ಕತ್ತಲಲ್ಲಿ ಕೈಹಿಡಿದು ನಡೆಸುವ ಕರುಣಾಳು ಬೆಳಕೇ ಗುರು
ತನ್ನಿಮಿತ್ತ
ಮುರಲೀ ಮೋಹನ್‌ ಚೂಂತಾರು
ಶಿಷ್ಯರಿಗೆ ಸಮಸ್ತ ವಿದ್ಯೆ-ವಿಚಾರಗಳನ್ನು ಧಾರೆ ಎರೆಯುವ ಗುರುಗಳ ಮಹತ್ವ, ತ್ಯಾಗ ಮನೋಭಾವ, ಬದ್ಧತೆ ಇತ್ಯಾದಿ ಗಳಿಗೆ ಸಲ್ಲಬೇಕಾದ ಗೌರವ ಮತ್ತು ಮರ್ಯಾದೆಗಳ ಸಲ್ಲಿಕೆಯಾಗದೆ, ಗುರುವೃಂದವು ಸಮಾಜದ ಅನಾದರಕ್ಕೆ ಗುರಿ ಯಾಗುತ್ತಿದೆಯಾ ಎನಿಸುತ್ತಿದೆ. ನಾಳೆ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ಕುರಿತಾದ ಆತ್ಮಾವಲೋಕನ ಅತ್ಯಗತ್ಯ.
ಭಾರತ ಕಂಡ ಅತ್ಯಂತ ಸರಳ-ಸಜ್ಜನ- ಸಂಭಾವಿತ-ಸುಶಿಕ್ಷಿತ ಶಿಕ್ಷಕರೂ, ದೇಶದ ಎರಡನೇ ರಾಷ್ಟ್ರಪತಿಯೂ ಆಗಿದ್ದ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಸೆಪ್ಟೆಂಬರ್ 5. ಅದು ದೇಶಾದ್ಯಂತ ‘ಶಿಕ್ಷಕರ ದಿನಾಚರಣೆ’ ಆಚರಿಸಿ, ಅವರ ತತ್ವಾದರ್ಶ ಮತ್ತು ಸಿದ್ಧಾಂತಗಳನ್ನು ಸ್ಮರಿಸುತ್ತ, ಎಲ್ಲ ಶಿಕ್ಷಕ ಬಂಧುಗಳಿಗೆ ಶುಭಾಶಯ ಕೋರುವ ಪರ್ವದಿನ.
ಇದು ಕೇವಲ ಒಂದು ದಿನದ ‘ಕಾಟಾಚಾರದ’ ಆಚರಣೆ ಆಗಬಾರದು. ನಮ್ಮನ್ನು ತಿದ್ದಿ ತೀಡಿ, ಸುಶಿಕ್ಷಿತರನ್ನಾಗಿ ಮಾಡಿದ ಗುರುವ ರೇಣ್ಯರನ್ನು ಸ್ಮರಿಸಿ ಮನಃಪೂರ್ವಕವಾಗಿ ಗೌರವಿಸುವ ಶಿಷ್ಯ ಪರಂಪರೆಯನ್ನು ನಾವು ಮಗದೊಮ್ಮೆ ಸೃಷ್ಟಿಸಬೇಕಾಗಿದೆ. ಬದಲಾದ ಶಿಕ್ಷಣ ವ್ಯವಸ್ಥೆ, ಕಲಿಕಾ ವಾತಾವರಣ ಮತ್ತು ಬದಲಾಗುತ್ತಿರುವ ಮನೋಧರ್ಮಕ್ಕೆ ಅನುಗುಣವಾಗಿ ಗುರು-ಶಿಷ್ಯರ ಸಂಬಂಧದಲ್ಲೂ ವ್ಯತ್ಯಯಗಳಾಗಿವೆ; ಪವಿತ್ರ ವಾಗಿದ್ದ ಈ ಸಂಬಂಧವೀಗ ಕೇವಲ ವ್ಯಾವಹಾರಿಕ ಬಂಧವಾಗಿ ಬದಲಾಗಿರುವುದು ಖೇದಕರ ವಿಚಾರ.
‘ಎಲ್ಲರೂ ನಡೆವ ದಾರಿಯಲ್ಲಿ ನೀನು ಕುರಿಯಂತೆ ಹಿಂಬಾಲಿಸಬೇಡ. ನಿನ್ನದೇ ದಾರಿ ನಿರ್ಮಿಸಿಕೊಂಡು, ನೀನಡೆದ ದಾರಿಯಲ್ಲಿಶಾಶ್ವತ ಹೆಜ್ಜೆಗುರುತನ್ನು ಹುಟ್ಟುಹಾಕು’ ಎಂದಿದ್ದಾರೆ ಖ್ಯಾತ ಚಿಂತಕ ರಾಲ್ ವಾಲ್ಡೊ ಎಮರ್‌ಸನ್. ಸಾಂಪ್ರದಾಯಿಕವಾಗಿ ಹತ್ತರಲ್ಲಿ ಒಬ್ಬನಾಗಿ, ಎಲ್ಲರೂ ಸವೆಸಿದ ದಾರಿಯಲ್ಲೇ ನಡೆದು ಹಿಂಬಾಲಿಸಿದಲ್ಲಿ, ನೀವು ಜೀವನದಲ್ಲಿ ಒಂದು ಹಂತವನ್ನು ದಾಟಿ ಮುಂದೆ ಹೋಗಲಾರಿರಿ.
ಹೋಗಲು ಸಾಮರ್ಥ್ಯ ಮತ್ತು ಆತ್ಮವಿಶ್ವಾಸವೂ ಇರುವುದಿಲ್ಲ. ಆದರೆ ಸ್ವಸಾಮರ್ಥ್ಯದಿಂದ ನಿಮ್ಮದೇ ದಾರಿ ಹುಡುಕಿಕೊಂಡುಆತ್ಮವಿಶ್ವಾಸದಿಂದ ಮುನ್ನುಗ್ಗಿದಲ್ಲಿ, ಯಾರೂ ತಲುಪದ ಗುರಿಯನ್ನು ತಲುಪಬಲ್ಲಿರಿ ಎಂಬುದು ಈ ಮಾತಿನ ಅರ್ಥ. ಪ್ರಸಕ್ತ ಶಿಕ್ಷಣಮಾರ್ಗವನ್ನು ಅವಲೋಕಿಸಿದಾಗ ಈ ಮಾತು ನಿಜವಾಗುವ ಲಕ್ಷಣಗಳು ಗೋಚರಿಸುತ್ತವೆ. ಹಿಂದೆಲ್ಲಾ, ತಂದೆಯ ವೃತ್ತಿ ಯನ್ನು ಅವನ ಮಕ್ಕಳೂ ಮುಂದುವರಿಸಿಕೊಂಡು ಹೋಗುವ ಪರಿಪಾಠವಿತ್ತು- ಅಕ್ಕಸಾಲಿಗನ ಮಗ ಅಕ್ಕಸಾಲಿಗ, ಚಮ್ಮಾರನ ಮಗ ಚಮ್ಮಾರ, ವ್ಯಾಪಾರಿಯ ಮಗ ವ್ಯಾಪಾರಿ ಹೀಗೆ.
ಆದರೆ ೮೦-೯೦ರ ದಶಕದಲ್ಲಿ ಬದಲಾವಣೆಯ ಗಾಳಿ ಬೀಸಿದ್ದೇ ಬೀಸಿದ್ದು, ಒಂದಷ್ಟು ಕ್ರಾಂತಿಕಾರಕ ಬದಲಾವಣೆಗಳಾದವು. ತಮ್ಮ ವೃತ್ತಿಯ ಸಾಂಪ್ರದಾಯಿಕ ಕಷ್ಟಗಳಿಂದ ತಮ್ಮ ಮಕ್ಕಳು ಹೊರಬರಬೇಕೆಂದರೆ ವಿದ್ಯಾಭ್ಯಾಸವೊಂದೇ ಅದಕ್ಕೆ ರಾಮಬಾಣ ಎಂಬ ಸತ್ಯವನ್ನರಿತ ಹೆತ್ತವರು, ತಮ್ಮ ಮಕ್ಕಳಿಗಾಗಿ ಪರ್ಯಾಯ ವೃತ್ತಿಯ ಕುರಿತಾಗಿ ಆಲೋಚಿಸಲಾರಂಭಿಸಿದರು. ವಂಶಪಾ ರಂಪರ್ಯದ ವೃತ್ತಿಗೆ ಹೊರತಾದ ಸರಕಾರಿ ಮತ್ತು ಖಾಸಗಿ ಕೆಲಸಗಳಿಗೆ, ಮಕ್ಕಳನ್ನು ಒಗ್ಗಿಸಿದರು, ತಾವೂ ಒಗ್ಗಿಕೊಂಡರು.
ಕ್ರಮೇಣ ಎಲ್ಲರಿಗೂ ವಿದ್ಯಾಭ್ಯಾಸ ದೊರೆತರೂ ಅದಕ್ಕೆ ತಕ್ಕ ಅನುಪಾತದಲ್ಲಿ ಉದ್ಯೋಗಗಳ ಸೃಷ್ಟಿಯಾಗದೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾದಾಗ, ‘ಪ್ರತಿಷ್ಠಿತ ಸ್ವಯಂವೃತ್ತಿ ಪ್ರವೀಣರನ್ನು’ ರೂಪಿಸುವ ಕನಸು ಹೆತ್ತವರಲ್ಲಿ ಚಿಗುರೊಡೆಯಿತು. ಇದು ಅದೆಷ್ಟು ವ್ಯಾಪಕವಾಗಿ ಹಬ್ಬಿತೆಂದರೆ, ಮಕ್ಕಳ ಆಸೆ-ಆಕಾಂಕ್ಷೆ, ಸಹಜ ಪ್ರತಿಭೆಯನ್ನು ಲೆಕ್ಕಿಸದೆ ‘ನಮ್ಮ ಮಕ್ಕಳು ವೈದ್ಯ, ವಕೀಲ ಅಥವಾ ಎಂಜಿನಿಯರ್ ಆಗಬೇಕು, ಇವಕ್ಕೆ ಹೊರತಾದ ವೃತ್ತಿಗಳೇ ಇಲ್ಲ’ ಎಂದು ಪ್ರತಿಯೊಬ್ಬ ಹೆತ್ತವರೂ ಹಂಬಲಿಸುವಂತಾಯಿತು, ಮಕ್ಕಳ ಮೇಲೆ ಒತ್ತಡ ಹೇರುವುದಕ್ಕೆ ಅದು ಕಾರಣವಾಯಿತು.
ಈ ವಲಯದಲ್ಲೂ ದಟ್ಟಣೆಯಾಗಿ ನಿರುದ್ಯೋಗ, ಅಸಹನೆ, ಹತಾಶೆ ಮತ್ತು ಆರ್ಥಿಕ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದವು.ಪರಿಣಾಮವಾಗಿ, ಹೆತ್ತವರು ಮತ್ತು ಮಕ್ಕಳ ಚಿಂತನೆಯಲ್ಲಿ ಸಕಾರಾತ್ಮಕ ಬದಲಾವಣೆಗಳಾದವು. ಮಕ್ಕಳ ಹವ್ಯಾಸ, ಪ್ರತಿಭೆ, ಆಸಕ್ತಿ ಮತ್ತು ಆಯ್ಕೆಗೆ ಒತ್ತುನೀಡಿ ಪ್ರೋತ್ಸಾಹಿಸುವ ಪರಿಪಾಠಕ್ಕೆ ಹೆತ್ತವರು ಒಡ್ಡಿಕೊಂಡರು.
ಹೀಗಾಗಿ, ಡಿ.ಜೆ., ಕಲಾನಿರ್ದೇಶಕ, ಆಹಾರತಜ್ಞ, ಬಾಣಸಿಗ, ದೈಹಿಕ ತರಬೇತುದಾರ, ಫ್ಯಾಷನ್ ತಜ್ಞ, ರೇಡಿಯೋ ಜಾಕಿ, ಸಮಾಜ ಸೇವಕ, ಬರಹಗಾರ ಹೀಗೆ ಹಲವು ವೃತ್ತಿಗಳಿಗೆ ಮಕ್ಕಳು ತೆರೆದುಕೊಳ್ಳುವಂತಾಯಿತು. ಇನ್ನೊಂದು ಸ್ವಾರಸ್ಯಕರ ಮತ್ತು ಚೇತೋ ಹಾರಿ ಬದಲಾವಣೆ ಎಂದರೆ, ಇಂದಿನ ಮಕ್ಕಳು ತಮ್ಮಾಯ್ಕೆಯ ಕ್ಷೇತ್ರ ಮಾತ್ರವಲ್ಲದೆ ಸಾಮಾನ್ಯಜ್ಞಾನವನ್ನು ಅರಗಿಸಿಕೊಳ್ಳು ವಲ್ಲಿಯೂ ಜಾಣರಾಗಿದ್ದಾರೆ. ಕಲಿಕೆಗೆ ಬೇಕಾದ ಮೂಲ ಸಾಮಗ್ರಿಗಳನ್ನು ಅಂತರ್ಜಾಲ ಅಥವಾ ಇನ್ನಾವುದೇ ಮೂಲದಿಂದ ಪಡೆದು, ತಮ್ಮ ಮುಂದಿನ ದಾರಿಯ ಕುರಿತು ಸ್ಪಷ್ಟ ನಿಲುವು ತಳೆಯುವಷ್ಟು ಸಮರ್ಥರಾಗಿದ್ದಾರೆ.
ಪ್ರಸಿದ್ಧ ವೈದ್ಯರೊಬ್ಬರ ಮಗನೊಂದಿಗೆ ಇತ್ತೀಚೆಗೆ ಮಾತನಾಡುವಾಗ, ‘ನೀನ್ಯಾಕೆ ವೈದ್ಯನಾಗಲಿಲ್ಲ?’ ಎಂದು ನಾನು ಕೇಳಿದ್ದಕ್ಕೆ, ‘ನನಗದರದಲ್ಲಿ ಆಸಕ್ತಿಯಿಲ್ಲ; ಒಗ್ಗದ ವಿಚಾರದ ಬಗ್ಗೆ ನಾನ್ಯಾಕೆ ಓದಲಿ?’ ಎಂದು ಆತ ಮರುಪ್ರಶ್ನಿಸಿದ. ‘ವೈದ್ಯನಾದರೆ ಸಾಕಷ್ಟು ಸಂಪಾದನೆ, ಹೆಸರು ಗಳಿಸಬಹುದಲ್ಲ?’ ಎಂದು ನಾನು ಕೇಳಿದ್ದಕ್ಕೆ ‘ನನ್ನ ಖರ್ಚಿಗೆ ಅತಿಯಾದ ಹಣದ ಅಗತ್ಯವಿಲ್ಲ; ನನ್ನಓದಿಗೆ ಮೆರಿಟ್ ಮೂಲಕ ವಿದ್ಯಾರ್ಥಿ ವೇತನ ಪಡೆದೇ ಓದುತ್ತೇನೆ’ ಎಂದು ದಿಟ್ಟವಾಗಿ ಉತ್ತರಿಸಿದ. ಆಗ ಅವನ ಕಂಗಳಲ್ಲಿ ಆತ್ಮವಿಶ್ವಾಸ ತುಳುಕುತ್ತಿತ್ತು. ಆತ ಮುಂದುವರಿದು, ‘ನಾನು ಮೂಲವಿಜ್ಞಾನವನ್ನು ಇಷ್ಟಪಟ್ಟಿದ್ದೇನೆ.
ಅದರಲ್ಲೇ ಸಂಶೋಧನೆ ಮಾಡಿ ಜೀವಜಗತ್ತಿಗೆ ಹೊಸವ್ಯಾಖ್ಯಾನ ನೀಡುವ ಆಸೆ ನನಗಿದೆ’ ಎಂದಾಗ ನಾನು ನಿಬ್ಬೆರಗಾಗಿದ್ದೆ. ‘ಅಪ್ಪ ನೆಟ್ಟ ಆಲದಮರವೆಂದು ಅದಕ್ಕೆ ನೇಣುಹಾಕಿಕೊಳ್ಳುವ ಅಗತ್ಯವಿಲ್ಲ.  ನಮ್ಮ ಪ್ರತಿಭೆ, ಆಸಕ್ತಿ ಮತ್ತು ವಿಚಾರಧಾರೆಗೆ ಪೂರಕ ವಾದ ವಿದ್ಯಾಭ್ಯಾಸವನ್ನು ಪಡೆದೇ ತೀರುತ್ತೇವೆ’ ಎಂಬ ಇಂಥ ಆತ್ಮವಿಶ್ವಾಸದ ಮಾತುಗಳಿಗೆ ಯಾರಾದರೂ ತಲೆದೂಗಲೇಬೇಕು. ಇದು ಬಹಳ ಆರೋಗ್ಯಕರ ಬೆಳವಣಿಗೆಯೂ ಹೌದು, ಭಾರತ ಬೆಳಗುತ್ತಿದೆ ಎಂಬ ಮಾತಿಗೆ ಸಾಕ್ಷಿಯೂ ಹೌದು.
ಆದರೆ, ಈ ಎಲ್ಲ ಬೆಳವಣಿಗೆಗಳ ಮಧ್ಯೆ ಗುರುಗಳ ಮಹತ್ವ, ಅವರ ತ್ಯಾಗ ಮನೋಭಾವ, ಬದ್ಧತೆ ಇತ್ಯಾದಿಗಳಿಗೆ ಸಲ್ಲಬೇಕಾದ ಗೌರವ ಮತ್ತು ಮರ್ಯಾದೆಗಳ ಸಲ್ಲಿಕೆಯಾಗದೆ, ಗುರುವೃಂದವು ಸಮಾಜದ ಅನಾದರಕ್ಕೆ ಗುರಿಯಾಗುತ್ತಿದೆಯಾ ಎನಿಸುತ್ತಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ಕುರಿತಾದ ಆತ್ಮಾವಲೋಕನ ಅತ್ಯಗತ್ಯ. ವಿದ್ಯಾಕಾಂಕ್ಷಿಗಳಿಗೆ ನಿರ್ದಿಷ್ಟ ಕಟ್ಟುಪಾಡುಗಳನ್ನು ವಿಧಿಸಿ, ಪರೀಕ್ಷೆಗಳನ್ನು ಒಡ್ಡಿ ಅದರಲ್ಲಿ ಉತ್ತೀರ್ಣರಾದವರಿಗೆ ಸಮಸ್ತ ವಿದ್ಯೆ-ವಿಚಾರಗಳನ್ನು ಧಾರೆ ಎರೆಯುತ್ತಿದ್ದ ಗುರುಗಳಿಗೆ ಭಾರತ ಮಡಿಲಾಗಿದೆ.
ಶ್ರೀರಾಮನ ಗುರುಗಳಾಗಿದ್ದ ವಶಿಷ್ಠಾ-ವಿಶ್ವಾಮಿತ್ರರು, ಶ್ರೀಕೃಷ್ಣನ ಗುರುಗಳಾಗಿದ್ದ ಸಾಂದೀಪನಿ ಹೀಗೆ ನಮ್ಮ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಆದರೀಗ, ಸಾಕಷ್ಟು ಪಲ್ಲಟಗಳಾಗಿವೆ. ಶಿಷ್ಯನನ್ನು ಶಿಕ್ಷಿಸುವ ಅಧಿಕಾರವನ್ನು ಗುರುವಿನಿಂದ ಕಿತ್ತುಕೊಳ್ಳಲಾಗಿದೆ. ಗುರುಗಳು ಎಂದರೆ ಕಲಿಕಾ ಮಾರ್ಗದರ್ಶಕರು ಅಥವಾ ಕಲಿಕೆಯನ್ನು ಸರಳೀಕರಿಸುವ ಮಧ್ಯವರ್ತಿಗಳಷ್ಟೇ ಎಂಬ ಧೋರಣೆ ಬೆಳೆದಿದೆ.
ಶಿಷ್ಯರನ್ನು ಪ್ರಗತಿಪಥದೆಡೆಗೆ ಹೆಜ್ಜೆಹಾಕಿಸುವ ನಿಟ್ಟಿನಲ್ಲಿ ಗುರುವಿಗಿದ್ದ ಎಲ್ಲ ಸ್ವಾತಂತ್ರ್ಯಗಳಿಗೆ ಕಡಿವಾಣ ಹಾಕಲಾಗಿದೆ. ತರಲೆ ಮಾಡುವ ಮಕ್ಕಳಿಗೆ ಹೊಡೆಯುವುದಿರಲಿ, ಜೋರಾಗಿ ಗದರಿಸಲೂ ಸಾಧ್ಯವಿಲ್ಲದಂಥ ಪರಿಸ್ಥಿತಿಯಲ್ಲಿ ಗುರುಗಳು ದಿನದೂಡು ವಂತಾಗಿದೆ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಉದಾತ್ತ ಚಿಂತನೆ ಮೆರೆದ ನಮ್ಮಲ್ಲೀಗಗುರುವೇ ಗುಲಾಮನಾಗುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ.
ವಿದ್ಯಾರ್ಥಿಗಳ, ಹೆತ್ತವರ ಮತ್ತು ಶಾಲಾ ಮಾಲೀಕರ ಇಶಾರೆಗೆ ತಕ್ಕಂತೆ ಕೆಲಸ ಮಾಡಿಕೊಂಡು ಹೋಗಬೇಕಾದಂಥ ಅನಿವಾ ರ್ಯತೆ ಶಿಕ್ಷಕರದ್ದಾಗಿದೆ. ಮಕ್ಕಳಿಗೆ ಬೇಕಿರುವುದು ಮತ್ತು ಬೇಡದಿರುವುದು ಎರಡೂ ಕೈಬೆರಳಿನ ತುದಿಯಲ್ಲೇ ಸಿಗುವಂಥ ಕಾಲಘಟ್ಟಕ್ಕೆ ಶಿಕ್ಷಕರು ಮೂಕಸಾಕ್ಷಿಗಳಾಗಿದ್ದಾರೆ. ಶಿಕ್ಷಕರನ್ನು ಶಾಲೆಯಲ್ಲಿ ಮಕ್ಕಳ ಮೇಲುಸ್ತುವಾರಿ ನೋಡಿಕೊಂಡು, ಬೇಡದ ಮೀಟಿಂಗುಗಳಲ್ಲಿ ಚರ್ಚೆಯ ಹೆಸರಲ್ಲಿ ಹರಟಿ, ಮಕ್ಕಳಿಗೆ ಹಾಲು-ಮಜ್ಜಿಗೆ- ಮೊಟ್ಟೆ-ಹಣ್ಣು ನೀಡುವ ವ್ಯಾಪಾರಿಗಳನ್ನಾಗಿಸುವ ಮೂಲಕ ಶಿಕ್ಷಣವನ್ನೂ ಸಂಪೂರ್ಣ ‘ವ್ಯಾವಹಾರಿಕ’ ವಾಗಿಸಿಬಿಟ್ಟಿದ್ದೇವೆ.
ಶೂ, ಸಾಕ್ಸ್, ಅಂಗಿ-ಚಡ್ಡಿ, ಕರ್ಚೀಫ್, ಊಟ-ತಿಂಡಿ, ಬಟ್ಟೆ-ಬರೆ, ಪೆನ್ನು-ಪೆನ್ಸಿಲ್ಲು ಹೀಗೆ ಶಾಲೆಯಲ್ಲಿ ಮಕ್ಕಳಿಗೆ ಎಲ್ಲವೂ ಸಿಗುತ್ತಿದೆ, ಸಿಗದಿರುವುದು ಸಂಸ್ಕಾರ ಮತ್ತು ಶಿಕ್ಷಣ ಮಾತ್ರ. ಹೀಗೆ ವ್ಯಾಪಾರೀಕರಣಗೊಂಡಿರುವುದರಿಂದ ಶಾಲೆಯೀಗದೇವಾಲಯವಾಗಿ ಉಳಿದಿಲ್ಲ, ಒಂದು ವ್ಯಾಪಾರಿ ಸಮುಚ್ಚಯವಾಗಿ ಬದಲಾಗಿದೆ. ಬಹುತೇಕ ಶಾಲೆಗಳು ಶೇ.95 ಅಂಕ ಪಡೆಯುವ ಬುದ್ಧಿವಂತ ಮಕ್ಕಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಿ ಬೆಳೆದುನಿಂತಿವೆ. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳೂಉತ್ತೀರ್ಣರಾಗಲೇಬೇಕು; ಇಲ್ಲವಾದಲ್ಲಿ ಬಡಪಾಯಿ ಮೇಷ್ಟ್ರು ಮನೆಗೆ ಹೋಗಬೇಕು ಎಂಬ ವಾತಾವರಣ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ, ಶಿಕ್ಷಕರ ದಿನಾಚರಣೆಯ ಅರ್ಥ ಮತ್ತು ಮಹತ್ವ ಯಾವತ್ತೋ ಕಳೆದುಹೋಗಿದೆ ಎನಿಸುತ್ತದೆ. ಇದು ಮರಳಬೇಕೆಂದರೆ, ಶಿಕ್ಷಕರಿಗೆ ಸಹಜವಾಗಿ ಇರಬೇಕಾದ ಅಧಿಕಾರ ಮತ್ತು ಸ್ವಾತಂತ್ರ್ಯ ಮತ್ತೊಮ್ಮೆ ಅವರ ಮಡಿಲುಸೇರಬೇಕು. ಮಕ್ಕಳ ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣಕ್ಕೆ ಜೀವತೇಯುವ ಶಿಕ್ಷಕರಿಗೆ ಸಮರ್ಥವಾಗಿ ಕಾರ್ಯನಿರ್ವಹಿಸಲು ಸೂಕ್ತ ವಾತಾವರಣವನ್ನು ಕಲ್ಪಿಸಬೇಕಿದೆ.
ಹಾಗಾದಾಗ ಮಾತ್ರವೇ ಗುರು-ಶಿಷ್ಯ ಸಂಬಂಧ ಮತ್ತೆ ಮೊದಲಿನಂತಾಗಿ ಶಿಕ್ಷಣದ ನಿಜವಾದ ಆಶಯ ಈಡೇರಬಹುದು ಮತ್ತು ಶಿಕ್ಷಕರ ದಿನಾಚರಣೆ ಅರ್ಥಪೂರ್ಣವಾಗಬಹುದು. ಅದುವೇ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ನಾವು ಸಲ್ಲಿಸಬಹುದಾದಬಹುದೊಡ್ಡ ಗೌರವ ಎಂದರೆ ತಪ್ಪಾಗಲಾರದು. ಕಾಲವಿನ್ನೂ ಮಿಂಚಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೈಗೂಡಿಸೋಣ. ಭಾರತೀಯ ಪರಂಪರೆಯಲ್ಲಿ ‘ಗುರು-ಶಿಷ್ಯ’ರ ಪರಿಕಲ್ಪನೆಗಿರುವ ಮಹತ್ವವನ್ನು ಪಾತ್ರತೆಯನ್ನು ಮತ್ತೊಮ್ಮೆ ಸ್ಥಾಪಿಸೋಣ. ಅದರಲ್ಲಿಯೇ ನಮ್ಮೆಲ್ಲರ ಹಿತ ಅಡಗಿದೆ ಎಂಬುದನ್ನು ಮರೆಯದಿರೋಣ.