ಮತದಾರನಿಗೇನಾದರೂ ಮೌಲ್ಯವಿದೆಯೇ ?
ವಿಜಯ್‌ ದರ್‌ಡ
ಖ್ಯಾತ ನಟ ನಾನಾ ಪಾಟೇಕರ್ ಶೈಲಿಯೇ ವಿಭಿನ್ನ. ಸಿನಿಮಾಗಳಲ್ಲಿ ಆತನ ಡೈಲಾಗ್ ಗಳನ್ನು ಕೇಳಿದವರಿಗೆ ಅದರ ಅನುಭವ ವಿದ್ದೇ ಇರುತ್ತದೆ. ಜನ ಅದನ್ನು ಕೇಳಿ ದಂಗು ಬಡಿದವರಂತಾಗುತ್ತಾರೆ. ಸಿನಿಮಾಗಳಲ್ಲಿ ಎಂತೋ ನಿಜಜೀವನದಲ್ಲೂ ಅದು ಸುಳ್ಳಲ್ಲ.
ಇತ್ತೀಚೆಗೆ ‘ಲೋಕಮತ ಗ್ರೂಪ್’ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸರಿಗೆ ನಾನಾ ಪಾಟೇಕರ್ ಕೇಳಿದ ಪ್ರಶ್ನೆ ಮಾರ್ಮಿಕವಾಗಿತ್ತು. ‘ಸ್ವಾಮೀ ಮತದಾರರಿಗೇನಾದರೂ ಮೌಲ್ಯವಿದೆಯೇ? ನಾವು ವೋಟು ಹಾಕುತ್ತೇವೆ, ನಮ್ಮ ಜನಪ್ರತಿನಿಧಿಗಳು ತಪ್ಪು ಮಾಡಿದರೆ ನಾವೇನು ಮಾಡಬೇಕು? 5 ವರ್ಷ ಕಳೆದ ನಂತರ ನಾವೇನು ಮಾಡಬೇಕೋ ಅದನ್ನು ಮಾಡೇ ಮಾಡುತ್ತೇವೆ’- ಇದು ಅವರ ಮಾತಿನ ವರಸೆಯಾಗಿತ್ತು.
ನಾನಾ ಪಾಟೇಕರ್ ಆಡಿದ ಮಾತು ದೇಶದ ಪ್ರತಿಯೊಬ್ಬ ಮತದಾರನ ಮಾತೂ ಹೌದು. ಪ್ರಜಾಪ್ರಭುತ್ವದಲ್ಲಿ ಇಂಥ ಮಾತುಗಳನ್ನು ನಾವು ಆಗಿಂದಾಗ್ಯೆ ಕೇಳುತ್ತಲೇ ಬಂದಿದ್ದೇವೆ. ಮತದಾರನೇ ಮಹಾಪ್ರಭು ಎನ್ನಲಾಗುತ್ತದೆ. ಅಭ್ಯರ್ಥಿಯ ಗೆಲುವಿಗೆ ಮತದಾರನ ನಿಲುವೇ ನಿರ್ಣಾಯಕ. ವೋಟು ಪಡೆದು ಗೆದ್ದ ಮಹಾಶಯ ಪಾರ್ಲಿಮೆಂಟು, ವಿಧಾನಸಭೆ ಮತ್ತು ಪಂಚಾಯತಿಯ ಉನ್ನತ ಸ್ಥಾನದಲ್ಲಿ ಕುಳಿತು ಅಧಿಕಾರ ಚಲಾಯಿಸುತ್ತಾನೆ. ರಾಜಕಾರಣದ ಚುಕ್ಕಾಣಿ ಹಿಡಿಯುತ್ತಾನೆ. ಆದರೆ ಮತದಾರ ನಿರ್ಣಾಯಕ ಎಂಬುದಂತೂ ಸತ್ಯ.
ಆದರೆ ಇಂದಿನ ಪರಿಸ್ಥಿತಿಯಲ್ಲಿ ಎಲ್ಲವೂ ಬದಲಾದಂತಿದೆ. ಪ್ರಜಾಪ್ರಭುತ್ವದ ಪರಿಕಲ್ಪನೆ ಹುಟ್ಟುಹಾಕಿದ ನಮ್ಮ ಪೂರ್ವಜರು ಬಹುಶಃ ಇಂಥದೊಂದು ಪರಿಸ್ಥಿತಿ ಎದುರಾದೀತೆಂದು ಊಹೆ ಕೂಡ ಮಾಡಿರಲಿಕ್ಕಿಲ್ಲ. ಮತದಾರನ ಶಕ್ತಿ ಕೇವಲ ಕಾಗದದ ಮೇಲಿನ ಹುಲಿಯಾಗಿದೆ. ಎಲ್ಲ ಶಕ್ತಿ ಸಾಮರ್ಥ್ಯಗಳು ಗೆದ್ದು ಗದ್ದುಗೆ ಏರಿದವನ ಕೈಯಲ್ಲಿದೆ.
ಮತದಾರ ಅಸಹಾಯಕನಾಗಿzನೆ, ನಾಯಕ ವಿಜೃಂಭಿಸುತ್ತಿದ್ದಾನೆ. ಈ ಪ್ರಶ್ನೆ ಯಾವತ್ತೂ ಶ್ರೀಸಾಮಾನ್ಯನನ್ನು ಕಾಡುತ್ತಲೇ ಇದೆ. ಗೆದ್ದು ಬಂದಾತನ ಮನೆ ಅರಮನೆಯಾಗುತ್ತದೆ, ಆತ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾನೆ. ರಾಜಕಾರಣಿಯೊಬ್ಬ ಭ್ರಷ್ಟ ನಾದಾಗ ಮಾತ್ರ ಇದೆಲ್ಲವೂ ಸಾಧ್ಯ.
ಇದು ಭ್ರಷ್ಟಾಚಾರಕ್ಕೆ ಮಾತ್ರ ಸೀಮಿತವಾದ ಮಾತಲ್ಲ. ಇದೀಗ ರಾಜಕಾರಣದೊಂದಿಗೆ ಅಪರಾಧವೂ ದೊಡ್ಡ ಮಟ್ಟದಲ್ಲಿ ತಳಕು ಹಾಕಿಕೊಂಡಿದೆ. ೧೯೯೩ರ ವೊಹ್ರಾ ಸಮಿತಿಯ ವರದಿಯನ್ನು ಗಮನಿಸಿದರೆ, ೨೦೦೨ರಲ್ಲಿ ರಚಿತವಾದ ಸಂವಿಧಾನದ ಕುರಿತಾದ ಕ್ರಿಯಾಸಮಿತಿಯ ರಾಷ್ಟ್ರೀಯ ವರದಿಯನ್ನು ಗಮನಿಸಿದರೆ ರಾಜಕೀಯದಲ್ಲಿ ಅಪರಾಧಿಕ ಹಿನ್ನೆಲೆಯಿರುವ ವ್ಯಕ್ತಿಗಳ ಸಂಖ್ಯೆದಿನೇದಿನೆ ಹೆಚ್ಚುತ್ತಲೇ ಇರುವುದು ಅರಿವಾಗುತ್ತದೆ.
ಇದಕ್ಕೆ ಅಂಕಿ-ಅಂಶಗಳು ಇನ್ನಷ್ಟು ಪುಷ್ಟಿ ನೀಡಿವೆ. ಪ್ರಜಾಪ್ರಭುತ್ವದ ಸುಧಾರಣೆಗಳ ಕುರಿತಾದ 2009ರ ರಾಷ್ಟ್ರೀಯ ವರದಿಯ ಪ್ರಕಾರ, ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ೭೬ ಮಂದಿ ರಾಜಕೀಯದಲ್ಲಿದ್ದರೆ, 2019ರ ವೇಳೆಗೆ ಆ ಸಂಖ್ಯೆ 159ನ್ನು ದಾಟಿದೆ. ಅಷ್ಟೂ ಮಂದಿ ದೇಶದ ಪಾರ್ಲಿಮೆಂಟ್ ಸದಸ್ಯರಾಗಿದ್ದಾರೆ. ಅಷ್ಟಕ್ಕೂ ನಮ್ಮ ರಾಜಕೀಯ ಪಕ್ಷಗಳು ಅಂಥ ಅಪರಾಧಿಕ ಹಿನ್ನೆಲೆಯ ವ್ಯಕ್ತಿಗಳಿಗೆ ಸೀಟು ಕೊಟ್ಟು ಗೆಲ್ಲಿಸುವ ಕೆಲಸ ಮಾಡಿದ್ದಾರೆ. ಆದರೆ ಎಂಥವರನ್ನು ಆಯ್ಕೆ ಮಾಡಬೇಕೆಂಬ ಪ್ರಜ್ಞೆ ಮತದಾರನಿಗಿರಬೇಕಲ್ಲವೇ? ಅಂಥ ಕ್ರಿಮಿನಲ್‌ಗಳು, ಬಾಹುಬಲಿಗಳು ಚುನಾವಣೆಗಳಲ್ಲಿ ಗೆಲ್ಲುವುದಾದರೂ ಹೇಗೆ? ಒಳ್ಳೆಯ ಚಾರಿತ್ರಿಕ ಹಿನ್ನೆಲೆಯಿರುವ ವ್ಯಕ್ತಿಗಳು ಚುನಾವಣೆಯಲ್ಲಿ ಸೋಲುವುದಾದರೂ ಏಕೆ? ಚುನಾವಣಾ ರಾಜಕೀಯ ದಲ್ಲಿರುವ ಭ್ರಷ್ಟತೆಯಿಂದ ಜನಸಾಮಾನ್ಯರು ಎಚ್ಚೆತ್ತುಕೊಳ್ಳುವುದಾದರೂ ಯಾವಾಗ? ಚುನಾವಣೆಗೆ ಮುನ್ನ ಹುರಿಯಾಳುಗಳುಮತದಾರರ ಮುಂದೆ ನಡುಬಗ್ಗಿಸಿ ಕೈಮುಗಿದು ಮತವನ್ನು ಭಿಕ್ಷೆಯಂತೆ ಬೇಡುತ್ತಾರೆ, ಗೆದ್ದಾದ ನಂತರ ತಾವೇ ಸಾಮ್ರಾಟರು ಎಂಬಂತೆ ವರ್ತಿಸತೊಡಗುತ್ತಾರೆ.
ಅಂಥ ಅನೇಕ ವ್ಯಕ್ತಿಗಳನ್ನು ನಾನು ಬ. ಎಲ್ಲಾ ಅಬ್ಬರು ಇಬ್ಬರು ಎಂಬಂತೆ, ಗೆದ್ದ ನಂತರವೂ ವಿನಮ್ರತೆಯಿಂದ ವರ್ತಿಸು ವವರೂ ನಮ್ಮ ನಡುವೆ ಇದ್ದಾರೆ. ಸಮಾಜದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆ ಉಳಿಯುವುದಕ್ಕೆ ಇಂಥ ಉತ್ತಮ ರಾಜಕಾರಣಿ ಗಳು ಸಾಕ್ಷಿಪ್ರಜ್ಞೆಯಾಗಿ ನಮ್ಮ ಮುಂದಿದ್ದಾರೆ. ಆದರೆ ಬಹುತೇಕ ರಾಜಕಾರಣಿಗಳ ವರ್ತನೆಯಲ್ಲಿ ಭಾರಿ ಬದಲಾವಣೆ ಆಗಿದೆ. ಯಾವುದೋ ಒಂದು ಪ್ರಾಂತ್ಯದ ಮತದಾರರು ತಮ್ಮ ಪರ ಮತ ಹಾಕಿಲ್ಲವೆಂಬುದು ಅರಿವಿಗೆ ಬಂದರೆ, ದ್ವೇಷದ ರಾಜಕಾರಣ ಮಾಡುವುದಕ್ಕೂ ಅವರು ಹೇಸುವುದಿಲ್ಲ.
ಮತದಾರನ ಹೊಣೆಗಾರಿಕೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕಷ್ಟೇ ಸೀಮಿತವಾಗಿಹೋಗಿದೆ. ಒಮ್ಮೆ ಚುನಾವಣೆ ಮುಗಿದ ನಂತರ ಮತದಾರನಿಗೆ ಯಾವ ಹಕ್ಕೂ ಇರುವುದಿಲ್ಲ. ಗೆದ್ದು ಬಂದಾತ ನಂತರದಲ್ಲಿ ಪಕ್ಷ ಬದಲಾವಣೆಗೆ ಮುಂದಾದರೆ ಮತದಾರ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಈಗಲೂ ಇದೆ. ನಾನಾ ಪಾಟೇಕರರ ಪ್ರಶ್ನೆಗೆ ಉಪಮುಖ್ಯಮಂತ್ರಿ ದೇವೇಂದ್ರ -ಡ್ನವೀಸರು ಉತ್ತರಿಸುತ್ತ, ‘ನಾಯಕನಿಗೆ ಮೌಲ್ಯ ಬರುವುದು ಮತದಾರನಿಂದಲೇ. ನಾಯಕರು ರಾಜಕೀಯವನ್ನು ಮತದಾರರ ಹಿತಕ್ಕಾಗಿ ಮಾಡಬೇಕೇ ಹೊರತು ತಮ್ಮ ಸ್ವಲಾಭಕ್ಕಾಗಿ ಅಲ್ಲ.
ನಿಜವಾದ ನಾಯಕರು ಅದನ್ನು ಅನುಸರಿಸುತ್ತಾರೆ. ಆದರೆ ಎಲ್ಲಾ ಕೆಲವು ನಾಯಕರು ಸ್ವಹಿತಕ್ಕಾಗಿ ಅಧಿಕಾರವನ್ನು ದುರುಪ ಯೋಗ ಪಡಿಸಿಕೊಳ್ಳುತ್ತಾರೆ. ಹಾಗಾಗಿ ಅಧಿಕಾರದ ಕೇಂದ್ರಸ್ಥಾನ ಸಮಾಜದ ವಿವಿಧ ಸ್ತರಗಳಲ್ಲಿ ಹರಿದು ಹಂಚಿ ಹೋಗು ವಂತಾಗಿದೆ’ ಎಂದರು. ಹಾಗಾಗಿ ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಮತದಾರ ಏನು ಮಾಡಬೇಕು? ತಾನು ಮತಹಾಕಿದ ಜನಪ್ರತಿನಿಧಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದಾದರೆ ಆತನನ್ನು ಹಿಂದಕ್ಕೆ ಕರೆಸಿಕೊಳ್ಳುವ ಅಧಿಕಾರ ಆತನಿಗಿಲ್ಲವೇ? ಗ್ರೀಸ್‌ನ ಪ್ರಜಾಪ್ರಭುತ್ವದಲ್ಲಿ ಇಂಥದೊಂದು ಅವಕಾಶವಿದೆ.
ಅದನ್ನು ಲಾಸ್ ಏಂಜಲೀಸ್, ಮಿಷಿಗನ್, ಒರೆಗಾನ್ ಮುನಿಸಿಪಾಲಿಟಿಗಳಲ್ಲೂ ಅಸ್ತಿತ್ವಕ್ಕೆ ತರಲಾಗಿದೆ. ಇದೆಲ್ಲವೂ ಆಗಿ ದಶಕಗಳೇಸಂದಿವೆ. 1995ರಲ್ಲಿ ಬ್ರಿಟಿಷ್ ಕೊಲಂಬಿಯಾ ಅಸೆಂಬ್ಲಿಯಲ್ಲಿ ‘ರೈಟ್ ಟು ರಿಕಾಲ್’ ಎಂಬ ಹೆಸರಿನಲ್ಲಿ ಇಂಥದೊಂದು ಅಧಿಕಾರ ವನ್ನು ಮತದಾರಪ್ರಭುವಿಗೆ ಕೊಡಲಾಗಿತ್ತು. 1974ರಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣರು ಕೂಡ ಇಂಥ ಹಕ್ಕಿನ ಪ್ರತಿಪಾದನೆ ಮಾಡಿದ್ದರು. 2008ರಲ್ಲಿ ಲೋಕಸಭೆಯ ಸ್ಪೀಕರ್ ಆಗಿದ್ದ ಸೋಮನಾಥ ಚಟರ್ಜಿಯವರು ಅದನ್ನು ಬೆಂಬಲಿಸಿ ದ್ದರು ಕೂಡ. ಈ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದವು, ಆದರೆ ಇದುವರೆಗೂ ಒಂದು ತಲಸ್ಪರ್ಶಿ ಗಟ್ಟಿ ನಿಲುವನ್ನು ತಾಳುವುದು ಸಾಧ್ಯವಾಗಿಲ್ಲ.
ನಾನಾ ಪಾಟೇಕರ್ ಎತ್ತಿದ ಪ್ರಶ್ನೆ ನ್ಯಾಯಯುತವಾದದ್ದು. ನಾವು ಇದಕ್ಕೆ ಉತ್ತರ ಕಂಡುಕೊಳ್ಳದೇ ಇದ್ದಲ್ಲಿ ಭಾರತದ ಪ್ರಜಾ ಪ್ರಭುತ್ವ ಖಂಡಿತವಾಗಿಯೂ ಸೊರಗುವ ಎಲ್ಲ ಸಾಧ್ಯತೆಗಳೂ ಇವೆ. ಜನರ ಅಭಿಪ್ರಾಯಗಳಿಗೆ ನಾನಾ ಪಾಟೇಕರ್ ದನಿಯಾಗಿ ದ್ದಾರೆ. ಲೋಕಮತ ಕಾರ್ಯಕ್ರಮದಲ್ಲಿ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಸರಿಸುಮಾರು 20 ಲಕ್ಷ ಜನರು ನಾನಾ ಪಾಟೇಕರರ ಮಾತುಗಳನ್ನು ಆಲಿಸಿದ್ದಾರೆ. ಮುಂದೇನಾಗುವುದೋ ನೋಡೋಣ.