ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ…
ಸಮರ್ಥನೆ
ಮರಿಲಿಂಗಗೌಡ ಮಾಲೀಪಾಟೀಲ
ಮೂಲತಃ ಪತ್ರಕರ್ತರಾದ ಪ್ರತಾಪ್ ಸಿಂಹ ರಾಜಕೀಯ ಕುಟುಂಬದ ಹಿನ್ನೆಲೆ-ಹಣಬಲ ಇಲ್ಲದೆ ಕೇವಲ ಅಂಕಣಕಾರ ನಾಗಿ ಪಡೆದ ಜನಪ್ರಿಯತೆಯ ಬಲದಿಂದ ಸಂಸದರಾದವರು. ಪ್ರತಾಪರ ಬರಹಗಳಿಂದಾಗಿ ಅವರ ಒಲವು-ಸಿದ್ಧಾಂತ ಗಳೇನು ಎಂಬುದು ಜನರಿಗೆ ಮನವರಿಕೆಯಾಗಿತ್ತು. ಅದುವೇ ಅವರ ಗೆಲುವಿಗೂ ಸೋಪಾನವಾಯಿತು.
‘ನಾನು ರಾಜಕಾರಣಿಯಲ್ಲ, ನಾನೊಬ್ಬ ಕೆಲಸಗಾರ’ ಎಂದಿದ್ದಾರೆ ಸಂಸದ ಪ್ರತಾಪ್ ಸಿಂಹ. ತಮ್ಮ ವಿರುದ್ಧ ಬಂದ ಟೀಕೆಗಳಿಗೆ ಉತ್ತರಿಸುತ್ತಿದ್ದ ಅವರು ‘ಯಾರು ತಮ್ಮನ್ನು ಮಾಲೀಕರು ಅಂದುಕೊಂಡಿದ್ದಾರೋ ಅವರು ಕೆಲಸಗಾರರಿಗೆ ಹೇಳುವ ಹಕ್ಕನ್ನು ಹೊಂದಿರುತ್ತಾರೆ. ಅವರು ಹಿರಿಯರು, ನನಗೆ ಹೇಳುವ ಹಕ್ಕು ಅವರಿಗಿದೆ. ಏಕೆಂದರೆ ನಾನೊಬ್ಬ ಕೆಲಸಗಾರ’ ಎಂದಿದ್ದಾರೆ ಪ್ರತಾಪ್ ಸಿಂಹ.
ತಮ್ಮನ್ನು ದೇಶದ ಪ್ರಧಾನ ಸೇವಕ ಎಂದು ಹೇಳಿಕೊಂಡ ಪ್ರಧಾನಿ ನರೇಂದ್ರ ಮೋದಿ ಯವರ ಆದರ್ಶ ಎಂಬ ಹೆದ್ದಾರಿಯಲ್ಲಿಯೇ ಪ್ರತಾಪ್ ಸಿಂಹ ಅವರೂ ಹೆಜ್ಜೆಗಳನ್ನಿಡು ತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೇನಿದೆ? ‘ಸಂತೆಯೊಳ ಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ’ ಎಂದಿದ್ದಾರೆ ವಚನಕಾರ್ತಿ ಅಕ್ಕಮಹಾದೇವಿ. ಸಂತೆ ಅಂದರೇನೇ ಗದ್ದಲ. ಸಂತೆಯಲ್ಲಿ ಮನೆ ಮಾಡಿದವರು ಗದ್ದಲಕ್ಕೆ ನಾಚುವುದಿಲ್ಲ, ಅಂಜುವುದಿಲ್ಲ, ಅಂಜಬಾರದು. ರಾಜಕೀಯವನ್ನು ಸಾರ್ವಜನಿಕ ಸೇವೆಯೆಂದು ನಂಬಿಕೊಂಡು ಬಂದವರೂ ಟೀಕೆಗಳಿಗೆ ಅಂಜುವುದಿಲ್ಲ.
ಆದರೆ ರಾಜಕೀಯವಿರುವುದು ತಮ್ಮ ಸ್ವಾರ್ಥಕ್ಕೆ, ಕೌಟುಂಬಿಕ ಅನುಕೂಲಕ್ಕೆ ಎಂದು ಭಾವಿಸಿದವರು ಟೀಕೆಗಳಿಗೆ ಅಂಜಿ ಕಣ್ಣೀರು ಸುರಿಸಬಹುದು. ‘ತಮ್ಮಂತೆ ಪರರನ್ನೂ ಬಗೆದು’ ಇತರರನ್ನು ಅಂಜಿಸಲು ಟೀಕೆಗಳ ಮಳೆ ಸುರಿಸಬಹುದು. ಆದರೆ  ರಾಜಕೀಯ  ದಿಂದ ಸ್ವಂತಕ್ಕೆ ಸಾಧಿಸಬೇಕಾದದ್ದು ಏನೂ ಇಲ್ಲ ಎಂದು ತಿಳಿದಿರುವ ಪ್ರತಾಪ್ ಸಿಂಹ, ಅವರೇ ಹೇಳಿಕೊಳ್ಳುವಂತೆ ರಾಜಕಾರಣಿ ಯಲ್ಲ. ಹಾಗಿರುವಾಗ ವ್ಯರ್ಥ ಟೀಕೆಗಳು ಅವರ ಮೇಲೆ ಯಾವ ಪರಿಣಾಮವನ್ನೂ ಬೀರಲಾರವು.
ಪ್ರತಾಪ್ ಸಿಂಹ ಮೂಲತಃ ಒಬ್ಬ ಪತ್ರಕರ್ತರು. ರಾಜಕೀಯ ಕುಟುಂಬದ ಹಿನ್ನೆಲೆಯಿಲ್ಲದೆ, ಹಣಬಲವಿಲ್ಲದೆ ಕೇವಲ ಅಂಕಣ ಕಾರನಾಗಿ ಪಡೆದ ಜನಪ್ರಿಯತೆಯ ಬಲದಿಂದ ಸಂಸದರಾದವರು. ೨೦೧೪ರ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಸ್ಪರ್ಧಿಸಿದಾಗ ಅಕ್ಷರಲೋಕದ ಸಾಂಗತ್ಯವಿದ್ದವರಿಗೆಲ್ಲ ಅವರ ಪರಿಚಯವಿದ್ದುದು ದಿಟ. ಪ್ರತಾಪರ ಅಂಕಣ ಬರಹಗಳಿಂದಾಗಿ ಅವರ  ಒಲವೇನು, ಸಿದ್ಧಾಂತಗಳೇನು ಎನ್ನುವುದು ಜನರಿಗೆ ಮನವರಿಕೆಯಾಗಿತ್ತು.
ಅದುವೇ ಅವರ ಗೆಲುವಿಗೂ ಸೋಪಾನವಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಮೈಸೂರಿಗೆ ಬಂದಿದ್ದಾಗ ‘ನಿಮ್ಮ ಎಂಪಿ ನನ್ನನ್ನು ಸುಮ್ಮನಿರಲು ಬಿಡುವುದಿಲ್ಲ’ ಎಂದಿದ್ದರು. ಜನರ ಬಗೆಗಿನ ಬದ್ಧತೆಯೇ ಪ್ರತಾಪ್ ಸಿಂಹರಿಗೆ ೨ನೇ ಬಾರಿಗೆ ಸಂಸತ್ತಿನ ದಾರಿ ತೋರಿಸಿತು. ಅಽಕಾರ ಶಾಶ್ವತವಲ್ಲ. ನೀರ ಮೇಲಣ ಗುಳ್ಳೆಯಂತೆ ಯಾವುದೇ ಕ್ಷಣ ಒಡೆದು ಹೋಗಬಹುದು. ಅಧಿಕಾರದಲ್ಲಿದ್ದಾಗ ಮಾಡಿದ ಒಳ್ಳೆಯ ಕೆಲಸಗಳಷ್ಟೇ ಶಾಶ್ವತ. ಒಳ್ಳೆಯ ಕೆಲಸ ಮಾಡಿದರೆ ಆತ್ಮತೃಪ್ತಿ, ಜನಪ್ರೀತಿ ಪಡೆಯ ಬಹುದು.
ಅಧಿಕಾರದ ಅವಧಿಯಲ್ಲಿ ಕೆಲಸ ಮಾಡದಿದ್ದವರು ‘ಸಿಕ್ಕಿದ್ದ ಅವಕಾಶವನ್ನು ವ್ಯರ್ಥ ಮಾಡಿಕೊಂಡೆ’ ಎಂದು ಆಮೇಲೆಪಶ್ಚಾತ್ತಾಪ ಪಡಬೇಕಾಗಬಹುದು. ಹಾಗಾಗಿ ಕೆಲಸ ಮಾಡಬೇಕೋ, ಸುಮ್ಮನಿರಬೇಕೋ ಎನ್ನುವುದು ಅವರವರ ನಿರ್ಧಾರಕ್ಕೆ ಬಿಟ್ಟ ವಿಷಯ. ಆದರೆ ಪ್ರತಾಪ್ ಸಿಂಹ ಕೆಲಸದ ಮಹತ್ವ ಅರಿತವರು. ತಮ್ಮ ಕನಸಿನ ಕೂಸಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಆರಂಭಿಸಿ ಬಹುತೇಕ ಮುಗಿಸುವ ಹಂತಕ್ಕೆ ಬಂದಿzರೆ. ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್ ಬಳಿಯ ಪಂಚಮುಖಿ ದೇವಸ್ಥಾನದಿಂದ ಆರಂಭವಾಗಿ ಮೈಸೂರಿನ ಕೊಲಂಬಿಯಾ ಜಂಕ್ಷನ್ ಬಳಿ ಮುಕ್ತಾಯವಾಗುವ ಈ ಹೆzರಿಯ ಯೋಜನೆ ೨೦೧೮ರಲ್ಲಿ ಘೋಷಣೆಯಾದಾಗ ೬,೪೦೦ ಕೋಟಿ ರು. ಬಜೆಟ್ ಹೊಂದಿತ್ತು.
ಅಂತಿಮವಾಗಿ ೯,೫೦೦ ಕೋಟಿ ರು. ಮುಟ್ಟಿದ ಈ ಬೃಹತ್ ಯೋಜನೆ ಪೂರ್ತಿಯಾದರೆ ಬೆಂಗಳೂರಿನಿಂದ ಮೈಸೂರಿಗೆ ೯೦ ನಿಮಿಷಗಳಲ್ಲಿ ತಲುಪಬಹುದು. ಈ ಹೆzರಿ ರಾಜ್ಯದ ಮೊದಲ ‘ಆಕ್ಸೆಸ್ ಕಂಟ್ರೋಲ್ಡ್ ಹೈವೇ’ ಎನ್ನುವ ಖ್ಯಾತಿಗೂ ಪಾತ್ರವಾಗಲಿದೆ.ಅಂದರೆ ಸರ್ವಿಸ್ ರಸ್ತೆ ಬಿಟ್ಟು ಹೆದ್ದಾರಿಯ ಎರಡೂ ಭಾಗದಲ್ಲಿ ೬ ಅಡಿಯ ಫೆನ್ಸಿಂಗ್ ಹಾಕಲಿದ್ದು, ಈ ಎಕ್ಸ್ ಪ್ರೆಸ್ ಹೆದ್ದಾರಿಗೆ ಎಂದರಲ್ಲಿ, ಯಾರ್ಯಾರೋ ನುಗ್ಗುವಂತಿರುವುದಿಲ್ಲ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಜನರಿಗೂ ಇದರಿಂದ ಅನುಕೂಲವಾಗಲಿದೆ.
ನಿರ್ಮಾಣವಾಗುತ್ತಿರುವ ರಸ್ತೆಯನ್ನು ನೋಡುತ್ತಿದ್ದರೆ ಪ್ರತಾಪ್ ಸಿಂಹರಿಗೆ ಶಾಶ್ವತ ಕೀರ್ತಿಯನ್ನು ಇದು ತಂದುಕೊಡಲಿದೆ ಎಂದುಎಂಥವರಿಗಾದರೂ ಅರ್ಥವಾಗುತ್ತದೆ. ಇದು ಅರ್ಥವಾಗುತ್ತಿದ್ದಂತೆ ಪ್ರತಾಪ್ ಸಿಂಹರನ್ನು ಟೀಕಿಸಲು ವಿರೋಧಿಗಳು ಮೈಕೊಡವಿ ಕೊಂಡು ಎದ್ದರು. ಅಂಥವರಿಗೆ ವರದಾನವಾಗಿ ಸಿಕ್ಕಿದ್ದು ಮೊನ್ನೆ ಸುರಿದ ಧಾರಾಕಾರ ಮಳೆ ಮತ್ತು ಅದರಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು ತುಂಬಿದ್ದು. ಕಳಪೆ ಕಾಮಗಾರಿ ಎಂಬಲ್ಲಿಂದ ಆರಂಭವಾದ ಟೀಕಾಸಗಳು ಪ್ರಾಜೆಕ್ಟ್ಎಂಜಿನಿಯರುಗಳಿಗೆ ಮುಖ್ಯಮಂತ್ರಿ ಪ್ರಶಸ್ತಿ ಕೊಡಿಸಲಿ ಎಂಬಲ್ಲಿಯವರೆಗೂ ತಲುಪಿದವು.
‘ವಾಹನ ಹೋಗಲು ರಸ್ತೆ ಮಾಡಿಸಿ ಎಂದರೆ ಸ್ವಿಮ್ಮಿಂಗ್ ಪೂಲ್ ಮಾಡಿಸಿದ್ದಾರೆ’ ಎಂಬಂತಹ ಮಾತುಗಳೂ ಕೇಳಿಬಂದವು. ಪ್ರತಾಪ್ ಸಿಂಹರೂ ಸುಮ್ಮನಿರಲಿಲ್ಲ. ರಾಮನಗರಜಿಲ್ಲೆಯಕೆರೆಗಳ ಹಾಗೂ ನಾಲೆಗಳ ಒತ್ತುವರಿ ತೆರವು ಮಾಡಿಸಿ ಎಂದುಭರ್ಜರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಯೋಜನೆಯಲ್ಲಿ ಕಳಪೆ ಕಾಮಗಾರಿ ಆಗಿಲ್ಲ ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.
‘ನಾನು ಯಾವ ಕಂಟ್ರಾಕ್ಟರ್ ಜತೆಗೂ ಕಾಫಿ ಕುಡಿದಿಲ್ಲ. ಕಳಪೆ ಕಾಮಗಾರಿ ಆಗಿದ್ದರೆ ಆತನ ಕತ್ತಿನ ಪಟ್ಟಿ ಹಿಡಿದು ಕರೆದುಕೊಂಡುಬಂದು ಸರಿಪಡಿಸುತ್ತೇನೆ’ ಎನ್ನುವ ಪ್ರತಾಪ್ ಸಿಂಹರ ಮಾತಿನಲ್ಲಿ ಕಾಮಗಾರಿಯ ಗುಣಮಟ್ಟದ ಬಗೆಗಿನ ಕಾನಿಡೆನ್ಸ್ ಎದ್ದು ಕಾಣಿಸುತ್ತದೆ. ಮಧ್ಯಪ್ರದೇಶದ ದಿಲೀಪ್ ಬಿಲ್ಡ ಕಾನ್ ಕಂಪನಿಯ ಮೂಲಕ ನಿರ್ಮಾಣವಾಗುತ್ತಿರುವ ಈ ಯೋಜನೆಯ ಸಂಪೂರ್ಣ ವೆಚ್ಚ ಕೇಂದ್ರ ಸರಕಾರದ್ದು. ಇದು ನರೇಂದ್ರ ಮೋದಿ ಸರಕಾರದ ಹೆಮ್ಮೆಯ ಯೋಜನೆ.
ಮೇಲಾಗಿ ಪ್ರತಾಪ್ ಸಿಂಹರ ಕನಸಿನ ಕೂಸು. ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿ ಓಡಿಹೋಗಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ರೀತಿಯ ಭ್ರಷ್ಟಾಚಾರ ಇಲ್ಲದೆ ಅಂತಾರಾಷ್ಟ್ರೀಯ ಗುಣಮಟ್ಟದ ಹೆzರಿ ನಿರ್ಮಾಣವಾಗಲಿದೆ. ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವವರಿಗೆ ಸುಖಕರ ಪ್ರಯಾಣ ಎಂದರೆ ಏನೆಂದು ಅರಿವಾಗಲಿದೆ. ಮೈಸೂರು ಸಹ ಇನ್ನಷ್ಟು ಅಭಿವೃದ್ಧಿ ಯಾಗಬಹುದು. ಹೊಸ ಹೂಡಿಕೆದಾರರು ಮೈಸೂರಿಗೂ ದಾಂಗುಡಿಯಿಟ್ಟು ಅಲ್ಲಿ ವಿಪುಲ ಉದ್ಯೋಗಾವಕಾಶಗಳು ತೆರೆದುಕೊಳ್ಳ ಬಹುದು. ಪ್ರತಾಪ್ ಸಿಂಹ ಅವರು ಇಂತಹ ಒಂದು ಯೋಜನೆಯನ್ನು ಯಶಸ್ವಿಯಾಗಿ ಮುಗಿಸುವುದರ ಬಗ್ಗೆ ಯೋಚಿಸಬಹುದೇ ಹೊರತು, ಈ ಯೋಜನೆಯಿಂದ ಜೇಬಿಗೆ ಎಷ್ಟು ತುಂಬಿಸಬಹುದು ಎಂಬುದರ ಕುರಿತಾಗಿ ಅಲ್ಲ; ಅವರನ್ನು ಸರಿಯಾಗಿ ಅರಿಯದವರು ಮಾತ್ರವೇ ಇಂತಹ ಟೀಕೆಗಳನ್ನು ಮಾಡಿಯಾರು.
ಹಾಗಿದ್ದರೆ ರಸ್ತೆಯು ಸ್ವಿಮ್ಮಿಂಗ್ ಪೂಲ್ ಆಗಿದ್ದು ಹೇಗೆ ಎಂದು ಪ್ರಶ್ನಿಸಿದರೆ, ರಾಮದೇವರ ಬೆಟ್ಟದಿಂದ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಕಳೆದ ೩೦ ವರ್ಷಗಳಲ್ಲಿ ಕಂಡು ಕೇಳರಿಯದ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಅದನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿಲ್ಲ. ಹಾಗಾಗಿ ಇನ್ನು ಮುಂದೆ ಅನಿರೀಕ್ಷಿತ ಮಳೆ ಬಂದರೆ ಏನು ಮಾಡಬೇಕು ಎಂಬುದನ್ನು ಎಂಜಿನಿಯರುಗಳ ಜತೆ ಚರ್ಚಿಸಬೇಕಿದೆ.
ಸಂಸದ ಪ್ರತಾಪ್ ಸಿಂಹ ತಮ್ಮ ಪಕ್ಷದವರಿಗೆ, ತಮ್ಮ ಕ್ಷೇತ್ರಕ್ಕೆ ಮಾತ್ರವೇ ಕೆಲಸ ಮಾಡಿಲ್ಲ. ಶಿಂಷಾ ನದಿಗೆ ಸೇತುವೆ ಮಾಡಿಸಿಕೊಡಿ ಎಂದು ಬೇರೆ ಪಕ್ಷದವರು ಬಂದು ಕೇಳಿದರೂ ಸಂಸದನಾಗಿ ಮಾಡಿಕೊಡುತ್ತಾರೆ. ಶೆಟ್ಟಿಹಳ್ಳಿ- ಮತ್ತಿಕೆರೆ ನಡುವಣ ಅಂಡರ್‌ಪಾಸ್ ಮಾಡಿಸಲು ಪ್ರತಾಪ್ ಸಿಂಹ ಮುತುವರ್ಜಿ ವಹಿಸುತ್ತಾರೆ. ಒಬ್ಬ ಜನಪ್ರತಿನಿಧಿಯಾಗಿ ತನ್ನ ಬದ್ಧತೆ ಇರುವುದು ಜನರೆಡೆಗೆ ಎಂದು ಭಾವಿಸಿರುವ ಪ್ರತಾಪ್ ಸಿಂಹ, ಪಕ್ಷದ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸುತ್ತಾರೆ, ಸಮರ್ಥಿಸಿಕೊಳ್ಳುತ್ತಾರೆ. ಹಿಂದೂವಿರೋಧಿ ವಾದಗಳಲ್ಲಿರುವ ಲೋಪಗಳನ್ನು ಸಾರ್ವಜನಿಕ ಚರ್ಚೆಗಳಲ್ಲಿ ಮನವರಿಕೆ ಮಾಡಿಕೊಡುತ್ತಾರೆ.
ನೇರ ಮಾತುಗಳಿಂದ ಜನರ ಮನ ಗೆಲ್ಲುತ್ತಾರೆ. ೨೦೨೯ರ ವೇಳೆಗೆ ಸಂಸದನಾಗಿ ತಾನು ಏನೇನು ಸಾಧಿಸಿರಬೇಕು ಎನ್ನುವುದರ ಸ್ಪಷ್ಟ ಕಲ್ಪನೆ ಅವರಿಗಿದೆ. ಈಗ ವಿರೋಧಿಗಳು ತಲೆಗೊಂದು ಮಾತಾಡಬಹುದು. ಜನರು ಸಂಕಟದಲ್ಲಿರುವಾಗ ‘ಅವರ ಸಂಕಟಕ್ಕೆ ಇವರು ಕಾರಣ’ ಎಂದು ಬೆರಳು ಮಾಡುವುದು ಸುಲಭ. ಆದರೆ ರಾಮನಗರ, ಚನ್ನಪಟ್ಟಣಗಳಲ್ಲಿ ಮೊನ್ನೆ ನಡೆದದ್ದು ವರುಣನಪ್ರತಾಪದ ಪರಿಣಾಮ ಎಂದು ಅರ್ಥ ಮಾಡಿಕೊಳ್ಳದಷ್ಟು ಜನರು ದಡ್ಡರಲ್ಲ. ಚನ್ನಪಟ್ಟಣದಲ್ಲಿ ೨೦೦೨ರಿಂದ ಆರಂಭಗೊಂಡ ಅಕ್ರಮ ಮರಳು ಗಣಿಗಾರಿಕೆ ಕಣ್ವ ನದಿಯ ಹರಿವಿನ ಪಾತ್ರವನ್ನೇ ಬದಲಾಯಿಸಿದೆ ಎಂದು ಸ್ಥಳೀಯರು ದೂರುತ್ತಾರೆ. ಎಡೆ ಕೆರೆ-ಕಾಲುವೆಗಳು ಒತ್ತು ವರಿಯಾಗಿವೆ. ಒತ್ತುವರಿಯನ್ನು ತೆರವು ಮಾಡಿಸಿದರೆ ಮಳೆಹಾನಿಯ ತೀವ್ರತೆ ತನ್ನಿಂದ ತಾನೇ  ಕಡಿಮೆ ಯಾಗುತ್ತದೆ.
ಅದೇನೇ ಇರಲಿ. ಪ್ರತಾಪ್ ಸಿಂಹರ ಕನಸಿನ ಕೂಸಾಗಿರುವ ದಶಪಥ ಹೆzರಿಯಿಂದ ಹಲವರಿಗೆ ಅನುಕೂಲವಾಗಲಿದೆ. ಇಂದು ಟೀಕಿಸುವ ಜನರೇ ನಾಳೆ ಹೊಗಳಲಿದ್ದಾರೆ. ಮೈಸೂರು ಸಹ ಬೆಂಗಳೂರಿನ ಮಟ್ಟಕ್ಕೆ ಅಭಿ ವೃದ್ಧಿಯಾದರೂ ಅಚ್ಚರಿಯಿಲ್ಲ. ಬೆಂಗಳೂರನ್ನು ಸಿಂಗಾಪುರ ಮಾಡಿದವರು ಎಂದು ಎಸ್.ಎಂ. ಕೃಷ್ಣರ ಹೆಸರು ಚಿರಸ್ಥಾಯಿಯಾದಂತೆ ಈ ಒಂದು ಹೆzರಿಯೇ ಪ್ರತಾಪ್ ಸಿಂಹರ ಹೆಸರನ್ನು ಶಾಶ್ವತವಾಗಿರಿಸಲಿದೆ. ನಿಸ್ವಾರ್ಥ ಚಿಂತನೆಯ ಪ್ರತಿಫಲವಿದು. ಇಂತಹ ಇನ್ನಷ್ಟು ಕೆಲಸಗಳುಪ್ರತಾಪ್ ಸಿಂಹರಿಂದಾಗಲಿ, ಅದು ಎಲ್ಲರನ್ನೂ ಉತ್ತೇಜಿಸಲಿ ಎಂದು ಆಶಿಸುವುದಷ್ಟೇ ನಮ್ಮ ಕೆಲಸ.