ಭಾರತದ ಪರವಾಗಿರುವ ಜಾಗತಿಕ ಸಮೀಕರಣ
ಉಜ್ವಲ ಭಾರತ
ಗಣೇಶ್ ಭಟ್, ವಾರಣಾಸಿ
ಕಳೆದೆರಡು ವರ್ಷಗಳಲ್ಲಿ ಯಾರ ಒತ್ತಡಕ್ಕೂ ಮಣಿಯದೆ, ಭಾರತ-ಕೇಂದ್ರಿತ ವಿದೇಶಾಂಗ ಮತ್ತು ಆರ್ಥಿಕ ನೀತಿಯನ್ನು ಪಾಲಿಸಿದೆ ಭಾರತ. ಕೋವಿಡ್ಅಪ್ಪಳಿಸಿದಾಗ ಅಮೆರಿಕದ ವ್ಯಾಕ್ಸಿನ್ ಕಂಪನಿಗಳಿಂದ ಒತ್ತಡವಿದ್ದರೂ ಮಣಿಯದೆ, ಸ್ವದೇಶಿ ನಿರ್ಮಿತ ವ್ಯಾಕ್ಸಿನ್‌ಗಳನ್ನೇ ಪ್ರಜೆ ಗಳಿಗೆ ಪೂರೈಸಿತು ಭಾರತ.
ಈ ಬಾರಿಯ ವಿಶ್ವ ಸಂಸ್ಥೆಯ ವಾರ್ಷಿಕ ಅಧಿವೇಶನ ಭಾರತಕ್ಕೆ ಶುಭದಾಯಕವಾಗಿ ಪರಿಣಮಿಸಿದೆ. ಅಧಿವೇಶನದಲ್ಲಿ ಆಂತಾ ರಾಷ್ಟ್ರೀಯ ಸಮುದಾಯವು ಭಾರತವನ್ನು ಹಾಡಿ ಹೊಗಳಿದೆ. ಕೆರಿಬಿಯನ್ ದ್ವೀಪರಾಷ್ಟ್ರಗಳಲ್ಲಿ ಒಂದಾದ ಜಮೈಕಾದ ವಿದೇಶಾಂಗ ಮಂತ್ರಿ ಕಮಿನಾ ಜೆ. ಸ್ಮಿತ್ ಈ ವೇಳೆ ಮಾತನಾ ಡುತ್ತ, ಕೋವಿಡ್-೧೯ರ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದ ಸಂದರ್ಭ ದಲ್ಲಿ ವಿಶ್ವದ ಇತರೆಲ್ಲ ದೇಶಗಳು ವಿದೇಶಗಳಿಗೆ ವ್ಯಾಕ್ಸಿನ್ ಪೂರೈಸುವುದರ ಮೇಲೆ ನಿರ್ಬಂಧ ಹೇರಿದ್ದಾಗ ತನ್ನ ನಿಯಮಗಳನ್ನು ಸಡಿಲಿಸಿ ಜಮೈಕಾಗೆ ವ್ಯಾಕ್ಸಿನ್ ಪೂರೈಸಿದ್ದಕ್ಕೆ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದರು.
ಇದೇ ರೀತಿಯಲ್ಲಿ, ಗಯಾನಾ, ಉಕ್ರೇನ್, ರಷ್ಯಾ, ಫ್ರಾನ್ಸ್ ದೇಶಗಳೂ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಶಂಸಿಸಿದವು, ಭಾರತದ ನೆರವು ಹಾಗೂ ಸೌಹಾರ್ದ ಭಾವಕ್ಕೆ ಕೃತಜ್ಞತೆ ಸಲ್ಲಿಸಿದವು ಎಂಬುದು ವಿಶೇಷ. ವಿಶ್ವಸಂಸ್ಥೆಯ ಅಧಿವೇಶನಗಳಲ್ಲಿ ಭಾರತವು ಹಿಂದೆಂದೂ ಈ ಮಟ್ಟದ ಹೊಗಳಿಕೆ ಪಡೆದುದರ ದಾಖಲೆಯಿಲ್ಲ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಮಿತಿ ಯೊಂದನ್ನು ರಚಿಸಿ ರಷ್ಯಾ ಮತ್ತು ಉಕ್ರೇನ್ ನಡುವೆ ಸಂಧಾನ ನಡೆಸುವ ಮಹತ್ತರ ಕಾರ್ಯಭಾರವನ್ನು ಅದಕ್ಕೆ ವಹಿಸಬೇಕು ಎಂಬ ಸಲಹೆಯನ್ನು ಮೆಕ್ಸಿಕೋ ವಿದೇಶಾಂಗ ಸಚಿವರು ವಿಶ್ವಸಂಸ್ಥೆಗೆ ಇದೇ ಸಂದರ್ಭದಲ್ಲಿ ನೀಡಿದರು ಎಂಬುದು ಮತ್ತೊಂದು ಗಮನಾರ್ಹ ಸಂಗತಿ.
ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ ಭಾರತವು ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದ್ದರೂ, ನಮ್ಮ ಸರಕಾರದ ಒಲವು ಅಂದಿನ ಸೋವಿ ಯತ್ ರಷ್ಯಾದೆಡೆಗೇ ಇರುತ್ತಿತ್ತು. ಹೀಗಾಗಿ ಪಾಕಿಸ್ತಾನದ ಪರವಾಗಿ ನಿಂತಿತ್ತು ಅಮೆರಿಕ. ಸೋವಿಯತ್ ರಷ್ಯಾದ ಪತನದ ನಂತರ, ಭಾರತ ನಿಧಾನವಾಗಿ ಅಮೆರಿಕದೆಡೆಗೆ ವಾಲತೊಡಗಿತು. ಕಳೆದ 20 ವರ್ಷಗಳಲ್ಲಂತೂ ಭಾರತ-ಅಮೆರಿಕ ಸಂಬಂಧ ಉತ್ತಮವಾಗುತ್ತಲೇ ಹೋಯಿತು. ವಾಜಪೇಯಿಯವರ ಅಧಿಕಾರಾವಧಿಯಲ್ಲಿ ನಡೆಸಲಾದ ಪೋಖ್ರಾನ್ ಅಣು ಪರೀಕ್ಷೆಯ ನಂತರ ಭಾರತದ ಮೇಲೆ ಅಮೆರಿಕ ಆರ್ಥಿಕ ನಿರ್ಬಂಧ ಹೇರಿದ್ದು ಹೌದಾದರೂ, ನಂತರದ ದಿನಗಳಲ್ಲಿ ಭಾರತ ತೋರಿದ ರಾಜತಾಂತ್ರಿಕ ಕೌಶಲಗಳಿಂದಾಗಿ ಅಮೆರಿಕ ನಮಗೆ ಸಮೀಪವಾಗುತ್ತಲೇ ಹೋಯಿತು.
ಮನಮೋಹನ್ ಸಿಂಗ್ ಅವರ 2004-2009ರ ಮೊದಲ ಅವಧಿಯ ಸರಕಾರವು ನಾಗರಿಕ ಉದ್ದೇಶಗಳಿಗಾಗಿನ ಅಣುಒಪ್ಪಂದಕ್ಕೆ ಅಮೆರಿಕದ ಜತೆಗೆ ಸಹಿಹಾಕುವ ವೇಳೆ ಭಾರತೀಯ ಕಮ್ಯುನಿಸ್ಟ್ ಪಕ್ಷವು ತಾನು ನೀಡಿದ್ದ ಬಾಹ್ಯಬೆಂಬಲವನ್ನು ಹಿಂತೆಗೆದಾಗಲೂ ಸಿಂಗ್ ಸರಕಾರ ಒಪ್ಪಂದದಿಂದ ಹಿಂದೆ ಸರಿಯದ ದಿಟ್ಟತನವನ್ನು ತೋರಿತ್ತು. ಬಿಲ್ ಕ್ಲಿಂಟನ್, ಜಾರ್ಜ್ ಬುಷ್, ಬರಾಕ್ ಒಬಾಮಾ ಹಾಗೂ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಗಳಲ್ಲಿ ಭಾರತ-ಅಮೆರಿಕ ಸಂಬಂಧ ಉತ್ತಮಗೊಳ್ಳುತ್ತ ಸಾಗಿದರೂ, ಕೆಲವು ವಿಚಾರಗಳಲ್ಲಿ ಭಾರತದ ಮೇಲೆ ಅಮೆರಿಕ ಒತ್ತಡವನ್ನು ಹೇರಿ ಭಾರತವು ತನ್ನ ನಿಲುವುಗಳಿಗೆ ಬದ್ಧವಾಗಿ ನಡೆಯುವಂತೆ ಮಾಡುತ್ತಿತ್ತು. ಉದಾಹರಣೆಗೆ, ವೆನಿಜುವೆಲಾ ದೇಶದಿಂದ ಕಡಿಮೆ ಬೆಲೆಗೆ ತೈಲವು ಸಿಗುವಂತಿದ್ದರೂ ಅಮೆರಿಕದ ನಿರ್ಬಂಧ ದಿಂದಾಗಿ ಭಾರತ ಆ ದೇಶದಿಂದ ತೈಲವನ್ನು ಖರೀದಿಸುವಂತಿರಲಿಲ್ಲ.
ಅಷ್ಟೇ ಅಲ್ಲ, ಇರಾನ್ ಜತೆಗೆ ರುಪಾಯಿ ಮತ್ತು ರಿಯಾಲ್‌ಗಳ ವಿನಿಮಯ ನಡೆಸಿ ಅಲ್ಲಿಂದ ಕಡಿಮೆ ಬೆಲೆಗೆ ತೈಲ ಖರೀದಿಸುವ ಒಪ್ಪಂದವನ್ನು ಭಾರತ ಮಾಡಿಕೊಂಡಾಗಲೂ ಅಮೆರಿಕ ಅಡ್ಡಗಾಲು ಹಾಕಿತ್ತು. ಆದರೆ, ಕಳೆದೆರಡು ವರ್ಷಗಳಲ್ಲಿ ಯಾವ ದೇಶದ ಒತ್ತಡಕ್ಕೂ ಮಣಿಯದೆ, ಭಾರತ-ಕೇಂದ್ರಿತ ವಿದೇಶಾಂಗ ಮತ್ತು ಆರ್ಥಿಕ ನೀತಿಯನ್ನು ಪಾಲಿಸುವ ಧೈರ್ಯ ತೋರಿದೆ ಭಾರತ.
ಕೋವಿಡ್ ಅಪ್ಪಳಿಸಿದಾಗ ಅಮೆರಿಕದ ವ್ಯಾಕ್ಸಿನ್ ಕಂಪನಿಗಳಿಂದ ಭಾರಿ ಒತ್ತಡವಿದ್ದರೂ ಮಣಿಯದೆ, ಸ್ವದೇಶಿ ನಿರ್ಮಿತ ವ್ಯಾಕ್ಸಿನ್‌ ಗಳನ್ನೇ ಪ್ರಜೆಗಳಿಗೆ ಪೂರೈಸಿತು ಭಾರತ. ರಷ್ಯಾ-ಉಕ್ರೇನ್ ಯುದ್ಧ ಶುರುವಾದಾಗ, ಭಾರತವು ರಷ್ಯಾದ ವಿರುದ್ಧವಾಗಿ ತನ್ನ ನಿಲುವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಬೇಕು ಎಂದು ಅಮೆರಿಕ ಮತ್ತು ಐರೋಪ್ಯ ದೇಶಗಳು ಒತ್ತಡ ಹೇರಿದ್ದುಂಟು.
ಆದರೆ ಇದಕ್ಕೆ ಮಣಿಯದ ಭಾರತ, ಯುದ್ಧದ ಬಗೆಗಿನ ತನ್ನ ತಟಸ್ಥ ನೀತಿಯನ್ನೇ ವ್ಯಕ್ತಪಡಿಸಿತು. ರಷ್ಯಾದ ಯುದ್ಧನೀತಿಯು ತಪ್ಪೇ ಆಗಿರಬಹುದು; ಆದರೆ ಯುದ್ಧವಿಚಾರದಲ್ಲಿ ರಷ್ಯಾದ ಪರವಾಗಿ ಚೀನಾ ನಿಂತಿದ್ದ ಕಾರಣ, ಒಂದೊಮ್ಮೆ ಭಾರತವು ರಷ್ಯಾದ ವಿರುದ್ಧವಾಗಿ ಮಾತಾಡಿದ್ದಲ್ಲಿ ರಷ್ಯಾವು ಚೀನಾಕ್ಕೆ ಇನ್ನಷ್ಟು ಸಮೀಪವಾಗಿಬಿಡುತ್ತಿತ್ತು ಮತ್ತು ಇದು ಭಾರತಕ್ಕೆ ದೊಡ್ಡ ತಲೆನೋವೇ ಆಗುತ್ತಿತ್ತು. ಹೀಗಾಗಿ ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ನಿಲುವನ್ನು ತಳೆಯಿತು.
ಯುದ್ಧದ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ವಿಪರೀತ ಏರಿತು. ತನ್ನಿಂದ ಖರೀದಿಸು ವವರಿಗೆ ರಿಯಾಯಿತಿ ದರದಲ್ಲಿ ಕಚ್ಚಾತೈಲವನ್ನು ಪೂರೈಸುವುದಾಗಿ ರಷ್ಯಾ ಘೋಷಿಸಿತು. ಭಾರತ ತನ್ನ ಹಿತದೃಷ್ಟಿಯಿಂದ ರಷ್ಯಾದಿಂದ ತೈಲ ಖರೀದಿ ಸಲು ನಿರ್ಣಯಿಸಿದಾಗ, ಅಮೆರಿಕ ಮತ್ತು ಐರೋಪ್ಯ ದೇಶಗಳು ಪುನಃ ಭಾರತದ ನಡೆಯನ್ನು ವಿರೋಧಿಸಿದವು. ಅಮೆರಿಕವಂತೂ ಒಂದು ಹಂತದಲ್ಲಿ ಭಾರತದ ಮೇಲೆ ಆರ್ಥಿಕ ದಿಗ್ಬಂಧನ ಹೇರುವ ಮಾತನ್ನೂ ಆಡಿತು. ಆದರೆ ಭಾರತ ಯಾವ ಬೆದರಿಕೆಗೂ ಜಗ್ಗದೆ ರಷ್ಯಾದಿಂದಲೇ ಕಚ್ಚಾತೈಲವನ್ನು ಖರೀದಿಸಿತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಣನೀಯವಾಗಿ ಏರಿದ್ದರೂ ಭಾರತದಲ್ಲಿ ಪೆಟ್ರೋಲ್ ಬೆಲೆಯನ್ನು 100 ರುಪಾಯಿಯ ಆಸುಪಾಸಿಗೆ ಇಳಿಸಲು ಸಹಕಾರಿಯಾಗಿದ್ದು ರಷ್ಯಾದಿಂದ ಖರೀದಿಸಲಾದ ಕಮ್ಮಿ ಬೆಲೆಯ ಕಚ್ಚಾತೈಲವೇ. ಈ ಕ್ರಮದಿಂದಾಗಿ ಭಾರತಕ್ಕೆ ಸರಿಸುಮಾರು ೩೫೦೦೦ ಕೋಟಿ ರುಪಾಯಿಯಷ್ಟು ವಿದೇಶಿ ವಿನಿಮಯ ಉಳಿಯಿತು ಎಂಬುದು ಗಮನಾರ್ಹ.
ಪಾಕಿಸ್ತಾನಕ್ಕೆ ತಾನು ಕೊಟ್ಟಿದ್ದ ಎಫ್-16 ಯುದ್ಧವಿಮಾನಗಳ ನಿರ್ವಹಣೆಗೆಂದು ಇತ್ತೀಚೆಗೆ 45 ದಶಲಕ್ಷ ಡಾಲರ್ ಹಣಕಾಸಿನ ನೆರವು ನೀಡಿದ್ದ ಅಮೆರಿಕ, ಇದು ಭಯೋತ್ಪಾದನೆಯ ನಿಗ್ರಹಕ್ಕೆಂದು ತೆಗೆದುಕೊಂಡ ಹೆಜ್ಜೆ ಎಂದೇ ಸಮಜಾಯಿಷಿ ನೀಡಿತ್ತು. ಈ ಕ್ರಮವನ್ನು ಯಾವುದೇ ಹಿಂಜರಿಕೆಯಿಲ್ಲದೆ ಟೀಕಿಸಿದ ಭಾರತದ ವಿದೇಶಾಂಗ ಸಚಿವ ಜೈಶಂಕರ್, ‘ಪಾಕಿಸ್ತಾನವು ಎಫ್-೧೬ ವಿಮಾನಗಳನ್ನು ಯಾವುದಕ್ಕೆ ಬಳಸುತ್ತಿದೆ ಎಂಬುದು ಗೊತ್ತಿರುವ ಸಂಗತಿಯೇ; ಅಮೆರಿಕ ಯಾರನ್ನು ಮೂರ್ಖರನ್ನಾಗಿಸಲು ನೋಡುತ್ತಿದೆ?’ ಎಂದು ಖಾರವಾಗಿ ಪ್ರಶ್ನಿಸಿದರು.
ಇದು ಭಾರತದ ದಿಟ್ಟತನಕ್ಕೆ ಮತ್ತೊಂದು ಪುರಾವೆ. ಡೋಕ್ಲಾಂ ಮತ್ತು ಗ್ಯಾಲ್ವನ್ ಸಂಘರ್ಷಗಳ ಸಂದರ್ಭದಲ್ಲಿ ಭಾರತವು ಚೀನಾ ವನ್ನು ಮಣಿಸಿದ ರೀತಿಗೆ ಜಗತ್ತು ನಿಬ್ಬೆರಗಾಗಿದೆ. ಚೀನಾದ ಬಲಾಢ್ಯ ಸೇನಾಶಕ್ತಿ ಎಂಬುದು ಬರಿಯ ಕಾಗದದ ಹುಲಿ ಎಂಬುದನ್ನು ಈ ಪ್ರಕರಣವು ಜಗತ್ತಿಗೆ ಸಾರಿದೆ. ಚೀನಾದ ಹೂಡಿಕೆದಾರರನ್ನು ಸಂಪೂರ್ಣನಿಷೇಧಿಸಿರುವ ಭಾರತ, ನೂರಾರು ಚೀನಿ ಆಪ್‌ ಗಳನ್ನೂ ನಿರ್ಬಂಧಿಸಿದೆ. ಚೀನಾದ ವ್ಯಾಪಾರಿ ಹಿತಾಸಕ್ತಿಗಳಿಗೆ ಪೂರಕವಾಗಿದ್ದ ಏಷ್ಯಾ ಪೆಸಿಫಿಕ್ ದೇಶಗಳ ‘ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ’ಯಿಂದ ಭಾರತ ಯಾವುದೇ ಹಿಂಜರಿಕೆಯಿಲ್ಲದೆ ನಿರ್ಗಮಿಸಿದೆ.
ಮಾತ್ರವಲ್ಲ, ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಸಾಗಲಿರುವ ‘ಒನ್ ಬೆಲ್ಟ್ ಒನ್ ರೋಡ್’ ಎಂಬ ಚೀನಾದ ಉದ್ದೇಶಿತ ಮಹತ್ವಾಕಾಂಕ್ಷಿ ಯೋಜನೆ ಯನ್ನು ಭಾರತ ನಿರ್ದಾಕ್ಷಿಣ್ಯವಾಗಿ ಬಹಿಷ್ಕರಿಸಿದೆ, ತನ್ಮೂಲಕ ಚೀನಾಕ್ಕೆ ಹೇಗೆ ಮೂಗುದಾರ ತೊಡಿಸಬೇಕು ಎಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟಿದೆ. ಹೀಗಾಗಿ, ಚೀನಾದ ಆರ್ಥಿಕ ಮತ್ತು ಮಿಲಿಟರಿ ಕಬಂಧಬಾಹುಗಳನ್ನು ನಿಯಂತ್ರಿಸಬೇಕಾದರೆ ಅಮೆರಿಕಕ್ಕೆ ಭಾರತವು ಬೇಕೇ ಬೇಕು.
‘ಜಿ 20’ ಎಂಬುದು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟ. ಇದರ ಅಧ್ಯಕ್ಷ ಸ್ಥಾನಈ ಬಾರಿ ಭಾರತಕ್ಕೆ ಲಭಿಸಲಿದ್ದು, ತನ್ಮೂಲಕ ತನ್ನ ನಾಯಕತ್ವ, ಸಾಮರ್ಥ್ಯ, ಉದ್ಯಮಗಳಿಗೆ ಹಾಗೂ ಹೂಡಿಕೆಗಳಿಗೆ ಪೂರಕವಾಗಿರುವ ವಾತಾವರಣ ಮುಂತಾದವುಗಳನ್ನು ಜಗತ್ತಿನ ವಿವಿಧ ದೇಶಗಳೆದುರು ಅನಾವರಣಗೊಳಿಸಲು ಭಾರತಕ್ಕೆ ಅವಕಾಶ ಸಿಗಲಿದೆ.
ಜಾಗತಿಕ ತಾಪಮಾನದ ಹೆಚ್ಚಳದ ತಡೆಗೆ ಕ್ರಮಗಳನ್ನು ಕೈಗೊಂಡ ರಾಷ್ಟ್ರಗಳ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ತಾಪಮಾನವನ್ನು ತಗ್ಗಿಸುವ ನಿಟ್ಟಿನಲ್ಲಿ ಪುನರ್‌ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದಿಸುವೆಡೆಗೆ ಭಾರತ ಗಮನ ಹರಿಸುತ್ತಿದೆ. ಒಂದು ಕಾಲಕ್ಕೆ, ವಿಪತ್ತಿನ ಸಂದರ್ಭಗಳಲ್ಲಿ ವಿದೇಶಿ ನೆರವಿಗಾಗಿ ಎದುರು ನೋಡುತ್ತಿದ್ದ ಭಾರತವಿಂದು, ತೊಂದರೆಗೆ ಸಿಲುಕಿರುವ ನೆರೆಹೊರೆಯ ದೇಶಗಳಿಗೆ ನೆರವಾಗಬಲ್ಲ ಹಂತಕ್ಕೆ ಬೆಳೆದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾಕ್ಕೆ ಸುಮಾರು 4 ಶತಕೋಟಿ ಡಾಲರ್ ಆರ್ಥಿಕ ನೆರವು ನೀಡಿದ್ದು, ಅಫ್ಘಾನಿಸ್ತಾನಕ್ಕೆ ಸುಮಾರು 50 ಸಾವಿರ ಟನ್‌ನಷ್ಟು ಆಹಾರಧಾನ್ಯ ಕಳುಹಿಸಿದ್ದು, 100ಕ್ಕೂ ಹೆಚ್ಚು ದೇಶಗಳಿಗೆ ೨೦ ಕೋಟಿಯಷ್ಟು ಕರೋನಾ ವ್ಯಾಕ್ಸಿನ್ ಗಳನ್ನು ಒದಗಿಸಿದ್ದು, ಯುದ್ಧಗ್ರಸ್ತ ಉಕ್ರೇನ್‌ನಿಂದ 25000 ಮಂದಿ ಭಾರತೀಯರನ್ನು ತಾಯ್ನೆಲಕ್ಕೆ ಕ್ಷೇಮವಾಗಿ ಕರೆ ತಂದಿದ್ದು ಇವೆಲ್ಲ ಭಾರತದ ಸಾಧನಾ ಕಿರೀಟದಲ್ಲಿನ ಒಂದಷ್ಟು ಗರಿಗಳು.
2014ರ ವರ್ಷಕ್ಕೂ ಮೊದಲು ಬಲಿಷ್ಠ ಆರ್ಥಿಕತೆಯುಳ್ಳ ದೇಶಗಳ ಜಾಗತಿಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತವಿಂದು 5ನೇ ಸ್ಥಾನಕ್ಕೇರಿದೆ. ಇದು ಅಸಾಮಾನ್ಯ ಸಾಧನೆಯಲ್ಲದೆ ಮತ್ತೇನು? ಭಾರತೀಯರ ಖರೀದಿ ಸಾಮರ್ಥ್ಯ ಹೆಚ್ಚಾಗಿರುವುದು, ಆತ್ಮ ನಿರ್ಭರ ಭಾರತ ಆಂದೋಲನವು ಪರಿಣಾಮಕಾರಿಯಾಗಿ ಕೈಗೂಡಿ ಪರಾವಲಂಬನೆಯಿಂದ ಹೊರಬಂದಿರುವುದು, ಉದ್ಯಮ ಸ್ಥಾಪನೆ ಮತ್ತು ಹೂಡಿಕೆ ಸಂಬಂಧಿತ ವಾತಾವರಣಗಳು ಸರಳವೂ ಸುಲಲಿತವೂ ಆಗಿರುವುದು, ಇವೆಲ್ಲಕ್ಕಿಂತ ಮಿಗಿಲಾಗಿ ಭಾರತಕ್ಕೆ ಲಭಿಸಿರುವ ಸಮರ್ಥ ಹಾಗೂ ಸದೃಢ ಪ್ರಜಾತಾಂತ್ರಿಕ ಸರಕಾರ- ಈ ಎಲ್ಲ ಕಾರಣಗಳಿಂದಾಗಿ ಜಾಗತಿಕ ಸಮೀಕರಣವು ಭಾರತದ ಪರವಾಗಿ ವಾಲುವಂಥ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು.