ಸತ್ಯಪಥದಲ್ಲಿನ ನಿತ್ಯಪಯಣಿಗ ಮಹಾತ್ಮ ಗಾಂಧೀಜಿ
ಗಾಂಧಿ ಸ್ಮೃತಿ
ಸುಮಾ ಚಂದ್ರಶೇಖರ
ಅಧ್ಯಾತ್ಮ ಸಾಧನೆ ಮತ್ತು ಸಮಾಜಸೇವೆಗಳ ನಡುವೆ ಸಮನ್ವಯ ಸಾಧಿಸಿದ ಗಾಂಧೀಜಿಯವರು ‘ಸೇವೆಯಲ್ಲಿ ವ್ಯಕ್ತವಾಗದ ಅಧ್ಯಾತ್ಮವು ನಿಜವಾದ ಅಧ್ಯಾತ್ಮವಲ್ಲ’ ಎಂಬ ದೃಷ್ಟಿಕೋನವನ್ನು ಹೊಂದಿದ್ದರು. ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಕೃತಿ ಚಿಕಿತ್ಸೆಯೇ ಶ್ರೇಷ್ಠಮಾರ್ಗ ವೆಂದು ತೋರಿಸಿದ ಧೀಮಂತ ಅವರು.
ಮಹಾತ್ಮ ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳುವುದು ಎಷ್ಟು ಸರಳವೋ ಅಷ್ಟೇ ಕಠಿಣ ಕೂಡ. ಅವರನ್ನು ಅರ್ಥೈಸಿಕೊಂಡವರು ಕೆಲವೇ ಜನ. ಗಾಂಧಿ ತತ್ತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಗಾಂಧೀಜಿ ಎಂಬ ಶಬ್ದ ಕಿವಿ ಮೇಲೆ ಬೀಳುತ್ತಿದ್ದಂತೆಯೇ ಸರಳ ಜೀವನದ ಸಾಕಾರಮೂರ್ತಿ ನಮ್ಮ ಕಣ್ಣೆದುರಿಗೆ ಬಂದಂತಾಗುತ್ತದೆ. ಅವರು ಸರಳ ಜೀವನಕ್ಕೆ ಮತ್ತೊಂದು ಹೆಸರು. ಒಬ್ಬ ವ್ಯಕ್ತಿ ಯಾವ ಆಡಂಬರವೂ ಇಲ್ಲದೆ, ಅಧಿಕಾರದ ದರ್ಪ ಸಹ ಇಲ್ಲದೆ, ತನ್ನೊಳಗಿನ ಅಸೀಮ ಆತ್ಮಶಕ್ತಿಯಿಂದಲೇ ಪ್ರಪಂಚವನ್ನೆಲ್ಲ ತನ್ನ ಪ್ರಭಾವಕ್ಕೆ ಒಳಪಡಿಸಬಲ್ಲ ಎಂಬುದಕ್ಕೆ ಗಾಂಧೀಜಿಯವರ ಜೀವನವೇ ಸಾಕ್ಷಿ.
ತಮ್ಮ ಈ ಸಾಧನೆಗೆ ಅವರು ಬಳಸಿದಅಸಗಳು ಎರಡು. ಮೊದಲನೆಯದು ಅಹಿಂಸೆ, ಎರಡನೆಯದು ಸತ್ಯಾಗ್ರಹ. ಮಹಾತ್ಮ ಈ ಮಹಾಸಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಪ್ರಾಯೋಗಿಕವಾಗಿ ಬಳಸಿ ಸಫಲತೆ ಕಂಡು, ಅದನ್ನು ಮತ್ತಷ್ಟು ಸಮರ್ಥವಾಗಿ, ಪರಿಣಾಮಕಾರಿಯಾಗಿ ಭಾರತದಲ್ಲಿ ಬಳಸಿ, ಭಾರತಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡುವಲ್ಲಿ ಯಶಸ್ವಿಯಾದರು. ಗಾಂಧಿಯವರು ಕುಳಿತ ಸ್ಥಳ ದೇವಾಲಯವಾಗಿತ್ತು, ಅವರು ನಡೆದ ನೆಲ ಪವಿತ್ರವಾಗಿತ್ತು. ‘ನೀನು ಇನ್ನೊಬ್ಬರಿಗೆ ಏನನ್ನು ಕೊಡುತ್ತಿಯೋ (ಮಾಡುತ್ತಿಯೋ) ದೇವರು ಅದನ್ನೇ ನಿನಗೂ ಕೊಡುತ್ತಾನೆ (ಮಾಡುತ್ತಾನೆ)’ ಎಂಬುದು ಅವರ ಅಚಲ ನಿಲುವುಗಳ ಪೈಕಿ ಒಂದಾಗಿತ್ತು. ಇದು, ‘ಒಳ್ಳೆಯ ದೆಲ್ಲವೂ ನಮಗೇ ಆಗಲಿ, ಇನ್ನೊಬ್ಬರ ಗೊಡವೆ ನಮಗೇಕೆ’ ಎಂಬ ಚಿಂತನೆಯುಳ್ಳ ಸ್ವಾರ್ಥಿಯು ಅರೆಕ್ಷಣ ಆಲೋಚಿಸುವಂತೆ ಮಾಡುತ್ತದೆ.
‘ಪ್ರತಿಯೊಂದು ಜೀವಿಯಲ್ಲೂ ದೇವರಿರುವ ಕಾರಣ, ಯಾವುದೇ ಜೀವಿಗೆ ಕೆಟ್ಟದ್ದನ್ನು ಮಾಡಿದರೆ ಅಥವಾ ಹಿಂಸಿಸಿದರೆ ಆ ಜೀವಿಗೆ ಮಾತ್ರವೇ ನೋವಾ ಗದು; ಆ ಜೀವಿಯಲ್ಲಿರುವ ದೇವರನ್ನೇ ನೋಯಿಸಿದಂತಾಗುತ್ತದೆ. ಹೀಗೆ ನೀನು ದೇವರನ್ನೇ ನೋಯಿಸಿದರೆ ಅವನನ್ನೇ ನಂಬಿಕೊಂಡಿರುವ ನಿನಗೆ ಶ್ರೇಯಸ್ಸಾಗುವುದೇ? ದೇವರು ಕರುಣಾಮಯಿ ಇರಬಹುದು, ನಿನ್ನ ತಪ್ಪುಗಳನ್ನೆಲ್ಲ ಕ್ಷಮಿಸಿಬಿಡಬಹುದು; ಆದರೆ ನಿನ್ನೊಳಗೇ ಇರುವ ದೇವರು ಇದಕ್ಕೆ ಒಪ್ಪನು.
ಹಾಗಾಗಿ ನಿನ್ನೊಳಗಿನ ದೇವರಿಗೆ ನೀನು ಪ್ರಿಯನಾದರೆ ಭಗವಂತನಿಗೆ ಪ್ರಿಯನಾದಂತೆ. ಆದ್ದರಿಂದ, ನಿನ್ನೊಳಗಿನ ದೇವನನ್ನು ಮೆಚ್ಚಿಸುವ ಹಾಗೆ ನಿನ್ನ ನಿಲುವಿರಲಿ’ ಎಂಬುದು ಮಹಾತ್ಮರ ಚಿಂತನಾಕ್ರಮವಾಗಿತ್ತು. ಒಂದು ನಿರ್ದಿಷ್ಟ ಸ್ಥಳದಲ್ಲಿ ಮಾತ್ರವೇ ದೇವರಿದ್ದಾನೆಂದು ಭಾವಿಸಿದಲ್ಲಿ, ಆ ಸ್ಥಳ ಬಿಟ್ಟು ಬೇರೆ ಕಡೆ ಇದ್ದಾಗ ತಪ್ಪು ವಿಚಾರಕ್ಕೆ, ಭ್ರಷ್ಟಾಚಾರಕ್ಕೆ ಒಡ್ಡಿಕೊಳ್ಳುವಂಥ ಚಿತ್ತಸ್ಥಿತಿ ಒದಗಬಹುದು. ಆದರೆ ನಮ್ಮೊಳಗೇ ದೇವರಿದ್ದಾನೆ ಎಂಬಎಚ್ಚರ ವಿದ್ದಾಗ ಅನುಕ್ಷಣವೂ ಒಳ್ಳೆಯದನ್ನೇ ಯೋಚಿಸುತ್ತೇವೆ-ಮಾಡುತ್ತೇವೆ.
ಹೀಗಾದಾಗ, ಒಂದು ಹಂತದಲ್ಲಿ ನಾವು ನಮ್ಮೊಳಗಿನ ಆ ದೇವರನ್ನೂ ಮೀರಿಸಬಹುದು ಎಂಬುದು ಗಾಂಧೀಜಿಯವರ ಚಿಂತನೆಯಾಗಿತ್ತು. ‘ನಮ್ಮನ್ನು ಪ್ರೀತಿಸುವವರನ್ನು ಮಾತ್ರವೇ ಪ್ರೀತಿಸುವುದಲ್ಲ, ನಮ್ಮನ್ನು ದ್ವೇಷಿಸುವವರನ್ನೂ ನಾವು ಪ್ರೀತಿಸಬೇಕು. ಅದೇ ಅಹಿಂಸೆ’ ಎಂಬ ಗಾಂಧೀಜಿಯವರವಿಚಾರ ಅಹಿಂಸೆಯ ಪರಿಕಲ್ಪನೆಗೆ ಹೊಸ ಹೊಳಪನ್ನೇ ನೀಡಿದೆ. ಇಂಥ ಚಿಂತನೆಗಳಿಂದಾಗಿಯೇ ಅವರು ಮಹಾತ್ಮರಾಗಿದ್ದು. ‘ದ್ವೇಷಕ್ಕೆ ಅರ್ಹನಾದ ವನನ್ನೂ ಪ್ರೀತಿಸುವ ಮೂಲಕ ಅವನನ್ನು ಪರಿವರ್ತಿಸುವುದೇ ನಿಜವಾದ ದೇವಕಾರ್ಯ, ಅಂಥ ಕಾರ್ಯ ಮಾಡುವುದರಿಂದ ನಾವೇ ದೇವರಾಗ ಬಹುದು.
ಜಗತ್ತಿನಲ್ಲಿ ಕೊಟ್ಟಷ್ಟೂ ಹೆಚ್ಚಾಗುವುದು ಪ್ರೀತಿಯೊಂದೇ’ ಎಂಬ ಮಾತನ್ನು ನಾವೆಲ್ಲ ಕೇಳಿದ್ದೇವೆ. ಹಾಗೆ ಸಮಾಜಕ್ಕೆ ತಮ್ಮನ್ನು ಕೊಟ್ಟುಕೊಳ್ಳುತ್ತಲೇ ತಮ್ಮಷ್ಟಕ್ಕೆ ತಾವು ಬೆಳೆಯುತ್ತಲೇ ಹೋದರು ಗಾಂಧೀಜಿ. ತನ್ಮೂಲಕ ಅವರು ತಮ್ಮೊಳಗನ್ನು ತಾವೇ ಮೀರುತ್ತಲಿದ್ದರು. ‘ಕ್ರೋಧ ಎಂಬುದು ಪ್ರಚಂಡ ಬೆಂಕಿಯಿದ್ದಂತೆ. ಅದನ್ನು ತಮ್ಮ ವಶದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲದವರು, ಅದೇ ಕ್ರೋಧಾಗ್ನಿಯಲ್ಲಿ ಬೆಂದುಹೋಗುತ್ತಾರೆ’ ಎಂಬುದು ಅವರ ಮತ್ತೊಂದು ಚಿಂತನೆ.
ಕ್ರೋಧ ನಮ್ಮ ಆಂತರ್ಯದಲ್ಲಿ ಇರಲೇಬಾರದು. ಇದ್ದರೂ ‘ಬೆಂಕಿಯ ಮಳೆ ಸುರಿವಲ್ಲಿ ಉದಕವಾಗಿರಬೇಕು’ ಎಂಬಂತೆ ಕ್ರೋಧವೆಂಬ ಬೆಂಕಿಯನ್ನು ಹೊರಹಾಕದೆ ಒಳಗಿಟ್ಟುಕೊಂಡು ಒಳಗೇ ತಣ್ಣಗಾಗಿಸಿಕೊಳ್ಳುತ್ತಿರಬೇಕು. ಕ್ರೋಧವನ್ನು ಎಂದಿಗೂ ಹಂಚಬಾರದು, ಅಭಿವ್ಯಕ್ತಿಸಲೂಬಾರದು. ಆಗ ವಿಶ್ವದಲ್ಲಿ, ಕ್ರೋಧದ ಫಲಶ್ರುತಿಯಾದ ಮಾನಸಿಕ-ಬೌದ್ಧಿಕ ಯುದ್ಧಕ್ಕೆ ಅವಕಾಶವೇ ಇರುವುದಿಲ್ಲ. ಇಂಥ ವ್ಯವಸ್ಥೆಯಲ್ಲಿ, ಬಂದೂಕಿನ ನಳಿಕೆಯಲ್ಲೂ ಗುಬ್ಬಿ ಗೂಡುಕಟ್ಟಿ ನೆಮ್ಮದಿಯಿಂದ ಇರಬಲ್ಲದು. ಇಂಥ ವ್ಯವಸ್ಥೆಯಲ್ಲಿ ಇರುವವರೆಲ್ಲರೂ ನೆಮ್ಮದಿಯಿಂದ ಬದುಕಬಲ್ಲರು ಎಂಬುದು ಮಹಾತ್ಮರ ಸ್ಪಷ್ಟನಿಲುವಾಗಿತ್ತು.
ಸ್ವಾತಂತ್ರ್ಯವೆಂದರೆ ಕಟ್ಟುಪಾಡುಗಳಿಲ್ಲದ ಸ್ವಚ್ಛಂದ ಬದುಕು ಎಂದು ಕೆಲವರು ಭಾವಿಸಿದ್ದಾರೆ. ಆದರೆ, ‘ತನಗೆ ತಾನು ಕಟ್ಟುಪಾಡು ವಿಧಿಸಿಕೊಳ್ಳುವವನು ಸ್ವತಂತ್ರ್ಯ ವ್ಯಕ್ತಿ. ಬದುಕಿನ ಕ್ರಮಕ್ಕೆ ಒಂದಿಷ್ಟು ಬೇಲಿ ಇರಬೇಕೆನ್ನುವುದು ನಿಜವಾದ ಸ್ವಾತಂತ್ರ್ಯ. ಅದು ಕ್ರಮಬದ್ಧವಾದ ಬದುಕಿಗೊಂದು ಆದರ್ಶಪಥ ವಾಗುತ್ತದೆ. ಒಬ್ಬ ಒಡೆಯನಾಗಿ ಚೆನ್ನಾಗಿ ಬದುಕಬೇಕೆಂದರೆ ಮೊದಲು ಸೇವಕನಾಗಿ ಬದುಕಬೇಕು’ ಎಂಬುದು ಗಾಂಧೀಜಿಯವರ ನಿಲುವಾಗಿತ್ತು. ಅವರು ಹಾಗೆಯೇ ಬದುಕಿದ ಅನೇಕ ಪ್ರಸಂಗಗಳು ಅವರ ಬದುಕಲ್ಲಿ ಗುರುತಿಸಲ್ಪಟ್ಟಿವೆ.
ಅವರು ಬದುಕಿನಲ್ಲಿ ತಮ್ಮನ್ನೆಂದೂ ಒಬ್ಬ ಮಹಾತ್ಮನಂತೆ ತೋರಿಸಿಕೊಳ್ಳದಿದ್ದರೂ, ‘ಮಹಾತ್ಮ’ ಎಂಬ ವಿಶೇಷಣ ಅವರ ಹೆಗಲೇರಿತು. ಪ್ರಾಯಶಃ ಅವರು ಸಾಮಾನ್ಯತೆಯ ಉತ್ತುಂಗವೇರಿದ್ದಕ್ಕೆ ‘ಮಹಾತ್ಮ’ ಎನಿಸಿಕೊಂಡಿರಬಹುದು. ಇಂದು ನಮ್ಮ ಸಂಭ್ರಮ, ವೈಭವೀಕರಣಗಳ ಮಧ್ಯೆ ‘ಮಹಾತ್ಮ’ ಕಳೆದುಹೋಗುತ್ತಿದ್ದಾರೆ. ಗಾಂಧೀಜಿಯವರ ಭಾವಚಿತ್ರ ಸರಕಾರಿ ಕಚೇರಿಯಲ್ಲಿ ಮತ್ತು ಅವರ ಕುರಿತಾದ ಉಲ್ಲೇಖಗಳು ಇಂದಿನ ನೇತಾರರ ಭಾಷಣದಲ್ಲಿ ಅನಿವಾರ್ಯ ಭಾಗಗಳಾಗಿರುವುದು ಬಿಟ್ಟರೆ, ಅವರ ಕನಸುಗಳು, ಆಲೋಚನೆಗಳ ಪರಿಪೂರ್ಣ ಅನುಷ್ಠಾನವಾಗಿಲ್ಲ. ಈ ಕೊರಗು ಮತ್ತು ವಿಷಾದ ಸಹೃದಯಿಗಳನ್ನು ಬಹುದಿನ ಕಾಡುತ್ತಲೇ ಇರುತ್ತದೆ.
ಸಂತನಂತೆ ಬದುಕಿದ್ದ ಅವರಿಗೆ ಅಧ್ಯಾತ್ಮ ಉಸಿರಾಗಿತ್ತು, ಜೀವನದ ಭಾಗವೇ ಆಗಿತ್ತು. ದೇವರು-ಧರ್ಮದ ಬಗ್ಗೆ ಅಪಾರ ಶ್ರದ್ಧೆ, ನಂಬಿಕೆ ಹೊಂದಿದ್ದರೂ ಪರಧರ್ಮದ ತತ್ತ್ವ-ವಿಚಾರಗಳನ್ನು ಆದರಿಸಿ ಗೌರವಿಸುವ ವಿಶಾಲಹೃದಯ ಅವರಿಗಿತ್ತು. ‘ನಾನು ದೇವರನ್ನು ನಂಬಬಹುದು ಅಥವಾ ನಂಬದಿರ ಬಹುದು; ಆದರೆ ಪ್ರಾರ್ಥನೆ ಹಾಗೂ ಅದಕ್ಕಿರುವ ಶಕ್ತಿಯ ಮೇಲೆ ನನಗೆ ನಂಬಿಕೆಯಿದೆ’ ಎನ್ನುತ್ತಿದ್ದರು ಗಾಂಧೀಜಿ. ಸತ್ಯದೊಡನೆ ಅನುಸಂಧಾನ ಅವರ ಅತ್ಯಂತ ಪ್ರಿಯವಾದ ವಿಷಯವಾಗಿದ್ದು.
ಹೀಗಾಗಿ ಆತ್ಮವನ್ನು ಪರಿಶುದ್ಧಗೊಳಿಸುತ್ತ ಮಹಾತ್ಮರಾಗಿ ಬೆಳೆದರು, ತಮ್ಮ ತತ್ತ್ವಕ್ಕೆ ಬದ್ಧರಾಗಿ ನುಡಿದಂತೆ ನಡೆದರು. ಅವರ ಜೀವನಪದ್ಧತಿಯಲ್ಲಿಆಷಾಢಭೂತಿಗಳಲ್ಲಿ ಕಾಣುವಂಥ ದ್ವಂದ್ವವಿರಲಿಲ್ಲ. ರಾಜಿಸೂತ್ರಗಳಿಗಾಗಿ ತಮ್ಮ ತತ್ತ್ವಗಳನ್ನು ಅವರು ಬಲಿಕೊಡಲಿಲ್ಲ. ಅಧ್ಯಾತ್ಮ ಸಾಧನೆ ಮತ್ತು ಸಮಾಜಸೇವೆಗಳ ನಡುವೆ ಸಮನ್ವಯ ಸಾಧಿಸಿದ ಗಾಂಧೀಜಿಯವರು ‘ಸೇವೆಯಲ್ಲಿ ವ್ಯಕ್ತವಾಗದ ಅಧ್ಯಾತ್ಮವು ನಿಜವಾದ ಅಧ್ಯಾತ್ಮವಲ್ಲ’ ಎಂಬ ದೃಷ್ಟಿ ಕೋನವನ್ನು ಹೊಂದಿದ್ದರು.
ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಕೃತಿ ಚಿಕಿತ್ಸೆಯೇ ಶ್ರೇಷ್ಠಮಾರ್ಗವೆಂದು ತೋರಿಸಿದ ಧೀಮಂತ ಅವರು. ಮಹಾತ್ಮರ ಆಹಾರದ ಪ್ರಯೋಗಗಳು ಕೂಡಆಧ್ಯಾತ್ಮಿಕ ದೃಷ್ಟಿಯಿಂದ ಪ್ರೇರಿತವಾಗಿದ್ದವು ಎಂಬುದನ್ನು ಗಮನಿಸಬೇಕು. ಒಬ್ಬ ಹೋರಾಟಗಾರರಾಗಿ, ಭರವಸೆಯಾಗಿ ಇಂದಿನ ಯುವಜನರಿಗೆ ರೋಲ್‌ಮಾಡೆಲ್ ಆಗಬಲ್ಲ ಗಾಂಧೀಜಿ, ತಮ್ಮ ಜೀವನದಲ್ಲಿ ಎಲ್ಲ ಕತ್ತಲೆಗಳನ್ನೂ ಕಷ್ಟಗಳನ್ನೂ ಅನುಭವಿಸಿ ನಮಗೆ ಸ್ವಾತಂತ್ರ್ಯವೆಂಬ ಬೆಳಕನ್ನೂ ಅದರ ಸುಖವನ್ನೂ ನೀಡಿದ್ದಾರೆ. ಅವರು ನೀಡಿರುವ ದೀವಟಿಗೆಯನ್ನು ನಾವು ಸರಿಯಾಗಿ ಹಿಡಿದು ಸಾಗಬೇಕು.
ಆದರೆ ನಾವು ಸುಖವನ್ನಷ್ಟೇ ಬಯಸಿ, ಸತ್ಯದ ಅರ್ಥವನ್ನು ತಿಳಿಯದೆ ಕತ್ತಲಿನತ್ತ ಸಾಗುತ್ತಿದ್ದೇವೆಯೇ ಎಂದು ಒಮ್ಮೊಮ್ಮೆ ಅನಿಸುತ್ತದೆ. ಹೀಗಾಗಿ ನಾವೆಲ್ಲರೂ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.