ಭಾರತೀಯ ನೌಕಾಪಡೆಗೆ ವಿಕ್ರಾಂತ ಬಲ, ಕಾಮೋವ್ ಛಲ
ಕದನ ಕುತೂಹಲ
ಗಿರೀಶ್ ಲಿಂಗಣ್ಣ
ಭಾರತವು ತನ್ನ ಕಾಮೋವ್ ಕೆಎ-31 ಹೆಲಿಕಾಪ್ಟರ್ ಖರೀದಿ ಯೋಜನೆಯನ್ನು ತಡೆಹಿಡಿದಿದೆ ಎಂಬ ಮಾಧ್ಯಮ ವರದಿಗಳು ಪ್ರಕಟವಾಗುತ್ತಿವೆ. ಇದೇ ವೇಳೆಗೆ, ದೇಶೀಯವಾಗಿ ನಿರ್ಮಿಸಲಾದ ವಿಮಾನವಾಹಕ ಯುದ್ಧನೌಕೆ (ಇಂಡಿಜಿನಸ್ ಏರ್‌ಕ್ರಾಫ್ಟ್ಕ್ಯಾರಿಯರ್ ಐಎಸಿ-1) ‘ಐಎನ್‌ಎಸ್ ವಿಕ್ರಾಂತ್’ ನೌಕಾಪಡೆಗೆ ಶೀಘ್ರವಾಗಿ ಸೇರ್ಪಡೆಗೊಳ್ಳಲಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.
ಸದರಿ ವಿಕ್ರಾಂತ್ ನೌಕೆಯು ಕೆಎ-31 ಮತ್ತು ಲಾಕ್‌ಹೀಡ್ ಮಾರ್ಟಿನ್ ನಿರ್ಮಾಣದ ಎಂಎಚ್-60 ಆರ್‌ನಂಥ ಬಹುಪಾತ್ರದ ಹೆಲಿಕಾಪ್ಟರ್‌ ಗಳೊಂದಿಗೆ ಕಾರ್ಯನಿರ್ವಹಿಸಬಲ್ಲದು ಎಂದು ಭಾರತೀಯ ನೌಕಾಪಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಭಾರತ-ರಷ್ಯಾ ನಡುವಿನ ಒಪ್ಪಂದದ ಅನ್ವಯ, 520 ಮಿಲಿಯನ್ ಡಾಲರ್ ವೆಚ್ಚದಲ್ಲಿ ರಷ್ಯಾದಿಂದ 10 ಹೆಲಿ ಕಾಪ್ಟರ್‌ಗಳನ್ನು ಭಾರತ ಖರೀದಿಸಲಿತ್ತು; ಆದರೆ ಈ ವಿಚಾರದಲ್ಲಿ ಒಂದಷ್ಟು ಸಮಸ್ಯೆಗಳು ಕಾಣಿಸಿಕೊಂಡವು.
2019ರಲ್ಲೇ ಒಪ್ಪಂದಕ್ಕೆ ಸಮ್ಮತಿಸಿದ್ದರೂ, ಕೋವಿಡ್ ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಕದನದಿಂದಾಗಿ ಈ ಪ್ರಕ್ರಿಯೆ ನಿಧಾನಗೊಂಡಿತು. ಇತ್ತೀಚಿನ ಮಾಹಿತಿಯಂತೆ, ಹೆಲಿಕಾಪ್ಟರ್ ಖರೀದಿ ಕುರಿತಾದ ಚರ್ಚೆಗಳು ಇನ್ನೂ ನಡೆಯುತ್ತಿವೆ. ಕೆಎ-31ರ ವೈಶಿಷ್ಟ್ಯಗಳು ಮೇಲ್ಮೈ ಹಡಗುಗಳು ಮತ್ತು ವೈಮಾನಿಕ ಗುರಿಗಳನ್ನುಪತ್ತೆ ಹಚ್ಚಲೆಂದು ಈ ಹೆಲಿಕಾಪ್ಟರ್‌ಗಳ ಸೃಷ್ಟಿಯಾಯಿತು.
ನೆಲ ಅಥವಾ ನೀರಿನ ಮೇಲ್ಮೈಗೆ ಸನಿಹವಾಗಿ, ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸುವ ‘ವೈಮಾನಿಕ ಗುರಿಗಳ’ ಕಡೆಗೆ ಇದು ಕಣ್ಣಿಡುತ್ತದೆ. ಮೇಲ್ಮೈ ಹಡಗುಗಳನ್ನು ಗುರುತಿಸುವುದು ಮಾತ್ರವಲ್ಲದೆ, ಸಾಗರ ಮತ್ತು ನೆಲದ ಮೇಲಿರುವ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರಕ್ಕೆ ಆ ಮಾಹಿತಿಯನ್ನು ಸ್ವಯಂಚಾಲಿತವಾಗಿ ರವಾನಿಸುವುದು ಈ ಹೆಲಿಕಾಪ್ಟರ್‌ನ ಪೂರಕ ಸಾಮರ್ಥ್ಯವಾಗಿದೆ. ಶತ್ರುನೌಕೆಗಳು ಹಾಗೂ ವಿಮಾನಗಳ ಮಾಹಿತಿಯನ್ನು ಇದು ಸೂಕ್ತ ಸಮಯದಲ್ಲಿ ನೀಡುವುದರಿಂದ ನೌಕಾಪಡೆ ಮತ್ತು ವೈಮಾನಿಕ ಕಾರ್ಯಾಚರಣೆಗಳು ಇನ್ನಷ್ಟು ಪರಿಣಾಮಕಾರಿ ಆಗಬಲ್ಲವು.
ಇದರ ಟ್ರಾನ್ಸ್‌ಪೋರ್ಟ್ ಕ್ಯಾಬಿನ್‌ನ ತಳದಲ್ಲಿ ತಿರುಗುವ ಯಾಂತ್ರಿಕ ವ್ಯವಸ್ಥೆಯುಳ್ಳ 6 ಮೀಟರಿನ -ಟ್ -ಆಂಟೆನಾ ಅಳವಡಿಸ ಲಾಗಿದ್ದು, ಇದು ಪ್ರತಿ ನಿಮಿಷಕ್ಕೆ 6 ಬಾರಿ ಸತತವಾಗಿ ಸುತ್ತುತ್ತದೆ. ಇದು ಸಂಪೂರ್ಣವಾಗಿ ಸಮತಲ ಪ್ರದೇಶವನ್ನು ಸ್ಕ್ಯಾನ್ ಮಾಡಬಲ್ಲದು. ಹೆಲಿಕಾಪ್ಟರ್‌ನಲ್ಲಿರುವ “-  ’ ಅಂತ್ಯಂತ ನಿಖರವಾಗಿ ಗುರಿ ಯನ್ನು ತೋರಿಸುತ್ತದೆ.
ನೆಲದ ಮೇಲಿನ ಏರ್‌ಫೀಲ್ಡ್ ಹಾಗೂ ವಿಮಾನವಾಹಕ ನೌಕೆಯ ಮೇಲೆ ಹಗಲು-ರಾತ್ರಿ ಎರಡೂ ವೇಳೆಯಲ್ಲಿ, ಎಂಥ ಕಠಿಣ ಹವಾಮಾನ ಪರಿಸ್ಥಿತಿಯಲ್ಲೂ, ಪ್ರಪಂಚದ ಯಾವುದೇ ಸಾಗರಭಾಗದಲ್ಲೂ ಈ ಹೆಲಿಕಾಪ್ಟರ್ ಕಾರ್ಯಾಚರಿಸಬಲ್ಲದು. ತುಲನಾತ್ಮಕವಾಗಿ ನೋಡಿದಾಗ, ಈ ಹೆಲಿಕಾಪ್ಟರ್ ಮೂಲಕ ನಡೆಸುವ ರೆಡಾರ್ ಪಿಕೆಟ್ ಕಾರ್ಯಾಚರಣೆಗಳು ಸಾಮಾನ್ಯ ವಾಗಿ ಕಡಿಮೆ ಖರ್ಚಿನವು ಎನ್ನಲಾಗುತ್ತದೆ.
ಒಂದು ಎಂಜಿನ್ನಿನ ಹಾರಾಟ ಮತ್ತು ಭೂಸ್ಪರ್ಶ ಸಾಮರ್ಥ್ಯದಲ್ಲೂ ಈ ಹೆಲಿಕಾಪ್ಟರ್ ಅತ್ಯಂತ ಸುರಕ್ಷಿತ. ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆಗೆ, ವಾಯುಸಂಚಾರದ ನಿಯಂತ್ರಣಕ್ಕೆ ರಷ್ಯಾ ಇದನ್ನು ನಿರ್ಮಿಸಿದೆ. ಇದರ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಆಗಿದ್ದು, ಗಸ್ತು ತಿರುಗುವಾಗ ಗಂಟೆಗೆ 100 ಕಿ.ಮೀ. ವೇಗದಲ್ಲಿ ಹಾರಬಲ್ಲದು. 2.5 ಗಂಟೆಗಳ ಗಸ್ತು ಸಾಮರ್ಥ್ಯ, ಗರಿಷ್ಠ 3500 ಮೀ. ಎತ್ತರದಲ್ಲಿ ಗಸ್ತು ತಿರುಗಬಲ್ಲ ಶಕ್ತಿ ಇದಕ್ಕಿದೆ.
ಭಾರತೀಯ ನೌಕಾಪಡೆಯು ಐಎನ್‌ಎಸ್ ವಿರಾಟ್ ಮತ್ತು ಇತರ ಯುದ್ಧನೌಕೆಗಳಲ್ಲಿ ಬಳಸಲೆಂದು ಈ ಹೆಲಿಕಾಪ್ಟರ್‌ಗಳ ಖರೀದಿಗೆ 1999ರಲ್ಲಿ ಆದೇಶ ನೀಡಿತು. ಮೊದಲ ಖರೀದಿಯ ಬಳಿಕ, ಮುಂದಿನ 10 ವರ್ಷಗಳಲ್ಲಿ ಹೆಚ್ಚಿನ ಖರೀದಿಗೆ ಮುಂದಾದ ಪ್ರಯುಕ್ತ, ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ ಇಂಥ 14 ಹೆಲಿಕಾಪ್ಟರ್‌ಗಳ ತಂಡವಿದೆ. ಬತ್ತಳಿಕೆಯಲ್ಲಿದೆ ಮತ್ತೊಂದು ಆಯುಧ ಭಾರತೀಯ ನೌಕಾಪಡೆಯ ಹೇಳಿಕೆಯ ಪ್ರಕಾರ, ಅಮೆರಿಕದಿಂದ ಖರೀದಿಸಿದ ‘ಎಂಎಚ್-೬೦ ರೋಮಿಯೋ’ ಹೆಸರಿನ ಬಹುಪಾತ್ರದ ಹೆಲಿಕಾಪ್ಟರ್‌ಗಳು ಐಎನ್‌ಎಸ್ ವಿಕ್ರಾಂತ್ ನೌಕೆಯಲ್ಲಿ ಕಾರ್ಯಾಚರಿಸಲಿವೆ.
ಮೊದಲ 2 ಹೆಲಿಕಾಪ್ಟರ್‌ಗಳು 2022ರ ಜುಲೈ 28ರಂದು ನೌಕಾಪಡೆಗೆ ಹಸ್ತಾಂತರಗೊಂಡಿದ್ದು, ಮಿಕ್ಕ 24 ಹೆಲಿಕಾಪ್ಟರ್‌ಗಳು 2025ರಲ್ಲಿ ಅದರ ಮಡಿಲು ಸೇರಲಿವೆ. ಈ ಹೆಲಿಕಾಪ್ಟರ್ ಗಳಿಂದಾಗಿ ಹಿಂದೂ ಮಹಾಸಾಗರ ಮತ್ತುಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಸಮರ ಸಾಮರ್ಥ್ಯ ಹೆಚ್ಚಲಿದೆ. ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಅಮೆರಿಕದ ವತಿಯಿಂದ ಹೆಲಿಕಾಪ್ಟರ್ ಚಾಲನೆಯ ತರಬೇತಿಯೂ ಸಿಗಲಿದೆ.
ಮಾರಕ ರಾಕೆಟ್ ವ್ಯವಸ್ಥೆ ಹಾಗೂ ಹೆಲ್ -ರ್ ಕ್ಷಿಪಣಿಗಳನ್ನು ಅಳವಡಿಸಿಕೊಳ್ಳಲಿರುವ ಈ ಹೆಲಿಕಾಪ್ಟರ್‌ಗಳು ಭಾರತೀಯ ನೌಕಾಪಡೆಯ ‘ಆಂಟಿ-ಸಬ್ ಮರೀನ್’ ಮತ್ತು ‘ಆಂಟಿ-ಸ-ಸ್’ ಕಾರ್ಯಾಚರಣಾ ಸಾಮರ್ಥ್ಯಗಳಿಗೆ ಮತ್ತಷ್ಟು ಬಲ ತುಂಬಲಿವೆ. ಜತೆಗೆ, ಭಾರತಕ್ಕೆಂದೇ ನಿರ್ಮಿಸಲಾದ ಆಧುನಿಕ ಏವಿಯಾನಿಕ್ಸ್ ಸೆನ್ಸರ್‌ಗಳು ಮತ್ತು ಆಯುಧಗಳನ್ನೂ ಈ ಹೆಲಿಕಾಪ್ಟರ್ಗಳಿಗೆ ಅಳವಡಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿದುಬಂದಿದೆ.
ಭಾರತೀಯ ನೌಕಾಪಡೆಯಲ್ಲಿರುವ ‘ಸೀ ಕಿಂಗ್’ 42ಎ/ಬಿ ಎಎಸ್‌ಡಬ್ಲ್ಯು ಹೆಲಿಕಾಪ್ಟರ್‌ಗಳು ಹಳತಾಗಿದ್ದರಿಂದ ಅವನ್ನು ನಿರ್ವಹಿಸಲು ಕಷ್ಟವಾಗಿತ್ತು ಮತ್ತು ಅವುಗಳಿಗೆ ಬದಲಿ ವ್ಯವಸ್ಥೆ ಮಾಡುವ ಅಗತ್ಯ ಬಹಳ ಹಿಂದಿನಿಂದಲೇ ಇತ್ತು. ‘ಎಂಎಚ್-60 ರೋಮಿಯೋ’ ಈ ನಿಟ್ಟಿನಲ್ಲಿ ಭಾರತದ ಅಗತ್ಯವನ್ನು ಪೂರೈಸಬಲ್ಲ ಅತ್ಯುತ್ತಮ ಆಯ್ಕೆಗಳಲ್ಲಿ ಒಂದೆನಿಸಿದೆ. ಭಾರತದ ಪ್ರತಿಯೊಂದು ವಿಧ್ವಂಸಕ ಹಡಗು ಹಾಗೂ ಯುದ್ಧನೌಕೆಗಳು ಕನಿಷ್ಠಪಕ್ಷ ಇಂಥ ಒಂದು ಹೆಲಿಕಾಪ್ಟರ್ ಹೊಂದುವ ನಿರೀಕ್ಷೆ ಇದ್ದು,ಭವಿಷ್ಯದ ಸಬ್‌ಮರೀನ್ ದಾಳಿಯ ಅಪಾಯವನ್ನು ತಗ್ಗಿಸಲು ಅದು ಸಹಕರಿಸುತ್ತದೆ ಎನ್ನಲಾಗುತ್ತದೆ.
ಒಟ್ಟಾರೆ ಹೇಳುವುದಾದರೆ, ರಷ್ಯಾ ನಿರ್ಮಿತ ಕೆಎ-31 ಹಾಗೂ ಅಮೆರಿಕ ನಿರ್ಮಿತ ಎಂಎಚ್-60 ರೋಮಿಯೋ ಹೆಲಿಕಾಪ್ಟರ್‌ ಗಳು ಭಾರತದ ವಿಮಾನವಾಹಕ ಯುದ್ಧನೌಕೆಗಳಾದ ಐಎನ್‌ಎಸ್ ವಿಕ್ರಾಂತ್, ವಿಕ್ರಮಾದಿತ್ಯ ಹಾಗೂ ಇತರ ಯುದ್ಧನೌಕೆ ಗಳಿಂದ ಕಾರ್ಯನಿರ್ವಹಿಸಲಿದ್ದು, ನೌಕಾಪಡೆಯ ಗಣನೀಯ ಕಾರ್ಯಾಚರಣೆಗಳ ಭಾಗವಾಗಲಿವೆ ಹಾಗೂ  ಕಾರ್ಯಾ ಚರಣೆಗಳ ಸ್ವರೂಪವನ್ನೇ ಬದಲಿಸಲಿವೆ.
ಈಗಾಗಲೇ ಜಗತ್ತಿನ ಬೃಹತ್ ವಿಮಾನವಾಹಕ ಯುದ್ಧನೌಕೆಯನ್ನು ಹೊಂದಿರುವ ಭಾರತೀಯ ನೌಕಾಪಡೆಗೆ ‘ಐಎನ್‌ಎಸ್ ವಿಕ್ರಾಂತ್’ ಯುದ್ಧನೌಕೆಯೂ ಶೀಘ್ರದ ಸೇರ್ಪಡೆಯಾಗಲಿರುವುದು ಸಮರೋನ್ಮಾದಕ್ಕೆ ಭೀಮಬಲ ಬರಲಿದೆ ಎನ್ನುತ್ತಾರೆ ವಿಷಯತಜ್ಞರು. ನೌಕಾಯಾನಕ್ಕೆ ಸನ್ನದ್ಧ ಭಾರತೀಯ ನೌಕಾಪಡೆಯ ಸೇವೆಗೆ ‘ಐಎನ್‌ಎಸ್ ಡೆಲ್ಲಿ’ಯನ್ನು ಸೇರ್ಪಡೆಗೊಳಿಸಿದ ಬಳಿಕ ಪರಿಸ್ಥಿತಿಯಲ್ಲಿ ಬದಲಾವಣೆಯಾಯಿತು. ಭಾರತೀಯ ನೌಕಾಪಡೆ ಮತ್ತು ನಾಗರಿಕ ಎಂಜಿನಿಯರ್‌ಗಳು ಯುದ್ಧನೌಕೆಗಳ ವಿನ್ಯಾಸ, ನಿರ್ಮಾಣ ಹಾಗೂ ಪೂರೈಕೆಯಲ್ಲಿ ಸ್ವಂತಿಕೆ ಮೆರೆಯುವ ಸಾಮರ್ಥ್ಯವನ್ನು ಸಾಬೀತು ಮಾಡಿದ್ದರ ಪರಿಣಾಮವಿದು.
‘ಐಎನ್‌ಎಸ್ ಡೆಲ್ಲಿ’ಯ ನಿರ್ಮಾಣದ ಅವಧಿಯಲ್ಲಿ ಸಮ್ಮಿಶ್ರ ಸರಕಾರದ ಕಾರಣದಿಂದ ರಾಜಕೀಯ ಅಸ್ಥಿರತೆ ಇದ್ದರೂ, ತಂತ್ರಜ್ಞಾನ ಯುಗದಲ್ಲಿ ತಾನು ಪ್ರವೇಶಿಸುತ್ತಿರುವುದನ್ನು ಭಾರತವು ಮೌನವಾಗಿಯೇ ಜಗತ್ತಿಗೆ ಸಾರಿತ್ತು. ಈ ನೌಕೆ ಮುಂಬಯಿ ಕಡಲಿನಲ್ಲಿ ಗಾಂಭೀರ್ಯದಿಂದ ಚಲಿಸಿದಾಗ, ಭಾರತದ ಸರಕಾರಿ ವ್ಯವಸ್ಥೆಯಲ್ಲಿ ಇನ್ನಷ್ಟು ಆತ್ಮವಿಶ್ವಾಸ ಮೂಡಿದ್ದು ಸುಳ್ಳಲ್ಲ.
ಐಎನ್‌ಎಸ್ ವಿಕ್ರಾಂತ್ ಈಗ ತನ್ನ ಸೇವಾಸೇರ್ಪಡೆಗೆ, ಸಾಗರಯಾನಕ್ಕೆ, ನೌಕಾಪಡೆಯ ವಿಮಾನ-ಹೆಲಿಕಾಪ್ಟರ್ ಗಳ ಸಂಚಾರಕ್ಕೆ ಹಾಗೂ ಭಾರತೀಯ ನೌಕಾಪಡೆಯು ಸಾಗರ ನಿಯಂತ್ರಣ ಸಾಧಿಸುವಂತಾಗುವುದಕ್ಕೆ ಸರ್ವಸನ್ನದ್ಧವಾಗಿದೆ. ಪಶ್ಚಿಮದ ನೆರಹೊರೆಯ ರಾಷ್ಟ್ರಗಳು ಸಬ್ ಮರೀನ್ ಆಧಾರಿತವಾಗಿ ಸಾಗರವನ್ನು ಬಿಟ್ಟುಕೊಡುವುದಿಲ್ಲ ಎಂಬ ಧೋರಣೆ ಹೊಂದಿದ್ದರೆ, ಭಾರತೀಯ ನೌಕಾಪಡೆ ತನ್ನ ಸಾಗರವನ್ನು ತಾನೇ ಆಳುವ ಧೋರಣೆಯನ್ನು ಪಾಲಿಸುತ್ತಿದೆ.
ಈ ಎರಡೂ ನೀತಿಗಳ ಪರ-ವಿರೋಧ ಚರ್ಚೆಗಳು ನಡೆದರೂ, ನೌಕಾಪಡೆ ಯಾವ ರೀತಿಯಲ್ಲಿ ನೆಲ ಮತ್ತು ಜಲವನ್ನು ಸಂರಕ್ಷಿಸಬೇಕು ಎಂಬುದರ ಆಧಾರದಲ್ಲಿ ಈ ನೀತಿಗಳು ನಿಂತಿವೆ ಎನ್ನಬೇಕು. ಭಾರತ ತನ್ನ ಮೇಲ್ಮೈ ಹಡಗುಗಳು,ವಿಮಾನವಾಹಕ ನೌಕೆ ಆಧಾರಿತ ಟಾಸ್ಕ್ ಫೋರ್ಸ್‌ಗಳು ಹಾಗೂ ಇತರ ಮೂಲಗಳ ಮೂಲಕ ತನ್ನ ವಿಶಾಲ ಸಮುದ್ರ ತೀರವನ್ನು ಕಾಯುವ ನೀತಿಯನ್ನು ಅನುಸರಿಸುತ್ತದೆ.
ಮತ್ತೊಂದೆಡೆ ಪಾಕಿಸ್ತಾನದ ಬಳಿ ಅತ್ಯಂತ ಕಡಿಮೆ ಪ್ರಮಾಣದ ಸಮುದ್ರತೀರವಿದ್ದು, ಅದು ಸಬ್‌ಮರೀನ್ ಆಧಾರಿತವಾಗಿ ತನ್ನ ಸಾಗರವನ್ನು ಬಿಟ್ಟುಕೊಡುವುದಿಲ್ಲ ಎಂಬ ನೀತಿಯನ್ನು ಅನುಸರಿಸಬೇಕಾಗಿದೆ. ನೂತನ ಡಿಜಿಟಲ್ ತಂತ್ರಜ್ಞಾನಗಳು ಕೇವಲ ಉಕ್ಕು ಮತ್ತು ನೈಟ್ರೇಟ್ ಬಳಸಿ ಯುದ್ಧ ನಡೆಸುವ ದಿನಗಳಿಗಿಂತ ಎಷ್ಟೋ ಹೆಚ್ಚಿನ ಆಧುನಿಕತೆ ಸಾಧಿಸಿರುವುದರಿಂದ ಈ ನೀತಿಗಳನ್ನೂ ಈಗ ಮರುಪರಿಶೀಲನೆ ಮಾಡಲಾಗುತ್ತದೆ.
ಮಧ್ಯಯುಗದ ಸೈನಿಕರು ತಾವು ಖಡ್ಗ ಹಿಡಿದು ಹೋರಾಡಬೇಕೇ ಅಥವಾ ಈಟಿ ಹಿಡಿಯಬೇಕೇ ಎಂಬ ಜಿಜ್ಞಾಸೆ ಹೊಂದಿದ್ದಂತೆ, ಆಧುನಿಕ ನೌಕಾಪಡೆಗಳು ಹೆಚ್ಚು ಸಬ್‌ಮರೀನ್ ನಿರ್ಮಿಸಬೇಕೇ ಅಥವಾ ವಿಮಾನವಾಹಕ ನೌಕೆಗಳನ್ನೇ ಎಂದು ಯೋಚಿಸು ತ್ತಿವೆ. ಒಂದು ವೇಳೆ ಆ ರಾಷ್ಟ್ರ ಮತ್ತು ನೌಕಾಪಡೆಗೆ ಸಾಮರ್ಥ್ಯವಿದ್ದರೆ, ಈ ಎರಡನ್ನೂ ಹೊಂದುವುದು ಸೂಕ್ತವಾಗಿರುತ್ತದೆ ಎನ್ನುತ್ತಾರೆ ವಿಷಯತಜ್ಞರು.