ಕವಲುಹಾದಿಯಲ್ಲಿದೆಯೇ ಕಾಂಗ್ರೆಸ್ ಪಕ್ಷ ?
ಅಭಿಮತ
ರಮಾನಂದ ಶರ್ಮ
ಎಸ್.ಎಂ. ಕೃಷ್ಣ, ಜ್ಯೋತಿರಾದಿತ್ಯ ಸಿಂಧಿಯಾ, ಆರ್.ಪಿ.ಎನ್. ಸಿಂಗ್, ಕಪಿಲ್ ಸಿಬಲ್, ಕ್ಯಾ.ಅಮರೀಂದರ್ ಸಿಂಗ್, ಜಿತಿನ್ ಪ್ರಸಾದ್, ಆಶ್ವಿನಿ ಕುಮಾರ್, ಸುಶ್ಮಿತಾ ದೇವ್, ಪ್ರಿಯಾಂಕ ಚತುರ್ವೆದಿ, ಹಾರ್ದಿಕ್ ಪಟೇಲ್, ಜೈವೀರ್‌ಸಿಂಗ್ ಗಿಲ್‌ರಂಥ ಮುಂದಿನ ಸಾಲಿನ ನಾಯಕರು ‘ಕೈ’ಗೆ ‘ಬೈ’ ಹೇಳಿದ ನಂತರ, ಕಾಂಗ್ರೆಸ್‌ಗೆ ಅದರಲ್ಲೂ ‘ಗಾಂಧಿ’ ಕುಟುಂಬಕ್ಕೆ ದಶಕಗಳ ಕಾಲ ನಿಷ್ಠೆ ತೋರುತ್ತ ಬಂದಿದ್ದ ಗುಲಾಮ್ ನಬಿ ಅಜಾದ್ ಕೂಡ ಕಾಂಗ್ರೆಸ್‌ಗೆ ಬೆನ್ನು ತೋರಿಸಿದ್ದಾರೆ.
ಕಳೆದೆರಡು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಆಮೂಲಾಗ್ರ ಬದಲಾವಣೆಗೆ ದನಿಯೆತ್ತಿದ ‘ಜಿ-23’ ಎಂಬ ಹಿರಿಯ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಆಜಾದ್ ಒಂದು ಕಾಲನ್ನು ಹೊರಗಿರಿಸಿಕೊಂಡು ಸುದ್ದಿಯಲ್ಲಿದ್ದರು. ಅವರ ರಾಜೀನಾಮೆ ವಿಷಯ ಮಾಧ್ಯಮದಲ್ಲಿನ್ನೂ ಸದ್ದುಮಾಡುತ್ತಿರುವಾಗಲೇ ತೆಲಂಗಾಣದ ರಾಜ್ಯಸಭಾ ಸದಸ್ಯ ಎಂ.ಎ. ಖಾನ್ ಕೂಡ ಹೊರ ಬಿದ್ದಿದ್ದಾರೆ.
ಹಿರಿಯ ನಾಯಕ ಆನಂದ ಶರ್ಮಾ ತಮಗೆ ವಹಿಸಿದ್ದ ಜವಾಬ್ದಾರಿಯಿಂದ ಹಿಂದೆ ಸರಿದಿದ್ದು, ಆಜಾದರ ಹಾದಿಹಿಡಿಯುವಂತೆ ತೋರುತ್ತಿದೆ. ಕಾಂಗ್ರೆಸ್‌ನ ಇಂದಿನ ಸ್ಥಿತಿ ನೋಡಿ ‘ತಟ್ಟೆ ಬರಿದಾಗುತ್ತಿದೆ, ದೋಣಿ ಮುಳುಗುತ್ತಿದೆ’ ಎಂದು ಕೆಲವರು ಲೇವಡಿ ಮಾಡಿದರೆ, ಕಾಂಗ್ರೆಸ್‌ನೊಂದಿಗೆ ಭಾವನಾತ್ಮಕ ಸಂಬಂಧವಿರುವ ಮತ್ತು ಜೀವನದ ಮುಸ್ಸಂಜೆಯಲ್ಲಿರುವ ಕಟ್ಟಾ ಕಾಂಗ್ರೆಸ್ಸಿ ಗರು ತಾವು ಕಟ್ಟಿಬೆಳೆಸಿದ ಪಕ್ಷ ಕಾಲಗರ್ಭದಲ್ಲಿ ಲೀನವಾಗಬಹುದೇನೋ ಎಂದು ವ್ಯಾಕುಲಗೊಂಡಿದ್ದಾರೆ. ಇದುಆರಂಭವಷ್ಟೇ; ಮುಂದೆ ಚುನಾವಣೆ ಸಮೀಪಿಸಿದಂತೆ ಅದೆಷ್ಟು ಕಾಂಗ್ರೆಸ್ಸಿಗರು ‘ಆಜಾದ್’ರಂತೆ ಕಾಂಗ್ರೆಸ್‌ನಿಂದ ‘ಆಜಾದಿ’ಪಡೆಯುತ್ತಾರೋ ಗೊತ್ತಿಲ್ಲ. ಇನ್ನು, ಅಡ್ಡಗೋಡೆಯ ಮೇಲೆ ಕುಳಿತು ಗಾಳಿ ಬೀಸುವ ಕಡೆಗೆ ಸಾಗಿ ತಮ್ಮ ರಾಜಕೀಯ ನೆಲೆಕಂಡುಕೊಳ್ಳುವವರು ಇನ್ನೆಷ್ಟು ಜನವೋ?! ಸ್ವಯಂಕೃತಾಪರಾಧವೇ ಕಾಂಗ್ರೆಸ್‌ನ ಇಂದಿನ ದಯನೀಯ ಸ್ಥಿತಿಗೆ ಕಾರಣ.
ಸ್ವಾತಂತ್ರ್ಯ ಹೋರಾಟಕ್ಕೆಂದು ಕಟ್ಟಿದ ಪಕ್ಷವನ್ನು ಸ್ವಾತಂತ್ರ್ಯಾನಂತರ ವಿಸರ್ಜಿಸಬೇಕು ಎಂಬ ಮಹಾತ್ಮ ಗಾಂಧಿಯವರ ಆಶಯವನ್ನು ನಿರ್ಲಕ್ಷಿಸಿ, ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟಿದ್ದು ತಾವೇ ಎಂದು ಬಿಂಬಿಸಿ ಕಾಂಗ್ರೆಸ್ಸಿಗರು ಅಧಿಕಾರ ಹಿಡಿದರು. ಕ್ರಮೇಣ, ನೆಹರು ಕುಟುಂಬವಷ್ಟೇ ಅಧಿಕಾರ ನಡೆಸಲು ಅರ್ಹ ಎಂದು ಜನರ ಬ್ರೇನ್ ವಾಷ್ ಮಾಡಲಾಯಿತು.
ನೆಹರು ನಂತರ ಬಂದ ಇಂದಿರಾ ಗಾಂಧಿಯವರ ಕಾಲದಲ್ಲಂತೂ ಈ ವ್ಯಕ್ತಿಪೂಜೆಯು ’      ’ ಎನ್ನುವ ಮಟ್ಟಕ್ಕೇರಿ ವಂಶಪಾರಂಪರ್ಯದ ಆಳ್ವಿಕೆಯ ಮಡುವಿನಲ್ಲಿ ಪಕ್ಷ ಸಿಲುಕಿಕೊಂಡಿತು, ನೆಹರು-ಇಂದಿರಾ ನಾಮಬಲವಿದ್ದರೆ ಜಯ ಖಂಡಿತ ಎಂಬ ವಾತಾವರಣ ಸೃಷ್ಟಿಯಾಗಿ ಬಹುಕಾಲ ಚಾಲ್ತಿಯಲ್ಲುಳಿಯಿತು.
ಆದರೆ, ಮೇಲೇರಿದ್ದು ಕೆಳಗಿಳಿಯುತ್ತದೆ ಎಂಬ ಮಾತಿನಂತೆ ನೆಹರು-ಇಂದಿರಾ ವರ್ಚಸ್ಸು ಕಾಲಕ್ರಮೇಣ ಇಳಿಯತೊಡಗಿತು. ಹೊಸ ಚಿಂತನೆಗಳು ಮೊಳೆಯುತ್ತಿದ್ದಂತೆ ಕೌಟುಂಬಿಕ ಆಡಳಿತದ ಅಪಾಯದ ವಿರುದ್ಧ ಜನತೆಯೂ ದನಿಯೆತ್ತಿದಾಗ, ಹಲವು ಕಾಂಗ್ರೆಸ್ಸಿಗರಿಗೆ ಮತ್ತು ಪಕ್ಷಕ್ಕೆ ಜ್ಞಾನೋದಯವಾಗತೊಡಗಿತು. ಈ ಕುಟುಂಬದ ನಾಮಬಲದಿಂದಷ್ಟೇ ಮತ ದೊರಕುವುದಿಲ್ಲ ಎಂಬ ವಾಸ್ತವ ಅರಿವಾಗುತ್ತಿದ್ದಂತೆ, ಪಕ್ಷದ ಯೋಚನಾಲಹರಿಯು ಸಿದ್ಧಸೂತ್ರ ಮತ್ತು ಮಾರ್ಗದ ಹೊರಗೆ ಇಣುಕತೊಡಗಿತು.
ಕಾಂಗ್ರೆಸ್ ಪಯಣವೀಗ ರಾಜೀವ್ ಗಾಂಧಿಯವರ ಕಾಲಘಟ್ಟವನ್ನೂ ದಾಟಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಪ್ರಸಕ್ತ ಜಮಾನಾಕ್ಕೆ ಬಂದು ನಿಂತಿದೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದಾಗಿ ಸೋನಿಯಾ ಈಗ ಮೊದಲಿನಷ್ಟು ಸಕ್ರಿಯರಾಗಲು ಮನಸ್ಸು ಮಾಡುತ್ತಿಲ್ಲ. ರಾಹುಲ್ ನಾಯಕತ್ವದ ಬಗೆಗೆ ಜನರ ಮತ್ತು ಕಾಂಗ್ರೆಸ್ಸಿಗರ ಒಲವು ಕಡಿಮೆಯಾಗುತ್ತಿದೆ.
ಸಹಜ ಗ್ರಹಿಕೆ ಮತ್ತು ಕೌಶಲಗಳಿಲ್ಲದ, ತಕ್ಷಣ ನರ್ವಸ್ ಆಗುವ, ದಿಗಿಲುಗೊಳ್ಳುವ ವ್ಯಕ್ತಿತ್ವ ಅವರದ್ದು ಎಂದು ಬಹುತೇಕ ಕಾಂಗ್ರೆಸ್ಸಿಗರಿಗೆ ಅನಿಸುತ್ತಿದ್ದರೂ, ಜೋರಾಗಿ ದನಿಯೆತ್ತಲು ಯಾರೂ ಮನಸ್ಸು ಮಾಡುತ್ತಿರಲಿಲ್ಲ. ಸೋನಿಯಾ-ರಾಹುಲ್‌ರಿಗೆ ಹೊರತಾದ ಧುರೀಣರನ್ನು ಆಯ್ಕೆಮಾಡಿಕೊಳ್ಳಲಾಗದ ಅಸಹಾಯಕತೆಯಲ್ಲೇ ಬಹುತೇಕರು ಮೌನವಾಗಿ ರೋದಿಸುತ್ತಿದ್ದರು. ಆದರೆ ಅವರಲ್ಲೂ ಇತ್ತೀಚೆಗೆ ಸಕಾರಾತ್ಮಕ ಸ್ಪಂದನ ಕಂಡುಬರುತ್ತಿದೆ.
ಮತದಾರರನ್ನು ಆಕರ್ಷಿಸುವ, ಕಾಂಗ್ರೆಸ್‌ನೆಡೆಗೆ ಮತಗಳನ್ನು ಸೆಳೆಯುವ ಶಕ್ತಿಯಿರುವ ಯಾರನ್ನು ಬೇಕಾದರೂ ನಾಯಕ ನನ್ನಾಗಿ ಒಪ್ಪಿಕೊಳ್ಳಲು ಕಾಂಗ್ರೆಸ್ಸಿಗರು, ಪಕ್ಷದ ವಿವಿಧ ಸ್ತರಗಳ ಕಾರ್ಯಕರ್ತರು ಸಿದ್ಧರಾಗಿದ್ದಾರೆ. ದುರಂತವೆಂದರೆ, ಪಕ್ಷ ದಲ್ಲೀಗ ವರ್ಚಸ್ವಿ ಧುರೀಣರಿಲ್ಲ, ಸೂಕ್ತ ಮಾರ್ಗದರ್ಶನ ನೀಡಬಲ್ಲ ‘ಥಿಂಕ್‌ಟ್ಯಾಂಕ್’ ಕೂಡ ಇಲ್ಲ. ಬುದ್ಧಿಜೀವಿಗಳು, ಮುತ್ಸದ್ದಿ ಗಳು, ದೀರ್ಘಕಾಲ ಅಧಿಕಾರ ಅನುಭವಿಸಿದವರು ಇದ್ದಾರಾದರೂ, ಅಧಿಕಾರ ಕೈತಪ್ಪಿದೊಡನೆ ಕರಿಕೋಟು ತೊಟ್ಟು ಕಾರ್ಪೊರೇಟ್ ವಕೀಲರಾಗಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.
ಅಧಿಕಾರದ ವಾಸನೆ ಬಂದಾಗಲಷ್ಟೇ ಅನುಭವದ ಹೆಸರಲ್ಲಿ ಸ್ಥಾನ ಗಿಟ್ಟಿಸಲೆಂದು ಹಿಂಬಾಗಿಲ ಮೂಲಕವಾದರೂ ಸಂಸತ್ ಪ್ರವೇಶಿಸಿಬಿಡುತ್ತಾರೆ. ಜತೆಗೆ, ಹೈಕಮಾಂಡ್ ಎಂಬ ಗುಮ್ಮನ ಹೆಸರಲ್ಲಿ ಎಲ್ಲವನ್ನೂ ನಿಯಂತ್ರಿಸುವ ಪ್ರವೃತ್ತಿಯಿಂದಾಗಿ ಪಕ್ಷ ಹತಾಶ ಸ್ಥಿತಿಗೆ ತಲುಪಿರುವುದು ಸುಳ್ಳಲ್ಲ. ಅಲ್ಪಸಂಖ್ಯಾತರು, ಹಿಂದುಳಿದವರ ಬಗೆಗೆ ಪಕ್ಷ ಸಹಾನುಭೂತಿ ತೋರಿದ್ದುಶ್ಲಾಘನೀಯವಾದರೂ, ಬಹುಸಂಖ್ಯಾತರಿಗೆ ಇದು ‘ಓಲೈಕೆ ರಾಜಕಾರಣವಾಗಿ’ ಕಂಡು, ಪಕ್ಷಕ್ಕೆ ಕಂಟಕಕಾರಿಯಾಗಿಬಿಟ್ಟಿತು.ಇದನ್ನು ಕಾಂಗ್ರೆಸ್ ಗ್ರಹಿಸದಿದ್ದುದು ದುರಂತ.
ಇಷ್ಟು ಸಾಲದೆಂಬಂತೆ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ನೇವಿಽಯನ್ನು ಮರುಸ್ಥಾಪನೆ ಮಾಡಲಾಗುವುದು’ ಎಂಬ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಯು ಕಾಂಗ್ರೆಸ್ ಅವಸಾನದ ವೇಗವನ್ನು ತೀವ್ರಗೊಳಿಸಿದೆ ಎನ್ನಲಡ್ಡಿಯಿಲ್ಲ. ದಿಗ್ವಿಜಯ್‌ರಂಥವರ ಬೇಜವಾಬ್ದಾರಿ ಹೇಳಿಕೆಗಳು ಪಕ್ಷದ ಬುಡಕ್ಕೇ ಕೊಡಲಿಯೇಟು ನೀಡುತ್ತಿವೆ ಎಂಬುದೂ ಅದರ ಅರಿವಿಗೆ ಬಂದಂತಿಲ್ಲ.
ಸೋಲೆಂಬುದು ಗೆಲುವಿನ ಸೋಪಾನವಾಗಬೇಕೇ ಹೊರತು ಸಮಾಧಿಗೆ ದಾರಿಯಾಗಬಾರದು. ಒಂದು ಕಾಲಕ್ಕೆ ಇಂಥದೇ ಹೀನಸ್ಥಿತಿಯಲ್ಲಿದ್ದ ಬಿಜೆಪಿ, ತನಗೊದಗಿದ್ದ ಸಂಕಷ್ಟವನ್ನೇ ಸವಾಲಾಗಿ ಸ್ವೀಕರಿಸಿ ಫೀನಿಕ್ಸ್‌ನಂತೆ ದೂಳಿನಿಂದ ಪುಟಿದೆದ್ದು ಅಧಿಕಾರ ಹಿಡಿಯಿತು. ಈ ಬೆಳವಣಿಗೆ ಕಾಂಗ್ರೆಸ್ ಗೆ ಮೇಲ್ಪಂಕ್ತಿಯಾಗಬೇಕು, ಅದು ಮತ್ತೊಮ್ಮೆ ಮೈಕೊಡವಿಕೊಂಡು ಎದ್ದುನಿಲ್ಲಬೇಕು.
ಏಕೆಂದರೆ ಪ್ರಜಾಪ್ರಭುತ್ವದ ಯಶಸ್ಸಿಗೆ ಸಮರ್ಥ ಆಡಳಿತ ಪಕ್ಷವಷ್ಟೇ ಅಲ್ಲದೆ, ಬಲಿಷ್ಠ ವಿಪಕ್ಷವೂ ಮುಖ್ಯ. ಪ್ರಸಕ್ತ ರಾಜಕೀಯವಾತಾವರಣ ಮತ್ತು ಶ್ರೀಸಾಮಾನ್ಯರ ಚಿತ್ತಸ್ಥಿತಿಯನ್ನು ಅವಲೋಕಿಸಿದರೆ, ಕಾಂಗ್ರೆಸ್ ಪುನಃ ಅಧಿಕಾರ ಗದ್ದುಗೆಯೇರುವುದು ದುಸ್ತರವೇ; ಆದರೆ ಕನಿಷ್ಠಪಕ್ಷ ಸಮರ್ಥ ವಿಪಕ್ಷವಾಗಿಯಾದರೂ ಹೊಮ್ಮಿ ತನ್ನ ಅಸ್ತಿತ್ವವನ್ನು ಅದು ಸಾಬೀತುಪಡಿಸಬೇಕಿದೆ.
2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಾದ ಮಹಾಸೋಲಿನಿಂದಾಗಿರುವ ಗಾಯಗಳನ್ನು ನೆಕ್ಕಿಕೊಳ್ಳುತ್ತಿರುವ ಕಾಂಗ್ರೆಸ್ ಇನ್ನಾದರೂ ಪಾಠ ಕಲಿಯಬಹುದು, ತಪ್ಪುಗಳನ್ನು ತಿದ್ದಿಕೊಂಡು ಪುಟಿದೇಳಬಹುದು ಎಂಬ ಆಶಯಈಡೇರುವುದೇ ಅಥವಾ ಹುಸಿಯಾಗುವುದೇ? ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳಿಂದಾಗಿ ಬಿಜೆಪಿ ಅಧಿಕಾರದ ಗದ್ದುಗೆ ಏರುವಂತಾಯಿತು; ಒಂದೊಮ್ಮೆ ಕಾಂಗ್ರೆಸ್ ‘ಕೈ’ಗೆ ಅಧಿಕಾರ ದಕ್ಕಿದರೆ, ಅದು ಒದಗುವುದು ಪ್ರಸ್ತುತ ಬಿಜೆಪಿ ಎಸಗುತ್ತಿರುವ ತಪ್ಪುಗಳಿಂದಲೇ ವಿನಾ, ಕಾಂಗ್ರೆಸ್ ಏನನ್ನೋ ಕಡಿದು ಕಟ್ಟೆಹಾಕಿದೆ ಎಂಬ ಕಾರಣಕ್ಕಲ್ಲ.
ಎದುರಾಳಿಯ ವೈಫಲ್ಯ-ದೌರ್ಬಲ್ಯಗಳ ಮೇಲೆ ಅಟ್ಟಹಾಸಗೈಯುವುದು ನಮ್ಮ ಚುನಾವಣಾ ಅಖಾಡದಲ್ಲಿನ ‘ಸಮಯ-ಪ್ರಮಾಣಿತ ಸೂತ್ರ’ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇದಕ್ಕಾಗಿ ಕಾಂಗ್ರೆಸ್ ಶಬರಿಯಂತೆ ಕಾಯಬೇಕು.