ಇಂದು ಸಂತೇಶಿವರದ ಸಾಹಿತ್ಯಮೂರ್ತಿಗೆ ಹುಟ್ಟುಹಬ್ಬದ ಸಂಭ್ರಮ
ಪ್ರಸ್ತುತ
ರಘುನಾಥ್‌ ನಾಡಿಗ್‌
ಕನ್ನಡ ಕಾದಂಬರಿ ಕ್ಷೇತ್ರದ ಕುರಿತಾದ ಅವಲೋಕನ, ಸಂಶೋಧನೆ, ಚರ್ಚೆ, ವಿಚಾರ-ವಿನಿಮಯ, ಭಾಷಣ ಹೀಗೆ ಏನೇಚಟುವಟಿಕೆಗಳು ಹೊಮ್ಮಲಿ, ಅದು ಈ ಪ್ರತಿಭಾವಂತ ಕಾದಂಬರಿಕಾರನ ಉಲ್ಲೇಖವಿಲ್ಲದೆ ಪರಿಪೂರ್ಣ ಎನಿಸುವುದಿಲ್ಲ.ಏಕೆಂದರೆ, ಕನ್ನಡ ಸಾರಸ್ವತ ಲೋಕದೆಡೆಗೆ ಒಂದಿಡೀ ಭಾರತವೇ ತಿರುಗಿ ನೋಡುವಂತೆ, ತನ್ಮೂಲಕ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ ಅನುಪಮ ಕಾದಂಬರಿಕಾರರು ಇವರು. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಎಂಬುದು ಇವರ ಪೂರ್ಣ ಹೆಸರು; ಆದರೆ ಅಭಿಮಾನಿ ಓದುಗರ ಪಾಲಿಗೆ ಇವರು ‘ಡಾ. ಎಸ್.ಎಲ್. ಭೈರಪ್ಪ’.
ತನ್ನ ‘ಕರುಳಿನ ಕುಡಿ’ ಎಂಬ ಕಾರಣಕ್ಕೆ ಕರ್ನಾಟಕವೂ, ನಮ್ಮ ಹೆಮ್ಮೆಯ ಲೇಖಕರು ಎಂಬ ಕಾರಣಕ್ಕೆ ಕನ್ನಡಿಗರೂ  ಸಂಭ್ರಮಿಸುವುದಕ್ಕೆ ಅನುವು ಮಾಡಿಕೊಟ್ಟ ಭೈರಪ್ಪ ನವರಿಗೆ ಇಂದು ಜನ್ಮದಿನದ ಸಂಭ್ರಮ (ಜನನ: ೧೯೩೧ರ ಆಗಸ್ಟ್ ೨೦).
ಕರ್ನಾಟಕದವರಿಗೆ ಮಾತ್ರವಲ್ಲದೆ ಭಾರತದಾದ್ಯಂತದ ಸಾಹಿತ್ಯಾಸಕ್ತರಿಗೆ ಓದಿನ ಹುಚ್ಚು ಹಿಡಿಸಿದವರು ಭೈರಪ್ಪ. ಇವರ ಬಹುತೇಕ ಕಾದಂಬರಿಗಳು ಹದಿನಾಲ್ಕು ಭಾಷೆಗಳಿಗೂ ಅನುವಾದಗೊಂಡಿರುವುದೇ ಇದಕ್ಕೆ ಸಾಕ್ಷಿ. ‘ಪರ್ವ’ ಎಂಬ   ‘ಮಾಸ್ಟರ್‌ ಪೀಸ್’ ಕಾದಂಬರಿ ಸೇರಿದಂತೆ, ‘ನಿರಾಕರಣ’, ‘ದೂರ ಸರಿದರು’, ‘ಯಾನ’, ‘ಮಂದ್ರ’, ‘ಭಿತ್ತಿ’, ‘ಕವಲು’, ‘ಆವರಣ’ ಹೀಗೆ ಭೈರಪ್ಪನವರ ಕೃತಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಬಿಸಿದೋಸೆಯಂತೆ ಖರ್ಚಾಗುವ ದೃಶ್ಯಕ್ಕೆ ಹಲವರು ಸಾಕ್ಷಿಯಾಗಿದ್ದಾರೆ.
ಕಾದಂಬರಿಗೆ ಆಯ್ದುಕೊಂಡ ವಸ್ತು ಯಾವುದೇ ಇರಲಿ, ತಲಸ್ಪರ್ಶಿ ಅಧ್ಯಯನ ಹಾಗೂ ಪೂರಕ ದಾಖಲೆಗಳ ಜಮಾವಣೆಮಾಡಿಕೊಳ್ಳುವುದು, ಅದನ್ನು ಹಿತಮಿತವಾಗಿ ಓದುಗರಿಗೆ ಉಣ ಬಡಿಸುವುದು, ಆ ಶೈಲಿಯಲ್ಲಿ ಆಪ್ತತೆಯನ್ನು ಕಾಯ್ದುಕೊಳ್ಳು ವುದು ಭೈರಪ್ಪನವರ ವೈಶಿಷ್ಟ್ಯ ಎಂಬುದು ಸಾಹಿತ್ಯಾಸಕ್ತರೆಲ್ಲರೂ ಒಪ್ಪುವಂಥ ಮಾತು.
ಬಾಲ್ಯಕಾಲದಲ್ಲಿನ ಗ್ರಾಮೀಣ ಜೀವನ, ಅಲ್ಲಿನ ತಲ್ಲಣಗಳು ಮತ್ತು ತರುವಾಯದಲ್ಲಿನ ಮಹಾನಗರದ ವೇಗದ ಬದುಕು ಇವೆರಡನ್ನೂ ತೀರಾ ಸನಿಹದಿಂದ ಕಂಡಿರುವ ಭೈರಪ್ಪನವರು, ಈ ವೀಕ್ಷಣೆಯಿಂದ ದಕ್ಕಿದ ಅನುಭವವನ್ನು ಮಥಿಸಿ ತೆಗೆಯುವ ‘ಸಾಹಿತ್ಯ ನವ ನೀತ’ ಸಹಜವಾಗಿಯೇ ಓದುಗರಿಗೆ ರಸಕವಳವಾಗಿರುತ್ತದೆ, ಅದರಲ್ಲಿ ಜೀವನಾನುಭವ ಹರಳುಗಟ್ಟಿರುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
ಕರ್ನಾಟಕ ಮಾತ್ರವಲ್ಲದೆ ಭಾರತದೆಲ್ಲೆಡೆ ಹಾಗೂ ವಿದೇಶಗಳಲ್ಲೂ ಭೈರಪ್ಪನವರ ಕಾದಂಬರಿ ಬಗೆಗಿನ ವಿಚಾರಗೋಷ್ಠಿಗಳು ನಡೆದಿವೆ, ಕಾದಂಬರಿಗಳ ಅಧ್ಯಯನ ಗ್ರಂಥ ಸಂಪುಟಗಳು ಹೊರಬಂದಿವೆ ಎಂಬ ಅಂಶವಿಲ್ಲಿ ಉಲ್ಲೇಖನೀಯ. ಇವರ ಕಾದಂಬರಿಗಳು ವಿವಿಧ ವಿಶ್ವವಿದ್ಯಾಲಯಗಳ ಪಠ್ಯಗಳಾಗಿಯೂ, ೨೦ಕ್ಕೂ ಹೆಚ್ಚಿನ ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನ ವಿಷಯವೂ ಆಗಿವೆ, ಆರು ಕಾದಂಬರಿಗಳು ಇಂಗ್ಲಿಷ್‌ಗೆ ಅನುವಾದಗೊಂಡಿವೆ, ಮೂರು ದಶಕಗಳಿಗೂ ಹೆಚ್ಚು ಕಾಲ ಎನ್‌ಸಿಇ ಆರ್‌ಟಿಯಲ್ಲಿ ತತ್ವಶಾಸದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಕೀರ್ತಿ ಇವರ ಖಾತೆಯಲ್ಲಿ ದಾಖಲಾಗಿದೆ ಎಂಬುದು ಹೆಮ್ಮೆಯ ಸಂಗತಿಯಲ್ಲವೇ? ಭಾರತೀಯ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತದಲ್ಲಿ ಸಮಾನ ಆಸಕ್ತಿ ಹೊಂದಿರುವ ಭೈರಪ್ಪನವರಿಗೆ ಚಿತ್ರಕಲೆ-ಶಿಲ್ಪಕಲೆಗಳಲ್ಲೂ ಒಲವಿದೆ; ಪ್ರವಾಸ ಇವರ ಅಚ್ಚುಮೆಚ್ಚಿನ ಬಾಬತ್ತು ಎಂಬುದಕ್ಕೆ ‘ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ’ ಹಬ್ಬಿರುವ ವಿಶ್ವದ ಏಳು ಭೂಖಂಡಗಳನ್ನೂ ಭೈರಪ್ಪ ಸುತ್ತಿ ಬಂದಿರುವುದಕ್ಕಿಂತ ಮತ್ತೊಂಡು ಅಫಿಡವಿಟ್ಟು ಬೇಕಾಗಿಲ್ಲ.
ಸರ್, ನೀವು ಸಮಸ್ತ ಕನ್ನಡಿಗರ ಹೆಮ್ಮೆ. ನಿಮ್ಮ ಕಾಲಘಟ್ಟದಲ್ಲೇ ನಾವೂ ಇದ್ದೇವೆ, ನಿಮ್ಮನ್ನು ಪ್ರತ್ಯಕ್ಷ ಕಂಡಿದ್ದೇವೆ, ಮಾತಾಡಿಸಿ ದ್ದೇವೆ, ಕೈಕುಲುಕಿದ್ದೇವೆ ಎಂಬ ಜಂಭವೂ ನಮ್ಮಲ್ಲಿ ಬಹುತೇಕರಿಗಿದೆ. ನಿಮ್ಮ ಸಾಹಿತ್ಯ ಸೇವೆ ಹೀಗೇ ನಿರಂತರ ಸಾಗಲಿ, ಅದು ಕನ್ನಡ ಸಾರಸ್ವತ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸಲಿ.
ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಸರ್…