ಅಸೀಮ ರಾಷ್ಟ್ರಪ್ರೇಮ ಇಂದಿನ ಅನಿವಾರ್ಯ
ದುಂದುಭಿ
ಬೈಂದೂರು ಚಂದ್ರಶೇಖರ ನಾವಡ
ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಆಂಗ್ಲರ ವಿರುದ್ಧ ಹೋರಾಡಿದ ಕಹಿನೆನಪು ಮಾಸುತ್ತಿದ್ದಂತೆ ಸ್ವಾರ್ಥ, ಲಂಚ ಗುಳಿತನ ಹೆಡೆಯೆತ್ತತೊಡಗಿವೆ. ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವಿನ ವ್ಯತ್ಯಾಸ ತಿಳಿಯದವರ ಬೇಜವಾಬ್ದಾರಿ ತನದ ನಕಾರಾತ್ಮಕ ಪರಿಣಾಮಗಳು ಗೋಚರಿಸುತ್ತಿವೆ.
ದೇಶದ ಜನರಲ್ಲಿರುವ ‘ನಾವೆಲ್ಲ ಒಂದೇ’ ಎಂಬ ಭಾವನೆಯನ್ನು ರಾಷ್ಟ್ರೀಯತೆ ಅಥವಾ ರಾಷ್ಟ್ರಪ್ರೇಮ ಎಂದು ಸ್ಥೂಲವಾಗಿ ವ್ಯಾಖ್ಯಾನಿಸಬಹುದು. ದೇಶದ ಕುರಿತಾದ ಇಂಥ ಅಪಾರಪ್ರೇಮವೇ ದೇಶದ ನಿಜವಾದ ಶಕ್ತಿ. ಬಾಹ್ಯ ಆಕ್ರಮಣಗಳನ್ನು ದೇಶವು ತನ್ನ ಸೇನಾಶಕ್ತಿಯಿಂದ ಎದುರಿಸುತ್ತದಾದರೂ, ಆಂತರಿಕವಾಗಿ ಒಗ್ಗಟ್ಟಿನ ಭಾವನೆ ಇಲ್ಲದಿದ್ದರೆ ದೇಶದ ಐಕ್ಯತೆ ಉಳಿಯುವುದಿಲ್ಲ.
ಬದಲಾಗುತ್ತಿರುವ ಇಂದಿನ ವಿಶ್ವವ್ಯವಸ್ಥೆಯಲ್ಲಿ ರಾಷ್ಟ್ರಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕಾಗಿದೆ. ನಮ್ಮ ನಮ್ಮೊಳಗೆ ಕಿತ್ತಾಡುತ್ತಿರುವಂಥ ವಿಷಮ ಸ್ಥಿತಿಯಲ್ಲಿ ಮತ್ತು ಆಂತರಿಕ ಐಕಮತ್ಯವಿಲ್ಲದಂಥ ಸಂದರ್ಭದಲ್ಲಿ ಬಾಹ್ಯಶಕ್ತಿಗಳನ್ನು ಹೇಗೆ ಎದುರಿಸಲು ಸಾಧ್ಯ? ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆ. ಆದರೆ ಅನೇಕ ಬಾರಿ ಧರ್ಮ, ಭಾಷೆ, ಪ್ರಾಂತ್ಯ ಮೇಲುಗೈ ಸಾಧಿಸಿದಂತೆ ಭಾಸವಾಗುತ್ತದೆ.
ನಾವು ಕನ್ನಡಿಗರು, ತಮಿಳರು, ಮಲಯಾಳಿಗಳು, ಬಂಗಾಲಿಗಳು, ಪಂಜಾಬಿಗಳು ಎಂದು ಆಲೋಚಿಸುವ ಬದಲಾಗಿ ‘ನಾವು ಭಾರತೀಯರು’ ಎಂದು ಯೋಚಿಸುವ ವಿಶಾಲ ಭ್ರಾತೃತ್ವ ಭಾವನೆ ಬೆಳೆದಾಗ ರಾಷ್ಟ್ರೀಯತೆ ಬಲಗೊಳ್ಳುತ್ತದೆ. ಭಾಷೆಯ ಹೆಸರಲ್ಲಿ, ಧರ್ಮದ ಆಧಾರದಲ್ಲಿ ಜನರಲ್ಲಿ ಭಾವನೆ ಗಳನ್ನು ಕೆರಳಿಸಿ ಅದರ ಲಾಭ ಪಡೆಯುವ ರಾಜಕೀಯ ನಾಯಕರಿಂದ ಹಾಗೂ ಅದಕ್ಕೆ ಕುಮ್ಮಕ್ಕು ನೀಡುವ ಧಾರ್ಮಿಕ ನಾಯಕರಿಂದ ದೇಶದ ಏಕತೆಗೆ ಧಕ್ಕೆಯಾದಂತೆ ಕೆಲವೊಮ್ಮೆ ಭಾಸವಾಗುತ್ತದೆ.
‘ರಾಷ್ಟ್ರ ಮೊದಲು’ ಎನ್ನುವ ಸಿದ್ಧಾಂತವನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಒಪ್ಪುವುದರಿಂದ, ಅನುಸರಿಸುವುದರಿಂದರಾಷ್ಟ್ರೀಯತೆಯ ಬೇರು ಗಟ್ಟಿಕೊಳ್ಳುವುದು ಸಾಧ್ಯವಾಗುತ್ತದೆ. ಶ್ರೀಲಂಕಾ, ನೇಪಾಳ, ಬರ್ಮಾ, ಮಾಲ್ಡೀವ್ಸ್‌ನಂಥ ಚಿಕ್ಕದೇಶಗಳು ಇಂದು ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ಅಭದ್ರತೆಯ ವಿಕಟ ಸ್ಥಿತಿಯನ್ನು ಎದುರಿಸುತ್ತಿವೆ, ಚೀನಾದಂಥ ದೊಡ್ಡದೇಶದ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿವೆ. ಸಾಮಾನ್ಯ ಜನರ ಬದುಕು ಮೂರಾಬಟ್ಟೆಯಾಗಿದೆ.
ಉಕ್ರೇನ್‌ನಂಥ ಯುದ್ಧಗ್ರಸ್ತ ದೇಶದ ಪ್ರಜೆಗಳು ಬಾಂಬ್ ದಾಳಿಯ ಭಯದಲ್ಲಿ ದಿನದೂಡುತ್ತಿದ್ದಾರೆ. ಆಹಾರ ಪೂರೈಕೆ, ವೈದ್ಯಕೀಯ ಸೌಲಭ್ಯಗಳಿಲ್ಲದೆ ‘ತ್ರಾಹಿ ತ್ರಾಹಿ’ ಎನ್ನುತ್ತಿದ್ದಾರೆ. ಪ್ರತ್ಯೇಕ ದೇಶದ ಕನಸು ಕಾಣುತ್ತಿರುವ ಕಾಶ್ಮೀರಿಗಳು, ಖಾಲಿಸ್ತಾನಿ ಗಳು ಇದರಿಂದ ಬುದ್ಧಿ ಕಲಿಯಬೇಕಿದೆ. ವಿಶಾಲವಾದ ಹಾಗೂ ಬಲಿಷ್ಠವಾದ ಭಾರತೀಯ ಒಕ್ಕೂಟದ ಅಧೀನದಲ್ಲಿ ನಾವೆಲ್ಲ ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಾಗಿರುವುದಕ್ಕೆ ಹೆಮ್ಮೆ ಪಡಬೇಕು.
ಮಹಾನ್ ಭಾರತದ ನಾಗರಿಕ ಎನ್ನುವುದೇ ನಮಗೆ ಅಭಿಮಾನದ ವಿಷಯ ಎನಿಸಬೇಕು. ಈ ಭಾವನೆಯನ್ನು ಮುಂದಿನ ಪೀಳಿಗೆಗೂ ಬಿತ್ತಬೇಕಾಗಿದೆ. ರಾಷ್ಟ್ರೀಯತೆ ನಮ್ಮ ಜನಮಾನಸದಲ್ಲಿ ಇಲ್ಲ ಎಂದಲ್ಲ, ಅದು ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ದೇಶವು ಯಾವಾಗೆಲ್ಲ ವಿಪತ್ತಿನ ಸ್ಥಿತಿಯನ್ನು ಎದುರಿಸುತ್ತದೋ ಆಗ ಅದು ಮುನ್ನೆಲೆಗೆ ಬರುತ್ತದೆ. ಇಂಥ ಅನೇಕ ಉದಾಹರಣೆ ಗಳು ನಮ್ಮ ಮುಂದಿವೆ. ಚೀನಾ ಮತ್ತು ಪಾಕಿಸ್ತಾನದ ಜತೆಗಿನ ಯುದ್ಧದ ಸಂದರ್ಭದಲ್ಲಿ ಜನರಲ್ಲಿ ಕೆನೆಗಟ್ಟಿದ್ದ ಏಕತಾಭಾವನೆಮುನ್ನೆಲೆಗೆ ಬಂತು.
1962ರಲ್ಲಿ ಶಾಂತಿಪ್ರಿಯತೆಯ ಆದರ್ಶ ಹೊತ್ತ ನಮ್ಮ ಅಂದಿನ ನಾಯಕರು, ಸೇನಾ ತಯಾರಿಗೆ ಮಾಡುವ ಖರ್ಚು ವ್ಯರ್ಥ ಎಂದು ಅಲಕ್ಷಿಸಿದ್ದರು. ಚೀನಿಯರ ಅತ್ಯಾಧುನಿಕ ಬಂದೂಕು, ಸೈನಿಕರಿಗೆ ನೀಡಲಾಗಿದ್ದ ಸವಲತ್ತುಗಳ ಎದುರುಶಸ್ತ್ರಾಸ್ತ್ರಗಳಿಲ್ಲದ, ಚಳಿಯನ್ನು ತಡೆಯಲು ಸೂಕ್ತವಾದ ಬಟ್ಟೆ-ಬೂಟು ಇಲ್ಲದ, ಅಸಹಾಯಕ ಸ್ಥಿತಿಯಲ್ಲಿದ್ದ ನಮ್ಮ ಸೈನಿಕರಿಗೆ ಯುದ್ಧ ಮಾಡು ವಂತೆ ಆದೇಶ ನೀಡಲಾಯಿತು. ಎರಡು ಡಿವಿಜನ್ ಅಂದರೆ ಸುಮಾರು20000ದಷ್ಟಿದ್ದ ಚೀನಿಯರ ಮುಂದೆ ಕೇವಲಒಂದು ಬ್ರಿಗೇಡ್ ಅಂದರೆ2500ಸೈನಿಕರನ್ನು ನೂಕಲಾಯಿತು. ಪರಿಣಾಮ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಇತಿಹಾಸ.
ಚೀನಾದ ವಿರುದ್ಧ ಹೋರಾಡಿ ದಾರುಣವಾಗಿ ಮಡಿದ ಸೈನಿಕರ ಕುರಿತಾದ ಮಾಧ್ಯಮ ವರದಿಯಿಂದಾಗಿ ಇಡೀ ದೇಶವೇ ಕಣ್ಣೀರಿಟ್ಟಿತು. ಈ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು1963ರಲ್ಲಿ ಸಂಸತ್ತಿನಲ್ಲಿ ‘ಏ ಮೇರೆ ವತನ್ ಕೇ ಲೋಗೋ, ಜರಾ ಆಂಖ್ ಮೆ ಭರ್ ಲೋ ಪಾನಿ’ ಗೀತೆಯನ್ನು ಹಾಡಿದಾಗ ಸ್ವತಃ ಅವರ ಮತ್ತು ಅಲ್ಲಿ ನೆರೆದಿದ್ದವರೆಲ್ಲ ಕಣ್ಣು ಗಳಲ್ಲಿ ಅಶ್ರುಧಾರೆ ಹರಿಯಿತು. ಇದು ದೇಶದ ಜನರ ಸಂವೇದನೆಯನ್ನು, ಏಕತೆಯ ಭಾವನೆಯನ್ನು ಎತ್ತಿ ತೋರಿಸಿತು ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರ ಕುರಿತಾದ ಜನಭಾವನೆ ಎಲ್ಲರೆದುರು ಮುನ್ನೆಲೆಗೆ ಬಂತು ಎನ್ನಲಡ್ಡಿಯಿಲ್ಲ.
ಅದೇ ರೀತಿಯಲ್ಲಿ,1975ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಜನರೆಲ್ಲರೂ ಸರಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸಿಡಿದೆದ್ದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ, ‘ಆಪರೇಷನ್ ಪರಾಕ್ರಮ’ ಕಾರ್ಯಾಚರಣೆಯ ಸಂದರ್ಭದಲ್ಲಿ ಸೇನೆಯ ವಿವಿಧ ತುಕಡಿಗಳು ಗಡಿ ಯತ್ತ ಹೊರಟು ನಿಂತಾಗ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ತಿಲಕವಿಟ್ಟು ಆರತಿ ಬೆಳಗೆ ಹರಸಿ ಬೀಳ್ಕೊಡಲಾಯಿತು. ಅನೇಕ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ನೊಂದವರಿಗೆ ದೇಶದ ಮೂಲೆಮೂಲೆಗಳಿಂದ ನೆರವಿನ ಮಹಾಪೂರ ಹರಿದುಬಂದ ಉದಾಹರಣೆಗಳಿವೆ.
ಕೋವಿಡ್ ಪಿಡುಗು ಅಪ್ಪಳಿಸಿದ ಸಮಯದಲ್ಲಿ ವಲಸಿಗ ಕಾರ್ಮಿಕರಿಗಾಗಿ ಅನೇಕರು ಆಹಾರ ಮತ್ತು ಸಂಚಾರದ ವ್ಯವಸ್ಥೆ ಮಾಡಿದ್ದರು. ಒಟ್ಟಿನಲ್ಲಿ ಹೇಳುವುದಾದರೆ, ಒಂದು ಸಣ್ಣ ಸಮೂಹವನ್ನು ಹೊರತುಪಡಿಸಿ ಬಹುಸಂಖ್ಯಾತರು ದೇಶವನ್ನು ಪ್ರೀತಿಸುತ್ತಾರೆ. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಆಂಗ್ಲರ ವಿರುದ್ಧ ಹೋರಾಡಿದ ಕಹಿನೆನಪು ಮಾಸುತ್ತಿದ್ದಂತೆ, ಹಳೆ ತಲೆಮಾರಿನ ಕೊಂಡಿಗಳು ಒಂದೊಂದಾಗಿ ಕಳಚುತ್ತಿದ್ದಂತೆ ಸ್ವಾರ್ಥ, ಲಂಚಗುಳಿತನ ಹೆಡೆಯೆತ್ತತೊಡಗಿವೆ ಎಂಬುದು ನಿಜ.
ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವಿನ ವ್ಯತ್ಯಾಸ ತಿಳಿಯದವರು ಕರ್ತವ್ಯದ ಕುರಿತಾಗಿ ಕಡಿಮೆ ಪ್ರಮಾಣದಲ್ಲೂ, ಹಕ್ಕು ಮತ್ತು ಸ್ವಾತಂತ್ರ್ಯದ ಕುರಿತಾಗಿ ಹೆಚ್ಚು ಪ್ರಮಾಣದಲ್ಲೂ ಜಾಗೃತರಾಗಿರುವುದರ ನಕಾರಾತ್ಮಕ ಪರಿಣಾಮಗಳು ಇತ್ತೀಚಿನ ವರ್ಷಗಳಲ್ಲಿ ಗೋಚರಿಸುತ್ತಿವೆ. ಪ್ರಭುತ್ವವನ್ನು ಟೀಕಿಸುವ ಭರದಲ್ಲಿ ಇಂಥವರು ಸಂವಿಧಾನ, ಸೇನೆ, ನ್ಯಾಯಾಂಗವನ್ನು ನಿಂದಿಸಿರಾಷ್ಟ್ರದ ಅಹಿತಕ್ಕೆ ಕಾರಣರಾಗುತ್ತಿದ್ದಾರೆ. ಇದರಿಂದಾಗಿ ಜಾಗತಿಕವಾಗಿ ದೇಶದ ಪ್ರತಿಷ್ಠೆಗೆ ಕುಂದು ಒದಗುತ್ತದೆ.
ಕಲೆ, ಸಾಹಿತ್ಯ, ಮಾಧ್ಯಮಗಳಿಗೆ ದೇಶದ ಜನರಲ್ಲಿ ಏಕತೆಯ ಭಾವನೆಯನ್ನು ಉದ್ದೀಪನಗೊಳಿಸುವ ವಿಶೇಷ ಶಕ್ತಿಯಿದೆ. ರಾಷ್ಟ್ರೀಯ ಏಕತೆಗೆ ಸಿನಿಮಾ ಮತ್ತು ಸಾಹಿತ್ಯಗಳು ಮಹತ್ವಪೂರ್ಣ ಕೊಡುಗೆ ನೀಡಿವೆ. ಹಿಂದಿಯ ‘ಬಾರ್ಡರ್’, ‘ಉರಿ’, ‘ಮಿಷನ್ ಕಾಶ್ಮೀರ್’, ‘ದೀವಾರ್’, ‘ಸ್ವದೇಶ್’, ಕನ್ನಡದ ‘ಮುತ್ತಿನಹಾರ’, ‘ವೀರಪ್ಪನಾಯ್ಕ’ ಸೇರಿದಂತೆ ಹಲವು ಚಿತ್ರಗಳು ಈ ನಿಟ್ಟಿನಲ್ಲಿ ಉಲ್ಲೇಖನೀಯ. ಜತೆಗೆ, ಹಿಂದಿಯ ‘ಸಂದೇಸೇ ಆತೇ ಹೈ’, ‘ಮೇರಾ ರಂಗ್ ದೇ’, ‘ಸರ್ಫರೋಶಿ ಕೀ ತಮನ್ನಾ’, ‘ವತನ ಕೆ ರಖವಾಲೇ’, ‘ಹೇ ಮೇರಾ ಇಂಡಿಯಾ’, ಕನ್ನಡದ ‘ಭಾರತಾಂಬೆಯೆ ನಿನ್ನ ಜನುಮದಿನ’ ಮೊದಲಾದ ಸಿನಿಮಾ ಗೀತೆಗಳು ಕಾಲಕಾಲಕ್ಕೆ ದೇಶದ ಜನರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಬಡಿದೆಬ್ಬಿಸಿವೆ.
ಹಿಂದಿಯ ಪ್ರಸಿದ್ಧ ಕವಿ ಮಾಖನ್‌ಲಾಲ್ ಚತುರ್ವೇದಿ ಅವರು ‘ಪುಷ್ಪ ಕೀ ಅಭಿಲಾಷಾ’ ಎಂಬ ಕವಿತೆಯಲ್ಲಿ ಪುಷ್ಪವೊಂದರಕೋರಿಕೆಯನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ‘ನಾನು ದೇವರ ಹಾರವಾಗಿಯೋ, ರಾಜ ಮಹಾರಾಜರ ಕೊರಳಮಾಲೆ ಯಾಗಿಯೋ ಅಥವಾ ಸುಂದರ ಮಹಿಳೆಯ ಮುಡಿಯ ಹೂವಾಗಿಯೋ ಏರಲು ಬಯಸುವುದಿಲ್ಲ; ಬದಲಿಗೆ ದೇಶರಕ್ಷಣೆಗೆ ತಮ್ಮ ಶಿರವನ್ನೇ ಸಮರ್ಪಿಸಲು ಸಿದ್ಧರಾಗಿ ಯುದ್ಧಭೂಮಿಗೆ ತೆರಳುವ ಸೈನಿಕರು ಹಾದುಹೋಗುವ ದಾರಿಯಲ್ಲಿ ನನ್ನನ್ನು ಎಸೆ’ ಎಂದು ಪುಷ್ಪವೊಂದು ವನಮಾಲಿಯನ್ನು ಬಿನ್ನವಿಸಿಕೊಳ್ಳುವ ಮೂಲಕ ತನ್ನ ದೇಶಭಕ್ತಿಯನ್ನು ವ್ಯಕ್ತಪಡಿಸುವುದು ಈ ಗೀತೆಯ ವಿಶೇಷ.
ದೇಶಭಕ್ತಿಯ ಸಿನಿಮಾಗಳನ್ನು ನೋಡಿದಾಗ ಮತ್ತು ಹಾಡುಗಳನ್ನು ಕೇಳಿದಾಗ ನಿಸ್ಸಂಶಯವಾಗಿಯೂ ನಮ್ಮ ಮೈರೋಮಾಂಚನಗೊಳ್ಳುತ್ತದೆ. ‘ದೇಶ ಮೊದಲು’ ಎನ್ನುವ ವಿಶಾಲಭಾನೆ ಜಾಗೃತಗೊಳ್ಳುತ್ತದೆ. ರಾಷ್ಟ್ರಪ್ರೇಮ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಬಡಿದೆಬ್ಬಿಸುವ ಅದ್ಭುತಶಕ್ತಿ ಸಾಹಿತ್ಯಕ್ಕಿದೆ.
ದೇಶಭಕ್ತಿ ಹೆಚ್ಚಿಸುವ ಮತ್ತು ಅದರ ಮಹತ್ವ ಸಾರುವ ಸಾಹಿತ್ಯ ಸೃಷ್ಟಿಗಳು ಹಿಂದಿಯಲ್ಲಿ ವಿಪುಲವಾಗಿವೆ. ರಾಷ್ಟ್ರೀಯತೆಗೆ ಪೂರಕ ಮತ್ತು ಪ್ರೇರಕ ಆಗಬಲ್ಲ ಕಲೆ ಮತ್ತು ಸಾಹಿತ್ಯಸೃಷ್ಟಿಗಳು ಕನ್ನಡದಲ್ಲೂ ಇವೆ. ಆದರೆ ಇವು ಮತ್ತಷ್ಟು ಬೆಳೆದು ವ್ಯಾಪಿಸಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಪ್ರೇಮದ ಸಾಹಿತ್ಯಕ್ಕೆ ಪ್ರಾಮುಖ್ಯ ಸಿಗಲಿ ಮತ್ತು ಈ ನಿಟ್ಟಿನಲ್ಲಿ ಗೋಷ್ಠಿಗಳ ಆಯೋಜನೆಯಾಗಲಿ.