’ಸಬ್‌ ಕಾ ವಿಕಾಸ್’ ಸಾಕಾರಗೊಂಡಿದೆ
ಪರಮೇಶ್ವರನ್‌ ಅಯ್ಯರ್‌
ಕಳೆದ ವಾರ, ‘ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್’ (ಐಎಂಎಫ್) ಭಾರತದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್ (ಡಿಬಿಟಿ) ವ್ಯವಸ್ಥೆಯ ಶ್ಲಾಘನೆ ಮಾಡಿ, ಅದನ್ನು ಲಾಜಿಸ್ಟಿಕ್ಸ್ ಕ್ಷೇತ್ರದ ಅದ್ಭುತ ಎಂದೂ ಬಣ್ಣಿಸಿತ್ತು. ಈ ಯೋಜನೆಯಿಂದ ಮಹಿಳೆಯರು ಮತ್ತು ರೈತರೂ ಸೇರಿದಂತೆ ಕೋಟ್ಯಂತರ ಮಂದಿಗೆ ಹೆಚ್ಚಿನ ಪ್ರಯೋಜನವಾಗಿದೆ.
ಐಎಂಎಫ್ ನ ಉಪನಿರ್ದೇಶಕ ಪೌಲೋ ಮಾರೋ, ಭಾರತದ ಈ ವ್ಯವಸ್ಥೆಯನ್ನು ಹೊಗಳಿ ಇದಕ್ಕೆ ಪೂರಕವಾದ ತಾಂತ್ರಿಕ ಆವಿಷ್ಕಾರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ. ವಿಶ್ವಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಈ ಬಗ್ಗೆ ಪ್ರತಿಕ್ರಿಯಿಸಿ, ವಿಶ್ವದ ಉಳಿದ ದೇಶಗಳು ಭಾರತದ ಈ ವ್ಯವಸ್ಥೆಯನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ.
ನಗದು ವರ್ಗಾವಣೆಯನ್ನು ಡಿಜಿಟಲ್ ಮೂಲಕವಾಗಿ ಮಾಡಿದ್ದು, ಸಬ್ಸಿಡಿಗಳನ್ನು ವ್ಯವಸ್ಥಿತವಾಗಿ ಹಂಚಿದ್ದು ಗ್ರಾಮೀಣ ಭಾಗದ ಶೇ. 85ರಷ್ಟು ಮತ್ತು ನಗರ ಪ್ರದೇಶಗಳ ಶೇ. ೬೯ರಷ್ಟು ಮಂದಿಗೆ ಪ್ರಯೋಜನವಾಗಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.ಸರಿಸುಮಾರು 1980ರ ದಶಕದ ಮಧ್ಯಭಾಗದಲ್ಲಿ, ಸಾರ್ವಜನಿಕ ಅಭಿವೃದ್ಧಿ ಯೋಜನೆ ಗಳು ಅರ್ಹ ಫಲಾನುಭವಿಗಳನ್ನು ತಲುಪದೆ ಹೇಗೆ ಮಧ್ಯದಲ್ಲೇ ಸೋರಿಕೆಯಾಗಿ ದುರುಪಯೋಗ ಮತ್ತು ಭ್ರಷ್ಟಾಚಾರಕ್ಕೆ ದಾರಿಮಾಡಿಕೊಡುತ್ತಿದ್ದವು ಎಂಬುದನ್ನು ನಾವೆಲ್ಲ ಕಂಡಿದ್ದೇವೆ. ಈಗ ಅದೆಲ್ಲ ಇಲ್ಲ.
ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೊಂದಿರುವ ಫಲಾನುಭವಿಗಳು ತಮಗೆ ಸಿಗಬೇಕಾದ ಸವಲತ್ತನ್ನು ನೇರವಾಗಿ ತಮ್ಮ ಖಾತೆಯ ಮೂಲಕ ಪಡೆದುಕೊಳ್ಳುವಂತಾಗಿದೆ. ಗ್ರಾಮೀಣ ಭಾಗವೂ ಸೇರಿದಂತೆ ಎಲ್ಲ ಸ್ತರಗಳಲ್ಲಿರುವ ಜನರು ಆರ್ಥಿಕ ಸೇವೆ ಗಳನ್ನು ನೇರವಾಗಿ ಪಡೆದುಕೊಳ್ಳುವುದು ಇಂದು ಸಾಧ್ಯವಾಗಿದೆ.
ವಿವಿಧ ಹಂತಗಳ ಸರಕಾರಿ ಆಡಳಿತ ಯಂತ್ರ, ಅದರ ವೈವಿಧ್ಯ ಮತ್ತು ಇನ್ನೂ ಅನೇಕ ಸಂಕೀರ್ಣ ಕಾರಣಗಳು ಅನೇಕ ಸಂದರ್ಭ ಗಳಲ್ಲಿ ಸಮರ್ಪಕವಾಗಿ ಕೆಲಸ ಮಾಡಲಾಗದ ಸ್ಥಿತಿಗೆ ಬರಬಹುದು. ‘ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್’ ವ್ಯವಸ್ಥೆ ಬಾರದಿದ್ದಿದ್ದರೆ, ನಾವೀಗಲೂ ಅದೇ ಹಳೆಯ ಪದ್ಧತಿಗೇ ಜೋತು ಬಿದ್ದಿರುತ್ತಿದ್ದೆವು. ಈಗ ಸರಕಾರಿ ಯಂತ್ರಕ್ಕೆ ಚುರುಕುತನ ಬಂದಿದೆ, ಪಾರದರ್ಶ ಕತೆಯೂ ಇದೆ, ಎಲ್ಲವನ್ನೂ ಅರ್ಹರಿಗೆ ಸರಿಸಮನಾಗಿ ಹಂಚುವ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ.
ಇದನ್ನೇ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಗುರುತಿಸಿ ಹೊಗಳಿವೆ. 2014ರಲ್ಲಿ ಒಂದು ವ್ಯವಸ್ಥಿತ ಕಾರ್ಯಯೋಜನೆ ಸಿದ್ಧಪಡಿಸಿದ ಭಾರತ ಸರಕಾರ, ದೇಶದ ಎಲ್ಲರೂ ಅದರಲ್ಲಿ ಒಳಗೊಳ್ಳುವಂತೆ ನೋಡಿಕೊಂಡಿತು. ದೇಶವಾಸಿಗಳೆಲ್ಲರಿಗೂ ಬ್ಯಾಂಕ್ ಖಾತೆ ಇರಲೇಬೇಕೆಂಬ ಉದ್ದೇಶದ ಯೋಜನೆ ರೂಪುಗೊಂಡಿತು. ಅದನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವುದನ್ನೂ ಕಡ್ಡಾಯ ಮಾಡಲಾಯಿತು. ಬ್ಯಾಂಕಿಂಗ್ ಮತ್ತು ದೂರವಾಣಿ ಸೇವೆಗಳನ್ನು ಒಂದಕ್ಕೊಂದು ಜೋಡಣೆ ಮಾಡಲಾಯಿತು. ಹೀಗಾಗಿ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ ಸಮರ್ಪಕ ದಾರಿಯಲ್ಲಿ ಸಾಗುವುದು ಸಾಧ್ಯವಾಯಿತು.
ಇದಕ್ಕೆಲ್ಲ ಆಧಾರ್ ಸಂಪರ್ಕಸೇತುವಾಗಿ ಕೆಲಸ ಮಾಡುತ್ತಿದೆ. ಆಧಾರ್ ಕೇಂದ್ರಿತ ಪಾವತಿ ವ್ಯವಸ್ಥೆ, ಯೂನಿಫೈಡ್ ಪೇಮೆಂಟ್ಇಂಟರ್ ಫೇಸ್ (ಯುಪಿಐ) ಅನುಷ್ಠಾನಕ್ಕೆ ಬಂದ ಮೇಲಂತೂ ಎಲ್ಲವೂ ಸುಲಲಿತವಾಯಿತು. ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಕಚೇರಿಗಳಿಗೆ ಅಲೆಯುವುದು, ಕಾಯುವುದು ನಿಂತೇಹೋಯಿತು.
೨೦೨೨ರ ವೇಳೆಗೆ ೧೩೫ ಕೋಟಿಗೂ ಹೆಚ್ಚು ಆಧಾರ್ ಕಾರ್ಡುಗಳು ನೋಂದಣಿ ಆಗಿವೆ. ಈ ಪೈಕಿ 47 ಕೋಟಿ ಫಲಾನುಭವಿಗಳು ಪ್ರಧಾನಮಂತ್ರಿ ಜನಧನ ಯೋಜನೆಗೆ ಸೇರಿದವರಾಗಿದ್ದಾರೆ. 6.5 ಲಕ್ಷ ಬ್ಯಾಂಕ್ ಮಿತ್ರರು ಬ್ಯಾಂಕಿಂಗ್ ಸೇವೆ ಒದಗಿಸುವಂತಾಗಿದೆ.ಮೊಬೈಲು ಚಂದಾದಾರರ ಸಂಖ್ಯೆ 120 ಕೋಟಿ ತಲುಪಿದೆ. ಇದರಿಂದಾಗಿ ‘ಸಬ್ ಕಾ ವಿಕಾಸ್’ (ಎಲ್ಲರ ಅಭ್ಯುದಯ) ಸಾಕಾರ ಗೊಳ್ಳುವುದು ಸಾಧ್ಯವಾಗಿದೆ. ಸರಕಾರ ಹೊಂದಿರುವ, ಎಲ್ಲರನ್ನೂ ಒಳಗೊಳಿಸುವ ಅಭಿವೃದ್ಧಿಯ ಮಂತ್ರ ಈ ರೂಪದಲ್ಲಿ ಅನುಷ್ಠಾನಕ್ಕೆ ಬರುತ್ತಿದೆ. ಕೇಂದ್ರ ಸರಕಾರದ ೫೩ ಮಂತ್ರಾಲಯಗಳ ಮೂಲಕ 318 ಯೋಜನೆಗಳಲ್ಲಿ ಹಂಚಿಹೋಗಿರುವ ಫಲಾನುಭವವನ್ನು ಪಡೆಯುವ ವ್ಯವಸ್ಥೆ ಸಾಮಾನ್ಯ ಸಂಗತಿಯೇನಲ್ಲ.
2013-14ರಲ್ಲಿ ಪ್ರಾಥಮಿಕವಾಗಿ ರೂಪುಗೊಂಡ ಡಿಬಿಟಿ ಯೋಜನೆಯಿಂದು ಬಹಳಷ್ಟು ವಿಸ್ತಾರಗೊಂಡಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ಉಳಿತಾಯವಾಗುತ್ತಿರುವುದರ ಜತೆಗೆ, ಸರಕಾರಿ ಯೋಜನೆಗಳ ಫಲಾನುಭವ ಅರ್ಹರಿಗೆ ನೇರವಾಗಿ ತಲುಪುವುದೂ ಸಾಧ್ಯವಾಗಿದೆ. ಗ್ರಾಮೀಣ ಭಾರತದಲ್ಲಿ ಡಿಬಿಟಿ ಮೂಲಕವಾಗಿ ಸರಕಾರದ ಸವಲತ್ತುಗಳನ್ನು ಪಾರದರ್ಶಕತೆ ಯೊಂದಿಗೆ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಇಂದು ಸಾಧ್ಯವಾಗಿದೆ.
ರೈತರೂ ಸೇರಿದಂತೆ ಎಲ್ಲರಿಗೂ ಇದು ಖುಷಿ ಮತ್ತು ನೆಮ್ಮದಿಯನ್ನು ನೀಡಿದೆ. ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ, ಪಿ.ಎಂ. ಫಸಲ್ ಬಿಮಾ ಯೋಜನೆ ಮತ್ತು ಪಿ.ಎಂ. ಕೃಷಿ ಸಿಂಚಾಯಿ ಯೋಜನೆ ಇವೆಲ್ಲವೂ ಗ್ರಾಮೀಣ ಭಾರತದ ಅಭ್ಯುದಯದ ಬೆನ್ನೆಲುಬಾಗಿ ರೂಪುಗೊಂಡಿವೆ. ಜತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ ಕೂಡ ಸಾಕಷ್ಟು ಪಾರದರ್ಶಕತೆಯಿಂದ ನಿರ್ವಹಣೆಯಾಗುತ್ತಿವೆ.
ನಗರ ಪ್ರದೇಶಗಳ ವಿಚಾರಕ್ಕೆ ಬರುವುದಾದರೆ, ಪಿ.ಎಂ. ಆವಾಸ್ ಯೋಜನೆ, ಎಲ್‌ಪಿಜಿ ಪಹಲ್ ಯೋಜನೆಗಳು ಕೂಡ ಡಿಬಿಟಿಯ ಕಾರಣದಿಂದಾಗಿ ಸುಮುಖವಾಗಿ ನಿರ್ವಹಣೆಯಾಗುತ್ತಿವೆ. ವಿವಿಧ ಸ್ಕಾಲರ್‌ಷಿಪ್ ಯೋಜನೆಗಳನ್ನೂ ಡಿಬಿಟಿಗೆ ಜೋಡಿಸಲಾಗಿದೆ, ಸ್ವಯಂ ಉದ್ಯೋಗ ಯೋಜನೆಗಳೂ ಹೆಚ್ಚು ಪಾರದರ್ಶಕವಾಗಿವೆ. ಇತ್ತೀಚಿನ ಕೊರೋನಾ ಸಾಂಕ್ರಾಮಿಕ ರೋಗದ ಅವಧಿ ಯಲ್ಲಂತೂ ಡಿಬಿಟಿ ಎಲ್ಲರಿಗೂ ವರದಾನವಾಗಿ ಪರಿಣಮಿಸಿತು.
ದೇಶದ ಮೂಲೆಮೂಲೆಯಲ್ಲಿನ ಜನರನ್ನು ತಲುಪುವುದು ಇದರಿಂದ ಸಾಧ್ಯವಾಯಿತು. ಸರಿಸುಮಾರು ೮೦ ಕೋಟಿ ಜನರಿಗೆ ಉಚಿತ ಪಡಿತರ ಒದಗಿಸುವುದು ಸಾಧ್ಯವಾಯಿತು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮೂಲಕ ಗ್ರಾಮೀಣ ಮಹಿಳೆಯರ ಜನಧನ ಖಾತೆಗಳಿಗೆ ನೇರ ಹಣ ವರ್ಗಾವಣೆ ಕೂಡ ಕೈಗೂಡಿತು. ಸಾಂಕ್ರಾಮಿಕ ರೋಗದ ಘೋರ ಪರಿಣಾಮಗಳನ್ನು ಎದುರಿಸುವಲ್ಲಿ ಇದು ಸಹಕಾರಿಯಾಯಿತು ಎಂಬುದರಲ್ಲಿ ಅತಿಶಯವೇನಿಲ್ಲ.
ಸರಕಾರದ ಕ್ರಮಬದ್ಧ ಯೋಜನೆಗಳು, ನೀತಿ- ನಿಯಮಾವಳಿಗಳ ಕಾರಣದಿಂದ ದೇಶದ ಎಲ್ಲ ಜನರ, ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥಾಪನೆಗಳ ಸದುಪಯೋಗ ಪಡೆಯುವುದು ಸಾಧ್ಯವಾಗಿದೆ. ಇಷ್ಟೊಂದು ದೊಡ್ಡ ಜನಸಂಖ್ಯೆಯ ದೇಶದಲ್ಲಿ ಇದೆಲ್ಲವೂ ಸುಮುಖವಾಗಿ ನಡೆಯುತ್ತಿರುವುದಕ್ಕೆ ಕಾರಣ ಸರಕಾರದ ಕ್ರತುಶಕ್ತಿ ಮತ್ತು ಡಿಬಿಟಿ ಯೋಜನೆಯ ಕಾರ್ಯ ಯೋಜನೆ. ಕಳೆದ ೬ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಆಗಿರುವ ಪ್ರಗತಿ ಮತ್ತು ಸಾಧನೆ ಮಾದರಿಯಾದದ್ದು.
ಈ ಡಿಬಿಟಿ ವ್ಯವಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಿ, ಮುಂಬರುವ ದಿನಗಳಲ್ಲಿ ದೇಶವಾಸಿಗಳ ಜೀವನವನ್ನು ಸುಖಮಯ ಗೊಳಿಸುವಲ್ಲಿ, ಆತಂಕಗಳನ್ನು ತೊಡೆದುಹಾಕುವಲ್ಲಿ ಸಹಕಾರಿಯಾಗಲಿದೆ ಮತ್ತು ಇನ್ನಷ್ಟು ವಿಸ್ತರಣೆಗೊಂಡು ಉಪಯುಕ್ತ ವೆನಿಸಲಿದೆ. ಜನಸಂಖ್ಯೆಯ ಹೆಚ್ಚಳದ ಕಾರಣದಿಂದಾಗಿ ಆಗಿದ್ದ ಅಸಮತೆಯನ್ನು ತೊಡೆದುಹಾಕುವಲ್ಲಿ ಮತ್ತು ಎಲ್ಲರನ್ನು ಸಂತುಲಿತವಾಗಿ ಮುನ್ನಡೆಸುವಲ್ಲಿ, ಅಭಿವೃದ್ಧಿಯ ದಾರಿಯಲ್ಲಿ ಕೊಂಡೊಯ್ಯುವಲ್ಲಿ ಈ ನೇರ ಫಲಾನುಭವ ವರ್ಗಾವಣೆಯಂಥ ಯೋಜನೆ ನಿಜಕ್ಕೂ ಅಚ್ಚರಿ ಮೂಡಿಸುವಷ್ಟು ಉತ್ತಮ ಸಾಧನೆ ತೋರಿದೆ.