ದೇಶ ಉಳಿಸಿದವರನ್ನೇ ದೂಷಿಸುವುದೇ ?
ಕಟುವಾಸ್ತವ
ಮಂಜುನಾಥ ಅಜ್ಜಂಪುರ
ಹಿಂದೂ ಮಹಾಸಭೆಯ ಎಲ್ಲ ಅಭಿಮತ, ನಿರ್ಣಯ, ವಿರೋಧ, ಪ್ರತಿಭಟನೆಗಳಲ್ಲಿ ಸಾವರ್ಕರ್ ಅವರ ಮಹತ್ತರ ಪಾತ್ರವಿತ್ತು. ‘ಭಾರತದ ರಾಜಕಾರಣದ ಆದರ್ಶ ಮತ್ತು ಮೌಲ್ಯಗಳು ಹಿಂದೂ ಧರ್ಮದಿಂದ ಪ್ರೇರಿತವಾಗಬೇಕು, ಭಾರತದ ಕ್ಷಾತ್ರಶಕ್ತಿಗಾಗಿ ಹಿಂದೂಗಳ ಸೈನಿಕೀಕರಣ ಆಗಬೇಕು’ ಎಂದೇ ಸಾವರ್ಕರ್ ಮೊದಲಿನಿಂದಲೂ ಒತ್ತಾಯಿ ಸುತ್ತಿದ್ದರು.
ಸಾವರ್ಕರ್ ಅವರನ್ನು ಅತಿಯಾಗಿ ವಿರೋಧಿಸುವ ಬ್ರಿಟಿಷರ ಪ್ರೀತಿ ಪಾತ್ರರು, ‘ದೇಶ ವಿಭಜನೆಗೆ ಕಾರಣೀಭೂತರು, ದ್ವಿರಾಷ್ಟ್ರ ಸಿದ್ಧಾಂತದ ಪ್ರತಿಪಾದಕರು’ ಎಂದೂ ಅವರನ್ನು ಗಳಹುವುದುಂಟು. ಸೈಯದ್ ಅಹಮದ್ ಖಾನ್, ಮೊಹಮ್ಮದ್ ಇಕ್ಬಾಲ್ ಮೊದಲಾದ ನಾಯಕರು ‘ಯಾವುದೇ ದೇಶವಾಗಿರಲಿ, ಮುಸ್ಲಿಮರು ಯಾವಾಗಲೂ ಪ್ರತ್ಯೇಕ ರಾಷ್ಟ್ರವಾಗಿಯೇ ಇರುತ್ತಾರೆ’ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು.
ಮತಸಿದ್ಧಾಂತದ ಈ ಅಂಶವನ್ನು ಸಾವರ್ಕರ್ ವಿವರಿಸುತ್ತಿದ್ದರೇ ಹೊರತು, ತಮ್ಮ ಯಾವ ಹೊಸ ಸಿದ್ಧಾಂತವನ್ನೂ ಮಂಡಿಸಲಿಲ್ಲ. ದೇಶವಿಭಜನೆ ಆಗಬೇಕೆಂದು ಸಾವರ್ಕರ್ ಎಂದೂ ಹೇಳಲಿಲ್ಲ. ಈ ನಿಟ್ಟಿನಲ್ಲಿ ಮಹತ್ವದ ಸಾಕ್ಷ್ಯಾಧಾರಗಳನ್ನುಪ್ರಸ್ತುತಪಡಿಸುವ ಸವ್ಯಸಾಚಿ ಭಟ್ಟಾಚಾರ್ಯ ಅವರ  ’ ಕೃತಿಯ (2ನೇ ಸಂಪುಟ) ಪರಾಮರ್ಶೆ, ಅಧ್ಯಯನ ಬಹಳ ಉಪಯುಕ್ತ. ಬ್ರಿಟಿಷ್ ಸಂಸದೀಯ ದಾಖಲೆ ಗಳಿಂದ ಮೊದಲ್ಗೊಂಡು ಪೊಲೀಸ್ (ಸಿ.ಐ.ಡಿ.) ಹಾಗೂ ಕಾಂಗ್ರೆಸ್ಸಿನ ಅಧಿಕೃತ ದಾಖಲೆಗಳನ್ನೇ ಇಲ್ಲಿ ನೋಡಬಹುದು.
ಮತದ ಆಧಾರದ ಮೇಲೆ ಪಾಕಿಸ್ತಾನದ ನಿರ್ಮಾಣ ಆಗಬೇಕೆಂದು ಹಠ ಹಿಡಿದದ್ದು ಮೊಹಮ್ಮದ್ ಅಲಿ ಜಿನ್ನಾ ಮತ್ತು ಅವರ ಮುಸ್ಲಿಂ ಲೀಗ್. ‘ದೇಶ ವಿಭಜನೆಯನ್ನು ವಿರೋಧಿಸುತ್ತೇನೆ; ಮೊದಲು ನನ್ನನ್ನು ತುಂಡರಿಸಿ ನಂತರ ದೇಶವನ್ನು ತುಂಡರಿಸಿ’ ಎಂದು ಹೇಳಿ ಜನರನ್ನು ಅಂಧಕಾರದಲ್ಲಿಟ್ಟ ಮಹಾತ್ಮ ಗಾಂಧೀಜಿ ನಂತರದ ದೇಶವಿಭಜನೆಗೆ ವಿರೋಧವನ್ನೂ ವ್ಯಕ್ತಪಡಿಸ ಲಿಲ್ಲ, ಸತ್ಯಾಗ್ರಹವನ್ನೂ ಮಾಡಲಿಲ್ಲ.
ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದ್ದು ಕೇವಲ ಮುಸ್ಲಿಮರಿಗಾಗಿ ಮತ್ತು ಪಾಕಿಸ್ತಾನಕ್ಕೆ ಹಣ ಕೊಡಲು ಮಾತ್ರವೇ! ಅವರದ್ದು ಅದೆಂಥ ಅತಿಯಾದ ಮುಸ್ಲಿಂ ಓಲೈಕೆ ಎಂದರೆ, ಪಾಕಿಸ್ತಾನದಿಂದ ನಿರ್ಗತಿಕರಾಗಿ ಬಂದು ಅನಿವಾರ್ಯ ವಾಗಿ ದೆಹಲಿಯ ಮಸೀದಿಗಳಲ್ಲಿ ವಾಸಿಸುತ್ತಿದ್ದ ಹಿಂದೂ-ಸಿಖ್ ನಿರಾಶ್ರಿತರನ್ನು ಅಲ್ಲಿಂದ ಆಚೆ ಹಾಕಿಸಿದರು. ದೆಹಲಿಯ ಭೀಕರ ಚಳಿಯಲ್ಲಿ ಬಟ್ಟೆ, ಅನ್ನ, ನೀರಿಲ್ಲದೆ ಅವರು ಕಂಗೆಟ್ಟಾಗಲೂ ಗಾಂಧೀಜಿಯವರಿಗೆ ಕರುಣೆ ಹುಟ್ಟಲಿಲ್ಲ.
1947ರ ಫೆಬ್ರವರಿಯಲ್ಲಿ ಭಾರತಕ್ಕೆ ವಕ್ಕರಿಸಿದ ಮೌಂಟ್ ಬ್ಯಾಟನ್ ಎಂಬ ಬ್ರಿಟಿಷ್ ವೈಸ್‌ರಾಯ್ ಮುಸ್ಲಿಂ ಲೀಗಿನ ಮತ್ತು ‘ಬ್ರಿಟಿಷರ ಪ್ರೀತಿಪಾತ್ರರ’ ಪ್ರಿಯವರ್ತಿಯಾಗಿಬಿಟ್ಟ. ಅಂಬೇಡ್ಕರ್‌ರಂಥ ದೂರದರ್ಶಿ ಚಿಂತಕರು ‘ಯೋಜನಾಬದ್ಧ ಮಾನವ (ಹಿಂದೂ-ಮುಸ್ಲಿಂ ಸಾಮುದಾಯಿಕ) ವಿನಿಮಯ’ಕ್ಕೆ ಬಹಳ ಹಿಂದೆಯೇ ಆಗ್ರಹಿಸಿದ್ದರೂ ದೇಶವನ್ನು ತುಂಡುಮಾಡಲು ಮೌಂಟ್ ಬ್ಯಾಟನ್ ತರಾತುರಿಯಲ್ಲಿ ಹುನ್ನಾರ ಮಾಡಿದ.
ಬ್ರಿಟಿಷ್ ಸಂಸತ್ತು 1947ರ ಜೂನ್ 3ರಂದು ಭಾರತದ ವಿಭಜನೆಗೆ ಮತ್ತು ಒಂದು ಬಗೆಯ ಸಾಮಂತ ದೇಶ ಎನ್ನಬಹುದಾದ   ನೀಡಲು ಅನುಮೋದನೆ ನೀಡಿತು. ಜಗತ್ತಿನ ಇತಿಹಾಸದಲ್ಲೇ ಭೀಕರ ಎನ್ನುವಂಥ ಹತ್ಯಾಕಾಂಡ, ಅತ್ಯಾಚಾರ, ವಲಸೆಗಳಿಗೆ ಕಾರಣವಾದ ಈ ವಿಭಜನೆಯನ್ನು ಮೆಕಾಲೆವಾದಿ ಇತಿಹಾಸಕಾರರು ನಾಚಿಕೆಯಿಲ್ಲದೆ ‘ಮೌಂಟ್ ಬ್ಯಾಟನ್ ಪ್ಲ್ಯಾನ್’ ಎಂದು ಹಿರಿಹಿರಿ ಹಿಗ್ಗುತ್ತ ಬಣ್ಣಿಸುತ್ತಾರೆ.
ಅಂದೇ ಜವಾಹರಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ವಿಭಜನೆಯನ್ನು ಸ್ವಾಗತಿಸಿ ಮೆಚ್ಚಿ ಹೇಳಿಕೆ ನೀಡಿದರು. ಈ ಸುದ್ದಿ ರೇಡಿಯೋದಲ್ಲೂ ಪ್ರಸಾರವಾಯಿತು. ಜೂನ್ 9ಕ್ಕೆ ಸಭೆ ಸೇರಿದ ಮುಸ್ಲಿಂ ಲೀಗ್, ದೇಶವಿಭಜನೆ ಮತ್ತು ಪಾಕಿಸ್ತಾನದ ನಿರ್ಮಾಣವನ್ನು ಸ್ವಾಗತಿಸಿದ್ದರ ಜತೆಗೆ, ಕೋಲ್ಕತ್ತಾ ಮತ್ತು ಅಹೋಮ್ (ಅಸ್ಸಾಂ) ಪ್ರಾಂತ್ಯಗಳು ತನ್ನ ಕೈ ತಪ್ಪಿದ್ದಕ್ಕೆ ದುಃಖವನ್ನೂ ವ್ಯಕ್ತಪಡಿಸಿತು!
ಜೂನ್ 14-15ರಂದು ಸಭೆ ಸೇರಿದ ಕಾಂಗ್ರೆಸ್ ಕೂಡ ವಿಭಜನೆಯನ್ನು ಒಪ್ಪಿ ಬಹುಮತದಿಂದ ಅಂಗೀಕರಿಸಿದ ನಿರ್ಣಯವನ್ನು ಗಾಂಧೀಜಿಯವರೂ ಅನುಮೋದಿಸಿದರೆಂಬುದನ್ನು ಗಮನಿಸಬೇಕು. ಆಗ ಕಮ್ಯುನಿಸ್ಟ್ ಸಿದ್ಧಾಂತದ ಪ್ರತಿಪಾದಕರಾಗಿದ್ದ ಜಯಪ್ರಕಾಶ ನಾರಾಯಣರು ‘ಅನ್ನ-ಬಟ್ಟೆ-ವಸತಿ ಜನರ ಮುಖ್ಯ ಆದ್ಯತೆಯಾಗಿವೆ’ ಎಂದು ಹೇಳಿ ವಿಭಜನೆಯನ್ನು ವಿರೋಧಿಸಿ ದರು. ಅಲ್ಲಿ ಸೈದ್ಧಾಂತಿಕವಾಗಿ, ನ್ಯಾಯಸಮ್ಮತವಾಗಿ ವಾದ ಮಂಡಿಸಿದವರು ಜ್ವಾಲಾಪ್ರಸಾದ್ ಸಿಂಘಲ್. ‘ ’ ಪತ್ರಿಕೆಯ ಸಂಪಾದಕರಾಗಿದ್ದ ಅವರು, ‘ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಇರುವಷ್ಟು ಅಧಿಕಾರ ಮಾತ್ರವೇ ಇಲ್ಲಿನ ಮುಸ್ಲಿಮರಿ ಗಿರಬೇಕು.
ಇಲ್ಲಿನ ಮುಸ್ಲಿಮರಿಗೆ ಅಸ್ತಿ, ವ್ಯಾಪಾರಗಳ ಹಕ್ಕು ಮಾತ್ರ ಇರಬೇಕು. ಸೇನೆ, ಪೊಲೀಸ್ ಇಲಾಖೆ, ಕಾರ್ಯನಿರ್ವಾಹಕ ಹುದ್ದೆಗಳು, ಆಡಳಿತಾತ್ಮಕ ಸ್ಥಾನಗಳಲ್ಲಿ ಅವರಿಗೆ ಅವಕಾಶವಿರಬಾರದು’ ಎಂದು ವಾದಿಸಿದರು. ಪಂಜಾಬ್-ಬಂಗಾಳಗಳ ಹಿಂದೂಗಳನ್ನು ಜಿಹಾದಿಗಳಿಂದ ರಕ್ಷಿಸಬೇಕು ಎಂಬುದೂ ಸಿಂಘಲ್‌ರ ಆಗ್ರಹವಾಗಿತ್ತು. ಮುಸ್ಲಿಮರ ಹಿತರಕ್ಷಣೆಯಷ್ಟೇ ಬೇಕಿದ್ದ ಗಾಂಧಿ-ನೆಹರುಮತ್ತಿತರರು ಇದನ್ನು ಕೇಳಿ ಪ್ರಾಯಶಃ ಒಳಗೊಳಗೇ ನಕ್ಕಿರಬೇಕು!
‘ಟುವರ್ಡ್ಸ್ ಫ್ರೀಡಂ’ ಕೃತಿ ಇನ್ನೂ ಅನೇಕ ಮಹತ್ವದ ಸಾಕ್ಷ್ಯಾಧಾರಗಳ ಮಾಹಿತಿಯನ್ನೂ, ಪೊಲೀಸ್ ವರದಿಗಳನ್ನೂ ನೀಡಿದೆ. ಆ ಕಾಲಘಟ್ಟದಲ್ಲಿ ಸಾವರ್ಕರ್ ಹಿಂದೂ ಮಹಾಸಭೆಯ ನಾಯಕರಾಗಿದ್ದು, ಹಿಂದೂಗಳ ಹಿತರಕ್ಷಣೆಗೆ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸುತ್ತಿದ್ದರು. ದೇಶವಿಭಜನೆ ಮತ್ತು ಪಾಕಿಸ್ತಾನದ ನಿರ್ಮಾಣವನ್ನು ವಿರೋಧಿಸಿದ ಹಿಂದೂ ಮಹಾಸಭೆ, ಇದು ಕಾಂಗ್ರೆಸ್ ಪಕ್ಷವು ಹಿಂದುಗಳಿಗೆ ಮಾಡುವ ದ್ರೋಹ ಎಂದೂ ಖಂಡಿಸಿತು.
‘ದೇಶವನ್ನು ಒಡೆಯುವ ಮುನ್ನ ಭಾರತದ ಹಿಂದೂಗಳನ್ನು ಕೇಳಬೇಕಾಗಿತ್ತು, ಜನಾಭಿಪ್ರಾಯ ಸಂಗ್ರಹಿಸಬೇಕಿತ್ತು’ ಎಂಬ ನಿರ್ಣಯವನ್ನೂ ಹಿಂದೂ ಮಹಾಸಭೆ ಅಂಗೀಕರಿಸಿತು ಹಾಗೂ ಬ್ರಿಟಿಷ್ ಆದೇಶದ ಒಂದು ತಿಂಗಳ ನಂತರ, ಜುಲೈ ೩ರಂದುವಿಭಜನೆಯನ್ನು ವಿರೋಧಿಸಿ ಕಪ್ಪುದಿನವನ್ನು ಆಚರಿಸಿತು. ‘ಪಾಕಿಸ್ತಾನ ಎಂದರೆ ಹಿಂದೂಗಳ ಸಾವು. ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸಬೇಕು’ ಎಂಬ ಒಕ್ಕಣೆಯ ಕರಪತ್ರಗಳನ್ನು ಹಂಚಲಾಯಿತು. ಆ ಅವಧಿಯ ಜೋಧಪುರದ ಪೊಲೀಸ್ (ಸಿ.ಐ.ಡಿ.) ವರದಿ ದಾಖಲಿಸಿರುವಂತೆ (ಗ್ರಂಥದ ಪುಟ 2456) 1947ರ ಆಗಸ್ಟ್ 1ರಂದು ಹಿಂದೂ ಮಹಾಸಭೆಯು ಕಾಂಗ್ರೆಸ್ಸಿನ ಧ್ವಜಪ್ರಸ್ತಾಪ ವನ್ನು ಕೂಡ ವಿರೋಧಿಸಿ ಪ್ರತಿಭಟನೆಯನ್ನೂ ನಡೆಸಿ, ಸಹಸ್ರಾರು ವರ್ಷಗಳಿಂದ ಇರುವ ಭಗವಾಧ್ವಜವೇ ಭಾರತದ ಧ್ವಜವಾಗ ಬೇಕೆಂದು ಆಗ್ರಹಿಸಿತು.
ದೇಶ ಒಡೆದವರನ್ನು ಮೆಚ್ಚಿಸಲು ಭಾರತದ ಧ್ವಜದಲ್ಲಿ ಹಸಿರು ಬಣ್ಣವನ್ನು ತರಬೇಕಿತ್ತೇ? ಎಂದು ಜನ ಮರುಗಿದರು. ಮರುದಿನ, ಮತ್ತೆ ಪ್ರತಿಭಟನೆ ಹಮ್ಮಿಕೊಂಡ ಹಿಂದೂ ಮಹಾಸಭೆ, ‘ಗೋ ಹಂತಕರು ನಾಶವಾಗಲಿ, ಭಾರತದ ವಿಭಜನೆಯನ್ನು ವಿರೋಧಿ ಸುತ್ತೇವೆ’ ಎಂದು ಘರ್ಜಿಸಿತು. ಆದರೆ, ಗೋಹತ್ಯೆಯನ್ನು ನಿಷೇಧಿಸಬೇಕೆಂದು ಹೇಳಿಕೆ ನೀಡುತ್ತಿದ್ದ ಗಾಂಧೀಜಿಯವರು ಗೋ ಹಂತಕರನ್ನು ಬೆಂಬಲಿಸಿ ದರೇ ಹೊರತು ಪ್ರತಿಭಟಿಸಲಿಲ್ಲ. ಅವರು ಮನಸ್ಸು ಮಾಡಿದ್ದರೆ ಸಂವಿಧಾನದಲ್ಲಿಯೇ ಗೋಹತ್ಯಾನಿಷೇಧವನ್ನು ಸೇರಿಸಬಹುದಿತ್ತು. ಅದೇಕೋ, ಅವರು ಏನನ್ನೂ ಮಾಡಲಿಲ್ಲ!
ಹಿಂದೂ ಮಹಾಸಭೆಯ ಈ ಎಲ್ಲ ಅಭಿಮತ, ನಿರ್ಣಯ, ವಿರೋಧ, ಪ್ರತಿಭಟನೆಗಳಲ್ಲಿ ಸಾವರ್ಕರ್ ಅವರ ಮಹತ್ತರ ಪಾತ್ರವಿತ್ತು. ‘ಭಾರತದ ರಾಜಕಾರಣದ ಆದರ್ಶ ಮತ್ತು ಮೌಲ್ಯಗಳು ಹಿಂದೂ ಧರ್ಮದಿಂದ ಪ್ರೇರಿತವಾಗಬೇಕು, ಭಾರತದ ಕ್ಷಾತ್ರಶಕ್ತಿಗಾಗಿ ಹಿಂದೂಗಳ ಸೈನಿಕೀಕರಣ ಆಗಬೇಕು’ ಎಂದೇ ಮೊದಲಿನಿಂದಲೂ ಒತ್ತಾಯಿಸುತ್ತಿದ್ದ ಸಾವರ್ಕರ್, ಮುಸ್ಲಿಮರು ದ್ರೋಹವೆಸಗಿ ದರೂ ಮತ್ತಷ್ಟು ಓಲೈಕೆ ಮಾಡುವ ಕಾಂಗ್ರೆಸ್ ನೀತಿಯನ್ನು ಖಂಡಿಸುತ್ತಿದ್ದರು.
1940ರ ದಶಕದಲ್ಲಿ ಬ್ರಿಟಿಷ್ ಸೇನೆಯಲ್ಲಿ ಮುಸ್ಲಿಮರ ಶೇಕಡಾವಾರು ಪ್ರಮಾಣ ಮಿತಿ ಮೀರಿ, ಮುಂಬರುವ ದಿನಗಳಲ್ಲಿ ದೇಶಕ್ಕೆ ಅಪಾಯವಿದೆಯೆಂದು ಡಾ. ಅಂಬೇಡ್ಕರ್ ಸಾಕಷ್ಟು ಹಿಂದೆಯೇ ಎಚ್ಚರಿಸಿದ್ದರು. ಅದೇ ಸಮಯದಲ್ಲಿ ಹಿಂದೂ ಯುವಕರು ಸೇನೆಗೆ ಸೇರುವಂತಾಗಲು ಸಾವರ್ಕರ್ ಇಡೀ ದೇಶದಲ್ಲಿ ಜಾಗೃತಿ ಮೂಡಿಸಿದರು. ಭಾರತವು ಭಾರತವಾಗಿ ಉಳಿಯಲು, ಸೇನೆ ಯಲ್ಲಿ ಹಿಂದೂಗಳ ಶೇಕಡಾವಾರು ಪ್ರಮಾಣವು ಮಹತ್ವದ ಮತ್ತು ನಿರ್ಣಾಯಕವಾದ ಪಾತ್ರವನ್ನು ವಹಿಸಿತು. ಆದರೆ, ಕೆಲವೊಂದು ದಲಾಲರು ಸಾವರ್ಕರ್ ಅವರನ್ನು ಗೌರವಿಸುವುದಿರಲಿ ಸ್ಮರಿಸುವುದಿರಲಿ, ಕಿರುಕುಳವನ್ನು ಮುಂದುವರಿಸಿದರು.
ಬ್ರಿಟಿಷ್ ಆಡಳಿತದಲ್ಲಿ ಇದ್ದಂತೆಯೇ ಸ್ವತಂತ್ರ ಭಾರತದಲ್ಲೂ ಅವರು ಹಿಂಸೆ-ಅವಮಾನಗಳನ್ನು ಅನುಭವಿಸಬೇಕಾಯಿತು. ಸ್ವಾತಂತ್ರ್ಯಪ್ರಾಪ್ತಿಗೆ ಸುಭಾಷರು ಮತ್ತು ಸಾವರ್ಕರ್ ಅವರೇ ಕಾರಣ, ಖಂಡಿತವಾಗಿಯೂ ತಾವಲ್ಲ ಎಂಬುದು ‘ಬ್ರಿಟಿಷರ ಪ್ರೀತಿಪಾತ್ರರ’ ಪರಂಪರೆಯವರಿಗೆ ಪ್ರಾಯಶಃ ಬೇರೆಯವರಿಗಿಂತ ಚೆನ್ನಾಗಿಯೇ ಗೊತ್ತು ಎನಿಸುತ್ತದೆ. ಹಾಗೆಂದೇ, ಸಾವರ್ಕರ್ ನಿಧನರಾಗಿ 56ವರ್ಷಗಳಾದರೂ ಅವರ ಮೇಲಿನ ದಾಳಿಯನ್ನು ಈಗಲೂ ಅವರು ನಿಲ್ಲಿಸಿಲ್ಲ.
ಕೆಲವರು ಸಾವರ್ಕರ್ ಬರೆದ ‘ಕ್ಷಮಾಯಾಚನೆ ಪತ್ರ’ವನ್ನೇ ನೆಪವಾಗಿಟ್ಟುಕೊಂಡು ‘ಸಾವರ್ಕರ್ ಅವರು ಬ್ರಿಟಿಷರ ಬೂಟು ನೆಕ್ಕುತ್ತಿದ್ದರು’ ಎಂದೆಲ್ಲ ನಾಲಿಗೆ ಹರಿಬಿಡುವುದುಂಟು. ಜೈಲಿನಲ್ಲಿ ವೃಥಾ ಕೊಳೆಯುವ ಬದಲು ಸ್ವಾತಂತ್ರ್ಯ ಹೋರಾಟಮುಂದುವರಿಸಲು ಅವರು ಹಾಗೆ ಪತ್ರ ಬರೆದರೇ ಹೊರತು, ಬೇರೆ ಕಾರಣದಿಂದಲ್ಲ. ಅವೆಲ್ಲವೂ ಸಮರತಂತ್ರಗಳು. ಔರಂಗ ಜೇಬನನ್ನು ಹಣಿಯಲು ಶಿವಾಜಿ ಮಹಾರಾಜರೇ ದೈನ್ಯದ ಶರಣಾಗತಿಯ ನಾಟಕ ಆಡಿದರು.
ಸಾವರ್ಕರ್ ನಿಜಕ್ಕೂ ಬ್ರಿಟಿಷರ ಪರವಾಗಿದ್ದಿದ್ದರೆ, ಸ್ವತಂತ್ರ ಭಾರತದ ನಾಯಕತ್ವ ಅವರದ್ದೇ ಆಗುತ್ತಿತ್ತು. ಸಾವರ್ಕರ್ ಮೊದಲ್ಗೊಂಡು ಹಿಂದೂಗಳ ನಿಜವಾದ ನಾಯಕರು ಯಾರೂ ಮುಸ್ಲಿಮರ ಮೇಲೆ ದ್ವೇಷ ಕಾರಲಿಲ್ಲ. ಎಲ್ಲ ಹಿಂದೂ ರಾಜರು,ನಾಯಕರು ಪರಮತಸಹಿಷ್ಣುಗಳಾಗಿದ್ದುದರಿಂದಲೇ, ಸಹಸ್ರಾರು ವರ್ಷಗಳಿಂದ ಮುಸ್ಲಿಮರು ಭಾರತದಲ್ಲಿ ನೆಮ್ಮದಿಯಿಂದ ಇzರೆ, ಅವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಕೋಟಿ ಕೋಟಿ ಸಂಖ್ಯೆಯಲ್ಲಿರುವ ಅವರ ಅಸ್ತಿತ್ವಕ್ಕಿಂತಲೂ ಹೆಚ್ಚಿನ ಪುರಾವೆ ಬೇಕೆ? ಬಹುತೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಅನ್ಯ ಮತಧರ್ಮಗಳವರು ನಿರ್ನಾಮವಾಗಿದ್ದಾರೆ ಇಲ್ಲವೇ ಯಾವುದೇ ಹಕ್ಕುಗಳಿಲ್ಲದೆ ಭಯ- ಅವಮಾನದಲ್ಲಿ ಬದುಕುತ್ತಿದ್ದಾರೆ.ಸಾವರ್ಕರ್ ಅವರನ್ನು ವೃಥಾ ಟೀಕಿಸುವವರು ಈ ಅಂಶಗಳ ಬಗೆಗೆ ಮಾತೇ ಆಡುವುದಿಲ್ಲ!