ಗಾಂಧಿತಾತನ ಕನವರಿಕೆಗೆ ಒಂದೇ ದಿನವೇ ?!
ನಿಲುವುಗನ್ನಡಿ
ಯಗಟಿ ರಘು ನಾಡಿಗ್‌
“ಗ್ರೀಕ್ ಚಕ್ರವರ್ತಿ ಅಲೆಕ್ಸಾಂಡರ್ ಭಾರತದ ಮೇಲೆ ದಂಡಯಾತ್ರೆಗೆ ತೆರಳಲು ನಿರ್ಧರಿಸ್ತಾನೆ. ಹೀಗೆ ಹೊರಡೋಕೂ ಮುನ್ನ ಆಶೀರ್ವಾದ ಪಡೆಯಲು ತನ್ನ ಗುರು ಸಾಕ್ರೆಟಿಸ್‌ರಲ್ಲಿಗೆ ತೆರಳಿ, ‘ಭಾರತದಿಂದ ಮರಳುವಾಗ ನಿಮಗೇನು ಕಾಣಿಕೆ ತರಲಿ?’ಎಂತ ಕೇಳ್ತಾನೆ. ಧನ-ಕನಕ, ವಜ್ರ-ವೈಡೂರ್ಯವೆಂದು ಗುರುಗಳು ಬೇಡಿಕೆಯ ಪಟ್ಟಿ ಇಡಬಹುದು ಅಂದ್ಕೊಂಡಿರ‍್ತಾನೆ ಅಲೆಕ್ಸಾಂಡರ್. ಆದರೆ ‘ಭಾರತ’ ಎಂಬ ಮೂರಕ್ಷರ ಕೇಳುತ್ತಿದ್ದಂತೆ ಸಾಕ್ರೆಟಿಸ್ ಆನಂದಾತಿರೇಕ ದಿಂದ ಕಂಪಿಸುತ್ತ ಶಿಷ್ಯನ ಭುಜ ಹಿಡಿದು, ‘ಕೇಳಿದ್ದನ್ನ ಖಂಡಿತ ತಂದುಕೊಡ್ತೀಯಾ?’ ಅಂತಾನೆ.
‘ಇದೇನು, ಶಿಷ್ಯನ ಮೇಲೇ ಅನುಮಾನವೇ? ನೀವು ಬೇಕೆಂದಿದ್ದನ್ನ ನಿಮ್ಮ ಕಾಲ ಬಳಿಗೇ ತಂದು ಸುರಿಯುವೆ’ ಅಂತಾನೆ ಅಲೆಕ್ಸಾಂಡರ್. ಆಗ ಸಾಕ್ರೆಟಿಸ್ ಗಹಗಹಿಸಿ ನಗುತ್ತ, ‘ಹುಚ್ಚಪ್ಪಾ, ನನಗೆ ಬೇಕಿರುವಂಥವು ಕಾಲಬಳಿ ಇರಬೇಕಾದವು ಅಲ್ಲಪ್ಪಾ; ತಲೆಮೇಲೆ ಹೊರಬೇಕಾದಂಥವು. ನನಗಾಗಿ ಭಾರತದಿಂದ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಈ ಮೂರು ಪವಿತ್ರ ಗ್ರಂಥಗಳು; ಕೊಳಲು ಮತ್ತು ಗಂಗಾಜಲ ಈ ಎರಡು ಪವಿತ್ರ ವಸ್ತುಗಳು; ಒಬ್ಬ ಬ್ರಹ್ಮಜ್ಞಾನಿ ಇಷ್ಟನ್ನ ನಿನ್ನ ಜತೇಲಿ ತರೋಕೆ ಸಾಧ್ಯವಾ?’ ಅಂತಾನೆ.
ಅಲೆಕ್ಸಾಂಡರ್ ಕಣ್ಣುಗಳು ಅಷ್ಟುಹೊತ್ತಿಗಾಗಲೇ ನೀರಿನ ಕೊಳಗಳಾಗಿರ‍್ತವೆ, ಆತ ಬೆರಗಾಗಿರ‍್ತಾನೆ…!” ಇದು ‘ಅಲೆಗ್ಸಾಂಡರ್ ದಂಡಯಾತ್ರೆ’ ಪಾಠ ಮಾಡುವಾಗ ನಮ್ಮ ಶಾಲೆಯ ಚರಿತ್ರೆಯ ಮೇಷ್ಟ್ರು ಹೇಳಿದ ಒಂದು ಉಪಕಥೆ. ಇಡೀ ವಿಶ್ವವೇ ಒಂದು ಕಾಲಕ್ಕೆ ಭಾರತೀಯರಿಂದ, ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತಗೊಂಡಿತ್ತು ಎಂಬುದಕ್ಕೆ ಈ ಪುಟ್ಟ ನಿದರ್ಶನವೇ ಸಾಕು. ಈಗಲೂ ಯಾರಾದರೂ ಪರದೇಶಿಗರು ಕೇಳಿದರೆ ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ನಮ್ಮ ನೆಲದ ಒಂದು ಅನರ್ಘ್ಯ ರತ್ನವಿದೆ. ಅದೇ ಮಹಾತ್ಮ ಗಾಂಧೀಜಿ. ಈ ಮಹಾನ್ ಚೇತನ ಚಿಮ್ಮಿಸಿದ ಮಾನವೀಯತೆಯ ಚಿಲುಮೆಗಳು, ಹೊಮ್ಮಿಸಿದ ವಿಚಾರಧಾರೆಗಳಿಂದಾಗಿ ವಿಶ್ವ ಸಮುದಾಯವೇ ಭಾರತದೆಡೆಗೆ ತಿರುಗಿನೋಡುವಂತಾಗಿತ್ತು.
ಅವುಗಳ ಪ್ರಭಾವ ಈಗಲೂ ಇದೆ, ಮುಂದೆಯೂ ಇರುತ್ತದೆ. ಏಕೆಂದರೆ ಗಾಂಽ ವಿಚಾರಧಾರೆಗೆ ಸಾವಿಲ್ಲ. ಸರಳತೆಯೇ ಮೂರ್ತಿವೆತ್ತಂತಿದ್ದ ಗಾಂಧೀಜಿ ಬದುಕಿದ್ದಾದರೂ ಹೇಗೆ? ಭಾರತ ಕೃಷಿಪ್ರಧಾನ ದೇಶ ಎಂಬುದರ ಮತ್ತು ದೇಶದ ಆರ್ಥಿಕ ಸ್ಥಿತಿಗತಿಗಳ ಅರಿವಿದ್ದ ಗಾಂಧೀಜಿ ಸರಳತೆಯನ್ನೇ ಬೋಧಿಸಿದರು, ಸರಳತೆಯೇ ತಾವಾದರು. ಆಡಿದ್ದನ್ನು ಮಾಡಿ ತೋರಿಸಿ ದರು.
ಅವರ ಆಹಾರವೋ, ಯಾವುದೇ ಜನಸಾಮಾನ್ಯರು ಬಳಸಬಹುದಾದ ಆಡಿನಹಾಲು, ಕಡಲೇಕಾಯಿ,ಗೋಧಿರೊಟ್ಟಿ, ಬೇವಿನಚಟ್ನಿ. ತೊಡುತ್ತಿದ್ದ ಉಡುಗೆಯೋ, ಒಂದು ಮುಂಡುಪಂಚೆ. ಜತೆಗೆ ಅವರ ಗುರುತಿನ ಪ್ರತೀಕವಾಗಿದ್ದ ಊರುಗೋಲು. ಅವರ ರೂಪವೂ ಸಾಧಾರಣವೇ ಅನ್ನಿಸುವಂಥದ್ದು. ರೂಪ- ಲಾವಣ್ಯವೇ ಜಗತ್ತನ್ನು ಗೆಲ್ಲುವ ಸಾಧನ ಎಂಬ ಭ್ರಮೆಯಮತಿಗೇಡಿಗಳ ನಡುವೆ ಸರಳ ಜೀವನ, ಸರಳ ಉಡುಪು, ಸರಳ ಆಹಾರ ಮತ್ತು ಸಾಧಾರಣ ರೂಪದ ವ್ಯಕ್ತಿಯೊಬ್ಬರುಜಗತ್ತಿಗೇ ಮೋಡಿ ಮಾಡಿದ್ದರೆಂದರೆ ಅದು ಸಾಮಾನ್ಯ ವಿಷಯವೇ? ಭಾರತದಂಥ ಬಡರಾಷ್ಟ್ರದ ಜನ ಸರಳವಾಗಿ ಹೇಗಿರ ಬೇಕೆಂಬುದನ್ನು ಕೇವಲ ನುಡಿಯದೆ ನಡೆದೂ ತೋರಿಸಿದಾತ ಈ ಮೋಹನ್‌ದಾಸ್ ಕರಮಚಂದ ಗಾಂಧಿ.
ಹೀಗಾಗಿ, ಈ ಸರಳನ ಹೆಸರಿನ ಹಿಂದೆ ‘ಮಹಾತ್ಮ’ ಎಂಬ ವಿಶೇಷಣವನ್ನು ಜನರು ಸೇರಿಸಿದ್ದೇ ಅಲ್ಲದೆ, ‘ಬಾಪೂಜಿ’ ಎಂದೂ ಕರೆದರು. ಗಾಂಧಿ ವಿಚಾರಧಾರೆಯ ಆಳ-ಅಗಲಗಳು ಒಂದು ಗುಕ್ಕಿಗೆ ಸಿಗುವಂಥವಲ್ಲ; ಅವರ ಒಂದಷ್ಟು ನುಡಿಮುತ್ತುಗಳನ್ನು ಅವಲೋಕಿಸಿದರೆ ಸಾಕು, ಸಾರ್ವಕಾಲಿಕ ಸತ್ಯ ಅದರಲ್ಲಿ ಕೆನೆಗಟ್ಟಿರುವುದು ಗೊತ್ತಾಗುತ್ತದೆ. ‘ಸರಳ ಜೀವನ ಮತ್ತು ಉನ್ನತ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡುತ್ತದೆ’, ‘ಗಟ್ಟಿತನವೆಂಬುದು ದೈಹಿಕಬಲದಿಂದ ಬರುವಂಥದ್ದಲ್ಲ, ಅದಮ್ಯ ಅಂತಃಶಕ್ತಿಯಿಂದ ಬರುವಂಥದ್ದು’, ‘ಅಹಿಂಸೆಯಿಲ್ಲದೆ ಸತ್ಯದ ಸಾಕ್ಷಾತ್ಕಾರವಾಗದು; ಹಿಂಸೆಯ ಒಂದು ರೂಪವೇ ಆಗಿರುವ ಅಸಹಿಷ್ಣುತೆಯು ಪ್ರಜಾಪ್ರಭುತ್ವದ ಬೆಳವಣಿಗೆಗೆ ಮಾರಕ’, ‘ಸಂಪ್ರದಾಯದ ಬಾವಿಯಲ್ಲಿ ತೇಲಿದರೆ ಪರವಾಗಿಲ್ಲ, ಆದರೆ ಅದರಲ್ಲೇ ಮುಳುಗಿದರೆ ಅದು ಆತ್ಮಹತ್ಯೆ’- ಹೀಗೆ ಅನುಪಮ ಚಿಂತನೆಗಳ ಮತ್ತು ಸಾರ್ವಕಾಲಿಕ ಚಿರಂಜೀವ ಸತ್ಯಗಳ ಗಣಿಯೇ ಆಗಿದ್ದರು ಮಹಾತ್ಮ ಗಾಂಧೀಜಿ.
ಆದರೆ ಇಲ್ಲೊಂದು ನೋವಿದೆ. ಅಹಿಂಸೆ, ಸತ್ಯ, ಬ್ರಹ್ಮಚರ್ಯ ಪಾಲನೆ, ಸತ್ಯಾಗ್ರಹಗಳಂಥ ‘ ’ ಮತ್ತು ‘ ’ ವಿಚಾರಧಾರೆಗಳನ್ನು ಜಗತ್ತಿಗೇ ಪ್ರಚುರಪಡಿಸಿದ ಗಾಂಧೀ  ಹುಟ್ಟಿದ ನಾಡಲ್ಲಿಯೇ ಪ್ರಸ್ತುತ ಅವಕ್ಕೆ ಒದಗಿರುವ ಸ್ಥಿತಿ ಮತ್ತು ಅವರ ಕುರಿತು ಜನರಿಗಿರುವ ಅನಾದರವನ್ನು ನೋಡಿದರೆ ಸ್ವಲ್ಪ ಆತಂಕವಾಗುತ್ತದೆ. ಅವರು ‘ಅಹಿಂಸೆ-ಸತ್ಯಾಗ್ರಹ’ ಎಂಬ ಮಂತ್ರದ ಮೂಲಕವೇ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರು ಎಂದು ಪಾಠಗಳಲ್ಲಿ ಓದಿರುವ ನಾವು, ಈ ಮಂತ್ರದಿಂದಲೇ ಅವರು ಬ್ರಿಟಿಷರನ್ನು ಹೇಗೆ ನಡುಗಿಸಿದ್ದಿರಬಹುದು ಎಂದೊಮ್ಮೆ ಕಲ್ಪಿಸಿಕೊಳ್ಳಬೇಕು. ಹೀಗೆ ಕಲ್ಪಿಸಿಕೊಳ್ಳುವು ದಿರಲಿ, ಈ ಸ್ವಾತಂತ್ರ್ಯವನ್ನು ನಮಗೆ ದಕ್ಕಿಸಿಕೊಡಲು ಅವರು, ಅವರಂಥವರೆಲ್ಲ ಅದೆಷ್ಟು ಕಷ್ಟಪಟ್ಟಿರ ಬಹುದು ಎಂಬುದನ್ನೂ ಅರಿಯದೆ ಹಾಗೂ ಸ್ವಾತಂತ್ರ್ಯದ ನಿಜಾರ್ಥವನ್ನೂ ಮನಗಾಣದೆ, ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರ ಎಂದೇ ಭಾವಿಸಿರುವುದರ ಪರಿಣಾಮವಾಗಿಯೇ ಸಮಾಜದ ವಿವಿಧ ನೆಲಗಟ್ಟುಗಳಲ್ಲಿ ಇಂದು ಅವ್ಯವಸ್ಥೆ-ಅಪಸವ್ಯಗಳು ಮುಖಕ್ಕೆ ರಾಚುತ್ತಿದೆ.
ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಪಶ್ಚಿಮ ದಿಕ್ಕಿನಿಂದ ಬೀಸಿದ ಮತ್ತು ಬೀಸುತ್ತಿರುವ ಸ್ವೇಚ್ಛಾಚಾರದದ ಗಾಳಿ, ಅಸಹ್ಯಕರಸಂಸ್ಕೃತಿಗೆ ಮಾರುಹೋಗಿರುವ ನಮ್ಮ ಕೆಲ ಪ್ರಭೃತಿಗಳು ಸ್ವತಃ ಗಾಂಧೀಜಿಯವರನ್ನೇ ಅಸ್ಪೃಶ್ಯರನ್ನಾಗಿಸಿ ಅವರ ವಿಚಾರಧಾರೆಗಳನ್ನು ಕಸದಬುಟ್ಟಿಗೆ ಎಸೆದಿದ್ದಾರೆ. ಇನ್ನು, 5 ವರ್ಷಕ್ಕೊಮ್ಮೆ ‘ಗಾಂಧಿ’ಟೋಪಿ ಧರಿಸಿ ಸಿನಿಮಾಸ್ಕೋಪ್ ಮುಖ ಮಾಡಿಕೊಂಡು ಮತಭಿಕ್ಷೆಗೆ ಬರುವವರಿಗಂತೂ ಗಾಂಧೀಜಿ ಎಂಬ ಪರಿಕಲ್ಪನೆಯು ತಂತಮ್ಮ ಪಕ್ಷಗಳ ಬ್ಯಾನರ್ ಮೇಲೆ ಇರಬೇಕಾದ, ತೆಗೆದುಹಾಕಲಾಗದ ಒಂದು ಅನಿವಾರ್ಯ ಮುದಿಚಿತ್ರ.
ಯುವಪೀಳಿಗೆಯ ವಿಷಯಕ್ಕೆ ಬಂದರೆ, ಸ್ವಲ್ಪ ಮೆದುವಾದ, ಸಭ್ಯನಾದ ಹುಡುಗ ಕಂಡರೆ ‘ಅವನು  ಬಿಡಮ್ಮಾ, ಒಳ್ಳೆಗಾಂಧಿಆಡಿದಂಗೆ ಆಡ್ತಾನೆ’ ಎಂದು ಸಹಪಾಠಿಗಳು ಕಿಚಾಯಿಸುವಷ್ಟರ ಮಟ್ಟಿಗೆ ಗಾಂಧಿಕಲ್ಪನೆ ವಿರೂಪಗೊಂಡಿದೆ. ಸಿನಿಮಾ ಮಂದಿರದ ಪರದೆಯ ಸನಿಹದ ವೀಕ್ಷಣಾ ತರಗತಿಗೆ ‘ಗಾಂಧಿ  ಕ್ಲಾಸು’ ಅನ್ನೋದಕ್ಕೂ ಇಂಥ ಅನಾದರವೇ ಕಾರಣವಿರ ಬಹುದೇನೋ? ‘ಗಾಂಧೀಜೀನೂ ಕಡಿಮೆ ಆಟ ಆಡಿಲ್ಲ ಗುರೂ; ಚಿಕ್ಕಂದಿನಲ್ಲೇ ಬೀಡಿ ಸೇದಿದ್ರಂತೆ, ಸುಳ್ಳು ಹೇಳಿದ್ರಂತೆ, ಸೆರೆ ಕುಡಿದಿದ್ರಂತೆ’ ಎಂದು ಅವಹೇಳನಕಾರಿಯಾಗಿ ಮಾತನಾಡುವವರಿಗೆ ನಮ್ಮಲ್ಲೇನೂ ಕಮ್ಮಿಯಿಲ್ಲ.
ನಿಜ, ಬಾಲ್ಯದಲ್ಲಿ ಗಾಂಧೀಜಿ ಹೀಗೆಲ್ಲ ಮಾಡಿದ್ದುಂಟು. ಆದರೆ ‘ಸತ್ಯಹರಿಶ್ಚಂದ್ರ’ ನಾಟಕ ನೋಡಿ ಕಣ್ಣೀರುಗರೆದು ಪ್ರಭಾವಿತ ರಾಗಿ ‘ಇನ್ನೆಂದೂ ಸುಳ್ಳು ಹೇಳಬಾರದು’ ಎಂದು ನಿರ್ಧರಿಸಿದ್ದು, ತಮ್ಮೆಲ್ಲ ತಪ್ಪುಗಳನ್ನೂ ಪತ್ರವೊಂದರಲ್ಲಿ ಬರೆದು ತಂದೆಗೆ ನೀಡಿ ತಪ್ಪೊಪ್ಪಿಕೊಂಡು ಪ್ರಾಯಶ್ಚಿತ್ತ ಮಾಡಿಕೊಂಡಿದ್ದು ಕೂಡ ಗಾಂಧೀಜಿಯೇ. ಮನುಷ್ಯಸಹಜ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟು ಒಳ್ಳೆಯ ದಾರಿಯಲ್ಲಿ ನಡೆಯಲು ಸಂಕಲ್ಪಿಸಿ ಸಾಧಿಸಿದರೆ, ಮನುಷ್ಯನಾಗಿ ಹುಟ್ಟಿದ್ದರೂ ಜನ ಅಂಥವನನ್ನು ಪೂಜಿಸು ತ್ತಾರೆ, ‘ಮಹಾತ್ಮ’ ಎಂದು ಸಂಬೋಧಿಸುತ್ತಾರೆ; ಮಾನವತ್ವದಿಂದಲೂ ದೈವತ್ವಕ್ಕೇರಲು ಸಾಧ್ಯ ಎಂಬುದನ್ನುಸಾಧಿಸಿತೋರಿಸಿದ ದಿವ್ಯಾತ್ಮ ಗಾಂಧೀಜಿ.
ದಕ್ಷಿಣ ಆಫ್ರಿಕಾದಿಂದ 1915ರಲ್ಲಿ ತಾಯ್ನಾಡಿಗೆ ಮರಳಿದ ಗಾಂಧೀಜಿ ತಮ್ಮ ಗುರು ಗೋಪಾಲಕೃಷ್ಣ ಗೋಖಲೆಯವರಸೂಚನೆಯಂತೆ ದೇಶಪರ್ಯಟನೆ ಕೈಗೊಳ್ಳುತ್ತಾರೆ. ಇದರ ಅಂಗವಾಗಿ ಮೇ ೮ರಂದು ಬೆಂಗಳೂರಿಗೆ ಬಂದು, ಎನ್.ಆರ್.ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯಲ್ಲಿ ಗೋಖಲೆಯವರ ಭಾವಚಿತ್ರ ಅನಾವರಣಮಾಡುತ್ತಾರೆ.
1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ನ 39ನೇ ಅಧಿವೇಶನ ಹಮ್ಮಿಕೊಂಡಿದ್ದಾಗ ಅಧಿವೇಶನದ ಆರಂಭಕ್ಕೂ ಮುನ್ನವೇ ಅಲ್ಲಿಗೆ ಆಗಮಿಸಿ ಅಹಿಂಸಾ ನೀತಿಯ ಬಗ್ಗೆ ಜನರಿಗೆ ಬೋಧಿಸಿದ್ದ ಗಾಂಧೀಜಿ, ಈ ವೇಳೆ ಯಾರ ಮನೆಯಲ್ಲೂ ಉಳಿದುಕೊಳ್ಳದೆ ಅಲ್ಲಿನ ಮೈದಾನವೊಂದರ ಟೆಂಟ್‌ನಲ್ಲಿ ಠಿಕಾಣಿ ಹೂಡಿದ್ದರು. 1934ರಲ್ಲಿ ಪುತ್ತೂರಿಗೆ ಆಗಮಿಸಿದ್ದ ಮಹಾತ್ಮ ಅಲ್ಲಿನ ಅಶ್ವತ್ಥ ಮರವೊಂದರ ಕೆಳಗೆ ಜನರನ್ನುದ್ದೇಶಿಸಿ ಮಾತನಾಡಿದ್ದರ ಸವಿನೆನಪಿನಲ್ಲಿ ಅಲ್ಲಿ ಕಟ್ಟೆಯೊಂದನ್ನು ಕಟ್ಟಲಾಗಿದೆ.
ಇನ್ನು ಅನಾರೋಗ್ಯದ ನಿಮಿತ್ತ ಚಿಕ್ಕಬಳ್ಳಾಪುರ ಸಮೀಪದ ನಂದಿಬೆಟ್ಟಕ್ಕೆ ಎರಡು ಬಾರಿ ಬಂದಿದ್ದ ಅವರು ಅಲ್ಲಿನ ಅತಿಥಿ ಗೃಹದಲ್ಲಿ ತಂಗಿ ಆರೋಗ್ಯ ವೃದ್ಧಿಸಿಕೊಂಡು ತೆರಳಿದ ಉಲ್ಲೇಖಗಳಿವೆ. ಇವೂ ಸೇರಿದಂತೆ ಕರ್ನಾಟಕಕ್ಕೆ ಸಾಕಷ್ಟು ಬಾರಿ ಭೇಟಿನೀಡಿದ್ದ ಜೀವವದು. ‘ಗಾಂಧೀಜಿ’ ಅಪ್ಪಟ ಸಮಾಜಮುಖಿಯಾಗಿದ್ದ ‘ಮಹಾತ್ಮ’ ಎಂಬುದಕ್ಕೆ ಇವೆಲ್ಲ ಒಂದಷ್ಟು ಉದಾ ಹರಣೆಗಳಷ್ಟೇ.
ಗಾಂಧೀಜಿಯನ್ನು ಇನ್ನೇನು ಸನ್ನಿಹಿತವಾಗಿರುವ ಅಕ್ಟೋಬರ್ ೨ರ ಅವರ ಹುಟ್ಟುಹಬ್ಬದಂದು ದೇಶಾದ್ಯಂತ ಸ್ಮರಿಸ ಲಾಗುತ್ತದೆ. ಇಂಥ ಮಹಾತ್ಮರನ್ನು ‘ಚಿತ್ರಪಟ’ಕ್ಕಷ್ಟೇ ಸೀಮಿತಗೊಳಿಸದೆ ‘ಮನಃಪಟಲ’ದ ಆಳಕ್ಕಿಳಿಸಿ, ಅವರ ಚಿಂತನೆಗಳಸಾಕಾರರೂಪವೇ ಆಗುವುದರ ಕಡೆಗೆ ಸಂಕಲ್ಪಿಸಬೇಕಿದೆ. ‘ವರ್ತಮಾನದಲ್ಲಿ ಗಾಂಧಿ ವಿಚಾರಧಾರೆಗಳು ಪ್ರಾಕ್ಟಿಕಲ್ಅಲ್ಲ’ ಎಂಬ ನೆಪ ಹೇಳದಿರೋಣ.
ಏಕೆಂದರೆ, ‘ಪ್ರಪಂಚ ಬದಲಾಗಬೇಕು ಎನ್ನುವ ಧೋರಣೆಯುಳ್ಳವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿಯಬೇಕು’ ಎಂದಿದ್ದಾರೆ ಮಹಾತ್ಮ. ಹೀಗಾಗಿ, ಪ್ರಯತ್ನ ಮಾಡುವುದರಲ್ಲಿ ತಪ್ಪೇನೂ ಇಲ್ಲವಲ್ಲ!