ಧರ್ಮಕ್ಕೆ ಭಯದ ಸ್ವರೂಪ ದಕ್ಕಿದರೆ ಅಪಾಯ
ನಿಲುವುಗನ್ನಡಿ
ಯಗಟಿ ರಘು ನಾಡಿಗ್
ಜವಾಹರಲಾಲ್ ನೆಹರು- ಇದು ಹಲವರಲ್ಲಿ  ಪುಳಕವನ್ನೂ, ಕೆಲವರಲ್ಲಿ ಅಸಮಾಧಾನವನ್ನೂ ಹುಟ್ಟುಹಾಕುವ ಹೆಸರು. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಎನಿಸಿಕೊಂಡು ಅಖಂಡ೧೮ವರ್ಷ ಆ ಗದ್ದುಗೆಯಲ್ಲಿ ಮೆರೆದ ನೆಹರು, ಅಧಿಕಾರ ರಾಜಕಾರಣದಲ್ಲಿ ತೋರಿದ ದಕ್ಷತೆ-ಚಾತುರ್ಯ ದಿಂದಾಗಿ ಮೆಚ್ಚುಗೆಗೂ, ತೋರಿದರೆನ್ನಲಾದ ಅನುಕೂಲಸಿಂಧುತ್ವ, ಸಮಯ ಸಾಧಕತನಗಳಿಂದಾಗಿ ವಿವಾದಕ್ಕೂ ಪಾತ್ರರಾದ ನಾಯಕ.
ಇದನ್ನು ಹೊರತುಪಡಿಸಿದರೆ ಅವರಲ್ಲೊಬ್ಬ ಸಂಶೋಧಕನಿದ್ದ, ಲೇಖಕನಿದ್ದ, ಇತಿಹಾಸಕಾರನಿದ್ದ, ವಿಶ್ಲೇಷಣಾಕಾರನಿದ್ದ ಎಂಬುದು ಒಪ್ಪುವಂಥ ಮಾತು. ಅದು 1928ರ ಸಮಯ. ಬ್ರಿಟಿಷರ ದಾಸ್ಯದ ಸಂಕೋಲೆಯಲ್ಲಿ ಸಿಲುಕಿದ್ದ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡುವ ಚಿಂತನೆ, ಹೋರಾಟಗಳಲ್ಲಿ ಇತರ ನಾಯಕರೊಂದಿಗೆ ನೆಹರು ವ್ಯಸ್ತರಾಗಿದ್ದ ಕಾಲವದು. ಆಗ ಹಿಮಾಲಯದ ತಪ್ಪಲಿನ ತಾಣ ವೊಂದರಲ್ಲಿ ಬೇಸಿಗೆ ಕಳೆಯುತ್ತಿದ್ದ ಪುಟ್ಟ ಪೋರಿಯೊಬ್ಬಳಿಗೆ ವಿವಿಧ ವಿದ್ಯಮಾನಗಳ ಕುರಿತು ನೆಹರು ಸರಣಿಪತ್ರ ಬರೆಯುತ್ತಾರೆ.
ಹಿರಿಯರಿಂದ ಕಿರಿಯರಿಗೆ ಒದಗುವ ‘ಬುದ್ಧಿವಾದ’ ಮಾತ್ರವಲ್ಲದೆ, ಶ್ರೇಷ್ಠ ನಾಯಕ ಮತ್ತು ಮಹಾನ್ ಮಾನವ ಆಗುವುದಕ್ಕೆ ಬೇಕಾದ ನೈತಿಕ ತಳಹದಿಗಳು, ಅಧಿಕಾರ ರಾಜಕಾರಣ ತಂದೊಡ್ಡುವ ವಿಶೇಷ ಸವಲತ್ತುಗಳ ಕುರಿತು ಈ ಪತ್ರಗಳಲ್ಲಿ ಎಳೆಎಳೆಯಾಗಿ ಬಿಡಿಸಿಡುತ್ತಾರೆ ನೆಹರು. ವಿಶ್ವಸೃಷ್ಟಿಗೆ ಕಾರಣವಾಯಿತೆನ್ನಲಾಗುವ ‘ಮಹಾಸ್ಫೋಟಸಿದ್ಧಾಂತ’ದಿಂದ ಮೊದಲ್ಗೊಂಡು ಪ್ರಾಚೀನ ನಾಗರಿಕತೆಗಳವರೆಗಿನ ಹಲವು ವಿಷಯಗಳನ್ನು ಒಡಲಲ್ಲಿಟ್ಟುಕೊಂಡಿದ್ದ ಈ ಪತ್ರಗಳು, ಆ ಹುಡುಗಿ ಭವಿತವ್ಯದಲ್ಲಿ ಮಹಾನ್ ನಾಯಕಿಯಾಗಿ ಹೊಮ್ಮುವುದಕ್ಕೆ ಅಡಿಪಾಯ ಹಾಕಿದವು ಎನ್ನಬೇಕು.
ಈ ಪತ್ರಗಳನ್ನು ಬರೆಸಿಕೊಂಡಾಕೆ- ಮುಂದೆ ಭಾರತದ ಮೊದಲ ಮಹಿಳಾ ಪ್ರಧಾನಿ ಎನಿಸಿಕೊಂಡ ಇಂದಿರಾಗಾಂಧಿ!ಅಧಿಕಾರವೊಂದು ವಿಶೇಷ ಮತ್ತು ಅಮೂಲ್ಯ ಅವಕಾಶವೇ ವಿನಾ ಹಕ್ಕಲ್ಲ; ಇದನ್ನು ವಿವೇಚನೆಯಿಂದ ಬಳಸಬೇಕು. ಗದ್ದುಗೆ ಅಪ್ಪಿದವರ ಸ್ವಹಿತಾಸಕ್ತಿಗಳಿಗೆ ಬದಲಾಗಿ, ಶ್ರೀಸಾಮಾನ್ಯರ ಹಿತರಕ್ಷಣೆ, ಸೇವೆಗೆ ಅದು ಬಳಕೆಯಾಗಬೇಕು ಎಂಬ ಅರಿವನ್ನು ನೆಹರು ಈ ಪತ್ರಗಳ ಮೂಲಕ ಇಂದಿರಾಳಲ್ಲಿ ತುಂಬುವ ಪರಿ ಅನನ್ಯ. ಸದರಿ ಪತ್ರಗಳು ಸ್ವಾತಂತ್ರ್ಯಪೂರ್ವದ್ದಾಗಿದ್ದು ರಾಜ-ಮಹಾರಾಜರ ಉಲ್ಲೇಖ ಹೊಂದಿದ್ದರೂ, ಇಂದಿನ ಸಾಮಾಜಿಕ ಪರಿಸ್ಥಿತಿ, ಆಳುಗ ವ್ಯವಸ್ಥೆಗಳ ಪ್ರತಿಬಿಂಬವಾಗಿವೆ ಎಂಬುದು ಸತ್ಯ.
      ’ ’ ಎಂಬ ಕೃತಿ (ಪ್ರಕಾಶಕರು: ಪೆಂಗ್ವಿನ್ ಬುಕ್ಸ್ ಇಂಡಿಯಾ) ಇಂಥ 30 ಪತ್ರಗಳ ಸಂಕಲನವಾಗಿದ್ದು, ಆಯ್ದ ಕೆಲವದರ ಸಾರಸಂಗ್ರಹ ರೂಪ ಇಲ್ಲಿದೆ. ನಮ್ಮಂಥ ಬಹುತೇಕರು ವಿಶ್ವದ ವಿವಿಧೆಡೆಪರಸ್ಪರರಿಂದ ದೂರವಾಗಿ ಬದುಕುತ್ತಿರುವುದು ವಾಸ್ತವ. ಆದರೆ ಬಹಳ ಹಿಂದೆ ನಾವೆಲ್ಲ ಒಂದೇ ಜನಾಂಗವಾಗಿದ್ದವರು.ಅಂತರ ಹೆಚ್ಚಾದಾಗಿನಿಂದ ನಾವು ಬದಲಾಗಿಬಿಟ್ಟಿದ್ದೇವೆ; ನಮ್ಮಲ್ಲನೇಕರಿಗೆ ಹಳೆಯ ಬಾಂಧವ್ಯಗಳ ನೆನಪಿಲ್ಲ. ಪ್ರತಿದೇಶದವರೂ ತಾವೇ ಬುದ್ಧಿವಂತರು ಎಂಬ ಗ್ರಹಿಕೆಗೇ ಜೋತುಬಿದ್ದಿದ್ದಾರೆ.
ತಮ್ಮನ್ನು, ತಮ್ಮ ದೇಶವನ್ನು ಶ್ರೇಷ್ಠವೆಂದು ಬಿಂಬಿಸಿಕೊಳ್ಳುವುದರೆಡೆಗೇ ಎಲ್ಲರ ಹಪಾಹಪಿ. ಇದು ಒಣಜಂಭವಲ್ಲವೇ? ಆದರೆ,‘ಲವಲೇಶವಾದರೂ ಒಳ್ಳೆತನ ಅಥವಾ ಕೆಟ್ಟತನ ಇಲ್ಲದ ಮನುಷ್ಯನಿಲ್ಲ’ ಎಂಬ ಮಾತು ದೇಶಕ್ಕೂ ಅನ್ವಯ. ಆದ್ದರಿಂದ, ಇತರ ದೇಶಗಳಲ್ಲಿ ಕಂಡುಬರುವ ಉತ್ತಮ ಅಂಶಗಳನ್ನು ನಾವು ನಿಸ್ಸಂಶಯವಾಗಿ ಅಳವಡಿಸಿಕೊಳ್ಳಬೇಕು.
ಧರ್ಮಕ್ಕೆ ಭಯದ ಸ್ವರೂಪ ದಕ್ಕಿದರೆ ಜನಕ್ಕೆ ಅಪಾಯ ಕಟ್ಟಿಟ್ಟಬುತ್ತಿ; ಭಯದ ಕಾರಣದಿಂದಾಗಿ ಮಾಡಿದ ಯಾವುದೇ ಕೆಲಸದ ಫಲಿತವೂ ಕೆಟ್ಟದಾಗಿಯೇ ಇರುತ್ತದೆ. ಧರ್ಮವು ಅನೇಕ ಸುಂದರ ಸಂಗತಿಗಳನ್ನು ನಮಗೆ ತಿಳಿಹೇಳುತ್ತದೆ. ಆದರೆ, ಧರ್ಮದ ಹೆಸರಲ್ಲಿ ಜನ ಈಗಲೂ ಪರಸ್ಪರ ಕಚ್ಚಾಡುತ್ತಿದ್ದಾರೆ, ಇನ್ನೊಬ್ಬರ ತಲೆ ಒಡೆಯುತ್ತಿದ್ದಾರೆ. ಧರ್ಮವು ಈಗಲೂ ಬಹುತೇಕರ ಪಾಲಿಗೆ ಭಯಗೊಳ್ಳುವಂಥ ಸಂಗತಿಯೇ.
ದೇವಾಲಯದಲ್ಲಿ ಕಾಣಿಕೆ ಅರ್ಪಣೆ, ಪ್ರಾಣಿಬಲಿಯ ಮೂಲಕ ಯಾವುದೋ ಕಾಲ್ಪನಿಕ ಅಸ್ತಿತ್ವಗಳನ್ನು ಸಂತೋಷ ಪಡಿಸುವುದಕ್ಕೆ ಇಂಥವರು ಸಮಯ ವ್ಯಯಿಸುತ್ತಾರೆ. ಅವಶ್ಯಕತೆಗೆ ಸಾಕಾಗಿ ಹೆಚ್ಚುವರಿಯಾಗಿರುವಂಥದ್ದೇ ಹಣ.ಇದನ್ನು ಅಗಾಧವಾಗಿ ಹೊಂದಿರುವವರು, ಒಮ್ಮೆಗೇ ಅದನ್ನು ಖರ್ಚುಮಾಡದೆ ಬ್ಯಾಂಕುಗಳಲ್ಲಿ ಇರಿಸುವವರೇ ಶ್ರೀಮಂತರು. ಬಡವರಲ್ಲಂತೂ ಹೆಚ್ಚುವರಿ ಹಣವಿರುವುದೇ ಇಲ್ಲ!
ಒಬ್ಬ ಮತ್ತೊಬ್ಬನಿಗಿಂತ ಹೆಚ್ಚು ಕೆಲಸ ಮಾಡುವುದರಿಂದಲೇ ಬಹುತೇಕ ಇಂಥ ಪರಿಸ್ಥಿತಿಯಿದೆ ಎಂದೇನಲ್ಲ; ಆದರೆ ಈಚೀಚೆಗೆ, ಮೈಮುರಿದು ಕೆಲಸ ಮಾಡದವನೂ ಹೆಚ್ಚೆಚ್ಚು ಹಣ ಕೂಡಿಡುತ್ತಿದ್ದರೆ, ಶ್ರಮಜೀವಿಗೆ ಅದರ ಒಂದು ಭಾಗವೂ ದಕ್ಕುತ್ತಿಲ್ಲ! ಇದುಕರುಣಾಜನಕ ವ್ಯವಸ್ಥೆಯಲ್ಲವೇ? ವಿಶ್ವದಲ್ಲಿ ಹೆಚ್ಚು ಬಡವರಿರುವುದಕ್ಕೆ ಈ ಅಸಂಬದ್ಧತೆಯೇ ಕಾರಣ. ಅಗತ್ಯ ವಸ್ತುಗಳ ಖರೀದಿಗಷ್ಟೇ ಹಣ ಸಹಕಾರಿ. ಆದರೆ ಹಣವೊಂದೇ ಅಂತಿಮ ಬಾಬತ್ತು ಎಂದು ಭ್ರಮಿಸುವ ಮೂರ್ಖರು ಧನಸಂಗ್ರಹಣೆಯಲ್ಲೇ ವ್ಯಸ್ತರಾಗುತ್ತಾರೆಯೇ ನಾ, ಅದರ ಸದ್ಬಳಕೆ ಮಾಡುವುದಿಲ್ಲ.
ಹಿಂದೆಲ್ಲಾ, ಅಸ್ತಿತ್ವದಲ್ಲಿದ್ದ ಪ್ರತಿ ವಸ್ತುವೂ ಇಡೀ ಕುಲ/ ಸಮುದಾಯಕ್ಕೆ ಸೇರಿದ್ದಾಗಿತ್ತೇ ವಿನಾ, ಸಮುದಾಯದ ಸದಸ್ಯರ ಖಾಸಗಿ ಸ್ವತ್ತಾಗಿರಲಿಲ್ಲ. ಸಮುದಾಯದ ಅಧಿಪತಿ/ಹಿರಿಯನಿಗೂ ಇಂಥ ವಿಶೇಷ ಸವಲತ್ತು ಇರಲಿಲ್ಲ. ಆದರೆ ಆತಸಂಘಟಕನಾಗಿದ್ದ, ತನ್ನ ಕುಲದ ಸ್ವತ್ತು- ಸಾಮಗ್ರಿಯ ಸಂರಕ್ಷಣೆ ಅವನ ಹೊಣೆಯಾಗಿತ್ತು. ಅಧಿಕಾರಬಲ ಹೆಚ್ಚುತ್ತಹೋದಂತೆ, ಈ ಸ್ವತ್ತುಗಳು ತನ್ನವೇ ಎಂಬ ಚಿಂತನೆ ಅವನಲ್ಲಿ ಮೊಳೆಯುತ್ತ ಹೋಯಿತು; ಕುಲದ ನಾಯಕನಾಗಿರುವು ದರಿಂದ, ಸಮಸ್ತ ಸ್ವತ್ತಿಗೆ ತಾನೇ ಪ್ರತಿನಿಧಿ ಎಂದಾತ ಭಾವಿಸತೊಡಗಿದ.
ಐಹಿಕ ವಸ್ತುಗಳ ಜಮಾವಣೆ, ತನ್ನದಾಗಿಸಿಕೊಳ್ಳುವ ಪರಿಕಲ್ಪನೆ ಶುರುವಾಗಿದ್ದೇ ಹೀಗೆ. ಕುಲದ ಆಸ್ತಿಪಾಸ್ತಿಗಳನ್ನು ಕುಲದ ಅಽಪತಿ ಕಬಳಿಸತೊಡಗಿ, ಅವೆಲ್ಲ ತನ್ನವೇ ಎನ್ನತೊಡಗಿದಂತೆ, ‘ಬಡವ-ಶ್ರೀಮಂತ’ ಬಣಗಳು ಸೃಷ್ಟಿಯಾದವು, ಅವರ ನಡುವಿನ ಅಂತರ ಹೆಚ್ಚತೊಡಗಿತು. ಕುಲದ ಅಽಪತಿಯ ಹುದ್ದೆ/ಅಧಿಕಾರಆನುವಂಶಿಕವಾಗುತ್ತಿದ್ದಂತೆ, ಅವನ ಮಗ ಉತ್ತರಾಽಕಾರಿಯಾದ. ನೋಡ ನೋಡುತ್ತಿದ್ದಂತೆಯೇ ಆತ ರಾಜನಾಗಿಯೇ ಬೆಳೆದ.
ತನ್ನ ಪ್ರದೇಶದಲ್ಲಿನ ಪ್ರತಿ ವಸ್ತು-ವ್ಯವಸ್ಥೆಯೂ ತನ್ನವೇ ಎಂಬ ವಿಲಕ್ಷಣ ಗ್ರಹಿಕೆ ಅವನಲ್ಲಿ ಮೈಗೂಡಿತು. ತಾನು ಬೇರೆಯಲ್ಲ, ತನ್ನ ಪ್ರದೇಶ ಬೇರೆಯಲ್ಲ ಎಂದು ಯೋಚಿಸತೊಡಗಿದ. ಆಹಾರ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ವ್ಯವಸ್ಥಿತ ವಾಗಿರಿಸಿ ದೇಶದ ಜನರಿಗೆ ವಿತರಿಸಲೆಂದೇ ತಮ್ಮನ್ನು ಆರಿಸಲಾಗಿದೆ ಎಂಬುದನ್ನು ರಾಜರು ಮರೆತೇಬಿಟ್ಟರು. ಹೀಗಾಗಿ, ತಾವೆಲ್ಲ ಧಣಿಗಳು, ದೇಶದ ಜನರೆಲ್ಲ ಸೇವಕರು ಎಂಬ ಭಾವನೆ ರಾಜರಲ್ಲಿ ಮೊಳಕೆಯೊಡೆಯಿತು; ತಾವು ದೇಶಸೇವಕರು ಎಂಬುದನ್ನು ರಾಜರು ಮರೆತೇಬಿಟ್ಟಿದ್ದರು!
ಕ್ರಮೇಣ ಈ ರಾಜರೆಲ್ಲ ಅದೆಷ್ಟು ಸ್ವಪ್ರತಿಷ್ಠೆ ರೂಢಿಸಿಕೊಂಡರೆಂದರೆ, ತಮ್ಮನ್ನು ಆರಿಸುವಲ್ಲಿ ಜನರದ್ದೇನೂ ಪಾತ್ರವೇ ಇಲ್ಲ ಎನ್ನತೊಡಗಿದರು. ‘ನಮ್ಮನ್ನು ರಾಜರಾಗಿಸಿದ್ದು ಸ್ವತಃ ದೇವರೇ, ಇದು ರಾಜರ ದೈವದತ್ತ ಹಕ್ಕು’ ಎಂಬ ಅಹಂಕಾರದ ಮಾತುಗಳು ಅವರಿಂದ ಹೊಮ್ಮತೊಡಗಿದವು. ಪ್ರಜೆಗಳೆಲ್ಲ ಬಡತನದ ಬೇಗುದಿಯಲ್ಲಿ ಬಳಲುತ್ತಿದ್ದರೆ, ಇವರೆಲ್ಲ ಐಷಾರಾಮಿ ಜೀವನ, ಅಟ್ಟಹಾಸ-ಆಡಂಬರಗಳಲ್ಲೇ ದಿನದೂಡುತ್ತಿದ್ದರು.
ಇಂದಿಗೂ ಅನೇಕ ರಾಜ-ಮಹಾರಾಜರು ಭರ್ಜರಿ ವೇಷಭೂಷಣ ಧರಿಸಿ, ದುಬಾರಿ ಕಾರುಗಳಲ್ಲಿ ಸಂಚರಿಸುತ್ತ ಹಣವನ್ನು ಎಗ್ಗಿಲ್ಲದೆ ಖರ್ಚು ಮಾಡುತ್ತಿದ್ದಾರೆ. ಇಷ್ಟೊಂದು ದುಡ್ಡು ಬಂದಿದ್ದು ಹೇಗೆ? ಜನ ನೀಡುವ ತೆರಿಗೆಯಿಂದಲ್ಲವೇ? ರಸ್ತೆ, ಆಸ್ಪತ್ರೆ, ಶಾಲೆ, ಗ್ರಂಥಾಲಯದಂಥ ಜನೋಪಯೋಗಿ ವ್ಯವಸ್ಥೆಗಳನ್ನು ಇವರು ಕಲ್ಪಿಸುವಂತಾಗಲಿ ಎಂದು ಜನ ತೆರಿಗೆ ನೀಡುತ್ತಾರೆ. ಆದರೆ, ‘ನಾನು ಬೇರೆಯಲ್ಲ, ಈ ದೇಶ ಬೇರೆಯಲ್ಲ’ ಎಂಬ ಭಾವನೆ ರಾಜರಲ್ಲಿ ಬೇರುಬಿಟ್ಟಿರುವುದರಿಂದ, ‘ಜನಧನ’ವನ್ನು ತಮ್ಮ ಐಹಿಕ ಸುಖಭೋಗಗಳಿಗೆ ಬಳಸುತ್ತಿದ್ದಾರೆ.
ಆದರೆ ಅವರಿಗಾಗಿ ಮೂಗಿಗೆ ಕವಡೆ ಕಟ್ಟಿಕೊಂಡು ದುಡಿಯುವ ಶ್ರೀಸಾಮಾನ್ಯರು ಬಡತನದಲ್ಲೇ ಬಳಲುತ್ತಿದ್ದಾರೆ. ಅವರಮಕ್ಕಳಿಗೆ ಶಾಲೆಗಳೂ ಇಲ್ಲ! ನಮ್ಮ ಮಾರುಕಟ್ಟೆಯಲ್ಲಿ ಬಿಕರಿಯಾಗುವ ವಿದೇಶಿವಸ್ತ್ರಗಳನ್ನೇ ಪರಿಗಣಿಸೋಣ. ಭಾರತದಲ್ಲಿ ಬೆಳೆಯುವ ಹತ್ತಿಯನ್ನು ಇಂಗ್ಲೆಂಡಿನ ದೊಡ್ಡ ಕಾರ್ಖಾನೆಯೊಂದು ಪಡೆದು ಹಸನುಮಾಡಿ ನೂಲಾಗಿಸಿ, ಬಟ್ಟೆಯಾಗಿಸುತ್ತದೆ.
ಈ ಬಟ್ಟೆ ಭಾರತಕ್ಕೆ ಮರಳಿ ಬಿಕರಿಯಾಗುತ್ತದೆ. ನಾವೇ ಬೆಳೆದ ಹತ್ತಿ ದೂರದ ಇಂಗ್ಲೆಂಡಿನಲ್ಲಿ ವಸವಾಗಿ, ನಮ್ಮಲ್ಲೇ ಮರಳಿ ಮಾರಾಟಗೊಳ್ಳುವುದಕ್ಕಿಂತ ಅಸಂಬದ್ಧ ಸಂಗತಿಯುಂಟೇ? ಇದು ಹಣ-ಶಕ್ತಿಯ ಅಪವ್ಯಯವಲ್ಲವೇ? ದೇಸೀ ಖಾದಿಯನ್ನು ಖರೀದಿಸುವುದೇ ವಿವೇಚನೆ. ಇದರಿಂದಾಗಿ ನಮ್ಮ ಬಡನೇಕಾರರ ಬಾಳೂ ಹಸನಾಗುತ್ತದೆ. ವ್ಯಕ್ತಿಯಲ್ಲಿ/ಸಮಾಜದಲ್ಲಿ ಅಂತರ್ಗತವಾಗಿರುವುದು ಸುಸಂಸ್ಕೃತಿಯೋ ಬರ್ಬರತೆಯೋ ಎಂಬುದನ್ನು ಕಂಡುಕೊಳ್ಳುವುದು ಹೇಗೆ? ತಾವಷ್ಟೇ ನಾಗರಿಕರು, ಏಷ್ಯನ್ನರು ಅನಾಗರಿಕರು ಎಂಬುದು ಬಹುತೇಕ ಯುರೋಪಿಯನ್ನರ ಗ್ರಹಿಕೆ.
ಬಂದೂಕು ಹೊಂದಿರುವಾತ ನಿರಾಯುಧನಿಗಿಂತ ಬಲವಂತ, ಆ ಕಾರಣದಿಂದ ಆತ ಸುಸಂಸ್ಕೃತ/ ನಾಗರಿಕ ಎಂಬುದು ಯುರೋಪಿಯನ್ನರ ಈ ಗ್ರಹಿಕೆಗೆ ಕಾರಣವೇ? ದುರ್ಬಲ ವ್ಯಕ್ತಿ ಸುಸಂಸ್ಕೃತನಿರಬಹುದು ಅಥವಾ ಇಲ್ಲದಿರಬಹುದು, ಆದರೆ ಬಂದೂಕುಧಾರಿಗಿಂತ ತಾನು ಹೆಚ್ಚು ಸುಸಂಸ್ಕೃತ ಎಂದು ಹೇಳುವ ಧೈರ್ಯ ಅವನಿಗಿರುವುದಿಲ್ಲ; ಹಾಗೊಮ್ಮೆ ಹೇಳಿದರೆ ಗುಂಡೇಟಿಗೆ ಬಲಿಯಾಗಬಹುದು!
ಜನ ಹೀಗೆ ಪರಸ್ಪರರನ್ನು ಕೊಂದುಕೊಳ್ಳುವುದು ಸುಸಂಸ್ಕೃತ ವರ್ತನೆಯೇ? ಇದನ್ನು ವಿವೇಕ ಎನ್ನಲಾದೀತೇ? ಇಬ್ಬರು ಬೀದಿಯಲ್ಲಿ ಕಿತ್ತಾಡುತ್ತಿದ್ದರೆ ಅವರು ಅದೆಷ್ಟು ತಿಳಿಗೇಡಿಗಳು ಎಂದು ಜನ ಮಾತಾಡಿಕೊಳ್ಳುತ್ತಾರೆ. ಆದರೆ ದೊಡ್ಡ ದೇಶಗಳೇ ಪರಸ್ಪರ ಕತ್ತಿಮಸೆಯುತ್ತ ಲಕ್ಷಾಂತರ ಜನರನ್ನು ಸಾಯಿಸುವುದು ಇದಕ್ಕಿಂತ ತಿಳಿಗೇಡಿತನವಲ್ಲವೇ? ಒಂದರ್ಥದಲ್ಲಿದುಇಬ್ಬರು ಕಾಡುಮನುಷ್ಯರು ಕಿತ್ತಾಡಿದಂತೆಯೇ ಸರಿ! ಒಂದೊಮ್ಮೆ ಕಾಡುಮನುಷ್ಯರನ್ನು ಅನಾಗರಿಕರು ಎನ್ನುವುದಾದಲ್ಲಿ, ಹೀಗೇ ವರ್ತಿಸುವ ದೇಶಗಳು ಅದಿನ್ನೆಷ್ಟು ಅನಾಗರಿಕವಾಗಿರಬೇಕು?!!