ಮುಗ್ಧ ನಗು, ಸರಳ ವ್ಯಕ್ತಿತ್ವದ ಭಂಡಾರ
ಸ್ಮರಣೆ
ಮಂಜುನಾಥ ಅಜ್ಜಂಪುರ
ಭಂಡಾರಿಯವರ ವ್ಯಕಿತ್ವ ಮತ್ತು ಜೀವನ, ‘ಸಂಘ’ದ ಸಾಂಗತ್ಯಕ್ಕೆ ಅವರು ಒಡ್ಡಿಕೊಂಡ ಪರಿ ವಿಶಿಷ್ಟವಾದಂಥವು.ಸಾಮಾನ್ಯರ ಜೀವನದ ಘಟನಾವಳಿಗಳನ್ನು ಅಲ್ಲಿ ಕಾಣಲಾಗುವುದಿಲ್ಲ. ಇಂಥ ಮಹಾನ್ ವ್ಯಕ್ತಿತ್ವಗಳ ಬಗೆಗೆ ಓದು ವಾಗ, ತಿಳಿಯುವಾಗ, ಬರೆಯುವಾಗ ಆಗುವ ದಿವ್ಯಾನುಭೂತಿಯ ಆಯಾಮವೇ ಬೇರೆ.
ಮುಗ್ಧ ಮಗುವಿನ ನಗೆಯ, ಸರಳ ವ್ಯಕ್ತಿತ್ವದ ಚಂದ್ರಶೇಖರ ಭಂಡಾರಿಯವರು ಇದೀಗ ಕಾಲವಶರಾಗಿದ್ದಾರೆ. ‘ಮತ್ತೊಬ್ಬ ಭಂಡಾರಿಯವರು ಸಿಕ್ಕುವುದಿಲ್ಲವಲ್ಲ, ಇಂಥವರ  ಇಲ್ಲವಲ್ಲ….’ ಎನಿಸಿ ಮನಸ್ಸು ಹೃದಯಗಳು ಭಾರವಾಗು ತ್ತವೆ. ಅವರ ಸಾವಿಗಿಂತ ಈ ಸಂಗತಿಯೇ ಹೆಚ್ಚು ದುಃಖ ತರುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ‘ಆರೆಸ್ಸೆಸ್’ ಎಂದು ಕರೆದರೆ ಅದೇಕೋ ಸಮಾ ಧಾನವೇ ಆಗುವುದಿಲ್ಲ, ‘ಸಂಘ’ ಎಂದರೆ ಮಾತ್ರ ಸಮಾಧಾನ. ಈ ಕಾರಣಕ್ಕೋ ಏನೋ ಸಂಘವನ್ನು ದೂರದಿಂದ ನೋಡಿದ, ನೋಡುವ ಪತ್ರಕರ್ತರಿಗೆ (ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದ ಕಥೆಯ ಹಾಗೆ) ಸಂಘವನ್ನು, ಸಂಘದ ಪ್ರಚಾರಕರನ್ನು ಚಿತ್ರಿಸಲು ಆಗುವುದೇ ಇಲ್ಲ. ಏನೇ ಆಗಲಿ, ಶಾಖೆಗೆ ಹೋಗಿ, ಶಿಬಿರಗಳಿಗೂ ಹೋಗಿ, ಸ್ವಯಂಸೇವಕ ನಾಗಿ, ಕಾರ್ಯಕರ್ತನಾಗಿ ಕೆಲಸ ಮಾಡಿದವರಿಗೆ ಮಾತ್ರ ಸಂಘದ ಆತ್ಮದಅರಿವು ಉಂಟಾಗುತ್ತದೆ.
ತುಂಬ ಜನ ಪ್ರತಿಭಾವಂತರೂ, ಬಹಳ ಒಳ್ಳೆಯ ಬರಹಗಾರರೂ ಆದ ಪತ್ರಕರ್ತರು ಸಂಘವನ್ನು, ಸಂಘದ ಪ್ರಚಾರಕರನ್ನು ಕುರಿತು ಬರೆದಿರುವುದನ್ನು ನೋಡಿದ್ದೇನೆ, ಓದಿದ್ದೇನೆ. ಅವೆಲ್ಲವೂ ಅಪೂರ್ಣವೇ. ಅವೆಲ್ಲವೂ ಕುರುಡರ ಕಥೆಯ ವರ್ಣನೆಗಳೇ. ಅಂಥ ಪತ್ರಕರ್ತರ ಬಳಿ ನಾನು “ಭಗವದ್ಗೀತೆಯ ‘ಅನುಚ್ಛಿಷ್ಟಃ’ ಪರಿಕಲ್ಪನೆಯನ್ನು ಓದಿ, ಅರ್ಥ ಮಾಡಿಕೊಂಡು ನಂತರ ಬಂದುಸಂಘದ ಬಗೆಗೆ, ಪ್ರಚಾರಕರ ಬಗೆಗೆ ಬರೆಯಿರಿ” ಎಂದು ಹಾಸ್ಯ ಮಾಡುತ್ತಿದ್ದೆ.
ಹೌದು, ಸಂಘದ ವಿಷಯ ಹಾಗೆಯೇ, ಪ್ರಚಾರಕರ ವಿಷಯವೂ ಹಾಗೆಯೇ… ‘ಭಂಡಾರಿಯವರು ಇಲ್ಲ’ ಎಂಬ ಸುದ್ದಿ ಕೇಳಿದ  ತಕ್ಷಣ ನನ್ನ ಮನಸ್ಸು, ತಲೆ ಖಾಲಿ ಆದಂತಾದವು. ಒಂದು ನಿರ್ವಾತಭಾವ ತುಂಬಿಕೊಂಡಿತು. ಹೊ.ವೆ. ಶೇಷಾದ್ರಿಗಳಂಥ ಚಿಂತ ಕರು, ಅನುಪಮ ಅಂತಃಕರಣದ ನ. ಕೃಷ್ಣಪ್ಪನವರು, ಅದ್ಭುತ ವಾಗ್ಮಿ ವಿದ್ಯಾನಂದ ಶೆಣೈಯವರು, ಪ್ರಚಾರಕರೆಂದರೆ ಹೀಗಿರ ಬೇಕು ಎನ್ನುವಂಥ ಕೃ.ಸೂರ್ಯನಾರಾಯಣರಾಯರು ಎಲ್ಲರ ಚಿತ್ರಗಳು ಮನೋಪಟಲದ ಮುಂದೆ ಹಾದುಹೋದವು.
ಈಗ ಅಂಥ ವ್ಯಕ್ತಿಗಳೂ ಇಲ್ಲ, ವ್ಯಕ್ತಿತ್ವಗಳೂ ಇಲ್ಲ. ಈ ಸಾಲಿಗೆ ಸರಳತೆಯ ಸಾಕಾರ ಎಂಬಂಥ ಭಂಡಾರಿಯವರೂ ಸೇರುತ್ತಾರೆ.ಭಂಡಾರಿಯವರನ್ನು, ಅಂಥ ವ್ಯಕ್ತಿತ್ವದ ಮತ್ತಿತರರನ್ನು ಚಿತ್ರಿಸಲು ನನ್ನಂಥವರ ಲೇಖನಿ ಸೋಲುತ್ತದೆ. ಅಂಥ ಪ್ರಚಾರಕರು ಸಂಘವೇ ಆಗಿಹೋಗಿರುತ್ತಾರೆ. ಸಾಮಾನ್ಯ ಮನುಷ್ಯರ ಜೀವನದಲ್ಲಿ ಕಾಣುವ ಘಟನಾವಳಿಯೇ ಅಲ್ಲಿರುವುದಿಲ್ಲ. ಇದು ನನಗೆ ಅನುಭವವೇದ್ಯವಾದದ್ದು 2007ರಲ್ಲಿ, ಹೊ.ವೆ. ಶೇಷಾದ್ರಿಯವರ ಜೀವನ-ದರ್ಶನ ‘ಧ್ಯೇಯ ಯಾತ್ರಿ’ ಕೃತಿರಚನೆಯಲ್ಲಿ ತೊಡಗಿ ದ್ದಾಗ. ನಾಲ್ಕಾರು ಸಾಲುಗಳ ಬಾಲ್ಯದ ವಿವರ, ಶಿಕ್ಷಣ ಇತ್ಯಾದಿ ಬಿಟ್ಟರೆ, ಇಂಥವರ ಜೀವನವೆಲ್ಲ ಬರೀ ಸಂಘವೇ.
ಇಂಥ ಮಹಾನ್ ವ್ಯಕ್ತಿತ್ವಗಳ ಬಗೆಗೆ ಓದುವಾಗ, ತಿಳಿಯುವಾಗ, ಬರೆಯುವಾಗ ಆಗುವ ದಿವ್ಯಾನುಭೂತಿಯ ಆಯಾಮವೇ ಬೇರೆ.‘ಧ್ಯೇಯಯಾತ್ರಿ’ ಕೃತಿರಚನೆಯ ಪೂರ್ವಸಿದ್ಧತೆಯ ಸಮಯದಲ್ಲಿ ಭಂಡಾರಿಯವರೊಂದಿಗೆ ಮಂಗಳೂರಿಗೆ ಹೋಗಿದ್ದೆ. ಮಾನನೀಯ ನ.ಕೃಷ್ಣಪ್ಪನವರು ಆಗ ಅಲ್ಲಿದ್ದರು. ಅವರದ್ದೇ ಬೈಠಕ್. ತುಂಬ ದೊಡ್ಡ ಬರಹಗಾರರಾದರೂ, ತುಂಬ ಸೀನಿಯರ್ ಆದರೂ, ಭಂಡಾರಿಯವರು ಹೊಸದಾಗಿ ಕಾರ್ಯಕರ್ತನಾದ ಹುಡುಗನಂತೆ ಎಲ್ಲ ಸೂಚನೆಗಳನ್ನು ಬರೆದುಕೊಳ್ಳುತ್ತಿದ್ದರು, ಮಾಹಿತಿಗಳನ್ನು ಇಂತೇದಿಸುತ್ತಿದ್ದರು (mbZಠಿಜ್ಞಿಜ), ಆಗಬೇಕಾದ ಕೆಲಸದ ರೂಪರೇಖೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು.
ಪೆನ್ನು, ಪುಸ್ತಕ  ಹಿಡಿದುಕೊಂಡೇ ಹುಟ್ಟಿದ ನಾನು ಸಹ ಭಂಡಾರಿಯವರಿಂದ ಕಲಿತದ್ದು ತುಂಬ. ಭಂಡಾರಿಯವರ ಕೃತಿಗಳು ಇಂದು ಅವರ ಸ್ಮಾರಕಗಳಾಗಿವೆ. ಅವೇ ಅವರ ದ್ಯೋತಕಗಳಾಗಿವೆ. ಪ್ರಚಾರಕರು ಅರಿಷಡ್ವರ್ಗಗಳನ್ನು ಗೆದ್ದು ವೈರಾಗ್ಯ, ಸೇವೆ, ಸಂಘಕಾರ್ಯಗಳಿಂದಲೇ ತಮ್ಮ ಛಾಪು ಮೂಡಿಸಿರುತ್ತಾರೆ. ಸಂಘದ ವಿಷಯವೂ ಅಂತೆಯೇ, ಹಾಗೆಯೇ. ಸಂಘದ ಇತಿಹಾಸವೇ ಎಲ್ಲೂ ಸಿಕ್ಕುವುದಿಲ್ಲ.
ಈ ಪರಿಪ್ರೇಕ್ಷ್ಯದಲ್ಲಿ ಸಂಘದ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಇತಿಹಾಸವನ್ನು ದಾಖಲಿಸಿರುವ ಭಂಡಾರಿಯವರುಅಪೂರ್ವವಾದ ಕೃತಿಯನ್ನೇ ನಮ್ಮ ಕೈಗಿಟ್ಟುಹೋಗಿದ್ದಾರೆ. ‘ಕಡಲ ತಡಿಯ ಸಂಘವಟ’ (ಮಂಗಳೂರಿನಲ್ಲಿ ಸಂಘ ಬೆಳೆದ ಬಗೆ) ರೀತಿಯ ಕೃತಿಗಳು ಅಚ್ಚರಿ ಮೂಡಿಸುತ್ತವೆ. ಹಿರಿಯ ಕಾರ್ಯಕರ್ತರು, ಪ್ರಚಾರಕರು ಸಹ ‘ಇಷ್ಟೆಲ್ಲ ವಿಷಯಗಳು ನಮಗೇ ಗೊತ್ತಿರಲಿಲ್ಲ’ ಎಂದಿದ್ದಾರೆ.
ನಿಜ, ಸಹಜ. ಸಾಕ್ಷ್ಯಾಧಾರಗಳನ್ನು ಬಿಟ್ಟು ಹೋಗುವುದಕ್ಕಿಂತ ಒಟ್ಟು ಮಾಡುವುದಕ್ಕಿಂತ, ಸಂಘಕ್ಕೆ ಸಮಾಜಕಾರ್ಯವೇ ಮುಖ್ಯ. ಈ ಹಿನ್ನೆಲೆಯಲ್ಲಿ ಭಂಡಾರಿಯವರ ಈ ಬಗೆಯ, ಅಂದರೆ ಐತಿಹಾಸಿಕ ಹೆಜ್ಜೆಗುರುತುಗಳನ್ನು ಗ್ರಂಥರೂಪದಲ್ಲಿ ದಾಖಲಿ ಸುವ ಸುಕಾರ್ಯವು ಸ್ವತಃ ಒಂದು ದಾಖಲೆಯಾಗಿದೆ. ಒಂದಂತೂ ನಿಜ, ಭಂಡಾರಿಯವರ ಹೊರತಾಗಿ ಬೇರಾರಿಗೂ ಇದು, ಇಂಥದ್ದು ಸಾಧ್ಯವಿರಲಿಲ್ಲ.
ನಾನು ವೈಯಕ್ತಿಕವಾಗಿ ನೂರಾರು ಜೀವನ-ವೃತ್ತಾಂತಗಳು, ಜೀವನಚರಿತ್ರೆಗಳು, ಆತ್ಮಕಥೆಗಳನ್ನು ಓದಿದ್ದೇನೆ. ಭಂಡಾರಿಯವರ ‘ನಿರ್ಮಾಲ್ಯ’, ‘ಜನಮನಶಿಲ್ಪಿ’ ಕೃತಿಗಳು ನಭೂತೋ ಎನ್ನುವಂತೆಯೇ ಇವೆ. ಮತ್ತೊಮ್ಮೆ ಹೇಳುವುದಾದರೆ, ಭಂಡಾರಿಯವರ ಹೊರತಾಗಿ ಬೇರಾರಿಗೂ ಇವು, ಇಂಥವು ಸಾಧ್ಯವಿರಲಿಲ್ಲ. ನನಗೆ ನ. ಕೃಷ್ಣಪ್ಪನವರ ಮಹಾನ್ ವ್ಯಕ್ತಿತ್ವದ ಪರಿಚಯವಾದುದು 1967ರಲ್ಲಿ.
ನನ್ನ ಜೀವನಕ್ಕೊಂದು ದಿಕ್ಕು-ಗತಿ ತೋರಿದವರೇ ಅವರು. ಅವರ ಬಗೆಗೆ ಭಂಡಾರಿಯವರು ರಚಿಸಿದ ‘ನಿರ್ಮಾಲ್ಯ’ ಒಂದು ಅಪರೂಪದ ಹೃದಯಂಗಮ ಕಥಾನಕ. ಅಲ್ಲಿನ ವಿವರಗಳ ಅಧಿಕೃತತೆಗೆ, ಖಚಿತತೆಗೆ ಭಂಡಾರಿಯವರು ವಹಿಸಿದ ಎಚ್ಚರ, ಪಟ್ಟ ಶ್ರಮ ಮತ್ತು ಮತ್ತೆಮತ್ತೆ ಎಲ್ಲ ಸಂಗತಿಗಳನ್ನು ಪರಿಷ್ಕರಿಸಿದ್ದು ಮಹತ್ತರ ಕಾರ್ಯವೇ ಸರಿ. ‘ನಿರ್ಮಾಲ್ಯ’ ಕೃತಿರಚನೆಯ ಈಇತಿಹಾಸವೂ ಮಹತ್ತ್ವದ್ದೇ.
ಕರ್ನಾಟಕದಲ್ಲಿ ಸಂಘಕಾರ್ಯವನ್ನು ಪ್ರಾರಂಭಿಸಿದ ಯಾದವರಾವ್ ಜೋಶಿಯವರು ಬಹಳ ದೊಡ್ಡವರು. ಅವರನ್ನು ನಾನು ನೋಡಿದ್ದಾನಾದರೂ ಅವರ ಅಪಾರ ಸಾಧನೆಯ ಪರಿಚಯವಾದುದು ‘ಜನಮನಶಿಲ್ಪಿ’ ಕೃತಿ ಯಿಂದ. ಅದು ಅದೆಷ್ಟು ಚಂದದ ಪುಸ್ತಕವೆಂದರೆ, ಪ್ರತಿ ಬಾರಿ ಯಾದವರಾವ್ ಜೋಶಿಯವರ ನೆನಪಾದಾಗಲೆಲ್ಲ ಉಖವಾದಾಗಲೆಲ್ಲ ಭಂಡಾರಿಯವರ ಪುಸ್ತಕವೇಕಣ್ಮುಂದೆ ಬರುತ್ತದೆ.
‘ಕರ್ನಾಟಕದಲ್ಲಿ ಸಂಘ’ ಕೃತಿಯೂ ಅಂತೆಯೇ. ಸಂಘದ ಬೆಳವಣಿಗೆಯ ಮಹತ್ವದ ವಿವರಗಳನ್ನು ಇದು ದಾಖಲಿಸಿದೆ. ‘ಗುರೂಜಿ’ ಎಂದೇ ಖ್ಯಾತರಾದ ಮಾಧವ ಸದಾಶಿವ ಗೋಳ್ವಲಕರ್ ಅವರು 1940ರಿಂದ 1973ರವರೆಗೆ ಸರಸಂಘಚಾಲಕರಾಗಿ ಸಂಘ ವನ್ನು, ಹಿಂದೂ ಸಮಾಜವನ್ನು ಮುನ್ನಡೆಸಿದವರು. ಅವರು ಹಿಂದೂ ಸಮಾಜದ ಸಂಘಟನೆಗಾಗಿ ಅದೆಷ್ಟು ಬಾರಿ ಭಾರತಾ ದ್ಯಂತ ಪ್ರವಾಸ ಮಾಡಿದರೋ? ಅವರ ಕರ್ನಾಟಕದ ಭೇಟಿಯ ಐತಿಹಾಸಿಕ ಮಹತ್ತ್ವದ ಸಂಗತಿಗಳನ್ನು ಭಂಡಾರಿಯವರು ತಮ್ಮ ‘ವಿದ್ಯಾರಣ್ಯರ ಭೂಮಿಯಲ್ಲಿ ಶ್ರೀಮಾಧವ’ ಕೃತಿಯಲ್ಲಿ ದಾಖಲಿಸಿದ್ದಾರೆ.
ಭಂಡಾರಿಯವರು ರಚಿಸಿರುವ ಕೃತಿಗಳ ಸಂಖ್ಯೆ ದೊಡ್ಡದಿದೆ. ಅನುವಾದವನ್ನೂ ಮಾಡಿದ್ದಾರೆ. ಪ್ರಶಸ್ತಿಗಳೂ ಅವರನ್ನು ಗೌರವಿ ಸಿವೆ. ಅವರ ಎಲ್ಲ ಪುಸ್ತಕಗಳನ್ನು ಕಣ್ಮುಂದೆ ತಂದುಕೊಂಡಾಗ ಭಂಡಾರಿಯವರಿಂದಲ್ಲದೆ ಬೇರಾರಿಂದಲೂ ಈ ಕೊಡುಗೆ,ಇಂಥ ಕೊಡುಗೆ ಸಾಧ್ಯವಿರುತ್ತಿರಲಿಲ್ಲ ಎನಿಸುತ್ತದೆ. ಅದು ಅವರು ಬಿಟ್ಟುಹೋದ ಬೆಳಕು. ನಿಜ-ಇತಿಹಾಸದ, ಇತಿಹಾಸ ರಚನಾಶಾಸ್ತ್ರದ ಪರಿಕಲ್ಪನೆಗಳನ್ನು ಕನ್ನಡದಲ್ಲಿ ಪರಿಚಯಿಸುವ ರಾಷ್ಟ್ರೀಯ ಮಹತ್ತ್ವದ ನಮ್ಮ ‘ವಾಯ್ಸ್ ಆಫ್ ಇಂಡಿಯಾ’ ಗ್ರಂಥ ಸರಣಿಗಾಗಿ, ಹಮೀದ್ ದಲವಾಯಿ ಅವರ ‘ಸೆಕ್ಯುಲರ್ ಭಾರತದಲ್ಲಿನ ಮುಸ್ಲಿಂ ರಾಜಕಾರಣ’ ಕೃತಿಯನ್ನು ಭಂಡಾರಿ ಯವರು ಕನ್ನಡದಲ್ಲಿ ಅನುವಾದಿಸಿಕೊಟ್ಟರು.
ಆ ದಿನಗಳಲ್ಲಿ ಅವರ ಸಹಯೋಗ ನನಗೆ ಬಹಳ ಒಳ್ಳೆಯ ಶಿಕ್ಷಣವೇ ಆಯಿತು. ಕೆಲವು ವ್ಯಕ್ತಿಗಳು ಮೂಡಿಸುವ ಛಾಪು ವಿಶಿಷ್ಟ ವಾದುದು. ಅನುವಾದಕ್ಕೆ ಸಂಭಾವನೆ ಕೊಡುವ ವಿಷಯ ಬಂದಾಗ, ‘ನಾವು ಪ್ರಚಾರಕರು, ಯಾವ ಸಂಭಾವನೆಯೂ ಬೇಡ’ ಎಂದು ಒಂದೇ ಮಾತಿನಲ್ಲಿ ಹೇಳಿ ವಿಷಯಾಂತರ ಮಾಡಿದರು. ಬೆಳಕು ನೀಡುವ ಅನೇಕ ಕೃತಿಗಳನ್ನು ಕೊಟ್ಟು ಹೋಗಿರುವಭಂಡಾರಿಯವರ ಪುಸ್ತಕಗಳೇ ಅವರ ಸ್ಮಾರಕಗಳು.