ಮಹಾತ್ಮ ಗಾಂಧೀಜಿ ಈಗಂತೂ ಅಪ್ರಸ್ತುತವಂತೆ, ನಿಜವೇ ?
ಸತ್ಯಶೋಧನೆ
ಪ್ರೊ.ಆರ್‌.ಜಿ.ಹೆಗಡೆ
ದೇಶಕ್ಕೆ ಮಹಾತ್ಮ ಗಾಂಧೀಜಿ ನೀಡಿದ ಕೊಡುಗೆಯ ಮರುಮೌಲ್ಯಮಾಪನ ನಡೆಯುತ್ತಿದ್ದು, ಈ ಕುರಿತಾದ ಲೇಖನಗಳು, ಚರ್ಚೆ ಗಳು ಹೊಮ್ಮುತ್ತಿವೆ. ಕೆಲವು ನೇರವಾಗಿ, ಮತ್ತೆ ಕೆಲವು ಸೂಕ್ಷ್ಮವಾಗಿ ಹೇಳುತ್ತಿರುವುದೆಂದರೆ- ‘ಗಾಂಧೀಜಿ ಈಗಂತೂ ಅಪ್ರಸ್ತುತ’. ‘ಸ್ವಾತಂತ್ರ್ಯ ಚಳವಳಿಯಲ್ಲೂ ಗಾಂಧೀಜಿಯ ಪಾತ್ರ ದೊಡ್ಡದೇನೂ ಇರಲಿಲ್ಲ.
ಇವರ ಅಹಿಂಸಾ ತತ್ತ್ವ, ಉಪವಾಸ ಸತ್ಯಾಗ್ರಹಗಳಿಗೆ ಹೆದರಿ ಬ್ರಿಟಿಷರು ಭಾರತ ತೊರೆ ದರು ಎನ್ನುವುದು ಹಾಸ್ಯಾಸ್ಪದ. ಗಾಂಧೀಜಿ ಹಿಂದೂಧರ್ಮಕ್ಕೆ ಅಪಚಾರವೆಸಗಿ ಇನ್ನೊಂದು ಧರ್ಮವನ್ನು ಎತ್ತಿಹಿಡಿದರು’ ಹೀಗೆ ಸಾಗುತ್ತದೆ ಇಂಥವರ ವಾದ ಸರಣಿ. ಗಾಂಧಿ ಹತ್ಯೆಗೆ ಗೋಡ್ಸೆಗೆ ಬಲವಾದ ಕಾರಣಗಳಿದ್ದವು ಎನ್ನುವ ವಾದವೂ ಇದೆ (ಇದ ರರ್ಥ ಗ್ರಹಿಸುವುದು ಕಷ್ಟವೇನಲ್ಲ). ಮರುಮೌಲ್ಯಮಾಪನ ತಪ್ಪೇನಲ್ಲ.
ಹಾಗೆಯೇ ಅಭಿಪ್ರಾಯಗಳಿಗೆ ಉತ್ತರಿಸಿ ಗಾಂಽಜಿಯನ್ನು ರಕ್ಷಿಸುವ ಅಗತ್ಯವೂ ಇಲ್ಲ. ಬದುಕಿರುವಾಗಲೂ ವಿಮರ್ಶೆಗಳಿಗೆ ಒಡ್ಡಿಕೊಂಡೇ ಇದ್ದ ಅವರು, ತಮ್ಮ ತಪ್ಪಿದ್ದರೆ ಪಶ್ಚಾತ್ತಾಪಪಟ್ಟು ಸರಿಪಡಿಸಿಕೊಳ್ಳುತ್ತಿದ್ದರು. ಹಾಗಾಗಿ ಗಾಂಧೀಜಿ ಕುರಿತಾದ ಬೇರೆ ದೃಷ್ಟಿಕೋನಗಳನ್ನು ಖಂಡಿಸುವ ಅಗತ್ಯವಿಲ್ಲ. ಆದರೂ ನಾವು ಗಾಂಽಜಿಯನ್ನು ಮತ್ತೊಮ್ಮೆ ಅವಲೋಕಿಸಿ ನಿಲುವುಗಳನ್ನು ಖಾತ್ರಿಪಡಿಸಿಕೊಳ್ಳಬೇಕಿದೆ.
೧) ‘ಗಾಂಧೀಜಿಯ ಸತ್ಯಾಗ್ರಹಕ್ಕೆ ಬೆದರಿ ಬ್ರಿಟಿಷರು ಭಾರತ ತೊರೆಯಲಿಲ್ಲ, ಗಾಂಧಿ ಯವರಿಗೆ ಅಂಥ ಕ್ರೆಡಿಟ್ ನೀಡುವುದು ಸಲ್ಲ’ ಎಂಬ ವಾದವನ್ನು ಮರುಪರಿಶೀಲಿಸೋಣ. ಈ ವಿಷಯವೇ ‘ಗಾಂಧಿತತ್ತ್ವ’ದ ಪ್ರಸ್ತುತತೆಯನ್ನು ನಿರ್ಣಯಿಸುವ ಪ್ರಮುಖಾಂಶ. ಒಂದು ರೀತಿಯಲ್ಲಿ ಈ ಮಾತು ಸರಿ. ಸತ್ಯಾ ಗ್ರಹಕ್ಕೆ ‘ಹೆದರಿ’ ಬ್ರಿಟಿಷರು ಭಾರತವನ್ನು ತೊರೆದಿರಲಿಕ್ಕಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟದ ಉದ್ದೇಶವೂ ಬ್ರಿಟಿಷರನ್ನು ‘ಹೆದರಿಸಿ’ ಓಡಿಸುವುದು ಆಗಿರಲಿಲ್ಲ.
ಗಾಂಧೀಜಿ ಅಂಥ ಭಾಷೆಯನ್ನು ಮಾತನಾಡುತ್ತಿರಲಿಲ್ಲ. ಚಳವಳಿಯು ಬ್ರಿಟಿಷರ ‘ವಿರುದ್ಧ’ ಇರಲೂ ಇಲ್ಲ. ಅದು ಕೇವಲ ‘ಸ್ವಾತಂತ್ರ್ಯ’ ‘ಹೋರಾಟ’ವೂ ಆಗಿರಲಿಲ್ಲ. ‘ಹೋರಾಟ’ಕ್ಕೆ ಮುನ್ನುಡಿಯಾಗಿ ಗಾಂಽಜಿ, ‘ಬ್ರಿಟಿಷರ ವಿರುದ್ಧ ಏಕೆ ಹೋರಾಡಬೇಕು? ಅವರು ದೇಶವನ್ನಾಳಿದರೆ ತೊಂದರೆಯೇನು? ಸ್ವಾತಂತ್ರ್ಯ ಎಂದರೇನು? ಅವರ ನಂತರ ನಾವು ಎಂಥ ಸರಕಾರ ರಚಿಸಬೇಕು? ‘ಬಿಳಿ ಸಾಹಿಬ್‌ಗಳು’ (ಬ್ರಿಟಿಷರು) ಹೋಗಿ ‘ಕಂದು ಸಾಹಿಬ್‌ಗಳು’ (ನಮ್ಮವರು) ಬಂದರೆ ಎಲ್ಲವೂ ಸರಿಯಾಗುವುದೇ?’ ಎಂಬ ಪ್ರಶ್ನೆಗಳನ್ನು ಸ್ವತಃ ಕೇಳಿಕೊಂಡು ಚಿಂತನೆಯಲ್ಲಿ ತೊಡಗುತ್ತಾರೆ.
ನಂತರ, ‘ಬ್ರಿಟಿಷರನ್ನು ತೊಲಗಿಸುವುದಷ್ಟೇ ಉದ್ದೇಶವಲ್ಲ. ಹೋರಾಟವಿರುವುದು ಪಾಶ್ಚಿಮಾತ್ಯ ಸಂಸ್ಕೃತಿಯ ವಿರುದ್ಧ, ಆ ಸೈತಾನನ ಸಂಸ್ಕೃತಿಯ ವಿರುದ್ಧ’ ಎಂದು ಸ್ಪಷ್ಟಪಡಿಸಿಕೊಳ್ಳುತ್ತಾರೆ. ಗಾಂಧೀಜಿಯ ಇಂಥ ನಿಲುವಿಗೆ ಕಾರಣಗಳಿವೆ. ಅವರುಭಾವಿಸಿದಂತೆ ಪಾಶ್ಚಿಮಾತ್ಯ ಸಂಸ್ಕೃತಿಯು ನೈತಿಕತೆ ಪ್ರಧಾನವಲ್ಲದ, ಸುಖಭೋಗದ ಉಪಕರಣಗಳ ಉತ್ಪಾದನೆಗೆ ಮತ್ತು ಸುಖಪಡುವುದಕ್ಕೆ ಪ್ರಾಮುಖ್ಯ ನೀಡುವ ಸಂಸ್ಕೃತಿ. ಗಾಂಧೀಜಿ ಭಾವಿಸಿದಂತೆ ಇಂಥ ‘ಮೆಟೀರಿಯಲಿಸಂ’ನಿಂದಾಗಿಯೇ ಕೆಲವೇ ರಾಷ್ಟ್ರಗಳು ಶ್ರೀಮಂತವಾಗುತ್ತ ಜಗತ್ತಿನ ಕೋಟ್ಯಂತರ ಜನ ಬಡವರಾಗಿಹೋಗಿದ್ದು, ಜಗತ್ತಿನಾದ್ಯಂತದ ಜನರು ತಮ್ಮ ದೇಶ ದಲ್ಲೇ ಅನ್ಯರಾಗಿ, ಘನತೆ ಕಳೆದುಕೊಂಡು, ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿದ್ದು. ಇಂಥ ಮೆಟೀರಿಯಲಿಸ್ಟಿಕ್ ಸಂಸ್ಕೃತಿಗೆ ವಿರುದ್ಧವಾಗಿ ಇನ್ನೊಂದು ರೀತಿಯ ಮೆಟೀರಿಯಲಿಸ್ಟಿಕ್ ಸಂಸ್ಕೃತಿ ಹುಟ್ಟುಹಾಕುವ ಮೂಲಕ ಮಾರ್ಕ್ಸ್ ಅದಕ್ಕೆ ಸ್ಪಂದಿಸಿದ್ದರೆ, ಗಾಂಧೀಜಿ ಭಾರತೀಯ ಸಂಸ್ಕೃತಿಯಲ್ಲಿರುವ ನೈತಿಕತೆ, ತಾತ್ತ್ವಿಕತೆ, ಧಾರ್ಮಿಕತೆಯ ಪುನರುತ್ಥಾನಕ್ಕೆ ಯತ್ನಿಸುವ ಮೂಲಕ ಸ್ಪಂದಿಸಿದ್ದರು.
ಸಂಸ್ಕೃತಿಯ ಪುನರುತ್ಥಾನ ‘ಗಾಂಧಿ ಹೋರಾಟ’ದ ಪ್ರಾಥಮಿಕ ಗುರಿ, ಬ್ರಿಟಿಷರನ್ನು ಓಡಿಸುವುದಷ್ಟೇ ಅಲ್ಲ. ಹಾಗೆ ಓಡಿಸಿ ಬಿಟ್ಟರೂ ಬ್ರಿಟಿಷ್ ಸಂಸ್ಕೃತಿ ಉಳಿದುಹೋದರೆ ಏನನ್ನೂ ಸಾಧೀಸಿದಂತಾಗುವುದಿಲ್ಲ ಎನ್ನುವುದು ಗಾಂಧೀಜಿಗೆ ಗೊತ್ತಿತ್ತು. ಗಾಂಧಿ ಚಳವಳಿ ನಾಗರಿಕತೆಗಳ ಸಮರ. ಈ ಸಂಸ್ಕೃತಿಯಿಂದ ಮುಕ್ತಿಪಡೆದು ನಂತರ ರಾಜಕೀಯ ಸ್ವಾತಂತ್ರ್ಯ ಪಡೆಯುವ ಗುರಿ ಹೊಂದಿದ್ದ ಸಂಕೀರ್ಣ ‘ಸಮರ’. ಅದು ಮೂಲತಃ ಸಾಂಸ್ಕೃತಿಕ ಹೋರಾಟ. ಹಾಗಾಗಿಯೇ ಗಾಂಧಿ ಬಳಸಿದ ಆಯುಧಗಳು ಹಿಂದೂ ಸಂಸ್ಕೃತಿಯ ಆಳದಲ್ಲಿರುವ ಶ್ರೇಷ್ಠ ಮೌಲ್ಯಗಳು ಮತ್ತು ಪ್ರತಿರೋಧದ ತಂತ್ರಗಳು (ಉಪವಾಸ, ಭಜನೆ, ಹರತಾಳ ಮತ್ತು ಅಹಿಂಸೆ). ಅವಕ್ಕೆ ಅಪಾರ ಶಕ್ತಿಯಿದೆ ಎನ್ನುವುದು ಗಾಂಧೀಜಿಗೆ ಗೊತ್ತಿತ್ತು.
ಋಷಿ ಮುನಿಗಳು, ಸಂತರು, ಧರ್ಮಸುಧಾರಕರು ಬಳಸಿದ ಮಾರ್ಗಗಳು ಅವೇ ಎನ್ನುವುದು ಗೊತ್ತಿತ್ತು. ನಮ್ಮ ಮೌಲ್ಯಗಳು ಬ್ರಿಟಿಷ್ ಮೌಲ್ಯಗಳಿಗೆ ಮುಖಾಮುಖಿಯಾದಾಗ ಆ ಸಂಸ್ಕೃತಿ ತನ್ನ ಕುರಿತು ನಾಚಿಕೊಳ್ಳುತ್ತದೆ. ಹಾಗಾದಾಗ ಇಂಗ್ಲೆಂಡ್ ಹಿಂದೆ ಸರಿಯುತ್ತದೆ ಎನ್ನುವುದು ಗಾಂಧೀಜಿ ನಂಬುಗೆಯಾಗಿತ್ತು. ಇಂಥ ಯತ್ನದಲ್ಲಿ ಗಾಂಧೀಜಿ ಕೆಲಮಟ್ಟಿಗಾದರೂ ಯಶಸ್ವಿಯಾಗಿದ್ದು ನಮಗೆ ಗೊತ್ತಿದೆ. ಅವರಿಗೆ ಜೈಲುಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಪಾಪಪ್ರಜ್ಞೆಯಿಂದ ಎದ್ದುನಿಂತುಬಿಡುತ್ತಾನೆ.
ಕಲ್ಕತ್ತಾದಲ್ಲಿ ಶುರುವಾದ ಕೋಮುಗಲಭೆಯನ್ನು ಗಾಂಧೀಜಿ ಏಕಾಂಗಿಯಾಗಿ ಹತೋಟಿಗೆ ತಂದಿದ್ದು ನೋಡಿ ವಿಶ್ವ ನಿಬ್ಬೆರ ಗಾಯಿತು. ತಮ್ಮ ಹೋರಾಟದ ಗೆಲುವಿಗೆ (ಗೆಲ್ಲುವುದು, ಸೋಲಿಸುವುದು ಇತ್ಯಾದಿ ಪದಗಳನ್ನು ಗಾಂಧೀಜಿ ಆಡುತ್ತಿರಲಿಲ್ಲ) ಗಾಂಧೀಜಿ ನಿರ್ದಿಷ್ಟ ದಿನಾಂಕ ಇಟ್ಟುಕೊಂಡಿರಲಿಲ್ಲ. ಇಲ್ಲಿನ ಮುಖ್ಯವಿಷಯ- ನಮ್ಮ ಸಂಸ್ಕೃತಿಯ ನೈತಿಕಶಕ್ತಿಯ ಪುನರುತ್ಥಾನ.೨) ಇತಿಹಾಸಕಾರ್ತಿ ರೊಮಿಲಾ ಥಾಪರ್ ಹೇಳುವಂತೆ, ಭಾರತಕ್ಕೆ ‘ರಾಷ್ಟ್ರೀಯತೆಯ ಪರಿಕಲ್ಪನೆ’ ನೀಡಿದ್ದು ಗಾಂಧೀಜಿ.
ಹಿಂದೆ ನಮ್ಮಲ್ಲಿ ರಾಜಕೀಯ ಐಕ್ಯತೆಯ ಪರಿಕಲ್ಪನೆಯಿರಲಿಲ್ಲ (ಸಾಂಸ್ಕೃತಿಕ ಏಕತೆ ಇತ್ತು). ರಾಜರು-ರಾಣಿಯರು ಬ್ರಿಟಿಷರ ವಿರುದ್ಧ ಹೋರಾಡಿದ್ದು ತಮ್ಮ ಸಲುವಾಗಿ; ಅವೆಲ್ಲ ಸ್ವಾತಂತ್ರ್ಯ ಹೋರಾಟಗಳಾಗಿರಲಿಲ್ಲ. ಹಾಗೆಯೇ ಮೊದಲ ಪೀಳಿಗೆಯ‘ಹೋರಾಟ’ಗಳಲ್ಲಿ ಶ್ರೀಸಾಮಾನ್ಯರ, ದೀನದಲಿತರ, ಮಹಿಳೆಯರ ಭಾಗವಹಿಸುವಿಕೆ ಇರಲಿಲ್ಲ. ಸ್ವಾತಂತ್ರ್ಯ ಹೋರಾಟವನ್ನು ಜನರ ಹೋರಾಟವನ್ನಾಗಿಸಿ ತಾವೆಲ್ಲರೂ ಒಂದು ‘ನೇಷನ್ ಸ್ಟೇಟ್’ನಲ್ಲಿ ಭಾಗೀದಾರರು ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಿದ್ದು, ಮಹಿಳೆಯರು, ಕಡುಬಡವರನ್ನೂ ಚಳವಳಿಯಲ್ಲಿ ಕೂಡಿಸಿದ್ದು ಗಾಂಧೀಜಿ.
ಗಾಂಧೀಜಿ ಬರುವುದಕ್ಕೂ ಮುನ್ನ ಸ್ವಾತಂತ್ರ್ಯ ಚಳವಳಿಯು ಕೇವಲ ಸಮಾಜದ ಮೇಲ್ವರ್ಗದವರ (ಉದಾಹರಣೆಗೆ ಮೋತಿಲಾಲ್ ನೆಹರು ಅಂಥವರ) ಕೈಯಲ್ಲಿತ್ತು. ಅಂದರಲ್ಲಿ ಬಹುತೇಕ ಜನ ಭಾಗವಹಿಸಿರಲಿಲ್ಲ. ಒಂದು ರಾಜಕೀಯ ಆಶ್ರಯದ ಕೆಳಗೆಜನ ಬಂದಿದ್ದು ಗಾಂಧಿಯವರ ಕಾಲಘಟ್ಟದಲ್ಲೇ. ಜನರಲ್ಲಿ ಧೈರ್ಯ, ನೈತಿಕಶಕ್ತಿ ತುಂಬಿದ ಗಾಂಧೀಜಿ, ಅವರನ್ನೆಲ್ಲ ಯಾವಹಣ, ಸೇನಾಬಲವೂ ಬಗ್ಗಿಸಲಾಗದಂಥ ಘನತೆವಂತರನ್ನಾಗಿ ಮಾಡಿಬಿಟ್ಟರು.
ಹೋರಾಟವು ಪ್ರಜಾಪ್ರಭುತ್ವ ಪರಂಪರೆಯ ಹೋರಾಟವಾಗಿಹೋಯಿತು. ಗಾಂಧೀಜಿ ಹೀಗೆ ಒಗ್ಗೂಡಿಸಿದ ಜನ ಬಡವರಾಗಿದ್ದರೂ ನೈತಿಕವಾಗಿ ಶ್ರೀಮಂತರಾಗಿದ್ದವರು, ಅನ್ಯರ ದುಡ್ಡು ಬಯಸಿದವರಲ್ಲ, ಸರಕಾರದಿಂದಲೂ ಏನನ್ನೂ ಅಪೇಕ್ಷಿಸಿದವರಲ್ಲ. ತ್ಯಾಗಕ್ಕೆ ಸಿದ್ಧವಿದ್ದವರು. ಸ್ವಾತಂತ್ರ್ಯವು ಹಿಂಸಾಮಾರ್ಗದಿಂದ ಬಂದಿದ್ದರೆ ನಾವು ಪ್ರಜಾಪ್ರಭುತ್ವ ದೇಶವಾಗಿ ಉಳಿಯುತ್ತಿರಲಿಲ್ಲ ವೇನೋ? ಏಕೆಂದರೆ ಹಿಂಸಾತ್ಮಕ ಚಳವಳಿಗಳ ನಾಯಕರಿಗೆ ಅಧಿಕಾರ ಬಿಟ್ಟುಕೊಡುವ ಮನಸ್ಸಿರುವುದಿಲ್ಲ.
ಸೇನಾಬಲದ ಹೋರಾಟಗಳು, ಒಂದು ವ್ಯಕ್ತಿ ಅಥವಾ ವ್ಯವಸ್ಥೆ ತನ್ನನ್ನು ಬಲಪಡಿಸಿಕೊಳ್ಳುವ ಹೋರಾಟಗಳಾಗಿರುತ್ತವೆ. ಅವು ಜನರ ಕೈಗೆ ಅಧಿಕಾರ ನೀಡುವುದಿಲ್ಲ. ಈ ಸೂಕ್ಷ್ಮ ಬಹುಶಃ ಗಾಂಧೀಜಿಗೆ ಗೊತ್ತಿತ್ತು. ಏಕೆಂದರೆ ಅಂದಿನ ಸಂದರ್ಭದಲ್ಲಿ ಸೈನ್ಯದ ಮೂಲಕ ಹೋರಾಟ ನಡೆಸಿದ್ದಿದ್ದರೆ ನಾವು ಗೆಲ್ಲುವುದು ಅನುಮಾನವಿತ್ತು. ಕಾರಣ, ಯುದ್ಧಗಳಿಗೆ ಬೇಕಾಗುವ ಹಣ, ಸೇನಾಶಕ್ತಿ ನಮ್ಮಲ್ಲಿರಲಿಲ್ಲ. ಗೆಲ್ಲಲು ಬೇರೆ ದೇಶದ ಸಹಾಯ ಪಡೆದಿದ್ದರೆ ನಾವು ಅದಕ್ಕೆ ಅಡಿಯಾಳಾಗುತ್ತಿದ್ದೆವು.
೩) ದೇಶಗಳ, ಸರಕಾರಗಳ ಕುರಿತೇ ಅನುಮಾನವಿದ್ದ ಗಾಂಧೀಜಿಗೆ ಅವನ್ನು ನಡೆಸುವ ‘ನಾಯಕರು’ ಜನವಿರೋಧಿಯಾಗಿರಲು ಸಾಧ್ಯವಿದೆ ಎಂಬುದು ತಿಳಿದಿತ್ತು. ರಷ್ಯಾ, ಚೀನಾದ ಜನರ ಪರಿಸ್ಥಿತಿ ನೋಡಿದ್ದ ಗಾಂಧೀಜಿಗೆ ದೇಶಕ್ಕಿಂತಲೂ ಜನಕಲ್ಯಾಣಮುಖ್ಯವೆಂಬುದು ಗೊತ್ತಿತ್ತು. ನಿಜದ ಪ್ರಜಾಪ್ರಭುತ್ವ ಸಾಧಿಸಲು ಹೊರಟ ಗಾಂಧೀಜಿ, ಗ್ರಾಮಸ್ವರಾಜ್ಯದ ಪರಿಕಲ್ಪನೆ ಮುಂದಿ ಟ್ಟಿದ್ದು ಇಂಥ ಸಮಸ್ಯೆಯನ್ನು ಬಗೆಹರಿಸಲೆಂದೇ. ವಿಕೇಂದ್ರಿತ ಆಡಳಿತದಲ್ಲಿ ಸರಕಾರಗಳು ವಿಪರೀತ ಬಲಗೊಳ್ಳುವ ಅಗತ್ಯ ವಿರುವುದಿಲ್ಲ, ಆಗ ಅವು ಸೇವೆಯಲ್ಲಿ ತೊಡಗಬಹುದು ಎಂಬುದು ಗಾಂಧೀಜಿಯ ಗ್ರಹಿಕೆಯಾಗಿತ್ತು.
೪) ಗಾಂಧೀಜಿ ತಮ್ಮನ್ನು ‘ಸನಾತನಿ ಹಿಂದೂ’ ಎಂದು ಕರೆದುಕೊಂಡವರು. ಸ್ವಾತಂತ್ರ್ಯ ಚಳವಳಿಗೆ ಹಿಂದೂಧರ್ಮದ ಮೌಲ್ಯ-ತಂತ್ರಗಳೇ ಆಧಾರಸ್ತಂಭಗಳಾಗಿದ್ದವು. ಆದರೂ ಅವರ ಜೀವನದ ಕೊನೆಯ ಹಂತದ ಘಟನೆಗಳನ್ನು ನೋಡಿದಾಗ ಕೆಲವರಿಗೆ ಗಾಂಧೀಜಿ ಕುರಿತು ಅನುಮಾನ ಬಂದರೆ ಅಚ್ಚರಿಯಿಲ್ಲ. ‘ಜಿನ್ನಾ ಪ್ರಧಾನಿಯಾಗಲಿ, ಪಾಕಿಸ್ತಾನಕ್ಕೆ ಹಣ ನೀಡಬೇಕು’ ಎಂದಿದ್ದ ಗಾಂಧೀಜಿಗೆ ಪಟೇಲ್ ಪ್ರಧಾನಿಯಾಗುವುದು ಇಷ್ಟವಿರಲಿಲ್ಲ (ಏಕೆಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ), ನೆಹರು ಆಗಲಿ ಎಂದು ಪಟ್ಟುಹಿಡಿದಿದ್ದರು.
ಗಾಂಧೀಜಿಯ ಈ ನಿರ್ಣಯಗಳನ್ನು ಯಾವ ನೆಲೆಯಲ್ಲಿ ಗ್ರಹಿಸುವುದು ಎಂಬ ಪ್ರಶ್ನೆ ಇದೆ. ಸೂಕ್ಷ್ಮವಾಗಿ ಗಮನಿಸಿದಾಗ, ಇವೆಲ್ಲ ಅವರ ವ್ಯಕ್ತಿತ್ವದ ಅಸ್ತಿತ್ವವಾದಿ ವ್ಯಂಗ್ಯಗಳು ಎಂಬುದು ಅರ್ಥವಾಗುತ್ತದೆ. ಅಂದರೆ, ಅವರ ಸಮಗ್ರ ವ್ಯಕ್ತಿತ್ವದ ಭಾಗವೇ ಆಗಿ ಹೋಗಿದ್ದ ನಿರ್ಣಯಗಳು. ಅವು ‘ರಾಜಕೀಯವಾಗಿ’ ತಪ್ಪಾಗಿದ್ದವು ಎನ್ನಬೇಕು. ಆದರೆ ಇಂಥ ನಿರ್ಣಯಗಳನ್ನು ತೆಗೆದು ಕೊಳ್ಳದಿದ್ದಿದ್ದರೆ ಅವರು ಗಾಂಧಿಯಾಗದೆ ಸಾಧಾರಣ ‘ರಾಜಕಾರಣಿ’ ಆಗಿಬಿಡುತ್ತಿದ್ದರು.
ಅವರ ಪಾಲಿಗೆ ರಾಜಕೀಯವೂ ಆಳವಾದ ನೈತಿಕತೆಗೆ ಹೊರತಾದುದಾಗಿರಲಿಲ್ಲ. ಗಾಂಧೀಜಿ ಬಹುಶಃ ಈ ನಿರ್ಣಯಗಳನ್ನು ತಳೆಯುವಾಗ, ಸರಿ-ತಪ್ಪುಗಳನ್ನು ‘ದೇಶದ’ ರಾಜಕೀಯ ವ್ಯಾವಹಾರಿಕ ದೃಷ್ಟಿಕೋನದಿಂದ ನೋಡದೆ, ತಮ್ಮ ‘ನೈತಿಕತೆಯ’ ಹಿನ್ನೆಲೆಯಿಂದ ನೋಡಿಬಿಟ್ಟಿದ್ದರು ಅನಿಸುತ್ತದೆ. ಇಂಥ ನಿರ್ಣಯಗಳ ರಾಜಕೀಯ ಪ್ರಭಾವ ಸಾಮಾನ್ಯ ದೇಶಭಕ್ತನ ಮೇಲೆ ಹೇಗೆ ಬೀಳುತ್ತದೆ ಇತ್ಯಾದಿ ವಿಷಯಗಳ ಅರಿವು ಗಾಂಧೀಜಿಗೆ ಇರಲಿಲ್ಲ ಎನ್ನಲಾಗುವುದಿಲ್ಲ.
ಏಕೆಂದರೆ ಅವರಿಗೆ ರಾಜಕೀಯ ಗೊತ್ತಿತ್ತು. ತಮ್ಮೀ ನಿರ್ಣಯಗಳು ಜನಪ್ರಿಯವಲ್ಲ ಎಂಬುದನ್ನು ಅರಿಯದಷ್ಟು ದಡ್ಡರಾಗಿರ ಲಿಲ್ಲ ಗಾಂಧೀಜಿ. ಅಂದರೆ, ಬಹುಶಃ ನಂಬುಗೆಗಳಿಗಾಗಿ ತಮ್ಮನ್ನು ಬಲಿಕೊಡಲು ಅವರು ಸಿದ್ಧರಾಗಿದ್ದರು ಎಂದೇ ಅನಿಸುತ್ತದೆ.
೫) ವಿಲಕ್ಷಣ ವರ್ತನೆಗಳ ಗಾಂಧೀಜಿ, ಪತ್ನಿ ಕಸ್ತೂರಬಾರ ಮೇಲೆ ವಿಪರೀತ ಷರತ್ತುಗಳನ್ನೂ, ಮಕ್ಕಳ ಮೇಲೆ ಒತ್ತಡಗಳನ್ನೂಹೇರಿದ್ದರು. ತಮಗೆ ಕಾಮವನ್ನು ಜಯಿಸಲಾಗಿದೆಯೇ ಎಂಬುದರ ಖಾತ್ರಿಗೆ ಪರೀಕ್ಷೆಗಳಿಗೆ ಒಡ್ಡಿಕೊಂಡಿದ್ದರು. ಹೀಗಾಗಿ ಗಾಂಧೀಜಿಬರೀ ರಾಜಕಾರಣಿಯಾಗಿರಲಿಲ್ಲ. ತಮ್ಮನ್ನು ಪರಿಶುದ್ಧರಾಗಿಸಿಕೊಳ್ಳುವ, ‘ಸತ್ಯವನ್ನು’ ಅರಸುವ ನಿರಂತರ ಪರೀಕ್ಷೆಯಲ್ಲಿ ತೊಡಗಿದ್ದರು. ರಾಜಕಾರಣಿಯಾಗಿದ್ದರೆ ವಿಷಯಗಳನ್ನು ಮುಚ್ಚಿಡುತ್ತಿದ್ದರೇನೋ; ಆದರೆ ಜೀವನವನ್ನು ಪಾರದರ್ಶಕವಾಗಿಟ್ಟು ಕೊಳ್ಳಲೆಂದು ಗಾಂಧೀಜಿ ಎಲ್ಲವನ್ನೂ ಹೇಳಿಬಿಟ್ಟರು.
೬) ಅಪ್ರಸ್ತುತವೆಂದು ಹಲವರು ಭಾವಿಸುತ್ತಿರುವ ಕಾರಣಗಳನ್ನೂ ಹುಡುಕಿಕೊಳ್ಳಬೇಕು. ಇದಕ್ಕೆ ಕಾರಣ ಗಾಂಧೀಜಿಯ (ಧರ್ಮ ರಾಜನಂಥ) ಸತ್ಯನಿಷ್ಠೆ ಮತ್ತು ಪಾರಮಾರ್ಥಿಕತೆ (ಧರ್ಮರಾಜ ಹಲವು ಬಾರಿ ಪಾಂಡವರನ್ನೇ ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತಿದ್ದ) ಹಾಗೂ ಗಾಂಧೀಜಿ ಹೆಸರು, ಭಾವಚಿತ್ರವನ್ನು ಬಳಸಿಕೊಂಡು ದೀರ್ಘಕಾಲ ನಡೆದುಬಂದ ‘ಓಲೈಕೆ ರಾಜಕೀಯ’. ಈ ರಾಜಕೀಯ ದಿಂದ ಬೇಸತ್ತಿರುವ ಇಂದಿನ ಜನ, ‘ಇಂಥದಕ್ಕೆಲ್ಲ ಗಾಂಧೀಜಿಯೇ ಕಾರಣ’ ಎಂದು ನಂಬಿರಲು ಸಾಧ್ಯವಿದೆ. ಗಾಂಧೀಜಿಯ ಮರುಮೌಲ್ಯಮಾಪನದ ವೇಳೆ ಮೇಲ್ಕಾಣಿಸಿದ ವಿಷಯಗಳನ್ನೂ ಪರಿಗಣಿಸಬೇಕು.