ಅವರದ್ದಾದರೆ ಹಾದರ, ಅವರದ್ದು ಆದರವೇ ?!
ಪ್ರಸ್ತುತ
ವಿನಯ್‌ ಖಾನ್
vinaykhan078@.
ಭಾರತದಲ್ಲಿರುವವರು ಯಾವುದೇ ಪಂಗಡಕ್ಕೆ ಸೇರಬಹುದು, ಪಂಥವನ್ನು ಅನುಸರಿಸಬಹುದು, ಪಕ್ಷದ ಕಾರ್ಯ ಕರ್ತರೂ ಆಗಿರಬಹುದು, ಅದು ಅವರ ಇಚ್ಛೆ. ಆದರೆ ದೇಶದ ಘನತೆಗೆ ಚ್ಯುತಿ ಬಂದಾಗ ಅದನ್ನು ವಿರೋಧ ಮಾಡುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಆಗಬೇಕು.
ರಾಜ್ಯದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ನೇತೃತ್ವ ವಹಿಸಿದ್ದ ಬರಗೂರು ರಾಮಚಂದ್ರಪ್ಪ ಹಾಗೂ ರೋಹಿತ್ ಚಕ್ರತೀರ್ಥ ಅವರು ರಾಷ್ಟ್ರಗೀತೆ ಹಾಗೂ ನಾಡಗೀತೆಗಳ ಅವಮಾನಗಳ ಬಗ್ಗೆ ಹಿಂದೊಮ್ಮೆ ಇದೇ ಜಾಗದಲ್ಲಿ ಬರೆದಿದ್ದೆ. ಇತ್ತೀಚೆಗೆ ಇದೇವಿಷಯಕ್ಕೆ ಸಂಬಂಧಿಸಿದಂತೆ ಬರಗೂರು ರಾಮಚಂದ್ರಪ್ಪ ವಿರುದ್ಧ ಬಿಜೆಪಿಯವರು ಮೊಕದ್ದಮೆಯನ್ನೂ ದಾಖಲಿಸಿದರು. ಈ ಸಂಬಂಧ ಹೇಳಿಕೆ ಕೊಟ್ಟ ಬರಗೂರು ‘40 ವರ್ಷಗಳ ಹಿಂದೆಯೇ ಬರೆದಂತಹ ಕಾದಂಬರಿಯಲ್ಲಿ ಇವತ್ತು ತಪ್ಪು ಕೆದಕುತ್ತಿದ್ದಾರೆ, ಇದು ನನ್ನ ವಿರುದ್ಧದ ಹುನ್ನಾರವೂ ಇರಬಹುದು’ ಎಂದು ಹೇಳಿದರು.
ಹಾಗೆಯೇ ಅದೇನೂ ವಿರೋಧ ಮಾಡುವಂತಹ ವಿಷಯವೂ ಅಲ್ಲ ಅನ್ನುವ ರೀತಿಯಲ್ಲೇ ಸಮಜಾಯಿಷಿ ನೀಡಿದರು. ಹಾಗಾದರೆ, ರಾಷ್ಟ್ರಗೀತೆಗೆ ಅವಮಾನ ಮಾಡಿರುವುದು ಚಿಕ್ಕ ವಿಷಯವೇ? ಒಂದೊಮ್ಮೆ ಅವರೇ ಹೇಳಿಕೊಂಡಂತೆ ಅವರ ವಿರುದ್ಧ ಹುನ್ನಾರ ನಡೆದಿದ್ದೇ ಆಗಿದ್ದಲ್ಲಿ, ಇವರದೇ ಸಾಹಿತ್ಯವನ್ನು ಗುರಿಯಾಗಿಸುವುದೇಕೆ? ಇವರು ವಿವಾದ ಎಬ್ಬಿಸುವ ರೀತಿಯಲ್ಲಿ ವಿಡಂಬಣೆಯನ್ನು ಮಾಡಿದ್ದು ಸುಳ್ಳೇ? ಇವರ ವಿಡಂಬನೆಗೆ ಬೇರೆ ವಿಷಯಗಳು ಸಿಕ್ಕಿಲ್ಲವೇ? ರಾಷ್ಟ್ರಗೀತೆಯನ್ನೇ ಯಾಕೆ ವಿರೂಪ ಗೊಳಿಸಬೇಕಿತ್ತು? ರಾಷ್ಟ್ರಗೀತೆಗೆ ಅಪಮಾನ ಮಾಡದ್ದನ್ನು, ಗಂಗೆಯನ್ನು ಹಾದರಕ್ಕೆ ಹೋಲಿಸಿದ್ದನ್ನು, ‘ಕಚ್ಚೆಯ ಬಿಚ್ಚಿದ ರೆಂಗ’ ಅಂತ ಬರೆದಿದ್ದು ಸಣ್ಣ ವಿಷಯವಾಗಿಬಿಟ್ಟಿತೇ? ಇದಕ್ಕೆ ಸಮಜಾಯಿಷಿಯಾಗಿ ರಾಜ್ಯಸಭಾ ಸದಸ್ಯ ಮತ್ತು ಸಾಹಿತಿ ಎಚ್. ಹನುಮಂತಯ್ಯ ‘ಸಾಹಿತ್ಯದ ಒಡನಾಡಿಯಾಗಿ ಕಳೆದ 48 ವರ್ಷಗಳಿಂದ ಬರಗೂರು ರಾಮಚಂದ್ರಪ್ಪ ನವರನ್ನು ಬಲ್ಲಂತೆ ಎಂದೂ ಸಮುದಾಯಗಳ ನಡುವೆ ಅಶಾಂತಿ ಉಂಟುಮಾಡುವ, ಜನಾಂಗಗಳ ನಡುವೆ ಬೆಂಕಿ ಹಚ್ಚುವ ಬರಹ ಮಾಡಿದವರಲ್ಲ.
ಅವರ ಯಾವ ಕೃತಿಗಳೂ ಅತಿರೇಖದ ಭಾವನೆಗಳನ್ನು ಉದ್ದೀಪನಗೊಳಿಸುವಂತೆ ಪ್ರಕಟವಾಗಿಲ್ಲ. ಅದ್ದರಿಂದ ದೇಶದ್ರೋಹದ ಪ್ರಶ್ನೆ ಉದ್ಭವಿಸುವುದಿಲ್ಲ. ಈ ದೂರನ್ನು ಗಮನಿಸಿ ಯಾವುದೇ ದೃಷ್ಟಿಯಿಂದಲೂ ಮುಂದುವರಿಯದೇ ಕನ್ನಡ ಲೇಖಕರನ್ನು ಗೌರವಿಸಬೇಕು’ ಎಂದು ಹೇಳಿದ್ದಾರೆ. ಅವರದೇ ಮಾತುಗಳನ್ನು ಪರಿಗಣಿಸಬಹುದಾದಲ್ಲಿ, ಯಾವುದೇ ಸಮುದಾಯಗಳ ಅವಹೇಳನ ಮಾಡುವವರಿಗಷ್ಟೇ ಸಂವಿಧಾನ ಮತ್ತದರ ಆಶಯಗಳು ಲೆಕ್ಕಕ್ಕೆ ಬೀಳುತ್ತವೆಯೇ? ಅತಿರೇಖದ ಭಾವನೆಗಳನ್ನುಉದ್ದೀಪನಗೊಳಿಸಿಲ್ಲ ಎಂದರೆ, ರಾಷ್ಟ್ರಗೀತೆಯನ್ನು ಕುರೂಪ ಮಾಡಿದ್ದು ಸರಿ ಎಂದು ಅರ್ಥವೇ? ಹಿರಿಯ ಲೇಖಕರಾದಕಾರಣಕ್ಕೆ ಅವರು ಪ್ರಶ್ನಾತೀತರಾದರಾ? ಮತ್ತೆ ರಾಷ್ಟ್ರಗೀತೆಯ ವಿಡಂಬಣೆಯೂ ಹೇಗೆ ರಾಷ್ಟ್ರದ್ರೋಹ ಆಗುತ್ತೆ ಎಂದೂಕೇಳಿದ್ದಾರೆ. ಈ ರೀತಿಯ ಉದ್ದಟತನದ ಹೇಳಿಕೆಗಳು ಕಾಂಗ್ರೆಸ್ ಮತ್ತವರ ಕೃಪಾಪೋಷಿತ ವರ್ಗದಿಂದ ಸಾಮಾನ್ಯ ಬಿಡಿ.
‘ಭಾರತ್ ತೇರೆ ತುಕ್ಡೆಹೊಂಗೆ ಇನ್ಷಾ ಅಲ್ಲಾ ಇನ್ಷಾ ಅಲ್ಲ’ ಎಂದು ಘೋಷಣೆಗಳನ್ನು ಹಾಕಿದ್ದ ಕನ್ಹಯ್ಯ ಕುಮಾರ್ಅಂಥವ ರನ್ನೇ ಪಕ್ಷಕ್ಕೆ ಸೇರಿಸಿಕೊಂಡವರಿಂದ ಈ ರೀತಿ ಮಾತುಗಳು ಸಹಜವೇ! ಅದೆಲ್ಲ ಒತ್ತೊಟ್ಟಿಗಿರಲಿ. ಹಾಗಿದ್ದರೆ, ಇದನ್ನೇ ರೋಹಿತ್ ಚಕ್ರತೀರ್ಥ ಸಹ ಮಾಡಿದ್ದರು. ಆಗ ಇಡೀ ಕಾಂಗ್ರೆಸ್ ಮತ್ತವರ ಎಡಚರರ ಪಟಾಲಂ, ಕನ್ನಡ ಪರ ಹೋರಾಟಗಾರರು ಸೇರಿ ರಾಜ್ಯಾದ್ಯಾಂತ ಕೇಸ್‌ಗಳನ್ನು ಹಾಕಿದ್ದರಲ್ಲ ಅದನ್ನೆಲ್ಲ ಹಿಂದಕ್ಕೆ ತಗೆದುಕೊಳ್ಳುತ್ತಾರಾ? ಇಂತಹ ವಿರೋಧ ಮಾಡುವುದು ಒಂದು ವರ್ಗಕ್ಕೆ ಸೀಮಿತವಾಗಿದ್ದಾ? ಜಾತಿಗೆ ಸೀಮಿತವಾಗಿದ್ದಾ? ಅಥವಾ ಅವರುಗಳ ಸಿದ್ಧಾಂತಗಳಿಗಷ್ಟೇ ಸೀಮಿತವಾಗಿಸಿ ಬಿಟ್ಟಿದ್ದಾರಾ? ಹಾಗಾದರೆ ಅವರು ಮಾಡಿದ್ದು ಹಾದರ, ಇವರುಗಳು ಮಾಡಿದ್ದು ಆದರವಾಗುತ್ತಾ? ಹಲವಾರು ವಿಷಯಗಳನ್ನು ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಮಾಡುವುದಾದರೆ, ಅದು ಬೇರೆಯವರಿಗೂ ಅನ್ವಯವಾಗ ಬೇಕಲ್ಲವೇ? ತಮ್ಮ ವಿರುದ್ಧ ಬಂದ ಆರೋಪಕ್ಕೆ 40 ವಷಗಳ ಹಿಂದೆ ಬರೆದ ಕಾದಂಬರಿಯ ಅಣಕು ಎಂದು ಹೇಳಿಕೊಳ್ಳುವ ಬರಗೂರು ಮತ್ತದನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್‌ನವರು, 75 ವರ್ಷಗಳ ಹಿಂದೆ ಆದ ಗಾಂಧಿ ಹತ್ಯೆಯ ಆರೋಪಿ ಗೋಡ್ಸೆಯನ್ನು ಇಂದಿಗೂ ಆರೆಸ್ಸೆಸ್‌ನವ ಎಂದು ಹೇಳಿಕೊಳ್ಳುವುದು ಯಾಕೆ? ಸ್ವಾತಂತ್ರ ಬಂದು 75 ವರ್ಷಗಳಾದರೂ ಕಾಂಗ್ರೆಸ್‌ನಿಂದಷ್ಟೇ ಸ್ವಾತಂತ್ರ್ಯ ಬಂದಿದೆ ಎಂದು ಒತ್ತೀ ಒತ್ತಿ ಹೇಳುವುದು ಯಾಕೆ? ಪ್ರತಿ ಕಾರ್ಯಕ್ರಮದಲ್ಲೂ ಂದಿಗೂ ಇಂಥ ಸಂಗತಿಗಳನ್ನು ಎತ್ತಿ ಆಡುವ ಸಿದ್ದರಾಮಯ್ಯನವರು ತಮ್ಮದೇ ಸ್ನೇಹಿತರಿಗೆ ಬುದ್ಧಿ ಹೇಳಬೇಕಾದದ್ದು ವಿಹಿತವೆನಿಸುತ್ತದೆ.
ಕಾಲಂತರದಲ್ಲಿ ಆದ ಘಟನೆಗಳೆಲ್ಲವನ್ನೂ ಕ್ಷಮಿಸಿಬಿಡುವಂಥದ್ದೇ ಆಗಿದಲ್ಲಿ ಕೋರ್ಟ್‌ನ ಅರ್ಧದಷ್ಟು ವ್ಯಾಜ್ಯ, ಕೇಸ್ ಗಳಳು ಯಾವತ್ತೋ ಖುಲಾಸೆಗೊಳ್ಳುತ್ತಿದ್ದವು! ಸರಿ, ಬರಗೂರು ಮಾಡಿದ್ದು ತಪ್ಪಲ್ಲ ಎಂದೇ ಇಟ್ಟುಕೊಳ್ಳೋಣ, ಹಾಗಿದ್ದರೆ ರೋಹಿತ್ ಮಾಡಿದ್ದು ತಪ್ಪು ಯಾಕಾಯಿತು? ಮತ್ತೆ ಅನಂತ್ ಕುಮಾರ್ ಹೆಗಡೆ ಮತ್ತು ಪ್ರತಾಪ್ ಸಿಂಹರಂಥ ಅನೇಕರ ಹೇಳಿಕೆಗಳನ್ನು ವಿರೋಧಿಸುವಾಗ ಅವರು ಹೇಳಿದ್ದೆಲ್ಲ ಸರಿ ಅಂತ ಅನ್ನಿಸುತ್ತಿತ್ತಾ ಅಥವಾ ವಿರೋಧ ಮಾಡಬೇಕೆಂದೇ ವಿರೋಧ ಮಾಡು ತ್ತಿದ್ದರಾ? ಕಾಂಗ್ರೆಸ್ ಪರ ಇದ್ದವರಿಗೊಂದು ಕಾನೂನು ಇರದವರಿಗೊಂದು ಕಾನೂನು ಅಂತ ಸಂವಿಧಾನದಲ್ಲಿ ಬರೆದಿದೆಯಾ? ಇದೇ ಕಾಂಗ್ರೆಸ್‌ನವರು ಪತ್ರಕರ್ತ ಅರ್ನಬ್ ಗೋಸ್ವಾಮಿ, ಸೋನಿಯಾ ಗಾಂಧಿಯ ನಿಜವಾದ ಹೆಸರನ್ನು ಹೇಳಿದ್ದ ಮಾತ್ರಕ್ಕೆ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಸಿ, ಅವರ ಮೇಲೆ ಹಲ್ಲೆಗಳನ್ನೂ ಮಾಡಿಸಿ, ಜೈಲಿಗೆ ಅಟ್ಟು ವವರೆಗೂ ಹೋದರು.
ಅರ್ನಬ್ ಹೇಳಿದ್ದು ಸರಿಯಾಗಿತ್ತಲ್ಲ! ಈ ಕಾಂಗ್ರೆಸ್‌ನವರಿಗೆ ಕೇವಲ ಸೋನಿಯಾ ಗಾಂಧಿ ನಿಜವಾದ ಹೆಸರು ಹೇಳಿದ್ದನ್ನೇ ಸಹಿಸಿಕೊಳ್ಳುವುದಕ್ಕೆ ಆಗಲಿಲ್ಲ, ಇನ್ನು ರಾಷ್ಟ್ರಗೀತೆಗೆ ಮಾಡಿದ್ದ ಅಪಮಾನವನ್ನು ಸಹಿಸುವುದು ಹೇಗೆ?ಏಕೆ? ಕೆಲ ವರ್ಷಗಳ ಹಿಂದೆ ಇದೇ ಬರಗೂರರು ಬರೆದಿದ್ದ ಇನ್ನೊಂದು ಲೇಖನವೂ ವಿವಾದ ಮಾಡಿತ್ತು, ಅದು ‘ಯುದ್ಧ ಒಂದು ಉದ್ಯಮ’ ಅನ್ನುವ ಹೆಸರಲ್ಲಿದ್ದ ಲೇಖನ. ಅದರಲ್ಲಿ ‘ಗಡಿ ಕಾಯೋ ಸೈನಿಕರು ಅತ್ಯಾಚಾರಿಗಳು, ಯುದ್ಧದಲ್ಲಿ ಮಡಿದರೆ ಸ್ವರ್ಗದ ಬಾಗಿಲು ಮಾತ್ರ ವಲ್ಲ, ದೇವತಾ ಸ್ತ್ರೀಯರೂಸ್ವಾಗತಕ್ಕಾಗಿ ಕಾಯುತ್ತಿರುತ್ತಾರೆ ಅಂತ ಅವರಿಗೆ ಹೇಳುತ್ತಾರೆ’ ಎನ್ನುವ ಮೂಲಕ ‘ಹಿರಿಯ ಸಾಹಿತಿ’ ಅನ್ನಿಸಿಕೊಂಡರು.
ಹಿರಿಯರಾದವರು ಸೈನಿಕರ ಬಗ್ಗೆ ತೋರಿದ ಗೌರವ ಇದು! ಇದಂತೂ ಸಣ್ಣ ವಿಷಯವೇನಲ್ಲ. ಇವರೂ ಸೇರಿದಂತೆ ದೇಶವಾಸಿ ಗಳಿಗೆ ರಕ್ಷಣೆ ಕೊಡಲೆಂದೇ ತಮ್ಮ ಮನೆ, ಸಂಸಾರ ಎಲ್ಲ ಬಿಟ್ಟು ದೇಶಕ್ಕಾಗಿ ಪ್ರಾಣವನ್ನೂ ಪಣಕ್ಕಿಟ್ಟು ಹೋರಾಡುತ್ತಿದ್ದವರ ಬಗ್ಗೆ ಇಷ್ಟೆಲ್ಲ ಬರೆದರೂ, ಅದೂ ಆ ಕಾಲಕ್ಕೆ ದೊಡ್ಡ ವಿವಾದವಾದರೂ ಅದಕ್ಕೆ ಕ್ಷಮೆಯಾಚನೆ ಯನ್ನುವ ಕಿಂಚಿತ್ತು ಮಾತು ಸಹ ಎಲ್ಲೂ ಬರಲಿಲ್ಲ.
ಯಾವಾಗಲೂ ರಾಷ್ಟ್ರ ಭಕ್ತರು, ಸಂವಿಧಾನ ರಕ್ಷಕರು ಎಂದು ಪೋಸ್ ಕೊಡುತ್ತಿದ್ದ ಕಾಂಗ್ರೆಸ್, ಎಡಚ ಗ್ಯಾಂಗ್, ದಲಿತ ಪರಸಂಘಟನೆಗಳು, ಕನ್ನಡ ಪರ ಹೋರಾಟಗಾರರು ಯಾರೂ ಸಹ ಇದರ ವಿರುದ್ಧ ಸೊಲ್ಲನ್ನೇ ಎತ್ತಿಲ್ಲ, ಈಗ ಎದ್ದಿರುವ ವಿವಾದದ ಬಗೆಗೂ ಇವರ‍್ಯಾರದ್ದೂ ವಿರೋಧವೇ ಇಲ್ಲ. ಹಾಗಿದ್ದರೆ ಇವರುಗಳಿಗೆಲ್ಲ ದೇಶದ ಮೇಲೆ, ಸೈನಿಕರ ಮೇಲೆ, ರಾಷ್ಟ್ರಗೀತೆಯ ಮೇಲೆ ಗೌರವವೇ ಇಲ್ಲವೇ? ಇದ್ದರೆ ವಿರೋಧವನ್ನು ಮಾಡುತ್ತಿದ್ದರಲ್ಲ!
ಈ ರೀತಿಯಲ್ಲಿ ನೋಡುವುದಾದರೆ, ಭಾರತದಲ್ಲಿರುವವರು ಯಾವುದೇ ಪಂಗಡಕ್ಕೆ ಸೇರಬಹುದು, ಪಂಥವನ್ನು ಅನುಸರಿಸ ಬಹುದು, ಪಕ್ಷದ ಕಾರ್ಯಕರ್ತರೂ ಆಗಿರಬಹುದು, ಅದು ಅವರ ಇಚ್ಛೆ. ಆದರೆ ದೇಶದ ಘನತೆಗೆ ಚ್ಯುತಿ ಬಂದಾಗ ಅದನ್ನು ವಿರೋಧ ಮಾಡುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಆಗಬೇಕು. ರಾಷ್ಟ್ರದ ಘನತೆಗೆ ಚ್ಯುತಿ ಬರುವ ವಿಷಯ ಗಳನ್ನು ವಿರೋಧ ಮಾಡಲಿಲ್ಲ ಎಂದರೆ ಅವರನ್ನು ಹೇಗೆ ತಾನೆ ಭಾರತೀಯ ಎಂದು ಕರೆಯಬೇಕು.
ಇದೆಲ್ಲಕ್ಕಿಂತ ಮೊದಲು ಬರಗೂರರು ಮಾಡಿದ ಅಸಂಬದ್ಧ ಉಪಾದ್ವ್ಯಾಪಿತನಗಳಿಗೆ ಕ್ಷಮೆಯನ್ನು ಕೋರಿ ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕು. ಮತ್ತೆ ಈ ರೀತಿ ತಿರುಚುವ ಕೆಲಸಗಳಿಗೆ ಇಳಿದು ತಮ್ಮ ಮರ್ಯಾದೆಗಳನ್ನು ಉಳಿಸಿಕೊಳ್ಳಬೇಕು, ಇದ್ದರೆ.ಅಷ್ಟೇ!