ಕಾಮನ್‌ ವೆಲ್ತ್‌ನಲ್ಲಿ ಜಗತ್ತಿಗೇ ಮಾದರಿಯಾದ ಭಾರತ
ಅಭಿಮತ
ಡಿ.ಎಸ್.ಅರುಣ್
ಭಾರತ ಕಳೆದ 8 ವರ್ಷಗಳಲ್ಲಿ ಕ್ರೀಡೆಗಾಗಿ ಅಪಾರ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದಿದೆ. ಆ ಯಶಸ್ಸಿನ ಫಲವೇ ಕಳೆದ ಬಾರಿಯ ಒಲಿಂಪಿಕ್ಸ್ ಹಾಗೂ ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳಿಗೆ ಈ ಪರಿ ಮುತ್ತಿಡಲು ಸಾಧ್ಯವಾದದ್ದು.
ಈ ಎಲ್ಲ ಯಶಸ್ಸಿನ ಹಿಂದಿರುವ ಶಕ್ತಿ ಎಂದರೆ ಪ್ರಧಾನಿ ನರೇಂದ್ರ ಮೋದಿ. ಗುಜರಾತ್ ಸಿಎಂಯಾಗಿದ್ದಾಗ ಮೋದಿಜಿ ‘ಖೇಲ್ ಮಹಾಕುಂಭ ಉತ್ಸವ’ವನ್ನು ಜಾರಿಗೆ ತಂದರು. ಇದು ರಾಜ್ಯದ ಮೂಲೆ ಮೂಲೆಗಳಲ್ಲಿರುವ ಕ್ರೀಡಾಪಟುಗಳಿಗೆ ವೇದಿಕೆ ನೀಡಿತು. ಅವರು ಪ್ರಧಾನಿಯಾದ ಬಳಿಕ ಅದೇ ಮಾದರಿಯ ‘ಖೇಲೋ ಇಂಡಿಯಾ’ ಜಾರಿಗೊಳಿಸಿದರು. ಅದರಂತೆಯೇ ‘ಫಿಟ್ ಇಂಡಿಯಾ’. ಜತೆಯಲ್ಲಿ ಖೇಲೋ ಇಂಡಿಯಾ ಯೂಥ್ ಗೇಮ್ಸ್ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್. ಈ ಯೋಜನೆಗಳುನೀಡಿದ ಫಲವೇ ಇಂದು ಭಾರತ ಕ್ರೀಡಾ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭುತ್ವನ್ನು ಸಾಧಿಸಲು ಕಾರಣವಾಗಿದೆ.
ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆದ್ದಿದೆ. ಇದು ಪದಕಗಳ ಪಟ್ಟಿಯಲ್ಲಿ 5ನೇ ಸ್ಥಾನವನ್ನು ತಂದುಕೊಟ್ಟಿದೆ. ಇದು ನಿಜವಾಗಿಯೂ ಹೆಮ್ಮೆಯ ಎಂದರೆ ತಪ್ಪಾಗಲಾರದು. 2010ರಲ್ಲಿ ಭಾರತ 39 ಚಿನ್ನ ಸೇರಿದಂತೆ 101 ಪದಕಗಳನ್ನು ಗೆದ್ದು ಎರಡನೇ ಸ್ಥಾನ ಗಳಿಸಿತ್ತು. ಆಗ ಆರ್ಚರಿ ಮತ್ತು ಶೂಟಿಂಗ್ ಇತ್ತು. ಅಲ್ಲದೆ ಅದು ಭಾರತದಲ್ಲಿಯೇ ನಡೆದ ಕ್ರೀಡಾಕೂಟ. ಕ್ರೀಡಾಪಟುಗಳಲ್ಲಿ ಮನೆಯಂಗಣದ ಆತ್ಮವಿಶ್ವಾಸ ಇತ್ತು.
2018  ರಲ್ಲಿ ಭಾರತ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತ್ತು. ಗ್ಲಾಸ್ಕೋದಲ್ಲಿ 15 ಚಿನ್ನ, 30 ಬೆಳ್ಳಿ ಹಾಗೂ 19 ಕಂಚಿನ ಪದಕ ಗೆದ್ದು, ಐದನೇ ಸ್ಥಾನ ಗಳಿಸಿತ್ತು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿನ ಭಾರತದ ಸಾಧನೆಯನ್ನು ಸಿಂಹಾವಲೋಕನ ಮಾಡಿದಾಗ ದೇಶ ಸಾಧನೆಯ ಹಾದಿಯಲ್ಲಿ ಆರೋಹಣದಲ್ಲಿದೆ ಎಂಬುದು ಸ್ಪಷ್ಟ.
ಯಾಕೆ ಎರಡನೇ ಸ್ಥಾನ ತಪ್ಪಿತು?ಕಾಮನ್‌ವೆಲ್ತ್ ಸಂಘಟಕರು ಕೆಲವು ಕ್ರೀಡೆಗಳನ್ನು ಕೈಬಿಟ್ಟಿದ್ದಾರೆ. ಅದರಲ್ಲಿ ಶೂಟಿಂಗ್ ಮತ್ತು ಆರ್ಚರಿ ಮುಖ್ಯವಾದುದು. ಭಾರತ ಈ ಎರಡು ಕ್ರೀಡೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಭುತ್ವ ಸಾಧಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ಅಗ್ರ ಸ್ಥಾನ ಗಳಿಸಿತ್ತು. ಆರ್ಚರಿಯಲ್ಲಿಯೂ ಭಾರತ ಉತ್ತಮ ಪ್ರದರ್ಶನ ತೋರಿದೆ. ಆದ್ದರಿಂದ ಕಾಮನ್ವ್‌ಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಭಾರತದ ಶೂಟರ್ಸ್ ಮತ್ತು ಆರ್ಚರ್ ಗಳಿಗೆ ಕಷ್ಟವಾಗಿರಲಿಲ್ಲ.
ಯಶಸ್ಸಿಗೆ ಪೂರಕ ಯೋಜನೆಗಳು:ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕಂದಿನ ಕ್ರೀಡೆಯ ಬಗ್ಗೆ ಅರಿವು ಮೂಡಿಸಿ ಮಕ್ಕಳಲ್ಲಿ ಸ್ಪರ್ಧಾ ಮನೋಭಾವವನ್ನು ತುಂಬಿದರೆ ಕ್ರೀಡೆಯಲ್ಲಿ ಯಶಸ್ಸು ಕಾಣಲು ಸಾಧ್ಯ. ಇಂದು ಚೀನಾ, ಜಪಾನ್ ಮತ್ತು ಕೊರಿಯಾ ದೇಶಗಳನ್ನು ಭಾರತ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ವೇಟ್ ಲಿಫ್ಟಿಂಗ್ ಕ್ರೀಡೆಗಳಲ್ಲಿ ಹಿಂದಿಕ್ಕಲು ಪ್ರಾಥಮಿಕ ಹಂತದ ಕ್ರೀಡಾ ಯೋಜನೆಗಳೇ ಕಾರಣ.
೨೦೧೬ರ ವರೆಗೂ ರಾಜೀವ್ ಗಾಂಧಿ ಖೇಲ್ ಅಭಿಯಾನ, ನಗರ ಕ್ರೀಡಾ ಮೂಲಭೂತ ಸೌಕರ್ಯ ಯೋಜನೆ ಮತ್ತು ರಾಷ್ಟ್ರೀಯ ಕ್ರೀಡಾ ಪ್ರತಿಭಾನ್ವೇಷಣೆ ಪದ್ಧತಿಯಂಥ ಯೋಜನೆಗಳು ಜಾರಿಯಲ್ಲಿದ್ದವಷ್ಟೇ.ಆದರೆ ಯಾವುದೇ ರೀತಿಯಲ್ಲೂ ಸರಿಯಾಗಿ ಅನುಷ್ಠಾನವಾಗಿರಲಿಲ್ಲ. ಮೋದಿಜಿ ಈ ತುಂಡು ತುಂಡಾದ ಯೋಜನೆಗಳನ್ನು ಒಂದುಗೂಡಿಸಿ ಖೇಲೋ ಇಂಡಿಯಾವನ್ನು ಜಾರಿಗೆ ತಂದರು. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕ್ರೀಡಾ ಸೌಲಭ್ಯವನ್ನು ಒದಗಿಸುವುದು ಮತ್ತು ಅವರ ಪ್ರತಿಭೆಗಳನ್ನು ಪ್ರದರ್ಶಿಸಲು ಕ್ರೀಡಾಕೂಟವನ್ನು ನಡೆಸು ವುದು ಈ ಯೋಜನೆ ಮುಖ್ಯ ಉದ್ದೇಶವಾಗಿತ್ತು.
ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ ಮತ್ತು ಖೇಲೋ ಇಂಡಿಯಾ ಯೂಥ್ ಗೇಮ್ಸ ಇಂದು ದೇಶದ ಕೋಟ್ಯಂತರ ಕ್ರೀಡಾಪಟುಗಳಿಗೆ ವೇದಿಕೆ ಯಾಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದ ತಂಡಗಳನ್ನು ದೇಶದ ಪ್ರತಿಷ್ಠಿತ ಲೀಗ್ ಪ್ರೋ ಕಬಡ್ಡಿಯಲ್ಲಿ ಆಟಗಾರರ ಹರಾಜಿನಲ್ಲಿ ಬಳಸಿಕೊಂಡಿದ್ದನ್ನು ಸ್ಮರಿಸಬಹುದು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅತ್ಯಂತ ಕಿರಿಯ ಈಜುಪಟು ಶ್ರೀಹರಿ ನಟರಾಜ್ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ಮತ್ತು ಯೂನಿವರ್ಸಿಟಿ ಗೇಮ್ಸ್‌ಗಳಲ್ಲಿ ಚಾಂಪಿಯನ್ ಪಟ್ಟ ಗೆದ್ದ ಈಜುಪಟು ಎಂಬುದನ್ನು ಮರೆಯುವಂತಿಲ್ಲ. ಹೀಗೆಯೇ ನಾನಾ ರಾಜ್ಯಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಹಲವು ಕ್ರೀಡಾಪಟುಗಳು ಖೇಲೋ ಇಂಡಿಯಾದ ವೇದಿಕೆಯಿಂದ ಬಂದವರು.
ಮೋದಿಜಿ ಕೇವಲ ಯೋಜನೆಗಳನ್ನು ಮಾಡಿ ಕೈಕಟ್ಟಿ ಕುಳಿತಿಲ್ಲ. ಅವುಗಳ ಕಾರ್ಯವೈಖರಿಯನ್ನೂ ಗಮನಿಸಿದ್ದಾರೆ. ಯುವ ಸಾಧಕರನ್ನು ಪ್ರೋತ್ಸಾಹಿಸಲು ಶಾಲಾ ಹಂತದ ಕ್ರೀಡಾ ವಿದ್ಯಾರ್ಥಿಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಖೇಲೋಇಂಡಿಯಾದಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಖಾತೆಗೆ ನಗದು ಬಹುಮಾನ ಜಮೆ ಆಗುವಂತೆ ಮಾಡಿದ್ದಾರೆ.
ಉತ್ತಮ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಸಂಪತ್, ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ಸೈಕ್ಲಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದ. ಆದರೆ ಅವರದ್ದು ಬಡ ಕುಟುಂಬ. ತಾಯಿ ಮನೆಯ ಟೈಲರಿಂಗ್ ಮಾಡಿಕೊಂಡು ಮಗನ ಕ್ರೀಡಾ ಬದುಕಿಗೆ ನೆರವು ನೀಡುತ್ತಿದ್ದಾರೆ. ಅವರಿರುವುದು ಬಾಡಿಗೆ ಮನೆಯಲ್ಲಿ. ‘ನೀನು ಬಾಡಿಗೆ ಹೇಗೆ ಕಟ್ಟುತ್ತಿ’ ಎಂದು ಕೇಳಿದಾಗ, ‘ಕಳೆದ ಬಾರಿ ಖೇಲೋ ಇಂಡಿಯಾದಲ್ಲಿ ಪದಕ ಗೆದ್ದಿದ್ದೆ, ಅದಕ್ಕಾಗಿ ಹತ್ತು ಸಾವಿರ ರು. ವಿದ್ಯಾರ್ಥಿ ವೇತನ ಬರುತ್ತಿದೆ. ಆ ಹಣದಲ್ಲಿ ಬಾಡಿಗೆ ಕಟ್ಟುತ್ತೇವೆ ಎಂದು ಹೇಳಿದ. ಇದು ಒಂದು ಉದಾಹರಣೆ ಅಷ್ಟೇ. ಈ ರೀತಿಯ ಹಲವು ನಿದರ್ಶನಗಳಿವೆ.
ರಾಷ್ಟ್ರೀಯ ಪ್ರತಿಭಾನ್ವೇಷಣೆ:ಪ್ರಾಥಮಿಕ ಹತದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಿದರೆರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ 2015ರಲ್ಲಿ ಕೇಂದ್ರ ಸರಕಾರದ ಹಣಕಾಸಿನ ನೆರವಿನಲ್ಲಿ ದೇಶದಲ್ಲಿರುವ 8-12 ವರ್ಷ ವಯೋಮಿತಿಯ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ತರಬೇತಿ ನೀಡುವ ಯೋಜನೆ ಜಾರಿಗೆ ತರಲಾಯಿತು.
ಈ ಕ್ರೀಡಾ ಯಶಸ್ಸಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಪಾತ್ರ ಪ್ರಮುಖ. ದೇಶದ ಪ್ರಮುಖ ನಗರಗಳಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರಗಳಿವೆ. ಭಾರತೀಯ ರಾಷ್ಟ್ರೀಯ ಕ್ರೀಡಾ ದಿನದಂದು, ಅಂದರೆ 2017 ಆಗಸ್ಟ್ 29ರಂದು ನ್ಯಾಷನಲ್ ಟ್ಯಾಲೆಂಟ್ ಸರ್ಚ್ ವೆಬ್‌ಸೈಟನ್ನು ಭಾರತ ಸರಕಾರ ಅನಾವರಣಗೊಳಿಸಿತು. ಇಲ್ಲಿ ಯುವ ಕ್ರೀಡಾಪಟುಗಳು ಕೇಂದ್ರ ಸರಕಾರದಕ್ರೀಡಾ ಯೋಜನೆಗಳ ಅನುಕೂಲ ಪಡೆಯಲು ಆನ್ ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು.
ಯಶಸ್ವಿ ಕ್ರೀಡಾ ಯೋಜನೆಗಳು:1.ಖೇಲೋ ಇಂಡಿಯಾ‘ಖೇಲೇಗ ಇಂಡಿಯಾ ತೊ ಖಿಲೇಗ ಇಂಡಿಯಾ -ಭಾರತ ಆಡಿದರೆ ಭಾರತ ಉತ್ಕರ್ಷಿಸುತ್ತದೆ’ ಎಂಬ ಮಾತು ಈಗ ಎಡೆ ಮೊಳಗುತ್ತಿದೆ. ಈ ಅರಿವು ಮೂಡಿಸುವ ಕೆಲಸ ಮಾಡಿದ್ದು ಖೇಲೋ ಇಂಡಿಯಾ ಎಂಬ ಯೋಜನೆ. ಪ್ರಾಥಮಿಕ ಹಂತದ ಕ್ರೀಡಾಭಿವೃದ್ಧಿ ಕಾಣಬೇಕು ಅದಕ್ಕೆ ಪೂರಕ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ ಯೋಜನೆ. ಇದಕ್ಕಾಗಿ 2018-20 ರ ಅವಧಿಯಲ್ಲಿ 1756 ಕೋಟಿ ರು. ಗಳನ್ನು ಮೀಸಲಿಡಲಾಯಿತು.
ಈ ಯೋಜನೆಯಡಿ ಆಯ್ಕೆಯಾದ ಸಾವಿರ ಕ್ರೀಡಾಪಟುಗಳಿಗೆ ವರ್ಷಕ್ಕೆ 5 ಲಕ್ಷ ರು. ಗಳಂತೆ ಎಂಟು ವರ್ಷಗಳ ಕಾಲ ನೀಡಲು ನಿರ್ಧರಿಸಲಾಯಿತು. ಕ್ರೀಡೆಗೆ ಹೆಚ್ಚು ಉತ್ತೇಜನ ನೀಡುವ ಉದ್ದೇಶದಿಂದ ದೇಶಾದ್ಯಂತ 20 ಕ್ರೀಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾಯಿತು. ಕೆಲವೊಂದು ರಾಜ್ಯಗಳಲ್ಲಿ ಈ ಬಗ್ಗೆ ಈಗಾಗಲೇ ಕಾರ್ಯರೂಪದಲ್ಲಿದೆ.
2.ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ಪ್ರತಿ ಕ್ರೀಡಾಪಟುವಿನ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕನಸನ್ನು ಸಾಕಾರ ಗೊಳಿಸಲು ಮೋದಿಯವರು ಒಲಿಂಪಿಕ್ಸ್‌ನಲ್ಲಿ ಪದಕ ಸ್ವೀಕರಿಸುವ ಪೋಡಿಯಂ ಏರುವುದನ್ನು ಗುರಿಯಾಗಿಸಿಕೊಂಡು ಯುವ ಕ್ರೀಡಾ ಪಟುಗಳಿಗಾಗಿ ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್ಸ್) ಎಂಬ ಯೋಜನೆ ಜಾರಿಗೆ ತಂದರು.
ಇದು ರಾಷ್ಟ್ರ ಮಟ್ಟದಲ್ಲಿ ಮಿಂಚುವ ಪ್ರತಿಯೊಬ್ಬ ಕ್ರೀಡಾಪಟವಿಗೂ ಉನ್ನತ ಮಟ್ಟದ ತರಬೇತಿ ಪಡೆಯಲು  ಮಾಸಿಕ 50 ಸಾವಿರ ರು. ಗಳನ್ನು ನೀಡಲು ತೀರ್ಮಾನಿಸಲಾಯಿತು. ಈ ಯೋಜನೆಯ ಯಶಸ್ಸನ್ನು ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾವು ಕಂಡಿದ್ದೇವೆ, ಪಾಲ್ಗೊಂಡು 70 ಕ್ರೀಡಾಪಟುಗಳಲ್ಲಿ ೪೭ ಮಂದಿ ಟಾಪ್ಸ್ ಯೋಜನೆಯ ಫಲಾನುಭವಿಗಳು.
3.ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ:ಕೇಂದ್ರ ಸರಕಾರ ಖಾಸಗಿ ಅಥವಾ ಕಾರ್ಪೊರೇಟ್ ಮತ್ತು ಸರಕಾರೇತರ ಸಂಸ್ಥೆ ಗಳೊಂದಿಗೆ ಕೈ ಜೋಡಿಸಿ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ (ಎನ್‌ಎಸ್ ಡಿಎಫ್) ಎಂಬ ಯೋಜನೆ ಜಾರಿಗೆ ತಂದಿದೆ.ಅನಿವಾಸಿ ಭಾರತೀಯರೂ ಈ ಯೋಜನೆಗೆ ನೆರವಾಗಬಹುದು. ಕಾರ್ಪೊರೇಟ್  ಸಾಮಾಜಿ ಜವಾಬ್ದಾರಿ (ಸಿಎಸ್‌ಆರ್) ನಿಧಿಯನ್ನು ಕ್ರೀಡಾ ಅಭಿವೃದ್ಧಿಗಾಗಿ ನೀಡಬಹುದು. ಇದು ಶೇ.100 ತೆರಿಗೆ ಮುಕ್ತವಾಗಿರುತ್ತದೆ. ಈ ರೀತಿಯ ಯೋಜನೆಗಳು ದೇಶದಲ್ಲಿಕ್ರೀಡಾಭಿವೃದ್ಧಿಯನ್ನು ಕಾಣಲು ಪೂರಕವಾಗಿವೆ.
ಇದರಿಂದಾಗಿ ದೇಶದಲ್ಲಿ ಹಲವಾರು ಕ್ರೀಡಾ ಫೌಂಡೇಷನ್‌ಗಳು ಹುಟ್ಟಿಕೊಂಡರೆ ಇನ್ನು ಕೆಲವು ಕಾರ್ಪೊರೇಟ್ ವಲಯಗಳು ತಮ್ಮ ಪಾಲಿನ ಹಣ ವನ್ನು ಎನ್‌ಎಸ್‌ಡಿಎಫ್ ಗೆ ನೀಡಿವೆ.
೪.ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ಖೇಲೋ ಇಂಡಿಯಾ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿ ಅದು ದೇಶದ ಪ್ರತಿಯೊಂದು ಮನೆಯನ್ನು ತಲಪುವ ಉದ್ದೇಶವನ್ನಿರಿಸಿಕೊಂಡ ಸರಕಾರ ಪ್ರತ್ಯೇಕ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ (ಎನ್ ಎಸ್‌ಇಬಿ) ಯನ್ನು ಸ್ಥಾಪಿಸಿತು. ಇದಕ್ಕಾಗಿ ೨೦೧೯ರ ಕೇಂದ್ರ ಬಜೆಟ್‌ನಲ್ಲಿ ೨೧೪.೨ ಕೋಟಿ ರು. ಹೆಚ್ಚಿನ ಮೊತ್ತವನ್ನು ನೀಡಲಾಯಿತು. ೨೦೧೮ರಲ್ಲಿ ೨೦೦೨.೭೨ ಕೋಟಿ ರು. ಇದ್ದುದನ್ನು ೨೦೧೯ರಲ್ಲಿ ೨೨೧೬.೯೨ ಕೋಟಿ ರು. ಗಳಿಗೆ ಏರಿಸಲಾಯಿತು. ಹೀಗೆ ಕ್ರೀಡೆ ಮತ್ತು ಶಿಕ್ಷಣ ಒಂದಾಗಿ ಸಾಗಲು ಅನುವು ಮಾಡಿಕೊಡಲಾಯಿತು.
೫.ಫಿಟ್ ಇಂಡಿಯಾ ಚಳವಳಿ ಯುವಕರು ಫಿಟ್ ಆಗಿದ್ದಲ್ಲಿ ಭಾರತದ ಭವಿಷ್ಯ ಉಜ್ವಲವಾಗಲಿದೆ ಎಂಬುದನ್ನರಿತ ಪ್ರಧಾನಿ ಮೋದಿಯವರು ೨೦೧೯ರ ರಾಷ್ಟ್ರೀಯ ಕ್ರೀಡಾ ದಿನ, ಆಗಸ್ಟ್ ೨೯ರಂದು ಫಿಟ್ ಇಂಡಿಯಾ ಚಳವಳಿಯನ್ನು ದೇಶಾದ್ಯಂತ ಏಕ ಕಾಲಕ್ಕೆ ಜಾರಿಗೆ ತಂದರು. ಕ್ರೀಡೆ ಜತೆಯಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಈ ಯೋಜನೆಯ ಉದ್ದೇಶ. ಇದು ಒಂದುಕ್ರಾಂತಿಯಾಗಿ ದೇಶಾದ್ಯಂತ ಹಬ್ಬಿತು. ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಯ ಅರಿವು ಮೂಡಿತು. ಫಿಟ್ ನೆಸ್ ಎಂಬುದು ಶೂನ್ಯ ಸಂಪಾದನೆಯಿಂದ ಗಳಿಸಬಹುದಾದ ದೊಡ್ಡ ಲಾಭ ಎನ್ನುತ್ತಾರೆ ಮೋದಿ. ಯೋಜನೆಯನ್ನು ಯಶಸ್ವಿಗೊಳಿಸಲು ಕ್ರೀಡಾ ಸಚಿವರ ಅಧ್ಯಕ್ಷತೆಯ ಸಮಿತಿ ರಚಿಸ ಲಾಯಿತು. ಈ ಸಮಿತಿಯಲ್ಲಿ ಕ್ರೀಡಾ ಇಲಾಖೆಯ ಉನ್ನತ ಅಧಿಕಾರಿಗಳು, ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಸದಸ್ಯರು, ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಪ್ರಮುಖರು, ಖಾಸಗಿ ಕ್ರೀಡಾ ಸಂಸ್ಥೆಗಳು ಮತ್ತು ಫಿಟ್‌ನೆಸ್ಉತ್ತೇಜಕರು ಸೇರಿರುತ್ತಾರೆ.
ಕ್ರೀಡಾ ಬಜೆಟ್‌ನಲ್ಲಿ ಏರಿಕೆ:ಕಳೆದ ಏಳೆಂಟು ವರ್ಷಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಯಶಸ್ಸು ಕಾಣಬೇಕಾದರೆ ಕೇಂದ್ರ ಸರಕಾರ ಬಜೆಟ್‌ನಲ್ಲಿ ಕ್ರೀಡೆಗೆ ಮೀಸಲಿಟ್ಟ ಹಣ ಪ್ರಮುಖ ಪಾತ್ರವಹಿಸಿದೆ. ೨೦೧೩-೧೪ರಲ್ಲಿ ಕ್ರೀಡಾ ಬಜೆಟ್ ೧೨೧೯ ಕೋಟಿ ರು.ಆಗಿತ್ತು. ೨೦೧೭-೧೮ರಲ್ಲಿ ೨೧೯೬. ೩೬ ಕೋಟಿ ರು.ಗೆ ಏರಿಕೆಯಾಗಿದೆ. ೨೦೨೨- ೨೩ರ ಬಜೆಟ್‌ನಲ್ಲಿ ೩೦೬೨.೬೦ ಕೋಟಿ ರೂ. ಕಾಯ್ದಿರಿಸಲಾಗಿದೆ.
ಅಂದರೆ ಕಳೆದ ೧೦ ವರ್ಷಗಳಲ್ಲಿ ಕ್ರೀಡಾ ಬಜೆಟ್‌ನಲ್ಲಿ ಶೇ. ೧೦೦ರಷ್ಟು ಏರಿಕೆಯಾಗಿದೆ. ಇದು ದೇಶದಲ್ಲಿ ಕ್ರೀಡಾ ಸಾಧನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಮುನ್ನಡೆ ಕಾಣಲು ಪ್ರಮುಖ ಕಾರ ಣವಾಗಿದೆ. ಇವುಗಳ ಜತೆಯಲ್ಲಿ ಕೇಂದ್ರ ಸರಕಾರವು ಒಲಿಂಪಿಕ್ಸ್ ಕ್ರೀಡಾಕೂಟಗಳ ಸಿದ್ಧತೆಗಾಗಿ, ವಿದೇಶಗಳಲ್ಲಿ ತರಬೇತಿ ಪಡೆಯುವುದಕ್ಕಾಗಿ ಹೆಚ್ಚುವರಿ ನಿಧಿ ಬಿಡುಗಡೆಗೊಳಿಸಿದೆ.
ಹೊಸ ಶಿಕ್ಷಣ ನೀತಿ:ಕೇಂದ್ರ ಸರಕಾರವು ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯಲ್ಲೂ ಕ್ರೀಡೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕ್ರೀಡೆ ಎಂದರೆ ಅದು ಇತರ ವಿಷಯಗಳ ಉಪನ್ಯಾಸಕರಿಗೆ ತಮ್ಮ ಪಾಠಗಳನ್ನು ಬೇಗನೆ ಮುಗಿಸಿಕೊಳ್ಳಲು ಬಳಕೆಯಾಗುವ ಪಿರೇಡ್ ಆಗಿತ್ತು. ಆದರೆ, ಈಗಿನ ಹೊಸ ಕ್ರೀಡಾ ನೀತಿಯಿಂದಾಗಿ ಕ್ರೀಡೆ ಕಡ್ಡಾಯ ವಾಗಿ ಶಿಕ್ಷಣದ ಭಾಗವಾಗಲಿದೆ. ಇದು ಮುಂದಿನ ಪದಕ ವಿಜೇರಿಗೆ ವೇದಿಕೆಯಾಗಲಿದೆ.
ಭಾರತದ ಕ್ರೀಡಾ ಯಶಸ್ಸಿನಲ್ಲಿ ಕರ್ನಾಟಕದ ಪಾಲು ಮಹತ್ತರವಾಗಿದೆ. ಈ ಬಾರಿ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕರ್ನಾಟಕದ ಮೂವರು ಕ್ರೀಡಾ ಸಾಧಕರು ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರೆಲ್ಲರಿಗೂ ಕನ್ನಡಿಗರ ಪರವಾಗಿ ಅಭಿನಂದನೆಗಳು.
ವೇಟ್‌ಲಿಫ್ಟಿಂಗ್‌ನ ೬೧ಕೆಜಿ ವಿಭಾಗದಲ್ಲಿ ಕುಂದಾಪುರದ ಗುರುರಾಜ್ ಪೂಜಾರಿ ಕಂಚಿನ ಪದಕ, ಟೀಮ್ ಬ್ಯಾಡ್ಮಿಂಟನ್‌ನಲ್ಲಿ ಕೊಡಗಿನ ಅಶ್ವಿನಿ ಪೊನ್ನಪ್ಪ ಮತ್ತು ಕ್ರಿಕೆಟ್‌ನಲ್ಲಿ ರಾಜೇಶ್ವರಿ ಗಾಯಕ್ ವಾಡ್ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿzರೆ.ಇವರ ಸಾಧನೆ ಕರ್ನಾಟಕದ ಇತರ ಕ್ರೀಡಾಪಟುಗಳಿಗೆ ಸೂರ್ತಿಯಾಗಲಿ ಎಂಬುದೇ ಹಾರೈಕೆ
(ಲೇಖಕರು ರಾಜ್ಯ ವಿಧಾನಪರಿಷತ್ಸದಸ್ಯರು)