83 ರಾಷ್ಟ್ರಗಳ ಜನ ಈಗಲೂ ಗುಲಾಮಗಿರಿಯಲ್ಲಿದ್ದಾರೆ
ವಸ್ತು ಸ್ಥಿತಿ
ವಿಜಯ ದರಡಾ
ಚೀನಾ ದೇಶದ ವಾಣಿಜ್ಯೋದ್ಯಮಿ ಜಾಕ್ ಮಾ ಹೆಸರನ್ನು ನಾವ್ಯಾರೂ ಮರೆತಿಲ್ಲ. ಆತನ ಹೆಸರು ವಿಶ್ವವಿಖ್ಯಾತ. ಆತನಒಟ್ಟಾರೆ ಸಂಪತ್ತಿನ ಮೌಲ್ಯ 2370 ಕೋಟಿ ಅಮೆರಿಕನ್ ಡಾಲರ್ ಎಂದು ಪ್ರಕಟವಾಗಿತ್ತು.
ಆದರೆ ಆತ ಕಳೆದ ಒಂದೂವರೆ ವರ್ಷದಿಂದ ನಾಪತ್ತೆ, ಎಲ್ಲಿದ್ದಾರೆಂಬುದೇ ಗೊತ್ತಿಲ್ಲ. ೨೦೨೦ರ ನವೆಂಬರ್ ತಿಂಗಳಲ್ಲಿ ಕೊನೆಯ ಬಾರಿಗೆ ಆತನನ್ನು ನೋಡಿದವರಿದ್ದಾರೆ. 2021ರಲ್ಲಿ ಆತ ಹಾಂಕಾಂಗ್ ನಲ್ಲಿ ಇದ್ದರು ಎಂಬ ಸುದ್ದಿಯಿದೆಯಾದರೂ ಆ ಕುರಿತುಖಚಿತ ಮಾಹಿತಿಗಳಿಲ್ಲ. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾನ್ಯಾಕೆ ಜಾಕ್ ಮಾ ಬಗ್ಗೆ ಮಾತನಾಡು ತ್ತಿದ್ದೇನೆಂದು ನಿಮಗೆ ಅಚ್ಚರಿಯಾಗಬಹುದು, ಅಲ್ಲವೇ? ಅಧಿಕಾರದಲ್ಲಿರುವವರು ಹೇಗೆ ಸ್ವಾತಂತ್ರ್ಯವನ್ನು ಉಸಿರುಗಟ್ಟಿಸಬಲ್ಲರು ಎಂಬು ದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.
ಚೀನಾ ಸರಕಾರ ಹೆಣೆದ ಬಲೆಯಲ್ಲಿ ಜಾಕ್ ಮಾ ಸಿಕ್ಕುಬಿದ್ದಿದ್ದಾರೆ. ಆತ ಅಲ್ಲಿ ಕಡಿವಾಣ ಗಳಿಲ್ಲದೆ ಸಂಪತ್ತು ಮತ್ತು ಅಧಿಕಾರ ವನ್ನು ಹೊಂದಿ ಕೊಬ್ಬಿ ಬೆಳೆದಿದ್ದರು. ಆದರೆ ಒಂದು ಮಾತು, ಎಲ್ಲಿ ಸರ್ವಾಧಿಕಾರಿ ಮನಸ್ಥಿತಿ ಇರುತ್ತದೆಯೋ, ಅಲ್ಲಿ ಅಧಿಕಾರ ನಡೆಸುವ ಸರ್ವಾಧಿಕಾರಿ ಒಬ್ಬನನ್ನು ಬಿಟ್ಟು ಇನ್ನಾರೂ ಬಲಿಷ್ಠರಾಗಿ ಬೆಳೆಯುವುದಕ್ಕೆ ಅವಕಾಶ ವಿರುವುದಿಲ್ಲ.
ಚೀನಾದ ಸರ್ವಾಧಿಕಾರಿ ಪ್ರವೃತ್ತಿ ಎಷ್ಟರ ಮಟ್ಟಿಗಿದೆಯೆಂದರೆ, ಜಾಕ್ ಮಾ ನಂತಹ ಪ್ರಮುಖ ಉದ್ಯಮಿಯನ್ನೂ ಅದು ಬೆಳೆಯಲು ಬಿಡಲಿಲ್ಲ. ಜಾಕ್ ಮಾ ನಂತಹ ಅತಿ ಶ್ರೀಮಂತನ ಗತಿಯೇ ಹೀಗಾಗಬೇಕಾದರೆ ಇನ್ನು ಜನಸಾಮಾನ್ಯನ ಪರಿಸ್ಥಿತಿಅಲ್ಲಿ ಹೇಗಿದ್ದೀತು, ಊಹಿಸಿ. ಚೀನಾದ ಕ್ಸಿನಿಯಾಂಗ್ ಪ್ರಾಂತ್ಯದಲ್ಲಿ ಹೊಸ ಶಿಕ್ಷಣ ನೀತಿಯ ಹೆಸರಿನಲ್ಲಿ ಸರಿಸುಮಾರು ಹತ್ತು ಸಾವಿರ ಮುಸ್ಲಿಮರನ್ನು ಜೈಲಿನಲ್ಲಿಡಲಾಗಿದೆ. ಅಲ್ಲಿ ಮಸೀದಿಗಳಿಲ್ಲ, ಚರ್ಚುಗಳಿಲ್ಲ, ದೇವಸ್ಥಾನಗಳೂ ಇಲ್ಲ.
ಧರ್ಮಶ್ರದ್ಧೆಯಿದ್ದ ಟಿಬೆಟನ್ನು ಕೂಡ ಚೀನಾ ನಾಶಮಾಡಿದೆ. ಇದೀಗ ಅದು ತೈವಾನನ್ನು ತನ್ನ ತೆಕ್ಕೆಯೊಳಕ್ಕೆ ಸೇರಿಸಿಕೊಳ್ಳುವ ಹುನ್ನಾರ ನಡೆಸಿದೆ. ಈ ಕಥೆ ಚೀನಾ ದೇಶಕ್ಕೆ ಮಾತ್ರ ಸೀಮಿತವಾದುದಲ್ಲ. ಮಿಕ್ಕುಳಿದಂತೆ ಜಗತ್ತಿನಲ್ಲಿ ಸರಿಸುಮಾರು 83  ರಾಷ್ಟ್ರ ಗಳಲ್ಲಿ ಧರ್ಮದ ಹೆಸರಿನಲ್ಲಿ ಸರ್ವಾಧಿಕಾರಿ ಆಡಳಿತವಿದೆ. ವ್ಲಾದಿಮಿರ್ ಪುಟಿನ್ ಅಧಿಕಾರಕ್ಕೆ ಬರುವ ಮುನ್ನ ರಷಿಯಾದಲ್ಲೂ ದೊಡ್ಡ ವಾಣಿಜ್ಯೋದ್ಯಮಿಗಳಿದ್ದರು. ಆದರೆ ಇಂದು ಹುಡುಕಿದರೂ ಯಾರೂ ಸಿಗಲಾರರು. ಎಲ್ಲರನ್ನೂ ನಿಷ್ಕ್ರಿಯರನ್ನಾಗಿಸಲಾಗಿದೆ.
ಇರಾನ್ ಮತ್ತು ಮಧ್ಯಪ್ರಾಚ್ಯದ ವಿದ್ಯಮಾನಗಳು ಎಲ್ಲರಿಗೂ ಗೊತ್ತಿರುವಂಥವೇ ಆಗಿವೆ. ಪಾಕಿಸ್ತಾನದಲ್ಲಿ ಕೇವಲ ಹೆಸರಿಗೊಂದು ಪ್ರಜಾಪ್ರಭುತ್ವವಿದೆ. ಆದರೆ ಅಲ್ಲಿ ನಿಜವಾದ ಅಧಿಕಾರವಿರುವುದು ಮಿಲಿಟರಿಯ ಕೈಯಲ್ಲಿ. ಕಳೆದ ವರ್ಷ ಮ್ಯಾನ್ಮಾರ್‌ನಲ್ಲಿ ಅಧಿಕಾರಕ್ಕಾಗಿ ನಡೆದ ಮಿಲಿಟರಿ ಕಾರ್ಯಾಚರಣೆ ನೋಡಿದ್ದೀರಿ. ಮ್ಯಾನ್ಮಾರ್‌ನ ಸೇನೆಯಿಂದ ಎಷ್ಟು ಜನ ಹತರಾದರು ಎಂಬ ಮಾಹಿತಿ ಯಾರಲ್ಲೂ ಇಲ್ಲ. ಪಾಕಿಸ್ತಾನದ ಕಥೆಯನ್ನಂತೂ ನಾವು-ನೀವು ಕೇಳುತ್ತಲೇ ಇದ್ದೇವೆ. ಶ್ರೀಲಂಕಾದ ಪರಿಸ್ಥಿತಿ ಅದೆಷ್ಟುಹದಗೆಟ್ಟಿದೆ ಎಂಬುದೂ ನಮ್ಮ ಅರಿವಿನಲ್ಲಿದೆ.
ಶ್ರೀಲಂಕಾದ ರಾಜಪಕ್ಸೆ ಕುಟುಂಬ ನಡೆಸುತ್ತಿರುವ ಸರ್ವಾಧಿಕಾರದ ಬಗ್ಗೆಯೂ ನಾನು ಇದೇ ಅಂಕಣದಲ್ಲಿ ಬರೆದಿದ್ದೆ. ಉತ್ತರಕೊರಿಯಾದ ಏಕಚಕ್ರಾಧಿಪತಿ ಕಿಮ್ ಜೊಂಗ್ ಉನ್ ಹುಚ್ಚು ಆಡಳಿತದ ಅಡಿಯಲ್ಲಿ ಅದೆಷ್ಟು ಲಕ್ಷ ಜನ ನಲುಗಿ ಹೋಗಿದ್ದಾ ರೆಂಬುದು ಕೂಡ ನಮ್ಮ ಕಣ್ಣ ಮುಂದಿರುವ ಸತ್ಯ. ಅಲ್ಲ ಜನರು ಗುಲಾಮರಂತೆ ಸುಮ್ಮನೆ ಇದ್ದಾರೆ, ಅವರಿಗೆ ತಮ್ಮ ಕೇಶಶೈಲಿ ಯನ್ನು ನಿರ್ಧರಿಸುವ ಸ್ವಾತಂತ್ರ್ಯವೂ ಇಲ್ಲ.
ಅಲ್ಲಿನ ಜನ ತಮ್ಮ ಮನೆಗಳಲ್ಲಿ ಏಕಚಕ್ರಾಧಿಪತಿ ಕಿಮ್ ಫೋಟೋ ಇಟ್ಟಿರದಿದ್ದರೆ ಅವರಿಗೆ ಘೋರ ಶಿಕ್ಷೆ ವಿಧಿಸಲಾಗುತ್ತದೆ. ಅದಕ್ಕೆ ಪ್ರತಿದ್ವಂದ್ವಿಯಾಗಿರುವ ದಕ್ಷಿಣ ಕೊರಿಯಾ ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದಕ್ಷಿಣ ಆಫ್ರಿಕಾದ ದೇಶ ಗಳಲ್ಲೂ ಸರ್ವಾಧಿಕಾರಿಗಳಿದ್ದಾರೆ. ಅಲ್ಲಿ ಮತಾಂಧರ ಸಂಖ್ಯೆಯೂ ಕಮ್ಮಿಯೇನಿಲ್ಲ. ನಾನು ಹೇಳುತ್ತಿರುವ ಈ ಎಲ್ಲ ಸಂಗತಿ ಗಳನ್ನು ಪರಾಮರ್ಶೆ ಮಾಡಿದಾಗ ನಿಮಗೆ ಸ್ವಾತಂತ್ರ್ಯದ ಮಹತ್ವ ಅರಿವಾಗುತ್ತದೆ.
ನಾವಿಂದು ನೆಮ್ಮದಿಯ ನಿಟ್ಟುಸಿರು ಬಿಡಲು ಕಾರಣರಾದ, ಜೀವದ ಹಂಗು ತೊರೆದು ಸ್ವಾರ್ಥರಹಿತವಾಗಿ ಬಾಳಿದ ನಮ್ಮಪೂರ್ವಜರಿಗೆ ನಾವು ತಲೆ ಬಾಗಲೇಬೇಕು. ನನಗೆ ದೀಪಾವಳಿ ಎಂದರೆ ಮಹಾತ್ಮ ಗಾಂಧಿ, ಹೋಳಿ ಹಬ್ಬವೆಂದರೆ ಪಂಡಿತ್ನೆಹರೂ, ಸುಭಾಷ ಚಂದ್ರ ಬೋಸ್, ಭಗತ್ ಸಿಂಗ್ ಹೀಗೆ ಸಾವಿರಾರು ಹೋರಾಟಗಾರರು ನೆನಪಾಗುತ್ತಾರೆ. ಅವರೆಲ್ಲ ನನ್ನ ಹೃದಯದಲ್ಲಿ ನೆಲೆ ನಿಂತಿದ್ದಾರೆ. ನನಗೆ ಮಹಾವೀರ ಮತ್ತು ಗೌತಮ ಬುದ್ಧರ ಬಗ್ಗೆಯೂ ಗೌರವಾದರವಿದೆ.
ನಾನು ಛತ್ರಪತಿ ಶಿವಾಜಿ ಮಹಾರಾಜರ ಛಲವನ್ನೂ ಗೌರವಿಸುತ್ತೇನೆ. ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಹುಟ್ಟಿದವನು. ನನ್ನ ತಂದೆ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಜವಾಹರಲಾಲ್ ದರಡಾ ಒಂದು ವರ್ಷ ಒಂಬತ್ತು ತಿಂಗಳ ಕಾಲ ಜಬಲಪುರದ ಜೈಲಿನಲ್ಲಿ ಬಂದಿಯಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಅವರು ಸಾಕಷ್ಟು ಹೋರಾಟ ಮಾಡಿ ಬ್ರಿಟಿಷರು ವಿಧಿಸಿದ ಹಿಂಸೆಗಳನ್ನು ಅನುಭವಿಸಿದರು.
ಭಾರತದ ಸ್ವಾತಂತ್ರ್ಯ ದಿವಸದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ನಾವು ದೇಶಪ್ರೇಮದಲ್ಲಿ ತಲ್ಲೀನರಾಗಿದ್ದೇವೆ. ಮಹಾತ್ಮ ಗಾಂಧೀಜಿಯವರ ಅಹಿಂಸಾ ಚಳವಳಿ, ಸಹಸ್ರಾರು ಮಂದಿ ಕ್ರಾಂತಿಕಾರಿಗಳ ತ್ಯಾಗ-ಬಲಿದಾನ ಕಾರಣದಿಂದ ಈ ದೇಶ ಸ್ವತಂತ್ರ ವಾಗಿದೆ. ಅದೆಷ್ಟು ಅಮ್ಮಂದಿರು ಮಕ್ಕಳನ್ನು ಕಳೆದುಕೊಂಡಿದ್ದಾರೋ, ಅದೆಷ್ಟು ಮಹಿಳೆಯರು ಗಂಡಂದಿರನ್ನು ಕಳೆದು ಕೊಂಡರೋ, ಅದೆಷ್ಟು ಸೋದರಿಯರು ತಮ್ಮ ಸೋದರರು ಮನೆಗೆ ಮರಳಿ ಬರಲೆಂದು ಕಾದು ಕುಳಿತಿದ್ದರೋ ಲೆಕ್ಕವಿಟ್ಟವರಿಲ್ಲ.
ಈ ದೇಶ ಸ್ವತಂತ್ರವಾಗಬೇಕಾದರೆ ಹಲವಾರು ತ್ಯಾಗ-ಬಲಿದಾನಗಳ ಶೃಂಖಲೆಯನ್ನು ಕಂಡಿದೆ. ಎಲ್ಲ ಜಾತಿ-ಜನಾಂಗ, ಧರ್ಮ,ಪಂಗಡಗಳ ಜನರು ದೇಶಕ್ಕಾಗಿ ಜೀವತ್ಯಾಗ ಮಾಡಿದ್ದಾರೆ. ಬ್ರಿಟಿಷರ ದಬ್ಬಾಳಿಕೆಯ ಕಾರಣದಿಂದ ಅಸಂಖ್ಯ ಜನರು ಜೈಲುವಾಸ ಅನುಭವಿಸಿದ್ದಾರೆ. ದೇಶ ಸ್ವತಂತ್ರವಾಗಿ ಇದೀಗ ೭೫ ವರ್ಷ ಸಂದಿದೆ. ಸ್ವಾತಂತ್ರ್ಯ ಹೋರಾಟಗಾರರ ಪೀಳಿಗೆ ಬಹುತೇಕ ಕಳೆದು ಹೋಗಿದೆ. ಸ್ವಾತಂತ್ರ್ಯ ಸಿಕ್ಕ ನಂತರ ಇದೀಗ ಮೂರನೇ ತಲೆಮಾರು ಅಸ್ತಿತ್ವದಲ್ಲಿದೆ.
ಸಾಮಾಜಿಕ ಭಾವನೆಗಳು ಕ್ಷೀಣವಾಗುತ್ತಿವೆ, ಜನಸಮುದಾಯಗಳ ನಡುವಿನ ಬಂಧ-ಸಂಬಂಧಗಳೂ ಕ್ಷೀಣಿಸುತ್ತಿವೆ; ಆದರೆಒಂದಂತೂ ನಿಜ, ದೇಶಭಕ್ತಿಯ ಭಾವ ವರ್ಷದಿಂದ ವರ್ಷಕ್ಕೆ ಗಟ್ಟಿಯಾಗುತ್ತಲೇ ಸಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ವನ್ನು ಅದ್ದೂರಿಯಾಗಿ ನಡೆಸಿದ ಮತ್ತು ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಅದಕ್ಕೆ ಇನ್ನಷ್ಟು ಮೆರುಗು ತುಂಬಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಆಭಾರಿಯಾಗಿದ್ದೇನೆ.
ನಾನು ರಾಜ್ಯಸಭೆ ಸದಸ್ಯನಾಗಿದ್ದಾಗ ಪ್ರತಿಯೊಬ್ಬ ನಾಗರಿಕನಿಗೂ ತ್ರಿವರ್ಣ ಧ್ವಜ ಹಾರಿಸುವ ಅವಕಾಶ ಸಿಗಬೇಕೆಂದು ಪ್ರತಿ ಪಾದಿಸುತ್ತಲೇ ಬಂದಿದ್ದೆ. ಇಂತಹ ದೊಂದು ಅವಕಾಶ ಜನಸಾಮಾನ್ಯನಿಗೆ ಸಿಗುವುದೆಂದರೆ ಅದು ಸ್ವಾತಂತ್ರ್ಯದ ಮಹೋನ್ನತ ಸಂಗತಿ. ಸ್ವಾತಂತ್ರ್ಯ ಹೋರಾಟಗಾರರು ತಂದುಕೊಟ್ಟ ಈ ಸ್ವಾತಂತ್ರ್ಯ ಮತ್ತು ತ್ರಿವರ್ಣಧ್ವಜದ ಘನತೆಯನ್ನು ನಾವು ಎತ್ತಿ ಹಿಡಿಯಬೇಕಿದೆ. ಹಾಗಾಗಿ ನಾವು ಪ್ರತಿನಿತ್ಯ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಹೆಮ್ಮೆ ಪಡಬೇಕು. ನಾನು ಕಳೆದ ತಿಂಗಳಲ್ಲಿ, ಕಾಶ್ಮೀರದ ಕಣಿವೆಗಳಲ್ಲಿ ಅತ್ಯಂತ ದುರ್ಭರ ಪರಿಸ್ಥಿತಿಯಲ್ಲಿ ದೇಶದ ಗಡಿಕಾಯುತ್ತಿರುವ ಸೈನಿಕರನ್ನು ಖುದ್ದುಭೇಟಿಮಾಡಿ ಬಂದಿ. ತ್ರಿವರ್ಣ ಧ್ವಜ ನಮ್ಮ ಹೆಮ್ಮೆಯ ಹೆಗ್ಗುರುತು. ಗಡಿಭಾಗಕ್ಕೆ ಹೋದಾಗ ನಾನು ಕೈಫಿ ಅಜ್ಮಿಯವರ ಕವನ ‘ಅಬ್ ತುಮ್ಹಾರೇ ಹವಾಲೆ ವತನ್ ಸಾಥಿಯೋ’ ಗುನುಗುತ್ತಿದ್ದೆ.
ಇನ್ನೊಂದು ಸಂಗತಿಯನ್ನು ನಾನಿಲ್ಲಿ ಹೇಳಲೇಬೇಕು. ನಾವೆಷ್ಟೇ ಅಭಿವೃದ್ಧಿ ಹೊಂದಿದ್ದೇವೆಂಬ ಹೆಮ್ಮೆಯಲ್ಲಿದ್ದರೂ, ದೇಶದಲ್ಲಿ ಎರಡು ಹೊತ್ತಿನ ಊಟಕ್ಕೆ ಪರದಾಡುವ ಅದೆಷ್ಟೋ ಮಂದಿ ಇzರೆ. ಇನ್ನೆಷ್ಟೋ ಜನ ಕೆಲಸಕ್ಕಾಗಿ ಎದುರು ನೋಡುತ್ತಿದ್ದಾರೆ. ತಮ್ಮ ಪ್ರೀತಿಪಾತ್ರರ ಪಾರ್ಥಿವ ಶರೀರವನ್ನು ಸೈಕಲ್ ಮೇಲೆ ಸಾಗಿಸುತ್ತಾ ಕಣ್ಣೀರಲ್ಲಿ ಮುಳುಗಿರುವವರನ್ನೂ ನಾವು ಕಂಡಿದ್ದೇವೆ. ಹೆಣ್ಣುಮಕ್ಕಳು ಕ್ರೌರ್ಯದ ಬಲಿಪಶುಗಳಾಗುತ್ತಿರುವುದನ್ನೂ ನಾವು ನೋಡುತ್ತಲೇ ಇದ್ದೇವೆ. ಬುಡಕಟ್ಟು ಜನಾಂಗದವರಂತೂಅಭಿವೃದ್ಧಿ ಕಾಣುವುದು ತುಂಬಾ ದೂರವಿದೆ. ಈ ಎಲ್ಲ ಸಾಮಾಜಿಕ ಪಿಡುಗುಗಳಿಂದ ನಾವು ಹೊರಬರಬೇಕಿದೆ. ಈ ಗುರಿಸಾಧನೆಗೆ ನಾವು ಸರಕಾರವೊಂದನ್ನೇ ನೆಚ್ಚಿಕೊಂಡರಾಗದು.
ಸರಕಾರದ ಜತೆಗೆ ನಾವೂ ನಮ್ಮ ಪರಿಶ್ರಮವನ್ನು ಹಾಕಬೇಕು. ಆಗ ಮಾತ್ರ ಸ್ವಾತಂತ್ರ್ಯದ ಫಲವನ್ನು ಅನುಭವಿಸುವುದು ನಮಗೆ ಸಾಧ್ಯವಾಗುತ್ತದೆ. ಆಗ ನಾವು ಇನ್ನೂ ಹೆಚ್ಚಿನ ಸಂತಸದಿಂದ ‘ಸಾರೇ ಜಹಾನ್ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ’ ಎಂದು ಹಾಡಿಪರವಶರಾಗಬಹುದು.ಜೈಹಿಂದ್…..