ಭ್ರಷ್ಟಾಚಾರ ನಿಗ್ರಹಕ್ಕೆ ಸರಕಾರ ಕ್ರಮವಹಿಸಲಿ
ಪ್ರಚಲಿತ
ಮರಿಲಿಂಗಗೌಡ ಮಾಲಿಪಾಟೀಲ್‌
@.
ಅಮೃತ್ ಪೌಲ್ ಮತ್ತು ಶ್ರೀಕುಮಾರ್ ನಡೆಸಿದ ವಾಟ್ಸಅಪ್ ಸಂಭಾಷಣೆಗಳು ಸಾಬೀತಾಗಿ ಅಮೃತ್ ಪೌಲ್ ಕೊರಳಿಗೆ ಉರುಳಾ ಗುವ ಸಾಧ್ಯತೆಗಳಿವೆ. ತಮಗೆ ಬೆದರಿಕೆ ಹಾಕಿದ ಪ್ರಭಾವಿಯ ಹೆಸರನ್ನು ನ್ಯಾಯಾಧೀಶರು ಹೇಳಿದರೆ ಸಾರ್ವಜನಿಕ ಅಭಿಪ್ರಾಯ ಜನಾಂದೋಲನವಾಗಿ ಬದಲಾಗಬೇಕು ಎನ್ನುವುದು ಒಂದು ಆಶಯ.
‘ಕಾಮಾತುರಾಣಾಂ ನ ಭಯಂ ನ ಲಜ್ಜ’ (ಕಾಮಾತುರನಾದವನಿಗೆ ಭಯವೂ ಇಲ್ಲ, ಲಜ್ಜೆಯೂ ಇಲ್ಲ)- ಇದು ನಮ್ಮ ಹಿರಿಯರು ಹೇಳಿದ ಮಾತು. ಕಾಮ ಎಂದರೆ ಕೇವಲ ದೈಹಿಕ ಸುಖ ಮಾತ್ರವೇ ಅಲ್ಲ. ಹಣ ಬೇಕು ಎಂಬ ಬಯಕೆಯೂ ಕಾಮವೇ. ಕಾನೂನು ಒಪ್ಪಿದ ರೀತಿಯಲ್ಲಿ ರಾಜಮಾರ್ಗದಲ್ಲಿ ಬರಬಹುದಾದ ಹಣವನ್ನು ಅಪೇಕ್ಷಿಸುವುದು ತಪ್ಪಲ್ಲ.
ಆದರೆ ಅಕ್ರಮದ ಹಾದಿ ಹಿಡಿದು, ಪ್ರತಿಭಾವಂತರನ್ನು ವಂಚಿಸಿ ತಾನು ಯಾವುದಕ್ಕೆ ಅರ್ಹನಲ್ಲವೋ ಅಂಥ ಸ್ಥಾನವನ್ನು ಹೊಂದಿ, ಆ ಸ್ಥಾನವನ್ನು ದುರ್ಬಳಕೆ ಮಾಡಿ ತಾನು ಮಾಡುವ ತಪ್ಪಿಗೆ ಲಜ್ಜೆಪಡದೆ ಸಿಕ್ಕಿ ಬೀಳುವೆನೆಂಬ ಭಯವೂ ಇಲ್ಲದೆ ಕೋಟ್ಯಂತರ ಸಂಪಾದಿಸಿ ಬಚ್ಚಿಡುವುದು ದೇಶಕ್ಕೆಸಗುವ ದ್ರೋಹ. ಬಚ್ಚಿಟ್ಟಿದ್ದನ್ನು ದಕ್ಕಿಸಿಕೊಳ್ಳಲು ಪ್ರಭಾವವನ್ನು ಬಳಸುವುದು ಮತ್ತೊಂದು ದುರಂತ. ಇಂತಹ ದ್ರೋಹಿಗಳನ್ನು ಬಯಲಿಗೆಳೆಯ ಬೇಕಾದ ಸಂಸ್ಥೆಗಳೂ ಭ್ರಷ್ಟಾಚಾರಿಗಳ ನೆರವಿಗೆ ನಿಲ್ಲುವುದು ಈ ದೇಶದ ವ್ಯವಸ್ಥೆ ಗರಿಷ್ಠ ಮಟ್ಟದ ಅಧಃಪತನವನ್ನು ತಲುಪಿರುವುದರ ದ್ಯೋತಕ.
ಸಮಾಧಾನದ ಸಂಗತಿಯೇನೆಂದರೆ ತಿಮಿಂಗಿಲಗಳನ್ನು ಬಿಟ್ಟು ಮೀನುಗಳನ್ನು ಹಿಡಿಯುತ್ತಿದ್ದೀರಿ ಎಂದು ನ್ಯಾಯಾಲಯ ಛೀಮಾರಿ ಹಾಕಿದ ಬಳಿಕ ಭ್ರಷ್ಟಾಚಾರಿಗಳು ಬಲೆಗೆ ಬಿದ್ದದ್ದು. ‘ಬಿಸಿ ತಾಗದೇ ಬೆಣ್ಣೆ ಕರಗದು’ ಇದು ಜನಸಾಮಾನ್ಯರ ಮಾತು ಗಳಲ್ಲಿ ಹಾಸುಹೊಕ್ಕಾಗಿರುವ ನುಡಿಗಟ್ಟು. ಇಂತಹ ಮಾತುಗಳು ಸಾರ್ವಕಾಲಿಕ ಸತ್ಯಗಳು ಎನ್ನುವುದಕ್ಕೆ ಸಾಕ್ಷಿಯಾಗುವಂತೆ ಎಡಿಜಿಪಿ ಅಮೃತ್ ಪೌಲ್ ಮತ್ತು ಜಿಲ್ಲಾಧಿಕಾರಿ ಮಂಜುನಾಥ್ ಬಂಧನಕ್ಕೊಳಗಾಗಿzರೆ. ಪಿಎಸ್‌ಐ ಹಗರಣದಲ್ಲಿ ಅಮೃತ್ ಪೌಲ್ ಅವರನ್ನು ವಿಚಾರಣೆ ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಒಂದು ತಿಂಗಳ ಹಿಂದೆಯೇ ಕೇಳಿಬಂದಿತ್ತು.
ಆದರೆ ಅಂತಹ ‘ದೊಡ್ಡವರನ್ನು’ ಮುಟ್ಟುವ ಧೈರ್ಯ ಸಿಐಡಿ ಅಧಿಕಾರಿಗಳಿಗೆ ಇರಲಿಲ್ಲವೇನೋ? ಸಮರ್ಪಕ ತನಿಖೆ ನಡೆಸಿಖಾಕಿಯ ಗೌರವ ಉಳಿಸಿ ಎಂದು ಹೈಕೋರ್ಟ್ ಛಾಟಿ ಬೀಸಿದ ಬೆನ್ನ ಅಮೃತ್ ಪೌಲ್ ಅವರ ಬಂಧನವಾಗಿದೆ.
ನ್ಯಾಯಾಧೀಶರಿಗೆ ಬೆದರಿಕೆ
ಭ್ರಷ್ಟಾಚಾರಿಗಳು ಎಷ್ಟು ಪ್ರಬಲರಾಗುತ್ತಿದ್ದಾರೆ ಮತ್ತು ಭ್ರಷ್ಟಾಚಾರಿಗಳ ಜಾಲ ಯಾವ ರೀತಿ ರೂಪುಗೊಳ್ಳುತ್ತಿದೆ ಎನ್ನುವುದಕ್ಕೆ ‘ವರ್ಗಾವಣೆ ಮಾಡಿಸುತ್ತೇವೆ’ ಎಂದು ಜಡ್ ಗೆ ಬೆದರಿಕೆ ಹಾಕಿರುವುದೇ ಒಂದು ಸಾಕ್ಷಿ. ಎಸಿಬಿಯಲ್ಲಿನ ಅಕ್ರಮವನ್ನು ಪ್ರಶ್ನಿಸಿದ್ದಕ್ಕೆ ನನಗೆ ವರ್ಗಾವಣೆಯ ಬೆದರಿಕೆ ಬಂದಿದೆ ಎಂದು ನ್ಯಾಯಾಧೀಶರೇ ಹೇಳಿದ್ದಾರೆ.
ಆದರೆ ನನಗೆ ಜನರ ಒಳಿತು ಮುಖ್ಯ. ಇಂತಹ ಬೆದರಿಕೆಗೆ ಮಣಿಯುವುದಿಲ್ಲ ಎಂದು ನ್ಯಾಯಾಧೀಶ ಎಚ್.ಸಿ. ಸಂದೇಶ್ ಸ್ಪಷ್ಟಪಡಿಸಿದ್ದಾರೆ. ‘ಭ್ರಷ್ಟಾಚಾರ ನಿಗ್ರಹ ದಳವೇ ಅತೀದೊಡ್ಡ ಭ್ರಷ್ಟರ ಕೂಪ. ಅದರ ಮುಖ್ಯಸ್ಥ ಎಡಿಜಿಪಿ ಕಳಂಕಿತ ಅಧಿಕಾರಿ’ ಎನ್ನುವುದು ನ್ಯಾಯಾಧೀಶರು ಹೇಳಿದ ಮಾತು. ಇದಕ್ಕೆ ಪ್ರತಿಯಾಗಿ ಭ್ರಷ್ಟನೊಬ್ಬ ತಾನು ನ್ಯಾಯಾಧೀಶರನ್ನೇ ವರ್ಗಾಯಿಸುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ. ಆದರೆ ಹೈಕೋರ್ಟ್ ನ್ಯಾಯಾಽಶರನ್ನು ಟ್ರಾರ್ನ್ಸ ಮಾಡುವುದು ತನ್ನ ಕೈಯಲ್ಲಿಲ್ಲ ಎನ್ನುವುದು ಆ ಅವಿವೇಕಿಗೆ ತಿಳಿದಿರಲಾರದು.
ಬೇಲಿ ಮೇಯ್ದ ಹೊಲಬೇಲಿ ಹಾಕುವುದು ಹೊಲದ ರಕ್ಷಣೆಗಾಗಿ. ಆದರೆ ಬೇಲಿಯೇ ಹೊಲವನ್ನು ರಕ್ಷಿಸದಿದ್ದರೆ ಮಾಡುವುದಾದರೂ ಏನು? ಭ್ರಷ್ಟಾಚಾರ ನಿಗ್ರಹ ದಳವೇ ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಿಂತರೆ ನ್ಯಾಯಾಲಯದ ಹೊರತಾಗಿ ಏನು ಆಯ್ಕೆ ಇದೆ? ಅಷ್ಟಕ್ಕೂ ಪ್ರತಿ ಯೊಂದನ್ನೂ ನ್ಯಾಯಾಲಯವೇ ನಿಯಂತ್ರಿಸುವುದು ಸಾಧ್ಯವೇ? ನ್ಯಾಯಾಲಯವೇ ಪಿಎಸ್‌ಐ ಹಗರಣದ ತನಿಖೆಯ ಸಂಪೂರ್ಣ ನಿಗಾ ವಹಿಸಲಿದೆ ಎಂದು ನ್ಯಾಯಾಧೀಶರೇನೋ ಹೇಳಿದ್ದಾರೆ. ಆದರೆ ಎಲ್ಲಾ ಪ್ರಕರಣಗಳನ್ನೂ ನ್ಯಾಯಾಲಯವೇ ನಿರ್ವಹಿಸು ವುದು ಸಾಧ್ಯವೇ? ಎಸಿಬಿಯು ಸಾರ್ವಜನಿಕರನ್ನು ರಕ್ಷಿಸುತ್ತಿದೆಯಾ? ಅಥವಾ ಕಳಂಕಿತರನ್ನು ರಕ್ಷಿಸುತ್ತಿದೆಯಾ? ಎಂದು ನ್ಯಾಯಾ ಧೀಶರು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರವನ್ನು ನಿಯಂತ್ರಿಸಬೇಕಾಗಿರುವ ಎಸಿಬಿ ನಡೆಸುತ್ತಿರುವ ದಾಳಿಗಳಿಗೆ ಲೆಕ್ಕವಿಲ್ಲ. ಆದರೆ ಶಿಕ್ಷೆಯಾಗುತ್ತಿರುವುದು  ಬೆರಳೆಣಿಕೆಯ ಕಳಂಕಿತರಿಗೆ ಮಾತ್ರ. ನಾಲ್ಕು ವರ್ಷಗಳಲ್ಲಿ ನೂರು ಕೋಟಿಗೂ ಅಧಿಕ ಮೊತ್ತವನ್ನು ಎಸಿಬಿಯ ನಿರ್ವಹಣೆಗಾಗಿ ಬಳಸಲಾಗಿದೆ. ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈ ಎ ಪ್ರಕರಣಗಳಲ್ಲೂ ಕೇವಲ ಮೂರು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎನ್ನಲಾಗುತ್ತಿದೆ. ಹಾಗಿದ್ದರೆ ಉಳಿದವರೆಲ್ಲರೂ ನಿರ್ದೋಷಿಗಳಾಗಿದ್ದು, ಅನ್ಯಾಯವಾಗಿ ಎಸಿಬಿಯಿಂದ ದಾಳಿ ಗೊಳಗಾದರೆ? ಭಗವಂತನೇ ಬಲ್ಲ.
ಲೋಕಾಯುಕ್ತಕ್ಕೆ ಮರಣಶಾಸನ ಬರೆದ ಬಳಿಕ ಎಸಿಬಿ ರಚನೆಯಾಯಿತು. ಆದರೆ ಎಸಿಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕರ್ನಾಟಕ ಭ್ರಷ್ಟರ ಸಾಮ್ರಾಜ್ಯವಾಗುತ್ತಿದೆ. ಆಗಾಗ ಎಸಿಬಿ ದಾಳಿ ನಡೆಸಿದಾಗ ಕಂತೆಗಟ್ಟಲೆ ಹಣ ಕಳಂಕಿತರ ಮನೆಗಳಲ್ಲಿ ಪತ್ತೆಯಾಗಿದೆ. ಹಣ ಇಡಲು ಜಾಗವಿಲ್ಲದೆ ಪೈಪುಗಳಲ್ಲಿ ತುರುಕಿಟ್ಟಿದ್ದರು ಎಂದು ತಿಳಿದ ಶ್ರೀಸಾಮಾನ್ಯನ ತಲೆ ತಿರುಗಿದೆ. ಅವರಿಗೆ ಶಿಕ್ಷೆಯಾಗುತ್ತದೆ ಅಂದುಕೊಳ್ಳುವುದು ಮುಗ್ದತೆಯ ಪರಮಾವಧಿ. ಏಕೆಂದರೆ ಅವರಿಗೆ ಪ್ರಭಾವಶಾಲಿಗಳ ಬೆಂಬಲವಿದೆ. ಹಣಕೊಟ್ಟು ಕೆಲಸ ಗಿಟ್ಟಿಸಿ ಆ ಕೆಲಸ ಉಳಿಸಿಕೊಳ್ಳಲು ರಾಜಕೀಯ ಪ್ರಭಾವ ಬಳಸಿ ರಾಜಕೀಯ ನಾಯಕರನ್ನು ಮೆಚ್ಚಿಸಲು ಅವರಿಗೋಸ್ಕರ ಹಣ ಮಾಡಿ… ಈ ರೀತಿಯ ವಿಷವರ್ತುಲದಲ್ಲಿ ಭ್ರಷ್ಟರ ಸಮೂಹ ಸಿಲುಕಿಹಾಕಿಕೊಂಡಿದೆ.
ಬೇಸತ್ತು ಚಾಟಿ ಬೀಸಿದರೆ ಜರ್ಡ್‌ಗೆ ಬೆದರಿಕೆ ಹಾಕುತ್ತಾರೆ. ಭ್ರಷ್ಟರು ಎಷ್ಟು ಕರಾರುವಾಕ್ಕಾಗಿ ಕಾರ್ಯಾಚರಣೆ ನಡೆಸುತ್ತಾರೆ ಎಂದರೆ ತಮ್ಮ ಅಕ್ರಮ ಚಟುವಟಿಕೆಗಳ ಬಗ್ಗೆ ಚರ್ಚಿಸಲು ನಿರ್ದಿಷ್ಟ ಸಮಯವನ್ನೇ ನಿಗದಿ ಮಾಡಿಕೊಳ್ಳು ತ್ತಿದ್ದರು. ಪಿಎಸ್‌ಐ ಹಗರಣದ ಆರೋಪಿಗಳು ಊಟ ಮುಗಿದ ಬಳಿಕ ಸಿಸಿಟಿವಿ ಕ್ಯಾಮೆರಾ ಇಲ್ಲದ ಕಡೆ ತಮ್ಮ ಮೀಟಿಂಗ್ ಇಟ್ಟುಕೊಳ್ಳುತ್ತಿದ್ದರಂತೆ. ಪಿಎಸ್‌ಐ ನೇಮಕಾತಿ ವಿವಾದದ ಮುಖ್ಯಸ್ಥ ಅಮೃತ್ ಪೌಲ್545ಪಿಎಸ್‌ಐ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭವಾಗು ತ್ತಿದ್ದಂತೆ ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. (ವಾಸ್ತವವಾಗಿ ಇಷ್ಟೊಂದು ನೇಮಕಗಳಿಗೆ ಸರಕಾರ ಒಪ್ಪಿರಲಿಲ್ಲ.
ಆದರೆ ವ್ಯಕ್ತಿಯೊಬ್ಬರು ತಮ್ಮ ಪ್ರಭಾವ ಬೀರಿದ ಬಳಿಕ ಸರಕಾರ ಒಪ್ಪಿತು ಎಂಬ ಗುಸುಗುಸು ಇದೆ.) ಅಧಿಸೂಚನೆ  ಹೊರಡಿಸುವು ದಕ್ಕೂ ಮೊದಲೇ ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳ ಹುಡುಕಾಟ ನಡೆಸಲಾಗಿತ್ತು ಎಂಬ ಆರೋಪ ಗಳಿವೆ. ಒಂದು ಪಿಎಸ್‌ಐ ಹುದ್ದೆಗೆ60ಲಕ್ಷದಿಂದ1ಕೋಟಿ ರು. ಗಳವರೆಗೆಆಫರ್ಹೋಗಿತ್ತು. ದುಡ್ಡು ಕೊಟ್ಟರೆ ಸಾಕು ಪಾಸ್ ಆಗಲು ಎಲ್ಲ ವ್ಯವಸ್ಥೆಗಳೂ ಆಗಿದ್ದವು. ಬ್ಲೂಟೂತ್ ಬಳಕೆಗೆ ಸಹಕರಿಸುವುದು, ಉತ್ತರ ಹೇಳಿಕೊಡುವುದು, ಒಎಂಆರ್ ಶೀಟ್ ಖಾಲಿ ಬಿಟ್ಟಿದ್ದರೆ ಉತ್ತರಿಸಿ ಸೀಲ್ ಮಾಡುವುದು- ಹೀಗೆ ಎಲ್ಲ ರೀತಿಯ ಸಹಕಾರಗಳೂ ನಡೆದಿದ್ದವು. ಪಿಎಸ್‌ಐ ಹಗರಣ ಬಯಲಿಗೆ ಬಂದ ಬಳಿಕ ಇಬ್ಬರು ಅಭ್ಯರ್ಥಿಗಳಿಂದ90ಲಕ್ಷ ಪಡೆದಿದ್ದ ಬ್ಯಾಡರಹಳ್ಳಿ ಠಾಣೆಯಲ್ಲಿ ಎಸ್‌ಐ ಆಗಿದ್ದ ಹರೀಶ್ ಸೆರೆಯಾದರು. ಹಲವರು ಪೊಲೀಸರು ಸಸ್ಪೆಂಡ್ ಆದರು.
ಹಗರಣ ನಡೆದ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದ ಮಾಲೀಕಳನ್ನು ಬಂಧಿಸಿದ್ದೇ ದೊಡ್ಡ ಸಾಧನೆ ಎಂದು ಬಿಂಬಿಂತವಾಯಿತು. ಶಾಸಕರ ಗನ್ ಮ್ಯಾನ್ ಒಬ್ಬನ ಬಂಧನವೂ ಆಯಿತು. ಆದರೆ ನಿಜವಾದ ಅತಿದೊಡ್ಡ ವ್ಯಕ್ತಿಯನ್ನು ಬಂಧಿಸಬೇಕಿದೆ. ಇದರ ಹಿಂದೆ ಸಚಿವರಿರಲಿ, ಪ್ರಭಾವೀ ವ್ಯಕ್ತಿಗಳಿರಲಿ ಭಾಗಿಯಾಗಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಹೈಕೋರ್ಟ್ ಛಾಟಿ ಬೀಸಿದ ಮಾರನೆಯ ದಿನ ಪೌಲ್‌ರ ಬಂಧನವಾಯಿತು.
ಈ ರೀತಿ ಹಣ ಕೊಟ್ಟು ಹುದ್ದೆ ಖರೀದಿಸಿದವರು ತಾನು ಆಯ್ಕೆಯಾದದ್ದು ತನ್ನ ಪ್ರತಿಭೆಯಿಂದಲ್ಲ, ಹಣಬಲದಿಂದ ಎಂದು ಸ್ಪಷ್ಟವಾಗಿ ಅರಿತವರು ತಮ್ಮ ಕರ್ತವ್ಯವನ್ನು ಯಾವ ರೀತಿ ನಿಭಾಯಿಸಬಹುದು? ಯಾವುದೇ ಪ್ರಕರಣದಲ್ಲಿ ತಾನು ಹಣ ಮಾಡುವುದು ಹೇಗೆ ಎಂದು ಆಲೋಚಿಸಿಯಾರೇ ಹೊರತು ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡ ಬೇಕು ಎಂಬ ಯೋಚನೆ ಬರುವುದಾದರೂ ಹೇಗೆ? ಹುದ್ದೆ ಖರೀದಿಸಲು ಚೆಲ್ಲಿದ ಹಣವನ್ನು ಬಡ್ಡಿಸಮೇತ ಪಡೆಯುವುದನ್ನೇ ಧ್ಯೇಯವಾಗಿ ಸಿದವರಿಗೆ ಕರ್ತವ್ಯನಿಷ್ಠೆ ಎಂಬ ಪದ ಅಲರ್ಜಿ ಯಾದೀತಷ್ಟೇ ಹೊರತು ಇನ್ನೇನಾದೀತು? ಈ ರೀತಿ ಬೆಳೆಯುತ್ತಿರುವ ಭ್ರಷ್ಟ ಸಾಮ್ರಾಜ್ಯಕ್ಕೆ ಕೊನೆ ಹಾಡುವುದು ಸರಕಾರದ ಆದ್ಯತೆಯಾಗಬೇಕು.
ನ್ಯಾಯಾಧೀಶರಿಗೆ ವರ್ಗಾವಣೆಯ ಬೆದರಿಕೆ ಹಾಕಿದ ಬಗ್ಗೆ ತನಿಖೆಯಾಗಬೇಕು ಎಂದು ವಕೀಲರ ಸಂಘ ಒತ್ತಾಯಿಸಿದೆ. ಅಮೃತ್ ಪೌಲ್ ಮತ್ತು ಶ್ರೀಕುಮಾರ್ ನಡೆಸಿದ ವಾಟ್ಸಅಪ್ ಸಂಭಾಷಣೆಗಳು ಸಾಬೀತಾಗಿ ಅಮೃತ್ ಪೌಲ್ ಕೊರಳಿಗೆ ಉರುಳಾಗುವ ಸಾಧ್ಯತೆಗಳಿವೆ. ತಮಗೆ ಬೆದರಿಕೆ ಹಾಕಿದ ಪ್ರಭಾವಿಯ ಹೆಸರನ್ನು ನ್ಯಾಯಾಧೀಶರು ಹೇಳಿದರೆ ಸಾರ್ವಜನಿಕ ಅಭಿಪ್ರಾಯ ಜನಾಂದೋಲನವಾಗಿ ಬದಲಾಗಬೇಕು ಎನ್ನುವುದು ಒಂದು ಆಶಯ.
ಭ್ರಷ್ಟರ ದರ್ಬಾರನ್ನು ಸಹಿಸಿಕೊಂಡು ಬದುಕುವ ಕರ್ಮ ನಮ್ಮದಲ್ಲ. ನಾವು ಮತ ಹಾಕಿ ಅಧಿಕಾರಕ್ಕೆ ಬಂದ ಸರಕಾರವೆಲ್ ಫೇರ್ ಸ್ಟೇಟ್ (ಕಲ್ಯಾಣ ರಾಜ್ಯ- ಸಕಲ ಪ್ರಜೆಗಳ ಅಭಿವೃದ್ಧಿ ಸಾಧಿಸುವ ರಾಷ್ಟ್ರ) ಆಗಬೇಕು. ಅಧಿಕಾರ ವಿಕೇಂದ್ರೀಕರಣದ ಕನಸು ಕಂಡವರಿದ್ದಾರೆ. ಸಂಪತ್ತಿನ ಕೇಂದ್ರೀಕರಣ ಆಗಬಾರದು ಎಂದೂ ಅಧಿಕಾರದಲ್ಲಿದ್ದವರು ಕನಸು ಕಾಣಬೇಕು. ಅನ್ಯಾಯ ಮಾಡಿ ಸಂತ್ರಸ್ತರಿಂದ ಹಿಡಿಶಾಪ ಹಾಕಿಸಿಕೊಂಡು ಅಕ್ರಮ ಮಾರ್ಗದಿಂದ ಮೂರು ತಲೆಮಾರು ತಿಂದರೂ ಕರಗದಷ್ಟು ಸಂಪತ್ತನ್ನು ಕೂಡಿಹಾಕಿ ಬರುವ ಭಾಗ್ಯವಾದರೂ ಏನು? ನ್ಯಾಯಾಲಯ ಭ್ರಷ್ಟರಿಗೆ ಬರೆ ಹಾಕುವ ಪ್ರಕ್ರಿಯೆಯನ್ನು ಆರಂಭಿಸಿದೆ.
ಆಡಳಿತ ಪಕ್ಷ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ನ್ಯಾಯಾಲಯದ ಪ್ರಯತ್ನಗಳಿಗೆ ತಾರ್ಕಿಕ ಅಂತ್ಯ ಕೊಡಬಹುದು. ಭ್ರಷ್ಟಾಚರದ ಪ್ರಕರಣಗಳು ಯಾರ ಆಡಳಿತದಲ್ಲಿ ಎಷ್ಟು ಎನ್ನುವ ಚರ್ಚೆಯನ್ನು ಬದಿಗಿಟ್ಟು ಯಾರ ಅವಧಿಯ ಭ್ರಷ್ಟಾಚಾರ ನಡೆದಿದ್ದರೂತನ್ನ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಕೊನೆ ಹಾಡುತ್ತೇನೆ ಎನ್ನುವ ನಿಲುವನ್ನು ಆಡಳಿತ ಪಕ್ಷ ಹೊಂದಿದರೆ ಮಾತ್ರ ಭ್ರಷ್ಟಾಚಾರಕ್ಕೆ ಪೂರ್ಣ ವಿರಾಮ ಹಾಕಬಹುದು.