ಮಕ್ಕಳಿಗೆ ಮನೆಯಲ್ಲೇ ಮೊಟ್ಟೆ ಕೊಡಬಹುದಲ್ವೇ ?
ತತ್ತಿಚಿಂತನೆ
ತುರುವೇಕೆರೆ ಪ್ರಸಾದ್
ಮಕ್ಕಳಿಗೆ ಮೊಟ್ಟೆಯನ್ನು ಕೊಡಲೇಬಾರದೆಂದೇನಿಲ್ಲ. ಅತಿ ಸುಲಭ ಲಭ್ಯ ಮತ್ತು ರುಚಿಕರ ಎಂಬ ಕಾರಣವನ್ನು ಮುಂದಿಟ್ಟು ಕೊಂಡು ಮೊಟ್ಟೆ ವಿತರಣೆಯನ್ನು ಸಮರ್ಥಿಸಬಹುದು, ಅದರಲ್ಲಿ ತಪ್ಪೇನಿಲ್ಲ. ಆದರೆ ಶಾಲೆಗಳಲ್ಲಿಮಕ್ಕಳಿಗೆ 3 ದಿನ ಕೊಡುವ ಮೊಟ್ಟೆಯನ್ನು ಮನೆಯಲ್ಲಿ 5 ದಿನ, ಬೇಕಾದರೆ ಇಡೀ ವಾರವೇ ವೈವಿಧ್ಯಮಯ ಖಾದ್ಯಗಳ ಸ್ವರೂಪದಲ್ಲಿ ಕೊಡಬಹುದು.
ಈಚೆಗೆ ಮತ್ತೆ ಶಾಲೆಗಳಲ್ಲಿ ಬಿಸಿಯೂಟಕ್ಕೆ ಮೊಟ್ಟೆಯನ್ನು ವಾರಕ್ಕೆ ಮೂರು ಸಲವಾ ದರೂ ಕಡ್ಡಾಯವಾಗಿ ನೀಡುವ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ. ಮಕ್ಕಳಿಗೆ ಮೊಟ್ಟೆ ನೀಡುವ ಮೂಲ ಆಶಯ, ಮಕ್ಕಳಿಗೆ ಪೌಷ್ಟಿಕಾಂಶಗಳು ಕಮ್ಮಿ ಯಾಗದಂತೆ ನೋಡಿಕೊಳ್ಳುವುದು; ಅದರಲ್ಲೂ ಮುಖ್ಯವಾಗಿ ಬಡಮಕ್ಕಳಿಗೆ ಪೌಷ್ಟಿ ಕಾಂಶಗಳ ಕೊರತೆ ಆಗದಂತೆ ನೋಡಿ ಕೊಳ್ಳುವುದು ಎಂಬ ಈ ಕಳಕಳಿಯನ್ನು ಎಲ್ಲರೂ ಒಪ್ಪತಕ್ಕದ್ದೇ, ಅದರಲ್ಲಿ ಎರಡು ಮಾತಿಲ್ಲ.
ಆದರೆ ಈ ಒಂದು ಗುರಿಸಾಧನೆ ಶಾಲೆಗಳ ಮೂಲಕ, ಅದೂ ಮೊಟ್ಟೆಯ ಮೂಲಕವೇ ಏಕೆ ಆಗಬೇಕು ಎಂಬುದು ಕೆಲ ಸಮಯ ಗಳಿಂದಲೂ ಚರ್ಚೆಯ ವಿಷಯ ವಾಗಿದೆ. ಮೊಟ್ಟೆಗೆ ಪರ್ಯಾಯವಾದ ಆಹಾರ ವಸ್ತುಗಳಿಂದಲೂ ಪೌಷ್ಟಿಕಾಂಶಗಳ ಕೊರತೆ ಯನ್ನು ನಿವಾರಿಸಿ ಸಮತೋಲನ ಕಾಯ್ದುಕೊಳ್ಳಬಹುದಾಗಿದೆ. ಉದಾಹರಣೆಗೆ ಒಂದು ಮೊಟ್ಟೆಯ ಬಿಳಿ ಹಾಗೂ ಹಳದಿ ಎರಡೂ ಭಾಗಗಳಿಂದ ಸುಮಾರು ೮ ಗ್ರಾಂ.ನಷ್ಟು ಪ್ರೋಟೀನ್ ಸಿಗುತ್ತದೆ.
ಕಾಲು ಲೋಟ ಜಜ್ಜಿದ ಆಲೂಗಡ್ಡೆ, ಬಾಳೆ ಹಣ್ಣು, ಒಂದು ಚಮಚ ಅಗಸೆ ಕಾಳು, 4 ಚಮಚ ಸೋಯಾ ಹಾಲಿನಿಂದ ತಯಾರಿಸ ಲಾದ ‘ಟೋಫು’ ಇವೆಲ್ಲವೂ ಒಂದು ಮೊಟ್ಟೆಗೆ ಸಮ. ಇದಲ್ಲದೆ ಚಿಯಾ, ಕುಂಬಳ, ಅಗಸೆ ಬೀಜಗಳಲ್ಲಿ ಪ್ರೋಟೀನ್ ಜತೆಗೆ ಒಮೇಗಾ-3 ಕೊಬ್ಬಿನಂಶಗಳು ಇರುತ್ತವೆ. ಕುಂಬಳ ಬೀಜದಲ್ಲಂತೂ ದೇಹದ ಪೋಷಣೆಗೆ ಬೇಕಾದ ಸತುವು, ರಂಜಕದ ಅಂಶಗಳು ಹೇರಳವಾಗಿ ಇರುತ್ತವೆ. ಮಸೂರ ಬೀಜ, ಉದ್ದು ಮೊದಲಾದವುಗಳಲ್ಲಿನ ಪ್ರೋಟೀನ್ ಅಂಶ ಮೊಟ್ಟೆಯಲ್ಲಿನ ಪ್ರೋಟೀನ್ ಅಂಶಕ್ಕಿಂತ ಹೆಚ್ಚಿರುತ್ತದೆ.
1 ಲೋಟದಷ್ಟು ಅವರೆ ಅಥವಾ ಚನ್ನಂಗಿಯಲ್ಲಿ ಮೊಟ್ಟೆ ಯಲ್ಲಿರುವುದಕ್ಕಿಂತ 6 ಗ್ರಾಂ ಹೆಚ್ಚು (14 ಗ್ರಾಂ) ಪ್ರೋಟೀನ್ ಇರುತ್ತದೆ. ಚಿಕ್‌ಪಾಸ್, ಸೇಬಿನ ಸಾಸ್, ಸಿಲ್ಕನ್ ಟೋಫು, ಸೋಯಾ, ಶ್ರೀಖಂಡ, ಬಾದಾಮಿ, ಕಡಲೆಕಾಯಿ ಈ ಎಲ್ಲ ಆಹಾರ ಪದಾರ್ಥ ಗಳಲ್ಲೂ ಮೊಟ್ಟೆಯಷ್ಟೇ ಅಥವಾ ಅದಕ್ಕಿಂತ ಹೆಚ್ಚೇ ಪ್ರೋಟೀನ್ ಇದೆ. ಅದರೂ ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಮೊಟ್ಟೆ ಯನ್ನೇ ಕೊಡಬೇಕು ಎಂದು ಒಂದು ವರ್ಗ ಒತ್ತಾಯಿಸುತ್ತಲೇ ಇರುತ್ತದೆ.
ಶಾಲೆ ಒಂದು ಸಾರ್ವಜನಿಕ ಸ್ಥಳ. ಎಲ್ಲ ಜಾತಿ, ವರ್ಗಗಳ ಮಕ್ಕಳು ಒಟ್ಟು ಕಲೆತು ಭೇದ-ಭಾವ ಮರೆತು ಆಡಿ ನಲಿಯಬೇಕಾದ ಒಂದು ಸರ್ವಜನಾಂಗದ ಶಾಂತಿಯ ತೋಟ. ಶಾಲೆಗಳಲ್ಲಿ ಎಲ್ಲ ಜಾತಿ, ಮತ, ವರ್ಗಗಳ ಮಕ್ಕಳು ಇರುತ್ತಾರೆ. ಅವರ ಆಹಾರವೂ ವೈವಿಧ್ಯತೆಯಿಂದಲೇ ಕೂಡಿರುತ್ತದೆ. ಶಾಖಾಹಾರವೋ, ಮಾಂಸಾಹಾರವೋ, ಮೊಟ್ಟೆ, ಮೀನು ಸೇವನೆಯೋ ಯಾವುದೇಆದರೂ ಮಕ್ಕಳು ತಮ್ಮ ಕುಟುಂಬದ ಆಹಾರ ಪದ್ಧತಿ ಯನ್ನೇ ರೂಢಿಸಿಕೊಂಡಿರುತ್ತವೆ.
ಮಕ್ಕಳಿಗೆ ತಮ್ಮ ಮನೆಯಲ್ಲೇ ಆಹಾರದ ಆಯ್ಕೆಗೆ ಯಾವುದೇ ಅವಕಾಶ ಸಿಕ್ಕಿರುವುದಿಲ್ಲ. ರೂಢಿಗತವಾಗಿ ಅವು ಕುಟುಂಬದ ಆಹಾರ ಪದ್ಧತಿಗೆ ಹೊಂದಿಕೊಂಡಿರುತ್ತವೆ. ಎಷ್ಟೋ ಮನೆಗಳಲ್ಲಿ ಮಕ್ಕಳು ಮೊಟ್ಟೆ, ಮಾಂಸಾಹಾರವನ್ನು ತಿರಸ್ಕರಿಸಿದಾಗಮನೆಯವರು ಬಲವಂತವಾಗಿ ತಿನ್ನಿಸಿ ರೂಢಿಮಾಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗೇ, ಮನೆಯಲ್ಲೇ ಒಂದು ಮಗು ಇಷ್ಟಪಟ್ಟು ಮೊಟ್ಟೆ ತಿನ್ನುವಾಗ ಮತ್ತೊಂದು ಮಗು ತಿರಸ್ಕರಿಸಿದ್ದನ್ನೂ ಗಮನಿಸಿದ್ದೇನೆ. ಮನೆಯಲ್ಲೇ ಹೀಗಿರುವಾಗ ಶಾಲೆ ಯೆಂದ ಮೇಲೆ ಅಲ್ಲಿ ಮಕ್ಕಳ ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇರುವುದಿಲ್ಲವೇ? ಇಂತಹ ವೈವಿಧ್ಯತೆ ಯನ್ನೂ ಗೌರವಿಸ ಬೇಕಾದ್ದು ದೊಡ್ಡವರಾದ ಅದರಲ್ಲೂ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಹೊಂದಿರುವವರ ಕರ್ತವ್ಯವೇ ಆಗಿರುತ್ತದೆ.
ಶಾಲೆಯಂತಹ ಸ್ಥಳಗಳಲ್ಲಿ ಎಲ್ಲ ಮಕ್ಕಳೂ ಮುಜುಗರವಿಲ್ಲದೆ ಸೇವಿಸುವ ಒಂದು ಸಾಮಾನ್ಯ ಆಹಾರ ಪದ್ಧತಿಯನ್ನೇ ರೂಢಿ ಗೊಳಿಸುವುದು ಉತ್ತಮ. ಆಗ ಆ ಮಕ್ಕಳು ಯಾವುದೇ ಮುಜುಗರ, ಒದ್ದಾಟ, ಕಸಿವಿಸಿಯಿಲ್ಲದೆ ಒಂದೇ ಭಾವನೆಯಲ್ಲಿ, ಒಂದೇ ಪಂಕ್ತಿಯಲ್ಲಿ, ಜಾತಿ, ಧರ್ಮದ ಭೇದಭಾವಲ್ಲದೆ ಕುಳಿತು ಉಣ್ಣಲು, ನಲಿಯಲು ಅವಕಾಶ ಸಿಗುತ್ತದೆ.
ಇಲ್ಲವಾದಲ್ಲಿ ಜಾತಿ, ಧರ್ಮದ ಮೊಟ್ಟೆಗೆ ಕಾವು ಕೊಟ್ಟು ಹೊಸ ಹೊಸ ಮೊಟ್ಟೆಯನ್ನಿಟ್ಟುಕೊಂಡು ನಾವೇ ಮಕ್ಕಳನ್ನುಪ್ರತ್ಯೇ ಕಿಸಿದಂತಾಗುತ್ತದೆ. ಒಂದು ವಿಷಯವನ್ನು ನೆನಪಿಡಬೇಕು- ಮಕ್ಕಳಿಗೆ ಜಾತಿ, ಧರ್ಮದ ನಂಜಿನ ಸೋಂಕಿರುವುದಿಲ್ಲ. ಅದನ್ನು ದೊಡ್ಡವರಾದ ನಾವು ಹೇರುತ್ತೇವೆ. ನಿರ್ದಿಷ್ಟ ಆಹಾರ ಪದ್ಧತಿಯನ್ನು ಹೇರುವ ಮೂಲಕ ಮಕ್ಕಳನ್ನು ಹಿಂಸೆ, ಮುಜುಗರಕ್ಕೆ ಗುರಿ ಮಾಡುವುದೂ ವಿಕೃತಿ ಎನಿಸುತ್ತದೆ.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಮೊಟ್ಟೆ ಎಷ್ಟೇ ಪರಿಪೂರ್ಣ ಆಹಾರ ಎನಿಸಿದರೂ ಅದು ಮಕ್ಕಳಲ್ಲಿ ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಮೆರಿಕದ ಒಂದು ವರದಿಯ ಪ್ರಕಾರ, ಮಕ್ಕಳಲ್ಲಿ ಅತಿ ಹೆಚ್ಚು ಅಲರ್ಜಿ ಉಂಟು ಮಾಡುವ ಪದಾರ್ಥಗಳಲ್ಲಿ ಮೊಟ್ಟೆಗೆ ಎರಡನೇ ಸ್ಥಾನ ಇದೆ. ಹಲವು ಮಕ್ಕಳು ಇಂತಹ ಅಲರ್ಜಿ ಸಂಬಂಧಿತ ಕಾಯಿಲೆಯಿಂದ ಒಳಗೊಳಗೇ ಬಳಲಬಹುದು. ಮಕ್ಕಳು ಬೆಳೆಯುತ್ತ ಹೋದಂತೆಲ್ಲ ಅವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಮೊಟ್ಟೆ ಸಹ್ಯವಾಗುತ್ತದೆ.
ಮತ್ತೂ ಮುಖ್ಯವಾದ ಅಂಶವೆಂದರೆ ಜಾತಿ, ಧರ್ಮ ಹೊರತಾಗಿ ಮೊಟ್ಟೆಯನ್ನು ದೂರವಿಡಲು ಮೂರು ಕಾರಣಗಳಿವೆ:
೧) ಆರೋಗ್ಯ ಸಂಬಂಧಿತ ಸಮಸ್ಯೆಗಳು೨) ಪರಿಸರ ಕಾಳಜಿ೩) ಪ್ರಾಣಿಗಳ ಹಕ್ಕು ಕುರಿತ ಸಿದ್ಧಾಂತ ಪಾಲನೆ.
ಇಷ್ಟಾಗಿಯೂ ಮಕ್ಕಳಿಗೆ ಮೊಟ್ಟೆಯನ್ನು ಕೊಡಲೇಬಾರದೆಂದೇನಿಲ್ಲ. ಅತಿ ಸುಲಭ ಲಭ್ಯ ಮತ್ತು ರುಚಿಕರ ಎಂಬ ಕಾರಣ ವನ್ನು ಮುಂದಿಟ್ಟುಕೊಂಡು ಮೊಟ್ಟೆ ವಿತರಣೆಯನ್ನು ಸಮರ್ಥಿಸಬಹುದು, ಅದರಲ್ಲಿ ತಪ್ಪೇನಿಲ್ಲ. ಆದರೆ ಶಾಲೆಗಳಲ್ಲಿ ಮಕ್ಕಳಿಗೆ 3 ದಿನ ಕೊಡುವ ಮೊಟ್ಟೆಯನ್ನು ಮನೆಯಲ್ಲಿ 5 ದಿನ, ಬೇಕಾದರೆ ಇಡೀ ವಾರವೇ ವೈವಿಧ್ಯಮಯ ರೀತಿಯಲ್ಲಿ (ಎಗ್‌ಬುರ್ಜಿ, ಆಮ್ಲೆಟ್ಹೀಗೆ ಇನ್ನೂ ಸ್ವಚ್ಛ ರೂಪದಲ್ಲಿ, ರುಚಿಕರವಾಗಿ) ಕೊಡಬಹುದು.
ಈಗ ಮಗುವಿಗೆ ಒಂದು ಮೊಟ್ಟೆ ಕೊಡಿಸಲಾರದಷ್ಟು ಬಡವರು ಇದ್ದಾರೆ ಎನಿಸುವುದಿಲ್ಲ. ನರೇಗ ಯೋಜನೆಯಡಿ ಕೆಲಸ ಮಾಡುವ ಒಬ್ಬ ಕೂಲಿ ಕಾರ್ಮಿಕನಿಗೆ 100 ದಿನಕ್ಕೆ ಸುಮಾರು 30 ಸಾವಿರ ರುಪಾಯಿ ಬರುತ್ತದೆ. ಒಂದು ಮಗುವಿಗೆ ಮಾಹೆ ಯಾನ 120-150 ರು. ಖರ್ಚು ಮಾಡಿದರೆ ವಾರಕ್ಕೆ 5 ದಿನ ಮೊಟ್ಟೆ ಕೊಡಬಹುದು. ಅದೂ ಸಾಧ್ಯವಿಲ್ಲವಾದರೆ ಸರಕಾರವೇ ಶಾಲೆಯಲ್ಲಿ ಮೊಟ್ಟೆಗಾಗಿ ವ್ಯಯಿಸುವ ಹಣವನ್ನು ‘ಮೊಟ್ಟೆ ಭತ್ಯೆ’ ಎಂದು ಪ್ರತಿ ಮಗುವಿಗೂ ತರಿಸಬಹುದು.
ಏನೇ ಆಗಲಿ, ಒಂದು ಮಗುವಿನ ಊಟದ ತಟ್ಟೆಯ ಮೊಟ್ಟೆ ಮತ್ತೊಂದು ಮಗುವಿನ ಹೊಟ್ಟೆಗೆ ತಣ್ಣೀರುಬಟ್ಟೆ ಆಗದಂತೆ ನೋಡಿಕೊಳ್ಳಬೇಕು. ಪ್ರತಿ ಮಗುವಿಗೂ ತುತ್ತಿನ ಹಕ್ಕಿರುವಂತೆ ಅದನ್ನು ನೆಮ್ಮದಿಯಿಂದ ತಿನ್ನುವ ಹಕ್ಕೂ ಇರಬೇಕು.