ಗೀತೆಯಲ್ಲಿ ಹುಟ್ಟು-ಸಾವಿನ ವೈಜ್ಞಾನಿಕ ನೋಟ
ಸ್ವಾಸ್ಥ್ಯ ಸಂಪದ
yoganna55@.
ಕೋಟ್ಯಂತರ ವರ್ಷಗಳಿಂದ ಇಂದಿನವರೆಗೆ ಸಾಗಿಬಂದಿರುವ ಸೃಷ್ಟಿಯ ಮತ್ತು ಮನುಷ್ಯನ ವಿಕಾಸಕ್ರಿಯೆಗಳನ್ನು ಸೂಕ್ಷ್ಮವಾಗಿ, ವೈಜ್ಞಾನಿಕವಾಗಿ ಗಮನಿಸಿದಾಗ ಎಲ್ಲವುಗಳ ವಿಕಾಸ ಪದೋನ್ನತಿ ದಿಕ್ಕಿನಲ್ಲಿಯೇ ಸಾಗಿಬಂದಿದೆ ಎಂಬುದು ವೈಜ್ಞಾನಿಕ ವಾಗಿಯೂ ಸಾಬೀತಾಗಿರುವ ಅಂಶ.
ಮನುಷ್ಯ ಸಂತತಿಯ ಪ್ರಾರಂಭ ಏಕಾಯಿತು? ಹೇಗಾಯಿತು? ಯಾವ ಉದ್ದೇಶಕ್ಕಾಯಿತು? ಎಂಬುದರ ಬಗ್ಗೆ ಭಗವದ್ಗೀತೆಯಲ್ಲಿರುವ ಮಾಹಿತಿ ಗಳನ್ನು ವೈಜ್ಞಾನಿಕತೆಯ ಒರೆಗೆ ಹಚ್ಚಿದಾಗ ಅವುಗಳ ವೈಜ್ಞಾನಿಕ ನೋಟ ಅರಿವಾಗುತ್ತದೆ. ‘ಮನುಷ್ಯ ನ್ನೂ ಒಳಗೊಂಡಂತೆ ಇಡೀ ಸೃಷ್ಟಿಯ ಎಲ್ಲವುಗಳು ಅತೀತಶಕ್ತಿಯ ನಿಯಂತ್ರಣದಲ್ಲಿದ್ದು, ಅತೀತಶಕ್ತಿಯ ಕಣ ಈ ಎಲ್ಲವುಗಳಲ್ಲಿದೆ’ ಎಂಬ ಗೀತೆಯ ನೋಟವು ವೈಜ್ಞಾನಿಕವಾಗಿಯೂ ಇಂದು ಸಾಬೀತಾಗತೊಡಗಿದೆ.
ಮನುಷ್ಯ ದಿಢೀರನೆ ಸೃಷ್ಟಿಗೆ ಬಂದವನಲ್ಲ. ಸೃಷ್ಟಿಯ ಹಂತಹಂತದ ವಿಕಾಸಕ್ರಿಯೆಯ ಒಂದು ಹಂತದಲ್ಲಿ ಜೀವಿ ಉದ್ಭವವಾಗಿ, ತದನಂತರ ಮಾನವ ಸಂತತಿ ಪ್ರಾರಂಭವಾಗಿರುವುದು ವೈಜ್ಞಾನಿಕ ಸಂಶೋಧನೆ ಗಳಿಂದ ದೃಢಪಟ್ಟಿರುತ್ತದೆ. ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಸೃಷ್ಟಿಯ ಉಗಮ, ವಿಕಾಸಗಳ ಅರಿವು ಅತ್ಯವಶ್ಯಕ.
ಸೃಷ್ಟಿಯ ಉಗಮ:ಪ್ರಪಂಚದಲ್ಲಿಂದು ಎಲ್ಲರಿಗೂ ಒಪ್ಪಿತವಾಗಿರುವ ‘ಬಿಗ್ ಬ್ಯಾಂಗ್’ ಸಿದ್ಧಾಂತದ ಪ್ರಕಾರ ಪ್ರಾರಂಭದಲ್ಲಿ ದೊಡ್ಡವಸ್ತುವೊಂದಕ್ಕೆ ದೊಡ್ಡಶಕ್ತಿಯೊಡನೆ ಘರ್ಷಣೆಯಾಗಿ ಚೂರುಚೂರಾಗಿ ಒಡೆದು, ಮೂಲವಸ್ತುಗಳ ಚೂರುಗಳಲ್ಲಿ ಪ್ರಾಥಮಿಕವಾಗಿ ಮೂಲಶಕ್ತಿಯ ಅಣುಗಳು ಸೇರ್ಪಡೆಯಾದವು.
ನಂತರ ಬೇರ್ಪಟ್ಟ ಪ್ರತಿಯೊಂದು ಚೂರೂ ತನ್ನದೇ ಆದ ಹಾದಿಯಲ್ಲಿ ವಿಕಾಸವಾಗಿ ಪದೋನ್ನತಿಗೊಂಡು ಪ್ರಸ್ತುತ ಸೃಷ್ಟಿಯಲ್ಲಿರುವ ಎಲ್ಲವುಗಳು ಸೃಷ್ಟಿಯಾಗಿವೆ. ಇದು ಕ್ವಾಂಟಮ್ ಭೌತಶಾಸ್ತ್ರದ ಸಿದ್ಧಾಂತಕ್ಕೆ ಅನುಗುಣವಾಗಿದೆ. ಈ ವಿಕಾಸಪಥದ ಒಂದು ಹಂತದಲ್ಲಿ ಸುಮಾರು ೨೪-೨೫ ಕೋಟಿ ವರ್ಷಗಳ ಹಿಂದೆ ಮನುಷ್ಯ ಸಂತತಿ ಪ್ರಾರಂಭವಾಯಿತು. ಗಂಡು-ಹೆಣ್ಣುಗಳು ಒಟ್ಟಿಗೆ ಸೃಷ್ಟಿಯಾದವೋ ಅಥವಾ ಬೇರೆ ಬೇರೆ ಕಾಲದಲ್ಲಿ ಸೃಷ್ಟಿಯಾದವೋ ಎಂಬುದು ನಿಗೂಢ.
ಕೋಟ್ಯಂತರ ವರ್ಷಗಳಿಂದ ಇಂದಿನವರೆಗೆ ಸಾಗಿ ಬಂದಿರುವ ಸೃಷ್ಟಿಯ ಮತ್ತು ಮನುಷ್ಯನ ವಿಕಾಸಕ್ರಿಯೆಗಳನ್ನು ಸೂಕ್ಷ್ಮ ವಾಗಿ, ವೈಜ್ಞಾನಿಕವಾಗಿ ಗಮನಿಸಿದಾಗ ಎಲ್ಲವುಗಳ ವಿಕಾಸ ಪದೋನ್ನತಿ ದಿಕ್ಕಿನಲ್ಲಿಯೇ ಸಾಗಿಬಂದಿದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿರುವ ಅಂಶ. ಈ ಕ್ರಿಯೆಗಳು ಗಣಕೀಕೃತ ಪೂರ್ವನಿಗದಿತ ಕ್ರಿಯೆಗಳಂತೆ ಜರುಗಿ ಬಂದಿರುವುದನ್ನು ಗಮನಿಸಬಹುದಾಗಿದೆ.
ಸೃಷ್ಟಿಯಲ್ಲಿ ಜರುಗುತ್ತಿರುವ ಎಲ್ಲ ಕ್ರಿಯೆಗಳು ಪೂರ್ವಯೋಜಿತ ಕ್ರಿಯೆಗಳಾಗಿದ್ದು, ಅವೆಲ್ಲವೂ ಸೃಷ್ಟಿಯಲ್ಲಿಯೇ ಅತ್ಯಂತ ಶ್ರೇಷ್ಠಮಟ್ಟದಲ್ಲಿ ವಿಕಾಸವಾಗಿರುವ ಮಾನವನೊಡನೆ ಜೋಡಣೆಗೊಂಡಿರುವುದನ್ನು ವೈಜ್ಞಾನಿಕವಾಗಿ ಗುರುತಿಸಬಹುದಾಗಿದೆ.
ಪೂರ್ವನಿಗದಿತ ಕಾರ್ಯಚಕ್ರಗಳು:ಸೂರ್ಯೋದಯ, ಚಂದ್ರೋದಯ, ಭೂಮಿಯ ಚಲನೆ, ಗ್ರಹಗಳುಂಟಾಗುವಿಕೆ,ಋತುಮಾನಗಳು, ನಿರ್ದಿಷ್ಟ ಋತುಮಾನಗಳಲ್ಲಿಯೇ ಫಲ-ಪುಷ್ಪ ನೀಡುವ ಸಸ್ಯಗಳು, ಪ್ರಾಣಿಗಳು ಹೊರಬಿಡುವ ವಿಷವಸ್ತು ವಾದ ಇಂಗಾಲದ ಡೈಯಾಕ್ಸೈಡ್ ಅನ್ನು ಸಸ್ಯಗಳು ಹೀರಿಕೊಂಡು ಪ್ರಾಣಿಗಳಿಗೆ ಅಮೃತಸಮಾನವಾದ ಆಮ್ಲಜನಕವನ್ನು ನೀಡುವಿಕೆ, ಗರ್ಭಧಾರಣೆಯ ದಿನದಿಂದ ಹಿಡಿದು ಹೆರಿಗೆಯಾಗುವವರೆಗೂ ಪ್ರತಿನಿತ್ಯ ನಿಗಿದತ ಕಾಲಾವಧಿಯಲ್ಲಿ ಉಂಟಾಗುವ ಗರ್ಭಕೂಸಿನ ಅಂಗಾಂಗದ ಬೆಳವಣಿಗೆಗಳು, ಹೆರಿಗೆ, ಹುಟ್ಟಿದ ನಂತರ ಬಾಲ್ಯ, ಯೌವನ, ವಯಸ್ಕ ಮತ್ತು ಮುಪ್ಪಿನ ಅವಧಿ ಗಳಲ್ಲಿ ಕರಾರುವಾಕ್ಕಾಗಿ ಉಂಟಾಗುವ ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆಗಳು ಮತ್ತು ದೇಹದಲ್ಲಿ ಸ್ವಯಂ ಚಾಲಿತವಾಗಿ ಜರುಗುವ ಹೃದಯ, ಶ್ವಾಸಕೋಶಗಳು, ಮಿದುಳು, ಜೀರ್ಣಾಂಗಗಳು ಇತ್ಯಾದಿ ಎಲ್ಲ ಅಂಗಾಂಗಗಳ ಕಾರ್ಯಗಳು ಗಣಕೀಕೃತ ಪ್ರೋಗ್ರ್ಯಾಂಗಳಂತೆ ಸ್ವಯಂಚಾಲಿತವಾಗಿ ಜರುಗುತ್ತವೆ.
ಇವೆಲ್ಲವೂ ಪೂರ್ವಯೋಜಿತ ಕ್ರಿಯೆಗಳಾಗಿವೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಮನುಷ್ಯನ ಹುಟ್ಟು, ಬದುಕು ಮತ್ತು ಸಾವುಗಳನ್ನು ವಿಮರ್ಶಿಸಿದಾಗ ಇವೂ ಪೂರ್ವನಿಯೋಜಿತವೇ ಎಂಬ ಬಲವಾದ ಸಹಜ ಅನುಮಾನ ಉಂಟಾಗುತ್ತದೆ. ಶ್ರೀಕೃಷ್ಣ ಭಗವದ್ಗೀತೆಯ ಹಲವಾರು ಶ್ಲೋಕಗಳಲ್ಲಿ ‘ಯಾವುದೂ ನಿನ್ನ ಅಧೀನದಲ್ಲಿಲ್ಲ, ಎಲ್ಲವೂ ನನ್ನ (ಅತೀತಶಕ್ತಿಯ) ಅಧೀನದಲ್ಲಿವೆ’ ಎಂದು ಬೋಧಿಸುವುದು ಇವುಗಳ ಹಿನ್ನೆಲೆಯಲ್ಲಿಯೇ ಆಗಿದೆ.
ಸರ್ವಭೂತಾನಿ ಕೌನ್ತೇಯ ಪ್ರಕೃತಿಂ ಯಾನ್ತಿಮಾಮಿಕಾಮ್|ಕಲ್ಪವೃಕ್ಷಯೇ ಪುನಸ್ತಾನಿ ಕಲ್ಪಾದೌವಿಸೃಜಾಮ್ಯಹಮ್||(ಅಧ್ಯಾಯ-೯ ಶ್ಲೋಕ ೭)ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃಪುನಃ|ಭೂತಗ್ರಾಮಮಿಮಂ ಕೃತ್ಸ್ನಮವಶಂಪ್ರಕೃತೇರ್ವಶಾತ್||(ಅಧ್ಯಾಯ-೯ ಶ್ಲೋಕ ೮)ಈ ಶ್ಲೋಕಗಳಲ್ಲಿ ‘ಇಡೀ ವಿಶ್ವವನ್ನು ನಾನುಸೃಷ್ಟಿಸಿದ್ದು, ವಿಶ್ವದ ವ್ಯವಸ್ಥೆ ನನ್ನ (ಅತೀತಶಕ್ತಿಯ)
ಅಧೀನದಲ್ಲಿದೆ. ಅದನ್ನು ನಾನಲ್ಲದೆ ಬೇರೆ ಯಾರಿಂದಲೂ ನಾಶಮಾಡಲಾಗುವುದಿಲ್ಲ. ಅದು ಮತ್ತೆ ಮತ್ತೆ ರೂಪಾಂತರ ಗೊಳ್ಳುತ್ತಿರುತ್ತದೆ. ಅತೀತಶಕ್ತಿಯ ನಿಯಂತ್ರಣ ಮತ್ತು ಸೃಷ್ಟಿಯಲ್ಲಿರುವ ಯಾವುದನ್ನೂ ನಾಶಪಡಿಸಲಾಗುವುದಿಲ್ಲ, ಒಂದನ್ನುಮತ್ತೊಂದಾಗಿ ರೂಪಾಂತರಗೊಳಿಸಬಹುದಷ್ಟೇ ಎಂಬ ವೈಜ್ಞಾನಿಕ ನೋಟಗಳಿವೆ.
ಮನುಷ್ಯನ ಹುಟ್ಟು: ಸೀಯಅಂಡಾಣು ಮತ್ತು ಪುರುಷನ ವೀರ್ಯಾಣುಗಳ ಸಮ್ಮಿಲನದಿಂದ ಮನುಷ್ಯಜೀವಿ ಉಗಮಿಸು ತ್ತಾನೆ. ಗರ್ಭಧಾರಣೆಯಾದ ದಿನದಿಂದ ವಿವಿಧ ಅಂಗಾಂಗಗಳ ಪೂರ್ವಜೀವಕೋಶಗಳು ವೃದ್ಧಿಯಾಗತೊಡಗಿದರೂ, ಹೃದಯ ರಚನಾತ್ಮಕವಾಗಿ ಬೆಳೆದಿದ್ದರೂ ೪ನೇ ವಾರದವರೆಗೆ ಹೃದಯದ ಬಡಿತ ಪ್ರಾರಂಭವಾಗುವುದಿಲ್ಲ. ಅದು ಪ್ರಾರಂಭ ವಾಗಲು ಹೃದಯದಲ್ಲಿಯೇ ವಿದ್ಯುಚ್ಛಕ್ತಿಯ ಉತ್ಪತ್ತಿ ಅವಶ್ಯಕವಾಗಿದ್ದು, ಗರ್ಭಕೂಸಿನ ೪ನೇ ವಾರದಲ್ಲಿ ರಚನಾತ್ಮಕವಾಗಿ ಸಿದ್ಧವಾಗಿದ್ದ ಹೃದಯಕ್ಕೆ ಶಕ್ತಿಪ್ರತೀಕವಾದ ವಿದ್ಯುಚ್ಛಕ್ತಿ ಬಂದು ಸೇರಿದ ನಂತರವೇ ಹೃದಯ ಕ್ರಿಯಾಶೀಲವಾಗುತ್ತದೆ.
ಹೃದಯಕ್ಕೆ ಸೇರ್ಪಡೆಯಾಗುವ ವಿದ್ಯುಚ್ಛಕ್ತಿ ಆತ್ಮದ ಪ್ರತೀಕವಾಗಿದ್ದು, ಹೊರಗಿನಿಂದ ಈ ಆತ್ಮ ಹೃದಯಕ್ಕೆ ಸೇರ್ಪಡೆಯಾದ ನಂತರ ಹೃದಯ ಕ್ರಿಯಾಶೀಲವಾಗಿ ಮತ್ತಿತರ ಎಲ್ಲ ಅಂಗಾಂಶಗಳ ಬೆಳವಣಿಗೆ ಮತ್ತಷ್ಟು ಚುರುಕುಗೊಳ್ಳುತ್ತದೆ. ವೀರ್ಯಾಣು ಮತ್ತು ಅಂಡಾಣುಗಳ ಕ್ರೋಮೋಜೋಮುಗಳಲ್ಲಿರುವ ಪೂರ್ವಜರ ಸಂತತಿಯ ಗುಣಲಕ್ಷಣಗಳನ್ನು ರವಾನಿಸುವ, ವಂಶವಾಹಿ ಗಳ ಡಿಎನ್‌ಎ ಗುಣಗಳಿಗೆ ಅನುಗುಣವಾಗಿ ಗರ್ಭಕೂಸು ರೂಪುಗೊಳ್ಳುತ್ತದೆ.
ಹುಟ್ಟು ಆಕಸ್ಮಿಕವೋ ಅಥವಾ ಪೂರ್ವನಿಗದಿತವೋ ಎಂಬುದರ ಬಗ್ಗೆ ಹಲವಾರು ಜಿಜ್ಞಾಸೆಗಳಿವೆ. ಅಧ್ಯಾತ್ಮ ಜ್ಞಾನದ ಪ್ರಕಾರ ಹುಟ್ಟೂ ಪೂರ್ವನಿಗದಿತವೇ. ಫಲವತ್ತತೆಯ ದಿನಗಳಲ್ಲಾಗುವ ಎಲ್ಲ ಸಂಭೋಗಗಳಲ್ಲೂ ಗರ್ಭಧಾರಣೆಯಾಗದಿರುವ ಮತ್ತು ಫಲವತ್ತತೆಯ ಕೆಲವು ದಿನಗಳಲ್ಲಾಗುವ ಸಂಭೋಗಗಳಲ್ಲಿ ಮಾತ್ರ ಗರ್ಭಧಾರಣೆಯಾಗುವ ವೈಜ್ಞಾನಿಕ ಅಂಶ ಮನುಷ್ಯನ ಹುಟ್ಟು ಕೂಡ ಪೂರ್ವನಿಗದಿತವೇ ಎಂಬ ಅನುಮಾನಕ್ಕೆ ಪುಷ್ಟಿ ನೀಡುತ್ತದೆ.
ದೇಹದ ಜೀವಕೋಶಗಳ ಜೀವಾವಧಿ ಪೂರ್ವನಿಗದಿತ. ಒಮ್ಮೆ ಹುಟ್ಟಿದ ಮಿದುಳು ಮತ್ತು ನರಮಂಡಲದ ಜೀವಕೋಶ, ಹೃದಯ ಜೀವಕೋಶ ಸಾವಿನವರೆಗೂ ಜೀವಂತವಾಗಿರುತ್ತದೆ. ಸಾವುಂಟಾದಲ್ಲಿ ಈ ಜೀವಕೋಶಗಳು ಪುನರುತ್ಪತ್ತಿಯಾಗುವುದಿಲ್ಲ. ಇನ್ನಿತರ ಅಂಗಾಂಗಗಳ ಜೀವಕೋಶಗಳು ಪೂರ್ವನಿಗದಿತ ಕಾಲಾವಧಿಯವರೆಗೆ ಬದುಕಿಸಾಯುತ್ತವೆ. ನಂತರ ಮತ್ತೊಂದು ಜೀವಕೋಶ ಉತ್ಪತ್ತಿಯಾಗುತ್ತದೆ. ಈ ವೈಜ್ಞಾನಿಕ ಅಂಶ ಮನುಷ್ಯನ ಹುಟ್ಟು ಮತ್ತು ಸಾವು ಕೂಡ ಪೂರ್ವನಿಗದಿತವೇ ಎಂಬ ಅಂಶಕ್ಕೆ ಪುಷ್ಟಿ ನೀಡುತ್ತದೆ.
ಗರ್ಭಧಾರಣೆಯಾದ ದಿನದಿಂದ ಹಿಡಿದು ಹೆರಿಗೆಯವರೆಗೆ ಮತ್ತು ತದನಂತರದ ಬೆಳವಣಿಗೆಗಳು ಪರಿಸರದಲ್ಲಿ ಲಭಿಸುವ ಆಹಾರದಿಂದಲೇ ಉಂಟಾಗುವುದರಿಂದ, ಮನುಷ್ಯ ಪರಿಸರದ ಕೂಸಾಗಿದ್ದು, ಮನುಷ್ಯನ ಹುಟ್ಟಿಗೆ ಅತೀತಶಕ್ತಿ ಮತ್ತು ಪರಿಸರವೇ ಕಾರಣವಾಗಿದ್ದು, ಅದರ ಜತೆ ಮನುಷ್ಯ ಜೋಡಣೆಯಾಗಿದ್ದಾನೆ. ಈ ವೈಜ್ಞಾನಿಕ ಅಂಶವನ್ನು ಗೀತೆಯ ಹಲವಾರುಶ್ಲೋಕಗಳಲ್ಲಿ ಕಾಣಬಹುದಾಗಿದೆ.
ಅನ್ನಾದ್ ಭವನ್ತಿ ಭೂತಾನಿಪರ್ಜನ್ಯಾದನ್ನಸಮ್ಭವಃ |ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃಕರ್ಮಸಮುದ್ಭವಃ || (ಅಧ್ಯಾಯ-೩, ಶ್ಲೋಕ೧೪)ಎಲ್ಲ ಜೀವಿಗಳು ಪರಿಸರದಲ್ಲಿ ಲಭಿಸುವ ಆಹಾರ, ಗಾಳಿ, ಮಳೆನೀರು, ಶಕ್ತಿಗಳು ಇವುಗಳಿಂದ ರೂಪುಗೊಳ್ಳುತ್ತವೆ. ಈ ಕಾರಣದಿಂದಾಗಿ ಮನುಷ್ಯ ನನ್ನೂ ಒಳಗೊಂಡಂತೆ ಸೃಷ್ಟಿಯಲ್ಲಿನ ಎಲ್ಲವುಗಳು ಪ್ರಕೃತಿಯ ಶಿಶುಗಳಾಗಿವೆ.
ನ ಹಿ ಕಶ್ಚಿತ್ ಕ್ಷಣಮಪಿ ಚಾತುತಿಷ್ಠತ್ಯಕರ್ಮಕೃತ್|ಕಾರ್ಯತೇ ಹ್ಯವಶಃ ಕರ್ಮ ಸರ್ವಃಪ್ರಕೃತಿಜೈರ್ಗುಣೈಃ ||(ಅಧ್ಯಾಯ-೩, ಶ್ಲೋಕ೫)
ಈ ಶ್ಲೋಕದಲ್ಲಿ ಮನುಷ್ಯನ ಗುಣ ಮತ್ತು ಕೈಗೊಳ್ಳುವ ಕರ್ತವ್ಯಗಳ ನಡುವೆ ಇರುವ ಅವಿನಾಭಾವ ಸಂಬಂಧಗಳನ್ನು ವಿವರಿಸಲಾಗಿದೆ.
ಸಾವು:‘ಕುಲಬಾಂಧವರು, ಆಚಾರ್ಯರುಗಳನ್ನು ಯುದ್ಧರಂಗದಲ್ಲಿ ಕೊಂದು ಸಾಮ್ರಾಜ್ಯ ಪಡೆಯುವ ಅವಶ್ಯಕತೆ ಇದೆಯೇ?’ ಎಂಬ ಜಿಜ್ಞಾಸೆಯಲ್ಲಿ ಅಧೀರನಾದ ಅರ್ಜುನನಿಗೆ ‘ಸಾವೊಂದು ನಾಶದ ಕ್ರಿಯೆಯಲ್ಲ, ಅದೊಂದು ಪರಿವರ್ತನಾ ಕ್ರಿಯೆ. ಸತ್ತ ಮೇಲೂ ಅವರು ಬದುಕಿರುತ್ತಾರೆ’ ಎಂಬ ಅಂಶವನ್ನು ಹಲವಾರು ಶ್ಲೋಕಗಳಲ್ಲಿ ಶ್ರೀಕೃಷ್ಣ ಬೋಧಿಸಿ ಸಾವಿನ ಭ್ರಮೆ ಯಿಂದುಂಟಾದ ವೈರಾಗ್ಯವನ್ನು ಹೋಗಲಾಡಿಸಿ ಅವನಲ್ಲಿ ಕರ್ತವ್ಯಪ್ರಜ್ಞೆ ಮೂಡಿಸಿದ ರೀತಿಯುಮನಶ್ಶಾಸ್ತ್ರಜ್ಞರು ಮತ್ತುಆಧುನಿಕ ವೈದ್ಯತಜ್ಞರಿಂದಲೂ ಅನುಮೋದಿತವಾಗಿವೆ. ಹಲವಾರು ಶ್ಲೋಕಗಳಲ್ಲಿ ಇದನ್ನು ವಿವರಿಸಲಾಗಿದೆ. ಒಂದನ್ನು ಮಾತ್ರ ಇಲ್ಲಿ ಉದಾಹರಿಸಲಾಗಿದೆ.
ದೇಹಿನೋಸ್ಮಿನ್ ಯಥಾ ದೇಹೇ ಕೌಮಾರಂಯೌವನಂ ಜರಾ|ತಥಾ ದೇಹಾನ್ತರ ಪ್ರಾಪ್ತಿಧಿರಸ್ತತ್ರ ನಮುಹ್ಯತಿ|| (ಅಧ್ಯಾಯ-೩ ಶ್ಲೋಕ ೧೩)
ಮನುಷ್ಯನನ್ನೂ ಒಳಗೊಂಡಂತೆ ಪ್ರತಿಯೊಂದು ಜೀವಿಯೂ ದೇಹ, ಆತ್ಮ ಮತ್ತು ಮನಸ್ಸುಗಳಿಂದ ರಚಿತವಾಗಿವೆ. ಆತ್ಮ ಜೀವದ ಸಂಕೇತವಾಗಿದೆ. ಅದು ಅತೀತಶಕ್ತಿಯ ಕಣವಾಗಿದ್ದು, ಮನುಷ್ಯನ ದೇಹದಲ್ಲಿ, ಹೃದಯದಲ್ಲಿ ವಿದ್ಯುಚ್ಛಕ್ತಿಯರೂಪದಲ್ಲಿರುತ್ತದೆ. ವಿದ್ಯುಚ್ಛಕ್ತಿ ಹೃದಯದಿಂದ ಹೊರಬಂದಾಗ ಹೃದಯ ಸ್ಥಗಿತವಾಗಿ ದೇಹದ ಎಲ್ಲ ಜೀವಕೋಶಗಳಿಗೂ ರಕ್ತಸಂಚಾರ ನಿಂತು ಅವುಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುತ್ತದೆ.
ಆಧುನಿಕ ವೈದ್ಯವಿಜ್ಞಾನದ ಪ್ರಕಾರ ಸಾವೆಂದರೆ ಜೀವಕೋಶದ ವಿದ್ಯುತ್ ಇಲ್ಲದಿರುವುದು. ಯಾವುದೇ ಶಕ್ತಿಯನ್ನು ನಾಶಪಡಿಸ ಲಾಗುವುದಿಲ್ಲ. ಸಾವಿನ ಸಮಯದಲ್ಲಿದ್ದ ಹೃದಯ, ಮಿದುಳು ಮತ್ತು ದೇಹದ ಜೀವಕೋಶಗಳ ವಿದ್ಯುತ್ಹೊರಬಂದು ಸೃಷ್ಟಿಯ ಶಕ್ತಿಗಳಲ್ಲಿ ವಿಲೀನವಾಗುತ್ತದೆ. ಆತ್ಮಕ್ಕೆ ನಾಶವಿಲ್ಲ, ರೂಪಾಂತರವಾಗುತ್ತದೆ.
ದೇಹ ವಿವಿಧ ಬಗೆಯ ಸಂಸ್ಕಾರಗಳಿಂದ ಪಂಚಭೂತಗಳಲ್ಲಿ ವಿಲೀನವಾಗಿ ರೂಪಾಂತರಗೊಳ್ಳುತ್ತದೆ. ದೇಹಕ್ಕೂ ಸಾವಿಲ್ಲ, ರೂಪಾಂತರವಷ್ಟೇ. ಈ ರೂಪಾಂತರಗಳು ಮತ್ತೊಂದು ಹುಟ್ಟಿಗೆ ಕಾರಣವಾಗುತ್ತವೆ. ಇದು ವೈಜ್ಞಾನಿಕ ಅಂಶ. ಈ ವೈಜ್ಞಾನಿಕ ಅಂಶವನ್ನು ಶ್ಲೋಕದಲ್ಲಿ ಸೆರೆಹಿಡಿದು ದೇಹದಲ್ಲಿರುವ ಆತ್ಮವು (ಶಕ್ತಿ) ಗರ್ಭಕೂಸು, ಬಾಲ್ಯ, ಯೌವನ, ವೃದ್ಧಾಪ್ಯ ದೇಹದಲ್ಲಿ ಮುಂದುವರಿದು ದೇಹಕ್ಕೆ ಸಾವುಂಟಾ ದಾಗ ಹೊರಬಂದು ಮತ್ತೊಂದು ದೇಹಕ್ಕೆ ಸೇರ್ಪಡೆಯಾಗುತ್ತದೆ. ಹಾಗೆಯೇ ದೇಹವೂಪಂಚಭೂತಗಳಲ್ಲಿ ಪರಿವರ್ತನೆಯಾಗಿ ಮತ್ತೊಂದು ಹುಟ್ಟಿಗೆ ಕಾರಣವಾಗುತ್ತದೆ.
ಹುಟ್ಟು ಮತ್ತು ಸಾವುಗಳು ಸೃಷ್ಟಿಯಲ್ಲಿ ನಿರಂತರವಾಗಿ ಜರುಗುವ ಸಹಜ ಪರಿವರ್ತನಾ ಕ್ರಿಯೆಗಳೆಂಬ ವೈಜ್ಞಾನಿಕ ಅಂಶಗಳನ್ನು ಗೀತೆಯಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.
(ಮುಂದುವರೆಯುವುದು)