ಘರ್ಜಿಸುವ ಮಹಾ ಹುಲಿ ಸದ್ಯಕ್ಕಂತೂ ತಬ್ಬಲಿ !
ವಿಶ್ಲೇಷಣೆ
ಎಸ್‌.ಜಿ.ಹೆಗಡೆ
.
ಮತ್ತೆ ಶಿವಸೇನೆ ಕಾಲಾಂತರದಲ್ಲಿ ಗತವೈ ಭವವನ್ನು ಮತ್ತೆ ಪಡೆಯಲೂ ಬಹುದು, ರಾಜಕೀಯದಲ್ಲಿ ಯಾವುದನ್ನೂ ಅಲ್ಲ ಗಳೆಯುವಂತಿಲ್ಲ. ಅಂದಂತೆ ಸದ್ಯದ ಸ್ಥಿತಿ ಕ್ಲಿಷ್ಟವಾಗಿದೆ. ಬಾಳಾ ಸಾಹೇಬ್ ಸಂಸ್ಥಾಪಿತ ಸೇನೆಯಲ್ಲಿ ಎಂದಿಲ್ಲದಗೊಂದಲ ಮೂಡಿದೆ. ಸದ್ಯಕ್ಕಂತೂ ಘರ್ಜಿಸುವ ಹುಲಿ ತಬ್ಬಲಿಯಾದ ಸನ್ನಿವೇಶ ಎದುರಾಗಿದೆ.
ನಾನಿರುವ ಮುಂಬಯಿಯ ಭಾಗದ ಸುತ್ತ ಅನೇಕ ಶಿವಸೇನಾ ಕಚೇರಿಗಳಿವೆ. ಶಿವಸೇನಾ ಕಚೇರಿಗಳಿಗೆ ಶಿವಸೇನಾ ಶಾಖೆಗಳೆಂದು ಅಲ್ಲಿ ಕರೆಯತ್ತಾರೆ. ಶಿವಸೇನಾ ಶಾಖೆಗಳು ರಾಜ್ಯದ ಎಡೆಯ ಮುಖ್ಯ ಪ್ರದೇಶಗಳಲ್ಲಿ ಅಲ್ಲದೆ ಬೀದಿ ಬೀದಿಗಳಲ್ಲಿವೆ. ಶಿವಸೇನಾ ಶಾಖೆಗಳಿಗೆ ಶಾಖಾ ಪ್ರಮುಖರಿದ್ದಾರೆ. ಆಯಾ ಪ್ರದೇಶದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿದ್ದಾರೆ.
ಶಿವಸೇನೆಯು ಜನಮನದಲ್ಲಿ ಸದಾ ಸಕ್ರಿಯವಾಗಿದ್ದ ರಾಜಕೀಯ ಸಂಸ್ಥೆ. ಹಳೆಯ ಕಾಲದಿಂದ ಇರುವ ಶಿವಸೇನಾ ಕಚೇರಿಗಳಿಗೆ ವಿಶೇಷ ರೂಪಿದೆ. ಅದಕ್ಕೆ ಹುಲಿಗುಹೆಯ ಹಾಗಿನ ವಿನ್ಯಾಸ ನೀಡಲಾಗಿದೆ. ಬಾಯಿ ತೆರೆದು ಭಯಾನಕ ಹಲ್ಲುಗಳನ್ನು ತೋರಿ ಘರ್ಜಿಸುವ ಹುಲಿಯು ಕಟ್ಟಡದ ಮುಖ ದ್ವಾರದ ಚಿತ್ರಣ. ಅಂತಹ ಶಾಖೆಗಳ ಒಳಗೆ ಪ್ರವೇಶಿಸುವ ಹೊಸಬರಿಗೆ ಘರ್ಜಿಸುತ್ತಿರುವ ಹುಲಿ ಗುಹೆಗೆ ಪ್ರವೇಶಿಸಿದ ರೋಮಾಂಚಕ ಅನುಭವವಾಗುತ್ತದೆ. ಮುಖದ ಮೇಲೆ ಕಂದು ಕಪ್ಪು ಮಿಶ್ರಿತ ಪಟ್ಟೆಯಿರುವ ಹಳದಿ ಬಣ್ಣದ ಘರ್ಜಿಸುವ ಹುಲಿಯು ಶಿವಸೇನೆಯ ಲೋಗೊ ಕೂಡ.
ಶಿವಸೇನಾ ಸ್ಥಾಪಕ ಬಾಳಾಸಾಹೇಬ್ ಠಾಕ್ರೆಯವರು ಕಿತ್ತಳೆ ಬಣ್ಣದ ಕಾವಿ ತೊಟ್ಟು ಹಣೆಗೆ ತಿಲಕವಿಟ್ಟು, ಕತ್ತಿನ ಸುತ್ತ ಜಪಸರ ತೊಟ್ಟು, ಹಣ್ಣಾದ ಗಡ್ಡದೊಂದಿಗಿನ ರೂಪದಲ್ಲಿ ಅದೇ ಹುಲಿಯಂತೆ ಕಂಡಿದ್ದರು. ಅವರ ಮಾತುಗಳು ಹುಲಿಯ ಘರ್ಜನೆಯ ಹಾಗೆ ಪ್ರಚೋದನೆ ನೀಡಿತ್ತು. ಉತ್ತೇಜನಕಾರಿಯಾಗಿತ್ತು. ಮಾರ್ಮಿಕವಾಗಿತ್ತು. ಜನರನ್ನು ಸೆಳೆಯುವ ವೈಚಾರಿಕತೆ ಮತ್ತು ಭಾವ ಪರವಶತೆ ಅವರ ಭಾಷಣಗಲ್ಲಿ ತುಂಬಿತ್ತು. ಚಾಟಿ ಹೊಡೆದ ತೀಕ್ಷಣತೆಯು ಬಾಳಾ ಸಾಹೇಬರ ಮಾತಿನ ವೈಖರಿ.
ಪತ್ರಿಕೆಯೊಂದಕ್ಕೆ ಕಾರ್ಟೂನಿಸ್ಟ್ ಆಗಿ ಮಾರ್ಮಿಕ್ ಎಂಬ ಪತ್ರಿಕೆಯ ಜನಕರಾಗಿ ನಂತರ ಶಿವಸೇನಾ ಎಂಬ ಸಂಸ್ಥೆಯನ್ನುಹುಟ್ಟುಹಾಕಿ, ರಾಜ್ಯದುದ್ದಕ್ಕೂ ಶಿವ ಸೈನಿಕರನ್ನು ಬೆಳೆಸಿದ, ರಾಜಕೀಯ ಪಕ್ಷದ ರೂಪು ನೀಡಿ ಯಶಸ್ಸು ಕಂಡ, ಮರಾಠಿ ಮಾನುಸ್ ಮತ್ತು ಹಿಂದುತ್ವದ ರೂವಾರಿಯಾಗಿದ್ದ ಮಹಾ ವ್ಯಕ್ತಿ ಬಾಳಾ ಸಾಹೇಬರು ಮಹಾ ಶಕ್ತಿಯೂ ಆಗಿದ್ದರೆಂಬುದು ನಿಸ್ಸಂದೇಹ.
ಶಿವಸೇನೆಯು ಬರೀ ಪಟ್ಟಣಗಳಲ್ಲಿ ಅಲ್ಲದೇ ರಾಜ್ಯದ ತುಂಬೆಲ್ಲ ಹಳ್ಳಿಗಳಲ್ಲಿಯೂ ಜನರ ಜೀವನದಲ್ಲಿ ಹಾಸು ಹೊಕ್ಕಾದ ಪಕ್ಷ. ಜನತೆಯ ನಾಡಿ ಮಿಡಿತ ಅರಿತ ಪಕ್ಷ. ಎಡೆ ಇರುವ ಶಿವಸೇನಾ ಶಾಖೆಗಳು ಜನ ಜೀವನದಲ್ಲಿ ಭಾಗಿಯಾಗಿವೆ. ಶಿವಸೇನಾ ಕಚೇರಿಗಳು ಸಾಮಾನ್ಯ ಜನತೆಗೆ ಅಗತ್ಯವಿರುವ ಅನು ಸಂಧಾನಗಳಲ್ಲಿ ಭಾಗಿಯಾಗುವುದಿದೆ. ಹಬ್ಬ ಹರಿದಿನಗಳನ್ನು ಆಚರಿಸಿ ಮಹಾ ಜನತೆಯೊಂದಿಗೆ ನಿಕಟವಾಗಿ ಬೆರೆಯುತ್ತದೆ. ಗಣೇಶ ಚತುರ್ಥಿಯ ಹಬ್ಬವನ್ನು ಎಲ್ಲ ಶಾಖೆಗಳಲ್ಲಿ ವಿಜೃಂಭಣೆಯಿಂದ ಆಚರಿಸ ಲಾಗುತ್ತದೆ.
ಛತ್ರಪತಿ ಶಿವಾಜಿ ಜಯಂತಿಯಂದು ಶಿವಾಜಿ ಮಹಾರಾಜ್ ಭಾವಚಿತ್ರವು ಎಲ್ಲಮುಖ್ಯ ಪ್ರದೇಶಗಲ್ಲಿ ಕಂಗೊಳಿಸಿ ಶಿವಾಜಿ ಗುಣ ಗಾಯನ ಕೇಳಿ ಬರುವುದು ಸ್ವಾಭಾವಿಕವಾಗಿದೆ. ಅಲ್ಲದೆ ವಿಶೇಷ ಸಂದರ್ಭಗಳಲ್ಲಿ ಶಿವಸೇನಾ ಕಚೇರಿಗಳಲ್ಲಿ ಬಡ ಜನರ ಸಹಾಯ ನಿಮಿತ್ತ ರೇಷನ್ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಪರಿಪಾಠವಿದೆ. ಅಂತಹ ಸಂದರ್ಭದಲ್ಲಿ ಎಲ್ಲ ಧರ್ಮದ, ಜಾತಿಯ ಬಡ ಜನರು ರೇಷನ್ ಮೂಟೆ ಪಡೆಯಲು ಕಿಲೋ ಮೀಟರ್ ಗಟ್ಟಲೆ ಉದ್ದ ಸಾಲು ಹಚ್ಚಿ ಇಂದಿಗೂ ನಿಂತಿರುತ್ತಾರೆ.
ಹೀಗೆ ಅವು ಒಂದ ಒಂದು ರೀತಿಯಲ್ಲಿ ಸಾಮಾನ್ಯ ಜನತೆಯ ಜತೆ ಸದಾ ಸಕ್ರಿಯವಾಗಿ ತುಡಿಯುತ್ತಲೇ ಬಂದಿದೆ. ಶಿವಸೇನಾ ಸಂಘಟನೆಯು ಸಾಮಾನ್ಯ ಜನತೆಯ ಜತೆ ಯಷ್ಟೇ ಅಲ್ಲ, ಪಕ್ಷದ ಪದಾಧಿಕಾರಿಗಳ ಜತೆ ಪರಸ್ಪರ ಆತ್ಮೀಯ ಮತ್ತು ನಿಕಟ ಸಂಬಂಧ ಹೊಂದಿದ ಪಕ್ಷವೆಂದೇ ತಿಳಿದಿರುವಾಗ ಇತ್ತೀಚಿನ ರಾಜಕೀಯ ಘಟನಾವಳಿಗಳು ವಿಸ್ಮಯಕಾರಿಯಾಗಿವೆ. ಸೇನಾ ಕೇಡರಿನಲ್ಲಿ ಠಾಕ್ರೆಗಳ ನಂತರದ ಇಂದಿನ ಮುಖ್ಯ ಮುಖಂಡನಾಗಿ ಗುರುತಿಸಲಾಗಿದ್ದ ಏಕನಾಥ್ ಶಿಂಧೆ ಅವರು ಕೆಲ ದಿನಗಳ ಹಿಂದೆ ತಮ್ಮ ಬೆಂಬಲಿಗರೊಂದಿಗೆ ಅಚಾನಕ್ ಗುಜರಾತಿನ ಸೂರತ್ತಿಗೆ ಹೊರಟು, ನಂತರ ಗುವಾಹಟಿ ತಲುಪಿದ್ದು ಎಲ್ಲರಿಗೆತಿಳಿದಿರುವ ವಿಷಯ.
೫೫ ಶಾಸಕರನ್ನು ಪಡೆದಿದ್ದ ಶಿವಸೇನಾದ ೩೯ ಶಾಸಕರ ಬೆಂಬಲವನ್ನು ಪಡೆದು ಬಂದ ಶಿಂಧೇಜಿ ಮುಖ್ಯಮಂತ್ರಿಯಾಗಿ ಪ್ರಮಾಣ  ವಚನ ಸ್ವೀಕರಿಸಿ ವಿಧಾನಸಭೆಯ ವಿಶ್ವಾಸಮತವನ್ನು ಗೆದ್ದುಕೊಂಡರು. ವಿಶ್ವಾಸ ಮತ ಯಾಚಿಸುವ ಮುನ್ನ ಸ್ಪೀಕರ್ ಆಯ್ಕೆ ಯೂ ಆಯಿತು. ಅನೇಕ ವರ್ಷ ಶಿವ ಸೈನಿಕನಾಗಿದ್ದು ನಂತರ ಬಿಜೆಪಿ ಸೇರಿ ಕೊಲಾಬಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಆಯ್ಕೆಯಾದ ರಾಹುಲ್ ನಾರ್ವೇಕರ್ ವಿಧಾನ ಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು.
ನಾರ್ವೇಕರ್ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಸ್ಪೀಕರ್ ಹುದ್ದೆಗೆ ಏರಿದವರು. ಅತ್ಯಂತ ದೊಡ್ಡ ಪಕ್ಷವೊಂದು ಒಡೆದಿದ್ದು, ಬಿಜೆಪಿ ಬೆಂಬಲಿತ ಹೊಸ ಸರಕಾರವು ಶಿವಸೇನಾ ಮೂಲದ ಏಕನಾಥ್ ಶಿಂಧೆ ನೇತೃತ್ವದಲ್ಲಿ ಸ್ಥಾಪಿತವಾಗಿದ್ದು, ಶಿವಸೇನಾ ಮೂಲದ ನಾರ್ವೇಕರ್ ಸ್ಪೀಕರ್ ಆಗಿದ್ದು, ಶಿಂಧೇಜಿ ಮಂತ್ರಿಯಾದ ಹಿಂದಿನ ಸರಕಾರವೊಂದರಲ್ಲಿ ಮುಖ್ಯಮಂತ್ರಿಯಾಗಿದ್ದ ಫಡ್ನವೀಸ್ ಉಪಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಹೆಚ್ಚಿನ ಸಂಖ್ಯೆಯ ಶಾಸಕರಿರುವ ಬಿಜೆಪಿ, ಶಿಂಧೆಯವರಿಗೆ ಮುಖ್ಯ ಮಂತ್ರಿ ಪಟ್ಟ ಕಟ್ಟಿದ್ದು ಇವೆಲ್ಲ ಘಟನಾವಳಿಗಳು ಮಹಾ ರಾಜಕೀಯ ಮೂಡಿಸಿದ ಅಚ್ಚರಿ ಮತ್ತು ವಿಸ್ಮಯದ ಸರಮಾಲೆ.ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ಸಾತಾರಾ ಮೂಲದವರು.
ಮರಾಠಾ ಸಮುದಾಯದವರು. ಚಿಕ್ಕವನಿರುವಾಗಲೇ ಮುಂಬೈ ಸೇರಿದ್ದರು. ಕೌಟುಂಬಿಕ ಖರ್ಚು ನಿರ್ವಹಿಸಲು ಆಟೋ ಓಡಿಸಿ ದ್ದರು. ಅವರನ್ನು ಶಿವಸೇನೆಗೆ ತಂದು ಅಪ್ಪಟ ಶಿವಸೈನಿಕನಾಗಿಸಿದವರು ಇನ್ನೊಬ್ಬ ಎತ್ತರದ ಶಿವಸೇನಾ ಮುಖಂಡರಾಗಿದ್ದ ಆನಂದ್ ದಿಘೆ ಸಾಹೇಬರು. ಶಿವಸೈನಿಕನಾಗಿ ಬೆಳೆದು ನಾಲ್ಕು ಸಾರಿ ಠಾಣಾದ ಭಾಗದಿಂದ ನಿರಂತರವಾಗಿ ಆಯ್ಕೆಯಾದವರು. ಅವರೊಮ್ಮೆ ಭಾರತೀಯ ಸೇನೆಯಲ್ಲಿ ಸೈನಿಕನಾಗಲು ಇಂಟರ್‌ವ್ಯೂ ನೀಡಲು ಹೋದವರು. ತಡವಾಗಿ ತಲುಪಿ ಅಲ್ಲಿ ಸೇರಲು ಸಾಧ್ಯವಾಗಲಿಲ್ಲ.
ಭಾರತೀಯ ಸೇನೆ ಸೇರದಿದ್ದರೂ ಶಿವ ಸೈನಿಕನಾಗಿ ಜನರ ಹತ್ತಿರವಿದ್ದು ಬೆಳೆದರು. ಠಾಣೆಯ ವಿಶೇಷ ಮಾಮಲೇ ದಾರ್ ಮಿಸಾಳ್ ಮತ್ತು ವಡಾ ಪಾವ್ ಅವರಿಗೆ ಇಷ್ಟ. ದೋಣಿ ದುರಂತದಲ್ಲಿ ತಮ್ಮ ಮಗ ಮತ್ತು ಮಗಳನ್ನು ಕಳೆದುಕೊಂಡ ದುಃಖದ ಸಂಗತಿ ಯನ್ನು ಶಿಂಧೆ ವಿಶ್ವಾಸ ಮತ ಯಾಚನೆಯ ಸಮಯದಲ್ಲಿಯೂ ನೆನಪಿಸಿಕೊಂಡು ದಿಘೆ ಮತ್ತು ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಮಾರ್ಗ ದಲ್ಲಿ ನಡೆಯುವ ದೃಢ ಸಂಕಲ್ಪದ ಕುರಿತು ಹೇಳಿದ್ದು ವ್ಯಾಪಕ ವರದಿಯಾಗಿದೆ.
ನೂರಾ ಐದು ಶಾಸಕರನ್ನೊಳಗೊಂಡ ಬಿಜೆಪಿ ಮೂವತ್ತೊಂಬತ್ತು ಶಾಸಕರ ಶಿವಸೇನಾ ತಂಡದ ಶಿಂಧೆಯವರನ್ನು ಮುಖ್ಯ ಮಂತ್ರಿ ಸ್ಥಾನಕ್ಕೆ ಏರಿಸಿರುವ ಅಚ್ಚರಿಯ ಹಿಂದೆ ಚಾಣಾಕ್ಷ, ದೂರದೃಷ್ಟಿಯ ತಂತ್ರಗಾರಿಕೆಯಿದೆ ಎನ್ನುವುದರಲ್ಲಿ ಎರಡು ಮಾತಿಲ. ಕಳೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಎನ್‌ಸಿಪಿಯ ಅಜಿತ್ ಪವಾರ್ ಜತೆ ಸೇರಿ ಸರಕಾರ ರಚಿಸುವ ಯತ್ನದಲ್ಲಿ ಕೈ ಸುಟ್ಟಿಕೊಂಡಿತ್ತು.
ಅಜಿತ್ ಪವಾರ್ ಎನ್‌ಸಿಪಿಯಲ್ಲಿ ವಾಪಸ್ ಶಾಮೀಲಾಗಿದ್ದು ಬಿಜೆಪಿಗೆ ಮುಖಭಂಗವಾಯಿತು. ಅಂತಹ ಸಂದರ್ಭ ಮತ್ತೆ ಬರದಂತೆ ಈ ಸಾರಿ ಕಡಿಮೆ ಸಂಖ್ಯೆಯಿದ್ದೂ ಶಿಂಧೆ ಬಣಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು ಎನ್ನುವ ಮಾತಿದೆ. ಶಿಂಧೆ ಮರಾಠಾ ಸಮುದಾಯದವರು, ದೊಡ್ಡ ಮರಾಠಾ ಸಮುದಾಯವನ್ನು ಮುಂದಿನ ಚುನಾವಣೆಯಲ್ಲಿ ಸೆಳೆಯುವದು ಇನ್ನೊಂದು ತಂತ್ರ. ಕಳೆದ ಚುನಾವಣೆಯ ನಂತರ ಸರಕಾರ ರಚಿಸುವಲ್ಲಿ ಅಧಿಕಾರದ ದಾಹದಿಂದ ಬಿಜೆಪಿ ವಿಫಲವಾಯಿತೆಂಬ ಆರೋಪದಿಂದ ಮುಕ್ತಿ ಪಡೆಯುವದು ಮತ್ತೊಂದು ವಿಚಾರ.
ಹೊಸ ಸರಕಾರದ ನೇತೃತ್ವವನ್ನು ಶಿವಸೇನೆಯ ಬಣಕ್ಕೆ ಒಪ್ಪಿಸಿ ತಾವು ಶಿವಸೇನಾ -ಬಿಜೆಪಿ ಮೈತ್ರಿಯನ್ನು ಮರಳಿ ಸ್ಥಾಪಿಸಿರುವು ದಾಗಿ ಬಿಜೆಪಿ ಪದೇ ಪದೇ ಹೇಳಿಕೊಂಡಿದೆ. ತಾವು ಬಾಳಾಸಾಹೇಬ್ ಠಾಕ್ರೆಗೆ ಸಲ್ಲಿಸಿದ ಗೌರವ ಅದೆಂದು ಹೇಳಿದೆ. ಬಾಳಾ ಸಾಹೇಬ್ ನಡೆದ ಮಾರ್ಗದಲ್ಲಿ ವಿಚಲಿತನಾಗದೇ ನಡೆಯುವುದಾಗಿ ಮುಖ್ಯಮಂತ್ರಿ ಶಿಂಧೆ ವಿಶ್ವಾಸ ಮತ ಯಾಚನೆಯ ಸಮಯದಲ್ಲಿ ಹೇಳಿದ್ದಾರೆ.
ಶಿವಸೇನಾ ನೀತಿಗೆ ಬದ್ಧರಿರುವುದಾಗಿ ಘೋಷಣೆ ಮಾಡಿದ್ದಾರೆ. ಏಕನಾಥ್ ಶಿಂಧೆಯವರ ಜತೆ ಶಿವಸೇನೆಯ ಹೆಚ್ಚು ಶಾಸಕರು ನಿಂತಿದ್ದಾರೆ. ಸ್ಪೀಕರ್ ನಾರ್ವೇಕರ್ ಶಿವಸೇನಾ ಶಾಸಕಾಂಗ ಪಕ್ಷದ ಮುಖಂಡ ಸ್ಥಾನದಿಂದ ಅಜಯ್ ಚೌಧರಿ ಅವರನ್ನು ಕಿತ್ತೆಸೆದು ಶಿಂಧೆ ಅವರನ್ನು ಮುಖಂಡನೆಂದು ನಿಯುಕ್ತಿಗೊಳಿಸಿದ್ದಾರೆ.
ಅಲ್ಲದೆ ಮುಖ್ಯ ವಿಪ್ ಸ್ಥಾನಕ್ಕೆ ಸುನಿಲ್ ಪ್ರಭು ಅವರನ್ನು ಅಮಾನ್ಯ ಮಾಡಿ ಶಿಂಧೆ ಗುಂಪಿನ ಭರತ್ ಗೊ ಗೋವಾಲೆ ಮುಖ್ಯ ವಿಪ್ಎಂದು ಗುರುತಿಸಿzರೆ. ಸರಕಾರದ ಪರವಾಗಿ ಜಾರಿ ಮಾಡಿದ್ದ ವಿಪ್ ಉಲ್ಲಂಘನೆಯ ಕಾರಣದಿಂದ ಆದಿತ್ಯ ಠಾಕ್ರೆ ಸೇರಿದಂತೆ ವಿಪ್ ವಿರುದ್ಧ ಮತ ಚಲಾಯಿಸಿದವರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಸಲ್ಲಿಸಲಾಗಿದೆ. ಅತ್ತ ಶಿಂಧೆ ಬಣದ ಶಾಸಕ ರನ್ನು ಪಕ್ಷಾಂತರ ಕಾಯ್ದೆ ಅನ್ವಯ ಅನರ್ಹಗೊಳಿಸುವ ವಿನಂತಿಗೆ ಸುಪ್ರೀಂ ಕೋರ್ಟ್ ಸೊಪ್ಪು ಹಾಕಿಲ್ಲ.
ಒಟ್ಟಾರೆ, ಶಿವಸೇನೆಯಲ್ಲಿ ಬಿಟ್ಟ ಬಿರುಕು ಪಕ್ಷದ ಬೇರನ್ನೇ ಅಡಿಸಿದೆ. ಯಾವುದು ನಿಜವಾದ ಶಿವಸೇನಾ ಎಂಬ ಗೊಂದಲದ ಸ್ಥಿತಿ ಬಂದಿದೆ. ಶಿವಸೇನಾ ಮತ್ತು ಬಿಜೆಪಿ ಸೈದ್ಧಾಂತಿಕವಾಗಿ ಹಿಂದುತ್ವ ಪರ ಪಕ್ಷಗಳಾಗಿದ್ದು ಕಳೆದ ಚುನಾವಣೆಯ ನಂತರ ಸಿದ್ಧಾಂತ ಮರೆತು ಉಳಿದ ಪಕ್ಷಗಳೊಂದಿಗೆ ಸೇರಿ ಸರಕಾರ ಮಾಡಿದ್ದೇ ಎಲ್ಲಸಮಸ್ಯೆ ಗಳಿಗೆ ಮೂಲಭೂತ ಕಾರಣವೆಂದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ಅದರಿಂದ ಶಿವಸೇ ನೆಯು ತನ್ನನ್ನು ತಾನೇ ಮರೆತುಹೋದ ಸ್ಥಿತಿ ನಿರ್ಮಾಣವಾಗಿತ್ತೆಂದು ಅವರ ಅಭಿಪ್ರಾಯ. ಭದ್ರವಾದ ಬುನಾದಿ ಇರುವ ಶಿವಸೇನೆಯ ದೀವಟಿಗೆಯನ್ನು ಹಿಡಿದು ಮುಂದೆ ನಡೆಸುವವರು ಯಾರು ಎಂಬ ಪ್ರಶ್ನೆ ಶಿವಸೇನೆಯ ಪದಾಧಿ ಕಾರಿಗಳನ್ನು, ಕಾರ್ಯಕರ್ತರನ್ನು ಅಲ್ಲದೆ ಶಿವಸೇನೆಯ ಬಹುದೊಡ್ಡ ಬೆಂಬಲಿತ ಸಮುದಾಯವನ್ನು ಕಾಡಿದೆ. ಶಿವಸೇನೆಯ ಹುಲಿ ಗುಹೆ ಕಚೇರಿಗಳ ಮತ್ತು ಬಿಲ್ಲು ಬಾಣದ ಒಡೆಯರು ಇನ್ನು ಯಾರು ಎಂಬ ಸಂದಿಗ್ಧ ಎದುರಾಗಿದೆ.
ಶಿವಸೇನೆಯ ನಿಜವಾದ ವಾರಸುದಾರ ಯಾರು ಅನ್ನುವ ಕುರಿತು ರಾಜಕೀಯವಾಗಿ, ಸಾಮಾಜಿಕವಾಗಿ, ಕಾನೂನಾತ್ಮಕವಾಗಿ ಹೋರಾಡುವ ಸಂದರ್ಭ ಬಂದಿದೆ. ಈ ಕುರಿತು ನಿರ್ಣಯ ನೀಡುವುದು ಭವಿಷ್ಯವೇ. ತೀರ್ಮಾನ ಏನೇ ಬರಬಹುದು. ಮತ್ತೆ ಶಿವಸೇನೆ ಕಾಲಾಂತರದಲ್ಲಿ ಗತವೈ ಭವವನ್ನು ಮತ್ತೆ ಪಡೆಯಲೂಬಹುದು, ರಾಜಕೀಯದಲ್ಲಿ ಯಾವುದನ್ನೂ ಅಲ್ಲಗಳೆಯುವಂತಿಲ್ಲ. ಅಂದಂತೆ ಸದ್ಯದ ಸ್ಥಿತಿ ಕ್ಲಿಷ್ಟವಾಗಿದೆ. ಬಾಳಾ ಸಾಹೇಬ್ ಸಂಸ್ಥಾಪಿತ ಸೇನೆಯಲ್ಲಿ ಎಂದಿಲ್ಲದ ಗೊಂದಲ ಮೂಡಿದೆ. ಸದ್ಯಕ್ಕಂತೂ ಘರ್ಜಿಸುವ ಹುಲಿ ತಬ್ಬಲಿಯಾದ ಸನ್ನಿವೇಶ ಎದುರಾಗಿದೆ.
