ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣದ ಸಾಧ್ಯತೆಗಳು
ಸ್ವಾಸ್ಥ್ಯ ಸಂಪದ
yaganna55@.
ಕನ್ನಡ ಭಾಷೆ ಪ್ರಪಂಚದ ಮಿಕ್ಕ ಭಾಷೆಗಳಿಗಿಂತಲೂ ಉತ್ಕೃಷ್ಟ ಮತ್ತು ಸುಂದರ. ಆರೋಗ್ಯ ಸಾಹಿತ್ಯವೂ ಸೇರಿದಂತೆ, ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಕನ್ನಡ ಭಾಷೆ ಸಮರ್ಥವಾಗಿ ಅರಗಿಸಿಕೊಂಡಿದೆ. ಇಂದು ಲಭ್ಯವಿರುವ ಆರೋಗ್ಯವಿಜ್ಞಾನ ಸಾಹಿತ್ಯ, ಪ್ರಾಚೀನ ಆರೋಗ್ಯ ಸಾಹಿತ್ಯ, ಆಧ್ಯಾತ್ಮಿಕ ಆರೋಗ್ಯ ಸಾಹಿತ್ಯ, ಮಹಾಕಾವ್ಯಗಳು ಇದಕ್ಕೆ ಸಾಕ್ಷಿ.
ಮನುಷ್ಯನ ಬದುಕಿನಲ್ಲಿ ಭಾವ ಮತ್ತು ಭಾಷೆ ಪ್ರಮುಖ ಪಾತ್ರ ವಹಿಸುತ್ತವೆ. ಅರಿವು ಮತ್ತು ಸಂವಾದದ ಮಾಧ್ಯಮವಾಗಿ ಭಾಷೆ ಕಾರ್ಯನಿರ್ವಹಿಸುತ್ತದೆ. ಜನ್ಮದತ್ತ ಜ್ಞಾನ ಹೊರಹೊಮ್ಮಲು ಮತ್ತು ಅಧ್ಯಯನದಿಂದ ಜ್ಞಾನ ಸಂಪಾದಿಸಿಕೊಳ್ಳಲು ಭಾಷೆ ಅತ್ಯ ವಶ್ಯಕ. ಓದು, ಬರಹ ಮತ್ತು ಮಾತು ಭಾಷೆಯ ಸಂವಹನ ಮಾಧ್ಯಮಗಳಾಗಿದ್ದು, ಇವೆಲ್ಲವುಗಳಲ್ಲಿ ಸದೃಢವಾದ ಭಾಷೆ ಮಾತ್ರ ಪ್ರಬಲ ಕಲಿಕಾ ಮಾಧ್ಯಮವಾಗಲು ಸಾಧ್ಯ.
ಕನ್ನಡ ಭಾಷೆ ಇವೆಲ್ಲವುಗಳಲ್ಲೂ ಸದೃಢವಾಗಿದೆ. ಭಾಷೆಯನ್ನು ಸೃಷ್ಟಿಕರ್ತನೇ ದಯ ಪಾಲಿಸಿದನೋ, ಮನುಷ್ಯನೇ ಅನ್ವೇಷಿಸಿ ದನೋ ಎಂಬುದು ನಿಗೂಢ. ಭಾರತದಲ್ಲಿ ಸಂವಿಧಾನಾತ್ಮಕವಾಗಿ ಗುರುತಿಸಲಾದ 14 ಭಾಷೆಗಳಿದ್ದರೂ ರೂಢಿಯಲ್ಲಿ ಸುಮಾರು 5 ಸಾವಿರಕ್ಕಿಂತ ಹೆಚ್ಚು ಭಾಷೆಗಳಿವೆ ಎಂದು ಅಂದಾಜಿಸಲಾಗಿದೆ. ಭಾಷೆಯಲ್ಲಿ ಮಿದುಳಿಗೆ ಒಳಬರುವ (ಕಿವಿ, ಕಣ್ಣು ಮತ್ತು ಮಾತಿನ ಮೂಲಕ) ಮಾಹಿತಿಗಳನ್ನು ಅರ್ಥಮಾಡಿ ಕೊಳ್ಳುವ ಸ್ವೀಕೃತಭಾಷೆ ಹಾಗೂ ಅದಕ್ಕನುಗುಣವಾಗಿ ಮಾತು ಮತ್ತು ಬರವಣಿಗೆ ಮೂಲಕ ಪ್ರತಿಕ್ರಿಯಿಸುವ ‘ಅಭಿವ್ಯಕ್ತ ಭಾಷೆ’ ಎಂಬ 2 ವಿಧಗಳಿವೆ.
ಮಗುವು ಗರ್ಭಕೋಶದಲ್ಲಿರುವಾಗಲೇ ಭಾಷೆಯ ಕಲಿಕೆ ಪ್ರಾರಂಭವಾಗುವುದರಿಂದ ಮಾತೃಭಾಷೆಯ ಕಲಿಕೆ ಸ್ವಯಂಪ್ರೇರಿತ ವಾಗಿದ್ದು, ಹುಟ್ಟಿದ ನಂತರ ಭಾಷೆಯ ಪರಿಚಯ ಮತ್ತಷ್ಟು ವೃದ್ಧಿಗೊಳ್ಳುತ್ತದೆ. ಒಂದಕ್ಕಿಂತ ಹೆಚ್ಚು ಭಾಷೆ ಮಾತನಾಡುವಪರಿಸರದಲ್ಲಿರುವ ಮಗು ಹೆಚ್ಚೆಚ್ಚು ಭಾಷೆಗಳಲ್ಲಿ ಪ್ರಭುತ್ವ ಬೆಳೆಸಿಕೊಳ್ಳಬಹುದು.
ಗರ್ಭದಿಂದಲೇ ಮನುಷ್ಯನಿಗೆ ಮಾತೃಭಾಷೆಯ ಕಲಿಕೆ ಶುರುವಾಗಿ ಹಂತ ಹಂತವಾಗಿ ವೃದ್ಧಿಸಿ ಪರಿಪಕ್ವವಾಗುವುದರಿಂದ ಕಲಿಕೆಗೆ ಮಾತೃಭಾಷೆಯೇ ಸರ್ವಶ್ರೇಷ್ಠ ಎಂಬುದು ವೈಜ್ಞಾನಿಕ ಗ್ರಹಿಕೆ. ಶಿಕ್ಷಣ ವಿಷಯಗಳನ್ನು ಸರಳವಾಗಿ ಅರಗಿಸಿಕೊಳ್ಳಲು ಮಾತೃಭಾಷೆ ಪೂರಕವಾಗುತ್ತದೆ. ವಿಷಯವನ್ನು ಮಾತೃ ಭಾಷೆಯಲ್ಲಿ ಅರ್ಥೈಸಿಕೊಂಡ ನಂತರ ಅದನ್ನು, ಕಲಿತ ಇನ್ನಿತರ ಭಾಷೆಯಲ್ಲಿ ಸುಲಭವಾಗಿ ಅಭಿವ್ಯಕ್ತಿಸಬಹುದು. ಹೀಗಾಗಿ ಮನುಷ್ಯನಿಗೆ ತೀರಾ ಹತ್ತಿರವಾದ ವೈದ್ಯಕೀಯ ವಿಷಯ ಚೆನ್ನಾಗಿ  ಮನನವಾಗ ಬೇಕಾದಲ್ಲಿ ಆಯಾ ಮಾತೃಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ ನೀಡುವುದು ಅತ್ಯವಶ್ಯಕ.
ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ರಾಜ್ಯದಲ್ಲೂ ಒಂದೊಂದು ಮಾತೃಭಾಷೆಯ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಸಂಕಲ್ಪಿಸಿದ್ದಾರೆ. ನಾನು ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ ಕನ್ನಡದಲ್ಲೇ ಬೋಧಿಸು ತ್ತಿದ್ದು ದರಿಂದ ವಿದ್ಯಾರ್ಥಿಗಳಿಗೆ ಚೆನ್ನಾಗಿ ಅರ್ಥವಾಗುತ್ತಿತ್ತು, ತರಗತಿಗಳು ವಿದ್ಯಾರ್ಥಿಗಳಿಂದ  ಬಿತುಳುಕುತ್ತಿದ್ದವು.
ಕನ್ನಡದ ಹಿರಿಮೆ:ಇಂದು ಎಲ್ಲೆಡೆ ವಿರಾಜಿಸುತ್ತಿರುವ ಆಂಗ್ಲಭಾಷೆಗಿಂತಲೂ ಕನ್ನಡ ಭಾಷೆ ಅತ್ಯಂತ ಪ್ರಾಚೀನವಾದುದು. ಸುಮಾರು ೨ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಲಿಪಿ, ಉಚ್ಚಾರ, ಪದ ಸಂಪತ್ತು, ಭಾಷಾಶೈಲಿ ಎಲ್ಲವೂಪ್ರಪಂಚದ ಮಿಕ್ಕ ಭಾಷೆಗಳಿಗಿಂತಲೂ ಉತ್ಕೃಷ್ಟ. ಅಕ್ಷರಜೋಡಣೆ, ವಾಕ್ಯ ಸಮುಚ್ಚಯ ಕೂಡ ಮಿಕ್ಕ ಭಾಷೆಗಳಿಗಿಂತ ಸುಂದರ. ಆರೋಗ್ಯ ಸಾಹಿತ್ಯವೂ ಸೇರಿದಂತೆ, ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಕನ್ನಡ ಭಾಷೆ ಸಮರ್ಥವಾಗಿ ಅರಗಿಸಿಕೊಂಡಿದೆ.
ಇಂದು ಲಭ್ಯವಿರುವ ಆರೋಗ್ಯ ವಿಜ್ಞಾನ ಸಾಹಿತ್ಯ, ಪ್ರಾಚೀನ ಆರೋಗ್ಯ ಸಾಹಿತ್ಯ, ಆಧ್ಯಾತ್ಮಿಕ ಆರೋಗ್ಯ ಸಾಹಿತ್ಯ, ಮಹಾ ಕಾವ್ಯಗಳು ಇದಕ್ಕೆ ಸಾಕ್ಷಿ. ಆಧುನಿಕ ವೈದ್ಯವಿಜ್ಞಾನದ ಎಲ್ಲ ಪ್ರಕಾರಗಳನ್ನೂ ಕನ್ನಡ ಭಾಷೆ ಅರಗಿಸಿಕೊಳ್ಳಬಲ್ಲದು ಎಂಬುದಕ್ಕೆ ಮೈಸೂರು ವಿ.ವಿ.ಯಿಂದ ನನ್ನ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ‘ಕನ್ನಡ ವೈದ್ಯವಿಜ್ಞಾನ ವಿಷಯ ವಿಶ್ವಕೋಶ’ ಮತ್ತು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದಿಂದ ಪ್ರಕಟಗೊಳ್ಳುತ್ತಿರುವ ನನ್ನ ರಚನೆಯ ‘ಕನ್ನಡ ವೈದ್ಯಕೀಯ ನಿಘಂಟು ಮತ್ತು ಪದಕೋಶ’ ಸಾಕ್ಷಿಯಾಗಿವೆ.
ಕನ್ನಡದಲ್ಲಿ ವೈದ್ಯಶಿಕ್ಷಣ:ನಮ್ಮ ದೇಶದಲ್ಲಿಂದು ಆಯುರ್ವೇದ, ಆಧುನಿಕ ವೈದ್ಯವಿಜ್ಞಾನ, ಅಲೋಪತಿ, ಹೋಮಿಯೋಪತಿ, ಯೋಗ ಮತ್ತು ನೈಸರ್ಗಿಕ ವಿಜ್ಞಾನ, ಅರೆವೈದ್ಯಕೀಯ ವಿಜ್ಞಾನ ಎಂಬ ಪ್ರಮುಖ ವೈದ್ಯವಿಜ್ಞಾನಗಳಿದ್ದು ಇವೆಲ್ಲದರ ಶಿಕ್ಷಣ ವನ್ನು ಕನ್ನಡದಲ್ಲೇ ನೀಡಬಹುದಾಗಿದೆ.
ರಷ್ಯ, ಜಪಾನ್, ಜರ್ಮನಿ, ಚೀನಾದಂಥ ದೇಶಗಳು ಬಹು ಹಿಂದಿನಿಂದಲೇ ತಮ್ಮ ಮಾತೃಭಾಷೆಯಲ್ಲೇ ಯಶಸ್ವಿಯಾಗಿ ವೈದ್ಯಶಿಕ್ಷಣ ನೀಡುತ್ತ ಬಂದಿವೆ, ಶ್ರೇಷ್ಠ ವೈದ್ಯರನ್ನೂ ಸೃಷ್ಟಿಸಿವೆ. ಹೀಗಾಗಿ ವೈದ್ಯಶಿಕ್ಷಣಕ್ಕೆ ಆಂಗ್ಲಭಾಷೆಯೊಂದೇ ಸರ್ವಶ್ರೇಷ್ಠ ವಲ್ಲ. ಕನ್ನಡದಲ್ಲಿ ವೈದ್ಯಶಿಕ್ಷಣ ನೀಡುವಲ್ಲಿ ‘ವೈದ್ಯಕೀಯ ತಾಂತ್ರಿಕ ಪದಗಳ ಸಮಸ್ಯೆ’ ಬಹುಮುಖ್ಯ ಸವಾಲಾಗಿದೆ.
ಇದನ್ನು ಹೊರತುಪಡಿಸಿದರೆ ವೈದ್ಯವಿಷಯಗಳ ವಿವರಣೆಗಾಗಲಿ, ಕ್ರಿಯಾಪದಗಳಿಗಾಗಲಿ ಮತ್ತಿತರ ಯಾವುದೇ ವಿಷಯದ ವಿವರಣೆಗಾಗಲಿ ಕನ್ನಡದಲ್ಲಿ ಪದಗಳ ಕೊರತೆಯಿಲ್ಲ. ಆದ್ದರಿಂದ ವೈದ್ಯವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯುವಂತಾಗಬೇಕು. ಕನ್ನಡ ಬೋಧನೆ ಮತ್ತು ಪರೀಕ್ಷೆ ಪಠ್ಯವಿಷಯವಾಗಬೇಕು. ಮಾತೃ ಭಾಷೆಯಲ್ಲಿ ವೈದ್ಯಶಿಕ್ಷಣ ಬೋಧಿಸುತ್ತಿರುವ ದೇಶಗಳಲ್ಲಿ ಮಾತೃಭಾಷಾ ಕಲಿಕೆ ಕಡ್ಡಾಯವಾಗಿದೆ.
ಭಾರತದಲ್ಲಿ ಹೆಚ್ಚು ಮಾತೃಭಾಷೆಗಳಿರುವುದರಿಂದ ದೇಶಾದ್ಯಂತ ಏಕರೂಪದ ಸ್ಥಳೀಯ ಭಾಷಾಮಾಧ್ಯಮ ಸವಾಲಾಗಬಹುದು. ಆದ್ದರಿಂದ ಆಯಾ ರಾಜ್ಯಗಳ ಮಾತೃಭಾಷೆಗಳನ್ನೇ ವೈದ್ಯಶಿಕ್ಷಣದ ಮಾಧ್ಯಮವಾಗಿಸುವುದು ಅನಿವಾರ್ಯ.
ವೈದ್ಯತಾಂತ್ರಿಕ ಪದಗಳು:ಕನ್ನಡದಲ್ಲಿನ ವೈದ್ಯತಾಂತ್ರಿಕ ಪದಗಳು ವೈದ್ಯವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದಂಥ ಮೂಲವಿಜ್ಞಾನದ ಪ್ರಕಾರಗಳನ್ನು ಮತ್ತು ದೇಹರಚನೆ, ಶರೀರಕ್ರಿಯೆ, ಜೀವರಸಾಯನಶಾಸ್ತ್ರ, ರೋಗಶಾಸ್ತ್ರ, ಔಷಧಶಾಸ್ತ್ರ, ಸೂಕ್ಷ್ಮಜೀವಿಶಾಸ್ತ್ರ,ಶಸ್ತ್ರಕ್ರಿಯಾಶಾಸ್ತ್ರ, ಚಿಕಿತ್ಸಾಶಾಸ್ತ್ರದಂಥ ವಿಷಯಗಳನ್ನು ಒಳಗೊಂಡಿದೆ. ಮೂಲವಿಜ್ಞಾನದ ವಿಷಯಗಳು ಈ ಹಿಂದೆ ಕನ್ನಡದಲ್ಲಿ ಬೋಧನೆಯಾಗುತ್ತಿದ್ದು, ಅವುಗಳಿಗೆ ಸಂಬಂಧಿಸಿದ ಕನ್ನಡ ತಾಂತ್ರಿಕ ಪದಗಳು ಈಗಾಗಲೆ ಲಭ್ಯವಿವೆ.
ಸಮಸ್ಯೆಯಿರುವುದು ವೈದ್ಯತಾಂತ್ರಿಕ ಪದಗಳದ್ದು. ರೋಗದ ತೊಂದರೆಗಳಿಗೆ ಸಂಬಂಧಿಸಿ ರೋಗಿಗಳೇ ಪದಗಳನ್ನು ನೀಡುತ್ತಾರೆ,  ಸಂಬಂಧಿತ ವಿವರಗಳನ್ನೂ ಕನ್ನಡದಲ್ಲಿ ವಿವರಿಸುತ್ತಾರೆ. ಕನ್ನಡದ ವೈದ್ಯತಾಂತ್ರಿಕ ಪದಗಳನ್ನು ಸೃಷ್ಟಿ ಮಾಡುವಾಗ ಆಂಗ್ಲ ಭಾಷೆಯಲ್ಲಿ ಅವು ಸೃಷ್ಟಿಯಾಗಿರುವ ಹಿನ್ನೆಲೆ ಗಮನಿಸಿ ಅದೇ ಮಾನದಂಡ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಹಾಲಿ ಇರುವ ಆಂಗ್ಲತಾಂತ್ರಿಕ ಪದಗಳನ್ನೇ ಕನ್ನಡೀಕರಣ ಮಾಡಿಕೊಳ್ಳಬೇಕು.
ಆಂಗ್ಲಭಾಷೆಯ ಬಹುಪಾಲು ವೈದ್ಯತಾಂತ್ರಿಕ ಪದಗಳು ಗ್ರೀಕ್ ಮತ್ತು ಲ್ಯಾಟಿನ್ ಮೂಲವಾಗಿದ್ದು, ಇದೇ ಮಾನದಂಡ ಅನುಸರಿಸಿ ಆಂಗ್ಲ ಭಾಷೆ ತನ್ನ ಪದಸಂಪತ್ತನ್ನು ವಿಸ್ತಾರಗೊಳಿಸಿ ಶ್ರೀಮಂತವಾಗಿದೆ. ಇದೇ ನಿಯಮ ಅನುಸರಿಸಿ ನಾನು ವೈದ್ಯಕೀಯ ನಿಘಂಟು ರಚಿಸಿದ್ದೇನೆ.
ವೈದ್ಯತಾಂತ್ರಿಕ ಪದಗಳ ಸೃಷ್ಟಿಗೆ ನಾನು ಅನುಸರಿಸಿರುವ ಮಾನದಂಡಗಳು ಹೀಗಿವೆ:೧. ಸರಳ ಭಾಷೆಯಲ್ಲಿರಬೇಕು. ಎಲ್ಲರಿಗೂ ಅದರಲ್ಲೂ ವೈದ್ಯರಿಗೆ ಮೊದಲು ಅರ್ಥವಾಗುವ ಆಡುಭಾಷೆಯಲ್ಲಿರಬೇಕು. ಇಲ್ಲದಿದ್ದಲ್ಲಿ ವೃತ್ತಿ ಬಾಂಧವರಿಂದಲೇ ತಿರಸ್ಕೃತವಾಗುತ್ತದೆ. ಹಾಗಾದಾಗ ಇನ್ನಿತರರನ್ನು ತಲುಪುವುದಿಲ್ಲ.
೨. ಕ್ಲಿಷ್ಟ, ಸಂಕೀರ್ಣ ಆಂಗ್ಲ ತಾಂತ್ರಿಕ ವೈದ್ಯಕೀಯ ಪದಗಳನ್ನು ಯಥಾವತ್ತಾಗಿ ಉಪಯೋಗಿಸಬೇಕು ಅಥವಾ ಕನ್ನಡೀಕರಣಗೊಳಿಸಬೇಕು. ಉದಾ: ಸಿರೋಸಿಸ್. ಇದು ಈಲಿನಾಶ, ಈಲಿಜೀವಕೋಶಗಳ ಪುನರುತ್ಪತ್ತಿ, ಲೋಬ್ ವಿನ್ಯಾಸ ನಾಶವಾಗುವಿಕೆ, ನಾರೇರಿಕೆ ಇವೆಲ್ಲ ನ್ಯೂನತೆಗಳನ್ನು ಸೂಚಿಸುವ ಸಂಕೀರ್ಣ ಅರ್ಥಗಳನ್ನೊಳಗೊಂಡ ಪದ. ಇದಕ್ಕೆಸರಿಸಮಾನವಾದ ಕನ್ನಡಪದ ಸೃಷ್ಟಿ ಅಸಾಧ್ಯವಾದ್ದರಿಂದ ಇದನ್ನು ಯಥಾವತ್ತಾಗಿ ಸ್ವೀಕರಿಸುವುದು ಸೂಕ್ತ.
ಹೀಗೆ ಮೈಟೋಸಿಸ್, ಮಿಯೋಸಿಸ್, ಮೆಟಫೇಸ್, ಅನಫೇಸ್ ಇತ್ಯಾದಿ ಪದಗಳಿಗೂ ಇದೇ ಮಾನದಂಡ ಅನುಸರಿಸಬಹುದು. ಬೇಕೆಂದಲ್ಲಿ ಕೊನೆ ಅಕ್ಷರಕ್ಕೆ ಕೊಂಬು ಕೊಟ್ಟು ಕನ್ನಡೀಕರಣಗೊಳಿಸಬಹುದು. ಉದಾ: ಸಿರೋಸಿಸು, ಮೈಟೋಸಿಸು, ಮಿಯೋಸಿಸು ಇತ್ಯಾದಿ.
೩. ಕಾಯಿಲೆಗಳನ್ನು ನಾಮಪದಗಳಂತೆ ಯಥಾವತ್ತಾಗಿ ಸ್ವೀಕರಿಸಬೇಕು. ಉದಾ: ನ್ಯುಮೋನಿಯ, ರಿಕೆಟೋಸಿಸ್, ಸಿಸ್ಟಮಿಕ್ ಲ್ಯೂಪಸ್ ಏರಿಥೊಮೆಟೋಸಿಸ್ (ವ್ಯಾಪಕ ಕೆಂಪೇರಿಕೆಯ ಲ್ಯೂಪಸ್), ಪೆಂಪಿಗಸ್, ರಿಕೆಟ್ಸ್, ಕಾಲರಾ, ಮಲೇರಿಯಾ,ಕರೋನಾ ಇತ್ಯಾದಿ.
೪. ಕೆಲವೊಮ್ಮೆ ಕಾಯಿಲೆಗಳಿಗೂ ಮತ್ತು ರೋಗ ನ್ಯೂನತೆ (ಪೆಥಾಲಾಜಿಕಲ್ ಲೀಸನ್ಸ್)ಗಳಿಗೂ ಕನ್ನಡದಲ್ಲಿ ಪದ ಸೃಷ್ಟಿಸ ಬಹುದು. ಡಯಾಬಿಟಿಸ್ ಮೆಲಿಟಿಸ್‌ಗೆ ಸಿಹಿಮೂತ್ರರೋಗ, ಮಧುಮೇಹ, ಸಕ್ಕರೆ ಕಾಯಿಲೆ; ಮಯೋಕಾರ್ಡಿಯಲ್ ಇನ್ಫರ್‌ಕ್ಷನ್‌ಗೆ ನಿರಕ್ತ ಹೃದಯಸ್ನಾಯು ಸಾವು; ಹಾರ್ಟ್ ಫೇಲ್ಯೂರ್‌ಗೆ ಹೃದಯ ವೈಫಲ್ಯ; ಲ್ಯೂಕೊಸೈಟೋಸಿಸ್‌ಗೆ ಬಿಳಿರಕ್ತ ಕಣೇರಿಕೆ; ಡಿಜೆನರೇಷನ್‌ಗೆ ರಚನಾನವನತಿ; ನೆಕ್ರೋಸಿಸ್‌ಗೆ ಅಂಗಾಂಶ ಸಾವು; ಗ್ಯಾಂಗ್ರೀನ್‌ಗೆ ಸೋಂಕಿನ ಅಂಗಾಂಶ ಸಾವು; ವೈರಲ್‌ಎನ್‌ಸಿ-ಲೈಟಿಸ್‌ಗೆ ವೈರಸ್‌ನ ಮೆದುಳೂತುರಿ ಇತ್ಯಾದಿ.
೫. ಮಿಶ್ರಪದಗಳ ಸೃಷ್ಟಿ:ತುಂಡು ಪದಗಳಿಂದಾದ ಆಂಗ್ಲಪದಕ್ಕೆ ಸರಳ ಕನ್ನಡ ಪದ ನೀಡಲಾಗದ ಸಂದರ್ಭದಲ್ಲಿ ‘ಆಂಗ್ಲೀಯ-ಕನ್ನಡ’ ಮಿಶ್ರಪದವನ್ನು ಸೃಷ್ಟಿಸಬಹುದು. ಆಂಗ್ಲ ಭಾಷೆಯಲ್ಲೂ ಹೀಗೆ ಗ್ರೀಕ್, ಲ್ಯಾಟಿನ್ ಮತ್ತು ಆಂಗ್ಲಭಾಷೆಗಳ ತುಂಡುಪದಗಳ ಜೋಡಣೆಯಿಂದ ಮಿಶ್ರಪದಗಳು ಸೃಷ್ಟಿಯಾಗಿವೆ. ಉದಾ: ರೊಮಟಾಯ್ಡ್ ಆರ್ತೈಟಿಸ್ ಪದದಲ್ಲಿ ರೊಮಟಾಯ್ಡ್+ ಆರ್ತ್ರೈಟಿಸ್ ಎಂಬ ಎರಡು ಪದಗಳಿದ್ದು, ರೊಮಟಾಯ್ಡ್ ಅನ್ನು ಹಾಗೆ ಉಳಿಸಿಕೊಂಡು ಇದಕ್ಕೆ ಕೀಲೂತುರಿಯನ್ನು ಸೇರಿಸಿ ರೊಮಾಟಾಯ್ಡ್ ಕೀಲೂತುರಿ ಎಂಬ ಪದ ಸೃಷ್ಟಿಸಬಹುದು.
ಇದೇ ರೀತಿ, ಎಲೆಕ್ಟ್ರೊ (ಆಂಗ್ಲ)+ಕಾರ್ಡಿಯೊ(ಗ್ರೀಕ್)+ಗ್ರಾಮ್(ಗ್ರೀಕ್) = ಎಲೆಕ್ಟ್ರೊಕಾರ್ಡಿಯೊಗ್ರಾಮ್ ಎಂಬುದಕ್ಕೆ ಕನ್ನಡದಲ್ಲಿ ವಿದ್ಯುತ್+ಹೃತ್+ನಕ್ಷೆ= ಹೃತ್‌ವಿದ್ಯುತ್‌ನಕ್ಷೆ ಎಂಬ ಪದ ಸೃಷ್ಟಿಸಬಹುದು.
೬. ಮಿಶ್ರಿತ ಆಂಗ್ಲತಾಂತ್ರಿಕ ಪದದ ನಿಗೂಢ ಅರ್ಥಕ್ಕೆ ಸಮಾನವಾದ ಅರ್ಥಕೊಡುವ ಪದಸೃಷ್ಟಿ :ಕೆಲವು ಆಂಗ್ಲತಾಂತ್ರಿಕ ಪದಗಳು ನಿಗೂಢ ಅರ್ಥಗಳನ್ನು ಒಳಗೊಂಡಿದ್ದು, ಅದೇ ಅರ್ಥ ಬರುವಂತೆ ಕನ್ನಡದಲ್ಲಿ ಪದಗಳನ್ನು ಸೃಷ್ಟಿಸಬೇಕು.ಉದಾ: ಇನ್-ಮೇಷನ್- ಕೆಂಪು+ಊತ+ತುರಿ= ಕೆಂಪೂತುರಿ. ನಿಯೋಪ್ಲೇಸಿಯ=ನಿಯೋ-ಹೊಸ, ಪ್ಲೇಸಿಯ-ವೃದ್ಧಿ (ಬೆಳವಣಿಗೆ) = ಹೊಸ ಬೆಳವಣಿಗೆ ಅಥವಾ ನವವೃದ್ಧಿ. ಮೆಟಪ್ಲೇಸಿಯ- ಮೆಟ=ವಿಭಿನ್ನ + ಪ್ಲೇಸಿಯ=ಬೆಳವಣಿಗೆ=ವಿಭಿನ್ನ ಬೆಳವಣಿಗೆ.
೭. ಪ್ರತ್ಯಯಗಳ ಬಳಕೆ:ಹಲವಾರು ಆಂಗ್ಲ ವೈದ್ಯತಾಂತ್ರಿಕ ಪದಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪೂರ್ವ ಮತ್ತು ಉತ್ತರ ಪ್ರತ್ಯಯಗಳಿಗೆ ಸಮಾನ ಕನ್ನಡ ಪದಗಳನ್ನು ಕಂಡುಕೊಳ್ಳಬಹುದು.
ಉದಾ: ಒಸಿಸ್, ಟಿಕ್, ಓಮ, ಮಿಯ, ಮೆಟ್, ಪ್ರಿ, ಪ್ರೊ, ಯೊರೊ, ಗ್ಯಾಸ್ಟ್ರೋ, ಲಜಿ ಇತ್ಯಾದಿ. ಓಸಿಸ್‌ಗೆ ಸ್ಥಿತಿ, ಏರಿಕೆ, ಐಟಿಸ್‌ಗೆ ಕೆಂಪೂತುರಿ, ಲಜಿಗೆಶಾಸ್ತ್ರ, ವಿಜ್ಞಾನ, ಲೈಸಿಸ್‌ಗೆ ನಾಶ, ವಿಭಜನೆ, ಓಮಗೆ ಗೆಡ್ಡೆ, ಪ್ರೀಗೆ ಪೂರ್ವ, ಪ್ಲೇಸಿಯಗೆ ಬೆಳವಣಿಗೆ, ಟಿಕ್‌ಗೆ ಕಾರಕ, ನ್ಯೂರೊಗೆ ನರ, ಗ್ಯಾಸ್ಟ್ರೊಗೆ ಜೀರ್ಣಾಂಗ, ಯುರೊಗೆ ಮೂತ್ರ, ಇಕ್ಸ್‌ಗೆ ವಿಜ್ಞಾನ. ತ್ರಾಂಬೊಸೈಟೋಸಿಸ್‌ಗೆ ತ್ರಾಂಬೊ ಸೈಟ್+ ಒಸಿಸ್= ರಕ್ತಹೆಪ್ರೋತ್ಪತ್ತಿ ಕಣೇರಿಕೆ., ಹಿಮೊಲೈಟಿಕ್(ಹೀಮ್+ಲೈಟಿಕ್)ಗೆ, ಕೆಂಪುರಕ್ತಕಣನಾಶಕ, ಹಿಮೊಲೈಸಿಸ್‌ಗೆ ಕೆಂಪುರಕ್ತಕಣ ನಾಶ (ವಿಭಜನೆ), -ಬ್ರೋಮ (ಫೈಬರ್+ಓಮ)ಗೆ ನಾರಿನಗೆಡ್ಡೆ ಇತ್ಯಾದಿ.
೮. ವೈದ್ಯತಾಂತ್ರಿಕ ಪದದ ಪೂರ್ಣ ಅರ್ಥವನ್ನು ಅದನ್ನು ಬಳಸುವ ಸಂದರ್ಭದ ವೈಜ್ಞಾನಿಕ ದೃಷ್ಟಿಕೋನವನ್ನು ಅರ್ಥ ಮಾಡಿಕೊಂಡು, ಅದೇ ಅರ್ಥ ಬರುವಂತೆ ಕನ್ನಡ ಪದ ಸೃಷ್ಟಿಸಲು ಸಾಧ್ಯವಾದಲ್ಲಿ ಮಾತ್ರ ಹೊಸ ಕನ್ನಡ ಪದವನ್ನು ಸೃಷ್ಟಿಸ ಬೇಕು. ಇಲ್ಲವಾದಲ್ಲಿ ಆಂಗ್ಲ ಪದವನ್ನು ಹಾಗೆಯೇ ಅಥವಾ ಕನ್ನಡೀಕರಣಗೊಳಿಸಿ (ಕೊನೆ ಅಕ್ಷರಕ್ಕೆ ಕೊಂಬುಕೊಟ್ಟು) ಅದರ ಅರ್ಥವನ್ನು ವಿವರಿಸಬೇಕು. ಪದದ ಅರ್ಥ ವಿಕೃತಗೊಳ್ಳಬಾರದು.
ಹೀಗೆ ಸಂದರ್ಭಕ್ಕನುಗುಣವಾಗಿ ಹೊಂದಿ ಕೊಳ್ಳುವ ಮೇಲ್ಕಂಡ ಮಾನದಂಡವನ್ನು ಅನುಸರಿಸಿ ಅರ್ಥವಾಗುವ, ಸರಳವಾದ, ನೈಜ ಅರ್ಥಕ್ಕೆ ಧಕ್ಕೆ ಬಾರದ ಹಾಗೆ ಕನ್ನಡ ವೈದ್ಯತಾಂತ್ರಿಕ ಪದಗಳನ್ನು ಸೃಷ್ಟಿಸಬೇಕು. ಇಲ್ಲವಾದಲ್ಲಿ ಹಾಲಿ ಆಂಗ್ಲ ತಾಂತ್ರಿಕಪದವನ್ನೇ ಉಳಿಸಿಕೊಳ್ಳಬೇಕು. ಆಂಗ್ಲರು ಇದೇ ಮಾನದಂಡಗಳನ್ನು ಬಳಸಿಕೊಂಡಿದ್ದಾರೆ. ನಾನು ರಚಿಸಿರುವ, ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ಯಿಂದ ಪ್ರಕಟಗೊಳ್ಳುತ್ತಿರುವ ಬೃಹತ್ ಕನ್ನಡ ವೈದ್ಯಕೀಯ ನಿಘಂಟು ಮತ್ತು ಪದಕೋಶದ ರಚನೆಯಲ್ಲಿಇದೇ ಮಾನದಂಡಗಳನ್ನು ಅನುಸರಿಸಲಾಗಿದೆ.
ಕನ್ನಡ ಭಾಷೆ ವೈದ್ಯಕೀಯ ಶಿಕ್ಷಣವನ್ನು ಅರಗಿಸಿಕೊಳ್ಳಲು ಸರ್ವಶಕ್ತವಾಗಿದೆ. ರಾಜ್ಯ ಸರಕಾರವು ಕೇಂದ್ರದ ನಿರ್ಧಾರವನ್ನುಅನುಷ್ಠಾನಗೊಳಿಸಬೇಕು. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಈ ದಿಕ್ಕಿನಲ್ಲಿ ವೈದ್ಯಕೀಯ ಪಠ್ಯ ಪುಸ್ತಕಗಳನ್ನು ರಚಿಸು ವಲ್ಲಿ ಕಾರ್ಯಯೋಜನೆ ರೂಪಿಸಬೇಕು.