ಅಮೆರಿಕ ಭೇಟಿಯಿಂದ ಹೆಚ್ಚಿದೆ ತೈವಾನ್‌ ಆತ್ಮವಿಶ್ವಾಸ !
ವಿಶ್ವ ಪರ್ಯಟನೆ
ಡಾ.ಜಗದೀಶ ಮಾನೆ
@.
ವಿಶ್ವದ ಆರ್ಥಿಕತೆ ಯಾವಾಗೆಲ್ಲ ಸಂಪೂರ್ಣ ಕುಸಿದು ಹೋಗಿತ್ತದೋ ಆಗೆಲ್ಲ ಜಗತ್ತಿನಲ್ಲಿ ಯುದ್ಧಗಳು ಸಂಭವಿಸುತ್ತಲೇ ಇವೆ. ದೊಡ್ಡ ರಾಷ್ಟ್ರಗಳು ಪುಟ್ಟ ರಾಷ್ಟ್ರಗಳ ಮೇಲೆ ಯುದ್ಧ ಮಾಡುತ್ತವೆ.
ಸದ್ಯ ಕೂಡ ಅದೇ ಆಗುತ್ತಿರುವುದು. ಕಳೆದ ಎರಡು ವರ್ಷಗಳಲ್ಲಿ ಕರೋನಾದಿಂದಾಗಿ ಇಡೀ ಜಗತ್ತಿನ ಆರ್ಥಿಕತೆಯು ಕುಸಿದು ಹೋಗಿತ್ತು. ಅದರ ಪರಿಣಾಮ, ಕಳೆದ ಆರು ತಿಂಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ರಣಭೀಕರ ಯುದ್ಧ ನಡೆಯುತ್ತಿದೆ.ಎರಡೂ ರಾಷ್ಟ್ರಗಳ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದೆ. ಅದರಿಂದಾಗಿ ವಿಶ್ವದ ಮುಂದೀಗ ಹೊಸ ಹೊಸ ಸವಾಲುಗಳು ಹುಟ್ಟಿಕೊಂಡಿವೆ. ಇದರ ಬೆನ್ನ ಇದೀಗ ಮತ್ತೊಂದು ಯುದ್ಧದ ವಾಸನೆ ಇಡೀ ವಿಶ್ವವನ್ನೇ ಚಿಂತೆಗೀಡು ಮಾಡಿದೆ.
ರಷ್ಯಾ-ಉಕ್ರೇನ್ ಯುದ್ಧದ ಸ್ಕ್ರೀನ್ ಪ್ಲೇ ತಯಾರಿಸಿದ ಅಮೆರಿಕ ಆನಂತರ ದೂರದಲ್ಲಿ ಅಡಗಿಕುಳಿತಿತ್ತು. ತೈವಾನ್ ನಲ್ಲಿ ಅದೇ ರೀತಿಯ ವಾತಾವರಣ ಸೃಷ್ಟಿಮಾಡಿ ತನ್ನ ಯುದ್ಧ ವಿಮಾನಗಳನ್ನು ತೈವಾನ್‌ಗೆ ಕಳುಹಿಸಿಕೊಟ್ಟು ಪೋಸ್ ಕೊಡುತ್ತಿದೆ.
ಇದರಿಂದಾಗಿ ಚೀನಾ ಮತ್ತು ತೈವಾನ್ ನಡುವಿನ ಉದ್ವಿಗ್ನತೆ ಉತ್ತುಂಗಕ್ಕೆ ತಲುಪಿದೆ. ಪರಿಣಾಮ, ಚೀನಾ ಪುಟ್ಟ ತೈವಾನಿನ ಸುತ್ತಲೂ ತನ್ನ ಚಕ್ರವ್ಯೂಹ ರಚಿಸಿ, ಅದರ ಮೇಲೆ ಬೆಂಕಿ ಉಗುಳುವ ಹೊಂಚು ಹಾಕಿ ಕುಳಿತಿದೆ, ಈ ಪರಿಣಾಮ ಅತೀವ ಆದರೆ ಮುಂಬರುವ ದಿನಗಳಲ್ಲಿ ತೈವಾನ್ ಭವಿಷ್ಯ ಏನು? ಈ ಪ್ರಶ್ನೆ ಇದೀಗ ಜಗತ್ತಿಗೆ ದೊಡ್ಡ ಸವಾಲಾಗಿದೆ.
ಇತ್ತೀಚಿಗೆ ಅಮೆರಿಕ ಜನಪ್ರತಿನಿಽ ಸಭೆಯ ಅಧ್ಯಕ್ಷೆ ನ್ಯಾನ್ಸಿ ಪೆಲೊಸಿ, ತೈವಾನ್‌ಗೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು. ತನ್ನ ಸ್ವಾತಂತ್ರ್ಯ ಹಾಗೂ ಸಾರ್ವಭೌಮತ್ವದ ರಕ್ಷಣೆ ಗೋಸ್ಕರ ಅಮೆರಿಕ ನೀಡಿದ ಆ ಬೆಂಬಲದಿಂದ ತೈವಾನ್ ಸಂತಸ ವ್ಯಕ್ತಪಡಿಸಿದೆ. ಆದರೆ, ಅವರ ಈ ಭೇಟಿ ಚೀನಾದ ಗಾಯಕ್ಕೆ ಬರೆ ಎಳೆದಂತಾಗಿದೆ. ಇದರಿಂದ ಕೋಪಗೊಂಡು ಕೆಂಡದಂತಾದ ಕೆಂಪು ರಾಷ್ಟ್ರ ಡ್ರ್ಯಾಗನ್, ತೈವಾನಿನ ಸುತ್ತಲೂ ತನ್ನ ಯುದ್ದ ನೌಕೆಗಳನ್ನು ಜಮಾಯಿಸಿ, ‘ತೈವಾನ್ ಸ್ವತಂತ್ರ ರಾಷ್ಟ್ರ ಅಲ್ಲ, ಅದನ್ನು ನಾವು ಸ್ವತಂತ್ರವಾಗಿರಲು ಬಿಡುವುದಿಲ್ಲ’ ಎಂದು ಹೂಂಕರಿಸಿದೆ.
ತೈವಾನಿನ ಸ್ಲೆಟ್ಟಿನಲ್ಲಿ ಚೀನಾದ ಯುದ್ಧ ವಿಮಾನಗಳು ನಿರಂತರ ಹಾರಾಟ ಮಾಡುತ್ತಿರುವುದರಿಂದ ಅಲ್ಲಿಗೆ ಬರುವ ವ್ಯಾಪಾರಿ ನೌಕೆಗಳು ಮತ್ತು ಹಡಗುಗಳ ಸಂಚಾರಕ್ಕೆ ತೀವ್ರ ತೊಂದರೆ ಕೂಡ ಉಂಟಾಗುತ್ತಿದೆ. ಯಾಕೆಂದರೆ ಈ ಸಾಗರ ಮಾರ್ಗದಲ್ಲಿಯೇ ವಿಶ್ವದ ಅನೇಕ ವ್ಯಾಪಾರಿ ಹಡಗುಗಳು ಹೆಚ್ಚಾಗಿ ಸಂಚಾರ ಮಾಡುತ್ತವೆ. ತೈವಾನ, ಚೀನಾ, ಜಪಾನ್, ದಕ್ಷಿಣ ಕೋರಿಯಾ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ಸರಕು, ಸರಂಜಾಮು ಸಾಗಣೆ ಮಾಡುವ ಈ ಹಡಗುಗಳು ತೈವಾನ್ ಮಾರ್ಗವಾಗಿಯೇ ಸಂಚರಿಸುತ್ತವೆ. ಹಾಗಾಗಿ ಇದು ಅಂತಾರಾಷ್ಟ್ರೀಯ ವ್ಯಾಪಾರಿ ಮಾರ್ಗವಾಗಿದೆ.
ಇದೀಗ ಚೀನಾ ಈ ಕಡೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡುತ್ತಿರುವುದರಿಂದ ಆ ನೌಕೆಗಳು ತಮ್ಮ ಮಾರ್ಗವನ್ನು ಅನಿವಾರ್ಯವಾಗಿ ಬದಲಿಸಿಕೊಳ್ಳಬೇಕಿದೆ. ಆದರೆ, ಚೀನಾದ ಇಂಥ ಬೆದರಿಕೆಗಳಿಗೆ ತೈವಾನಿನ ಪ್ರಜೆಗಳು ಬಗ್ಗಿಲ್ಲ. ಯಾಕೆಂದರೆ, ಕಳೆದ ಏಳೆಂಟು ದಶಕಗಳಿಂದ ನಿರಂತರವಾಗಿ ಚೀನಾದ ಕಿರಿಕಿರಿಗಳನ್ನು ತೈವಾನಿನ ಜನರು ನೋಡುತ್ತಲೇಬಂದಿದ್ದಾರೆ.
ಈ ಹಿಂದೆ1995ರ ಸಂದರ್ಭದಲ್ಲಿ ಚೀನಾ ತನ್ನ ಯುದ್ಧ ವಿಮಾನಗಳನ್ನು ತೈವಾನಿನ ವಾಯೂ ಹಾಗೂ ಜಲ ಗಡಿಭಾಗದಲ್ಲಿ ನುಗ್ಗಿಸಿ ಹೆದರಿಸುವ ಪ್ರಯತ್ನ ಮಾಡಿತ್ತು. ಜುಲೈ 21, 1995ರಿಂದ ಮಾರ್ಚ್ 23, 1996ರವರೆಗೂ ಅಲ್ಲಿನ ಪರಿಸ್ಥಿತಿ ಬಹಳಷ್ಟು ಉದ್ವಿಗ್ನವಾಗಿತ್ತು. ಆಗ ಅಮೆರಿಕ ತೈವಾನಿನ ಬೆನ್ನಿಗೆ ನಿಂತು ತನ್ನ ಯುದ್ಧ ನೌಕೆಗಳನ್ನು ಕಳುಹಿಸಿ ಕೊಟ್ಟಿತ್ತು. ಪರಿಣಾಮ ಚೀನಾ ನಿಧಾನವಾಗಿ ಅಲ್ಲಿಂದ ಕಾಲ್ಕಿತ್ತಿತ್ತು. ಇದೀಗ ಮತ್ತೇ ಅದೆ ಪರಿಸ್ಥಿತಿ ಮರುಕಳಿಸುವ ಲಕ್ಷಣಗಳೇ ಹೆಚ್ಚಾಗಿ ಗೋಚರಿಸುತ್ತಿವೆ.
ಚೀನಾ ಸದ್ಯಕ್ಕೆ ಅಲ್ಲಿ ನಡೆಸುತ್ತಿರುವ ಸಮರ ಅಭ್ಯಾಸ ಹೇಗಿದೆ ಅಂದರೆ, ತೈವಾನಿನ ಮೇಲೆ ಒತ್ತಡ ಹೇರುವ ತಂತ್ರ ಮಾತ್ರವಷ್ಟೇ ಆಗಿದೆ. ಅವರ ಉದ್ದೇಶ ತನ್ನ ಕೃತ್ಯ, ಕಿರಿಕಿರಿಗಳಿಂದ ಕೆರಳಿ ತೈವಾನ್ ಪ್ರತಿದಾಳಿ ನಡೆಸುವ ವರೆಗೆ ಚೀನಾ ದಾಳಿ ಮಾಡುವ ಗೋಜಿಗೆ ಹೋಗುವುದಿಲ್ಲ. ಆದರೆ ತೈವಾನಿನ ಗಡಿಗಳನ್ನು ಉಲ್ಲಂಸಿ ಅತಿಕ್ರಮ ಪ್ರವೇಶ ಮಾಡುವ ಮೂಲಕ ಅವರ ಸಾರ್ವ ಭೌಮತ್ವವನ್ನು ಕೆಣಕುವ ಪ್ರಯತ್ನವನ್ನಂತೂ ಚೀನಾ ನಿರಂತರವಾಗಿ ಮಾಡುತ್ತಲೇ ಇರುತ್ತದೆ.
ಇತ್ತೀಚೆಗಷ್ಟೇ ಚೀನಾದ ಸೇನಾ ಸಮರ ಅಭ್ಯಾಸ ಅಭೂತಪೂರ್ವವಾಗಿದೆ ಅಂತ ಗ್ಲೊಬಲ್ ಟೈಮ್ಸ್ ಚಾನೆಲ್ ವರದಿ ಮಾಡಿದೆ. ಇತ್ತ ಅಮೆರಿಕ ಕೂಡ ತೈವಾನ್ ಧೃತಿಗೆಡದಂತೆ ಅದಕ್ಕೆ ಧೈರ್ಯ ತುಂಬಿ ಬೆನ್ನಿಗೆ ನಿಂತಿದೆ. ಹೀಗಾಗಿ ಚೀನಾದ ಈ ಯಾವುದೇ ಗೊಡ್ಡು ಬೆದರಿಕೆಗಳಿಗೆ ತೈವಾನ್ ತಲೆ ಬಾಗುವ ಮನಃಸ್ಥಿತಿಯಲ್ಲಂತೂ ಇಲ್ಲ. ಬದಲಾಗಿ ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್ ವೆನ್ ಅವರು ‘ತೈವಾನ್ ಯಾವತ್ತೂ ಯುದ್ಧವನ್ನು ಬಯಸುವುದಿಲ್ಲ, ಆದರೆ ನಮ್ಮ ಸಾರ್ವಭೌಮತೆ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಬದ್ಧರಿದ್ದೇವೆ’ ಅಂತ ಹೇಳಿಕೆ ರವಾನಿಸುವ ಮೂಲಕ ಚೀನಾಗೆ ಖಡಕ್ ಆಗಿಯೇ ವಾರ್ನ್ ಮಾಡಿದ್ದಾರೆ.
ಒಂದು ವೇಳೆ ಚೀನಾ- ತೈವಾನ್ ಯುದ್ಧವಾದರೆ ಅದರ ಪರಿಣಾಮ ಏನಾಗಬಹುದು? ಮತ್ತು ಭಾರತ ತೆಗೆದುಕೊಳ್ಳುವನಿಲುವೇನು? ಎಂಬ ಹಲವಾರು ಅಂಶಗಳು ನಮ್ಮೆಲ್ಲರ ಮುಂದಿದೆ. ತೈವಾನ್ ನಮ್ಮ ದೇಶದ ಪೂರ್ವ ಭಾಗದಲ್ಲಿರುವಂತಹ ಪುಟ್ಟ ರಾಷ್ಟ್ರ. ಈ ರಾಷ್ಟ್ರದ ವಾಯುವ್ಯಕ್ಕೆ ಚೀನಾ, ಈಶಾನ್ಯಕ್ಕೆ ಜಪಾನ್ ಮತ್ತು ದಕ್ಷಿಣಕ್ಕೆ ಫಿಲಿಪ್ಪೀನ್ಸ್ ಗಳಿವೆ. ಇದು ಭಾರತದ ಗಡಿಭಾಗದಲ್ಲಿರುವ ದೇಶ ಅಲ್ಲದೇ ಇರುವುದರಿಂದ ಚೀನಾ ಆ ದೇಶದ ಮೇಲೆ ಯುದ್ಧ ಮಾಡಿದರೆ,ಶಸ್ತ್ರಾಸ್ತ್ರಗಳಿಂದ ಭಾರತ ಕ್ಕೇನೂ ಅಪಾಯವಾಗುವುದಿಲ್ಲ. ಆದರೆ ಉಕ್ರೇನ್ -ರಷ್ಯಾ ಯುದ್ಧ ಭಾರತದ ಮೇಲೆ ಯಾವರೀತಿಯ ಪ್ರಭಾವವನ್ನು ಬೀರಿತ್ತೊ ಅದೇ ರೀತಿಯಲ್ಲಿ, ಚೀನಾ-ತೈವಾನ್ ಯುದ್ಧ ಕೂಡ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತದೆ. ತೈವಾನ್, ಚೀನಾಗೆ ಯಾವುದೇ ದೃಷ್ಟಿಯಲ್ಲೂ ಸರಿಸಾಟಿ ಇಲ್ಲ.
ಆದರೆ ತೈವಾನ್‌ನಲ್ಲಿ ಆಗುವ ಬದಲಾವಣೆಗಳು ಭಾರತಕ್ಕೂ ತಟ್ಟದೇ ಇರಲು ಸಾಧ್ಯವಿಲ್ಲ. ಯಾಕೆಂದರೆ ಭಾರತ, ತೈವಾನ್ ಉತ್ತಮ ರಾಜತಾಂತ್ರಿಕ, ವ್ಯಾಪಾರ ಸಂಬಂಧಗಳನ್ನು ಹೊಂದಿವೆ. ಅದರಲ್ಲೂ ಸೆಮಿಕಂಡಕ್ಟರ್ ವಿಚಾರದಲ್ಲಿ ಭಾರತ ಹೆಚ್ಚಾಗಿ ಅವಲಂಬನೆ ಆಗಿದ್ದು ತೈವಾನ್ ಮೇಲೆ. ಚೀನಾ ಹಾಗೂ ತೈವಾನ್ ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಅತಿ ದೊಡ್ಡ ಪಾಲನ್ನೇ ಹೊಂದಿವೆ. ಈ ಸೆಮಿ ಕಂಡಕ್ಟರ್ ಉದ್ಯಮವೇ ತೈವಾನಿನ ಆರ್ಥಿಕತೆಯ ನಿರ್ಣಾಯಕ ಅಂಶ. ತೈವಾನ್ ಸೆಮಿಕಂಡಕ್ಟರ್ ಚಿಪ್‌ಗಳನ್ನು ಅತಿ ಹೆಚ್ಚಾಗಿ ತಯಾರಿಸುತ್ತದೆ. ಲ್ಯಾಪ್‌ಟಾಪ್, ಮೊಬೈಲ್, ಕೈಗಡಿಯಾರ, ಕಾರು ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಅತ್ಯಾಧುನಿಕ ವಸ್ತುಗಳಿಗೆ ಶಕ್ತಿ ನೀಡುತ್ತಿದೆ.
ಸಿಮ್ ಕಾರ್ಡುಗಳ ತಯಾರಿಕೆ ನಿಂತು ಹೊಯಿತೆಂದರೆ ಈ ಸೆಮಿಕಂಡಕ್ಟರ್‌ಗಳು ಇಡೀ ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಬಿಡುತ್ತವೆ. ಹಾಗಾಗಿ ಈ ನಿಟ್ಟಿನಲ್ಲಿ ಚೀನಾಗೆ ತಕ್ಕ ಮಟ್ಟಿನ ಹೊಡೆತ ನೀಡಲು ಇದೇ ಅಕ್ಟೋಬರ್ ತಿಂಗಳಲ್ಲಿಭಾರತದ ಉತ್ತರಾಖಂಡದ ‘ಅವಲಿ’ ಎಂಬ ಪ್ರದೇಶದಲ್ಲಿ ಎರಡುವಾರಗಳ ಕಾಲ ಜಂಟಿ ಸಮರಾಭ್ಯಾಸ ನಡೆಸಲು ಭಾರತ ಹಾಗೂ ಅಮೆರಿಕ ನಿರ್ಧರಿಸಿವೆ.
ಜಾಗತಿಕ ಸೆಮಿಕಂಡಕ್ಟರ್ ಒಪ್ಪಂದಗಳಲ್ಲಿ ಅಮೆರಿಕದ ಪಾಲು ಕೇವಲ ಶೇ.12ರಷ್ಟು, ತೈವಾನಿನದ್ದು ಶೇ.63 ಹಾಗೆ ವಿಶ್ವ ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ ತೈವಾನಿನ ಟಿಎಸ್‌ಎಮಸಿಯ ಪಾಲು ಶೇ.54ರಷ್ಟಿದೆ. ಒಂದು ವೇಳೆ ಸದ್ಯಕ್ಕೆ ತೈವಾನ್- ಚೀನಾ ಯುದ್ಧ ಸಂಭವಿಸಿದರೆ ಸೆಮಿಕಂಡಕ್ಟರ್ ವಿಚಾರದಲ್ಲಿ ಭಾರತ ಸೇರಿದಂತೆ ಇಡೀ ಜಗತ್ತಿಗೆ ಬಹಳ ದೊಡ್ಡ ಹೊಡೆತ ಬಿಳುವುದಂತೂ ಪಕ್ಕಾ! ಇದರಿಂದಾಗಿ ಭಾರತದಲ್ಲಿ ಸ್ಮಾರ್ಟ್ಫೋನ್ಇಂಡಸ್ಟ್ರೀ ಸಂಪೂರ್ಣ ಪ್ರಮಾಣದಲ್ಲಿ ಬುಡಮೇಲಾಗುತ್ತದೆ.
ಇನ್ನು ತೈವಾನಿನ ವಿಷಯದಲ್ಲಿಯೇ ಚೀನಾ ಹೆಚ್ಚಾಗಿ ತೊಡಗಿಕೊಂಡರೆ ಭಾರತಕ್ಕೆ ಒಂದು ರೀತಿಯಲ್ಲಿ ಸಮಾಧಾನವಿದೆ. ನಮ್ಮ ಗಡಿಯಲ್ಲಿ ಖ್ಯಾತೆ ತೆಗೆಯುತ್ತಲೇ ಇರೊ ಚೀನಾಕ್ಕೆ ಏಕಕಾಲಕ್ಕೆ ಹಲವು ಶತ್ರುಗಳನ್ನು ತಡೆಯಲು ಕಷ್ಟಸಾಧ್ಯವಾಗುತ್ತದೆ. ಇದೇ ವೇಳೆ ಚೀನಾದ ಮಾರುಕಟ್ಟೆಗೆ ನಿರ್ಬಂಧಗಳು ಬೀಳುತ್ತವೆ. ಇದರಿಂದಾಗಿ ಭಾರತೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಬಹುದು. ಜಾಗತಿಕ ವಾಗಿ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯಾದರೆ ಆ ಸಮಸ್ಯೆಭಾರತಕ್ಕೂಕಾಡಲಿದೆ. ಆದರೆ ಚೀನಾದ ಉತ್ಪನ್ನಗಳನ್ನು ಭಾರತ ಇನ್ನೂ ದೊಡ್ಡ ಪ್ರಮಾಣದಲ್ಲಿ ನಂಬಿಕೊಂಡಿದೆ. ಚೀನಾದೊಂದಿಗೆರಫ್ತುಆಮದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಲೇ ಇದೆ.
ಹೀಗಾಗಿ ಚೀನಾ ತೈವಾನ್ ಯುದ್ಧ ಸಂಭವಿಸಿದರೆ, ಒಳಗೊಳಗೆ ಅದೆಷ್ಟೇ ದ್ವೇಷ ಇದ್ದರೂ ಭಾರತವು ಚೀನಾದ ವಿರುದ್ಧ ಸಿಡಿದು ನಿಲ್ಲುವ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ತೋರಿಸಿದಂತೆ, ತೈವಾನ್ -ಚೀನಾ ವಿಚಾರದಲ್ಲೂ ಭಾರತದ್ದು ತಟಸ್ಥ ನಿಲುವೇ ಆಗಬಹುದು! ಯಾಕೆಂದರೆ ಇದೀಗ ‘ಏಕ್ ಚೀನಾ’ ಎಂಬ ನೀತಿ ಯನ್ನು ಚೀನಾ ಅನುಸರಿಸುತ್ತಿದೆ. ಅದರ ಪ್ರಕಾರ ಚೀನಾದ ಸುತ್ತ ಮುತ್ತಲಿನ ರಾಷ್ಟ್ರಗಳಾದ ಟಿಬೆಟ್, ತೈವಾನ್, ಹಾಂಕಾಂಗ್ ಕೂಡ ಚೀನಾದ ಭಾಗವೇ ಆಗಿವೆ.
2020ರಲ್ಲಿ ಚೀನಾ, ಲಡಾಖ್‌ನ ಗಡಿಯಲ್ಲಿ ಭಾರತದ ಸೈನಿಕರ ಮೇಲೆ ಹ ಎಸಗಿದ ಘಟನೆಯ ಬಳಿಕ ಭಾರತ ಕೂಡ ಪ್ರತಿರೋಧ ಕ್ರಮಗಳನ್ನು ಕೈಗೊಂಡಿತ್ತು. ಅದರಲ್ಲಿ ಒಂದು, ತೈವಾನ್ ದೇಶಕ್ಕೆ ಭಾರತದಿಂದ ರಾಯಭಾರಿಯನ್ನು ಆರಿಸಿ ಕಳುಹಿಸಿತ್ತು. ತೈವಾನಿನ ತೇಪೆಯಲ್ಲಿ ರಾಜತಾಂತ್ರಿಕ ಕಾರ್ಯಗಳಿಗಾಗಿ ಭಾರತ ತನ್ನ ಕಚೇರಿಯನ್ನು ತೆರೆದಿತ್ತು. ಹಲವಾರು ವಿಚಾರಗಳಲ್ಲಿ ಭಾರತ ತೈವಾನಿಗೆ ಬೆಂಬಲವಾಗಿ ನಿಂತಿತ್ತಾದರೂ ಈ ಸಂದರ್ಭದಲ್ಲಿ, ತೈವಾನ್ ಪರವಾಗಿ ಒನ್ ವೇ ಆಗಿ ಮಾತುಗಳನ್ನಾಡುವ ಗೋಜಿಗೆ ಹೊಗಿಲ್ಲ. ಆದರೆ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೊಸಿ ತೈವಾನಿಗೆ ಹೋಗಿ ಬಂದ ಬಳಿಕ ಜಗತ್ತಿನ ಹಲವು ರಾಷ್ಟ್ರಗಳ ಧ್ವನಿ ಬದಲಾಗಲೂ ಬಹುದು.
ತೈವಾನನ್ನು ಚೀನಾ ವಶಪಡಿಸಿಕೊಂಡರೆ ಅದಕ್ಕೆ ತನ್ನ ಮಾತೃ ಭೂಮಿಯನ್ನು ವಶಪಡಿಸಿಕೊಂಡಂತಾಗುತ್ತದೆ. ಆಗ ಚೀನಾತೈವಾನಿನಿಂದ ಇನ್ನಷ್ಟು ಹೆಚ್ಚಿನ ಆರ್ಥಿಕ ಲಾಭಗಳನ್ನು ಪಡೆಯುತ್ತದೆ. ಹಾಗೂ ದಕ್ಷಿಣದಫೆಸಿಫಿಕ್ವಲಯದಲ್ಲಿ ತನ್ನಪ್ರಾಬಲ್ಯವನ್ನು ಮತ್ತಷ್ಟು ಸಾಧಿಸಿದಂತಾಗುತ್ತದೆ. ಅಲ್ಲದೇ ಜಪಾನಿನ ಕಡೆ ದಾಳಿ ಮಾಡಲು ಹಾಗೂ ದಕ್ಷಿಣ ಚೀನಾ ಸಮುದ್ರವನ್ನುಸ್ವಾಧೀನಕ್ಕೆಪಡೆಯಲು ಸಾಧ್ಯ ಆಗುತ್ತದೆ. ಹಾಗಾಗಿ ಇದರಿಂದ ಚೀನಾಗೆ ಈ ರೀತಿಯ ಲಾಭಗಳಾಗಬಹುದು.
ಈ ಸಂದರ್ಭದಲ್ಲಿ ಅಮೆರಿಕ ಈ ಹಿಂದೆ ಉಕ್ರೇನಿನ ವಿಷಯದಲ್ಲಿ ಮಾಡಿದ ಹಾಗೇ ಮಾಡುವ ಸಾಧ್ಯತೆಗಳು ಬಹಳ ಕಡಿಮೆ. ಕಾರಣ, ತೈವಾನ್ ಅನ್ನುವುದು ಅಮೆರಿಕ ಸೇರಿದಂತೆ ಇಡೀ ಜಗತ್ತಿಗೆ ನಾನಾ ಕಾರಣಗಳಿಂದ ಬಹಳಷ್ಟು ಬೇಕಾದ ರಾಷ್ಟ್ರ. ಹಾಗಾಗಿ ತೈವಾನ್ ಅನ್ನು ಕಾಪಾಡಿಕೊಳ್ಳಲು ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳು ಖಂಡಿತವಾಗಿ ಕಣಕ್ಕಿಳಿಯುತ್ತವೆ. ವಾಸ್ತವದ ಸಂಗತಿ ಅಂದ್ರೆ, ಸದ್ಯಕ್ಕೆ ಚೀನಾಗೆ ಯುದ್ಧ ಬೇಕಿಲ್ಲ, ಆದರೆ ಕೇವಲ ಹೆದರಿಸುವ ತಂತ್ರವನ್ನು ಮಾತ್ರ ಅನುಸರಿಸುತ್ತಿರುವುದು ಕಂಡು ಬರುತ್ತಿದೆ. ಮುಂದಿನ ವರ್ಷ ಅಲ್ಲಿ ಅಧ್ಯಕ್ಷೀಯ ಚುನಾವಣೆಗಳಿವೆ. ಹಾಗಾಗಿ ಪ್ರಸ್ತುತ ಚೀನಾದ ಅಧ್ಯಕ್ಷ ಕೂಡ ತಮ್ಮ ಜನ ಪ್ರಿಯತೆ ಕುಸಿಯದ ಹಾಗೆ ನೋಡಿಕೊಳ್ಳುತ್ತಿದ್ದರೆ, ಇತ್ತ ಅಮೆರಿಕ ಭೇಟಿಯ ನಂತರ ತೈವಾನಿಗೆ ಮತ್ತಷ್ಟು ಬಲ ಹಾಗೂ ನಮ್ಮ ಬೆಂಬಲಕ್ಕೆ ಮತ್ಯಾರೊ ಇದ್ದರೆ ಅನ್ನುವ ಆತ್ಮವಿಶ್ವಾಸ, ಧೈರ್ಯ ಕೂಡ ಹೆಚ್ಚಾದಂತಿದೆ.