ್ಟ್ರಹಿತ ಪೂರಕವಾಗಿರಬೇಕೆನ್ನುವುದೇ ಈ ಪ್ರಶ್ನೆಯ ಉತ್ತರ.
ಹಾಗಾದರೆ ಒಂದು ಸಿದ್ಧಾಂತ ರಾಷ್ಟ್ರ ಪೂರಕವಾಗುವುದು ಯಾವಾಗ? ಯಾವಾಗ ಅದು ತನ್ನ ಆರ್ಷೇಯ ಸಂಸ್ಕೃತಿಯೊಡನೆ ಮಿಳಿತು ಮೈಗೂಡಿಸಿಕೊಂಡಿರುತ್ತದೋ ಆವಾಗ. ರಾಜಕೀಯವೆನ್ನುವುದು ಜನಮಾನಸದ ನಡುವೆಯೇ ಕೆಲಸ ಮಾಡ ಬೇಕಿರುವಾಗ ಅದು ಆ ಜನದ ಸಂಸ್ಕೃತಿ ಮತ್ತು ಭಾವನೆಗಳಿಗೆ ಪೂರಕವಾಗಿರುವಂಥ ಸಿದ್ಧಾಂತವನ್ನು ರೂಪಿಸಿಕೊಳ್ಳತಕ್ಕದ್ದು ಉತ್ತಮ. ಅದರಿಂದ ಆ ಪಕ್ಷವೂ ಜನರಿಗೆ ಬಹುಬೇಗನೇ ಹತ್ತಿರವಾಗುತ್ತದೆ.
ಬಿಜೆಪಿಯ ವಿಷಯದಲ್ಲಿ ಆಗಿದ್ದೇ ಅದು. ಈ ನೆಲದ ಸಂಸ್ಕೃತಿಯನ್ನೇ ಅದು ತನ್ನ ಸಿದ್ಧಾಂತವೆಂದಿತು, ಅದಕ್ಕೆ ಕುತ್ತು ಬಂದಾ ಗಲೆಲ್ಲ ಧ್ವನಿ ಎತ್ತಿತು. ಇದಕ್ಕೆ ವ್ಯತಿರಿಕ್ತವೆಂಬಂತೆ ಸ್ವಾತಂತ್ರ್ಯಾ ನಂತರದಲ್ಲಿ ಕಾಂಗ್ರೆಸ್ ಈ ಸಂಸ್ಕೃತಿಯನ್ನು ಕಡೆಗಣಿಸುತ್ತಾ ಹೋಯಿತು. ಅದರ ಪರಿಣಾಮ ಜನ ಕಾಂಗ್ರೆಸ್‌ನ್ನು ಇಂದು ಹೇಳ ಹೆಸರಿಲ್ಲದಂತೆ ಮಾಡಿದ್ದಾರೆ. ನೀವು ಭಾರತವನ್ನು ಜಾತ್ಯತೀತ ರಾಷ್ಟ್ರವೆಂದಾದರೂ ಅನ್ನಿ, ಸಾಮಾಜವಾದಿ ರಾಷ್ಟ್ರವೆಂದಾದರೂ ಕರೆಯಿರಿ, ಜನ ಅದರ ಕಡೆ ದೊಡ್ಡದಾಗಿ ಲಕ್ಷ್ಯವನ್ನೇನೂ ಕೊಡವುದಿಲ್ಲ.
ಆದರೆ ಅವುಗಳ ಹೆಸರಲ್ಲಿ ಅವರ ಭಾವನೆಗೆ ಧಕ್ಕೆ ಬಂತೋ ಸಹನೆಯ ಕಟ್ಟೆ ಒಡೆಯುತ್ತದೆ. ಆದ್ದರಿಂದ ಜನರ ಮನಸ್ಸನ್ನು ಗೆಲ್ಲಲು ಮತ್ತು ನಾವು ನಾವಾಗಿಯೇ ಇರಲು ರಾಷ್ಟ್ರದ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಿದ್ಧಾಂತವಿರುವುದು ಎಲ್ಲ ದೃಷ್ಟಿ ಯಿಂದಲೂ ಒಳಿತು. ಈ ಕ್ಷಣದವೆರೆಗಂತೂ ಬಿಜೆಪಿಗೆ ರಾಷ್ಟ್ರಹಿತ ಪೂರಕ ಸಿದ್ಧಾಂತವೊಂದಿದೆ. ಅದರ ಆಯಕಟ್ಟಿನ ಮೇಲೆನಿಂತಿರುವವರೆಗೆ ಮಾತ್ರ ಜನ ಬಿಜೆಪಿಯನ್ನು ನಂಬುತ್ತಾರೆ, ನೆಚ್ಚುತ್ತಾರೆ. ಬಿಜೆಪಿ ಅಷ್ಟೇ ಅಲ್ಲ, ಎಲ್ಲ ಪಕ್ಷಗಳನ್ನೂ ಜನ ಅಳೆದು ತೂಗುವುದು ಇದೇ ಮಾನದಂಡದ ಮೇಲೆ.
ರಾಷ್ಟ್ರ ಪೂರಕ ಸಿದ್ಧಾಂತವುಳ್ಳ ಪಕ್ಷವೇ ಜನದ ಲೌಕಿಕ ಬದುಕಿನ ಮಟ್ಟವನ್ನು ಸುಧಾರಿಸುವಲ್ಲಿ ಅಷ್ಟಿಷ್ಟು ಕೆಲಸ ಮಾಡುತ್ತದೆ.ಹಾಗಾಗಿ ತನ್ನ ಸೈದ್ಧಾಂತಿಕ ಆಯಕಟ್ಟಿನಿಂದ ಮುಂದೊಮ್ಮೆ ಬಿಜೆಪಿ ಕೆಳಗಿಳಿದರೆ ಕಾಂಗ್ರೆಸ್ಸಿನ ಹಾದಿಯನ್ನೇ ಮಾಹಾಜನರು ಅದಕ್ಕೂ ತೋರಿಸುತ್ತಾರೆ.