ಇದು ಟುಕಡೇ ಮನಃಸ್ಥಿತಿಯವರ ಛದ್ಮವೇಷ !
ವಸ್ತುಸ್ಥಿತಿ
ಬಿ.ಜೆ.ಪಿನಾಕಪಾಣಿ
ದಕ್ಷಿಣೋತ್ತರವಾಗಿ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ, ಪೂರ್ವ-ಪಶ್ಚಿಮದಲ್ಲಿ ಗ್ಯಾಂಗ್ಟಕ್‌ನಿಂದ ಹಿಡಿದು ಗಾಂಧಿನಗರದವರೆಗೆ ಬಹುತೇಕ ನಾಮಾವಶೇಷವಾಗಿರುವ ಕಾಂಗ್ರೆಸ್ ಈಗ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿದೆ. ಈ ಹಂತಕ್ಕೆ ಅದುಬಂದಿದೆಯೆಂದರೆ, ಆ ಪಕ್ಷ ಅಪ್ರಸ್ತುತವಾಗಿದೆ ಎಂದೇ ಅರ್ಥ.
ಜತೆಗೆ ಕಳೆದ ೧ ದಶಕದಿಂದ ಯಾವ ಪ್ರಮುಖ ರಾಜ್ಯಗಳಲ್ಲೂ ಅಧಿಕಾರದಲ್ಲಿಲ್ಲದೆ, ಅದಕ್ಕೆ ಅನಾಯಾಸವಾಗಿ ಹಣ ಹರಿದು ಬರುತ್ತಿದ್ದ ಹಾದಿಗಳೂ ಬಂದ್ ಆಗಿವೆ. ಕುಟುಕು ಜೀವ ಉಳಿಸಿಕೊಂಡಿರುವ ಕರ್ನಾಟಕದಲ್ಲಿ ಆ ಪಕ್ಷ ಶೀತಲಸಮರದ ತಾಣ ವಾಗಿದ್ದು, ಒಳಗೊಳಗೇ ಕುದಿಯುತ್ತಿರುವ ಭಿನ್ನಮತ ಬೇರೆಬೇರೆ ರೂಪಗಳಲ್ಲಿ ಸ್ಫೋಟಿಸುತ್ತಲೇ ಇದೆ. ‘ಅತ್ತ ದರಿ, ಇತ್ತ ಪುಲಿ’ ಎನ್ನುವ ಧರ್ಮಸಂಕಟದಲ್ಲಿ ತೊಳಲಾಡುತ್ತಿರುವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್‌ಗೆ ತಾನೇ ‘ಎಟಿಎಂ ಮಶೀನ್’ ಎಂಬ ಅಹಂಕಾರದ ಪೋಸು ಕೊಟ್ಟುಕೊಂಡು ಓಡಾಡುತ್ತಿದ್ದಾರೆ.
ಇವರನ್ನೂ, ಇವರ ಮೇಲೆ ಕತ್ತಿ ಮಸೆಯುತ್ತಲೇ ಇರುವ ಸಿದ್ದ ರಾಮಯ್ಯನವರನ್ನೂ ಜತೆಗೆ ಕರೆದೊಯ್ಯಲು ರಾಹುಲ್ ಗಾಂಧಿ ದಿನಕ್ಕೊಂದೆರಡು ಸಲ ಇಬ್ಬರ ಕೈಯನ್ನೂ ಹಿಡಿದು ಕೊಂಡು, ಜಾಗಿಂಗ್ ಮಾಡುತ್ತ ಮನರಂಜಿಸುತ್ತಿದ್ದಾರೆ. ಕಾಂಗ್ರೆಸ್ಸಿಗೆ ೧೩೭ ವರ್ಷಗಳ ಹಿನ್ನೆಲೆಯಿದೆ. ಆದರೆ, ಇಷ್ಟು ದೀರ್ಘಕಾಲದಲ್ಲಿ ಅದು ಎಂದಿಗೂ ದೇಶದ ಸಮಷ್ಟಿ ಹಿತದ ದೃಷ್ಟಿಯಿಂದ ಯೋಚಿಸಿಲ್ಲ. ೨೦ನೇ ಶತಮಾನದ ಆರಂಭದಲ್ಲಿ ಅಪಾಯಕಾರಿ ಖಿಲಾಫತ್ ಚಳವಳಿಗೆ ಪೆದ್ದುಪೆzಗಿ ಬೆಂಬಲ ಸೂಚಿಸುವ ಮೂಲಕವೇ ಆ ಪಕ್ಷದ ಎಡವಟ್ಟುಗಳು ಆರಂಭವಾದವು.
ಭಾರತದ ಚರಿತ್ರೆ ನೋಡಿದರೆ, ಧಾರ್ಮಿಕ ಮೂಲಭೂತವಾದದ ವಿಷಬೀಜಗಳು ಈ ನೆಲದಲ್ಲಿ ಮೊದಲು ಬಿದ್ದಿದ್ದೇ ಈ ಕಾಲ ಘಟ್ಟದಲ್ಲಿ ಎನ್ನುವುದು ಕಣ್ಣಿಗೆ ರಾಚುತ್ತದೆ. ಇದಾದ ಮೇಲೆ, ಭಾರತದುದ್ದಕ್ಕೂ ಈ ಮೂಲಭೂತವಾದಿಗಳು ನಡೆಸಿಕೊಂಡು ಬಂದಿರುವ ರಾಜಕೀಯ/ಧಾರ್ಮಿಕ/ ಸಾಮಾಜಿಕ ಅತಿರೇಕಗಳಿಗೆ ಕೊನೆಮೊದಲಿಲ್ಲ ಎನ್ನುವಂತಾಯಿತು. ಅಂತಿಮವಾಗಿ ಕಾಂಗ್ರೆಸ್, ಮುಸ್ಲಿಂ ಲೀಗ್‌ನಂಥ ಮತಾಂಧ ಸಂಘಟನೆಯ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡಿತು. ಇದು ದೇಶ ವಿಭಜನೆಯಲ್ಲಿ ಪರ್ಯವಸಾನವಾಯಿತು.
ಆ ಸಂದರ್ಭದಲ್ಲಿ ‘ದಲಿತರ ಪಾಲಿನ ವಿಮೋಚಕ’ ಮತ್ತು ಸಂವಿಧಾನದ ಕರ್ತೃ ಡಾ. ಬಿ.ಆರ್. ಅಂಬೇಡ್ಕರರು, ’ಧರ್ಮದ ಹೆಸರಿನಲ್ಲಿ ದೇಶ ಇಬ್ಭಾಗವಾಗಿದೆ. ಆದ್ದರಿಂದ ಈಗ ಜನಸಂಖ್ಯಾ ವಿನಿಮಯವನ್ನು ಮಾಡಿಕೊಳ್ಳುವುದೇ ಸುರಕ್ಷಿತ ಭಾರತಕ್ಕೆ ಇರುವ ಅತ್ಯುತ್ತಮ ಆಯ್ಕೆ’ ಎಂದು ಆಗ್ರಹಿಸಿದರು. ಆದರೆ, ಅಷ್ಟು ಹೊತ್ತಿಗಾಗಲೇ ಕಾಂಗ್ರೆಸ್ ಮೇಲೆ ತಮ್ಮ ಆಕ್ಟೋಪಸ್ ಹಿಡಿತ ಸಾಧಿಸಿದ್ದ ಜವಾಹರಲಾಲ್ ನೆಹರು ಅವರು, ತಮ್ಮ ರಮ್ಯ  ಆದರ್ಶದಲ್ಲಿ ದೇಶಹಿತವನ್ನು ಬಲಿಗೊಟ್ಟು, ತಮ್ಮ ಹಿತವನ್ನುಸಾಧಿಸಿಕೊಂಡರು.
ಈ ಸಂದರ್ಭದ ಭಾರತವು ಸಂಪೂರ್ಣ ವಾಯವ್ಯ ಪ್ರಾಂತ್ಯ ಮತ್ತು ಸಿಂಧ್, ಬಂಗಾಳ ಮತ್ತು ಪಂಜಾಬ್‌ಗಳ ಅರ್ಧರ್ಧ ಭಾಗ, ಅಲ್ಲದೆ ಸಿಲೆಟ್ ಸೇರಿದಂತೆ ಅಸ್ಸಾಮಿನ ಕೆಲವು ಭಾಗಗಳನ್ನು ಕಳೆದುಕೊಂಡಿತು. ಆಗ, ಭಾರತೀಯ ಜನಸಂಘದ ಅಧ್ವರ್ಯು ಗಳಾಗಿದ್ದ ಡಾ. ಶಾಮಾಪ್ರಸಾದ್ ಮುಖರ್ಜಿಯವರೇನಾದರೂ ದನಿಯೆತ್ತದೆ ಹೋಗಿದ್ದರೆ, ಇಡೀ ಬಂಗಾಳ ಮತ್ತು ಅಸ್ಸಾಂಗಳು ಭಾರತದಲ್ಲಿ ಈಗ ಎಷ್ಟಿವೆಯೋ ಅಷ್ಟೂ ಇರುತ್ತಿರಲಿಲ್ಲ. ನಿಜವಾದ ಅರ್ಥದಲ್ಲಿ ‘ಪಶ್ಚಿಮ ಬಂಗಾಳದ ಜನಕ’ ಎನ್ನುವ ಶ್ರೇಯಸ್ಸು ಮುಖರ್ಜಿಯವರಿಗೆ ಸಲ್ಲಬೇಕು.
ಇದಾದ ಬಳಿಕ ಅವರು, ನೆಹರು ತಮ್ಮ ತುಷ್ಟಿಕರಣ ನೀತಿಗೆ ಅನುಗುಣವಾಗಿ ಕಾಶ್ಮೀರಕ್ಕೆ ದಯಪಾಲಿಸಿದ ವಿಶೇಷಾಧಿಕಾರವನ್ನು ರದ್ದುಪಡಿಸಬೇಕೆಂದು ಹೋರಾಡಿ ಶ್ರೀನಗರದ ಹುತಾತ್ಮರಾದರು. ಅವರು ಆರಂಭಿಸಿದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದು ಈಗಿನ ನರೇಂದ್ರ ಮೋದಿಯವರ ಸರಕಾರ. ಈ ಮೂಲಕ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎನ್ನುವುದನ್ನು ಬಿಜೆಪಿ ಸಂಶಯಾತೀತವಾಗಿ ಸಾಧಿಸಿ ತೋರಿಸಿದೆ.
ಕಾಂಗ್ರೆಸ್ಸು ದೇಶವನ್ನು ಒಡೆಯಿತು, ಹಿಂದೂ- ಮುಸ್ಲಿಂ ಹೆಸರಿನಲ್ಲಿ ಕೋಮುವಾದವನ್ನು ಹುಟ್ಟುಹಾಕಿತು, ಕಾಶ್ಮೀರವನ್ನು ದೇಶದ ಉಳಿದ ಭಾಗದಿಂದ ಪ್ರತ್ಯೇಕಿಸಿತು. ಆದರೆ, ಬಿಜೆಪಿ ತನ್ನ ಆಡಳಿತದಲ್ಲಿ ಎಂದಿಗೂ ಕೋಮುವಾದಕ್ಕಾಗಲಿ, ವಿಶೇಷಾಧಿಕಾರ ಕ್ಕಾಗಲಿ ಮಣೆಹಾಕದೆ, ಭಾರತವನ್ನು ಪೂರ್ಣವಾಗಿ ಬೆಸೆಯುವಲ್ಲಿ ಯಶಸ್ವಿಯಾಗಿದೆ.
ದೇಶವಾಸಿಗಳು ೩೦ ವರ್ಷಗಳ ನಂತರ ಬಿಜೆಪಿಗೆ ಸ್ಪಷ್ಟ ಬಹುಮತದ ಜನಾದೇಶವನ್ನು ಎರಡೆರಡು ಬಾರಿ ನೀಡುವ ಮೂಲಕ ರಾಷ್ಟ್ರೀಯತೆ ಮತ್ತು ಸಂಸ್ಕೃತಿಯನ್ನು ಆಧರಿಸಿದ ಸೈದ್ಧಾಂತಿಕ ರಾಜಕಾರಣಕ್ಕೆ ಅನುಮೋದನೆಯ ಠಸ್ಸೆ ಒತ್ತಿದ್ದಾರೆ.  ಅಧಿಕಾರ ವಿಲ್ಲದೆ ಹತಾಶವಾಗಿರುವ ಕಾಂಗ್ರೆಸ್ ಮತ್ತು ಅದು ಸದಾ ಪೋಷಿಸಿಕೊಂಡು ಬಂದಿದ್ದ ಭ್ರಷ್ಟಾಚಾರದ ಪರವಾದ ಶಕ್ತಿಗಳು ಹೇಗಾದರೂ ಮಾಡಿ, ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊಂಚುಹಾಕುತ್ತಿವೆ.
ಆದರೆ, ೨೫ ವರ್ಷಗಳ ಹಿಂದೆ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ ಪರಮಾಣು ಬಾಂಬುಗಳನ್ನು ಸಿಡಿಸಿ, ಜಗತ್ತಿಗೆ ಭಾರತದ ಶಕ್ತಿ ಏನೆನ್ನುವುದನ್ನು ಸಾರಿತು. ಸ್ವತಂತ್ರ ಭಾರತದಲ್ಲಿ ೭೦ ಸಾವಿರ ಕೋಮುಗಲಭೆಗಳನ್ನು ನಡೆಸಿದ ರಕ್ತಸಿಕ್ತ ಚರಿತ್ರೆಯನ್ನು ಹೊಂದಿರುವ ಕಾಂಗ್ರೆಸ್ ತನಗೆ ಮೆತ್ತಿಕೊಂಡಿರುವ ಈ ಕಳಂಕವನ್ನು ಕಳೆದುಕೊಳ್ಳಲು ಅರಬ್ ಸಂಸ್ಥಾನದ ಯಾವ ಸುಗಂಧ ದ್ರವ್ಯವನ್ನು ಹಚ್ಚಿಕೊಂಡರೂ ಅದು ಹೋಗುವುದಿಲ್ಲ!
ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ‘ಒಂದು ದೇಶ, ಒಂದು ತೆರಿಗೆ’, ‘ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್’, ಸೇನೆಯಲ್ಲಿ ‘ಒಂದು ರ‍್ಯಾಂಕ್, ಒಂದು ಪಿಂಚಣಿ’ ತರಹದ ಚಾರಿತ್ರಿಕ ಏಕತೆ ಸಾಧ್ಯವಾಗಿದೆ. ಅಷ್ಟೇ ಏಕೆ, ಕಾಂಗ್ರೆಸ್ಸಿನ ಕುಮ್ಮಕ್ಕು ಮತ್ತು ನಿರ್ವೀರ್ಯತೆ ಗಳ ಫಲವಾಗಿ ದೇಶದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ತಾಂಡವವಾಡುತ್ತಿದ್ದ ಕಾಲದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರ ದವರೆಗೂ ‘ಏಕತಾ ಯಾತ್ರೆ’ ನಡೆಸಿ, ಶ್ರೀನಗರದ ಲಾಲ್‌ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ೧೦೦ ಕೋಟಿ ಭಾರತೀಯ ರನ್ನು ರಾಷ್ಟ್ರಪ್ರೇಮದ ಪ್ರಜ್ಞೆಯಲ್ಲಿ ಬೆಸೆದಿದ್ದು ಕೂಡ ಬಿಜೆಪಿಯೇ ಅಲ್ಲವೇ? ಹಾಗೆಯೇ, ಕಾಂಗ್ರೆಸ್ಸಿನ ೬ ದಶಕಗಳ ಆಡಳಿತದಲ್ಲಿ ಅವeಗೆ ಈಡಾಗಿ, ಪ್ರತ್ಯೇಕತಾವಾದಿಗಳ ತೊಟ್ಟಿಲಾಗಿದ್ದ ಈಶಾನ್ಯ ಭಾರತದ ರಾಜ್ಯಗಳ ಅಭಿವೃದ್ಧಿಗೆ ನಿರ್ದಿಷ್ಟ ನೀತಿಯನ್ನೇ ರೂಪಿಸಿ ಆ ರಾಜ್ಯಗಳನ್ನು ಭಾರತದ ಮುಖ್ಯ ವಾಹಿನಿಯೊಂದಿಗೆ ಸೇರಿಸಿರುವ ಶ್ರೇಯಸ್ಸು ಬಿಜೆಪಿಗಲ್ಲದೆ ಕಾಂಗ್ರೆಸ್ಸಿಗೆ ಎಂದಾದರೂ ಸಲ್ಲುತ್ತದೇನು? ಇನ್ನೊಂದೆಡೆ, ಪ್ರಪಂಚದ ಎಲ್ಲ ದೇಶಗಳಲ್ಲೂ ಇರುವ ಅನಿವಾಸಿ ಭಾರತೀಯರನ್ನು ಕೂಡ ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳ ಭಾಗವನ್ನಾಗಿಸಿಕೊಂಡು, ‘ಇಂಡಿಯನ್ ಡಯಾಸ್ಪೊರಾ’ ವನ್ನು ಮುನ್ನೆಲೆಗೆ ತರಲಾಗಿದೆ.
ಇಂಥ ಒಂದು ರಚನಾತ್ಮಕ ಕಲ್ಪನೆ ಕೂಡ ಕಾಂಗ್ರೆಸ್ಸಿಗೆ ಸಾಧ್ಯವಿಲ್ಲ. ಭಾರತವು ಹಲವು ಭಾಷೆಗಳ ಒಕ್ಕೂಟ ಎನ್ನುವುದನ್ನುಮರೆತು ದೇಶದೆಡೆ ಹಿಂದಿಯನ್ನು ಹೇರಿದ್ದು ವಾಸ್ತವದಲ್ಲಿ ಕಾಂಗ್ರೆಸ್; ಈಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡವೂ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಅಗ್ರಸ್ಥಾನ ಕೊಡುತ್ತಿರುವ ಹಿರಿಮೆ ಬಿಜೆಪಿಯದು. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎನ್ನುವುದೇ ಬಿಜೆಪಿಯ ಮಂತ್ರ.
ಆದರೆ ಕಾಂಗ್ರೆಸ್ಸು ಯಾವಾಗಲೂ ವೋಟ್‌ಬ್ಯಾಂಕ್ ಮೇಲೆ ಕಣ್ಣಿಟ್ಟುಕೊಂಡು ದೇಶವನ್ನು ಒಡೆಯುತ್ತಲೇ ಬಂದಿದೆ. ಹಿಂದೆ ಮುಸ್ಲಿಮರ ವೋಟುಗಳ ಆಸೆಗಾಗಿ ಸಲ್ಮಾನ್ ರಶ್ದಿಯವರ ‘ಸೆಟಾನಿಕ್ ವರ್ಸಸ್’ ಕೃತಿಯನ್ನು ವಿನಾಕಾರಣ ನಿಷೇಧಿಸಿದ್ದು, ಶಾಬಾನೋ ಪ್ರಕರಣದಲ್ಲಿ ಮುಸ್ಲಿಂ ಮಹಿಳೆಯರ ಪರವಾಗಿ ಸುಪ್ರೀಂಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪನ್ನು ರದ್ದುಪಡಿಸಿ ಸುಗ್ರೀವಾಜ್ಞೆ ತರುವ ಮೂಲಕ ಸಮುದಾಯವನ್ನು ಅಂಧಕಾರಕ್ಕೆ ತಳ್ಳಿದ್ದು, ಅಯೋಧ್ಯೆ ವಿವಾದವನ್ನು ಬಗೆಹರಿಸದೆ ಅಲ್ಪಸಂಖ್ಯಾತರಿಗೆ ಬೆದರುಬೊಂಬೆಗಳನ್ನು ತೋರಿಸುತ್ತ ಬಂದಿದ್ದು, ಪರಿಶಿಷ್ಟ ಜಾತಿಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತ ಅವರಿಗೆ ವಂಚಿಸುತ್ತ ಬಂದಿದ್ದು, ಅಮಾಯಕರನ್ನು ಬಲಿ ತೆಗೆದುಕೊಳ್ಳುವ ನಕ್ಸಲರನ್ನು ಬೆಂಬಲಿಸಿದ್ದು ಹೀಗೆ ಕಾಂಗ್ರೆಸ್ ಮಾಡಿರುವ ವಿಭಜನೆಗಳಿಗೆ ನೂರಾರು ಉದಾಹರಣೆಗಳನ್ನೇ ಕೊಡಬಹುದು.
‘ಭಾರತ್ ಜೋಡೋ ಯಾತ್ರೆ’ಯು ನೆಹರು-ಗಾಂಧಿ ಕುಟುಂಬದ ಮತ್ತು ಆ ಕುಟುಂಬದ ಭಟ್ಟಂಗಿಗಳ ಒಂದು ಛದ್ಮವೇಷ, ಇದರ ಹಿಂದಿರುವ ಹಿಡನ್ ಅಜೆಂಡಾ ಏನೆನ್ನುವುದು ಎಲ್ಲರಿಗೂ ಗೊತ್ತಿದೆ. ಸ್ವತಃ ರಾಹುಲ್ ಗಾಂಧಿ ಕೆಲವರ್ಷಗಳ ಹಿಂದೆ ‘ಭಾರತ ವೆನ್ನುವುದು ಒಂದು ರಾಷ್ಟ್ರವೇ ಅಲ್ಲ’ ಎಂದು ‘ಟುಕಡೇ ಗ್ಯಾಂಗ್’ ಜತೆ ಸೇರಿಕೊಂಡು ಹೇಳಿದ್ದರು!
ಇಂಥ ದೇಶವಿಭಜಕ ಮನಃಸ್ಥಿತಿಯ ವಿಫಲ ನಾಯಕನೊಬ್ಬ ‘ಭಾರತವನ್ನು ಜೋಡಿಸುತ್ತೇನೆ’ ಎಂದು ಹೊರಟಿರುವುದೇ ಅನರ್ಥಕಾರಿ. ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ಒಂದಾಗಿದೆ. ಒಂದು ಕಾಲದಲ್ಲಿ ಜನಸಂಘ ದಿಂದಲೇ ಚುನಾವಣೆಗೆ ಧುಮುಕಿದ್ದ ಮೇರುಕವಿ ಗೋಪಾಲಕೃಷ್ಣ ಅಡಿಗರು, ‘ಇಲ್ಲ ಇಲ್ಲ, ನೆಹರು ನಿವೃತ್ತ ರಾಗುವುದಿಲ್ಲ…. ಶೇಕಡ ಏಳಕ್ಕೆ ಮೋಸವಿಲ್ಲ!’ ಎಂದು ಜನರನ್ನು ಎಚ್ಚರಿಸಿದ್ದು ಸುಮ್ಮನೆ ಅಲ್ಲ.
ಈ ದೇಶಕ್ಕೆ ಕಾಂಗ್ರೆಸ್ ಎಷ್ಟೊಂದು ಅಪಾಯಕಾರಿ ಎನ್ನುವುದು ಅವರಿಗೆ ಗೊತ್ತಿತ್ತು. ಈಗಿನ ಶಿಕ್ಷಿತ ತಲೆಮಾರುಗಳಿಗೂ ಈ ಘೋರವಾಸ್ತವ ಗೊತ್ತಾಗಿದೆ ಎನ್ನುವುದೇ ನೆಮ್ಮದಿಯ ಸಂಗತಿ.