ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕೊನೆಯಿಲ್ಲವೇ ?
ಹೆಂಗರುಳು
ಡಾ.ಗಾಯತ್ರಿ ಜಮಖಂಡಿ
ಭಾರತದಲ್ಲಿ ಹೆಣ್ಣನ್ನು ಕಾಡುವ ಭೂತ ಲೈಂಗಿಕ ಅಸುರಕ್ಷತೆಗೆ ಸಂಬಂಧಿಸಿದ್ದು. ಹೆಣ್ಣೊಬ್ಬಳು ಯಾವುದೇ ಹೆದರಿಕೆಯಿಲ್ಲದೆ ಜೀವಿಸುವುದು ಸಾಧ್ಯವಿಲ್ಲ ಎನ್ನುವ ಹಂತಕ್ಕೆ ನಮ್ಮ ಸಾಮಾಜಿಕ ವ್ಯವಸ್ಥೆ ಕುಸಿದಿದೆ. ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಂದ ಭಾರತದಲ್ಲೇ ಹೆಣ್ಣಿನ ಪರಿಸ್ಥಿತಿ ಹೀಗಿರುವುದು ದುರದೃಷ್ಟಕರ.
ಭಾರತವು ಬ್ರಿಟಿಷರ ಆಳ್ವಿಕೆಯಿಂದ ವಿಮುಕ್ತವಾಗಿ ಏಳು ದಶಕಗಳೇ ಸಂದಿವೆ. ಸ್ವಾತಂತ್ರ್ಯಪೂರ್ವ ಭಾರತದಲ್ಲಿ, ಆಯಾ ಕಾಲಘಟ್ಟದಲ್ಲಿ ತನಗಿದ್ದ ಸ್ಥಾನಮಾನಕ್ಕೆ ತಕ್ಕಂತೆ ಹೆಣ್ಣು ಅದೆಷ್ಟು ಸುರಕ್ಷಿತವಾಗಿದ್ದಳು ಎಂಬುದನ್ನು ಅಧ್ಯಯನಗಳಿಂದ ಕಂಡುಕೊಳ್ಳಬಹುದಾಗಿದೆ.
ರಾಜ-ಮಹಾರಾಜರ ಯುದ್ಧಕಾಲದಲ್ಲಿ ಸೋತ ಸಾಮ್ರಾಜ್ಯಗಳಲ್ಲಿನ ಹೆಣ್ಣಿನ ಸ್ಥಿತಿ ಹೇಗಿತ್ತು, ಪೋರ್ಚುಗೀಸರು ಭಾರತಕ್ಕೆ ಕಾಲಿಟ್ಟ ಪ್ರಾರಂಭಿಕ ವರ್ಷಗಳಲ್ಲಿ, ಭಾರತ ವಿಭಜನೆಗೊಂಡು ಪಾಕಿಸ್ತಾನ ರೂಪುಗೊಂಡ ಸಂದರ್ಭದಲ್ಲಿ ಭಾರತದ ಹೆಣ್ಣುಮಕ್ಕಳು ಹೇಗೆ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿ ನಲುಗಿದರು ಎಂಬುದಕ್ಕೆ ದಾಖಲೆಗಳಿವೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹೆಣ್ಣು-ಗಂಡಿನ ಸಮಾನತೆಯ ಸಂಕೇತ ವಾಗಿ ಸಮಾನ ಉದ್ಯೋಗ, ಸಮಾನ ವೇತನ, ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಮುಂತಾದ ಮಾನ್ಯತೆಗಳನ್ನು ಹೆಣ್ಣಿಗೆ ನೀಡಲಾಗಿದೆ. ಹೆಣ್ಣು ಮಕ್ಕಳ ರಕ್ಷಣೆಗೆಂದು ವೈವಿಧ್ಯಮಯ ತಡೆಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಗಂಡಿನಷ್ಟೇ ಸಾಧನೆ ಮಾಡಿರುವ ಹೆಣ್ಣಿಗೆ ಸಂವಿಧಾನದಲ್ಲಿ ಕೊಡಮಾಡಲಾದ ಹಕ್ಕುಗಳು ಪ್ರಶಂಸಾರ್ಹವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ವಯಸ್ಸಿನ ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಬೆಚ್ಚಿ ಬೀಳಿಸುವ ಸಂಗತಿ.
ಜತೆಗೆ, ಕೊಲೆ, ಆಸಿಡ್ ದಾಳಿಗೂ ಹೆಣ್ಣು ಒಳಗಾಗುತ್ತಿರುವುದು ನೋಡಿದರೆ ಭಾರತದಲ್ಲಿ ನಿಜಕ್ಕೂ ಹೆಣ್ಣು ಮಕ್ಕಳು ಸುರಕ್ಷಿತ ವಾಗಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಭಾರತದಲ್ಲಿ ಹೆಣ್ಣನ್ನು ಇನ್ನಿಲ್ಲದಂತೆ ಕಾಡುವ ಭೂತ ಅವಳ ಲೈಂಗಿಕ ಅಸುರಕ್ಷತೆಗೆ ಸಂಬಂಽಸಿದ್ದು. ಹೆಣ್ಣೊಬ್ಬಳು ಯಾವುದೇ ಹೆದರಿಕೆಯಿಲ್ಲದೆ ಜೀವಿಸುವುದು ಸಾಧ್ಯವೇ ಇಲ್ಲ ಎನ್ನುವ ಹಂತಕ್ಕೆ ನಮ್ಮ ಸಾಮಾಜಿಕ ವ್ಯವಸ್ಥೆ ಕುಸಿದಿರುವುದು ವಿಷಾದನೀಯ. ಹೆಣ್ಣು ಒಂದು ಪುಟ್ಟಮಗುವಾಗಿರಲಿ, ಹದಿಹರೆಯದವಳಾಗಿರಲಿ,ವಿವಾಹಿತಳಾಗಿರಲಿ ಅಥವಾ ವೃದ್ಧೆಯಾಗಿರಲಿ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಾಕಷ್ಟು ಪ್ರಕರಣಗಳಿವೆ.
ಅಷ್ಟೇಕೆ, ಅವಳು ಮಾನಸಿಕ ಅಸ್ವಸ್ಥಳಾಗಿರಲಿ, ವಿಕಲಚೇತನಳಾಗಿರಲಿ, ಮುಟ್ಟಾಗಿರಲಿ ಅಥವಾ ಬಾಣಂತಿಯಾಗಿರಲಿಆಗಲೂ ಗಂಡುಗಿಡುಗದ ಕಾಮದೃಷ್ಟಿಗೆ ಬಲಿಯಾದ ಸಾಕಷ್ಟು ನಿದರ್ಶನಗಳಿವೆ. ಗಂಡನಿಲ್ಲದ ಸಂದರ್ಭದಲ್ಲಿ ಕುಟುಂಬಿಕ ರಿಂದಲೇ ಲೈಂಗಿಕ ಶೋಷಣೆಗೆ ಒಳಗಾಗಿ ಹೊರಗೆಲ್ಲೂ ಹೇಳಿಕೊಳ್ಳಲಾಗದೆ ಮೂಕವೇದನೆ ಅನುಭವಿಸುತ್ತಿರುವ ಹೆಣ್ಣುಗಳು ಸಾಕಷ್ಟಿವೆ. ಇನ್ನು ಪರಸ್ಥಳಗಳ ವಸತಿಗೃಹಗಳಲ್ಲಿ ತಂಗುವ ಪರಿಸ್ಥಿತಿ ಉದ್ಭವಿಸಿದಾಗ, ಅಲ್ಲಿನ ಬೆಡ್‌ರೂಂ-ಬಾತ್‌ರೂಂಗೆ ಹೊಂದಿಕೆಯಾಗುವಂತೆ ರಹಸ್ಯ ಕ್ಯಾಮರಾಗಳನ್ನಿರಿಸಿ ದೃಶ್ಯವನ್ನು ಕದ್ದು ಸೆರೆಹಿಡಿದು, ಅದನ್ನು ಆಧಾರವಾಗಿಟ್ಟುಕೊಂಡುಹಣಕ್ಕಾಗಿ ಹೆಂಗಸರನ್ನು ಬ್ಲ್ಯಾಕ್‌ಮೇಲ್ ಮಾಡುವವರು ಮತ್ತು ಬೆದರಿಕೆ ಕರೆಗಳ ಮೂಲಕ ಚಿತ್ರಹಿಂಸೆ ನೀಡಿ ಅವರಆತ್ಮಹತ್ಯೆಗೆ ಕಾರಣರಾಗುವವರು ಸಾಕಷ್ಟಿದ್ದಾರೆ.
ಗ್ರಾಮೀಣ ಭಾಗಗಳಲ್ಲೂ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ, ಬಹಿರ್ದೆಸೆಗೆ ಮತ್ತು ವಾಯುವಿಹಾರಕ್ಕೆ ತೆರಳುವುದು ಕೂಡ ಹೆಣ್ಣಿಗೆ ದುಸ್ತರವಾಗಿದೆ. ಹೀಗೆ ಒಂಟಿಯಾಗಿ ಸಿಕ್ಕ ಹೆಣ್ಣು ಅತ್ಯಾಚಾರಕ್ಕೆ ಒಳಗಾದ ವರದಿಗಳನ್ನು ಆಗಾಗ ಓದುತ್ತೇವೆ. ಸೌದೆ ತರಲು ಕಾಡಿಗೆ ತೆರಳಿದ ಅದೆಷ್ಟೋ ಬುಡಕಟ್ಟು ಮಹಿಳೆಯರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಎಸಗುವ ಲೈಂಗಿಕ ದೌರ್ಜನ್ಯ ಹೊರಜಗತ್ತಿಗೆ ತಿಳಿಯುವುದೇ ಇಲ್ಲ.
ಕಾಫಿ ಎಸ್ಟೇಟುಗಳಲ್ಲಿ ಕೆಲಸಮಾಡುವ ಹೆಣ್ಣುಮಕ್ಕಳು ಅಲ್ಲಿಯ ಯಜಮಾನನಿಗೆ ಶರಣಾಗಬೇಕಾದ ಅನಿವಾರ್ಯತೆ ಸಾಕಷ್ಟು ಕಡೆ ಕಂಡುಬರುತ್ತದೆ. ಶಾಲೆಯಲ್ಲಿ ಬಿಸಿಯೂಟ ತಯಾರಿಸುತ್ತಿದ್ದ ವಿಧವೆಯೊಬ್ಬಳು ಅಲ್ಲಿನ ಮುಖ್ಯೋಪಾಧ್ಯಾಯನ ಲೈಂಗಿಕ ತೃಷೆಗೆ ಬಲಿಯಾದ ನಿದರ್ಶನವಿದೆ. ಹೆಣ್ಣು ಈ ಭೂಮಿಯ ಮೇಲೆ ಹುಟ್ಟುವ ಸ್ವಾತಂತ್ರ್ಯವನ್ನು, ಸದ್ದಿಲ್ಲದೆ ನಡೆಯುವ ಎಷ್ಟೋಭ್ರೂಣಹತ್ಯೆಗಳು ಹೊಸಕಿಹಾಕುತ್ತಿವೆ. ಋತುಮತಿಯಾದಾಗ, ಹೆರಿಗೆಯಾದಾಗ ಹೆಣ್ಣು ಅನುಭವಿಸುವ ಮೈಲಿಗೆಶಾಸ್ತ್ರಗಳು, ದೇವದಾಸಿ-ಬಾಲ್ಯವಿವಾಹ-ಕನ್ಯತ್ವ ಪರೀಕ್ಷೆಯಂಥ ಅನಿಷ್ಟ ಪದ್ಧತಿಗಳು ಬಹುತೇಕ ಕಡೆ ಈಗಲೂ ಸದ್ದಿಲ್ಲದೆ ನಡೆಯುತ್ತಿದ್ದು ಹೆಣ್ಣನ್ನು ಬೇರೊಂದು ರೀತಿಯಲ್ಲಿ ಶೋಷಿಸುತ್ತಿವೆ.
ಅಮಾವಾಸ್ಯೆ ಬಲಿ, ನಿಧಿಗಾಗಿ ಬಲಿ ಎಂಬ ನೆಪದಲ್ಲಿ ಹೆಣ್ಣನ್ನು ಹೊಸಕಿ ಹಾಕುವವರು ಈಗಲೂ ಇದ್ದಾರೆ. ಇನ್ನು, ವರದಕ್ಷಿಣೆ, ಆಸ್ತಿಕಲಹ, ಗಂಡುಮಗುವನ್ನು ಹಡೆಯದಿರುವಿಕೆ, ಸುದೀರ್ಘ ಅನಾರೋಗ್ಯ, ವೈಧವ್ಯ ಮುಂತಾದ ಕಾರಣಗಳಿಗಾಗಿ ಪರಿತ್ಯಕ್ತ ರಾಗುವ ಹೆಣ್ಣುಗಳ ಸಂಖ್ಯೆಯೂ ಗಣನೀಯವಾಗಿದೆ.
ಮನೆಯಂಗಳದಲ್ಲಿ ಆಡುತ್ತಿದ್ದ ಹೆಣ್ಣುಮಗುವಿಗೆ ‘ಆನೆ ತೋರಿಸುವೆ, ಚಾಕೊಲೇಟ್ ಕೊಡಿಸುವೆ’ ಎಂದು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿ ಬಿಸಾಕಿದ ದುರುಳರಿದ್ದಾರೆ. ಕೆಲವು ವರ್ಷಗಳ ಹಿಂದೆ, ಹೆಣ್ಣು ಮೈನೆರೆದರೆ ಲೈಂಗಿಕ ಸುರಕ್ಷತೆ ದೃಷ್ಟಿಯಿಂದ ಶಾಲೆಯನ್ನು ಬಿಡಿಸುತ್ತಿದ್ದರು; ದುರದೃಷ್ಟವೆಂದರೆ ೩ ವರ್ಷದ ಹೆಣ್ಣುಮಗುವಿಗೆ ಕೂಡ ಶಾಲೆ ಸುರಕ್ಷಿತವಲ್ಲ ಎಂಬುದು ನಮಗೀಗ ಗೊತ್ತಾಗಿದೆ.
ಇಂಥ ಮಕ್ಕಳು ಶಾಲೆಯ ಕೆಲಸಗಾರರಿಂದ, ಶಿಕ್ಷಕರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ನಿದರ್ಶನಗಳಿವೆ. ಸ್ಪೆಷಲ್ಕ್ಲಾಸ್‌ಗೆ, ಟ್ಯೂಷನ್‌ಗೆ, ಆಟೋಟ, ಸಂಗೀತ, ನೃತ್ಯದ ತರಗತಿಗಳಿಗೆ ಸೇರಿದ, ಅಷ್ಟೇಕೆ ಪ್ರವಾಸಕ್ಕೆ ತೆರಳಿದ ಹೆಣ್ಣುಮಕ್ಕಳೂ ಲೈಂಗಿಕ ದೌರ್ಜನ್ಯದಿಂದ ಸುರಕ್ಷಿತವಾಗಿಲ್ಲ. ಅದೆಷ್ಟೋ ದೌರ್ಜನ್ಯಗಳು ಮುಗ್ಧ ಮಕ್ಕಳಿಗೆ ಗೊತ್ತಾಗುವುದೇ ಇಲ್ಲ. ಶಾಲೆ-ಕಾಲೇಜುಗಳಿಗೆ ಹೋಗಿಬರುವ ಸಂದರ್ಭದಲ್ಲಿ ಅಪಹರಣಕ್ಕೆ ಒಳಗಾಗುವ, ಸ್ನಾತಕೋತ್ತರ ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಅಂಕಗಳು, ಚಿನ್ನದ ಪದಕ, ಪಿಎಚ್‌ಡಿ ಪದವಿಯ ಆಮಿಷಕ್ಕೊಳಗಾಗಿ ಶೋಷಣೆಗೆ ಬಲಿಯಾಗುವ ಹೆಣ್ಣು ಮಕ್ಕಳ ಸಂಖ್ಯೆಸಾಕಷ್ಟಿದೆ.
ನೌಕರಿಗೆ ಸೇರಿಕೊಂಡ ಮೇಲೂ ಈ ಬಾಧೆ ‘ಅಬಾಧಿತ’. ಸಾಕಷ್ಟು ಸಲ ಮೇಲಧಿಕಾರಿಗಳ ಕಣ್ಣುಗಳು ಅವಳನ್ನು ಕುಕ್ಕಿ ತಿನ್ನುತ್ತವೆ. ವಿವಿಧ ಕಾರ್ಯಕ್ಷೇತ್ರಗಳಲ್ಲಿ ರಾತ್ರಿಯ ಪಾಳಿ ಅವಳಿಗೆ ಅಕ್ಷರಶಃ ನರಕವಾಗಿ ಪರಿಣಮಿಸುತ್ತದೆ. ಇನ್ನು ವಸತಿಗೃಹ, ಅನಾಥಾಶ್ರಮ, ಚರ್ಚ್ ಮತ್ತು ಮಠಗಳೂ ಹೆಣ್ಣಿಗೆ ಸುರಕ್ಷಿತವಲ್ಲ ಎಂಬುದಕ್ಕೆ ಪುರಾವೆಗಳಿವೆ, ಬೇಲಿಯೇ ಎದ್ದು ಹೊಲವನ್ನುಮೇಯುತ್ತಿರುವ ನಿದರ್ಶನಗಳಿವೆ. ಸ್ವಯಂಸೇವಾ ಸಂಸ್ಥೆಯ ಮುಖವಾಡ ಧರಿಸಿ ಹೆಣ್ಣಮಕ್ಕಳನ್ನು ವೇಶ್ಯಾವಾಟಿಕೆಯಂಥ ದಂಧೆಗೆ ಬಳಸಿಕೊಳ್ಳುವ ದುರುಳರೂ ನಮ್ಮ ಸಮಾಜದಲ್ಲಿದ್ದಾರೆ.
ಇನ್ನು ಫೇಸ್‌ಬುಕ್, ವಾಟ್ಸಾಪ್‌ನಂಥ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯ ಮಾಡಿಕೊಂಡು ಗೆಳೆತನ ಬೆಳೆಸಿ ಕೊಂಡು ಹೆಣ್ಣಿನ ಸರ್ವಸ್ವವನ್ನೂ ದೋಚುವವರಿಗೇನೂ ನಮ್ಮಲ್ಲಿ ಕಮ್ಮಿಯಿಲ್ಲ. ಲವ್ ಜಿಹಾದ್, ಮತಾಂತರ, ಮಾನವ ಕಳ್ಳಸಾಗಣೆಗೆ ಬಲಿಯಾಗುವ ಹೆಣ್ಣುಮಕ್ಕಳದ್ದು ನಿತ್ಯವೂ ಮೌನ ಆಕ್ರಂದನ. ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಂದು ನುಡಿದ ಭಾರತದಲ್ಲೇ ಹೆಣ್ಣಿನ ಪರಿಸ್ಥಿತಿ ಹೀಗಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಲ್ಲವೇ?!ಈ ಬರಹದಲ್ಲಿನ ಇದುವರೆಗಿನ ಸಾಲುಗಳನ್ನು ಓದಿ ಕೆಲವರಿಗೆ ಜೀರ್ಣಿಸಿಕೊಳ್ಳಲು ಆಗದಿರಬಹುದು.
‘ಈ ಎಲ್ಲ ಅವಘಡಗಳು ನಡೆದಿರುವುದಕ್ಕಿಂತ ನಡೆಯದಿರುವುದೇ ಹೆಚ್ಚು; ಪರಿಸ್ಥಿತಿ ಇನ್ನೂ ಅಷ್ಟೊಂದು ಕೆಟ್ಟಿಲ್ಲ. ಸುಮ್ಮನೆ ಇಲ್ಲದ ಆತಂಕ ಬೇಡ’ ಎಂದು ಕೆಲವರು ತಮಗೆ ತಾವೇ ಸಮಾಧಾನ ಹೇಳಿಕೊಂಡು, ಇತರರನ್ನೂ ಸಮಾಧಾನ ಪಡಿಸಬಹುದು. ಆದರೆ ಅಷ್ಟು ಅಸಡ್ಡೆ ಮಾಡುವ ಅಥವಾ ನಿರಾಳವಾಗಿ ಕೂರುವ ಪರಿಸ್ಥಿತಿ ಈಗಿಲ್ಲ ಎಂಬುದಕ್ಕೆ ದಿನಂಪ್ರತಿ ವರದಿಯಾಗುತ್ತಿರುವ ಹಲವು ಘಟನೆಗಳೇ ಸಾಕ್ಷಿಯಾಗಿವೆ.
‘ಕೊಂಚವೇ ಯಾಮಾರಿದ್ದರೂ ಅಪಾಯ ಕಟ್ಟಿಟ್ಟಬುತ್ತಿಯಾಗುತ್ತಿತ್ತು’ ಅಂತ ಅದೆಷ್ಟೋ ಹೆಣ್ಣುಮಕ್ಕಳಿಗೆ ಸಾಕಷ್ಟು ಸಲ ಅನಿಸಿದೆಎಂದು ನಾನು ಭಾವಿಸುತ್ತೇನೆ. ಈ ಬರಹವನ್ನು ಓದಿದ ಪ್ರತಿಯೊಂದು ಹೆಣ್ಣೂ ಈ ನಿಟ್ಟಿನಲ್ಲಿ ತನ್ನನ್ನು ತಾನೇ ಪ್ರಶ್ನೆಮಾಡಿಕೊಳ್ಳಲಿ- ‘ನಾನು ಎಂದಿಗೂ, ಯಾರಿಂದಲೂ, ಯಾವುದೇ ರೀತಿಯ ಲೈಂಗಿಕ ಕಿರುಕುಳ ಅನುಭವಿಸಿಲ್ಲ’ ಎಂದು ಆಗ ಅವಳಿಗೆ ಅನಿಸಿದರೆ ಅವಳೇ ಅದೃಷ್ಟವಂತಳು.
ಹೆಣ್ಣು ಕೊಂಚವೇ ದುರ್ಬಲ ಮನಸ್ಸಿನವಳಾದರೂ, ಸುತ್ತಲಿರುವ ವ್ಯವಸ್ಥೆ ಅವಳನ್ನು ಹೊಸಕಿಹಾಕಲು ತವಕಿಸುವುದಂತೂ ಖರೆ. ಹಾಗಂತ ಆಕೆ ಅನಗತ್ಯವಾಗಿ ಭಯಬೀಳುವುದು, ಗಾಬರಿಗೊಳ್ಳುವುದು ಬೇಡ. ತನಗೆ ಒದಗಬಹುದಾದ ದೌರ್ಜನ್ಯಗಳ ಬಗ್ಗೆ ಸರ್ವರೀತಿಯಿಂದಲೂ ಜಾಗೃತವಾಗಿದ್ದುಕೊಂಡು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರೆ ಸಾಕು.