ಪ್ರಭುತ್ವದ ಪತನಕ್ಕೆ ಹಸಿವೆಯೇ ಕಾರಣ
ಸಂಪ್ರತ
ವಿಜಯ್‌ ದರಡಾ
ರಷ್ಯಾದಲ್ಲಿ ಮಹಾನ್ ನಾಯಕರ ಪ್ರತಿಮೆಗಳನ್ನು ಉರುಳಿಸಿದ ಪ್ರಸಂಗಗಳನ್ನು ನಾವು ಕಂಡಿದ್ದೇವೆ. ಇರಾಕಿನಲ್ಲಿ ಸದ್ದಾಮ್ ಹುಸೇನನ ಆಳೆತ್ತರದ ಪ್ರತಿಮೆಗಳನ್ನು ಕಿತ್ತೊಗೆದದ್ದನ್ನೂ ನೋಡಿದ್ದೇವೆ. ಆದರೆ ಶ್ರೀಲಂಕಾದಲ್ಲಿ ಆದ ಸಂಘರ್ಷದಂತಹ ಇನ್ನೊಂದು ಪ್ರಕರಣವನ್ನು ಎಲ್ಲೂ ಕಂಡಿಲ್ಲ.
ಜನರಿಂದ ಬಹುಮತ ಪಡೆದು ಚುನಾಯಿತವಾದ ಪ್ರಜಾಪ್ರಭುತ್ವ ಸರಕಾರದ ಮುಖ್ಯಸ್ಥನೊಬ್ಬ ನಿರಂಕುಶಮತಿಯಾದಾಗ, ಕುತ್ತಿಗೆ ತನಕ ಭ್ರಷ್ಟಾಚಾರದಲ್ಲಿ ಮುಳುಗಿದಾಗ, ಯುವಕರನ್ನು ವಂಚಿಸಿದಾಗ, ತನ್ನನ್ನು ಚುನಾಯಿಸಿದ ಮತದಾರರನ್ನು ವಂಚಿಸಿ ಅವರು ಹಸಿವಿನಿಂದ ತತ್ತರಿಸುವಂತೆ ಮಾಡಿದಾಗ, ಜನರು ರೊಚ್ಚಿಗೇಳದೇ ಇನ್ನೇನನ್ನು ತಾನೆ ಮಾಡಲು ಸಾಧ್ಯ? ಈಗ ಶ್ರೀಲಂಕಾ ದಲ್ಲಿ ನಡೆಯುತ್ತಿರುವುದು ಕೂಡ ಇದೇ.
ಅಲ್ಲಿ ರಾಜಕೀಯ ಮೇಲಾಟವಿಲ್ಲ, ಜನಾಂಗೀಯ ವೈರುಧ್ಯವೂ ಇಲ್ಲ, ಹಸಿವಿನಿಂತ ತತ್ತರಿಸಿ ಹೋಗಿರುವ ಜನರ ಆಕ್ರೋಶ ಅಸಹನೆ ಕಟ್ಟೆಯೊಡೆದು ಮುಗಿಲು ಮುಟ್ಟಿದೆಯಷ್ಟೇ. ಮಹಾನ್ ನಾಯಕರೆಂದು ಹೇಳಲಾಗಿದ್ದ ವ್ಯಕ್ತಿಗಳ ಪ್ರತಿಮೆಗಳನ್ನು ರಷ್ಯಾದಲ್ಲಿ ಉರುಳಿಸಿದ ಪ್ರಸಂಗಗಳನ್ನು ನಾವು ಕಂಡಿದ್ದೇವೆ. ಇರಾಕಿನಲ್ಲಿ ಸದ್ದಾಮ್ ಹುಸೇನನ ಆಳೆತ್ತರದ ಪ್ರತಿಮೆಗಳನ್ನು ಕಿತ್ತೊಗೆದು ತುಳಿದು ತೊಪ್ಪಡಿ ಮಾಡಿದ್ದನ್ನೂ ನೋಡಿದ್ದೇವೆ. ಆದರೆ ಶ್ರೀಲಂಕಾದಲ್ಲಿ ಆದ ಸಂಘರ್ಷದಂತಹ ಇನ್ನೊಂದು ಪ್ರಕರಣವನ್ನು ಇದುವರೆಗೆ ಎಲ್ಲೂ ನಾವು ಕಂಡಿಲ್ಲ, ಕೇಳಿಲ್ಲ.
ಈ ಎಲ್ಲ ಅವ್ಯವಸ್ಥೆಗೆ ಮೂಲ ಕಾರಣ ರಾಜಪಕ್ಸ ಕುಟುಂಬ. ಅವರು ಲಂಕಾವನ್ನು ಲೂಟಿಹೊಡೆದು, ಹಾಳುಗೆಡವಿ ದಿವಾಳಿ ಎಬ್ಬಿಸಿದ್ದಾರೆ. ಶ್ರೀಲಂಕಾದಲ್ಲಿ ಜನಸಾಮಾನ್ಯರಿಗೆ ಒಂದು ಹನಿ ಪೆಟ್ರೋಲು ಸಿಗುವುದು ಕೂಡ ದುರ್ಭರವಾಗಿದ್ದ ದಿನಗಳಲ್ಲಿ ಒಂದು ಲೀಟರು ಪೆಟ್ರೋಲಿಗೆ ನಾಲ್ಕು ಕಿಲೋಮೀಟರು ಮಾತ್ರ ಚಲಿಸುವ ದುಬಾರಿ ಕಾರುಗಳಲ್ಲಿ ಆ ಕುಟುಂಬದ ಮಕ್ಕಳು ಓಡಾಡಿದ್ದಾರೆ. ಜನರು ಕುಡಿಯುವ ನೀರಿಗೆ ತತ್ತರಿಸುತ್ತಿದ್ದಾಗ, ಈ ಕುಟುಂಬದವರು ದುಬಾರಿ ವಿದೇಶಿ ಮದ್ಯ ಗುಟುಕರಿಸುತ್ತ ಆನಂದಿಸಿದ್ದಾರೆ. ಹೊಟ್ಟೆಗೆ ಹಿಟ್ಟಿಲ್ಲದೇ ಜನರು ಹಸಿದು ಸಾಯುತ್ತಿದ್ದಾಗ ಈ ಕುಟುಂಬದ ಮಂದಿ ಔತಣಕೂಟಗಳನ್ನು ಮಾಡಿ ಮಜಾ ಅನುಭವಿಸಿದ್ದಾರೆ.
ಯಾವತ್ತೂ ಪ್ರಭುತ್ವದ ವಿರುದ್ಧ ಆಕ್ರೋಶಗೊಳ್ಳದ ಬೌದ್ಧ ಸನ್ಯಾಸಿಗಳು ಕೂಡ ತಮ್ಮ ತಾಳ್ಮೆಯ ಪರದೆಯನ್ನು ಕಿತ್ತೊಗೆದು ಜನಸಾಮಾನ್ಯರ ಜತೆ ಸೇರಿ ಪ್ರಭುತ್ವದ ವಿರುದ್ಧ ಉಗ್ರ ಹೋರಾಟಕ್ಕಿಳಿದಿದ್ದಾರೆ. ರಾಜಪಕ್ಸ ಕುಟುಂಬ ಲಂಕಾವನ್ನು ಲೂಟಿ ಮಾಡಿದ ಪರಿಯನ್ನು ಗಮನಿಸಿದಾಗ ಅಚ್ಚರಿಯಾಗುತ್ತದೆ.2005ರಿಂದ2015ರ ತನಕ ಅಧ್ಯಕ್ಷನಾಗಿದ್ದ ಮಹೇಂದ್ರ ರಾಜಪಕ್ಸತನ್ನ ಅಧಿಕಾರಾವಧಿಯಲ್ಲಿ18ಬಿಲಿಯನ್ ಡಾಲರ್ ಮೊತ್ತದ ಹಣವನ್ನು ವಿದೇಶಿ ತಾಣಗಳಲ್ಲಿ ಕೂಡಿಟ್ಟಿದ್ದಾನೆಂಬಸುದ್ದಿ ವ್ಯಾಪಕವಾಗಿತ್ತು.
ಅದೇ ಕಾರಣಕ್ಕಾಗಿ ಆತ ಅಧಿಕಾರದಿಂದ ಕೆಳಗಿಳಿಯಬೇಕಾಗಿ ಬಂತು. ಸಾಗರೋಪಾದಿಯಲ್ಲಿ ಅಧ್ಯಕ್ಷರ ಐಷಾರಾಮಿ ಬಂಗಲೆ ಯೊಳಕ್ಕೆ ನುಗ್ಗಿದ ಜನಸಾಗರದ ಆಕ್ರೋಶಕ್ಕೆ ಮಣಿದು ಮಹೀಂದ್ರ ರಾಜಪಕ್ಸನ ತಮ್ಮ ಗೋಟಬಯ ರಾಜಪಕ್ಸ ಪಲಾಯನಗೈದು ರಾಜೀನಾಮೆಯ ನಿರ್ಧಾರಕ್ಕೆ ಬಂದಿದ್ದಾನೆ. ಗೋಟಬಯ ಕೈಗೆ ಸಿಕ್ಕಿದ್ದರೆ ಅದನ್ನು ಜನಸಮೂಹ ಖಂಡಿತ ತರಿದು ಹತ್ಯೆ ಮಾಡುತ್ತಿತ್ತು. ಜನರ ಅಸಹನೆ ಮತ್ತು ಆಕ್ರೋಶ ಆ ಪರಿಯದ್ದಾಗಿತ್ತು.
ಗೋಟಬಯ2015ರಲ್ಲಿ ದೇಶದ ರಕ್ಷಣಾ ಕಾರ್ಯದರ್ಶಿಯಾಗಿದ್ದಾಗ ಮಿಲಿಟರಿಶಸ್ತಾಸ್ತ್ರಖರೀದಿಗೆ ಸಂಬಂಧಪಟ್ಟ10ಮಿಲಿಯನ್ ಡಾಲರ್ ಮೊತ್ತದ ಭ್ರಷ್ಟಾಚಾರ ಹಗರಣವೊಂದು ಆತನನ್ನು ಸುತ್ತಿಕೊಂಡಿತ್ತು. ಮಹೀಂದ್ರ ರಾಜಪಕ್ಸನ ಕಿರಿಯ ಸೋದರ ಬಾಸಿಲ್ ರಾಜಪಕ್ಸ ಹಣಕಾಸು ಸಚಿವನಾಗಿ ಹಲವಾರು ಗಂಭೀರ ಹಣ ದುರುಪಯೋಗ ಪ್ರಕರಣಗಳಲ್ಲಿ ಸಿಲುಕಿ ಕೊಂಡಿದ್ದ. ಭ್ರಷ್ಟತೆಯಲ್ಲಿ ಸಿಲುಕಿದ್ದ ಕಾರಣದಿಂದ ಆತನನ್ನು ಎಲ್ಲರೂ ಶೇ.೧೦ ಮಂತ್ರಿ ಎಂದು ಮೂದಲಿಸುವಂತಾಗಿತ್ತು.
ಬಾಸಿಲ್ ರಾಜಪಕ್ಸಗೆ ಸೇರಿದ ಹದಿನಾರು ಎಕರೆ ವಿಸ್ತೀರ್ಣದ ಐಷಾರಾಮಿವಿವನ್ನುಹರಾಜು ಮಾಡುವಂತೆ೨೦೧೬ರಲ್ಲಿ ಶ್ರೀಲಂಕಾದ ಕೋರ್ಟು ಆದೇಶ ಕೊಟ್ಟಿತ್ತು. ತಮಿಳು ವಿಚಾರದಲ್ಲಿ ಲಂಕಾ ಬೆಂಕಿಯಂತೆ ಧಗಧಗಿಸುತ್ತಿದ್ದಾಗಲೂ ಪ್ರಭುತ್ವದ ಆಯಕಟ್ಟಿನ ಜಾಗದಲ್ಲಿದ್ದ ಈ ಕುಟುಂಬ ಎಗ್ಗುಸಿಗ್ಗಿಲ್ಲದೇ ದುಡ್ಡು ಮಾಡುತ್ತಿತ್ತು ಮತ್ತು ಐಷಾರಾಮಿ ಬದುಕನ್ನು  ಅನುಭವಿಸುತ್ತಲೇ ಇತ್ತು.
ಚೀನಾದಿಂದ ಸಾಲಕೊಳ್ಳುವುದು ಬೇಡ ಎಂದು ಆರ್ಥಿಕ ತಜ್ಞರು ಆಗಿಂದಾಗ್ಯೆ ಎಚ್ಚರಿಕೆಗಳನ್ನು ಕೊಟ್ಟಿದ್ದಾಗ್ಯೂ, ಅದೆಲ್ಲವನ್ನೂ ತಿರಸ್ಕರಿಸಿ ರಾಜಪಕ್ಸ ಕುಟುಂಬ ಚೀನಾದ ಮುಂದೆ ಮಂಡಿಯೂರಿತ್ತು. ಚೀನಾದೊಂದಿಗಿನ ಆರ್ಥಿಕ ಒಡಂಬಡಿಕೆಯಿಂದ ರಾಜಪಕ್ಸ ಕುಟುಂಬ ವೈಯಕ್ತಿಕವಾಗಿ ದೊಡ್ಡ ಲಾಭ ಮಾಡಿಕೊಂಡಿದೆ ಎಂಬ ಆರೋಪವೂ ಇದೆ. ಇದೀಗ ಅಂತಿಮವಾಗಿ ಶ್ರೀಲಂಕಾ ದಿವಾಳಿಯಾಗಿದೆ. ಸುದ್ದಿ ನಿರೀಕ್ಷಿಸಿ ದ್ದಂತೆ ಮುನ್ನೆಲೆಗೆ ಬಂದಿದೆ. ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ಕೂಡ ರಾಜೀನಾಮೆ ಕೊಟ್ಟಿದ್ದಾರೆ.
ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಪಾಕಿಸ್ತಾನ ಕೂಡ ಇದೇ ಹಾದಿಯಲ್ಲಿದೆ, ಅದು ದಿವಾಳಿತನದ ಅಂಚಿನಲ್ಲಿದೆ.ಶ್ರೀಲಂಕಾದಲ್ಲಿ ಏನಾಗಿದೆಯೋ ಅದು ಪಾಕಿಸ್ತಾನದಲ್ಲಿ ಘಟಿಸಿದರೂ ಅಚ್ಚರಿಯೇನಿಲ್ಲ.
ಇನ್ನೊಂದು ಬೆಳವಣಿಗೆ:ಇತ್ತ ಒಬ್ಬ ಸ್ನೇಹಿತನನ್ನು ಕಳೆದುಕೊಂಡ ನೋವು ನನ್ನ ಹೃದಯ ಆರ್ದ್ರವಾಗಿದೆ. ಜಪಾನಿನ ಪೂರ್ವಪ್ರಧಾನಿ ಶಿಂಜೋ ಅಬೆ ಹತ್ಯೆಯಾಗಿರುವ ಸುದ್ದಿ ಕೇಳಿ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಶಿಂಜೋ ಅಬೆಯಂತಹ ವ್ಯಕ್ತಿಯನ್ನು ಹತ್ಯೆಗೈಯ್ಯಬೇಕಾದರೆ ಅದೆಂತಹ ಕೌರ್ಯ ಮತ್ತು ಹಗೆತನ ಆ ಕಿಡಿಗೇಡಿಗಳ ಮನಸ್ಸಿನಲ್ಲಿದ್ದಿರಬಹುದು ಎಂಬ ಪ್ರಶ್ನೆ ಮನದಳುತ್ತದೆ. ಜಪಾನಿನಂತಹ ಶಾಂತಿಪ್ರಿಯ ದೇಶದಲ್ಲಿ ಇಂಥದ್ದೊಂದು ಘಟನೆ ಎಂದೂ ನಡೆದೇ ಇರಲಿಲ್ಲ. ಈಹತ್ಯೆಗೆ ಕಾರಣವೇನು ಎಂಬುದು ತನಿಖೆಯಿಂದ ಇನ್ನಷ್ಟೇ ರುಜುವಾತಾಗಬೇಕಿದೆ.
ನಿರಂಕುಶವಾದಿ ಪಡೆಗಳ ವಿರುದ್ಧ ಶಿಂಜೋ ಅಬೆ ಹೊಂದಿದ್ದ ಧೋರಣೆಯೇ ಈ ಹತ್ಯೆಗೆ ಕಾರಣವಾಗಿರ ಬಹುದೇನೋ ಎಂಬ ಊಹೆ ಎಲ್ಲರ ಮನದಲ್ಲಿದೆ. ಶಿಂಜೋ ಅಬೆಯ ಸಾವಿನಿಂದಾಗಿ ಭಾರತ ಒಬ್ಬ ವಿಶೇಷವಾದ ಮಿತ್ರ ಮತ್ತು ಹಿತಚಿಂತಕನನ್ನು ಕಳೆದು ಕೊಂಡಂತಾಗಿದೆ. ವೈಯಕ್ತಿಕವಾಗಿ ನನಗೂ ಇದು ತುಂಬಾ ನೋವಿನ ಸಂಗತಿ.
ನಾನು ಅವರೊಂದಿಗೆ ಕಳೆದ ಕ್ಷಣಗಳು ನೆನಪಿಗೆ ಬರುತ್ತಿವೆ. ಒಬ್ಬ ಆತ್ಮೀಯ ಮಿತ್ರನನ್ನು ಕಳೆದುಕೊಂಡ ನೋವು ಮನವನ್ನಾ ವರಿಸಿಕೊಂಡಿದೆ. ಜಪಾನಿನಲ್ಲಿ ಇಂಡಿಯಾ -ಂಡೇಶನ್ನಿನ ವೈಭವ ಕಾಂತ ಉಪಾಧ್ಯಾಯರು ಮೊದಲಿಗೆ ನನ್ನನ್ನು ಅವರಿಗೆ ಪರಿಚಯಿಸಿದಾಗ ಸಿಕ್ಕ ಸ್ವಾಗತ ಮತ್ತು ಮಿತ್ರತ್ವದ ಭಾವ ಮರೆಯಲಾಗದು. ಇಂಡೋ- ಜಪಾನ್ ಮಿತ್ರತ್ವದ ಪರವಾಗಿದ್ದವನು ನಾನು. ಅವರೊಂದಿಗಿದ್ದ ಕೆಲವೇ ಕ್ಷಣಗಳಲ್ಲಿ ನಮ್ಮೊಳಗೆ ಮಿತ್ರತ್ವದ ಭಾವ ಅರಿವಿಲ್ಲದೇ ಆವಿರ್ಭವಿಸಿದ್ದು ಅಪರೂಪದ ಸಂಗತಿ. ೨೦೦೬ರಲ್ಲಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದ ಔತಣಕೂಟಕ್ಕೆ ನನ್ನನ್ನು ಆಹ್ವಾನಿಸಿದ್ದರು ಕೂಡ.
ನನ್ನೊಂದಿಗೆ ಮಾತನಾಡಿದಾಗಲೆಲ್ಲ ಅವರು ಭಾರತದ ರಾಜಕೀಯ ಮತ್ತು ಮಾಧ್ಯಮ ಕ್ಷೇತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಉತ್ಸುಕತೆ ತೋರಿದ್ದರು. ಅಣುಶಕ್ತಿ ಪರೀಕ್ಷೆಯ ನಂತರದಲ್ಲಿ ಭಾರತದ ಮೇಲೆ ವಿಶ್ವಸಮುದಾಯ ಹೇರಿದ್ದ ನಿಷೇಧ ಮತ್ತು ನಿರ್ಬಂಧಗಳ ನೆನಪು ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ. ಆಗ ಅಟಲಜೀಯವರ ನಿರ್ದೇಶನದಂತೆ ಭಾರತದಿಂದ ಒಂದುನಿಯೋಗ ಜಪಾನಿಗೆ ತೆರಳಿತ್ತು. ಅದರಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದೆ. ಭಾರತ ಯಾಕೆ ಶಾಂತಿಯುತ ಅಣುಶಕ್ತಿ ರಾಷ್ಟವಾಗಿ ಹೊರಹೊಮ್ಮುವ ಅಪೇಕ್ಷೆ ಹೊಂದಿದೆ ಎಂಬುದನ್ನು ಅಲ್ಲಿನ ಯುವ ಸಂಸದರಿಗೆ ಮನದಟ್ಟು ಮಾಡುವ ಕೆಲಸವನ್ನು ನಾವು ಮಾಡಬೇಕಿತ್ತು.
ನಮ್ಮ ಭೇಟಿ ಇಂಡೋ ಜಪಾನ್ ಸಂಬಂಧಗಳನ್ನು ಗಟ್ಟಿಗೊಳಿಸುವ ಭೂಮಿಕೆಯಲ್ಲಿ ಕೆಲಸ ಮಾಡಿದೆ ಎಂಬ ಹೆಮ್ಮೆಯೂನನಗಿದೆ. ಶಿಂಜೋ ಅಬೆ ಜಪಾನಿನ ಪ್ರಧಾನಮಂತ್ರಿಯಾಗಿ ಭಾರತಕ್ಕೆ ಭೇಟಿ ಕೊಟ್ಟಾಗ ಇಂಡಿಯಾ ಫೌಂಡೇಶನ್ ವತಿಯಿಂದ ಒಂದು ಕಾರ್ಯಕ್ರಮ ಆಯೋಜನೆಯಾಗಿತ್ತು. ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಜಾರ್ಜ್ ಫೆರ್ನಾಂಡಿಸ್, ವಸುಂಧರಾ ರಾಜೇ, ಸೀತಾರಾಮ ಯೆಚೂರಿ ಮತ್ತು ನಾನು ವೇದಿಕೆಯ ಮೇಲೆ ಉಪಸ್ಥಿತರಿದ್ದೆವು.
ನಾವು ಶಿಂಜೋ ಅವರನ್ನು ಭೇಟಿಯಾದಾಗಲೆಲ್ಲ, ಭಾರತ-ಜಪಾನ್ ಸಂಬಅಧಗಳನ್ನು ಗಟ್ಟಿಗೊಳಿಸುವ ಕುರಿತಾಗಿ ಉತ್ಸಾಹ ಮತ್ತು ಉತ್ಸುಕತೆ ತೋರಿದ್ದ ಅವರ ವೈಯಕ್ತಿಕ ನಡೆ ನಿಜಕ್ಕೂ ಮೆಚ್ಚುವಂಥಾದ್ದು. ಅವರ ಅಗಲುವಿಕೆ ಭಾರತಕ್ಕಾದ ದೊಡ್ಡ ನಷ್ಟ.