ವೈದ್ಯ ವೃತ್ತಿಗೆ ಮಾತೃ ವಾತ್ಸಲ್ಯದ ಸ್ಪರ್ಶ
ನಿಲುವುಗನ್ನಡಿ
ಯಗಟಿ ರಘು ನಾಡಿಗ್‌
ಅದೊಂದು ಶಿಶು. ಎಲ್ಲರ ತಾತ್ಸಾರಕ್ಕೆ ಒಳಗಾಗಿದ್ದ ಶಿಶು. ಇರಿಯುವಂತಿದ್ದ ಸಮಾಜದ ಕಣ್ಣನೋಟವನ್ನು ಎದುರಿಸಲಾರದೆ ಕಣ್ಣು ಬಿಡುವುದಕ್ಕೇ ಹಿಂದು-ಮುಂದು ನೋಡುತ್ತಿದ್ದ ಅಥವಾ ಕೀಳರಿಮೆಯಿಂದ ಬಳಲುತ್ತಿದ್ದ ಆ ಶಿಶುವನ್ನು ಓರ್ವ ಮಮತಾಮಯಿ ಅಕ್ಕರೆಯಿಂದ ಕೈಗೆತ್ತಿಕೊಂಡು, ಲಾಲಿಸಿ-ಪಾಲಿಸಿ ದೊಡ್ಡದನ್ನಾಗಿ ಮಾಡಿದರು. ಆ ಶಿಶುವಿನ ಮಹತ್ವದ ಕುರಿತು ಎಲ್ಲರಲ್ಲೂ ಅರಿವು ಮೂಡಿಸಿ, ಅದರ ಬಗೆಗಿನ ತಾತ್ಸಾರ-ಅಪವಾದ- ಅಪಪ್ರಚಾರಗಳನ್ನು ದೂರ ಮಾಡಿದರು.
ಆ ಮಗುವು ಬೆಳೆದು ಪ್ರೌಢನಾದಾಗ ಅದರ ಉಪಶಾಮಕ ಸಾಮರ್ಥ್ಯದ ಆಸರೆಯ ಲಕ್ಷಾಂತರ ಮಂದಿ ನೆಮ್ಮದಿಯನ್ನು ಕಂಡುಕೊಳ್ಳುವಂತೆ ಮಾಡಿ ದರು… ಇವರನ್ನು ಐಂದ್ರಜಾಲಿಕನೆನ್ನಬೇಕೋ? ಸಮಾಜಸೇವಕ ನೆನ್ನಬೇಕೋ? ಮಾನವ ತಾವಾದಿ ಎನ್ನಬೇಕೋ? ಅಥವಾ ಸರಳವಾಗಿ ‘ವೈದ್ಯ’ ಎನ್ನಬೇಕೋ? ಲೌಕಿಕ ಪರಿಭಾಷೆಯಲ್ಲಿ ಇಂಥವರನ್ನು ‘ವೈದ್ಯ’ ಎಂದು ಕರೆಯಬೇಕಾಗುತ್ತದೆ.
ಆದರೆ ಈ ಲೇಖನದಲ್ಲಿ ಬಿಂಬಿತವಾಗಿರುವ ಸಾಧಕರು ಕೇವಲ ವೈದ್ಯರಷ್ಟೇ ಅಲ್ಲದೆ ಮೇಲೆ ಉಲ್ಲೇಖಿಸಿದ ವಿಶಿಷ್ಟ ನಾಮಧೇಯಗಳಿಗೂ ಪರ್ಯಾಯಪದವೇ ಆಗಿಹೋಗಿದ್ದಾರೆ ಎಂಬುದು ಸತ್ಯಸ್ಯ ಸತ್ಯ. ಅವರೇ ಹೋಮಿಯೋಪತಿ ಕ್ಷೇತ್ರದಲ್ಲಿನ ಅನುಪಮ ಸಾಧಕ ಡಾ. ಬಿ.ಟಿ. ರುದ್ರೇಶ್. ದೇಶದಲ್ಲಿ ಹೋಮಿಯೋಪತಿ ವೈದ್ಯಪದ್ಧತಿಗೆ ದಕ್ಕಿರುವ ಮಹತ್ವದ ಕುರಿತಾಗಿ ಅಥವಾ ಈ ಪದ್ಧತಿಯ ಸಾಧಕರ ಕುರಿತಾಗಿ ಯಾರೇ ಬರೆಯಲು ಹೊರಟರೂ ಡಾ. ರುದ್ರೇಶ್ ಖಂಡಿತ ಆ ಬರಹದ ಅವಿಭಾಜ್ಯ ಅಂಗವಾಗಿ ಹೊರಹೊಮ್ಮು ತ್ತಾರೆ ಎಂಬುದು ಈ ಚಿಕಿತ್ಸಾ ಪದ್ಧತಿಯ ಮತ್ತು ಸ್ವತಃ ರುದ್ರೇಶ್‌ರವರ ಸಾಮರ್ಥ್ಯಕ್ಕೆ ಸಾಕ್ಷಿ.
ಆದರೆ ತಮಾಷೆಯೇನು ಗೊತ್ತಾ? ತಾತ್ಸಾರಕ್ಕೆ ಒಳಗಾಗಿದ್ದ ಶಿಶುವೊಂದರ ಕುರಿತು ಈ ಬರಹದ ಪೀಠಿಕೆಯಲ್ಲಿ ಪ್ರಸ್ತಾಪಿಸ ಲಾಗಿದೆಯಲ್ಲವೇ? ಅದು ಬೇರಾವುದೂ ಅಲ್ಲ, ಸ್ವತಃ ಹೋಮಿಯೋಪತಿ ವೈದ್ಯಪದ್ಧತಿಯೇ..! ಈ ಮಾತನ್ನು ಅರಗಿಸಿ ಕೊಳ್ಳಲಿಕ್ಕೆ ಕಷ್ಟವಾಗುತ್ತಿರಬಹುದು ಅಥವಾ ಆಶ್ಚರ್ಯವಾಗುತ್ತಿರಬಹುದು. ‘ಸ್ವತಃ ಡಾ.ರುದ್ರೇಶ್‌ರವರೇ ಹೋಮಿಯೋಪತಿ ವೈದ್ಯಪದ್ಧತಿಯ ಅವಲಂಬಿತರು. ಅವರು ಹೇಗೆ ಇದರ ಪಾಲಕರಾಗುತ್ತಾರೆ? ಹೋಮಿಯೋಪತಿ ಅವರಿಗಿಂತ ಮುಂಚೆ ಯಿಂದಲೂ ಇರುವಂಥದ್ದಲ್ಲವೇ?’ ಎಂಬೆಲ್ಲ ಸಂದೇಹ ನಿಮ್ಮನ್ನು ಕಾಡುತ್ತಿರಬಹುದು.
ಆದರೆ ಹೋಮಿಯೋಪತಿ ಪದ್ಧತಿ ಮತ್ತು ವೈದ್ಯರನ್ನು ಕೊಂಕು ಭಾವನೆಯಿಂದ, ನಿಕೃಷ್ಟತೆಯಿಂದ ಕಾಣಲಾಗುತ್ತಿದ್ದಂಥ ದಿನಗಳಲ್ಲಿಯೂ ‘ಜೀವನವೃತ್ತಿ’ಗಾಗಿ ಅದನ್ನೇ ಆಯ್ಕೆ ಮಾಡಿಕೊಂಡು, ಆ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು, ಬೆವರು-ರಕ್ತ ಬಸಿದು ತಪಸ್ಸು ಮಾಡಿ, ಈ ಪದ್ಧತಿಯ eನ ಮತ್ತು ಅನುಭವ ದಕ್ಕಿಸಿಕೊಂಡ ರುದ್ರೇಶ್, ಇಂದು ಕರ್ನಾಟಕ ದಲ್ಲಷ್ಟೇ ಏಕೆ ಇಡೀ ದೇಶದಲ್ಲಿ ಹೋಮಿಯೋಪತಿಗೆ ಸಿಗುತ್ತಿರುವ ಜನಮನ್ನಣೆಗೆ, ಅದನ್ನು ತೆರೆದಬಾಹುಗಳಿಂದ ಸ್ವಾಗತಿಸುವಂಥ ಚಿತ್ತಸ್ಥಿತಿಗೆ ಮುಖ್ಯ ಕಾರಣಕರ್ತರಾಗಿದ್ದಾರೆ.
ಹೀಗಾಗಿ ರುದ್ರೇಶರು ಹೋಮಿಯೋಪತಿಯ ಅನುಸರಣೆಗಾರರಾಗಿದ್ದರೂ ಅದರ ಪಾಲಕರ ಪಾತ್ರವನ್ನೂ ವಹಿಸಿದ್ದಾರೆ ಎಂದು ಹೇಳಬಹುದು. ಹಾಗೆಂದ ಮಾತ್ರಕ್ಕೆ ಈ ವೃತ್ತಿಪ್ರಾವೀಣ್ಯ ಅವರಿಗೆ ಸುಲಭವಾಗಿ ಕೈಗೆಟುಕಲಿಲ್ಲ. ಅದು ಅಕ್ಷರಶಃ ‘ಗಗನ-ಕುಸುಮ’ವೇ ಆಗಿತ್ತು. ಚಿಕ್ಕಮಗಳೂರು ಜಿಯ ಬೆಳವಾಡಿ ಗ್ರಾಮದವರಾದ ರುದ್ರೇಶ್, ಕುಟುಂಬಸ್ಥರ, ಹಿತೈಷಿಗಳ ಅಸಮಾಧಾನದ ನಡುವೆಯೇ ಬೆಂಗಳೂರಿನ ಹಾನಿಮನ್ ಹೋಮಿಯೋಪತಿಕ್ ಕಾಲೇಜಿನ ಮೆಟ್ಟಿಲೇರಿದರು. ವಿದ್ಯಾಭ್ಯಾಸದ ನಿರ್ವಹಣೆಗೆ ಕಾಸಿರಲಿಲ್ಲ.
ಆಗ ಗಾಂಧಿಬಜಾರಿನ ಡಿ.ವಿ.ಜಿ. ರಸ್ತೆಯ ಅಶ್ವಿನಿ ಹೋಮಿಯೋ ಕ್ಲಿನಿಕ್ ‘ಅರೆಕಾಲಿಕ ಉದ್ಯೋಗ’ದ ಗೂಡಾಗಿ ಪರಿಣಮಿಸಿತು. ಅಲ್ಲಿ ಹಿರಿಯ ವೈದ್ಯ ಡಾ.ಕೃಷ್ಣಮೂರ್ತಿ ಯವರಲ್ಲಿ ಕಾಂಪೌಂಡರ್ ಆಗಿ ಮಾಸಿಕ ೧೦೦ ರುಪಾಯಿ ವೇತನಕ್ಕೆ ರುದ್ರೇಶ್ ಸೇರಿಕೊಂಡರು. ‘eನದ ಹಸಿವು’ ನೀಗಿಸಲು ಹಾನಿಮನ್ ಕಾಲೇಜು, ‘ಜಠರದ ಹಸಿವು’ ನೀಗಿಸಲು ಅಶ್ವಿನಿ ಹೋಮಿಯೋ ಕ್ಲಿನಿಕ್…! ವ್ಯಾಸಂಗದ ನಂತರ ಪೂರ್ಣಾವಧಿ ಉದ್ಯೋಗಕ್ಕಾಗಿ ಮುಂಬಯಿಗೆ ತೆರಳಿದ ರುದ್ರೇಶ್, ಅಲ್ಲಿ ಅಲೋಪತಿ ವೈದ್ಯ ಪದ್ಧತಿಯ ಖಾಸಗಿ ಆಸ್ಪತ್ರೆಯಲ್ಲಿ ೨ ವರ್ಷ ಕೆಲಸ ಮಾಡಿ, ನಂತರ ಬೆಂಗಳೂರಿಗೆ ಮರಳಿ ಅದೇ ಅಶ್ವಿನಿ ಹೋಮಿಯೋ ಕ್ಲಿನಿಕ್‌ನಲ್ಲಿ ಡಾ. ಕೃಷ್ಣಮೂರ್ತಿಯವರೊಂದಿಗೆ ಕೆಲಸದಲ್ಲಿ ತೊಡಗಿಸಿಕೊಂಡರು.
೧೯೯೨ರ ಸುಮಾರಿಗೆ ಹೋಮಿಯೋ ಪತಿ ಕುರಿತಾಗಿ ರುದ್ರೇಶ್ ನಿರ್ಮಿಸಿದ ಸಾಕ್ಷ್ಯಚಿತ್ರವೊಂದು ದೂರದರ್ಶನದಲ್ಲಿ ಪ್ರಸಾರವಾಗುವುದರೊಂದಿಗೆ ಈ ಪದ್ಧತಿಯ ಮೇಲೆ ಎಲ್ಲರ ಗಮನ ಹರಿಯುವಂತಾಯಿತು. ಅಲ್ಲಿಂದ ಶುರುವಾಯ್ತು ತಪಸ್ಸು. ನಂತರದ್ದೇ ಇತಿಹಾಸ..! ಡಾ. ರುದ್ರೇಶರ ಇಷ್ಟು ದಶಕಗಳ ವೃತ್ತಿಜೀವನದಲ್ಲಿ ಅವರಿಂದ ಪರೀಕ್ಷೆಗೆ ಒಳಪಟ್ಟು, ‘ಉಪಶಾಮಕ-ಸ್ಪರ್ಶ’ವನ್ನು ಪಡೆದ ರೋಗಿಗಳ ಸಂಖ್ಯೆ ೬ ಲಕ್ಷವನ್ನು ಮೀರಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೇ? ಮೂಗು ಇರುವವರೆಗೂ ತಪ್ಪದ ನೆಗಡಿಯಂಥ ‘ಸಾಮಾನ್ಯ’ ತೊಂದರೆಯಿಂದ ಮೊದಲ್ಗೊಂಡು ಅಲರ್ಜಿ, ಅಸ್ತಮಾ, ಮಧುಮೇಹ, ಹೈಪರ್ ಟೆನ್ಷನ್, ಕ್ಯಾನ್ಸರ್‌ನಂಥ ‘ಅಸಾಮಾನ್ಯ’ ತೊಂದರೆಗಳವರೆಗಿನ ವೈವಿಧ್ಯಮಯ ಸಮಸ್ಯೆಗಳಿಗೆ ರುದ್ರೇಶರ ಬತ್ತಳಿಕೆಯಲ್ಲಿ ಉಪಶಾಮಕ ಅಸಗಳಿವೆ.
ಸಮಾಜವಾದ-ಸಮತಾವಾದದ ಕುರಿತಾಗಿ ವೇದಿಕೆಗಳ ಮೇಲೆ ಅಬ್ಬರಿಸಿ ಬೊಬ್ಬಿರಿಯುವ ಮಹಾನುಭಾವರು ರುದ್ರೇಶರ ‘ಮೌನಕ್ರಾಂತಿ’ಯನ್ನೊಮ್ಮೆ ಗಮನಿಸಬೇಕು. ‘ಎಲ್ಲ ರೋಗಿಗಳೂ ಒಂದೇ’ ಎಂಬ ದೃಷ್ಟಿಕೋನ ಇಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಹಾಗಾಗಿ ‘ಉಳ್ಳವರಿಗೆ ಮಾತ್ರವೇ ಚಿಕಿತ್ಸೆ’ ಎಂಬ ಅಭಿಪ್ರಾಯ ಇಲ್ಲಿ ಸಂಪೂರ್ಣ ತಲೆಕೆಳಗು. ಕೈಯಲ್ಲಿ ಕಾಸಿಲ್ಲದವರಿಗೆ ಉಚಿತವಾಗಿಯೇ ‘ಉಪಶಮನ’ ನೀಡುವುದು ರುದ್ರೇಶ್ ರವರ ವಿಶೇಷತೆಗಳಂದು.
‘ಬದುಕೋಕೆ ದುಡ್ಡು ಬೇಕೇ ಹೊರತು, ದುಡ್ಡಿಗಾಗಿ ಬದುಕಬಾರದು’ ಎಂಬ ದೃಷ್ಟಿಕೋನ ಇರುವವರಿಂದ ಮಾತ್ರ ಇಂಥ ಸೇವೆ ಸಾಧ್ಯ. ‘ಡಾ. ರುದ್ರೇಶ್ ಅಪಾಯಿಂಟ್‌ಮೆಂಟ್ ಅನ್ನು ೨ ತಿಂಗಳ ಮುಂಚೆಯೇ ತೆಗೆದುಕೊಳ್ಳಬೇಕು, ತೆಗೆದುಕೊಂಡುಹೋದರೂ ತುಂಬಾ ಕಾಯಬೇಕು; ರುದ್ರೇಶ್ ಮಾತಿನಲ್ಲಿ ನಿಷ್ಠುರಿ, ಕ್ಲಿನಿಕ್‌ಗೆ ದೂರವಾಣಿ ವ್ಯವಸ್ಥೆಯಿಲ್ಲ, ಕೂರುವುದಕ್ಕೆಜನಮೇಜಯರಾಯನ ಕಾಲದ ಬೆಂಚುಗಳಿವೆಯಷ್ಟೇ’ ಇತ್ಯಾದಿ ‘ಕೊಂಕು’ ಮಾತಾಡುವ ‘ಡೊಂಕುಬಾಲದ ನಾಯಕ’ರಿಗೇನೂ ಕಮ್ಮಿಯಿಲ್ಲ. ಆದರೆ ಜನಸಾಮಾನ್ಯರಿಗೆ ಕಡಿಮೆ ಖರ್ಚಿನಲ್ಲಿ ‘ದಿವ್ಯ’ ಚಿಕಿತ್ಸೆ ದೊರೆಯಬೇಕೇ ವಿನಾ ‘ಭವ್ಯ’ಒಳಾಂಗಣವಲ್ಲ ಎಂಬುದು ರುದ್ರೇಶರ ಸ್ಪಷ್ಟ ನಿಲುವು.
ಸೂಪರ್‌ಸ್ಟಾರ್ ಒಬ್ಬನ ಸಿನಿಮಾ ಬಿಡುಗಡೆ ಆಗುತ್ತದೆಯೆಂದರೆ ಅನ್ನ-ನೀರು ಬಿಟ್ಟು ಚಿತ್ರಮಂದಿರದ ಬಳಿ ದಿನಗಟ್ಟಲೆ ಕ್ಯೂನಿಂತು, ತಳ್ಳಾಡಿ, ಅಂಗಿ ಹರಿದುಕೊಂಡು ಟಿಕೆಟ್ ಪಡೆದು ‘ಭ್ರಮೆಯ’ ಅನುಭವದ ಚಲನಚಿತ್ರವನ್ನು ನೋಡುವುದಕ್ಕೆಹೋಲಿಸಿದಾಗ ದೇಹಾರೋಗ್ಯದ ‘ವಾಸ್ತವತೆಯ’ ಸ್ಪಷ್ಟ ದರ್ಶನಕ್ಕಾಗಿ ತಿಂಗಳಲ್ಲಿ ಒಂದು ಬಾರಿ ಒಂದೆರಡು ಗಂಟೆ ಕಳೆದರೆ ಅದು ದುಬಾರಿಯೇನೂ ಆಗಲಾರದು, ಅಲ್ಲವೇ? ನೋಡಿದ್ದಕ್ಕೆ ನೂರು, ಇಂಜೆಕ್ಷನ್‌ಗೆ ಇನ್ನೂರು, ಮುಟ್ಟಿದ್ದಕ್ಕೆ ಮುನ್ನೂರು, ಸ್ಕ್ಯಾನಿಂಗ್‌ಗೆ ಸಾವಿರ, ಹೆರಿಗೆಗೆ ಹತ್ತುಸಾವಿರ ಎಂಬಂತೆ ವಾಣಿಜ್ಯೀಕರಣಗೊಂಡಿರುವ ಆಧುನಿಕ ವೈದ್ಯ ಪದ್ಧತಿಯ ಸನ್ನಿವೇಶದಲ್ಲಿ, ನಿಷ್ಠುರ ನುಡಿಗಳಲ್ಲಿ ಸತ್ಯದರ್ಶನ ಮಾಡಿಸುವ, ಕಡಿಮೆ ಖರ್ಚಿನಲ್ಲಿ ‘ಉಪಶಾಮಕ ಸ್ಪರ್ಶ’ ನೀಡುವ ರುದ್ರೇಶ್‌ರನ್ನು ‘ಇವನಾರವ ಇವನಾರವ?’ ಎನ್ನದೆ, ‘ಇವ ನಮ್ಮವ ಇವ ನಮ್ಮವ’ ಎನ್ನುವಂಥ ಭಾವನೆ ಬೆಳೆಸಿಕೊಂಡರೆ ಅದು ಸಮಾಜಕ್ಕೇ ಹಿತ ಎನ್ನಲಡ್ಡಿಯಿಲ್ಲ.
ಕರ್ನಾಟಕ ಹೋಮಿಯೋಪತಿ ಮಂಡಳಿಯ ಅಧ್ಯಕ್ಷ, ಹೋಮಿಯೋಪತಿಕ್ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ, ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಬೋಧನಾಂಗದ ಸದಸ್ಯ, ಹೋಮಿಯೋಪತಿ ಪ್ರತಿಷ್ಠಾನದ ಚೇರ್‌ಮನ್ ಹೀಗೆ ಪ್ರಸ್ತುತ ಹಲವು ಹೊಣೆಗಾರಿಕೆಗಳ ನೊಗ ಹೊತ್ತಿರುವ ಡಾ. ರುದ್ರೇಶ್, ಅವು ತಂದೊಡ್ಡುವ ಜವಾಬ್ದಾರಿಗಳ ಸಮರ್ಥ ನಿರ್ವಹಣೆಗಷ್ಟೇ ಸಮಯ ವಿನಿಯೋಗಿಸಿ ರೋಗಿಗಳನ್ನು ನಿರ್ಲಕ್ಷಿಸುವುದಿಲ್ಲ; ವೈದ್ಯಕೀಯ ಸಮಾಲೋಚನೆ, ಉಪಶಾಮಕ ಚಿಕಿತ್ಸೆ ಅರಸಿ ಬರುವ ನೊಂದಜೀವಿಗಳಿಗೆ ಕ್ಲಿನಿಕ್‌ನಲ್ಲಿ ‘ಭರವಸೆಯ ಬೆಳಕು’ ಬೀರಿದ ನಂತರವಷ್ಟೇ ಮನೆಗೆ ತೆರಳುವ ಶಿಷ್ಟಾಚಾರ ಅವರದ್ದು.
‘ನೋವು ನೀಗುವ ಕಾಯಕದಲ್ಲಿ ಕಂಡ ಬದುಕು-ಬೆಳಕು’, ‘ಆರೋಗ್ಯ-ಆಯಸ್ಸು-೧೦೦’, ‘ಬಡವರ ಬಾದಾಮಿ ಹೋಮಿಯೋ ಪತಿ’, ‘ವೈದ್ಯನ ಹತ್ತು ಮುಖಗಳು’, ‘ಹೋಮಿಯೋ ಪಥ’, ‘ದಿ ಹೀಲಿಂಗ್ ಟಚ್’ ಸೇರಿದಂತೆ ಹಲವು ಕೃತಿಗಳಲ್ಲಿ ವೈದ್ಯ ವೃತ್ತಿಯ ಅನುಭವಗಳಿಗೆ, ರೋಗಿಗಳ ನೋವುಗಳಿಗೆ ಅಕ್ಷರರೂಪ ಕೊಟ್ಟಿರುವ ರುದ್ರೇಶ್, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪುರ ಸ್ಕಾರಕ್ಕೂ ಪಾತ್ರರಾಗಿದ್ದಾರೆ. ಕರ್ನಾಟಕ ಸರಕಾರ ನೀಡಿರುವ ರಾಜ್ಯೋತ್ಸವ ಪ್ರಶಸ್ತಿ, ಹಾನಿಮನ್ ಗೋಲ್ಡ್ ಪುರಸ್ಕಾರ, ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪುರಸ್ಕಾರಗಳು ರುದ್ರೇಶ್ ಮಡಿಲು ತುಂಬಿವೆ. ಇದು ರುದ್ರೇಶರ ವೃತ್ತಿಪ್ರಾವೀಣ್ಯ ಮತ್ತು ಸಾಧನೆಯ ಕುರಿತಾದ ‘ಸಮಗ್ರ ದೃಷ್ಟಿಯ’ ಲೇಖನವಲ್ಲ, ಕೇವಲ ಒಂದು ‘ಟೈಟಲ್ ಕಾರ್ಡ್’ ಅಷ್ಟೇ.
ಇಲ್ಲಿರುವುದು ಅನ್ನದ ಪಾತ್ರೆಯಲ್ಲಿನ ಬೆಂದಿರುವ ‘ಅನ್ನ’ದಿಂದ ಹೆಕ್ಕಿ ತೆಗೆದ ನಾಲ್ಕಾರು ಅಗುಳುಗಳಷ್ಟೇ. ಇಂಥವರ ಸಂತತಿ ಸಾವಿರವಾಗಲಿ ಎಂದು ಹಾರೈಸುವುದಷ್ಟೇ ನಮ್ಮ ಕೆಲಸ.