ಮೊಘಲರ ಅಹಂ ಮುರಿದ ಅಹೋಮ್‌ ರಾಜವಂಶ
ಧೀರದುಂದುಭಿ
ಗಣೇಶ್ ಭಟ್, ವಾರಣಾಸಿ
ಅಸ್ಸಾಮಿಗೆ ಈ ಹೆಸರು ಬರಲು ಅಹೋಮ್ ರಾಜವಂಶವೇ ಕಾರಣ. ಕ್ರಿ.ಶ. 1228ರಿಂದ 1824ರವರೆಗೆ ಅಸ್ಸಾಮಿನ ಬ್ರಹ್ಮಪುತ್ರಾ ನದಿ ಕಣಿವೆಯುದ್ದಕ್ಕೂ 598 ವರ್ಷಗಳವರೆಗೆ ರಾಜ್ಯಭಾರ ಮಾಡಿದ ಅಹೋಮ್ ಸಾಮ್ರಾಜ್ಯದ ಸ್ಥಾಪಕ ಚಾವೋ ಲುಂಗ್ ಸುಕಫಾ.
ನಮ್ಮ ಶಾಲಾ ಇತಿಹಾಸ ಪಠ್ಯಪುಸ್ತಕಗಳುದ್ದಕ್ಕೂ ಭಾರತದ ಮೇಲಾದ ಆಕ್ರಮಣಗಳ ದುರಂತ ಕಥೆಗಳೇ ತುಂಬಿವೆ. ಹೂಣರು, ಶಕರು, ಗ್ರೀಕರು, ತುರುಕರು, ಇರಾನಿಗಳು, ಮೊಘಲರು, ಸುಲ್ತಾನರು, ಪೋರ್ಚುಗೀಸರು ಕೊನೆಗೆ ಬ್ರಿಟಿಷರು ಹೀಗೆ 200ಕ್ಕೂ ಹೆಚ್ಚು ಬಾರಿ ನಮ್ಮ ಮೇಲೆ ದೊಡ್ಡಮಟ್ಟದ ವಿದೇಶಿದಾಳಿಗಳು ನಡೆದಿವೆ.
ಮೊಹಮ್ಮದ್ ಘಜ್ನಿಯೊಬ್ಬನೇ ಭಾರತದ ಮೇಲೆ ೧೭ ಬಾರಿ ದಂಡೆತ್ತಿ ಬಂದಿದ್ದ! ದಾಳಿ ಮತ್ತು ದಾಸ್ಯಗಳನ್ನೇ ವೈಭವೀಕರಿಸಿ ಬರೆದ ಇತಿಹಾಸವನ್ನು ಓದುವಾಗ, ಇಂಥ ಆಕ್ರಮಣಗಳನ್ನು ಎದುರಿಸುವ ಛಾತಿಯಿದ್ದ ವೀರರು ನಮ್ಮಲ್ಲಿರಲಿಲ್ಲವೆ ಅಥವಾ ನಮ್ಮ ಪೂರ್ವಜರು ಹೇಡಿಗಳಾಗಿದ್ದರೆ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಜಗತ್ತನ್ನೇ ಗೆಲ್ಲುವೆನೆಂದು ಹೊರಟ ಗ್ರೀಕ್‌ನ ಅಲೆಕ್ಸಾಂಡರನ ಸೇನೆ ಮಗಧ ಸಾಮ್ರಾಜ್ಯದ ಗಜಸೇನೆಯ ಅಗಾಧತೆ ನೋಡಿ ಹೆದರಿ ಹಿಂದೆ ಸರಿದಿದ್ದ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲಲೇ ಇಲ್ಲ.
ಮೊಘಲರ ಸಾಮ್ರಾಜ್ಯ ವಿಸ್ತರಣೆಗೆ ಅಡ್ಡಿಯಾಗಿ ನಿಂತ ಮಹಾರಾಣಾ ಪ್ರತಾಪ್ ಬಗ್ಗೆ ಅಥವಾ ಮೊಘಲರನ್ನು ಮೆಟ್ಟಿನಿಂತು ವಿಶಾಲ ಮರಾಠಾ ಸಾಮ್ರಾಜ್ಯ ಕಟ್ಟಿದ ಶಿವಾಜಿಯ ಬಗ್ಗೆ ಪಠ್ಯಗಳಲ್ಲಿ ವಿವರಣೆಯಿರುವುದು ಕೆಲವೇ ಸಾಲುಗಳಷ್ಟು. ಮೊಘಲ ರನ್ನು 17 ಬಾರಿ ಹಿಮ್ಮೆಟ್ಟಿಸಿ ಅವರು ಈಶಾನ್ಯ ಭಾರತಕ್ಕೆ ಕಾಲಿಡದಂತೆ ತಡೆದ ಅಹೋಮ್ ರಾಜವಂಶದ ವೀರರ ಬಗೆಗೆ ಯಾವ ಮಾಹಿತಿಯನ್ನೂ ಇತಿಹಾಸಕಾರರು ಕೊಟ್ಟಿಲ್ಲ.
ಇತಿಹಾಸ ಗೊತ್ತಿರುವವರು ಮಾತ್ರ ಇತಿಹಾಸ ಸೃಷ್ಟಿಸಬಲ್ಲರು ಎಂಬ ಮಾತಿದೆ. ಜಹಾಂಗೀರ್, ಷಹಜಹಾನ್ ಮತ್ತು ಔರಂಗ ಜೇಬನ ದಾಳಿಗಳನ್ನು ಎದುರಿಸಿ ಹಿಮ್ಮೆಟ್ಟಿಸಿದ ಅಹೋಮ್ ರಾಜರ ಹಾಗೂ ಯೋಧರ ಶೌರ್ಯದ ಚರಿತ್ರೆಯನ್ನು ಪ್ರತಿಯೋರ್ವ ಭಾರತೀಯ ಅರಿಯಬೇಕಿದೆ. ಅಸ್ಸಾಮಿಗೆ ಈ ಹೆಸರು ಬರಲು ಅಹೋಮ್ ರಾಜವಂಶವೇ ಕಾರಣ. ಕ್ರಿ.ಶ. 1228ರಿಂದ 1826 ರವರೆಗೆ ಅಸ್ಸಾಮಿನ ಬ್ರಹ್ಮಪುತ್ರಾ ನದಿ ಕಣಿವೆಯುದ್ದಕ್ಕೂ ೫೯೮ ವರ್ಷಗಳವರೆಗೆ ರಾಜ್ಯಭಾರ ಮಾಡಿದ ಅಹೋಮ್ ಸಾಮ್ರಾಜ್ಯದ ಸ್ಥಾಪಕ ಚಾವೋ ಲುಂಗ್ ಸುಕಫಾ. ಮೋಂಗ್ ಮಾವೋ (ಈಗಿನ ಚೀನಾದ ಯುನ್ನಾನ್) ಪ್ರದೇಶದ ಶಾನ್ ರಾಜಕುಮಾರನಾದ ಸುಕಫಾ ತನ್ನ ಮೂವರು ಮಡದಿಯರು, ಇಬ್ಬರು ಮಕ್ಕಳು, ೩೦೦ ಕುದುರೆಗಳು ಹಾಗೂ 9000 ಹಿಂಬಾಲಕರೊಡಗೂಡಿ ಪಟ್ಕೈ ಪರ್ವತಗಳನ್ನು ದಾಟಿ ಬ್ರಹ್ಮಪುತ್ರಾ ನದಿಕಣಿವೆಯ ಸುಂದರ ಪ್ರದೇಶದಲ್ಲಿ ನೆಲೆನಿಂತು ಅದನ್ನು ಮುಂಗ್ ದುನ್ ಚುನ್ ಖಾಮ (ಸ್ವರ್ಣಭೂಮಿ) ಎಂದು ಕರೆದ.
ಆರಂಭದಲ್ಲಿ ಅವರದ್ದೇ ಆದ -ರಾಲುಂಗ್ ಮತವನ್ನು ಪರಿಪಾಲಿಸುತ್ತಿದ್ದ ಅಹೋಮ್ ರಾಜರು, ಸ್ಥಳೀಯ ಸಂಸ್ಕೃತಿಯೊಂದಿಗೆಹೊಂದಿಕೊಂಡ ಕೆಲಕಾಲದ ನಂತರ ಹಿಂದೂಧರ್ಮವನ್ನು ಅಪ್ಪಿಕೊಂಡರು. ಬಹುತೇಕ ಭಾರತವನ್ನು ತಮ್ಮ ವಶದಲ್ಲಿಟ್ಟು ಕೊಂಡಿದ್ದ ಮೊಘಲರಿಗೆ ಅಸ್ಸಾಮನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಾಗದ ಕಾರಣ ಈಶಾನ್ಯ ಭಾರತವನ್ನು ವಶಪಡಿಸಿಕೊಳ್ಳ ಲಾಗಲಿಲ್ಲ. ಹೀಗಾಗಿ ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದರು.
ಮೊಘಲ್ ವ್ಯಾಪಾರಿ ರತನ್ ಶಾನ ಆಸ್ತಿ-ಸಂಪತ್ತನ್ನು ಅಹೋಮ್ ರಾಜ ಪ್ರತಾಪ್ ಸಿಂಘ ವಶಪಡಿಸಿಕೊಂಡಿದ್ದನ್ನು  ನೆಪ ಮಾಡಿಕೊಂಡು ಮೊಘಲ್ ರಾಜ ಜಹಾಂಗೀರನ ಆಜ್ಞೆಯಂತೆ 1616ರಲ್ಲಿ ಸಯ್ಯದ್ ಹಕ್ಕೀಂ, ಸಯ್ಯದ್ ಅಬಾಬಕರ್ ಹಾಗೂ ಸತ್ರಜಿತ್ ನೇತೃತ್ವದಲ್ಲಿ 10000 ಸೈನಿಕರ ದಂಡು 300 ಯುದ್ಧ ದೋಣಿಗಳೊಡನೆ ಬಂದು ಅಸ್ಸಾಮಿನ ಮೇಲೆ ಮೊದಲ ಅಽಕೃತ ದಾಳಿ ನಡೆಸಿತು.
ಸಮುಧೋರಾದ ಬಳಿ ತಲುಪಿದ ಮೊಘಲ್ ಸೈನ್ಯದ ಮೇಲೆ ರಾತ್ರಿ ಅಹೋಮ್ ಸೈನಿಕರು ಮಿಂಚಿನದಾಳಿ ನಡೆಸಿದ ಪರಿಣಾಮ, ಅಬಾಬಕರ್ ಸೇರಿದಂತೆ 1700 ಸೈನಿಕರು ಸಾವಿಗೀಡಾದರೆ ಅದರ ಎರಡರಷ್ಟು ಮಂದಿ ಗಾಯಾಳುಗಳಾದರು. ಸಾವಿರಾರು ಮಂದಿ ಯುದ್ಧ ಕೈದಿಗಳಾದರು. ಮೊಘಲರ ಆನೆ, ಕುದುರೆ,ಶಸ್ತ್ರಾಸ್ತ್ರಗಳೆಲ್ಲ ಅಹೋಮರ ಪಾಲಾಯಿತು. ಮುಂದಿನ ೨೦ ವರ್ಷಗಳಲ್ಲಿ ಮೊಘ್ – ಅಹೋಮ್ ಸೇನೆಗಳ ನಡುವೆ ೨-೩ ಸಣ್ಣಪುಟ್ಟ ಸಂಘರ್ಷ ನಡೆದು ಅಹೋಮ್ ಸೈನ್ಯದ್ದೇ ಕೈ ಮೇಲಾಗಿತ್ತು.
1636ರಲ್ಲಿ ಪುನಃ ಭಾರಿ ಆಕ್ರಮಣ ಮಾಡಿದ ಮೊಘಲ್ ಸೇನೆ, ಅಸ್ಸಾಮಿನ ಕಾಮರೂಪದವರೆಗೂ ಮುಂದುವರಿದು ರಾಜಧಾನಿ ಗಾರ್ಗೌನ್ ಅನ್ನು ವಶಪಡಿಸಿಕೊಂಡಿತು. ಆದರೆ ಮರುಸಂಘಟಿತಗೊಂಡು ಮೊಘಲರ ಮೇಲೆ ಎರಗಿದ ಅಹೋಮ್ ಸೇನೆ ಮೇಲುಗೈ ಸಾಧಿಸಿತಾದರೂ, ಎರಡೂ ಸೇನೆಗಳಲ್ಲಿ ಅಪಾರ ಸಾವು-ನೋವು ಸಂಭವಿಸಿ 1639ರಲ್ಲಿ ಮೊಘಲ್ ಸೇನಾನಾಯಕ ಅಹ್ ಯಾರ್‌ಖಾನ್ ಮತ್ತು ಅಹೋಮ್ ಸೇನಾಧಿಕಾರಿ ಮೊಮೈ ತಾಮೂಲಿ ಬೋರ್ಬಾರುವಾ ನಡುವೆ ಶಾಂತಿ ಒಪ್ಪಂದ ವಾಯಿತು.
ಅದರಂತೆ ಅಹ್ ಯಾರ್ ಖಾನ್ ಅಸ್ಸಾಮಿನ ಸಾರ್ವಭೌಮತ್ವವನ್ನು ಒಪ್ಪಿಕೊಂಡರೂ ಗುವಾಹಟಿಯು ಮೊಘಲರ ವಶದ ಉಳಿಯಿತು. ೧೬೪೮ರಲ್ಲಿ ದೊರೆ ಷಹಜಹಾನ್ ಆದೇಶದಂತೆ ಮೊಘಲ್ ಸೈನಿಕರು ಮತ್ತೊಮ್ಮೆ ಅಹೋಮ್ ಮೇಲೆ ಎರಗಿದಾಗಅಂದಿನ ಅಹೋಮ್ ರಾಜ ಜಯಧ್ವಜ ಸಿಂಘ ಅವರನ್ನು ಹಿಮ್ಮೆಟ್ಟಿಸಿ ಅಸ್ಸಾಮನ್ನು ಮೊಘಲರಿಂದ ಮುಕ್ತಗೊಳಿಸಿದ.
1662ರಲ್ಲಿ ಔರಂಗಜೇಬನ ಆದೇಶದೊಂದಿಗೆ ಮೀರ್ ಜುಮ್ಲಾ ಸೇನೆ ನಡೆಸಿದ ದಾಳಿಯಲ್ಲಿ ಜಯಧ್ವಜನಿಗೆ ಸೋಲಾಗಿ ರಾಜಧಾನಿ ಗಾರ್ಗೌನ್, ಗುವಾಹಟಿ, ಕಜಾಲಿ ಮತ್ತು ಸಮುಧೋರಾಗಳನ್ನು ಕಳೆದುಕೊಳ್ಳಬೇಕಾಗಿ ಬಂದರೂ ಅವನು ಅದೇ ವರ್ಷ ಪುನಃ ಯುದ್ಧ ಸಂಘಟಿಸಿ ಮೊಘಲ್ ಸೈನ್ಯವನ್ನು ಹಿಮ್ಮೆಟ್ಟಿಸಿ ಗಾರ್ಗೌನ್ ಹಾಗೂ ಮಥುರಾಪುರಗಳನ್ನು ಮರು ವಶಪಡಿಸಿಕೊಂಡ.
ಆದರೆ 1663ರಲ್ಲಿ ಮೀರ್ ಜುಮ್ಲಾ ಸೇನೆಯೊಂದಿಗೆ ನಡೆದ ಯುದ್ಧದಲ್ಲಿ ಜಯಧ್ವಜನಿಗೆ ಭಾರಿ ಸೋಲಾಗಿ ರಾಜಧಾನಿ ಪುನಃ ಮೊಘಲರ ವಶವಾಯಿತು. ಈ ವೇಳೆ ಮೀರ್ ಜುಮ್ಲಾ ಜತೆ ಗಿಲಾಝರಿಘಾಟ್ ಒಪ್ಪಂದವಾಗಿ ಜಯಧ್ವಜ ೩ ಲಕ್ಷ ನಾಣ್ಯಗಳಷ್ಟು ಕಪ್ಪಕಾಣಿಕೆಯನ್ನು ಮತ್ತು ತನ್ನ ೬ ವಯಸ್ಸಿನ ಮಗಳನ್ನು ಮೊಘಲರಿಗೆ ಕೊಡಲು ಒಪ್ಪಿಕೊಳ್ಳಬೇಕಾಯಿತು. ಇದರಿಂದಾಗಿ ಜಯಧ್ವಜ ದೈಹಿಕವಾಗಿ-ಮಾನಸಿಕವಾಗಿ ಜರ್ಜರಿತನಾಗಿ ಸಾವಿಗೀಡಾದ. ಆಗಲೇ ೧ ಲಕ್ಷ ನಾಣ್ಯಗಳ ಕಪ್ಪವನ್ನು ಜಯಧ್ವಜ ಸಲ್ಲಿಸಿಯಾಗಿತ್ತು. ಆದರೆ ಅವನ ನಂತರ ಅಧಿಕಾರಕ್ಕೆ ಬಂದ ಚಕ್ರಧ್ವಜ ಉಳಿದ ೨ ಲಕ್ಷಗಳನ್ನು ಕೊಡಲೊಪ್ಪದೆ 1667ರಲ್ಲಿ ಮೊಘಲ್ ಸೇನೆಯ ಮೇಲೆ ಆಚಾನಕ್ಕಾಗಿ ಎರಗಿದಾಗ ಮೊಘಲ್ ಸೇನೆ ಸೋತು, ಗುವಾಹಟಿ, ಕಾಮರೂಪ, ಇಟಾಖುಲಿಮತ್ತು ಹಾಜೋಗಳು ಅಹೋಮರ ವಶವಾದವು.
1970ರಲ್ಲಿ ಅಂಬೆರ್‌ನ ರಾಜಾ ಮಿರ್ಜಾ ರಾಮ್ ಸಿಂಗನ ನೇತೃತ್ವದ ಮೊಘಲ್ ಸೇನೆ ಮತ್ತು ಅಹೋಮ್ ನಡುವೆ ಯುದ್ಧವಾಗಿ ಅಲಾಬೋಯಿ ಪ್ರದೇಶ ಮೊಘಲರ ವಶವಾಯಿತು. ಅಹೋಮ್ ವೀರ ಪರಂಪರೆಯಲ್ಲಿ ಮಂತ್ರಿ ಹಾಗೂ ಸೇನಾನಾಯಕ ಲಚಿತ್ ಬೋಫೋಕಾನ್‌ಗೆ ಚಿರಸ್ಥಾಯಿ ಹೆಸರಿದೆ. ಕುಯುಕ್ತಿಗೆ ಹೆಸರಾಗಿದ್ದ ಮೊಘಲ್ ಸೇನಾಪತಿ ರಾಮ್‌ಸಿಂಗ್, ರಾಜ ಚಕ್ರಧ್ವಜನಿಗೆ ಪತ್ರ ಬರೆದು ಲಚಿತ್ಬೋಫೋಕಾನ್೧ ಲಕ್ಷ ನಾಣ್ಯಗಳ ಲಂಚ ಸ್ವೀಕರಿಸಿ ರಾಜ್ಯದ ಕೆಲ ಭಾಗಗಳನ್ನು ಮೊಘಲರಿಗೆ ಬಿಟ್ಟುಕೊಡಲುಒಪ್ಪಿದ್ದಾನೆ ಎಂದು ಹೇಳಿ ದಾರಿತಪ್ಪಿಸಲು ಯತ್ನಿಸಿದ.
ಇದನ್ನು ನಂಬಿ ರಾಜನೂಬೋಫೋಕಾನ್ಮೇಲೆ ಸಂಶಯ ತಳೆದಾಗ, ಪ್ರಧಾನಮಂತ್ರಿ ಅತಾನ್ ಬುರಾಗೋಹೈನ್ ಇದು ಶತ್ರುಗಳ ಒಡೆದಾಳುವ ತಂತ್ರಗಾರಿಕೆ ಎಂದು ರಾಜನಿಗೆ ಮನದಟ್ಟುಮಾಡಿದ.ಬೋಫೋಕಾನ್‌ನ ರಾಷ್ಟ್ರನಿಷ್ಠೆ ಸಾಬೀತುಪಡುವ ಇನ್ನೊಂದು ಪ್ರಕರಣವೂ ನಡೆಯಿತು. ಮೊಘಲರ ಆಕ್ರಮಣ ತಡೆಯಲು ಮಣ್ಣಿನ ಕೋಟೆಗಳನ್ನು ಕಟ್ಟಿಸುವ ಜವಾಬ್ದಾರಿ ಯನ್ನುಬೋಫೋಕಾನ್ತನ್ನ ಸೋದರಮಾವನಿಗೆ ವಹಿಸಿದ್ದ. ಆದರೆ ಆತ ಈ ಕೆಲಸದಲ್ಲಿ ಅಸಡ್ಡೆ ತೋರಿದ್ದಕ್ಕೆ ಕುಪಿತನಾದಬೋ-ಕಾನ್ಮಾವನ ಶಿರಚ್ಛೇದಿಸಲೂ ಹಿಂಜರಿಯಲಿಲ್ಲ.
ಬೋಫೋಕಾನ್ತಂತ್ರಗಾರಿಕೆಯಿಂದ ಕಂಗೆಟ್ಟ ಔರಂಗಜೇಬ ೧೬೭೧ರಲ್ಲಿ ರಾಮ್‌ಸಿಂಗ್, ಮುನವ್ವರ್ ಖಾನ್, ಶಾಯಿಸ್ತಾಖಾನ್ ನೇತೃತ್ವದ ಬಲಾಢ್ಯ ಸೇನೆಯನ್ನು ಯುದ್ಧಕ್ಕೆ ಕಳುಹಿಸಿದ. ಕೂಚ್ ಬಿಹಾರ್ ಕೂಡ ಮೊಘಲ್ ಜಹಗೀರು ಆಗಿದ್ದರಿಂದ ಅಲ್ಲಿಂದಲೂ ಸುಮಾರು ೧೫೦೦೦ ಸೈನಿಕರು ಮೊಘಲ್ ಸೇನೆಯನ್ನು ಸೇರಿಕೊಂಡರು. ಹೀಗೆ ಸುಮಾರು 80000ದಷ್ಟಿದ್ದ ಮೊಘಲ್ ಸೇನಾಬಲದ ಮುಂದೆ ಅಹೋಮ್ ಸೇನಾಬಲ ಏನೇನೂ ಅಲ್ಲ ಎಂದು ಮನಗಂಡಬೋಫೋಕಾನ್, ಎದುರಾಳಿ ಯನ್ನು ರಣಾಂಗಣದಲ್ಲಿ ನೇರವಾಗಿ ಎದುರಿಸುವ ಬದಲು ಗೆರಿ ಮಾದರಿಯ ದಾಳಿಯ ಮೂಲಕ ಉಪಾಯದಿಂದ ಎದುರಿಸಿದ.
ಈ ಹೋರಾಟದಲ್ಲಿ ಅಹೋಮ್ ಸೈನಿಕರೂ ದೊಡ್ಡ ಸಂಖ್ಯೆಯಲ್ಲಿ ಸತ್ತರು,ಬೋಫೋಕಾನ್ಗಂಭೀರವಾಗಿ ಗಾಯಗೊಂಡ. ಆದರೂ ಅಹೋಮ್ ಸೈನಿಕರು ಆಕ್ರಮಣ ಮುಂದುವರಿಸಿ ಮೊಘಲ್ ಸೇನೆಯು ನೆಲಮಾರ್ಗ ತೊರೆದು ಯುದ್ಧನೌಕೆಗಳಲ್ಲಿಬ್ರಹ್ಮಪುತ್ರಾ ನದಿಯ ಮೂಲಕ ಅಸ್ಸಾಮಿನೆಡೆಗೆ ಸಾಗುವಂತೆ ಮಾಡಿದರು. ಇದುಬೋಫೋಕಾನ್‌ನ ಯೋಜನೆಯೇ ಆಗಿತ್ತು. ಸರಾಯ್‌ಘಾಟ್ ಪ್ರದೇಶದಲ್ಲಿ ಬ್ರಹ್ಮಪುತ್ರಾ ನದಿಯ ಅಗಲ ಕೇವಲ ೧ ಕಿ.ಮೀ. ಮಾತ್ರವಿದ್ದು ಮೊಘಲ್ ನೌಕೆಗಳು ಅಲ್ಲಿಗೆತಲುಪುವಾಗ ಏಕಾಏಕಿ ಎರಗಲುಬೋಫೋಕಾನ್ಯೋಜಿಸಿದ್ದ.
ಆದರೆ ಆ ವೇಳೆಗಾಗಲೇ ಸಾಕಷ್ಟು ಸಾವುನೋವು ಕಂಡಿದ್ದ ಅಹೋಮ್ ಸೈನಿಕರು ಯುದ್ಧರಂಗದಿಂದ ವಿಮುಖರಾಗತೊಡಗಿದಾಗಸ್ವತಃ ಗಂಭೀರ ಗಾಯಗಳಾಗಿದ್ದರೂಬೋಫೋಕಾನ್ಸಂಗಡಿಗರೊಂದಿಗೆ ೭ ದೋಣಿಗಳ ಮೂಲಕ ಶತ್ರುಪಡೆ ಸಮೀಪಿಸಿ ಆಕ್ರಮಣ ಮುಂದುವರಿಸಲು ಸೈನಿಕರನ್ನು ಹುರಿದುಂಬಿಸಿದ. ಇದರಿಂದ ಅವರು ಉತ್ತೇಜಿತರಾಗಿ ಇಟಾಕುಲಿ, ಕಾಮಾಕ್ಷ ಮತ್ತು ಅಶ್ವಕ್ರಾಂತ್ ಪರ್ವತಗಳ ಕಡೆಯಿಂದ ಮೊಘಲರ ಮೇಲೆರಗಿದ್ದಕ್ಕೆ ಅದು ಸಂಪೂರ್ಣ ನಾಶವಾಯಿತು.
ಮುನವ್ವರ್ ಖಾನ್ ಅಸುನೀಗಿದ. ರಾಮ್ ಸಿಂಗ್ ಅಳಿದುಳಿದ ಸೈನ್ಯದೊಂದಿಗೆ ಪರಾರಿಯಾದ. ಸರಾಯ್‌ಘಾಟ್ ಯುದ್ಧ ಮೊಘಲರಿಗೆ ಎಂದೂ ಮರೆಯದ ಪಾಠ ಕಲಿಸಿತು. ಆದರೆ ಗಾಯಗಳಿಂದ ಬಳಲಿದ ಬೋಫೋಕಾನ್ ೬ ತಿಂಗಳ ನಂತರ ಸಾವನ್ನಪ್ಪಿದ. 1679ರಲ್ಲಿ ಮೊಘಲರು ಅಹೋಮ್ ಮಂತ್ರಿಯೊಬ್ಬನಿಗೆ ಹಣದ ಆಮಿಷವೊಡ್ಡಿ ಗುವಾಹಟಿಯನ್ನು ಯುದ್ಧ ವಿಲ್ಲದೆ ವಶಪಡಿಸಿಕೊಂಡರೂ, 1682ರಲ್ಲಿ ಅಹೋಮ್ ರಾಜ ಗದಾಧರ ಸಿಂಘ ಯುದ್ಧನಡೆಸಿ ಮೊಘಲರ ಅಕ್ಬರಲಿ ಹಾಗೂ ಜಯಂತ್ ಸಿಂಹ ಶರಣಾಗುವಂತೆ ಮಾಡಿದ.
ಮುಂದೆಂದೂ ಮೊಘಲರು ಅಸ್ಸಾಮಿನ ಮೇಲೆ ಎರಗುವ ದುಸ್ಸಾಹಸಕ್ಕೆ ಕೈಹಾಕಲಿಲ್ಲ. 1826ರಲ್ಲಿ ಬ್ರಿಟಿಷರು ಅಸ್ಸಾಮನ್ನುವಶಪಡಿಸಿಕೊಳ್ಳುವವರೆಗೆ ಅದು ಅಹೋಮ್ ರಾಜರ ಆಡಳಿತದ ಉಳಿಯಿತು. ಇತಿಹಾಸಕಾರರು ಅಹೋಮ್‌ಗಳನ್ನು ಮರೆತರೂ ಇತಿಹಾಸ ಅಹೋಮ್‌ಗಳನ್ನು ಮರೆಯದು ಎಂದಿದ್ದಾರೆ ಇತಿಹಾಸಕಾರ ಸೀತಾರಾಮ್ ಗೋಯೆಲ್. ಲಚಿತ್ಬೋಫೋಕಾನ್ಜನ್ಮದಿನವಾದ ನವೆಂಬರ್ ೧೪ನ್ನು ಅಸ್ಸಾಂನಲ್ಲಿ ‘ಲಚಿತ್ ದಿವಸ್’ ಎಂದು ಆಚರಿಸಲಾಗುತ್ತದೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಅತ್ಯುತ್ತಮ ಕೆಡೆಟ್‌ಗೆ ಪ್ರತಿವರ್ಷ ಲಚಿತ್ಬೋಫೋಕಾನ್ಬಂಗಾರದ ಪದಕ ನೀಡಿ ಗೌರವಿಸಲಾಗುತ್ತದೆ.