ಅಸಮಾನತೆ, ಲಿಂಗತಾರತಮ್ಯದ ಬೀಡು ಇರಾನ್‌
ಕಳಕಳಿ
ಅನ್ವಿತಾ ರಾಮಚಂದ್ರ
ಪ್ರತಿಭಟನೆಯ ಬೆಂಕಿ ಇರಾನ್‌ನಲ್ಲಿ ವ್ಯಾಪಿಸಿದೆ. ಅಲ್ಲಿನ ಬಹುತೇಕ ನಗರ, ಪಟ್ಟಣಗಳಲ್ಲಿ ಮಹಿಳೆಯರು ಬೀದಿಗಳಿಯುತ್ತಿದ್ದಾರೆ. ಹಗಲು-ರಾತ್ರಿ ಎನ್ನದೆ ಸಾವಿರ ಸಂಖ್ಯೆಯಲ್ಲಿ ಜಮಾವಣೆಗೊಂಡು, ‘ಸರ್ವಾಧಿಕಾರ ನಶಿಸಲಿ, ಹಿಜಾಬ್ ಕಟ್ಟುಪಾಡು ಕೊನೆಯಾಗಲಿ’ ಎಂದು ಘೋಷಣೆಕೂಗುತ್ತಿದ್ದಾರೆ. ಈ ಪ್ರತಿಭಟನೆಗೆ ಪುರುಷರೂ ಹೆಗಲು ಕೊಟ್ಟಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೋರುವ ತಾರತಮ್ಯ ಇವು ನಮ್ಮ ಸಮಾಜದಲ್ಲಿ ದೀರ್ಘಕಾಲದಿಂದಲೂ ಹರಳುಗಟ್ಟಿರುವ ಸಮಸ್ಯೆಯಾಗಿವೆ ಎಂದರೆ ಅತಿಶಯೋಕ್ತಿಯಲ್ಲ. ಮಹಿಳೆಗೆ ದಕ್ಕಬೇಕಿರುವ ಸ್ವಾತಂತ್ರ್ಯ ಮತ್ತು ಘನತೆಯನ್ನು ಪರಿಪೂರ್ಣವಾಗಿ ನೀಡಲು ಬಹುತೇಕ ದೇಶಗಳು ಸೋತಿವೆ ಎಂಬುದು ಅಪ್ರಿಯಸತ್ಯ. ಸಾಲದೆಂಬಂತೆ, ಮಹಿಳೆಯರ ಮೇಲೆ ಅನ್ಯಾಯದ ವಿಧಾನಗಳನ್ನು ಪ್ರಯೋಗಿಸುವ ನಿಟ್ಟಿನಲ್ಲಿ ಸಂಭ್ರಮಿಸುವ, ಹೆಮ್ಮೆಪಡುವ ದೇಶಗಳು ಇನ್ನೂ ಇವೆ ಎಂಬುದು ವಿಷಾದನೀಯ. ಅಂಥ ದೇಶಗಳ ಸಾಲಿಗೆ ಸೇರುತ್ತದೆ ಇರಾನ್.
೨೨ರ ಹರೆಯದ ಮಹ್ಸಾ ಅಮಿನಿ ತಮ್ಮ ಕುಟುಂಬದೊಂದಿಗೆ ಇರಾನ್ ರಾಜಧಾನಿಗೆ ಭೇಟಿ ನೀಡಿದ್ದರು. ಇಸ್ಲಾಮಿಕ್ ಗಣರಾಜ್ಯದಲ್ಲಿ ಮಹಿಳೆಯರಿಗೆ ಕಟ್ಟುನಿಟ್ಟಾದವಸ್ತ್ರಸಂಹಿತೆ ಜಾರಿಗೊಳಿಸುವ ಹೊಣೆಹೊತ್ತಿರುವ ಅಲ್ಲಿನ ಪೊಲೀಸ್ ಘಟಕವು ಅಮಿನಿ ಅವರನ್ನು ಬಂಧಿಸಿತು. ಕಾರಣ,  ಸಾರ್ವಜನಿಕ ವಾಗಿ ಹಿಜಾಬ್ ಧರಿಸ ಬೇಕೆಂದು ಕಡ್ಡಾಯಗೊಳಿಸಲಾಗಿದ್ದರೂ ಅಮಿನಿ ಧರಿಸಿರಲಿಲ್ಲ. ಹೀಗಾಗಿ ಆಕೆ ಬಂಧನಕ್ಕೆ ಒಳಗಾಗ ಬೇಕಾ ಯಿತು. ಆದರೆ ಬಂಧನದ ಹೆಸರಲ್ಲಿ ನಡೆದದ್ದು ದಾಳಿಯೇ ಎನ್ನಬೇಕು. ಏಕೆಂದರೆ ಪೊಲೀಸ್ ಕಸ್ಟಡಿಯಲ್ಲಿದ್ದ ಮಹ್ಸಾ ಅಮಿನಿ ಸಾವನ್ನಪ್ಪಿದರು.
ಹೃದಯಾಘಾತದಿಂದ ಆಕೆ ಕುಸಿದುಬಿದ್ದರು ಎಂದು ಸಮಜಾಯಿಷಿ ನೀಡಿದ ಅಲ್ಲಿನ ಅಽಕಾರಿಗಳು ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಅವರು ೩ ದಿನ ಇದ್ದರೂ, ಅಂತಿಮವಾಗಿ ಸೆ.೧೬ರಂದು ಕೊನೆಯುಸಿರೆಳೆದರು. ಈ ಘಟನೆಯಿಂದ ಕೆರಳಿದ ಸಾವಿರಾರು ಇರಾನಿಯನ್ನರು, ಆಕೆಯ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದರು. ಪ್ರತಿಭಟನೆಯ ಬೆಂಕಿ ಇರಾನ್‌ನಲ್ಲಿ ವ್ಯಾಪಿಸಿದೆ. ಅಲ್ಲಿನ ಬಹುತೇಕ ನಗರ, ಪಟ್ಟಣ ಗಳಲ್ಲಿ ಮಹಿಳೆಯರು ಬೀದಿಗಳಿದು ಪ್ರತಿಭಟಿಸುತ್ತಿದ್ದಾರೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾವಣೆಗೊಂಡು, ಹಗಲು-ರಾತ್ರಿ ಎನ್ನದೆ ಕೆರ್ಮಾನ್ನಗರದ ಆಜಾದಿ ವೃತ್ತದಲ್ಲಿ ನಿಂತು, ‘ಸರ್ವಾಧಿಕಾರ ನಶಿಸಲಿ, ಹಿಜಾಬ್ ಕಟ್ಟುಪಾಡು ಕೊನೆಯಾಗಲಿ’ ಎಂದು ಘೋಷಣೆ ಕೂಗುತ್ತಿದ್ದಾರೆ. ಕತ್ತರಿ ಹಿಡಿದುಕೂದಲು ಕತ್ತರಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸಿದ್ದಾರೆ.
ಹಿಜಾಬ್ ಸುಟ್ಟು ಆಕ್ರೋಶ ಕಾರುತ್ತಿದ್ದಾರೆ. ‘ನಾವು ಯುದ್ಧಭೂಮಿಯಲ್ಲಿ ಹುಟ್ಟಿದವರು, ಬನ್ನಿ ನಮ್ಮನ್ನು ಎದುರಿಸಿ’ ಎಂದು ಸರಕಾರಕ್ಕೆ ಸವಾಲು ಹಾಕುತ್ತಿದ್ದಾರೆ. ಈ ಪ್ರತಿಭಟನೆ ದಮನಿಸಲು ರೈಸಿ ಸರಕಾರ ಬಲಪ್ರಯೋಗಕ್ಕೆ ಮುಂದಾಗಿದೆ, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಈವರೆಗೂ ಪೊಲೀಸರ ಗುಂಡಿಗೆ ದೇಶದ ವಿವಿಧೆಡೆ ೮ ಮಂದಿ ಬಲಿಯಾಗಿದ್ದಾರೆ ಎನ್ನುತ್ತದೆ ಸುದ್ದಿ. ಇಷ್ಟಾಗಿಯೂ ಪ್ರತಿಭಟನಕಾರರು ಹಿಮ್ಮೆಟ್ಟಲು ಸಿದ್ಧರಿಲ್ಲ.ಇದು ಇರಾನ್ ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
1979ರ ಕ್ರಾಂತಿಯ ನಂತರ ಹೇರಲಾದ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ, ಮಹಿಳೆಯರು ತಮ್ಮ ತಲೆಗೂದಲನ್ನು ಮುಚ್ಚಲು ಹಾಗೂ ವ್ಯಕ್ತಿಗಳನ್ನುಮರೆಮಾಚಲು ಉದ್ದವಾದ, ಸಡಿಲವಾದ ಬಟ್ಟೆಗಳನ್ನು ಧರಿಸಬೇಕೆಂಬ ನಿರ್ಬಂಧವನ್ನು ಹೇರಲಾಗಿದೆ. ಇದನ್ನು ಉಲ್ಲಂಘಿಸಿದರೆ ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನವನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ.
1979ರಲ್ಲಿ ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿಯಾಗುವುದಕ್ಕೂ ಮುಂಚೆ ಇದ್ದ ಸ್ಥಿತಿಗೂ ಈಗಿರುವ ಸ್ಥಿತಿಗೂ ಅಗಾಧ ವ್ಯತ್ಯಾಸವಿದೆ. ಕಟ್ಟರ್‌ವಾದಿ ಮುಸ್ಲಿಂ ದೇಶವೆಂದೇ ಹೆಸರಾದ ಇರಾನ್‌ನಲ್ಲಿ ಇದೀಗ ಕ್ರಾಂತಿಯೊಂದು ನಡೆಯುತ್ತಿದೆ. ಮಹ್ಸಾ ಅಮಿನಿ ‘ಲಾಕಪ್ ಡೆತ್’ ನಂತರ, ಹಿಜಾಬ್ ವಿರುದ್ಧ ಸಿಡಿದೆದ್ದಿ ರುವ ಮಹಿಳಾಲೋಕ ಅಲ್ಲಿನ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಹಿಜಾಬ್ ವಿರುದ್ಧವಾಗಿ ಈಗ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಅವುಗಳ ತೀವ್ರತೆ ನಿಜಕ್ಕೂ ಅಚ್ಚರಿಮೂಡಿಸುವಂತಿದೆ.
ಇರಾನ್ ಸರಕಾರದ ವಿರುದ್ಧದ ದಂಗೆಯೆಂದೇ ಪರಿಗಣಿಸಲ್ಪಟ್ಟಿರುವ ಈ ಪ್ರತಿಭಟನೆಯಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಭೇದವಿಲ್ಲದೆ ಸಕ್ರಿಯ ಪಾಲ್ಗೊಳ್ಳುವಿಕೆ ಕಂಡುಬರುತ್ತಿದೆ. ಪ್ರತಿಭಟನೆಯ ತೀವ್ರತೆ ಹೆಚ್ಚಾದಂತೆ ಹಿಂಸಾಚಾರವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿಭಟನಾಕಾರ ರನ್ನು ಕೊಲ್ಲಲು ಸರಕಾರ ಮುಂದಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮಹ್ಸಾ ಅಮಿನಿ ಅವರು ಕುಸಿದು ಬೀಳುತ್ತಿರುವ ವಿಡಿಯೋವನ್ನು ಸ್ಥಳೀಯರು ಬಿಡುಗಡೆ ಮಾಡಿದ್ದು, ಸಾವಿಗೀಡಾಗುವಷ್ಟರ ಮಟ್ಟಿಗೆ ಮಹ್ಸಾ ಆರೋಗ್ಯ ಕುಸಿದಿರಲಿಲ್ಲ, ಪೊಲೀಸರ ಬರ್ಬರತೆಯಿಂದಾಗಿಯೇ ಆಕೆಸತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ ಹಾಗೂ ತನ್ಮೂಲಕ ಪೊಲೀಸರ ಸಮರ್ಥನೆಯನ್ನೂ ಬಲವಾಗಿ ಶಂಕಿಸಿದ್ದಾರೆ.
ಪೊಲೀಸರು ಹೇಳಿಕೊಂಡಿರುವಂತೆ ಮಹ್ಸಾ ಅಮ್ನಿಗೆ ಹೃದಯ ಸಂಬಂಧಿ ಕಾಯಿಲೆಯೇನೂ ಇರಲಿಲ್ಲ, ಸಾಮಾನ್ಯ ಸ್ಥಿತಿಯಲ್ಲೇ ಇದ್ದರು ಎಂದು ಅವರಕುಟುಂಬಿಕರೂ ಸ್ಪಷ್ಟಪಡಿಸಿದ್ದಾರೆ. ಇರಾನಿನ ಹಲವಾರು ವೈದ್ಯರು ಮಹ್ಸಾ ಅವರ ಸ್ಥಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಆಕೆ ಪೊಲೀಸ್ ಠಾಣೆಗೆ ಆಗಮಿಸುವ ಹಾಗೂ ಆಸ್ಪತ್ರೆಗೆ ತೆರಳುವ ನಡುವೆ ಏನು ಬೆಳವಣಿಗೆಯಾಯಿತು ಎಂಬುದಿನ್ನೂ ಸ್ಪಷ್ಟವಾಗಿಲ್ಲ.
ಮಹ್ಸಾ ಅಮಿನಿಯವರು ಅನುಮಾನಾಸ್ಪದವಾಗಿ ಸತ್ತಿರುವುದಕ್ಕೆ ಕಾರಣವಾದ ಸಂದರ್ಭಗಳು, ಕಸ್ಟಡಿಯಲ್ಲಿನ ಚಿತ್ರಹಿಂಸೆ ಮತ್ತು ಇತರ ಕೆಟ್ಟ ವರ್ತನೆಯ ಆರೋಪಗಳನ್ನು ಒಳಗೊಂಡಿದ್ದು ಇವುಗಳ ಕ್ರಿಮಿನಲ್ ತನಿಖೆಯಾಗಬೇಕು ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಆಗ್ರಹಿಸಿದೆ. ಹೀಗೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ, ಅವರ ಮೂಲಭೂತ ಹಕ್ಕುಗಳಿಗೆ ಸಂಚಕಾರ ತಂದಿರುವ ಇರಾನ್ ಪ್ರಭುತ್ವದ ಮೇಲೆ ಜಗತ್ತಿನ ವಿವಿಧ ದೇಶಗಳು ಅಸಮಾಧಾನಗೊಂಡಿ ರುವುದು ದಿಟ.
ಹೀಗಾಗಿ, ಶಾಂತಿ, ನೆಮ್ಮದಿ, ಸಹಿಷ್ಣುತೆ, ಲಿಂಗ ಸಮಾನತೆಯಂಥ ಅಪೇಕ್ಷಣೀಯ ಅಂಶಗಳು ಅಲ್ಲಿ ಆದಷ್ಟು ಬೇಗ ನೆಲೆಗೊಳ್ಳಲಿ ಎಂದು ಅವು ಆಶಿಸುತ್ತಿವೆ. ಇರಾನ್ ಪ್ರಭುತ್ವ ಇನ್ನಾದರೂ ಬರ್ಬರತೆಯ ಪ್ರಭಾವದಿಂದ ಹೊರಬಿದ್ದು ಮಾನವೀಯತೆಯ ಅಮೃತಸಿಂಚನಕ್ಕೆ ಒಡ್ಡಿಕೊಳ್ಳಬೇಕಿದೆ, ದೇಶದೆಲ್ಲೆಡೆ ಅದನ್ನು ಪಸರಿಸಬೇಕಿದೆ. ಅದು ಈ ಕ್ಷಣದ ಅನಿವಾಯತೆಯೂ ಹೌದು.