ಮೂಢನಂಬಿಕೆಯೋ, ರೂಢನಂಬಿಕೆಯೋ ?!
ನಿಲುವುಗನ್ನಡಿ
ಯಗಟಿ ರಘು ನಾಡಿಗ್‌
‘ಊಟ ತನ್ನಿಚ್ಛೆ, ನೋಟ ಪರರಿಚ್ಛೆ’ ಎಂಬುದೊಂದು ಲೋಕಾರೂಢಿಯ ಮಾತು. ರುಚಿ-ಅಭಿರುಚಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತವೆ. ಒಬ್ಬರಿಗೆ ಇಷ್ಟವಾದ ತಿಂಡಿ ಮತ್ತೊಬ್ಬರಿಗೆ ಇಷ್ಟವಾಗಬೇಕು ಎಂದೇನಿಲ್ಲ.
ತನ್ನಿಷ್ಟದ ಉಡುಗೆ ಮತ್ತೊಬ್ಬರ ‘ಮೆಚ್ಚುಡುಗೆ’ಯೇ ಆಗಬೇಕೆಂದಿಲ್ಲ. ರುಚಿ-ಅಭಿರುಚಿಗಳ ವಿಷಯವೇ ಹೀಗಿರುವಾಗ, ಕೆಲ ರೂಢಿಗತ ಆಚರಣೆಗಳ ಕುರಿತಾದ ಅಭಿಪ್ರಾಯಗಳೂ ಒಂದೇ ಆಗಿರಬೇಕು ಎಂದೇನಿಲ್ಲವಲ್ಲ? ಹೀಗಾಗಿ ಒಬ್ಬರಿಗೆ ‘ನಂಬಿಕೆ’ ಅನ್ನಿಸಿದ್ದು ಮತ್ತೊಬ್ಬರಿಗೆ ‘ಮೂಢನಂಬಿಕೆ’ ಅನ್ನಿಸಬಹುದು. ಆದರೆ ಮೂಢನಂಬಿಕೆಯ ಹಣೆಪಟ್ಟಿ ಹೊಂದಿರುವ ಕೆಲ ವಿಷಯ ಗಳು, ಅವನ್ನು ಅನುಸರಿಸುವ ಕೆಲವರಿಂದ ಪ್ರಮಾಣಿತಗೊಂಡು ರೂಢನಂಬಿಕೆಗಳಾಗಿ ರೂಢಿಗತವಾಗುತ್ತವೆ, ಕ್ರಮೇಣ ಸಮಾಜದ ಇನ್ನಿತರರಿಂದ ಅನುಸರಿಸಲ್ಪಡುತ್ತವೆ.
ಇದನ್ನು ಸೂಕ್ತ ಕಥೆಯೊಂದರ ಮೂಲಕ ಹೇಳಿದರೆ ಒಳ್ಳೆಯದೇನೋ? ಅದಕ್ಕೀಗ ನಾವೆಲ್ಲ ದ್ವಾಪರಯುಗದ ‘ಫ್ಲ್ಯಾಷ್‌ಬ್ಯಾಕ್’ಗೆ ತೆರಳಬೇಕು… ಶ್ರೀಕೃಷ್ಣ ಮತ್ತು ಕುಚೇಲರ ಕಥೆ ನಿಮಗೆಲ್ಲ ಗೊತ್ತು. ಶ್ರೀಕೃಷ್ಣ ರಾಜವಂಶ ದಿಂದ ಬಂದಿದ್ದರೂ, ಕುಚೇಲ ಕಡುಬಡವನಾಗಿದ್ದರೂ ಈ ಸಾಮಾಜಿಕ ಅಸಮತೋಲನ ಅವರ ಸ್ನೇಹಕ್ಕೆ ಅಡ್ಡಿಯಾಗಿರಲಿಲ್ಲ. ಸಾಂದೀಪನಿ ಮಹರ್ಷಿಯ ಬಳಿ ವಿದ್ಯಾಭ್ಯಾಸ ಮಾಡಿದ ನಂತರ ಇಬ್ಬರೂ ತಂತಮ್ಮ ನೆಲೆಗಳನ್ನು ಸೇರಿಕೊಳ್ಳುತ್ತಾರೆ.
ಕಾಲಕ್ರಮೇಣ ಶ್ರೀಕೃಷ್ಣ ರಾಜನಾದರೆ, ಕುಚೇಲ ಕಡುಬಡವನಾಗಿಯೇ ದಿನದೂಡುತ್ತಿರುತ್ತಾನೆ. ಬಡತನದ ಬೇಗೆ ತಾಳಲಾರದ ಕುಚೇಲನ ಪತ್ನಿ ಒಮ್ಮೆ, ‘ಶ್ರೀಕೃಷ್ಣನಂಥ ಶ್ರೀಮಂತನೇ ನಿಮ್ಮ ಸ್ನೇಹಿತ. ಅವನಿಂದ ಧನ-ಕನಕವನ್ನಾದರೂ ಕೇಳಿ ತರಬಾ ರದೇ?’ ಎಂದಾಗ ಕುಚೇಲ ಒಲ್ಲದ ಮನಸ್ಸಿನಲ್ಲೇ ಹೊರಡುತ್ತಾನೆ. ವಾಸ್ತವವಾಗಿ ಕೃಷ್ಣನನ್ನು ಕಣ್ತುಂಬ ತುಂಬಿಕೊಳ್ಳುವ ಬಯಕೆ ಅವನಲ್ಲಿರುತ್ತದೆಯೇ ವಿನಾ, ಧನ-ಕನಕದ ಆಸೆಯಿರುವುದಿಲ್ಲ.
ಶ್ರೀಕೃಷ್ಣನ ಸ್ನೇಹ-ಕೃಪೆ ಎರಡೇ ಶಾಶ್ವತ ಎಂಬ ಭಾವನೆ ಅವನ ಚಿತ್ತಭಿತ್ತಿಯಲ್ಲಿ ಹರಳುಗಟ್ಟಿರುತ್ತದೆ. ಹಾಗಂತ ಬರಿಗೈಲಿ ಹೋಗಲಾಗದೆ ಏನಾದರೂ ಕಾಣಿಕೆ ಕೊಡಲೆಂದು ಮನೆಯೆಲ್ಲ ಹುಡುಕಿದರೂ ಏನೂ ಸಿಗುವುದಿಲ್ಲ. ಕೊನೆಗೆ ಒಂದು ಹಿಡಿ ಅವಲಕ್ಕಿಯನ್ನಷ್ಟೇ ವಸದಂಚಲ್ಲಿ ಕಟ್ಟಿಕೊಂಡು ಹೊರಡುತ್ತಾನೆ ಕುಚೇಲ. ವರ್ಷಗಳ ನಂತರ ಬಂದ ಬಾಲ್ಯಸಖನಿಗೆ ಆದರಾತಿಥ್ಯಗಳ ಮಳೆಯನ್ನೇ ಸುರಿಸುತ್ತಾನೆ ಕೃಷ್ಣ. ಅವನ ಪ್ರೀತಿ-ವಿಶ್ವಾಸಗಳು ಕುಚೇಲನ ಬಾಯಿಕಟ್ಟಿಬಿಡುತ್ತವೆ. ಬಂದಿದ್ದ ಉದ್ದೇಶವೂ ಮರೆತುಹೋಗುತ್ತದೆ. ‘ನನಗಾಗಿ ಏನು ತಂದಿರುವೆ?’ ಎಂಬ ಕೃಷ್ಣನ ಪ್ರಶ್ನಾಪೂರ್ವಕ ಬಯಕೆಯನ್ನು ಹಿಡಿಅವಲಕ್ಕಿಯಿಂದ ಈಡೇರಿಸಲು ಕುಚೇಲನಿಗೆ ಸಂಕೋಚವಾಗುತ್ತದೆ.
ಅವನ ಹಿಂಜರಿಕೆ ಅರಿತ ಕೃಷ್ಣ, ‘ಏನಾದರೂ ತಂದೇ ತಂದಿರುತ್ತೀಯ’ ಎನ್ನುತ್ತ ಸ್ನೇಹದ ಸದರದಿಂದ ಕುಚೇಲನ ವಸವನ್ನು ಹಿಡಿದೆಳೆದು, ಅದರಲ್ಲಿದ್ದ ಅವಲಕ್ಕಿಯನ್ನು ಹೊರಸೆಳೆದು ಜನ್ಮಜನ್ಮಾಂತರಗಳಿಂದ ಕಾದಿದ್ದನೋ ಹಸಿದಿದ್ದನೋ ಎಂಬಂತೆ ಅನುಭವಿಸಿ ತಿನ್ನುತ್ತಾನೆ, ತೃಪ್ತನಾಗುತ್ತಾನೆ. ನಂತರ, ಕುಚೇಲನದ ಆಗಮನದ ಕಾರಣ ಕೇಳುತ್ತಾನೆ. ಆದರೆ ನಿಜಕಾರಣ ಹೇಳಲಾಗದ ಕುಚೇಲ, ‘ಹೀಗೇ ನಿನ್ನನ್ನು ನೋಡುವ ಬಯಕೆಯಾಗಿತ್ತು ಬಂದೆ, ಅಷ್ಟೇ’ ಎಂದು ಅಲ್ಲಿಂದ ಹೊರಡುತ್ತಾನೆ. ಮನೆಗೆ ಬರುವಷ್ಟರಲ್ಲಿ ಅಗಾಧ ಬದಲಾವಣೆಯಾಗಿರುತ್ತದೆ. ತನ್ನ ಗುಡಿಸಲಿದ್ದ ಜಾಗದಲ್ಲಿ ಭವ್ಯಮಹಲು ಎದ್ದುನಿಂತಿರುವುದು,ಅದರಲ್ಲಿ ಸಮೃದ್ಧಿ ತುಳುಕಾಡುತ್ತಿರುವುದು ಕುಚೇಲನಿಗೆ ಕಾಣುತ್ತದೆ.
ಬಾಯಿಬಿಟ್ಟು ಕೇಳದಿದ್ದರೂ ಕೃಷ್ಣ ಎಲ್ಲವನ್ನೂ ಗ್ರಹಿಸಿ ತನಗಾಗಿ ಕೃಪಾದೃಷ್ಟಿ ಬೀರಿದ್ದು ಕುಚೇಲನಿಗೆ ಅರ್ಥವಾಗಿ ಧನ್ಯನಾ ಗುತ್ತಾನೆ. ಇದು ನಿಮಗೆ ಗೊತ್ತಿರುವಂಥದ್ದೇ, ಮುಂದಿನ ಕಥೆ ಕೇಳಿ: ಹೀಗೆ ಕೃಷ್ಣನಿಂದ ಅನುಗ್ರಹೀತನಾದ ಕುಚೇಲ ಕುಟುಂಬ ದೊಡನೆ ಆನಂದದಿಂದ ಜೀವನ ಸಾಗಿಸುತ್ತಿರುತ್ತಾನೆ. ಧನ-ಕನಕಗಳಿಗೇನೂ ಕೊರತೆಯಿರುವುದಿಲ್ಲ. ಕೆಲದಿನಗಳಲ್ಲೇ ಕುಚೇಲನಿಗೆ ಒಳಗಿನಿಂದ ಏನೋ ಚುಚ್ಚುತ್ತಿರುವಂತೆ ಭಾಸವಾಗುತ್ತದೆ.
‘ಈ ಶ್ರೀಮಂತಿಕೆ, ಆಡಂಬರವೆಲ್ಲವೂ ನಶ್ವರ, ಕೃಷ್ಣನೊಬ್ಬನೇ ಶಾಶ್ವತ; ಅವನ ನಾಮಸ್ಮರಣೆಯಲ್ಲಿದ್ದಾಗ ಬಡತನವಿದ್ದರೂನೆಮ್ಮದಿಯಾಗಿದ್ದೆವು. ಶ್ರೀಮಂತಿಕೆಯಿಂದ ಸುಖ ಸಿಕ್ಕಿಬಿಡುತ್ತದೆ ಎಂಬುದು ಬರೀ ಭ್ರಮೆ’ ಎಂಬ ಭಾವ ಕುಚೇಲನಲ್ಲಿ ಸುರಿಸು ತ್ತದೆ. ತಡಮಾಡದೆ ಕೃಷ್ಣನನ್ನು ಭೇಟಿಯಾಗಿ, ತನ್ನ ಅನುಭವವನ್ನೆಲ್ಲ ಹೇಳಿಕೊಳ್ಳುವ ಕುಚೇಲ, ‘ಮಹಾನುಭಾವಾ, ಕೇವಲ ನಿನ್ನ ನಾಮಸ್ಮರಣೆಯಲ್ಲಿದ್ದಾಗ ಬಡತನದಲ್ಲೂ ಆನಂದವಿತ್ತು.
ಈಗ ಬಂದಿರುವ ಶ್ರೀಮಂತಿಕೆಯಿಂದ ನೆಮ್ಮದಿಯೇ ಹಾಳಾಗಿದೆ. ಅದನ್ನೆಲ್ಲ ಹಿಂತೆಗೆದುಕೊಂಡು ನಮಗೆ ಮತ್ತೆ ಮೊದಲಿನ ಸ್ಥಿತಿಯನ್ನೇ ನೀಡು’ ಎಂದು ಕೇಳುತ್ತಾನೆ. ಆಗ ಕೃಷ್ಣ, ‘ನಾನೇ ಅನುಗ್ರಹಿಸಿದ್ದನ್ನು ಹೇಗೆ ಹಿಂದಕ್ಕೆ ತೆಗೆದುಕೊಳ್ಳಲಿ? ಬೇಕಿದ್ದರೆ ನಿನಗೆ ಬಂದಿರುವ ಶ್ರೀಮಂತಿಕೆ ತಾನಾಗಿಯೇ ಹೊರಟುಹೋಗುವಂಥ ಉಪಾಯ ಹೇಳಬಲ್ಲೆ’ ಎನ್ನುತ್ತಾನೆ. ಉತ್ಸುಕ ಕುಚೇಲ ‘ಏನು?’ ಎಂಬಂತೆ ಮುಖಮಾಡಿದಾಗ, ‘ನಿನ್ನ ಮನೆಯ ಬಾಗಿಲುಗಳ ಮೇಲೆ ಅಂಗವಸಗಳನ್ನು ಹಾಕುವ ಪರಿಪಾಠ ಬೆಳೆಸಿಕೋ, ಮನೆಯ ಶ್ರೀಮಂತಿಕೆ ತಾನೇತಾನಾಗಿ ಹೊರಟುಹೋಗುತ್ತದೆ’ ಎಂದು ಕೃಷ್ಣ ಸಲಹೆ ನೀಡುತ್ತಾನೆ.
ಅವನಿಗೆ ಕೈಮುಗಿದು ಕುಚೇಲ ಮನೆಯಹಾದಿ ಹಿಡಿಯುತ್ತಾನೆ…. ಎಂಬಲ್ಲಿಗೆ ಕಥೆ ತಾತ್ಕಾಲಿಕವಾಗಿ ಮುಗಿಯುತ್ತದೆ.ಈ ಕಥೆಯಲ್ಲಿ ಹೇಳಿರುವಂತೆ ವಾಸದ ಮನೆಯ ಬಾಗಿಲುಗಳ ಮೇಲೆ ಅಂಗವಸಗಳನ್ನು (ಟವೆಲ್/ಅಂಗಿ/ಲುಂಗಿ/ಪ್ಯಾಂಟು ಇತ್ಯಾದಿ) ಹಾಕಬಾರದು; ಅದು ಮನೆಯಲ್ಲಿರುವವರಿಗೆ ಶ್ರೇಯಸ್ಕರವಲ್ಲ ಎಂಬ ನಂಬಿಕೆಯು ಮೂಢನಂಬಿಕೆ ಎನಿಸದೆ ಬಹಳಷ್ಟು ಜನರಿಂದ ಅನುಸರಿಸಲ್ಪಡುತ್ತಿದೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಷಯವಾದರೂ, ಕಷ್ಟಪಟ್ಟು ಗಳಿಸಿದ ಹಣ ವಿನಾಕಾರಣ ಸೋರಿ ಹೋಗದಂತೆ ನೋಡಿಕೊಳ್ಳಲು ಈ ಚಿಕ್ಕ-ಚೊಕ್ಕ ಕ್ರಮವನ್ನು ಕೆ ಅನುಸರಿಸಬಾರದು ಎಂಬುದು ಈಗಾಗಲೆ ಇದನ್ನು ನಂಬಿ ಅನುಸರಿಸುತ್ತಿರುವವರ ಅಭಿಮತ.
ಹಾಗಾದರೆ, ಮನೆಬಾಗಿಲುಗಳ ಮೇಲೆ ಬಟ್ಟೆ ಹಾಕಿದವರ ಮನೆಗಳೆಲ್ಲ ಬಡತನದಿಂದ ಕೂಡಿವೆಯಾ? ಹಾಕದವರ ಮನೆಗಳಲ್ಲಿಶ್ರೀಮಂತಿಕೆ ತಾಂಡವವಾಡುತ್ತಿದೆಯಾ? ಎಂದು ಪ್ರಶ್ನಿಸಿದರೆ ಅದಕ್ಕಿಲ್ಲಿ ಉತ್ತರವಿಲ್ಲ. ಏಕೆಂದರೆ, ಈ ಮೊದಲೇ ತಿಳಿಸಿದಂತೆಇದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಈ ವಿಧಾನದ ಅನುಸರಣೆಯಿಂದ ಲಾಭವಂತೂ ಆಗುತ್ತದೆ, ನಷ್ಟವೇನೂ ಆಗುವು ದಿಲ್ಲ ಎಂಬುದು ಇದನ್ನು ನಂಬಿದವರ ಅಫಿಡವಿಟ್ಟು, ಸರ್ಟಿಫಿಕೇಟು. ಅಷ್ಟಕ್ಕೂ, ‘ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ’ ಎಂದು ಬಲ್ಲವರೇ ಹೇಳಿಲ್ಲವೇ? ಅದು ನಮ್ಮ ಮನೆಯ ಮೊದಲ ಮೊಮ್ಮಗು. ಅದರ ಆರೈಕೆ, ಅದರಮ್ಮನ ಬಾಣಂತನವನ್ನು ನಮ್ಮಮ್ಮನೇ ಮುತುವರ್ಜಿ ವಹಿಸಿ ಮಾಡುತ್ತಿದ್ದರು.
ಸಂಭ್ರಮ-ಸಡಗರವೆಂದರೆ ಬಂದುಹೋಗುವವರಿಗೆ ಕೇಳಬೇಕೇ? ಹಾಗೆ ಬಂದವರೆಲ್ಲ ಮಗುವನ್ನು ‘ಬಿಟ್ಟ ಕಣ್ಣುಗಳಿಂದ’ ನೋಡಿ, ‘ಶಕ್ಯಾನುಸಾರ’ ಮುದ್ದಿಸಿ ಹೋಗುತ್ತಿದ್ದರು. ಒಮ್ಮೆ ಅದೇನಾಯ್ತೋ ಗೊತ್ತಿಲ್ಲ, ಕೂಸು ವಿಪರೀತ ರಚ್ಚೆಹಿಡಿದು ಅಳಲು ಶುರುಮಾಡಿತು. ತೊಡಿಸಿರುವ ಬಟ್ಟೆಯೇನಾದರೂ ಮಗುವಿಗೆ ಚುಚ್ಚಿರಬಹುದೇ ಎಂದು ಹುಡುಕಾಡಿದ್ದಾಯಿತು, ಇರುವೆಯೇ ನಾದರೂ ಕಚ್ಚಿರಬಹುದೇ ಎಂದು ಆ ಬಟ್ಟೆ ಬಿಚ್ಚಿ ತಡಕಾಡಿದ್ದಾಯಿತು.
ಅಂಥ ಏನೂ ತೊಂದರೆ ಕಾಣಲಿಲ್ಲ. ಕೂಸಿನ ಕಣ್ಣೀರು ನಿಲ್ಲಲಿಲ್ಲ. ಅಷ್ಟೊತ್ತಿಗೆ, ಪಕ್ಕದ ಮನೆಗೆ ಹೋಗಿದ್ದ ಅಮ್ಮ ಬಂದರು, ಏನು ನಡೆದಿರಬಹುದು ಎಂಬುದನ್ನು ಕ್ಷಿಪ್ರವಾಗಿ ಗ್ರಹಿಸಿದ ಅವರು ಒಂದಷ್ಟು ಹಂಚಿಕಡ್ಡಿಗಳನ್ನು ಹೊತ್ತಿಸಿತಂದು ‘ಹಾದಿ ಕಣ್ಣು, ಬೀದಿ ಕಣ್ಣು, ಪೀಡೆ ಕಣ್ಣು, ಪಿಶಾಚಿ ಕಣ್ಣು’ ಎಂದೆಲ್ಲ ಹೇಳುತ್ತ ಕೂಸಿಗೆ ತಲೆಯಿಂದ ಪಾದದವರೆಗೆ ಮೂರು ಸಲ ನೀವಾಳಿಸಿ ಹಿತ್ತಿಲು ಬಾಗಿಲ ಮೂಲೆಯಲ್ಲಿರಿಸಿದರು. ದೀಪಾವಳಿಯಲ್ಲಿ ಹಚ್ಚುವ ಸರ ಪಟಾಕಿಯಂತೆ ಸದ್ದುಮಾಡುತ್ತ ಅದು ಉರಿದುಹೋಯ್ತು.
ಅದರ ಚಿಟಿಕೆ ಬೂದಿ ತಂದು ಅಮ್ಮ ಕೂಸಿನ ಹೊಟ್ಟೆಗೆ ಲೇಪಿಸಿದರು. ಅದೇನಾಶ್ಚರ್ಯ! ಕಣ್ಣೀರುಗರೆಯುತ್ತಿದ್ದ ಕೂಸುಕೆಲಕ್ಷಣದಲ್ಲೇ ‘ಕಿಲಕಿಲ’ ಅನ್ನತೊಡಗಿತು. ಅಲ್ಲಿ ಜಮೆ ಯಾಗಿದ್ದ ನಮ್ಮಂಥವರಿಗೆಲ್ಲ ಆನಂದ-ಅಚ್ಚರಿ. ಅಮ್ಮನೇ ಮುಂದು ವರಿದು, ‘ಬಟ್ಟೆಯೂ ಚುಚ್ಚಿಲ್ಲ, ಇರುವೆಯೂ ಕಚ್ಚಿಲ್ಲ; ಮಗುವಿಗೆ ದೃಷ್ಟಿಯಾಗಿತ್ತು, ಅಷ್ಟೇ’ ಅಂದರು. ಆದರೆ ‘ದೃಷ್ಟಿ’ ಆಗುವು ದೆಂದರೇನು? ಬೆಂಕಿ ತಾಗಿಸಿ ಕೂಸಿಗೆ ನೀವಾಳಿಸಿದ ಹಂಚಿಕಡ್ಡಿ ಅಷ್ಟು ಜೋರಾಗಿ ಸದ್ದುಮಾಡಿದ್ದು ಹೇಗೆ? ದೃಷ್ಟಿದೋಷ ಹೇಗೆ ನಿವಾರಣೆ ಯಾಯಿತು? ಎಂಬ ಪ್ರಶ್ನೆಗಳು ಹಾಗೇ ಉಳಿದವು.
ಇದು ತುಂಬ ಅಪರೂಪದ-ಅನನ್ಯವಾದ ನಿದರ್ಶನವೇನೂ ಅಲ್ಲ. ಇಂಥ ಪರಿಹಾರಗಳ ಹಿಂದಿರಬಹುದಾದ ರಹಸ್ಯವೇನುಎಂಬುದು ಕೈಗೆಟುಕದ ನಿಽ ಎಂದು ಹೇಳಲಿಕ್ಕಷ್ಟೇ ಇದನ್ನು ಉದಾಹರಿಸಿದೆ. ಹೇಳುತ್ತ ಹೋದರೆ ಇಂಥ ನಂಬಿಕೆಗಳು/ಆಚರಣೆಗಳು ನಮ್ಮಲ್ಲಿ ಸಾಕಷ್ಟು ಸಿಗುತ್ತವೆ. ಆದರೆ ಎಲ್ಲದಕ್ಕೂ ವೈಜ್ಞಾನಿಕ ನೆಲಗಟ್ಟು ಅಥವಾ ಪುರಾವೆ ಅಥವಾ ವಿವರಣೆ ಕೊಡೋದು ಕಷ್ಟ. ಅವನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸಲು, ‘ಹೌದು-ಇಲ್ಲ’ ಎಂದು ಗೆರೆಕೊಯ್ದ ಹಾಗೆ ಸಾಧಿಸಿ ತೋರಿಸಲು ಆಗುವುದಿಲ್ಲ. ಏಕೆಂದರೆ ಅವು ಅನುಭವಕ್ಕಷ್ಟೇ ಬಂದ/ ಬರುವ ನಂಬಿಕೆಗಳಾಗಿರುತ್ತವೆ.
ಪಟ್ಟುಹಿಡಿದು ಪರೀಕ್ಷಿಸಲು ಹೋದವರಿಗೆ ಅವು ಉತ್ತರ ಹೇಳುವುದಿಲ್ಲ, ರಹಸ್ಯ ಬಿಟ್ಟುಕೊಡುವುದಿಲ್ಲ; ಆದರೆ ನಂಬಿದವರಿಗೆ ಅವು ಫಲ ನೀಡುತ್ತವೆ ಅಥವಾ ನಂಬುವರು ಹಾಗಂತ ಭಾವಿಸುತ್ತಾರೆ. ಹೀಗಾಗಿ ಇವನ್ನು ‘ನಂಬಿಕೆಗಳು’ ಎಂದು ಕರೆದುಸುಮ್ಮನಾಗಬೇಕೋ? ಅಥವಾ ಈಗಾಗಲೇ ಕೆಲವರಿಂದ ಆಚರಿಸಲ್ಪಡುತ್ತಿರುವುದರಿಂದ ಅವನ್ನು ‘ರೂಢನಂಬಿಕೆಗಳು’ಎಂದು ವರ್ಗೀಕರಿಸಬೇಕೋ? ಅಥವಾ ‘ಮೂಢನಂಬಿಕೆಗಳು’ ಎಂಬ ಹಣೆಪಟ್ಟಿ ಲಗತ್ತಿಸಬೇಕೋ? ಎಂಬುದು ಪ್ರಶ್ನೆ ಯಾಗೇ ಉಳಿದುಬಿಡುತ್ತದೆ.