ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಷ್ಟ್ರಾಧ್ಯಕ್ಷರು
ವಿಶ್ಲೇಷಣೆ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ರಾಷ್ಟ್ರದ ಪ್ರಮುಖರಾಗಿದ್ದು ನಾಮಮಾತ್ರ ಅಧಿಕಾರ ಹೊಂದಿರುತ್ತಾರೆ. ಇವರು ಸರಕಾರಕ್ಕೆ ಸಲಹೆ ನೀಡುವ, ಮಾಹಿತಿ ಪಡೆಯುವ, ಸಂಸತ್ತಿಗೆ ಸಂದೇಶಗಳನ್ನು ಕಳುಹಿಸುವ ಕಾರ್ಯ ನಿರ್ವಹಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ತೀಕ್ಷ್ಣ ವಿಷಯಗಳ ಬಗ್ಗೆ ಅವರು ಕೂಲಂಕುಶವಾದ ವಿವೇಚನೆಯನ್ನು ಉಪಯೋಗಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ.
ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಚುನಾವಣೆ ಜುಲೈ 18 ರಂದು ನಡೆಯಲಿದೆ. ದೇಶದ 15ನೇ ರಾಷ್ಟ್ರಪತಿ ಜುಲೈ 25ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾರತದ ಅಧ್ಯಕ್ಷರು ಅಥವಾ ರಾಷ್ಟ್ರಪತಿಗಳು ಸಾಂವಿಧಾನಿಕ ವಾಗಿ ಭಾರತ ಗಣರಾಜ್ಯದ ಪ್ರಥಮ ಪ್ರಜೆ ಮತ್ತು ಭಾರತೀಯ ಸೈನ್ಯದ ದಂಡ ನಾಯಕ ರಾಗಿರುತ್ತಾರೆ.
ಭಾರತ ಸಂವಿಧಾನದ 53ನೇ ಪರಿಚ್ಛೇದದ ಪ್ರಕಾರ ಕಾರ್ಯಾಂಗೀಯ ಅಧಿಕಾರವು ರಾಷ್ಟ್ರಪತಿಗಳ ಹೆಸರಿನಲ್ಲಿದ್ದು ಪ್ರಧಾನ ಮಂತ್ರಿ ಮತ್ತು ಅವರ ಮಂತ್ರಿ ಮಂಡಲದ ಮೂಲಕ ಚಲಾಯಿಸುತ್ತಾರೆ. ರಾಷ್ಟ್ರಪತಿಗಳು ತಮ್ಮ ಕಾರ್ಯಗಳನ್ನು ನಿರ್ವಹಿಸು ವಾಗ ಮಂತ್ರಿ ಮಂಡಲದ ಸಲಹೆಗನುಸಾರವಾಗಿ ಕಾರ್ಯ ನಿರ್ವಹಿಸುತ್ತಾರೆ. ಭಾರತದ ರಾಷ್ಟ್ರಪತಿಗಳು ರಾಷ್ಟ್ರದ ಪ್ರಮುಖ ರಾಗಿದ್ದು ನಾಮಮಾತ್ರ ಅಧಿಕಾರ ಹೊಂದಿರುತ್ತಾರೆ. ಇವರು ಸರಕಾರಕ್ಕೆ ಸಲಹೆ ನೀಡುವ, ಮಾಹಿತಿ ಪಡೆಯುವ, ಸಂಸತ್ತಿಗೆ ಸಂದೇಶಗಳನ್ನು ಕಳುಹಿಸುವ ಕಾರ್ಯ ನಿರ್ವಹಿಸುತ್ತಾರೆ.
ಕೆಲವು ಸಂದರ್ಭಗಳಲ್ಲಿ ತೀಕ್ಷ್ಣ ವಿಷಯಗಳ ಬಗ್ಗೆ ಅವರು ಕೂಲಂಕುಶವಾದ ವಿವೇಚನೆಯನ್ನು ಉಪಯೋಗಿಸಿ ಕಾರ್ಯನಿರ್ವಹಿಸ ಬೇಕಾಗುತ್ತದೆ. ಉದಾ: ಪ್ರಧಾನ ಮಂತ್ರಿಗಳ ಆಯ್ಕೆ, ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆ ಯದಿದ್ದಾಗ ಲೋಕಸಭೆಯನ್ನು ವಿಸರ್ಜಿಸುವ ವೇಳೆ ಎಚ್ಚರಿಕೆಯ, ಹುಷಾರಿನ ಮತ್ತು ದೂರದರ್ಶಿತ್ವದ ನಿರ್ಣಯವನ್ನು ಕೈಗೊಳ್ಳಬೇಕಾಗುತ್ತದೆ.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಮೂರು ಕಂಬಗಳ ಮೇಲೆ ನಿಂತಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ಈ ಮೂರೂ ಅಂಗಗಳ ಪ್ರಮುಖರು. ಆದರೆ ಅಪರಿಮಿತ ನಿರಂಕುಶ ಅಧಿಕಾರಗಳಿಲ್ಲ. ಯಾವುದೇ ವ್ಯಕ್ತಿ ತನ್ನ ಅಧಿಕಾರದ ಸೀಮೆಯನ್ನು ಉಲ್ಲಂಸಿದರೆ ಅಥವಾ ಸಂವಿಧಾನದ ತತ್ವಗಳ ಅವಹೇಳನ ಮಾಡಿದರೆ ರಾಷ್ಟ್ರಪತಿಯವರುಬಹಿರಂಗವಾಗಿ ಇಲ್ಲವೇ ಖಾಸಗಿಯಾಗಿ ಸಲಹೆ ಹಾಗೂ ಸದುಪದೇಶಗಳನ್ನು ಕೊಡಬಹುದು. ಸಂವಿಧಾನದ ಬಗ್ಗೆ ಆಳವಾದ ಅಧ್ಯಯನ ಮಾಡಿದವರು ಯಾವುದೇ ಅಂಜಿಕೆ, ಪಕ್ಷಪಾತವಿಲ್ಲದೆ, ಶಾಸಕಾಂಗ ವ್ಯವಸ್ಥೆಯಲ್ಲಿ ವ್ಯಾಪಕ ಅನುಭವ ಪಡೆದು ಕೀರ್ತಿ ಗಳಿಸಿದವರು ಈ ಸ್ಥಾನವನ್ನು ಅಲಂಕರಿಸಲು ಅರ್ಹರು.
ಸಾಮಾನ್ಯವಾಗಿ ರಾಷ್ಟ್ರಪತಿಯವರು ತಾವು ಅಧಿಕಾರ ವಹಿಸಿದ ದಿನದಿಂದ 5 ವರ್ಷಗಳ ಅವಧಿಗೆ ಅಧಿಕಾರದಲ್ಲಿರುತ್ತಾರೆ. ರಾಷ್ಟ್ರಪತಿಗಳ ಅಧಿಕಾರವನ್ನು ಈ ರೀತಿ ಚರ್ಚಿಸಬಹುದು. ಕಾರ್ಯಾಂಗದ ಅಧಿಕಾರಗಳು ಶಾಸನಾಧಿಕಾರ, ಸೈನಿಕ ಅಧಿಕಾರಿ ಗಳು, ರಾಜತಾಂತ್ರಿಕ ಅಧಿಕಾರಗಳು ಸುಗ್ರೀವಾಜ್ಞೆಯ ಅಧಿಕಾರ, ತುರ್ತು ಪರಿಸ್ಥಿತಿಯ ಅಧಿಕಾರ.
ಪ್ರಧಾನ ಮಂತ್ರಿಯವರ ನೇಮಕವನ್ನು ರಾಷ್ಟ್ರಪತಿ ಯವರು ಮಾಡತಕ್ಕದ್ದು. ಇತರ ಮಂತ್ರಿಗಳ ನೇಮಕವನ್ನ ಪ್ರಧಾನ ಮಂತ್ರಿಯ ಸಲಹೆಯಂತೆ ಮಾಡತಕ್ಕದ್ದು. ಸಾಂವಿಧಾನಿಕ ಸಭೆಯ ಅಧ್ಯಕ್ಷರಾದ ಡಾ| ರಾಜೇಂದ್ರ ಪ್ರಸಾದ್‌ರವರು ಹೇಳಿದಂತೆ ಭಾರತದ ಪ್ರಧಾನಿಯನ್ನು ಇಂಗ್ಲೆಂಡ್‌ನ ರಾಜನಿಗೆ ಹೋಲಿಸಬಹುದು. ಅಲ್ಲಿ ಯಾವ ರೀತಿ ರಾಜನು ಮಂತ್ರಿ ಮಂಡಲದ ಸಲಹೆಗಳಿಗೆ ಬದ್ಧನಾಗಿರುವನೋ ಅದೇ ರೀತಿ ಭಾರತದಲ್ಲಿ ರಾಷ್ಟ್ರಪತಿಯವರು ಮಂತ್ರಿ ಮಂಡಲದ ಸಲಹೆಗೆ ಬದ್ಧರಾಗಿರುತ್ತಾರೆ ಎಂಬ ಮಾತು ಅರ್ಥಪೂರ್ಣವಾಗಿದೆ. ರಾಷ್ಟ್ರ ಪತಿ ತನ್ನ ಕಾರ್ಯ ನಿರ್ವಹಿಸುವಾಗ ರಾಷ್ಟ್ರಪತಿಗೆ ನೆರವು ಹಾಗೂ ಸಲಹೆ ನೀಡಲು ಪ್ರಧಾನ ಮಂತ್ರಿ ನೇತೃತ್ವದ ಒಂದು ಮಂತ್ರಿ ಮಂಡಲ ಇರತಕ್ಕದ್ದು.
ಮಂತ್ರಿಮಂಡಲ ರಾಷ್ಟ್ರಪತಿಯವರಿಗೆ ಏನು ಸಲಹೆ ನೀಡಿದೆ ಎಂಬುದನ್ನು ಯಾವುದೇ ನ್ಯಾಯಾಲಯ ವಿಚಾರಣೆ ಮಾಡತಕ್ಕದ್ದಲ್ಲ. ಈಗ ಮುಂದಿನ 5 ವರ್ಷಗಳಿಗೆ ಶ್ರೀಮತಿ ದ್ರೌಪದಿ ಮುರ್ಮು ಆಳುವ ಪಕ್ಷದ ಅಭ್ಯರ್ಥಿ. ಅವರೇ ಗೆಲ್ಲುವಸಾಧ್ಯತೆ ಹೆಚ್ಚು. ಮೊದಲನೆಯ ಬಾರಿ ಒಬ್ಬ ಆದಿವಾಸಿ ಮಹಿಳೆ ಯು ಭಾರತದ ರಾಷ್ಟ್ರಪತಿ ಯಾಗುವುದನ್ನು ಸಮಾನತೆಮತ್ತು ಸಾಮಾಜಿಕ ನ್ಯಾಯದ ಆದರ್ಶಗಳಲ್ಲಿ ನಂಬಿಕೆಯಿರುವ ಎಲ್ಲರೂ ಸ್ವಾಗತಿಸಲೇ ಬೇಕು.
ಹಿಂದುಳಿದ ಸಮುದಾಯದ ಒಬ್ಬ ಮಹಿಳೆಯೂ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿ ಸುತ್ತಾಳೆ ಎಂಬುದಕ್ಕೆ ಇದೊಂದು ನಿದರ್ಶನ ಗಬಲ್ಲ ದು. ಇಷ್ಟಕ್ಕೇ ಅವರು ಯಾವುದೇ ಭೀತಿ, ಪಕ್ಷಪಾತವಿಲ್ಲದೆ ಸಂವಿಧಾನದ ಕಾವಲುಗಾರರಾಗಿಯೂ ಹೊಣೆಗಾರಿ ಕೆಯನ್ನು ನಿರ್ವಹಿಸಬೇಕು. ದೇಶವು ಹೆಮ್ಮೆ ಪಡುವಂತಿ ರಬೇಕು. ಭಾರತದ ಪ್ರಜಾಪ್ರಭುತ್ವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಕಾಳಜಿ ವಹಿಸಿ ಜಗತ್ತಿನಲ್ಲಿ ಭಾರತದ ಕೀರ್ತಿ ಹೆಚ್ಚಿಸುವ ಕಾರ್ಯವು ಈ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಯದಾಗಿರಬೇಕು. ಇನ್ನು ಒಬ್ಬ ಆದಿವಾಸಿ ಹಿಂದುಳಿದ ದಲಿತ ಮಹಿಳೆ ರಾಷ್ಟ್ರಪತಿಯಾಗಲಿರುವ ಸಂಭವವೇ ಹೆಚ್ಚಾಗಿರುವ ಈ ಸಂದರ್ಭದಲ್ಲಿ ವಿಶ್ಲೇಷಿಸಬೇಕಾದ ವಿಚಾರವೆಂದರೆ ನಮ್ಮ ದೇಶಕ್ಕೆ ದಲಿತ ಹಿನ್ನೆಲೆಯ, ಮುಸ್ಲಿಂ ಹಿನ್ನೆಲೆಯ, ಮಹಿಳಾ ಹಿನ್ನೆಲೆಯ, ರಾಷ್ಟ್ರಪತಿಗಳಾಗಿ ಹೋಗಿದ್ದಾರೆ.
ಆದರೆ ದಲಿತ ದಮನಿತರು ಇನ್ನೂ ಸಂವಿಧಾನದತ್ತ ಹಕ್ಕುಗಳಿಂದ ವಂಚಿತರಾಗಿಯೇ ಇದ್ದಾರೆ. ಈ ವಿಷಾದದ ವಿಚಾರ ಸುಧಾರಿಸಬೇಕೆಂದು ಆಶಿಸೋಣವೇ? ಈ ಚುನಾವಣೆಯಲ್ಲಿ ಆಡಳಿತಾರೂಢ ಮಿತ್ರಪಕ್ಷಗಳೂ ಸೇರಿ ಶೇ. 48ರಷ್ಟು ಮತಗಳನ್ನು ಹೊಂದಿದ್ದು, ಉಳಿದ ಕೆಲ ಪಕ್ಷಗಳು ಬೆಂಬಲ ಸೂಚಿಸಿರುವುದರಿಂದ ದ್ರೌಪದಿ ಮುರ್ಮು ದೇಶದ ಉನ್ನತ ಸಾಂವಿಧಾನಿಕಹುದ್ದೆಯನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ. ಲೋಕಸಭೆಯಲ್ಲಿ 543 ಮತ್ತು ರಾಜ್ಯ ಸಭೆಯಲ್ಲಿ 233 ಸಂಸದರು ಸೇರಿ ಒಟ್ಟಾರೆ 776 ಸಂಸದರಿರುತ್ತಾರೆ.
ಜೊತೆಗೆ 4120 ಶಾಸಕರು ಸೇರಿ 10,98,903 ಮತದಾ ರರು ರಾಷ್ಟ್ರಪತಿಯನ್ನು ಆಯ್ಕೆ ಮಾಡಲಿದ್ದಾರೆ. ಈ ಇಲೆಕ್ಟೊರಲ್ ಕಾಲೇಜಿನ ಒಟ್ಟು ಮತಗಳು 10.98 ಲಕ್ಷ. ರಾಷ್ಟ್ರಪತಿ ಆಯ್ಕೆಗೆ ಬೇಕಾಗಿರುವ ಸರಳ ಬಹುಮತ 5.49 ಲಕ್ಷ ಎಲೆಕ್ಟೊರಲ್ ಮತಗಳು. ಲೋಕಸಭೆ ಮತ್ತು ರಾಜ್ಯ ಸಭೆಯ ಒಬ್ಬ ಸದಸ್ಯರ ಮತ ಮೌಲ್ಯ 708 ಎಲೆಕ್ಟೋರಲ್ ಮತಗಳು. ಶಾಸಕರ ಇಲೆಕ್ಟೊರಲ್ ಮತಗಳ ಮೌಲ್ಯ ಆಯಾ ರಾಜ್ಯದ ಜನಸಂಖ್ಯೆ ಮತ್ತು ಶಾಸಕರ ಸಂಖ್ಯೆಗೆ ತಕ್ಕಂತೆ ಭಿನ್ನವಾಗಿರುತ್ತದೆ. ಆಯಾ ರಾಜ್ಯದ ಒಟ್ಟು ಜನಸಂಖ್ಯೆ ಯನ್ನು ರಾಜ್ಯದ ಒಟ್ಟು ಶಾಸಕರ ಸಂಖ್ಯೆಯಿಂದ ಭಾಗಿಸಿದಾಗ ಬರುವಶೇಷವನ್ನು ಪುನಃ ಸಾವಿರದಿಂದ ಭಾಗಿಸಿದಾಗ ಬರುವ ಉತ್ತರವೇ ಆ ರಾಜ್ಯದ ಒಟ್ಟು ಶಾಸಕನ ಇಲೆಕ್ಟೊರಲ್ ಓಟಿನ ಮೌಲ್ಯ.
ಇಲ್ಲಿ ನಾವು ಆರಿಸಿ ಕಳಿಸಿದ ಪ್ರತಿನಿಧಿಗಳು ನಮ್ಮನ್ನು ಪ್ರತಿನಿಧಿಸಿದಂತಾಯಿತಲ್ಲವೇ?  ಭಾರತದ ಸಂಸತ್ತು, ರಾಜ್ಯಸಭೆ, ಲೋಕಸಭೆ ಹಾಗೂ ರಾಷ್ಟ್ರಪತಿ ಎಂಬ ಮೂರು ಅಂಗಗಳನ್ನು ಹೊಂದಿದೆ. ಭಾರತದ ರಾಷ್ಟ್ರಪತಿಗಳು ಯಾವುದೇ ಸದನದ ಸದಸ್ಯರಲ್ಲದಿದ್ದರೂ ಕೂಡಾ ಬ್ರಿಟಿಷ್ ರಾಜನಂತೆ ಅವನನ್ನು ಸಂಸತ್ತಿನ ಭಾಗವೆಂದು ಪರಿಗಣಿಸಲಾಗುವುದು ಅವರು ಸಂಸತ್ತಿನ ಕಾರ್ಯ ಕಲಾಪಗಳಿಗೆ ಸಂಬಂಧಿಸಿದ ಅನೇಕ ಕಾರ್ಯಗಳನ್ನು ಮಾಡುವ ಅಧಿಕಾರವನ್ನು ಹೊಂದಿದ್ದಾರೆ.
ಭಾರತದ ರಾಷ್ಟ್ರಪತಿಗಳು ಸದನದ ಅಧಿವೇಶವನ್ನು ಕರೆಯುವ, ವಿಸರ್ಜಿಸುವ ಹಾಗೂ ವಿಧೇಯಕಗಳಿಗೆ ಸಮ್ಮತಿ ನೀಡುವ ಕಾರ್ಯಗಳನ್ನು ಮಾಡುತ್ತಾರೆ. ಭಾರತದಲ್ಲಿ ಬ್ರಟಿಷ್ ಮಾದರಿಯನ್ನು ಅನುಸರಿಸಿದ ಸಂಸದೀಯ ಮಾದರಿ ಸರಕಾರವಿದೆ. ಎರಡೂ ಸದನಗಳು ಪಾಸು ಮಾಡಿದ ವಿಧೇಯಕವನ್ನು ರಾಷ್ಟ್ರಪತಿಯವರ ಸಮ್ಮತಿಗೆ ಕಳಿಸಿಕೊಡಲಾಗುವುದು ಅದನ್ನು ಅವರುಸಮ್ಮತಿಸಬಹುದು ಅಥವಾ ನಿರಾಕರಿಸಬಹುದು.
ಧನವಿಧೇಯಕವನ್ನು ಬಿಟ್ಟು ಬೇರೆ ವಿಧೇಯಕಗಳನ್ನು ಪುನರ್ ಪರಿಶೀಲನೆಗೆ ಹಿಂದಿರುಗಿಸಿ ಪುನರ್ ವಿಮರ್ಷಿಸಿ ಅಂಗೀಕರಿಸ ಬಹುದು. ರಾಷ್ಟ್ರಪತಿಯವರು ರಾಜ್ಯಸಭೆಗೆ ಸಾಹಿತ್ಯ, ವಿಜ್ಞಾನ, ಕಲೆ, ಸಮಾಜ ಸೇವೆ ಈ ರಂಗಗಳಲ್ಲಿ ವಿಶೇಷ ಜ್ಞಾನ ಹೊಂದಿದ ಅಥವಾ ಅನುಭವ ಹೊಂದಿದ 12 ಜನರನ್ನು ನಾಮನಿ ರ್ದೇಶನ ಮಾಡಬಹುದು. ಅಪರಾಧಿಗೆ ವಿಧಿಸಿದ ಶಿಕ್ಷೆಗೆ ಕ್ಷ್ರಮಾದಾನ ನೀಡುವ, ಶಿಕ್ಷೆಯನ್ನು ತಡೆಹಿಡಿಯುವ ಶಿಕ್ಷೆಯನ್ನೂ ಕಡಿಮೆ ಮಾಡುವ ಅಧಿಕಾರವಿದೆ.
ರಾಷ್ಟ್ರಪತಿ ಹುದ್ದೆಯ ಬಗ್ಗೆ ಹೇಳುವಾಗ ಯಾವುದೇ ಸಂದರ್ಭದಲ್ಲಿಯೂ ಅಧಿಕಾರದ ಕುರ್ಚಿಯನ್ನು ಪಡೆಯುವುದಕ್ಕಿಂತಲೂ ಅದಕ್ಕೆ ಹೆಸರು, ಕೀರ್ತಿ ಘನತೆ ತರುವುದು ಮುಖ್ಯವಾಗಿರಬೇಕು. ಈ ನಿಟ್ಟಿನಲ್ಲಿ ಈ ಸ್ಥಾನದ ಘನತೆ, ಗೌರವವನ್ನು ರಾಷ್ಟ್ರೀಯಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ಡಾ| ರಾಜೇಂದ್ರ ಪ್ರಸಾದ್, ಡಾ| ರಾಧಾಕೃಷ್ಣನ್, ಡಾ| ಅಬ್ದುಲ್ ಕಲಾಂ ಮುಂತಾದ ಪ್ರಮುಖರನ್ನು ನೆನೆಸಿಕೊಳ್ಳಬೇಕಾಗಿದೆ. ಮುಂದಿನ ರಾಷ್ಟ್ರಪತಿಯವರು ಅದೇ ಮಾರ್ಗದಲ್ಲಿ ಸಾಗಲಿ ಎಂದು ಆಶಿಸೋಣವೇ?