ದುಡಿಮೆಯ ಮಂತ್ರ ಜಪಿಸಿದ ಕಾಯಕಯೋಗಿ
ಸಂಸ್ಮರಣೆ
ಗಿರೀಶ ವಿಠ್ಠಲ ಬಡಿಗೇರ
ಗೌರವ-ಪ್ರಶಂಸೆಗಳ ಮಹಾಪೂರವೇ ಬಂದರೂ ವಿನಮ್ರತೆಯನ್ನು ಬಿಟ್ಟುಕೊಡದ ಮೇರುವ್ಯಕ್ತಿತ್ವ ಅವರದ್ದು. ತಮ್ಮ ನಿವೃತ್ತಿಯ ದಿನದಂದು ಸರಕಾರಿ ಕಾರಿನಲ್ಲಿ ಕಚೇರಿಗೆ ಬಂದು ಅಧಿಕಾರ ಹಸ್ತಾಂತರಿಸಿ, ಕಚೇರಿ ಸಿಬ್ಬಂದಿ ನೀಡಿದ ಮನಃಪೂರ್ವಕ ಬೀಳ್ಕೊಡುಗೆಯನ್ನು ಸ್ವೀಕರಿಸಿ, ತರುವಾಯದಲ್ಲಿ ಸ್ವಂತ ಕಾರನ್ನು ತಾವೇ ಚಲಾಯಿಸಿಕೊಂಡುಮನೆಗೆ ಮರಳಿದವರು ಸರ್‌ಎಂವಿ.
‘ನೀನು ಯಾವುದೇ ಕೆಲಸ ಮಾಡು, ಅದನ್ನು ಪ್ರೀತಿಯಿಂದ ಮಾಡು. ನೀನೊಬ್ಬ ರಸ್ತೆಯ ಕಸ ಗುಡಿಸುವವನೇ ಆಗಿರಬಹುದು, ಆದರೆ ನೀನು ಮಾಡಿದ ಕೆಲಸ ಹೇಗಿರಬೇಕೆಂದರೆ, ಬೇರೆ ಯಾವ ರಸ್ತೆಯೂ ನೀನು ಕಸಗುಡಿಸಿದ ರಸ್ತೆಯಷ್ಟು ಸ್ವಚ್ಛವಾಗಿರ ಬಾರದು’- ಹೀಗೆ ಹೇಳಿದ್ದು ಓರ್ವ ಎಂಜಿನಿಯರಿಂಗ್ ವೃತ್ತಿಪ್ರವೀಣನ ಮಹತ್ವವನ್ನು ಜಗತ್ತಿಗೇ ಸಾರಿಹೇಳಿದ ‘ಭಾರತ ರತ್ನ’ ಸರ್ ಎಂ. ವಿಶ್ವೇಶ್ವರಯ್ಯನವರು.
ಕರ್ನಾಟಕ ರಾಜ್ಯವು ಅಭಿವೃದ್ಧಿಯ ವಿಷಯದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಯೋಜಿತ ರೂಪರೇಷೆಗಳನ್ನು ನೀಡಿ ರಾಜ್ಯ ವನ್ನು ಗಮನಾರ್ಹ ಸಾಧನೆಯ ಪಥದಲ್ಲಿ ಕೊಂಡೊಯ್ದಿದ್ದು ಸರ್‌ಎಂವಿ. ಹತ್ತು ಹಲವು ವಿಶಿಷ್ಟ ಯೋಜನೆಗಳ ರೂವಾರಿ ಎನಿಸಿ ಕೊಂಡ ಈ ಪ್ರಾಮಾಣಿಕ ಮತ್ತು ದಕ್ಷ ಆಡಳಿತಗಾರ ಓರ್ವ ಹೆಸರಾಂತ ಎಂಜಿನಿಯರ್ ಹಾಗೂ ಧೀಮಂತ ಕನ್ನಡಿಗ. ಇವರ ಜನ್ಮದಿನವನ್ನು (ಸೆ.15) ದೇಶಾದ್ಯಂತ ‘ಅಭಿಯಂತರ ದಿನ’ ( )ವಾಗಿ ಆಚರಿಸುವುದು ಅತ್ಯಂತ ಖುಷಿಯ ಮತ್ತು ಹೆಮ್ಮೆಯ ಸಂಗತಿ.
ಸರ್‌ಎಂವಿ ವಂಶಜರು ಮೂಲತಃ ಆಂಧ್ರ ಪ್ರದೇಶದವರು. ಆದರೆ ಇವರ ಕುಟುಂಬ ಕರ್ನಾಟಕಕ್ಕೆ ಬಂದು ನೆಲೆಸಿ ಸುಮಾರು ವರ್ಷಗಳಾಗಿದ್ದವು. ಈ ಪುಣ್ಯಭೂಮಿಯಲ್ಲಿ ಜನಿಸಿ ಕನ್ನಡದ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಮತ್ತು 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕುವ ಮೂಲಕ ಕನ್ನಡನಾಡು-ನುಡಿಗಾಗಿ ಅನುಪಮ ಕೊಡುಗೆ ಕೊಟ್ಟ ಈ ಅನರ್ಘ್ಯ ರತ್ನಕ್ಕೆ ಇಂದು 158ನೇ ಜನ್ಮದಿನ.
ಇಂದು ಅವರನ್ನು ನೆನೆಯಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಇವರ ಪೂರ್ಣ ಹೆಸರು. ‘ಮೋಕ್ಷ ಗುಂಡಂ’ ಎಂಬುದು ಇವರ ಮನೆತನದ ಹೆಸರು. 1860ರ ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಸಮೀಪದ ಮುದ್ದೇನಹಳ್ಳಿ ಯಲ್ಲಿ ಶ್ರೀನಿವಾಸ ಶಾಸ್ತ್ರಿ- ವೆಂಕಟಲಕ್ಷ್ಮಮ್ಮರ ಮಗನಾಗಿ ಜನಿಸಿದ ವಿಶ್ವೇಶ್ವರಯ್ಯ ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದರು. ‘ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಕಾಣು’ ಎಂಬಂತೆ ಬಾಲ್ಯದಲ್ಲೇ ಚಾಣಾಕ್ಷರಾಗಿದ್ದ ವಿಶ್ವೇಶ್ವರಯ್ಯ ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದು ಶಿಕ್ಷಕರಿಗೆ ಪ್ರೀತಿಪಾತ್ರರಾಗಿದ್ದರು.
ಸೋದರಮಾವ ಎಚ್. ರಾಮಯ್ಯನವರು ಈ ಬಾಲಕನ ಪ್ರತಿಭೆ ಗುರುತಿಸಿ ಬೆಂಗಳೂರಿಗೆ ಕರೆತಂದು ಶಿಕ್ಷಣದ ಮುಂದುವರಿಕೆಗೆ ಅನುವುಮಾಡಿಕೊಟ್ಟರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಸರಕಾರದಿಂದ ವಿದ್ಯಾರ್ಥಿ ವೇತನಸಿಗುತ್ತಿತ್ತಾದರೂ, ಬದುಕಿನ ಬಂಡಿ ದೂಡುವುದಕ್ಕೆ ಅದು ಸಾಕಾಗುತ್ತಿರಲಿಲ್ಲ. ಆಗ ಮಕ್ಕಳಿಗೆ ಮನೆಪಾಠ ಮಾಡಿ, ಜತೆಗೆ ಮತ್ತೇ ನಾದರೂ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದರು. ಕೆಲವೊಮ್ಮೆಯಂತೂ ಊರಿಗೆ ಬರಲೂ ಹಣವಿಲ್ಲದೆ ಅವರು ಮುದ್ದೇನಹಳ್ಳಿ ಯವರೆಗೂ (ಸುಮಾರು 60 ಕಿ.ಮೀ.) ನಡೆದುಕೊಂಡೇ ಬಂದ ನಿದರ್ಶನಗಳಿವೆ. ಇಂಥ ಕಡುಕಷ್ಟದಲ್ಲೂ 1881ರಲ್ಲಿ ಮದರಾಸು ಕಾಲೇಜಿನಿಂದ ಬಿ.ಎ. ಪದವಿ ಪಡೆದ ವಿಶ್ವೇಶ್ವರಯ್ಯ, ತದನಂತರ ಅಂದಿನ ಮೈಸೂರು ದಿವಾನರಾಗಿದ್ದ ರಂಗಾಚಾರ್ಲು ಅವರನ್ನು ಭೇಟಿಮಾಡಿ ಸರಕಾರದ ನೆರವಿನಿಂದ ಪುಣೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು.
ತರುವಾಯ 1884ರಲ್ಲಿ ಮುಂಬಯಿ ಸಂಸ್ಥಾನದ ನಾಸಿಕ್ ಜಿಲ್ಲೆಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿ ಯರ್ ಆಗಿ ವೃತ್ತಿಜೀವನ ಆರಂಭಿಸಿದ ವಿಶ್ವೇಶ್ವರಯ್ಯ, ಕೆಲಸದ ವಿಷಯದಲ್ಲಿ ಯಾರೊಂದಿಗೆ ರಾಜಿಮಾಡಿಕೊಳ್ಳದ ಬದ್ಧತೆ ರೂಢಿಸಿಕೊಂಡರು ಎಂಬುದು ಗಮನಾರ್ಹ. ಅಂದಿನ ಕೆಲಸ ಅಂದೇ ಮಾಡಿ ಮುಗಿಸುವ, ಅದಕ್ಕೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸುವ ಪ್ರಾಮಾಣಿಕ ಕೆಲಸಗಾರ ಎಂದು ಹೆಸರಾದ ವಿಶ್ವೇಶ್ವರಯ್ಯ, 1884ರಲ್ಲಿ ನಗರವೊಂದಕ್ಕೆಸಂಬಂಧಿಸಿತಮಗೆ ನಿಯೋ ಜಿಸಿದ ಕಾಮಗಾರಿಯನ್ನು ಅತಿ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಮುಗಿಸಿಕೊಟ್ಟು ಗವರ್ನರ್ ಅವರಿಂದ ಬೆನ್ನುತಟ್ಟಿಸಿಕೊಂಡಿದ್ದು ಉಲ್ಲೇಖನೀಯ.
1897ರಲ್ಲಿ ಸ್ವಂತ ಖರ್ಚಿನಲ್ಲಿ ಜಪಾನ್ ಪ್ರವಾಸಕ್ಕೆ ತೆರಳಿದ ವಿಶ್ವೇಶ್ವರಯ್ಯ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಲ್ಲಿನ ಕಾರ್ಯಶೈಲಿಯನ್ನು ಮನಗಂಡು, ನಮ್ಮ ದೇಶದಲ್ಲೂ ಇಂಥ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಂಕಲ್ಪಿಸಿದರು. ತರುವಾಯದಲ್ಲೊಮ್ಮೆ ಅವರು ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ, ಅಲ್ಲಿನ ಕಂಪನಿಯೊಂದಕ್ಕೆ ಭೇಟಿನೀಡುವ ಅವಕಾಶ ಒದಗಿತು. ಅಲ್ಲಿನ ಯಂತ್ರವೊಂದು ಕೆಟ್ಟು ಕರ್ಕಶಸದ್ದು ಮಾಡುತ್ತಿದ್ದುದು ಅರಿವಾದಾಗ, ಸ್ವತಃ 100 ಮೆಟ್ಟಿಲುಗಳನ್ನು ಹತ್ತಿ, ಯಂತ್ರವನ್ನು ಕೂಲಂಕಷ ಅವಲೋಕಿಸಿ ಪರಿಹಾರೋಪಾಯ ಸೂಚಿಸಿದ್ದು ವಿಶ್ವೇಶ್ವರಯ್ಯ ಅವರ ಹೆಗ್ಗಳಿಕೆ. ಇದು ಕೆಲಸದ ಮೇಲೆ ಅವರಿಗಿದ್ದ ನಿಷ್ಠೆ ಮತ್ತು ಆಸಕ್ತಿಗೆ ಹಿಡಿದ ಕೈಗನ್ನಡಿ.
ಮೈಸೂರಿನ ದಿವಾನರಾಗಿ ಆಯ್ಕೆಯಾದ ನಂತರ ಇವರ ಸೇವೆಗೆ ಮತ್ತಷ್ಟು ವೇಗ ಸಿಕ್ಕಿತು. ದಕ್ಷಿಣ ಭಾರತದ ಮೂರು ರಾಜ್ಯಗಳ ಜಲಜೀವನಾಡಿ ಎನಿಸಿರುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೃಷ್ಣರಾಜಸಾಗರ ಅಣೆಕಟ್ಟು (ಕನ್ನಂಬಾಡಿ) ಈ ನಿಟ್ಟಿನಲ್ಲಿ ಗಮನಾರ್ಹವಾದುದು. 1911ರಲ್ಲಿ ಶುರುವಾದ ಇದರ ನಿರ್ಮಾಣಕಾರ್ಯ 1931ರಲ್ಲಿ ಸಂಪನ್ನಗೊಂಡಿತು. ಮಿಕ್ಕಂತೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯಪರಿಷತ್ತು, ಬೆಂಗಳೂರಿನ ಸರಕಾರಿ ಎಂಜಿನಿಯರಿಂಗ್ ಕಾಲೇಜು, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹೀಗೆ ವಿಶ್ವೇಶ್ವರಯ್ಯನವರು ಕರ್ನಾಟಕಕ್ಕೆ ನೀಡಿದ ಅನನ್ಯ ಕೊಡುಗೆಗಳು ಒಂದೆರಡಲ್ಲ.
ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗಿನ ಕಾಲಘಟ್ಟದ ಅಪಾರ ಸೇವೆ ಮತ್ತು ಕೊಡುಗೆಗಳನ್ನು ಪರಿಗಣಿಸಿ ಬ್ರಿಟಿಷ್ ಸರಕಾರ ‘ಸರ್’ ಎಂಬ ಪದವಿಯನ್ನು ನೀಡಿ ಗೌರವಿಸಿತು. ಇಷ್ಟು ಮಾತ್ರವಲ್ಲದೆ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಮತ್ತು ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’ ಹೀಗೆ ಅನೇಕ ಪ್ರಶಸ್ತಿ ಮತ್ತು ಗೌರವಗಳು ಸರ್‌ಎಂವಿ ಮುಡಿಯನ್ನು ಅಲಂಕರಿಸಿವೆ.
ದೇಶದ ಹಲವಾರು ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ ಇವರ ಹೆಸರಿಡಲಾಗಿದೆ. ಅದರಲ್ಲೂ ವಿಶೇಷವಾಗಿ, ಬೆಳಗಾವಿಯಲ್ಲಿನ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಮತ್ತು ದೆಹಲಿಯ ಮೋತಿಬಾಗ್ ಮೆಟ್ರೋ ನಿಲ್ದಾಣಕ್ಕೆ ವಿಶ್ವೇಶ್ವರಯ್ಯನವರಹೆಸರಿಟ್ಟು ಗೌರವ ನೀಡಿರುವುದು ಇಲ್ಲಿ ಉಲ್ಲೇಖನೀಯ.
ಇವರ ಹೆಸರಿನಲ್ಲಿ ಪ್ರತಿವರ್ಷ ಹಲವಾರು ಸಂಘ- ಸಂಸ್ಥೆಗಳು, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ವಿಶೇಷ ಪ್ರಶಸ್ತಿ, ಬಹುಮಾನ ನೀಡಿ ಸತ್ಕರಿಸುತ್ತವೆ. ಗಮನಾರ್ಹ ಸಾಧನೆಗಳನ್ನು ಮೆರೆದು ಸಮಾಜಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿದ ಸರ್‌ಎಂವಿ, ‘ಸರಳತೆ’ ಎಂಬ ಪರಿಕಲ್ಪನೆಗೆ ಪರ್ಯಾಯಪದವೇ ಆಗಿದ್ದರು. ಗೌರವ-ಪ್ರಶಂಸೆಗಳ ಮಹಾಪೂರವೇ ಬಂದರೂ ವಿನಮ್ರತೆಯನ್ನು ಬಿಟ್ಟುಕೊಡದ ಮೇರುವ್ಯಕ್ತಿತ್ವ ಅವರದ್ದು. ತಮ್ಮ ನಿವೃತ್ತಿಯ ದಿನದಂದು ಸರಕಾರಿ ಕಾರಿನಲ್ಲಿ ಕಚೇರಿಗೆ ಬಂದು ಅಧಿಕಾರ ಹಸ್ತಾಂತರಿಸಿ, ಕಚೇರಿ ಸಿಬ್ಬಂದಿ ನೀಡಿದ ಮನಃಪೂರ್ವಕ ಬೀಳ್ಕೊಡುಗೆಯನ್ನು ಸ್ವೀಕರಿಸಿ, ತರುವಾಯ ದಲ್ಲಿ ಸ್ವಂತ ಕಾರನ್ನು ತಾವೇ ಚಲಾಯಿಸಿಕೊಂಡು ಮನೆಗೆ ಮರಳಿದವರು ಸರ್‌ಎಂವಿ. ಸದಾ ತಮ್ಮ ಬಳಿ ಎರಡು ಲೆಕ್ಕಣಿಕೆ ಗಳನ್ನು ಇಟ್ಟುಕೊಂಡಿರುತ್ತಿದ್ದ ಇವರು ಒಂದನ್ನು ಸರಕಾರಿ ಕೆಲಸಕ್ಕೂ ಮತ್ತೊಂದನ್ನು ವೈಯಕ್ತಿಕ ಕಾರ್ಯಕ್ಕೂ ಬಳಸುತ್ತಿದ್ದ ರಂತೆ.
ವಿಶ್ವೇಶ್ವರಯ್ಯನವರು ಸರಳತೆ ಮತ್ತು ಪ್ರಾಮಾಣಿಕತೆಯ ಸಾಕಾರಮೂರ್ತಿಯೇ ಆಗಿದ್ದರು ಎಂಬುದನ್ನು ಪುಷ್ಟೀಕರಿಸುವುದಕ್ಕೆ ಇಂಥ ನಿದರ್ಶನಗಳು ಸಾಕು. ಅಚ್ಚುಕಟ್ಟಾದ ವೇಷಭೂಷಣ, ಮುಖದಲ್ಲಿ ರಾರಾಜಿಸುವ ಗಾಂಭೀರ್ಯ, ಮಾತಿನಲ್ಲಿ ಸ್ಪಷ್ಟತೆ, ಶಿಸ್ತುಬದ್ಧ ಜೀವನಶೈಲಿ- ಹೀಗೆ ವಿವಿಧ ಆಯಾಮಗಳಲ್ಲಿ ಮಾದರಿಯಾಗಿದ್ದ ‘ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ’, 1962ರ ಏಪ್ರಿಲ್ 14ರಂದು ನಮ್ಮನ್ನಗಲಿದರು. ಅಂದು ದೇಶಕ್ಕೆ ನಿಜವಾಗಲೂ ತುಂಬಲಾರದ ನಷ್ಟವಾಗಿದ್ದು ದಿಟ.